ರಾಮರಾಯನಿಗೆ ಸಿದ್ಧರು ಕನಸಲ್ಲಿ ಅಭಯಕೊಟ್ಟು, ಸಿದ್ದರನ್ನು ವಿರೋಧಿಸಿದ ಸಂತರ ನಡುವೆ ಕುಳಿತು ಉಂಡರು

 🍀 ರಾಮರಾಯನಿಗೆ ಸಿದ್ಧರು ಸ್ವಪ್ನದಲ್ಲಿ ಅಭಿನಯವನ್ನು ಕೊಟ್ಟರು. ಸಂತರ ನಡುವೆ  ಸದ್ಗುರುಗಳು ಕುಳಿತು ಉಣ್ಣುವದನ್ನು ಕಂಡು ಸರ್ವರೂ ಆಶ್ಚರ್ಯಪಟ್ಟು ಅವರನ್ನು ಪೂಜಿಸಿದರು.





ಒಂದಾನೊಂದು ಕಾಲದಲ್ಲಿ ಇಬ್ಬರು ಸಂತರು ಪಂಢರಪುರದಿಂದ ಬಂದು, ಹುಬ್ಬಳ್ಳಿಯಲ್ಲಿ ಇಳಿಯುವಂಥವರಾದರು. ಇವರು ದಕ್ಷಿಣ ಕನ್ನಡ ಪ್ರಾಂತದಿಂದ  ಪಂಢರಪುರಕ್ಕೆ ಯಾತ್ರೆಗೆ ಹೋಗಿ, ಅಲ್ಲಿ ಆಶಾಢ ಏಕಾದಶಿ ಉತ್ಸವವನ್ನು ನೋಡಿಕೊಂಡು ತಿರುಗಿ ತಮ್ಮ ದೇಶಕ್ಕೆ ಹೋಗುವಾಗ, ಇಲ್ಲಿ ಇಳಿದರು. ಅವರು ಬ್ರಾಹ್ಮಣ ವರ್ಣದವರಿದ್ದು, ಇಲ್ಲಿಯ ಅವರ ವರ್ಣಸ್ಥರು ಅವರನ್ನು ಅತ್ಯಾದರದಿಂದ ತಮ್ಮಲ್ಲಿ ಕರೆದುಕೊಂಡು ಆತಿಥ್ಯ ಮಾಡುವಂಥವರಾದರು. ಎರಡನೇ ದಿವಸ ಅವರಿಗೋಸ್ಕರವಾಗಿ ಎಲ್ಲಾ ಬ್ರಾಹ್ಮಣರಿಗೆ ಆಮಂತ್ರಣ ಕೊಟ್ಟು, ಸಮಾರಾಧನೆ ಮಾಡಿಸಬೇಕೆಂದು, ಗೃಹಸ್ಥ ರಾಮರಾಯನು ಸಿದ್ಧಪಡಿಸಿದನು. ಸಿದ್ದಾರೂಡರ ಮೇಲೆ ರಾಮರಾಯನಿಗೆ ವಿಶೇಷ ಶ್ರದ್ಧಾ ಇರುತ್ತಿದ್ದು, ನಿತ್ಯದಲ್ಲಿ ಸದ್ಗುರು ಪಾದತೀರ್ಥದ ವಿನಹಾ ಆತನು ಊಟ ಮಾಡುತ್ತಿರಲಿಲ್ಲ. ಆತನೇ ಪುಢಾರಿಯಾಗಿ, ಸಮಾರಾಧನೆಗೋಸ್ಕರ ಬ್ರಾಹ್ಮಣರಿಗೆ ಆಮಂತ್ರಣ ಕೊಟ್ಟನು. ರಾಮರಾಯರು ಮನಸ್ಸಿನಲ್ಲಿ  ಈ ಪ್ರಕಾರ ವಿಚಾರ ಮಾಡಿದನು - "ಸಂತ ಶಿರೋಮಣಿಗಳಾದ ಸಿದ್ದಾರೂಡರಿಗೆ, ಈ ಸಮಾರಾಧನೆಗೆ ಕರಿಸಿ, ಪೂಜಿಸತಕ್ಕದ್ದು. ಆದರೂ ಈ ಮಾತು ಸಂತರ  ಕೂಡ ವಿಚಾರಿಸಬೇಕು". ಹೀಗೆ ಆಲೋಚಿಸಿ, ಆತನು  ಸಂತರನ್ನು ಕುರಿತು - ''ಮಹನೀಯರೇ ಈ ಊರೊಳಗೆ, ಬ್ರಹ್ಮನಿಷ್ಠರಾಗಿಯೂ, ಸಜ್ಜನರಾಗಿಯೂ ಇರುವ ಸಿದ್ದಾರೂಢರೆಂಬವರಿರುತ್ತಾರೆ. ಅವರನ್ನು ನಾಳೆ

ಸಮಾರಾಧನೆ ಕರಸೋಣವೇ? ಎಂದು ಕೇಳಿದ್ದಕ್ಕೆ ಸಂತರು ನಗುತ್ತಾ ಅನ್ನುತ್ತಾರೆ - "ನಾವು ಸಿದ್ಧಾರೂಢನನ್ನು ಬಲ್ಲೆವು. ಆತನು ಬ್ರಹ್ಮನಿಷ್ಠನಿರಬಹುದು, ಆದರೆ ಆತನ ಪಂಕ್ತಿಗೆ ಕುಳಿತು ನಾವು ಉಣ್ಣಲಾರೆವು. ಯಾಕಂದರೆ ಆತನು ಜಾತ್ಯಾ ಶೂದ್ರನಿರುವನು. ಆತನ ಪಂಕ್ತಿಯಲ್ಲಿ ಕುಳಿತು ಬ್ರಾಹ್ಮಣರು ಹೇಗೆ ಉಣ್ಣಬೇಕು ? ಆತನಿಗೆ ಬೇರೆ  ಪಂಕ್ತಿಯನ್ನು ಕೊಟ್ಟರೆ, ಅನಾದರ ಮಾಡಿದಂತೆ ಆಗುವದು. ಆದ್ದರಿಂದ ನಿನ್ನ ಈ ವಿಚಾರವು ನಮ್ಮ ಮನಸ್ಸಿಗೆ ಬರುವುದಿಲ್ಲ. ಇದರಿಂದ ನಮ್ಮ ಜಾತಿಗೆ ಹೀನತ್ವ ಬರುವುದು.” ಈ ಮಾತನ್ನು ಕೇಳಿದ ರಾಮರಾಯನಿಗೆ ಬಹು ದುಃಖವಾಗಿ ಮನಸ್ಸಿಗೆ ಬಹಳ ಚಿಂತೆ ಉತ್ಪನ್ನವಾಯಿತು. ಅಂದಿನ ರಾತ್ರಿ ರಾಮರಾಯನು ಬಹು ಚಿಂತಾತುರನಾಗಿ ಮಲಗಿಕೊಂಡಾಗ, ಮನಸ್ಸಿನಲ್ಲಿ  ಅಂದುಕೊಳ್ಳುತ್ತಾನೆ- “ನನ್ನ ದೈವತರಾದ ಸಿದ್ದಾರೂಡರನ್ನು ಈ ಸಮಯದಲ್ಲಿ ಬಿಟ್ಟು ಏನು ಮಾಡಲಿ ? ಹೇ ದಯಾಳುವಾದ ಸದ್ಗುರುವೇ, ನಿನ್ನನ್ನು ಈ ಸಮಾರಾಧನೆಗೆ ಕರೆಸಬೇಕೆಂದು ನನ್ನ ಮನಸ್ಸಿನಲ್ಲಿ ಉತ್ಕಟ ಇಚ್ಛಾ ಇರುವದು. ಅದು ಈ ಸಮಯದಲ್ಲಿ ಹಾಗೆ ಪೂರೈಸಿತು ? ನಿನ್ನನ್ನು ಪೂಜಾಸ್ಥಾನದಲ್ಲಿ ಕುಳ್ಳಿರಿಸಿ ಪೂರ್ಣ ವೈಭವದಿಂದ ಪೂಜಿಸಬೇಕು, ಮತ್ತು ಈಗ ಅಭಕ್ತರಾಗಿರುವಂಥ ನಮ್ಮ ವರ್ಣಸ್ಥರೊಳಗೆ ನಿಮ್ಮ ಭಕ್ತಿಯನ್ನು ಹುಟ್ಟಿಸಬೇಕು ಎಂದು ನನ್ನ ಅಭಿಲಾಷೆ ಇರುವದು. ಬ್ರಾಹ್ಮಣಾಭಿಮಾನದಿಂದ, ಇವರು ನಮ್ಮ ಭಕ್ತಿ ಇಲ್ಲದೆ ಕೆಟ್ಟರು. ಈಗ ಇವರ ಮೇಲೆ ಕೃಪಾಮಾಡಿ ಹ್ಯಾಗಾದರೂ ಭಕ್ತಿ ಮಾರ್ಗಕ್ಕೆ ಹಚ್ಚತಕ್ಕದ್ದಾಗಿರುತ್ತದೆ. ಈ ಪ್ರಕಾರ ಪ್ರಾರ್ಥಿಸಿ ರಾಮರಾಯರು ನಿದ್ರಸ್ಥನಾದನು. ಆಗ್ಗೆ ಸ್ವಪ್ನದಲ್ಲಿ ಸಿದ್ದಾರೂಡರು ಬಂದು, - ''ಏಳು, ಬೇಗನೇ ಪೂಜಾ ಮಾಡು'' ಅಂದರು. ಆಗ ರಾಮರಾಯನು ಈ ಸ್ವಪ್ನದಲ್ಲೇ  ಆಸನವನ್ನು ಹಾಕಿ, ಸಿದ್ಧಾರೂಢರಿಗೆ ಅದರ ಮೇಲೆ ಕುಳ್ಳಿರಿಸಿ, ಷೋಡಶೋಪಚಾರಗಳಿಂದ ಪೂಜಿಸಿ, ಈ ಪ್ರಕಾರ ತನ್ನ ಮನೋರಥವನ್ನು ಪೂರೈಸಿಕೊಂಡನು. ಪೂಜಾಂತ್ಯದಲ್ಲಿ ಸಿದ್ಧಾರೂಢರು ಆತನ ಕೈಯಲ್ಲಿ ಪ್ರಸಾದ ಕಾಯಿ ಕೊಟ್ಟು - “ಈ ಪ್ರಸಾದವನ್ನು ತೆಗೆದುಕೋ, ನಿನ್ನ ಇಚ್ಛೆಯು ನಾಳಿನ ದಿವಸ ನಿಶ್ಚಯವಾಗಿ ಪೂರೈಸುವದು,” ಎಂದು ಹೇಳಿ ಅದೃಶ್ಯರಾದರು. ಆಗ ರಾಮರಾಯನು ಎಚ್ಚರಿಕೆಯಾಗಿ ನೋಡಿದರೆ ಸ್ವಪ್ನದಲ್ಲಿ ಪ್ರಸಾದವಾಗಿ ಕೊಟ್ಟ ಕಾಯಿಯು ತನ್ನ ಸಮೀಪದಲ್ಲಿ ಕಂಡು, ಬಹು ಆಶ್ಚರ್ಯಭರಿತನಾದನು. ಅತ್ಯಂತ ಹರ್ಷಯುಕ್ತನಾಗಿ - “ನಾನು ಈ ಜಗತ್ರಯದಲ್ಲಿ ಧನ್ಯನಾದೆನು. ಇದು ಸ್ವಪ್ನವಲ್ಲ, ಸತ್ಯವಾಗಿರುತ್ತದೆ. ಯಾಕೆಂದರೆ, ಕಾಯಿ ಪ್ರಸಾದವು ಉಳಿದಿರುವದು. ಇವತ್ತು ಸದ್ಗುರುಗಳು ನನ್ನ ಮನೋರಥವನ್ನು ಪೂರ್ಣ ಮಾಡುವರು. ಇದರೊಳಗೆ ಏನೇನೂ ಸಂಶಯವಿಲ್ಲ. ಸಿದ್ಧನಾಥರು ಒಲಿದರು,” ಎಂದು ತನ್ನೊಳಗೆ ಅಂದನು. ಪ್ರಾತಃಕಾಲದಲ್ಲಿ ತ್ವರೆಯಿಂದ ಎದ್ದು, ರಾಮರಾಯನು ಪಕ್ವಾನ್ನಾದಿಗಳನ್ನು ಸಿದ್ಧಪಡಿಸುತ್ತಿದ್ದು, ಸಿದ್ಧಾಶ್ರಮದಲ್ಲಿರುವ ಸಿದ್ಧಾರೂಢರನ್ನು ಕ್ಷಣ ಕ್ಷಣ ಸ್ಮರಿಸುತ್ತಿದ್ದನು. ಮಧ್ಯಾನ್ಹ ಕಾಲವಾದ ಕೂಡಲೇ ಎಲ್ಲಾ ಬ್ರಾಹ್ಮಣರು ಭೋಜನಕ್ಕೆ ಬರುವಂಥವರಾದರು. ಆಗ ಆ ಇಬ್ಬರು ಸಂತರನ್ನು ಪೂಜಿಸಿ, ಭೋಜನ ಕಾರ್ಯವನ್ನು ಆರಂಭಿಸಿದರು,  ಸಂತರ ದೆಸೆಯಿಂದ ತಾಟುಗಳನ್ನು ಸಮೀಪ ಇಟ್ಟು ಕೂಡ್ರಿಸಿದರು. ಎಲ್ಲರಿಗೂ ಅನ್ನಾದಿಗಳನ್ನು ನೀಡಿ, ಆಮೇಲೆ ಬ್ರಹ್ಮಾರ್ಪಣವನ್ನು ಮಾಡುವಂಥವರಾದರು. “ಪುಂಡಲೀಕ ವರದ ಹರಿವಿಠಲ' ಎಂದು ಘೋಷಣೆ ಮಾಡಿ ಸರ್ವರು ಭೋಜನವನ್ನು  ಆರಂಭಿಸಿದರು. ಇನ್ನೂ ಸಿದ್ಧಾರೂಢರು ಬಂದಿಲ್ಲವಲ್ಲ ಎಂದು ರಾಮರಾಯನಿಗೆ ಚಿಂತೆ ಉತ್ಪನ್ನವಾಯಿತು. ಆಗ ಒಂದು ವಿಶೇಷ ಚಮತ್ಕಾರವನ್ನು ಕಂಡು ಆತನು ಆನಂದಭರಿತನಾದನು. ಇಬ್ಬರು ಸಂತರು ಒಬ್ಬರ ಸಮೀಪ ಒಬ್ಬರು ಕುಳಿತು ಸುಖದಿಂದ ಊಟ ಮಾಡುತ್ತಿರುವಾಗ, ಅವರ ನಡುವಿನಲ್ಲಿ ಸ್ವಸ್ಥ ಕುಳಿತು ಉಣ್ಣುತ್ತಿರುವ ಸಿದ್ದಾರೂಢರನ್ನು ಕಂಡು, ರಾಮರಾಯನು ಬಹಳ ಆಶ್ಚರ್ಯಚಕಿತನಾದನು. ಸಿದ್ಧರ ಮುಂದೆಯೂ ಒಂದು ತಾಟು ಇತ್ತು. ಅದರೊಳಗಿಂದ ಸಿದ್ದರು ಉಣ್ಣುವದನ್ನು ರಾಮರಾಯನು ಕಂಡನು. ಆ ಸಂತರು, ತಮ್ಮ ಭೋಜನದಲ್ಲಿ ತೊಡಗಿದ್ದು, ಸಿದ್ಧರನ್ನು ನೋಡಲಿಲ್ಲ. ಇಷ್ಟರೊಳಗೆ, ಆ ಸಂತರು ಒಬ್ಬರ ಕೂಡ ಒಬ್ಬರು ಮಾತಾಡಲಿಕ್ಕೆ ನೋಡುವ ಸಮಯದಲ್ಲಿ, ತಮ್ಮ ಮಧ್ಯದಲ್ಲಿ ಒಬ್ಬರು ಊಟಕ್ಕೆ ಕುಳಿತಿರುವದನ್ನು ಕಂಡರು. ಆಶ್ಚರ್ಯಭರಿತರಾಗಿ ಅನ್ನುತ್ತಾರೆ - 'ಮೊದಲು ಇಲ್ಲಿ ಯಾರೂ ಇದ್ದಿಲ್ಲಾ. ಈಗ ಈತನು ಹ್ಯಾಗೆ ನಮ್ಮ ಮಧ್ಯದಲ್ಲಿ ಬಂದು ಕುಳಿತನು. ಈತನನ್ನು ನಾವು ಎಂದೂ ಕಂಡಿಲ್ಲ”, ಎಂದು ಇತರರಿಗೆ ಕೇಳಿ, ಇವರು ಸಿದ್ಧಾರೂಢರೆಂದು ತಿಳಿದುಕೊಂಡು. ಆಗ ರಾಮರಾಯನಿಗೆ, ಅವರು ಬಂದ ಕಾರಣ ಕೇಳಲಾಗಿ, ಆತನು ತನಗೇನೂ ಗೊತ್ತಿಲ್ಲ ಅಂದನು. ಸಿದ್ದರಾದರೂ ಶಾಂತಚಿತ್ತದಿಂದ ಕುಳಿತುಕೊಂಡು ಉಣ್ಣುತ್ತಿದ್ದರು. ರಾಮರಾಯನಿಗೆ ಅತ್ಯಂತ ಆನಂದವಾಯಿತು. ಆಗ ಸಂತರು ವಿಚಾರ ಹುಟ್ಟಿದವರಾಗಿ- ''ನಾವು ಬುದ್ದಿ ಮಂದರಾಗಿ ಸದ್ಗುರು  ಮಹಿಮೆಯನ್ನು

ತಿಳಿಯದೆ ಹೋದೆವು. ಇವರು ಸಾಕ್ಷಾತ್ ಈಶ್ವರರಿದ್ದಾರೆಂಬುದರಲ್ಲಿ ಏನೇನೂ ಸಂಶಯವಿಲ್ಲ. ನಾವು ಸಿದ್ಧರ ಪಂಕ್ತಿಗೆ ಕುಳಿತು ಊಟ ಮಾಡಿ, ಧನ್ಯರಾದೆವು'' ಎಂದು ಆ ಸಂತರು ತಮ್ಮೊಳಗೆ ಅನ್ನುತ್ತಿದ್ದರು. ಇಷ್ಟರೊಳಗೆ  ಸಿದ್ಧಾಶ್ರಮದಲ್ಲಿಯೂ ಸಿದ್ಧಾರೂಢರು ಇದ್ದಾರೋ, ಇಲ್ಲವೋ, ನೋಡೋಣ ಎಂದು ಯಾರೋ ಒಬ್ಬರು ಹೋಗಿ ನೋಡಿದಾಗ ಅಲ್ಲಿ ಪ್ರತ್ಯಕ್ಷ ಸದ್ಗುರುಗಳನ್ನು ನೋಡಿ ಆಶ್ಚರ್ಯಚಕಿತರಾದರು. ಇತ್ತ ಸಂತರಿಗೆ ಚಮತ್ಕಾರವನ್ನು ತೋರಿಸಿ, ಸಿದ್ಧಾರೂಢರು ಅಂತರ್ಧಾನ ಹೊಂದಿದರು. ಆಗ ಅವರು ಎಲ್ಲಾ ಬ್ರಾಹ್ಮಣರನ್ನು ಕುರಿತು ಅನ್ನುತ್ತಾರೆ - “ಈ ಸಿದ್ಧಾರೂಢರು ಇಲ್ಲಿ ಬಂದು ಊಟಕ್ಕೆ ಕುಳಿತದ್ದನ್ನು ನೀವು ಎಲ್ಲರೂ ನೋಡಿರುತ್ತೀರಿ. ರಾಮರಾಯರು ಧನ್ಯನು, ಆತನ ಭಕ್ತಿಗೆ ಅವರು ಮೆಚ್ಚಿದರು. ಆತನಿಂದ ನಮಗಾದರೂ ಸಿದ್ಧರ ಚರಣಗಳು ಲಭಿಸಿದವು. ಆದರೆ ನಾವು ಅವರ ಪೂಜಾ ಮಾಡಲಿಲ್ಲ. ಆದ್ದರಿಂದ ಇಲ್ಲೇ ಕರೆಸಿಕೊಂಡು, ಅವರ ಚರಣ ಧೂಳಿಯನ್ನು ಕಪಾಳಕ್ಕೆ ಹಚ್ಚಿಕೊಂಡು ನಾವು ಧನ್ಯರಾದೆವು'. ಆಗ ರಾಮರಾಯನು ಸಿದ್ದಾರೂಢರನ್ನು ಕರೆದುಕೊಂಡು ಬರಲಿಕ್ಕೆ ಸಿದ್ಧಾಶ್ರಮಕ್ಕೆ ಹೋದನು. ಸದ್ಗುರುಗಳಿಗೆ ಭೆಟ್ಟಿಯಾಗಿ “ಮಹಾರಾಜರೇ, ನೀವು ಪ್ರತ್ಯಕ್ಷ ಈಶ್ವರೀ ಅವತಾರ ಇದ್ದೀರಿ,” ಹೀಗಂದು ಸ್ವಾಮಿಯವರಿಗೆ ಎಲ್ಲಾ ವೃತ್ತಾಂತವನ್ನು ನಿವೇದಿಸಿದನು. ಇದನ್ನು ಕೇಳಿ ಮಹಾತ್ಮರು ನಗುತ್ತಾ ಅನ್ನುತ್ತಾರೆ - 'ರಾಮರಾಯನೇ, ನಿನ್ನ ಶುದ್ಧಭಾವವೇ, ಸದ್ಗುರು ರೂಪವಾಗಿ ಎಲ್ಲರಿಗೂ ಪ್ರತ್ಯಕ್ಷವಾಯಿತು. ಶುದ್ಧ ಭಾವ ಒಂದೇ ಕಾರಣವಾಗಿರುತ್ತದೆ. ಇದಕ್ಕೂ  ಹೆಚ್ಚಿನ ಈಶ್ವರನೇ ಇಲ್ಲ”, ಶ್ರೋತಾ ಜನರು, ಈ ಸತ್ಯ ವಿಚಾರವನ್ನು ತಿಳಿದುಕೊಂಡು ಆಂತರ್ಯದೊಳಗೆ ವಿವರಿಸತಕ್ಕದ್ದು. ಇರಲಿ ರಾಮರಾಯರು ಸಿದ್ದಾರೂಢರಿಗೆ ಪ್ರಾರ್ಥಿಸಿ ಪೂಜೆಗೋಸ್ಕರ ಮನೆಗೆ ಕರೆದುಕೊಂಡು ಹೋದನು. ಸಂತರು ಮತ್ತು ಇತರ ಬ್ರಾಹ್ಮಣರು ಸದ್ಗುರುಗಳ ದರ್ಶನ ಮಾತ್ರದಿಂದ ಬಹಳ ಪ್ರೇಮಯುಕ್ತರಾಗಿ ಷೋಡಶೋಪಚಾರಗಳಿಂದ ಪೂಜಿಸುವಂಥವರಾದರು.

ಈ ಕಥೆಯ ಲಕ್ಷ್ಯಾರ್ಥವನ್ನು ಶ್ರವಣ ಮಾಡುವಂಥವರಾಗಿರಿ. ಸದ್ಗುರುನಾಥನೇ ಪ್ರತ್ಯಗಾತ್ಮನು. ಆತನ ಭಕ್ತನಾದ ರಾಮರಾಯನೆಂಬ ಜೀವನು, ನಿತ್ಯ ಆನಂದವೆಂಬ ತೀರ್ಥವನ್ನು ಸೇವಿಸುತ್ತಿದ್ದನು. ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಇವುಗಳ ಅಭಿಮಾನಿಗಳೇ ಇಬ್ಬರು ಸಂತರು. ವಿಷಯ ವೃತ್ತಿಗಳೇ  ಇತರ ಬ್ರಾಹ್ಮಣರು, ವಿಷಯಸೇವೆಯೆಂಬ ಭೋಜನಕ್ಕೆ ಆಮಂತ್ರಿಸಲ್ಪಟ್ಟಿದ್ದರು. ಜೀವನು ಇಂದ್ರಿಯಾಭಿಮಾನಿಗಳಿಗನ್ನುತ್ತಾನೆ - ''ಈ ನಮ್ಮ ಸಮಾರಾಧನೆಗೆ  ಪ್ರತ್ಯಗಾತ್ಮನನ್ನು ಕರೆಸಬೇಕು'. ಅದಕ್ಕೆ ಅವರು ಅಂದರು - “ಆತನು ನಮಗೆ ವಿಜಾತಿಯವನು  ಇರುತ್ತಾನೆ. ಅವನ ಸಂಗದಿಂದ ನಾವು ಭ್ರಷ್ಟರಾಗುವೆವು''. ಇದನ್ನು ಕೇಳಿ, ಜೀವನು ದುಃಖಿತನಾದನು, ಮತ್ತು ಪ್ರತ್ಯಗಾತ್ಮನನ್ನು ಪ್ರಾರ್ಥಿಸುವಂಥವನಾದನು. ಆತನು ಜೀವನಿಗೆ ಸ್ವಪ್ನದಲ್ಲಿ ಬಂದು, ಪ್ರಸಾದ ಕೊಟ್ಟ ಕಾಯಿಯೇ ವಿವೇಕವು. ಅದನ್ನು ಹಿಡಿದ  ಜೀವನು ಸುಖಿಯಾದನು. ವಿಷಯ ಭೋಜನಕ್ಕೆ ಎಲ್ಲರೂ ಕುಳಿತಿರುವಾಗ , ಆ ಇಂದ್ರಿಯಾಭಿಮಾನಿಗಳ ಅಭಿಸಂದಿಯಲ್ಲಿ, ಪ್ರತ್ಯಗಾತ್ಮನು ಬಂದು ಕೂಡುವಂಥವನಾದನು. ಜೀವನು ವಿವೇಕ ಬಲದಿಂದ ಆತನನ್ನು ನೋಡಿದನು. ಆದರೆ, ವಿಷಯ ಸೇವನೆಯಲ್ಲಿರುತ್ತಾ ಇಂದ್ರಿಯಾಭಿಮಾನಿಗಳು ಪ್ರತ್ಯಗಾತ್ಮನನ್ನು ಕಾಣದೆ, ಉಪರಮವಾದಾಗ ಅಕಸ್ಮಾತ್ತಾಗಿ ಕಂಡರೂ, ನೋಡಿ ಇವನು ಪ್ರತ್ಯಕ್ಷ ಈಶ್ವರನೆನ್ನುವರು. ಆ ಕ್ಷಣವೇ ಆತನು ನಿರಾಕಾರನಾದನು. ಅನಂತರ  ವಿವೇಕಯುಕ್ತನಾದ ಜೀವನನ್ನು ಆತ್ಮನ ಕಡೆಗೆ ಆತನನ್ನು ಕರೆದುತರಲಿಕ್ಕೆ ಕಳುಹಿಸುತ್ತಾರೆ. ಜೀವನಿಗೆ ಆನಂದವಾಗಿ ಎಲ್ಲಾ ವೃತ್ತಿಗಳು ಧನ್ಯವಾದವು, ಎಂದು ಅಂದುಕೊಂಡನು. ಯಾಕೆಂದರೆ ಸದ್ಗುರು ಕೃಪೆಯಿಂದ ಎಲ್ಲರೂ ಭಕ್ತಿ ಮಾರ್ಗಕ್ಕೆ ಹತ್ತಿದರು. ಆತ್ಮನನ್ನು ಕರೆತಂದು ಪೂಜಿಸಿದರೆ. ಆನಂದ ಪ್ರಸಾದ ಎಲ್ಲರೂ ತೆಗೆದುಕೊಂಡರು. ಮತ್ತು ಜೀವನು ತಾನು ಧನ್ಯನಾದನೆಂದು ತಿಳಿದುಕೊಂಡು ಆನಂದಪಟ್ಟನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗುರವ್ವಾ ಎಂಬವಳ ಮಕ್ಕಳು ಅನ್ನವಿಲ್ಲದೆ ಸತ್ತ ದುಃಖದಿಂದ ಬಾವಿಯೊಳಗೆ ಹಾರುವಾಗ, ಸದ್ಗುರುವು ಬಂದು ಬಿಡಿಸಿ, ಅವರನ್ನು ಆಶೀರ್ವಾದಿಸಿ ಶ್ರೀಮಂತನ್ನಾಗಿ ಮಾಡಿದನು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ ಕ್ಕಾಗಿ ಒತ್ತಿ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮದ ಲೀಲಾಕಥೆ,

ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ ಗುರುನಾಥರೂಢರು