ಭಾಗ್ಯವಂತಿ ಭಾಯಿ ಭಕ್ತಿಗೆ ಒಲಿದು ಸಿದ್ಧರು ಮದ್ರಾಸ್ ದಲ್ಲಿ ಪ್ರಕಟವಾಗಿ ಅವಳ ಮಗುವನ್ನು ಕಾಪಾಡಿದರು
🌱 ರೂಪಕೃಷ್ಣ ಭಾಗ್ಯವತಿಭಾಯಿ ಇವರ ಪುತ್ರನಿಗೆ ಗ್ರಂಥಿ ರೋಗವು ಆದ ಸಮಯದಲ್ಲಿ ಆ ಸ್ಥಾನಕ್ಕೆ ಸದ್ಗುರುನಾಥನು ಬಂದು ಹುಡುಗನಿಗೆ ಆರೋಗ್ಯವನ್ನುಂಟು ಮಾಡಿದ್ದ ಕಥೆ.
ರೂಪ ಕೃಷ್ಣನೆಂಬ ಚತುರನಾದ ಭಕ್ತನಿಗೆ ಶ್ರೀ ಸಿದ್ಧರ ಚರಣಗಳಲ್ಲಿ ಬಹು ಶ್ರದ್ಧೆ ಇರುವದು. ಆತನು ಮತ್ತು ಪತ್ನಿಯಾದ ಭಾಗ್ಯವತಿಬಾಯಿಯು ನಿತ್ಯದಲ್ಲಿಯೂ ಸದ್ಗುರುಗಳ ಸನ್ನಿಧಿಗೆ ಬಂದು ಸೇವಾ ಮಾಡುವರು. ಅವರ ಹೊಟ್ಟೆಯಲ್ಲಿ ಸಂತತಿ ಇಲ್ಲದ ಕಾರಣ ಭಾಗ್ಯವತಿಯೂ ಸದ್ಗುರುಗಳ ಚರಣವನ್ನು ಹಿಡಿದು, ಬಹು ದಿನ ಭಾವದಿಂದ ಸಂತಾನವನ್ನು ಬೇಡುವಂಥವಳಾದಳು - ''ಹೇ ಸದ್ಗುರುನಾಥಾ, ಪುತ್ರ ಮುಖವನ್ನು ನೋಡದೆ ಸಂಸಾರದಲ್ಲಿ ಸುಖವಿಲ್ಲವು" ಭಾಗ್ಯವತಿಯ ಈ ವಚನವನ್ನು ಕೇಳಿ ಸಿದ್ಧರು ನಗುತ್ತಾ ಅಂದದ್ದೇನೆಂದರೆ - ''ಸಂಸಾರವೇ ಸುಖವೆಂತ ತಿಳಿಯುವವರಿಗೆ ಧನಸುತ ದಾರಾದಿಗಳು ಸುಖಕರವು, ನಿಮಗೆ ಸಂತತಿಯ ಹೊರ್ತು ಬಾಕಿ ಎಲ್ಲ ವಿಷಯಗಳು ಸಮೃದ್ಧಿಯಾಗಿದ್ದರೂ, ಅದೊಂದಿಲ್ಲದೆ ದುಃಖ ಅನಿಸುತ್ತದೆ. ಪುತ್ರ ಸುಖವನ್ನು ಅನುಭವಿಸಿ ನೋಡಿದ ವಿನಹಾ ಅದು ಹ್ಯಾಗಿರುತ್ತದೆಂದು ಜನರಿಗೆ ತಿಳಿಯದು. ಈಗ ಪುತ್ರನ ಹೊರತು ಮತ್ಯಾವದೂ ನಿಮಗೆ ಸುಖ ಕಾಣಿಸುವುದಿಲ್ಲ. ಆದ್ದರಿಂದ ನಿಮಗೆ ಯಥೇಷ್ಟ ಸಂತತಿ ಕೊಡಬೇಕಾಗಿರುತ್ತದೆ. ಇಲ್ಲದಿದ್ದರೆ ಸಂತತಿ ವಾಸನೆಯ ಮೂಲಕ ನೀವು ಪುನಹಾ ಜನ್ಮಕ್ಕೆ ಬರಬೇಕಾಗುವದು. ಜಗದೀಶ್ವರನು ನಿಮಗೊಸ್ಕರ ಪುತ್ರಸಂತಾನ ಕೊಟ್ಟಿಲ್ಲ. ಆದರೆ ಈಶ್ವರನಿಗೂ ಈಶ್ವರನಾಗಿರುವಂಥಾ ಸದ್ಗುರುವು ನಿಮಗೆ ಸಂತತಿಯನ್ನು ಕೊಡುವನು. ಈಗ ನೀವು ನಿಮ್ಮ ಗೃಹಕ್ಕೆ ಹೋಗಿ, ಸುಖದಿಂದ ಸದ್ಗುರುವಿನ ಚಿಂತನ ಮಾಡಬೇಕು, ತತ್ಕಾಲವೇ ಆತನು ಸಂತುಷ್ಟನಾಗಿ ನಿಮ್ಮ ಮನೋರಥವನ್ನು ಸಫಲ ಮಾಡುವನು''. ಹೀಗೆಂದು ಸದ್ಗುರುಗಳು ಭಾಗ್ಯವತಿಬಾಯಿಯ ಕೈಯಲ್ಲಿ ಪ್ರಸಾದ ವಿಭೂತಿಯನ್ನು ಕೊಟ್ಟರು. ಭಾಗ್ಯವತಿಯು ಆ ವಿಭೂತಿಯನ್ನು ತೆಗೆದುಕೊಂಡು ತನ್ನ ಮನೆಗೆ ಹೋದಳು. ಸದ್ಗುರುಗಳ ವಚನವು ಸರ್ವದಾ ಸಫಲವಾಗುತ್ತದೆ. ಆದರೆ ಗುರು ಚರಣಗಳನ್ನು ಮುರಿಯಬಾರದು, ಎಂದು ಚರಣ ಚಿಂತನವನ್ನೇ ಹೇಳುವರು. ಯಾವ ಚಿಂತನವನ್ನು ಮುರಿಯುವುದರಿಂದ ಎಲ್ಲಾ ಪ್ರಕಾರದ ಹಾನಿಗಳು ಪ್ರಾಪ್ತವಾಗುವವೋ, ಅಂಥಾ ಆ ಸದ್ಗುರು ಚಿಂತನ ಮಾತ್ರದಿಂದ ಹೃದಯದಲ್ಲಿ ಸದೋದಿತ ಶಾಂತಿಯು ಲಭಿಸುವದು. ಸುಖದಿಂದ ಸಂಸಾರದಲ್ಲಿರುತ್ತಿರುವಾಗ್ಗೆ, ಸದ್ಗುರು ಚಿಂತನವು ನರರಿಗೆ ತಾರಿಸುವದು. ಆದ್ದರಿಂದ ವಿಷಯಗಳನ್ನು ಬೇಡುವವರಿಗೆ ನಾಮ ಸ್ಮರಣೆಯನ್ನು ಹೇಳುವರು. ಅವರು ವಿಷಯಚ್ಛೆಯನ್ನು ಮನಸ್ಸಿನಲ್ಲಿ ಹಿಡಿದು, ಅಹೋರಾತ್ರಿ ನಾಮಸ್ಮರಣೆಯಲ್ಲಿ ರತರಾಗಿರುವರು. ಇದರಿಂದ ದಿನೇ ದಿನೇ ಚಿತ್ತವು ಶುದ್ಧವಾಗುತ್ತಾ ವಿಷಯ ಕಾಮನೆಗಳನ್ನು ಮರೆಯುವರು. ಇದಿರಲಿ, ಭಾಗ್ಯವತಿಬಾಯಿಯು ಗರ್ಭವತಿಯಾಗಿ ಯೋಗ್ಯ ಕಾಲದಲ್ಲಿ ಪುತ್ರನನ್ನು ಪ್ರಸವಿಸಿದಳು. ಇದೇ ಪ್ರಕಾರ ಕಾಲಾಂತರದಲ್ಲಿ ಒಂಭತ್ತು ಮಕ್ಕಳನ್ನು ಹಡೆಯುವಂಥಳಾದಳು, ಮತ್ತು ಆ ನಿಮಿತ್ತವಾಗಿ ಬಹಳ ಕಷ್ಟಪಟ್ಟು. ಅನಂತರ ಸಿದ್ದರ ಕಡೆಗೆ ಹೋಗಿ “ಪ್ರಭೋ, ಸಂಸಾರದಲ್ಲಿ ನಾನು ಬಹಳ ದುಃಖಪಟ್ಟೆನು. ಈ ಮಕ್ಕಳ ಸಲುವಾಗಿ ಅನಿವಾರ್ಯ ತಾಪಗಳಾಗುತ್ತವೆ. ಇನ್ನು ಸಂತತಿ ಸಾಕು ಮಾಡು'', ಎಂದು ದೈನ್ಯಭಾವದಿಂದ ಮಾಡಿದ ಪ್ರಾರ್ಥನೆಯನ್ನು ಕೇಳಿ, -“ಗುರುಕೃಪೆಯಿಂದ ನಿನ್ನ ಇಚ್ಚೆಯಿದ್ದಂತೆ ಆಗಲಿ', ಎಂದು ಸದ್ಗುರುಗಳು ಅಂದರು. ಆಮೇಲೆ ಅವಳಿಗೆ ಮಕ್ಕಳಾಗಲಿಲ್ಲ.
ರೂಪಕೃಷ್ಣನಿಗೆ ಉದ್ಯೋಗ ನಿಮಿತ್ತ ಮದ್ರಾಸನಲ್ಲಿ ವಾಸಮಾಡುವ ಕಾರ್ಯ ಬಂದೊದಗಿತು. ಆಗ ಸದ್ಗುರುವಿನ ಆಜ್ಞೆ ಪಡೆದುಕೊಳ್ಳುವ ಉದ್ದೇಶದಿಂದ ಆ ದಂಪತಿಗಳು, ಅಶ್ರುಪೂರಿತ ನೇತ್ರಗಳಿಂದ ಸಿದ್ಧರ ಮುಂದೆ ನಿಂತು ವಿಜ್ಞಾಪಿಸುತ್ತಾರೆ - ''ಹೇ ಗುರುರಾಯನೇ, ಉದ್ಯೋಗ ನಿಮಿತ್ತ ನಾವು ಮದ್ರಾಸಕ್ಕೆ ಹೋಗಬೇಕಾಗಿದೆ. ಹ್ಯಾಗೆ ನಿನ್ನನ್ನು ಬಿಟ್ಟು ಹೋಗಲಿ'' ಎಂದು ಬಹಳ ತಳಮಳಿಸ ಹತ್ತಿದರು. ಆಗ ದಯಾಘನನಾದ ಸದ್ಗುರುವು ಅಂದದ್ದೇನೆಂದರೆ- “ನೀವು
ನಿತ್ಯದಲ್ಲಿಯೂ ಸದ್ಗುರು ಭಜನ ಮಾಡುತ್ತಿರಬೇಕು. ನಾಮಸ್ಮರಣೆಯನ್ನು ಎಂದು ಮರಿಯಬಾರದು. ಈ ಪ್ರಕಾರ ಇರುವದರಿಂದ ನಾನು ಅನುದಿನವೂ ನಿಮ್ಮ ಸಮೀಪವೇ ಇರುತ್ತೇನೆ.'' ಇಂಥಾ ಅಭಯವಚನವನ್ನು ಕೇಳಿ ಆ ದಂಪತಿಗಳು ಬಹಳ ಆನಂದವನ್ನು ಹೊಂದಿ, ಸದ್ಗುರು ಆಜ್ಞೆಯನ್ನು ಪಡೆದುಕೊಂಡು ತಮ್ಮ ಮಕ್ಕಳೊಡನೆ ಮದ್ರಾಸಕ್ಕೆ ಹೋಗವಂಥವರಾದರು, ಮದ್ರಾಸಿನಲ್ಲಿ ಮಕ್ಕಳನ್ನು ಕೂಡಿಕೊಂಡು ಕೆಲವು ಕಾಲ ಸ್ವಸ್ಥರಾಗಿರುತ್ತಿರುವಾಗ, ಆ ಊರೊಳಗೆ ಗ್ರಂಥಿರೋಗವು ಬಂದು ಬಹುಜನರು ಸಾಯಲಾರಂಭಿಸಿದರು. ಭಾಗ್ಯವತಿಬಾಯಿಯ ಐದು ವರ್ಷದ ಕೋಮಲವಾದ ಮಗುವಿಗೆ ಗ್ರಂಥಿರೋಗವು ಬಂದಿತು. ಆಗ್ಗೆ ರೂಪಕೃಷ್ಣನು ಗ್ರಾಮಾಂತರಕ್ಕೆ ಹೋಗಿದ್ದನು. ಮಗುವಿಗೆ ಜ್ವರವು ವಿಶೇಷ ಬರಲಾರಂಭಿಸಿ, ಎರಡು ಪ್ರಹರ ರಾತ್ರಿಹೊತ್ತಿಗೆ ಬಹಳ ಏರಿತು. ಭಾಗ್ಯವತಿಯು ಮಗನ ಹತ್ತಿರ ಕುಳಿತುಕೊಂಡು ನೋಡುವಾಗ ಆತನಿಗೆ ಪ್ರಾಣೋತ್ಕ್ರಮಣಕಾಲ ಬಂತೆಂದು ಆಕೆಗೆ ತಿಳಿಯಿತು. ಗೃಹದೊಳಗೆ ಹುಡುಗರ ವಿನಹಾ ಮತ್ಯಾರೂ ಪುರುಷರಿಲ್ಲದೆ ಭಾಗ್ಯವತಿಯೂ ಬಹಳ ಗಾಬರಿಯಾಗಿ, ಯಾರೂ ಸಹಾಯಕರನ್ನು ಕಾಣಲಿಲ್ಲ. ಮಗುವಿನ ಪ್ರಾಣಹೋಗುವಂತೆ ಕಾಣುತ್ತದೆ, ಎಂದು ಭಾಗ್ಯವತಿಯು ಸದ್ಗುರುವನ್ನು ಪ್ರಾರ್ಥಿಸುವಂಥವಳಾಗಿ ಅನ್ನುತ್ತಾಳೆ - “ಧಾವಿಸಿ ಬಾರಪ್ಪಾ, ಸದ್ಗುರುವೇ ಈ ಕ್ಷಣವೇ ಬಂದು, ನನ್ನ ಮಗುವನ್ನು ರಕ್ಷಿಸುವವನಾಗು. ನಿನ್ನ ನಾಮದ ಹೊರತು ನಾನು ಔಷಧೋಪಚಾರ ಬೇರೆ ಯಾವುದು ಮಾಡಲಿಲ್ಲ. ಆದ್ದರಿಂದ ನೋಡಪ್ಪ, ಈ ಕೂಸನ್ನು ರಕ್ಷಿಸುವ ಭಾರವೆಲ್ಲ ನಿನ್ನ ಮೇಲೆಯೇ ಇರುತ್ತದೆ. ಹುಡುಗನ ಪ್ರಾಣವು ಹೋಗಲಾರಂಭಿಸಿದೆ. ಈ ಕಾಲದಲ್ಲಿ ರಕ್ಷಿಸುವವರು ನಿನ್ನ ಹೊರತು ಮತ್ಯಾರನ್ನೂ ನಾನು ಕಾಣೆನು. ಆದ್ದರಿಂದ, ಹೇ ಸದ್ಗುರುನಾಥನೇ, ತೀವ್ರವಾಗಿ ಬಂದು ಈ ಬಾಲನ ಪ್ರಾಣವನ್ನು ಉಳಿಸು.” ಎಂದು ಕೂಸಿಗೆ ತನ್ನ ಅಂಕದಲ್ಲಿ ತೆಗೆದುಕೊಂಡು ಬಹು ದೀನಳಾಗಿ ಸದ್ಗುರುವಿಗೆ ಪ್ರಾರ್ಥಿಸುತ್ತಿರುವಾಗ, ದ್ವಾರದ ಮುಂದಿರುವ ಪರದೆಯನ್ನು ಸರಿಸಿ ಬರುತ್ತಿರುವಂಥಾ ಸಾಕ್ಷಾತ್ ಸದ್ಗುರುವಿನ ದಿವ್ಯರೂಪವನ್ನು ನೋಡುವಂಥವಳಾದಳು. ಸಿದ್ಧರು ಮಸ್ತಕಕ್ಕೆ ಕೆಂಪು ಪಾವಡವನ್ನು ಸುತ್ತಿ ಮೈಮೇಲೆ ಧೋತರ ಹೊತ್ತುಕೊಂಡು, ಮುಖವು ಅತ್ಯಂತ ತೇಜಯುಕ್ತವಾಗಿ ನೇತ್ರದಿಂದ ಕೃಪಾದೃಷ್ಟಿಯನ್ನು ಹಾಕುತ್ತಾ, ಬರೆಗಾಲಿನಿಂದ ಒಳಗೆ ಬರುವುದನ್ನು ಭಾಗ್ಯವತಿಯು ಕಂಡು, ಆಶ್ಚರ್ಯಚಕಿತಳಾದಳು. ಸಿದ್ಧರಾಯರು ಸಮೀಪ ಬಂದು, “ನನ್ನನ್ನು ಯಾಕೆ ಕರೆದಿ' ಎಂದು ಕೇಳಿದ್ದಕ್ಕೆ ಆಕೆಯು, ಏನೂ ಮಾತಾಡಲಾಗದೆ, ಆ ಮೃತಪ್ರಾಯನಾದ ಹುಡುಗನನ್ನು ತೋರಿಸಿ ಆತನನ್ನು ಎತ್ತಿದಳು. ಸದ್ಗುರುರಾಯರು ಆ ಮಗುವನ್ನು ಎತ್ತಿಕೊಂಡು, ಅದರ ಮೈಮೇಲೆ ತನ್ನ ಅಮೃತಹಸ್ತವನ್ನು ಆಡಿಸಿದರು. ಕೂಡಲೇ ಆ ಕೂಸು ಅಳಲಾರಂಭಿಸಿತು, ಮತ್ತು ಮಸ್ತಕವನ್ನೆತ್ತಿ ನೋಡಿತು. ಆಗ್ಗೆ ಭಾಗ್ಯವತಿಗೆ ಬಹಳ ಆನಂದವಾಯಿತು. ಅತ್ಯಂತ ಹರ್ಷಯುಕ್ತಳಾಗಿ ಆ ಮಗುವನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ತನ್ನ ಮಸ್ತಕವನ್ನು ಸದ್ಗುರು ಚರಣಗಳ ಮೇಲಿಟ್ಟು ಎದ್ದು ನೋಡುತ್ತಾಳೆ - ಸದ್ಗುರುಗಳು ಅದೃಶ್ಯರಾಗಿದ್ದರು. ಆಗ ಆಕೆಗೆ ಪ್ರೇಮದಿಂದ ಕಂಠವು ಗದ್ಗದಿತವಾಗಿ, ಅತ್ತಿತ್ತ ಎಷ್ಟು ನೋಡಿದರೂ ಆತನು ಕಾಣದಿರುವದರಿಂದ ಬಹು ತಳಮಳಪಟ್ಟು, ಅನ್ನುತ್ತಾಳೆ- “ಗುರುವಿಗೆ ಪೂಜಾದಿ ಉಪಚಾರ ಮಾಡಲಿಲ್ಲ. ಇಷ್ಟರೊಳಗ ಸದ್ಗುರುವು ಹೋದನಲ್ಲ. ನಾನು ಎಂಥ ದುರ್ದೈವಿಯು" ಭಾಗ್ಯವತಿಬಾಯಿಯು ಮನಸ್ಸಿನಲ್ಲಿ ಬಹಳ ಸಂಕೋಚಪಟ್ಟಳು. ಅದೇ ಸಮಯದಲ್ಲಿ ಆಕೆಯ ಪತಿಯಾದ ರೂಪಕ್ಕಷ್ಟನೂ ಮನೆಗೆ ಬಂದನು. ಕೂಡಲೇ ಭಾಗ್ಯವತಿಯು ನಡೆದ ವರ್ತಮಾನವೆಲ್ಲಾ ಆತನಿಗೆ ನಿವೇದಿಸಿದಳು. ಇಬ್ಬರಿಗೂ ಪ್ರೇಮ ಉಕ್ಕಿಬಂತು, ಮತ್ತು ಮಗನು ಬದುಕಿದ್ದು ನೋಡಿ ಬಹಳ ಆನಂದಪಟ್ಟರು. ಆಗ ರೂಪಕೃಷ್ಣನು, ಬೇಗನೇ ಗುರುದರ್ಶನವನ್ನು ಪಡೆಯಬೇಕೆಂದು ಹೇಳಿದನು. ಮರುದಿನವೇ ಎಲ್ಲರನ್ನೂ ಕರೆದುಕೊಂಡು ರೂಪಕೃಷ್ಣನು ಹುಬ್ಬಳ್ಳಿ ಕಡೆಗೆ ಹೊರಟು, ಸಿದ್ದಾಶ್ರಮಕ್ಕೆ ಬಂದು ಸಿದ್ಧಗುರುಗಳಿಗೆ ಭೆಟ್ಟಿಯಾದನು. ರೂಪಕೃಷ್ಣ ಮತ್ತು ಭಾಗ್ಯವತಿ ಅತಿ ಪ್ರೇಮದಿಂದ ಸದ್ಗುರು ಚರಣಗಳಿಗೆ ಬಿದ್ದು, ಮದ್ರಾಸಿನಲ್ಲಿ ನಡೆದ ವೃತ್ತಾಂತವನ್ನೆಲ್ಲಾ ನಿರೂಪಿಸಿ, ಅನ್ನುತ್ತಾರೆ- “ಹೆ ಸಿದ್ದಾರೂಢ ಸದ್ಗುರುರಾಯನೇ, ನಿನ್ನ ಕೀರ್ತಿಯನ್ನು ಎಷ್ಟಂತ ವರ್ಣಿಸಲಿ! ಸರ್ವಸ್ವವನ್ನು ನಿನಗೆ ಅರ್ಪಿಸಿದರೂ, ನಿನ್ನ ಉಪಕಾರದಿಂದ ನಾವು ಮುಕ್ತರಾಗಲಾರೆವು." ಅದಕ್ಕೆ ಸದ್ಗುರುಗಳಂದರು - “ ಭಗವಂತನು ಗೀತೆಯಲ್ಲಿ ಹೇಳಿರುತ್ತಾನಲ್ಲ, ಯಾವಾತನು ಸದ್ಗುರುವಿನ ಮೇಲೆ ಪೂರ್ಣಭಾರವನ್ನಿಡುವನೋ ಆತನಿಗೆ ಆ ಸದ್ಗುರುವು ರಕ್ಷಿಸುವನು', ಸದ್ಗುರು ಸಿದ್ಧಾರೂಢರ ಈ ವಚನವನ್ನು ಕೇಳಿದ ಎಲ್ಲಾ ಭಕ್ತಜನರು ಬಹಳ ಆನಂದಪಟ್ಟು, ಅನ್ನುತ್ತಾರೆ - ''ಈ ಸಿದ್ದರೆಂಬ ಚಿಂತಾಮಣಿಯು ನಮಗೋಸ್ಕರವಾಗಿ ಇಲ್ಲಿರುವಂಥಾದ್ದಾಗಿರುತ್ತದೆ' ಎಂದು ಜಯಜಯಕಾರ ಮಾಡಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಹುಡುಗನ ಕಾಲಿಗೆ ಸರ್ಪ ಸುತ್ತಿ, ಕಚ್ಚುವಾಗ ಅವನನ್ನು ಸದ್ಗುರುವು ಸರ್ಪದಿಂದ ಬಿಡಿಸಿ, ಅವನ ಗಾಯಗಳನ್ನು ವಾಸಿ ಮಾಡಿದ ಕಥೆ.
ಎಲ್ಲಾ ಕಥೆಗಳ ಲಿಂಕಗಳು
👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
