ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ ಗುರುನಾಥರೂಢರು

 ☘️ ಗುರುನಾಥಾರೂಢರ ಪವಿತ್ರ ಚರಿತ್ರೆ...

ಕೈಲಾಸ ಲೋಕದಲ್ಲಿ ನಂದೀಶನ ಶಾಪದಿಂದ ಗಂಧರ್ವನು ಭೂಲೋಕದಲ್ಲಿ ಹುಲಿಯಾಗಿ ಜನಿಸಿ, ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ.



ದಿನನಿತ್ಯವೂ ಮಠದಲ್ಲಿ ಶಾಸ್ತ್ರ ಶ್ರವಣ ನಡೆಯುತ್ತಿತ್ತು. ಒಂದಾನೊಂದು ದಿನ ಸಾಯಂಕಾಲ ಸಿದ್ದಾರೂಢರು ಹಳೇಹುಬ್ಬಳ್ಳಿ ಅಕ್ಕಸಾಲಿಗರ ಓಣಿಯಲ್ಲಿಯ  ಉಜ್ಜಣ್ಣವರ ಮನೆಗೆ ಬಂದಾಗ, ಭೀಮಪ್ಪನ ದತ್ತಕ ಪುತ್ರ ಸಿದ್ದಪ್ಪನ ಹಿರಿಯ ಮಗ ೭, ೮ ವರ್ಷದ ಬಾಲಕ ಗುರುಪ್ಪನು ಸ್ವಾಮಿಗಳ ತೊಡೆಯ ಮೇಲೇರಿ ಕುಳಿತನು. ಅವರನ್ನು ಪರಿಪರಿಯಿಂದ ಕಾಡುತ್ತ ಆಡುತ್ತಿರುವುದನ್ನು ಸಹನೆ ಮಾಡುತ್ತಾ ಹರ್ಷದಿಂದ ಆತನಿಗೆ ಪ್ರೀತಿಸುತ್ತಿದ್ದರು. ಕೆಲವು ಭಕ್ತರು ಸ್ವಾಮಿಗಳ ಮೇಲೆ ಸಲುಗೆಯಿಂದ ತೊಂದರೆ ಕೊಡುತ್ತಿದ್ದ ಈ ಗುರುಪ್ಪನನ್ನು ಒಳಗೆ ಕಳಿಸಬೇಕೆಂದು ಹೇಳುತ್ತಿರಲು, ಸ್ವಾಮಿಗಳು ಅವರನ್ನು ಕುರಿತು, ಹೇ ಭಕ್ತರೆ, ಈತನಿಗೆ ಈ ಸ್ವಭಾವವು ಸಹಜವಾಗಿದೆ ಅಂತಾ ಹೇಳಲು, ಅದು ಹೇಗೆ? ಈತನ ಪೂರ್ವ ಜನ್ಮದ ಚರಿತ್ರೆ ಬಹಳ ಆಶ್ಚರ್ಯ ದಾಯಕವಾಗಿದೆ. ಆ ಚರಿತ್ರೆ ಪರಮ ಭಕ್ತಿಯಿಂದ ಕೇಳುತ್ತಾ ಹರ್ಷರಾಗುವರಲ್ಲದೆ ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಪಾಪಗಳು ನಾಶವಾಗಿ ಪರಿಶುದ್ಧರಾಗುವದರೊಂದಿಗೆ ಧನ್ಯತೆ ಪಡೆಯುವರು ಅಂತ ಹೇಳಿದರು. ಹಾಗಾದರೆ ಅದನ್ನು ಕೇಳಲೇ  ಬೇಕು. ನಮಗೆಲ್ಲ ಆ ಚರಿತ್ರೆಯನ್ನು ಹೇಳಿ ಪಾವನಗೊಳಿಸಿರಿ ಅಂತಾ ಭಕ್ತರೆಲ್ಲರೂ ಪ್ರಾರ್ಥಿಸಿದರು. ಆಗ ಸಿದ್ದಾರೂಢರು, ಹೊರಗೆ ಅಂಗಳದಲ್ಲಿ ಆಡುವ ಒಬ್ಬ ಚಿಕ್ಕ ಬಾಲಕನನ್ನು ಕರೆತನ್ನಿರಿ  ಅಂತ ಹೇಳಿದ ಕೂಡಲೇ ಹೋರಗಾಡುತ್ತಿದ್ದ ಬಾಲಕನನ್ನು ಕರೆತಂದರು. ಶ್ರೀಗಳು ವರ್ಷದಿಂದ ಆ ಬಾಲಕನನ್ನು ತಮ್ಮ ಬಳಿ ಕೂಡ್ರಿಸಿಕೊಂಡು ತಮ್ಮಲ್ಲಿಯ  ತ್ರಿಕಾಲಜ್ಞಾನದ  ದೃಷ್ಟಿಯಿಂದ ನೋಡಿ ಆತನ ತಲೆಯ ಮೇಲೆ ತಮ್ಮ ಅಮೃತ ಹಸ್ತವನ್ನು ಇಟ್ಟು ಆತನಿಗೆ ಬಾಳೆಹಣ್ಣನ್ನು ತಿನಿಸಿದರು. ಆಗ ಆ ಬಾಲಕನ ಮುಖದ ಮೇಲೆ ತೇಜಃಪುಂಜ ಪ್ರಕಾಶ ಹೊಳೆದದ್ದನ್ನು ಕಂಡು ಎಲ್ಲರೂ ವಿಸ್ಮಯ ಗೊಂಡರು. ಆಗ ಸಿದ್ಧಾರೂಢರು ಭಕ್ತರನ್ನು ಕುರಿತು, ಹೇ ಭಕ್ತರೆ ಗುರಪ್ಪನ ಪೂರ್ವ ಜನ್ಮದ  ಚರಿತ್ರೆಯನ್ನು ಈ ಬಾಲಕನ ಮುಖದಿಂದ ಈಗ ಕೇಳಿರಿ ಅಂತಾ ಹೇಳಿ ಆ ಬಾಲಕನಿಗೆ, ಹೇ ಬಾಲಕನೇ ಈ ಗುರಪ್ಪನ ಪವಿತ್ರವಾದ ಪೂರ್ವ ಜನ್ಮದ ಚರಿತ್ರೆಯನ್ನು ಪ್ರೀತಿಯಿಂದ ಹೇಳಬೇಕು ಅಂತಾ ಅಪ್ಪಣೆ ಮಾಡಲು ಆ ಬಾಲಕನು ಚರಿತ್ರೆಯನ್ನು ಹೇಳಲು ಪ್ರಾರಂಭಿಸಿದರು.


ಆ ಬಾಲಕನು ಎಲ್ಲರನ್ನು ಕುರಿತು, ಹೇ ಭಕ್ತರೇ ಏಕಚಿತ್ತದಿಂದ ಕೇಳಿರಿ. ಒಂದಾನೊಂದು ದಿನ ಕೈಲಾಸದಲ್ಲಿ ಆದಿ ಪರಶಿವನ ವೈಭವದ  ಪೂಜಾ ನಡೆದಿತ್ತು. ಪ್ರಮಥ ಗಣಗಳೆಲ್ಲರೂ ಶಿವಭಜನೆಯಲ್ಲಿ ನಿರತರಾಗಿದ್ದರು. ಮಹಾಮಂಗಳಾರತಿ ನಡೆದಾಗ ಓರ್ವ ಗಂಧರ್ವನು  ಬಂದು ಅಲ್ಲಿ ಎಚ್ಚರವಿಲ್ಲದೆ ಧ್ಯಾನಸಕ್ತನಾಗಿದ್ದನು. ಎಲ್ಲರೂ ಎದ್ದು ನಿಂತು ಆರತಿಯಲ್ಲಿ ಪಾಲ್ಗೊಂಡಾಗ ಈ ಗಂಧರ್ವನು  ಮಾತ್ರ ಕೂತಿದ್ದನ್ನು ಕಂಡು ಅವನೆಡೆಗೆ ನಂದೀಶನು  ಬಂದು ಎಚ್ಚರಿಸಿ, ಹೇ ಗಂಧರ್ವನೇ  ಈಶ್ವರನ ಮಹಾಮಂಗಳಾರತಿ ಸಮಯದಲ್ಲಿ ನೀನು ಹೀಗೆ ಕುಳಿತಿರುವುದು ಸರಿ ಕಾಣುವುದೆ  ಎಂದು ಜಗ್ಗಿದ್ದಕ್ಕೆ ಧ್ಯಾನಕ್ಕೆ, ವಿಘ್ನ ತಂದಿದ್ದಕ್ಕೆ, ಕೋಪದಿಂದ ಆ ಗಂಧರ್ವನು ನಂದೀಶನಿಗೆ ಘರ್ಜಿಸುತ್ತಾ ಜರಿದನು. ಆಗ ನಂದೀಶನು ಆತನನ್ನು ಕುರಿತು, ಹೇ ನೀಚನೇ, ನೀಲಕಂಠನ ಪೂಜೆ ನಡೆದಾಗ ಪ್ರೀತಿಯಿಂದ ನಿನ್ನನ್ನು ಕರೆಯಲು, ಈ ಶುಭ ಸಮಯದಲ್ಲಿ ಕೋಪಗೊಂಡು ನನ್ನನ್ನು ಜರಿಯುತ್ತಿರುವಿಯಾ. ಭೂಲೋಕದಲ್ಲಿಯ  ಶ್ರೀಶೈಲ ಮಲ್ಲಿಕಾರ್ಜುನನ  ಸಮೀಪದ ಕಾಡಿನಲ್ಲಿ ಸಂಚಾರ ಮಾಡುವ ವ್ಯಾಘ್ರ ಜನ್ಮವು ನಿನಗೆ ಬರಲಿ ಅಂತಾ ಶಾಪ ಕೊಟ್ಟನು. ಆಗ ಕಣ್ಣೀರನ್ನು ಸುರಿಸುತ್ತಾ ಆ ಗಂಧರ್ವನು ಈಶ್ವರನ ಹತ್ತಿರ ಬಂದು, ಹೇ ದೇವದೇವನೆ ನಾನು ನಿರಪರಾಧಿಯು, ನಾನು ಧ್ಯಾನದಲ್ಲಿ ಆನಂದದಿಂದ ಮೈಮರೆತಾಗ ನನ್ನ ಧ್ಯಾನಕ್ಕೆ ಭಂಗ ತಂದು, ನಾನು ಹುಲಿಯಾಗಬೇಕೆಂದು ನಂದೀಶನು ನನಗೆ  ಶಾಪಕೊಟ್ಟಿದ್ದಾನೆ ಅಂತಾ  ರೋದಿಸತೊಡಗಿದನು.


ಆಗ ಚಂದ್ರಮೌಳಿಯು  ಆತನನ್ನು ಕುರಿತು, ಕಂದನೇ  ಕೇಳು. ಪ್ರಮಥ ಗಣಕೊಟ್ಟ ಶಾಪವು ಹುಸಿಯಾಗಲಾರದು. ಆದ್ದರಿಂದ ಭೂಲೋಕದಲ್ಲಿ ಅವತರಿಸುವ ನಿನ್ನ ಸಂರಕ್ಷಿಸುವ ಸಲುವಾಗಿ ಮಾನವನಾಗಿ ನಾನು ಅವತಾರ ಧಾರಣ ಮಾಡುವೆ. ಗುರುವಾಗಿ ಬಂದು ಹುಲಿಯ ಜನ್ಮವನ್ನು ಬಿಡಿಸಿ ನಿಮಗೆ ನರಜನ್ಮವನ್ನು ಕೊಡುವೆ. ಮುಂದೆ ನನ್ನ ಹತ್ತಿರ ನಿನ್ನನ್ನು ಇಟ್ಟುಕೊಂಡು ಹರ್ಷದಿಂದ ಎಲ್ಲ ಅಧಿಕಾರಗಳನ್ನು ನಿಮಗೆ ಕೊಡುವೆ. ಬಿಡದಂತೆ ನಿನ್ನ ರಕ್ಷಣೆಯನ್ನು ಮಾಡುವೆ. ಬೆದರದಿರು ಶಾಂತಗುಣವನ್ನು ಬಿಡದಂತೆ ಇರಬೇಕು ಅಂತ ಹೇಳಲು ಶಿವನಿಗೆ ವಂದನೆಗಳನ್ನು ಅರ್ಪಿಸುತ್ತಾ ಆ ಗಂಧರ್ವನು ಶ್ರೀಶೈಲದ ಕಾಡಿನಲ್ಲಿ ಹುಲಿಯ ಗರ್ಭದಿಂದ ಜನಿಸಿದನು. ಬಿದರಿ ಕೋಟೆಯಲ್ಲಿ ಪರಶಿವನು ಅವತರಿಸಿದನು. ಆ ಪರಶಿವನ ಅವತಾರಿ  ಸಿದ್ದನು ತನ್ನ ಮನೆಯನ್ನು ತ್ಯಜಿಸಿ, ಪರಮ ಗುರುವಿನ ಕೃಪೆಗೆ ಪಾತ್ರನಾಗಿ ಬಹುದೇಶಗಳನ್ನು ಸಂಚಾರ ಮಾಡುತ್ತಾ, ಶ್ರೇಷ್ಠವಾದ ಚಿಂತಾಮಣಿ ಆಶ್ರಮಕ್ಕೆ ಆಗಮಿಸಿದನು. ಓರ್ವ ಭಕ್ತರು ಸಿದ್ಧನನ್ನು ಶ್ರೀಶೈಲಗಿರಿಗೆ ಕರೆದುಕೊಂಡು ಹೋದನು. ಅವರ ಕೂಡ ಇದ್ದ ಜಂಗಮರು ಈ ಸಿದ್ಧ ಬಾಲಕ ಬುದ್ಧಿಹೀನ, ಲಿಂಗವಿಲ್ಲದ ಭವಿಯೆಂದು, ತಾವು ಇಳಕೊಂಡ ಸ್ಥಳದಿಂದ ಆತನನ್ನು ಗುದ್ದಿ ಗುದ್ದಿ ಹೊರದೂಡಿದರು. ಆಗ ಸಿದ್ಧನು ಅಲ್ಲಿಂದ ಎದ್ದು ಕಾಡಿನಲ್ಲಿ ಹೋದನು. ಅಲ್ಲಿರುವ ಯಾರೂ ಇಲ್ಲದ ನಿರ್ಜನವಾದ ಮಠದಲ್ಲಿ ಪ್ರವೇಶಿಸಿದನು. ಆ ಮಠದಲ್ಲಿ ಮಲಗಿದ್ದ ಭಯಂಕರ ವ್ಯಾಘ್ರವು ಮೆಲ್ಲನೆ ಮೈಮುರಿದು ನಿಂತು, ಸಿದ್ದನು ಪರಶಿವನ ಅವತಾರಿಯೆಂದು ಗುರುತಿಸಿ ಬಾಲವನ್ನಾಡಿಸುತ್ತಾ ಪ್ರೀತಿಯಿಂದ ತನ್ನ ತಲೆಯನ್ನು ಸಿದ್ದನ ಚರಣಗಳಲ್ಲಿ ಇರಿಸಿ ನಿಂತಿತು. ಆಗ  ಸಿದ್ಧರೂ ಗಂಧರ್ವನೇ  ಶಾಪದಿಂದ ಜನ್ಮತಾಳಿದ ಹುಲಿಯೆಂದು ಗುರುತಿಸಿ, ಅದರ ಶಿರವನ್ನು ಹರ್ಷದಿಂದ ಹಿಡಿದೆತ್ತಿ, ಮೃಗರಾಜನೇ, ಅಲ್ಪ ಕಾಲದಲ್ಲಿಯೇ ನಿನಗೆ? ನರಜನ್ಮವು  ದೊರೆಯುವುದು ಮರೆಯಬೇಡ ಅಂತ ಅಭಯವನ್ನು ಕೊಡುತ್ತಾ, ಕರಗಳಿಂದ ಮೈದಡವಿ ಮುದ್ದಿಸಿ ಅದನ್ನೇರಿದನು. ನಂತರ ಜಂಗಮರ ಗರ್ವಭಂಗವನ್ನು ಮಾಡಿ ಅಲ್ಲಿಂದ ಹೊರಟ ಸಿದ್ದನು ಅನೇಕ ಗಿರಿ ಪೂರಗಳನ್ನು ನೋಡುತ್ತಾ, ಸಂಚರಿಸುತ್ತಾ ಕಾವೇರಿ ನದಿ ತಟದಲ್ಲಿ ಕುರಿಗಳನ್ನು ಕಾಯುತ್ತಿದ್ದ ಹುಡುಗನ ಜೊತೆ ಆಡುತ್ತಾ, ಅವರ ಕೂಡ ಊಟ ಮಾಡುತ್ತಾ ಕೆಲವು ದಿನ ಕಳೆದರು.


ಆ ಕಡೆ ಆ ಹುಲಿಗೆ  ಸಿದ್ದನ ಅಗಲುವಿಕೆಯ ವ್ಯಸನ ಹೆಚ್ಚಾಗಲು ಮನಸ್ಸಿನ ಯಾತನೆಯು ಬೆಳೆಯತೊಡಗಿತು. ಸಿದ್ಧನನ್ನು ಹುಡುಕುತ್ತಾ ಗಿರಿ, ಕಾಡು, ಬೆಟ್ಟಗಳನ್ನು ದಾಟುತ್ತಾ ದೈವಯೋಗದಿಂದ ಸಿದ್ಧನಿದ್ದ ಸ್ಥಳಕ್ಕೆ ಬಂದಿತು. ಕುರುಬನ ಕೂಡ ಉಣ್ಣುತ್ತ ಕೂತಿದ್ದ ಸಿದ್ಧನನ್ನು ಗುರ್ತಿಸಿ, ಭರಭರನೆ ಆತನತ್ತ ಧಾವಿಸಿತು. ಅದನ್ನು ಕಂಡು ಬೆದರಿ ಕುರುಬರು ಓಡತೊಡಗಿದರು. ಸಿದ್ಧನು ಮುಂದಕ್ಕೆ ಬರಲು ಹರ್ಷದಿಂದ ಆ ಹುಲಿಯು ತಲೆಬಾಗಿಸಿ ಅವನೆದುರಿಗೆ ನಿಂತಿತು. ಆಗ ಸಿದ್ಧನು  ಬೋಳೈಸುತ್ತಾ ಕೈಗಳಿಂದ ಚಪ್ಪರಿಸುತ್ತಾ ಅದರ ಬೆನ್ನಮೇಲೆ ಏರಿ ಕುಳಿತು ನಗುತ್ತಾ, ಹೇ ಕುರುಬರೇ  ಬನ್ನಿರಿ, ಇದರಿಂದ ಮರಣಭಯ ಇಲ್ಲ, ಮಿತ್ರನಾಗಿ ಈ ಹುಲಿಯು ಬಂದಿದೆ ಎಂದು ಕರೆಯಲು ಅವರೆಲ್ಲರೂ ಚಕಿತರಾಗಿ ಸಮೀಪ ಬಂದು ಸಾಕ್ಷಾತ್ ಪರಶಿವನೇ, ಇಲ್ಲಿಗೆ ಅವತಾರ ಧಾರಣ ಮಾಡಿ ನಮ್ಮನ್ನು ಸಂರಕ್ಷಣೆ ಹಾಗೂ ಕಲಿದೋಷ ಪರಿಹಾರಕ್ಕಾಗಿ ಬಂದಿರುವ ನಿನಗೆ ಶರಣು ಶರಣಾಗತ ರಕ್ಷಕನೇ,  ಶುಭಂಕರನೆ, ಮನೋಹರನೆ, ಲೋಕ ವಂದ್ಯನೆ, ಕುರಿಗಳಿಗೆ ಯಮನಾದ ಹುಲಿಯನ್ನು ಕುರಿಗಳ ಗೆಳೆಯರನ್ನಾಗಿ ಮಾಡಿದ ನೀನು ನರನಲ್ಲ. ನೀನು ಪರಶಿವಮೂರ್ತಿಯೇ  ನಿಜ ಎನ್ನುತ್ತಾ ಸುತಿಸುತ್ತ  ಭಕ್ತಿಪೂರ್ವಕವಾಗಿ ಸಿದ್ಧಾರೂಢರ ಪಾದಾರವಿಂದಗಳಲ್ಲಿ ನತಮಸ್ತಕರಾಗಿ ವಂದನೆಗಳನ್ನು ಸಲ್ಲಿಸಿದರು. ನಂತರ ಸಿದ್ದಾರೂಢರು ಆ ಹುಲಿಯ ಕಿವಿಯನ್ನು ಹಿಡಿದು ಅತ್ತಿಂದಿತ್ತ ಜಗ್ಗುವುದು, ಮುದ್ದಿಸುವುದು, ಎಳೆದಾಡಿ ಅದರ ಮೇಲೇರಿ ಗುದ್ದುವದು ಹೀಗೆ ನಾನಾ ಪ್ರಕಾರ ಕಾಡಿದರೂ ಆ ಹುಲಿಯು ಕ್ರೋಧ ಮಾಡದೆ  ಸಂತಸದಿಂದ ಇರುತ್ತಿತ್ತು, 


ಒಂದಾನೊಂದು ದಿನ ಒಬ್ಬ ಬೇಡನು ಮರೆಯಲ್ಲಿ ನಿಂತು ಹುಲಿಯ ಮೇಲೆ ಗುಂಡನ್ನು ಹಾರಿಸಿದನು. ಆಗ ಹುಲಿಯು ಹಾರಿ ಅವನನ್ನು ಹಲ್ಲುಗಳಿಂದ ಕಡಿದು ಕೆಡವಿತು. ಈ ಗದ್ದಲವನ್ನು ನೋಡಿ ಧ್ಯಾನದಿಂದೆಚ್ಚೆತ್ತ ಸಿದ್ದರು ಅಲ್ಲಿಗೆ ಬಂದು ಹುಲಿಗಾದ  ಗಾಯವನ್ನು ನೋಡಿ ಮರಾಮರಾಮರುಗಿ ಹತ್ತಿರಕ್ಕೆ ಹೋದರು. ಕಣ್ಣೀರನು ಸುರಿಸುತ್ತಾ ಹುಲಿಯು ಸಿದ್ಧರ ಚರಣಗಳಲ್ಲಿ ತಲೆಯನ್ನಿಟ್ಟಿತು. ಸ್ವಾಮಿಯು ಕರುಣೆಯಿಂದ ಆ ಹುಲಿಯ ಶಿರವನ್ನು ತನ್ನ ತೊಡೆಯ ಮೇಲೆ ಇರಿಸಿಕೊಳ್ಳುತ್ತಾ, ಪರಮ ಭಕ್ತಿ ಮೃಗರಾಜನೇ  ನೀನು ದುಃಖವನ್ನು ಮಾಡಬೇಡ. ಶಂಕರನನ್ನು ಸ್ಮರಣೆ ಮಾಡುತ್ತಾ ಈ ಶರೀರವನ್ನು ತ್ಯಜಿಸು. ಮುಂದೆ ಶೀಘ್ರವಾಗಿ ಶ್ರೇಷ್ಠವಾದ ಮಾನವ ಜನ್ಮ ಬರುವುದು ಅನ್ನುತ್ತಾ ಅದರ ಮೈಮೇಲೆ ಅಭಯಹಸ್ತವನ್ನು ಎಳೆದರು. ಸಿದ್ಧಾರೂಢ ಧ್ಯಾನ ಮಾಡುತ್ತಾ ಆ ಹುಲಿಯು ಅವರ ತೊಡೆಯ ಮೇಲೆ ಪ್ರಾಣ ಬಿಟ್ಟಿತು. ಆಗ ಸಿದ್ದಾರೂಢರು ನೆರೆದ ಜನರನ್ನು ಕುರಿತು, ಈ ವ್ಯಾಧನ ಬದುಕುವನು ಅವರನ್ನು ರಕ್ಷಿಸಿರಿ ಅಂತಾ ಹೇಳಿದರು. ಸಿದ್ಧರ ಮಹಿಮೆಯನ್ನು ಕಂಡು ನುತಿಸುತ್ತಾ ಸರ್ವರೂ ವಂದಿಸಿದರು. ನಂತರ ವ್ಯಾಧನನ್ನು ಕರೆದುಕೊಂಡು ಹೋದರು. ಬಳಿಕ ಸಿದ್ಧಾರೂಢರು  ಅಲ್ಲಿಂದ ಹೊರಟು ನಾನಾದೇಶ, ಪುರ, ಗಿರಿ, ಕಂದರಗಳನ್ನು ದಾಟುತ್ತಾ ಸಂಚರಿಸುತ್ತ ಈ ಹುಬ್ಬಳ್ಳಿಗೆ ಬಂದು ನೆಲೆಸಿದರು. 


ಕೆಲವು ಕಾಲದ ನಂತರ ಈ ಮನೆಯೊಳಗಿನ ಉಜ್ಜಣ್ಣವರ ಸಿದ್ದಪ್ಪನ ಪತ್ನಿಯ ಗರ್ಭದಿಂದ ಪರಶಿವನ ಕೃಪೆಗೆ ಪಾತ್ರ ಹುಲಿಯಾಗಿದ್ದ ಗಂಧರ್ವನೇ  ಜನಿಸಿದನು. ಆತನೆ ಈ ಗುರಪ್ಪನು. ಹಲವು ಬಗೆಯಿಂದ ಹುಲಿಯ ಜನ್ಮದಲ್ಲಿದ್ದಾಗ ಸಿದ್ಧಾರೂಢರು  ಅದರ ಕಿವಿಯನ್ನು ಜಗ್ಗುವುದು, ಎಳೆದಾಡುವುದು, ಅದರ ಮೈಮೇಲೆ ಏರಿ ಕುಳಿತು ಕಾಡಿದಂತೆ ಹುಲಿಯ ಶರೀರ ಬಿಟ್ಟು ನರಜನ್ಮದಲ್ಲಿರುವ ಈ ಗುರಪ್ಪನು ಸಿದ್ಧಾರೂಢರ ಮೈಮೇಲೇರಿ ಕಾಡುತ್ತಲಿರುವನು. ಚತುರರಾದ ಭಕ್ತರೇ  ಸಿದ್ಧಾರೂಢರು  ನನ್ನ ಅಂತರಂಗದಲ್ಲಿ ಕೂತು ಈ ಪವಿತ್ರವಾದ ಚರಿತ್ರೆಯನ್ನು ನುಡಿಯುತ್ತಲಿರುವರೇ ವಿನಃ ಏನೊಂದು  ಜ್ಞಾನವಿಲ್ಲದ ಆ ಬಾಲಕನಿಗೆ ತೂಷ್ಟಿ0 ಸ್ಥಿತಿಯೊದಗಿತು. ಇನ್ನೊಂದು ಬಾಳೆಹಣ್ಣನ್ನು ಅವರಿಗೆ ತಿನ್ನಿಸಿದರು. ನಂತರ ಮೊದಲಿನ ಸ್ಥಿತಿಗೆ ಬಂದ ಬಾಲಕನು ತನ್ನ ಮನೆಗೆ ಹೋದನು. ಹೀಗೆ ಗುರಪ್ಪನ ಪೂರ್ವಜನ್ಮದ ಚಾರಿತ್ರ್ಯವನ್ನು ಕೇಳಿ ಭಕ್ತರೆಲ್ಲರೂ ಚಕಿತಗೊಂಡರು ಮತ್ತು ತಮ್ಮ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಅಂತಾ ಭಕ್ತರು ಪ್ರಾರ್ಥಿಸಲು, ಅದಕ್ಕೆ ಸಿದ್ಧಾರೂಢರು ಒಪ್ಪಿಗೆ ನೀಡಿದರು. ಸರಳ ಮನಸ್ಸಿನಿಂದ ಗುರಪ್ಪನನ್ನು ಮರಿದೇವರನ್ನಾಗಿ ಮಾಡಿ ಮಠದಲ್ಲಿರಿಸಿದರು. ಪ್ರೀತಿಯಿಂದ ಸಂಸ್ಕೃತವನ್ನು ಕಲಿಯಲು ಹಚ್ಚಿದರು. ಅಭ್ಯಾಸ ಮಾಡುತ್ತಿರುವಲ್ಲಿ ಶಾಂತಗುಣವು ಅವನಲ್ಲಿ ಮೂಡಿ ಮೊದಲಿನ ಗುಣಗಳು ಮಾಯವಾದವು. ಭಕ್ತರೆಲ್ಲರೂ ಸವಿನಯದಿಂದ ಮರಿದೇವರಿಗೆ ನಮಿಸುತ್ತಲಿದ್ದರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಬೆನಕಪ್ಪ ಮತ್ತು ಆತನ ಪತ್ನಿಯನ್ನು ಗ್ರಂಥಿರೋಗದಿಂದ ರಕ್ಷಿಸಿದ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 📲

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ