ಆರುಮಂದಿ ಬಂದು ಯಥೇಷ್ಟ ಹೊಡೆದರು,ಭಕ್ತರ ಅನುಗ್ರಹದಿಂದ ಸದ್ಗುರುಗಳು ರಥಾರೋಹಣವನ್ನು ಮಾಡಿದನು ನೋಡಿ ಆರುಮಂದಿ ಬಂದು ಸಿದ್ಧರ ಪಾದಕ್ಕೆ ಬಿದ್ದರು.
🌿ಆರುಮಂದಿ ಯವ್ವನರು ಬಂದು ಯಥೇಷ್ಟ ಹೊಡೆದರು,ಭಕ್ತರ ಅನುಗ್ರಹದಿಂದ ಸದ್ಗುರುಗಳು ರಥಾರೋಹಣವನ್ನು ಮಾಡಿದನು ಅದನು ನೋಡಿ ಆ ಆರುಮಂದಿ ಬಂದು ಸಿದ್ಧರ ಪಾದಕ್ಕೆ ಬಿದ್ದರು.
ಒಂದಾನೊಂದು ಕಾಲದಲ್ಲಿ ದಯಾಘನರಾದ ಸಿದ್ಧರು ಕಟ್ಟೆಯ ಮೇಲೆ ಧ್ಯಾನಸ್ಥರಾಗಿ ಕುಳಿತಿದ್ದರು. ಆ ಸಮಯದಲ್ಲಿ ಮಠದೊಳಗೆ ಯಾರು ಇದ್ದಿರಲಿಲ್ಲ. ಆಗ ಆರು ಮಂದಿ ಯವನರು ಮದ್ಯಪಾನದಿಂದ ಮತ್ತರಾಗಿದ್ದು ಸಿದ್ಧರಿಗೆ ಏನಾದರೂ ಪೀಡೆ ಮಾಡುವ ಉದ್ದೇಶದಿಂದ ಅವರ ಹಿಂದಿನಿಂದ ಬಂದರು. ಒಬ್ಬನು ಅಕಸ್ಮಾತ್ತಾಗಿ ಸಿದ್ದರಿಗೆ ದೂಡಿಬಿಟ್ಟನು. ಅವರು ಕಟ್ಟೇ ಮೇಲಿಂದ ಕೆಳಗೆ ಬಿದ್ದರು. ಆದರೆ ಸಿದ್ಧರು ಅವರ ಕಡೆಗೆ ನೋಡದೆ ಪುನಃ ಎದ್ದು ಮೊದಲಿನಂತೆ ಕಟ್ಟೆ, ಮೇಲೆ ಕುಳಿತಿರು. ಹ್ಯಾಗೆ ಗಿಡದ ಟೊಂಗೆಯನ್ನು ನುಗಿಸಲಾಗಿ ಅದು ತನಗೆ ಯಾರು ಅಲ್ಲಾಡಿಸುವರೆಂಬುದನ್ನು ವಿಚಾರಿಸಿದೆ ಮೊದಲಿನಂತೆ ಇರುವುದೋ ಹಾಗೆಯೇ ಸಿದ್ಧಾರೂಢರು ಕುಳಿತವರು. ಇದನ್ನು ನೋಡಿ ಅವರು ಅಧಿಕವಾಗಿ ಸಿಟ್ಟಿಗೆದ್ದು, ಮತ್ತೊಬ್ಬನು ಸಿದ್ಧರ ಕೈ ಹಿಡಿದು ಬಲಾತ್ಕಾರದಿಂದ ಎಳೆದನು. ಆಮೇಲೆ ಅವರೆಲ್ಲರೂ ಸಿದ್ಧರ ಸಮೀಪ ಬಂದು - “ಎಲೇ ಹುಚ್ಚಾ, ನಿನಗೆ ಮದ್ಯಪಾನ ಮಾಡಿಸಿ, ಆನಂದ ಕೊಡುವೆವು. ಒಲ್ಲೆ ಎಂಬುವ ಮಾತು ನಮ್ಮ ಹತ್ತರ ಎಂದೂ ನಡಿಯಲಿಕ್ಕಿಲ್ಲ ನೋಡು." ಎಂದು ಆ ಆರೂ ಜನರು ಅವರು ಸುತ್ತಲೂ ಕೂತುಕೊಂಡರು. ಸಿದ್ಧರನ್ನು ನಡುವೆ ಕೂಡ್ರಿಸಿ ಕಿಸೆಯೊಳಗಿಂದ ಮದ್ಯದ ಬಾಟ್ಲಿಯನ್ನು ತೆಗೆದು, ಸಿದ್ಧರನ್ನು ಕುರಿತು, ಅವರಲ್ಲೊಬ್ಬನು - “ನೀನು ಸತ್ಯವಾಗಿ ಹುಚ್ಚನಿದ್ದಿಯಾದರೆ, ನೀನು ಶರೆ ಕುಡಿಯಬೇಕು. ಕುಡಿದರೆ ನಿನ್ನದೇನು ಹೋಗುವುದು ?” ಎಂದು ಕಾಲಿನಿಂದ ಒದ್ದು ಬಿಟ್ಟನು. ಸಿದ್ಧರು ಮದ್ಯಪಾನ ಒಲ್ಲರೆಂದರು. ಅವರ ಮೈಮೇಲೆ ಅವರೆಲ್ಲರೂ ತುಳಿಯಲಾರಂಭಿಸಿದರು. ಸಿದ್ದರಾದರೂ, ಅವರು ಏನು ಮಾಡಿದರೂ ತಳಮಳಿಸದೆ, ಶಾಂತ ಸ್ಥಿತಿಯಲ್ಲಿ ಇದ್ದರು. ಒಬ್ಬನು ಒಂದು ಕಟ್ಟಿಗೆಯಿಂದ ಹೊಡೆಯುತ್ತಿದ್ದನು. ಮತ್ತೊಬ್ಬನು ಕಣ್ಣು ಕುಕ್ಕಲಿಕ್ಕೆ ನೋಡುತ್ತಿದ್ದನು. ಒಬ್ಬನು ಸಿದ್ಧರ ಮಸ್ತಕದ ಮೇಲೆ ತುಳಿಯುತ್ತಿದ್ದು. ಇಷ್ಟಾದರೂ ಸಿದ್ಧರು ಸ್ವಸ್ಥ ಚಿತ್ತರಾಗಿ ಕುಳಿತಿದ್ದರು. ಸಿದ್ದರಿಗೆ ಕ್ರೋಧ ದೃಷ್ಟಿಯೆಂಬುದು ಎಂದೆಂದೂ ಇಲ್ಲದೆ, ಅವರು ಶಾಂತ ದೃಷ್ಟಿಯಿಂದ ಆ ಯವನರ ಕಡೆಗೆ ನೋಡುತ್ತಿದ್ದರು. ಇವರ ಶಾಂತಿಯನ್ನು ನೋಡಿ, ಸಿಟ್ಟಿಗೆಬ್ಬಿಸಬೇಕೆಂಬ ಛಲ ಹಿಡಿದು, ಆ ಮುಸಲ್ಮಾನರು ಮತ್ತಷ್ಟು ಹುರುಪಾಗಿ ಸಿದ್ಧರನ್ನು ಪೀಡಿಸುವಂಥವರಾದರು. ಹೀಗಿರುತ್ತಾ ಕೆಲವು ಹೂತ್ತಿನ ಮೇಲೆ ಸಿದ್ದರು ದಯಾಭರಿತರಾಗಿ ಅವರ ಕಡೆಗೆ ನೋಡಿ, -“ನೀವು ಬಹಳ ಉತ್ತಮ ಕಾರ್ಯವನ್ನು ಮಾಡುತ್ತಿರುವಿರಿ, ಈ ಪ್ರಕಾರ ನಡಿಸುವವರು ಈ ಲೋಕದಲ್ಲಿ ಬಹಳೇ ಕಡಿಮೆ ಮಂದಿ ಸಿಗುವರು. ನಿಮ್ಮ ಕಡೆಯಿಂದ ಇಂಥಾ ಉಪಕಾರವನ್ನು ಪಡೆದು, ನಿಮಗೆ ಹಾನಿ ಬರುವಂತೆ ಮಾಡಬಾರದೆಂದು ಹೇಳುತ್ತೇನೆ ಕೇಳಿರಿ. ಈಗ ಊರೊಳಗಿಂದ ಭಕ್ತ ಜನರು ಬರುವರು. ನಿಮ್ಮ ಈ ಉದ್ಯೋಗವನ್ನು ಅವರು ನೋಡಿದರೆ, ನಿಮಗೆ ಘಾತ ಮಾಡುವರು. ಅದರಿಂದ ನನಗೆ ದುಃಖ ಅನಿಸುವದು, ಆದ್ದರಿಂದ ನಾನು ಹೇಳುವುದೇನೆಂದರೆ ನೀವು ಈಗಿಂದೀಗಲೇ ಹೊರಟು ಹೋಗಿರಿ. ನೀವು ಅವರ ದೃಷ್ಟಿಗೆ ಬಿದ್ದಿರೆಂದರೆ, ನಿಮಗೆ ನಿಶ್ಚಯವಾಗಿ ಘಾತವಾಗುವದು. ನಾಳೆ ಇಷ್ಟೇ ಹೊತ್ತಿಗೆ ಇಲ್ಲಿಗೆ ಬಂದು, ನೀವು ನನಗೆ ಯಥೇಷ್ಟವಾಗಿ ಹೊಡೆಯಿರಿ. ಈಗ ಬೇಗನೇ ನಡೆಯಿರಿ'', ಎಂದು ಅವರನ್ನು ದೂಡುವಂಥವರಾದರು. ಆ ಯವನರು ಮದ್ಯಪಾನದಿಂದ ಉನ್ಮತ್ತರಾಗಿ- 'ಎಲೈ ಹುಚ್ಚಾ, ಏನು ಅನ್ನುತ್ತಿಯೋ, ನಿನ್ನನ್ನು ಪೂರಾ ಕೊಂದೇ ನಾವು ಹೋಗುವೆವು', ಎಂದು ಸಿದ್ಧರನ್ನು ಕೊಲ್ಲುವ ಉದ್ದೇಶದಿಂದ ಒಂದು ದೊಡ್ಡದಾದ ಕಲ್ಲು ಹೊತ್ತುಕೊಂಡು ಬಂದರು. ಇಷ್ಟರೊಳಗೆ ಜನರು ಮಾತನಾಡುವ ಸಪ್ಪಳವು ಸಮೀಪವೇ ಕೇಳಿ, ಅವರು ಕಲ್ಲು ಒಗೆದು, ಓಡಿಹೋಗಿ, ಯಾರಿಗೂ ಕಾಣಿಸದಂತೆ ನಿಂತು ನೋಡುತ್ತಿದ್ದರು. ಆ ಭಕ್ತ ಜನರು ಸಿದ್ಧರನ್ನು ನೋಡಿ ಅವರ ಮುಂದೆ ಸಾಷ್ಟಾಂಗ ಹಾಕುತ್ತಿರುವದನ್ನು ಯವನರು ನೋಡುತ್ತಿದ್ದರು. ಆಗ ದಯಾಪೂರ್ಣರಾದ ಸಿದ್ದಾರೂಢರನ್ನು ಕುರಿತು ಆ ಭಕ್ತ ಜನರು - “ಹೇ ಮಹಾಸ್ವಾಮೀ, ಕೃಪಾ ಮೂರ್ತಿ, ನಮ್ಮ ದೀನ ವಚನವನ್ನು ಶ್ರವಣ ಮಾಡಬೇಕು. ಇವತ್ತು ಕಾಳಮ್ಮನ ರಥೋತ್ಸವ ಮಾಡಬೇಕೆಂದು ರಥವನ್ನು ಶೃಂಗರಿಸಿ, ಊರೊಳಗೆ ನಿಂದಿರಿಸಿದೆವು. ಕಾಳಮ್ಮನ ಮೂರ್ತಿಯನ್ನು ಅಲಂಕರಿಸಿ, ರಥದ ಮೇಲೆ ಸ್ಥಾಪಿಸಿದೇವು. ಆದರೆ ಎಷ್ಟು ಪ್ರಯತ್ನ ಪಟ್ಟು, ರಥವನ್ನು ಎಳೆದರೂ, ರಥವು ಅಲಗಾಡುವುದಿಲ್ಲ. ಆಗ ಒಬ್ಬ ಗೃಹಸ್ಥನು ಬಂದು, ಮಹಾತ್ಮರ ಸನ್ನಿಧಿ ವಿನಹಾ ರಥ ನಡಿಯಲಾರದು ಎಂದು ಅಂದದ್ದು ಕೇಳಿ, ನಾವು ತಮ್ಮ ಕಡೆಗೆ ಬಂದಿರುತ್ತೇವೆ.- ನೀವು ಸತ್ಯವಾಗಿ ಮಹಾತ್ಮರೇ ಇದ್ದೀರಿ, ಅಲ್ಲಿ ತನಕ ಬರುವಂಥವರಾದಿರಂದರೆ ಬಹಳ ಉತ್ತಮವಾಗುವದು. ಆದ್ದರಿಂದ ನೀವು ನಮ್ಮ ಮೇಲೆ ಕೃಪಾಮಾಡಿ, ನಮ್ಮ ಮನೋರಥವನ್ನು ಪೂರ್ಣ ಮಾಡಬೇಕು.” ಎಂದು ಆ ಭಕ್ತರು ಅಂದದ್ದು ಕೇಳಿ, ಕೃಪಾನಿಧಿಯಾಗಿರುವ ಸಿದ್ಧಾರೂಢರು, ಅವರನ್ನು ಕುರಿತು - ''ನೀವು ಇಚ್ಚಿಸಿದ ಪ್ರಕಾರ ಮೊದಲು ಆಗಲಿ. ಆಮೇಲೆ ನಾನು ಮಠಕ್ಕೆ ಮರಳಿ ಬಂದು, ರಾತ್ರಿ ಕಾಲದಲ್ಲಿ ಇಲ್ಲೇ ಇರುವೆನು', ಅಂದರು. ಈ ಸಂಭಾಷಣವನ್ನೆಲ್ಲಾ ಕೇಳಿದ ಆ ಯವನರು ತಮ್ಮೊಳಗೆ - ''ಈ ಮಂದಿಗೆ ಏನು ಭ್ರಮೆ ಹತ್ತಿದೆ. ಈ ಹುಚ್ಚನಿಗೆ ಮಹಾತ್ಮ ಅಂದು, ರಥ ನಡಿಸಲಿಕ್ಕೆ ಈತನನ್ನು ಕರೆದುಕೊಂಡು ಹೋಗುತ್ತಾರಂತೆ. ನಾವಾದರೂ, ಇವನನ್ನು ಕರೆದುಕೊಂಡು ಹೋಗಿ ಇವರು ಏನು ಮೋಜು ಮಾಡುತ್ತಾರೆ, ನೋಡೇ ಬಿಡೋಣ, ನಮ್ಮ ವೃತ್ತಾಂತವನ್ನು ಯಾರಿಗೂ ಹೇಳದೆ ರಥದ ಕಡೆಗೆ ಹೋಗೋಣ” ಎಂದು ತಮ್ಮೊಳಗೆ ಅನ್ನುವಂಥವರಾದರು. ಶ್ರೀ ಸಿದ್ಧರನ್ನು ಕರೆದುಕೊಂಡು ಭಕ್ತರು ಹೋಗುತ್ತಿರುವಾಗ್ಗೆ ಹಿಂದಿನಿಂದ ಯವನರು ನಡೆಯುತ್ತಿದ್ದರು. ಹಳೆ ಹುಬ್ಬಳ್ಳಿಯಲ್ಲಿ ರಥವನ್ನು ಶೃಂಗಾರಿಸಿ ರಸ್ತೆಯ ಮೇಲೆ ನಿಂದಿರಿಸಿದ್ದರು. ನೂರಾರು ಮಂದಿ ಅದನ್ನು ಬಹು ರೀತಿಯಿಂದ ಎಳೆದರೂ ಅದು ಅಲ್ಲಾಡದಿರುವದು. ಸಿದ್ದರನ್ನು ಭಕ್ತರು ಕರೆದುಕೊಂಡು ಹೋಗಿ, ಒಂದು ಮನೆಯ ಕಟ್ಟೆಯ ಮೇಲೆ ಕೂಡ್ರಿಸಿದರೂ. ಎಂಟು ಜನರಿಗೆ ಸಹಜವಾಗಿ ಎಳಯಲಿಕ್ಕೆ ಬರುವಂಥಾ ರಥವನ್ನು
ಈಗ ಸದ್ಗುರು ಸನ್ನಿಧಿಯಲ್ಲಿ, ನೂರಾರು ಮಂದಿ, ಎಳೆಯುವಂಥವರಾದರು. ಆದರೂ ರಥವು ಪರ್ವತದಂತೆ ಅಚಲವಾಗಿತ್ತು. ಇದನ್ನು ನೋಡಿ, ಭಕ್ತ ಜನರು ಬಹಳ ಖಿನ್ನರಾದರು. ಆ ಯವನರು ತಮ್ಮ ತಮ್ಮೊಳಗೆ.....'' ಈ ಮಂದಿಗೆ ಹುಚ್ಚು ಹಿಡಿದಿದೆ. ಈ ಹುಚ್ಚನಿಗೆ ಇಂಥಾ ಶಕ್ತಿ ಇರುವುದು ಸತ್ಯಾವಾದರೆ, ನಾವು ಹೊಡಿಯುತ್ತಿರುವಾಗ ಈತನು ಯಾಕೆ ಸುಮ್ಮನೆ ಇರುತ್ತಿದ್ದನು ? ''ಈತನು ಬಲಿಷ್ಠ ಮಹಾತ್ಮನೆಂಬುವುದು ಸತ್ಯವು' ಅದಕ್ಕೆ ಮತ್ತೊಬ್ಬನು, 'ಹಾಗಾದರೆ ಇವನ ಮುಂದೆ ರಥ ಯಾಕೆ ನಡಿಯಲಾರದು ?'' ಎಂದು ನಾನಾ ಪ್ರಕಾರದ ಜನರು ತಮ್ಮ ತಮ್ಮೊಳಗೆ ಅನ್ನುತ್ತಿರುವರು. ಆ ಸಮಯದಲ್ಲಿ, ಯಾವಾತನು, ಮಹಾತ್ಮರ ಸನ್ನಿಧಿಯಲ್ಲಿ ರಥ ನಡಿಯುವದೆಂದು ಅಂದಿದ್ದನೋ, ಆ ಗೃಹಸ್ಥನು ಬಂದು, ಆ ಖಿನ್ನ ಮನಸ್ಕರಾದ ಜನರನ್ನು ಕುರಿತು - “ನೀವು ನಾನು ಅಂದಂತೆ ಮಾಡಲಿಲ್ಲ. ಮಹಾತ್ಮರ ಸನ್ನಿಧಿಯೆಂದರೆ, ಅವರನ್ನು ಸದ್ಭಕ್ತಿ ಯಿಂದೊಡಗೂಡಿ, ರಥದ ಮೇಲೆ ಕೂಡ್ರಿಸಿ, ಭಜನೆ ಮಾಡುತ್ತಾ, ರಥವನ್ನು ಎಳೆದರೆ, ರಥವು ನಡೆಯುವುದು, ನೋಡಿರಿ", ಎಂದು ಹೇಳಿದನು. ಈ ಮಾತು ಕೆಲವರ ಮನಸ್ಸಿಗೆ ಬಂದಿಲ್ಲ, ಅವರು - ''ಕಾಳಮ್ಮನನ್ನು ಬಿಟ್ಟು, ಅವರನ್ನು ರಥದಲ್ಲಿ ಕುಳ್ಳಿರಿಸಿದರೆ, ನಮ್ಮ ಮೇಲೆ ಆ ದೇವಿಯು ಕ್ಷೋಭೆಗೊಳ್ಳುವಳು'. ಎಂದು ಹೇಳಿದರು. ಅದಕ್ಕೆ ಆ ಗೃಹಸ್ಥನು - ಹಾಗಾದರೆ ನಿಮಗೆ ಹೇಳುತ್ತೇನೆ ಕೇಳಿರಿ. ನಿನ್ನೆ ನನ್ನ ಸ್ವಪ್ನದಲ್ಲಿ ಬಂದು ಕಾಳಮ್ಮ -"ನೀವು ನಾಳೆ, ಸಿದ್ಧರನ್ನು ಕೂಡ್ರಿಸದೆ ರಥ ಎಳೆಯಲಿಕ್ಕೆ ನೋಡಿದರೆ, ನಾನು ಅದನ್ನು ನಡಿಯಲಿಕ್ಕೆ ಬಿಡೆನು”, ಎಂದು ಹೇಳಿದ್ದರೂ, ನನ್ನ ಮನಸ್ಸಿನಲ್ಲಿ ಸಂಶಯವಿತ್ತು. ಆದರೆ ಇವತ್ತು ರಥವು ನಡೆಯದೆ ಇದ್ದದ್ದನ್ನು ನೋಡಿ, ಸ್ವಪ್ನವು ಸತ್ಯವೆಂದು ತಿಳಿದುಕೊಂಡೆನು. ಈ ಪ್ರಕಾರ ಕಾಳಮ್ಮನ ಆಜ್ಞೆ ಆಗಿರುವದರಿಂದ, ಆ ದೇವಿಯ ಆಜ್ಞೆಯನ್ನು ನಡಿಸುವದರಿಂದ ಏನೇನೊ ಭಯವಿಲ್ಲ. ಎರಡನೇ ಉಪಾಯವೇ ಇಲ್ಲ” ಅಂದನು. ಈ ವಚನವು ಎಲ್ಲರಿಗೂ ಮಾನ್ಯವಾಯಿತು. ಅನಂತರ ಸಿದ್ಧಾರೂಢರಿಗೆ ವಿವಿಧ ಭೂಷಣಗಳಿಂದ ಅಲಂಕರಿಸಿ, ರಥದ ಮೇಲೆ ಕೂಡ್ರಿಸಿದರೂ. ಆಗ ಎಲ್ಲರಿಗೂ ಆನಂದವಾಯಿತು. ಆ ಸತೇಜ ಸಿದ್ಧಮೂರ್ತಿಯು, ತಾರಾಂಗಣದ ಮಧ್ಯದಲ್ಲಿ ಚಂದ್ರನು ಶೋಭಿಸುವಂತೆ, ಅಥವಾ ಮೇಘಗಳ ನಡುವೆ ವಿದ್ಯುಲ್ಲತೆಯಂತೆ, ರಥದ ಮೇಲೆ ವಿರಾಜಿಸುತ್ತಿತ್ತು. ಸದ್ಗುರು ಮುಖದ ಮೇಲಿನ ಶಾಂತಿಯ ತೇಜವು ಭಕ್ತಮುಖ ಕಮಲಗಳಿಗೆ ಸೂರ್ಯಬಿಂಬದಂತೆ ಕಾಣಿಸುವಂಥಾದ್ದಾಯಿತು. ಆ ಸದ್ಗುರು ಮುಖವನ್ನು ನೋಡುತ್ತ ನೋಡುತ್ತ, ಸರ್ವಾಂತರದಲ್ಲಿ ಆನಂದ ಉಕ್ಕುತ್ತ ಬರಲಾರಂಬಿಸಿತು. ಆಗ ಸುವಾಸಿನಿ ಸ್ತ್ರೀಯರು ಬಂದು, ಮುಖದಿಂದ ಮಂಗಳಾರತಿಯನ್ನು ಸುಸ್ವರದಿಂದ ಹಾಡುತ್ತ ಪಂಚಾರತಿಯನ್ನು ಬೆಳಗುವಂಥವರಾದರು. ಎಲ್ಲರೂ ಜಯ ಜಯಕಾರದ ಗರ್ಜನೆ ಮಾಡುತ್ತಿರುವರು. ಈಗ ರಥಕ್ಕೆ ಹಸ್ತ ಸ್ಪರ್ಷಿಸಿದ ಮಾತ್ರದಿಂದ ರಥವು ಮುಂದೆ ನಡಿಯಲಾರಂಭಿಸಿತು. ನಿಂದಕರಲ್ಲರೂ ಈ ಚಮತ್ಕಾರವನ್ನು ನೋಡಿ ಭ್ರಮೆಗೊಂಡರು. ಎಲ್ಲರೊಳಗೂ ಆಶ್ಚರ್ಯ ಹಿಡಿಸಲಾರದಂತಾಯಿತು, ಯಾವ ಪ್ರಕಾರ ನದಿಗೆ ಮಹಾಪೂರ ಬಂದಿರುವಾಗ, ಗಿಡಗಳೂ ಕಲ್ಲುಗಳೂ ಎಲ್ಲಾ ಕೂಡಿ ಹರಿದು ಹೋಗುತ್ತವೆಯೋ ಅದೇ ಪ್ರಕಾರ ಇಲ್ಲಿ ಆನಂದದ ಪ್ರವಾಹ ಬಂದಿದ್ದು, ಎಲ್ಲ ಭಕ್ತರೂ ಅಭಕ್ತರೂ ಅದರೊಳಗೆ ಕೂಡಿ ಹೋಗವಂಥವರಾದರು. ರಥ ನಡೆಯುತ್ತಿರುವಾಗ, ಎಲ್ಲಾ ಜನರು ನಾಮ ಘೋಷವನ್ನು ಮಾಡುತ್ತಿದ್ದರು. ವಂದಕರೂ ನಿಂದಕರೂ, ಸಿದ್ದರ ಮುಖಾವಲೋಕನದಿಂದ ಸಮಾನವಾಗಿ ಆನಂದ ಪಡುವಂಥವರಾದರು. ಉತ್ಸವ ಸಮಾಪ್ತವಾಯಿತು. ಆಗ ಎಲ್ಲರೂ ಸದ್ಗುರುಗಳ ಸಮೀಪ ಬಂದು, ಅವರ ಚರಣಗಳಿಗೆ ನಮಸ್ಕರಿಸುತ್ತಿರುವ ಸಮಯದಲ್ಲಿ, ಅಪೂರ್ವ ಸಂದಣಿಯಾಯಿತು. ಆಮೇಲೆ ಸದ್ಗುರುರಾಯರು ಸಿದ್ಧಾಶ್ರಮಕ್ಕೆ ಹೋಗಿ,
ಯಥಾಪೂರ್ವ ಕಟ್ಟೆಯ ಮೇಲೆ ಕುಳಿತುಕೊಂಡು, ತನ್ನೊಳಗೆ - ''ಇದೆಲ್ಲಾ ಈಶ್ವರೀ ಮಾಯಾ ಇರುತ್ತದೆ. ಇದರೊಳಗೆ ನನ್ನ ದೇನೇನೂ ಇಲ್ಲ. ಈ ಜಾಗ್ರತ್ ಪ್ರಪಂಚವಾದರೂ ಸ್ವಪ್ನವತ ಇರುವುದು. ಇದರೊಳಗೆ ಸತ್ಯ ಏನೇನೂ ಇರುವದಿಲ್ಲ. ಎಲ್ಲವೂ ನಾನೇ ಆಗಿ, ನನ್ನೊಳಗೆ ನಾನೇ ಆಡುತ್ತಿರುವೆನು,'' ಎಂದು ಆಲೋಚಿಸುತ್ತಿದ್ದರು. ಇದೇ ಸಮಯದಲ್ಲಿ,
ಆ ಆರು ಮಂದಿ ಯವನರು ಬರುವುದನ್ನು ಸಿದ್ಧರು ಕಂಡು, -“ನೀವು ಈಗಲೇ ಬಂದಿರಿ, ಒಳ್ಳೇದಾಯಿತು. ನಿಮ್ಮ ಕೆಲಸ ಈಗಲೇ ತೀರಿಸಿಕೊಳ್ಳಿರಿ. ನೀವು ಆಗ ಚೆಲ್ಲಿ ಬಿಟ್ಟ ಕಲ್ಲು, ಅಲ್ಲಿ ಅದೇ. ಈಗ ನಿಮಗೆ ಏನೇನೂ ಭೀತಿ
ಇಲ್ಲ. ನಿಮ್ಮ ಮನೋರಥವನ್ನು ನಿರ್ಭಯ ಚಿತ್ತರಾಗಿ ಪೂರೈಸಿಕೊಳ್ಳಿರಿ, ಯವನರೇ,” ಅಂದರು. ಸಿದ್ಧರು ಹೀಗನ್ನುತ್ತಿರುವಾಗ, ಆ ಯವನರು ಸಿದ್ದರ ಸಮೀಪ ಬಂದು, ಅವರ ಚರಣಗಳಿಗೆ ನಮಸ್ಕರಿಸಿ - "ನಮ್ಮನ್ನು ಕ್ಷಮಿಸಿರಿ. ನಿಮ್ಮನ್ನು ಬಹಳ ಕಾಡಿದೆವು. ನಾವು ಮಹಾ ಪಾಪಿಷ್ಟರಿದ್ದೇವೆ. ನೀವು ಹುಚ್ಚನಂತೆ ನಮಗೆ ಕಾಣಿಸಿಕೊಂಡಿರಿ, ಎಂದು ನಿಮ್ಮನ್ನು ಬಹಳ ಹೊಡೆದೆವು. ನೀವು ನಿಜವಾಗಿ ಮಹಾತ್ಮರಿದ್ದೀರಿ ಎಂದು ನಮಗೆ ಈಗ ತಿಳಿಯಿತು. ನಮಗೀಗ ಯೋಗ್ಯ ಶಿಕ್ಷೆಯನ್ನು ನೀವು ಮಾಡತಕ್ಕದ್ದು. ನಮಗೆ ಯೋಗ್ಯವಾದ ದಂಡನೆ ಮಾಡದ ವಿನಹಾ, ನಾವು ಇಲ್ಲಿಂದ ಹೋಗಲಾರೆವು'', ಎಂದು ಹೇಳಿದ್ದನ್ನು ಕೇಳಿ, ಸಿದ್ದರು ಅವರನ್ನು ಕುರಿತು, -“ನೀವು ಈಗ ಸದ್ಗುಣಗಳನ್ನು ಕೈಕೊಂಡಿರಿ. ನಿಮಗೆ ಯಾವಾಗ ಸದ್ಗುಣಗಳು ಬಂದವೋ ಆಗಲೇ ನಮ್ಮ ಕಾರ್ಯವು ಮುಗಿಯಿತು. ನಿಮ್ಮ ಹೊಡೆತಗಳನ್ನು ಸಹಿಸಿದ್ದು ಸಫಲವಾಯಿತು. ಏನೂ ಚಿಂತೆ ಮಾಡಬೇಡಿರಿ. ಈಗ ನೀವು ಮನೆಗೆ ಹೋಗಿ, ನಿಮ್ಮ ಧರ್ಮವನ್ನು ಅನುಸರಿಸಿ ನಡೆಯಿರಿ. ಮದ್ಯಪಾನಾದಿ ವಿಷಯಗಳನ್ನು ತ್ಯಾಗ ಮಾಡಿರಿ, ಇದೆ ನಿಮಗೆ ಯೋಗ್ಯ ಶಿಕ್ಷೆಯಾಗಿರುತ್ತದೆ." ಎಂದು ಹೇಳಿದ್ದು ಕೇಳಿ, ಆ ಯವನರು ಸದ್ಗುರುಗಳ ಮುಂದೆ ಸಾಷ್ಟಾಂಗವನ್ನು ಹಾಕುತ್ತ, ಬಹು ಅನುತಾಪಯುಕ್ತರಾಗಿ, ಫಳಫಳನೆ ಅಳಲಾರಂಭಿಸಿ ಸಿದ್ಧರಿಗೆ- ''ಹೇ ದಯಾಳುವಾದ ಸಿದ್ದರಾಯನೇ, ದುಷ್ಟರಾದ ನಮ್ಮ ಮೇಲೆ ನೀನು, ದಯಾ ಮಾಡಿರುವಿ. ನಾವು ಪೂರ್ವ ಪುಣ್ಯದಿಂದ ನಿನ್ನ ಚರಣಗಳನ್ನು ಹೊಂದಿದೆವು, ಇಲ್ಲದಿದ್ದರೆ ವ್ಯರ್ಥವಾಗಿ ಹೋಗುತ್ತಿದ್ದೆವು. ಈಗ ನಮ್ಮನ್ನು ಕೃಪಾಹಸ್ತದಿಂದ ಉದ್ಧರಿಸತಕ್ಕದ್ದು. ನಮ್ಮ ದುಷ್ಟ ಸಂಗವನ್ನು ತಪ್ಪಿಸಿ, ನಮಗೆ ಸತ್ಸಂಗವನ್ನೇ ಕೊಡುವಂಥವನಾಗು,” ಎಂದು ಈ ಪ್ರಕಾರ ಪ್ರಾರ್ಥಿಸಿ, ತಮ್ಮ ಸ್ವಸ್ಥಾನಕ್ಕೆ ಹೋಗುವಂಥವರಾದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
2)Facebook shareಗಾಗಿ👉
3)WhatsApp shareಗಾಗಿ click ಮಾಡಿ📲☎️
«««««ಓಂ ನಮಃ ಶಿವಾಯ »»»»»»»
