ಬಸವಣ್ಣನಿಗೆ ಗರ್ವ ಬಂದಿರುವಾಗ, ಆತನ ಶ್ರೀಮಂತಿಕೆ ಹರಣವಾಯಿತು. ಭಕ್ತಿ ಹುಟ್ಟಿದ ತರುವಾಯ ಸಿದ್ದಾರೂಢರು ಬಂದೀಖಾನೆಯೊಳಗಿಂದ ಬಿಡಿಸಿದರು.
🌹ಬಸವಣ್ಣನಿಗೆ ಗರ್ವ ಬಂದಿರುವಾಗ, ಆತನ ಶ್ರೀಮಂತಿಕೆ ಹರಣವಾಯಿತು. ಭಕ್ತಿ ಹುಟ್ಟಿದ ತರುವಾಯ ಬಂದೀಖಾನೆಯೊಳಗಿಂದ ಸದ್ಗುರುವು ಬಿಡಿಸಿದನು.
ಬಸವಣ್ಣ ಭಕ್ತನು ಸದ್ಗುರು ಕೃಪೆಯಿಂದ ಶ್ರೀಮಂತನಾದನು. ಆದರೂ ನಿತ್ಯದಲ್ಲಿಯೂ ಸದ್ಗುರುಗಳನ್ನು ಭಜಿಸುತ್ತಿದ್ದರು. ಮುಂದೆ ಆತನ ವ್ಯವಹಾರವು ಬಹಳವಾಗಿ ಬೆಳದು, ಆತನಿಗೆ ಗುರು ದರ್ಶನಕ್ಕೆ ಹೋಗಲಿಕ್ಕೆ ಸಹಾ ವೇಳೆ ಸಿಗದೆ ಹೋಯಿತು. ವ್ಯವಹಾರದಲ್ಲಿ ತೊಡಕಿ ಬಿದ್ದು, ಮೆಲ್ಲಮೆಲ್ಲಗೆ ಗುರುಚಿಂತನೆಯನ್ನು ಸಹಾ ಆತನು ಮರೆಯುವಂಥವನಾದನು. ಜನರು ಆತನ ಆಶ್ರಯ ಪ್ರಾರ್ಥಿಸುವರು. ಪೂರ್ವದಲ್ಲಿ ದುಃಖ ಭೋಗಿಸಿದ್ದೆಲ್ಲಾ ಮರೆತು ಹೋಯಿತು. ಭೂ, ಕನಕಾದಿ ಧನ ಬಹಳವಾಗಿ ಸಂಗ್ರಹವಾಯಿತು. ಆ ಸಮಯದಲ್ಲಿ ಏನಾಯಿತೆಂಬುದನ್ನು ಕೇಳುವಂಥವರಾಗಿರಿ. ಒಂದು ದಿವಸ ಬಸವಣ್ಣನು ಕುದುರೆ ರಥದ ಮೇಲೆ ಕುಳಿತುಕೊಂಡು, ತಾನೇ ಹೊಡಿಯುತ್ತಿರುವಾಗ ಒಂದು ಮುದುಕಿ ದಾರಿಯಲ್ಲಿ ನಿಂತಿತ್ತು. ಬಸವಣ್ಣನ ಚಿತ್ತವು ವ್ಯವಹಾರದಲ್ಲಿ ಮುಳುಗಿದ್ದು, ವಿಸ್ಕೃತಿ ಮೂಲಕ ಮುಂದೆ ನೋಡದೆ, ಆ ಮುದುಕಿ ಮೇಲಿಂದ ರಥವನ್ನು ಹಾರಿಸಿಕೊಂಡು ಹೋಗಲು, ಮುದುಕಿಯು ಚಕ್ರಗಳ ಬುಡಕ್ಕೆ ಬಿದ್ದಳು. ಆಗ ಸುತ್ತಲಿನ ಜನರ ಓಡಿಬಂದು ಗಾಡಿಯನ್ನು ಹಿಡಿದು ನಿಂದಿರಿಸಿದರು. ಮುದುಕಿಯಾದರೂ, ಮೈಯೆಲ್ಲ ಪುಡಿಯಾಗಿ, ಗತಪ್ರಾಣಳಾಗಿ ಹೋದಳು. ಆಗ ಸರ್ಕಾರಿ ಶಿಪಾಯರು ಬಂದು, ಬಸವಣ್ಣನನ್ನು ಹಿಡಿದುಕೊಂಡು ಚೌಕಿಕಡೆಗೆ ಹೋದರು. ಆತನು ಬಹಳವಾಗಿ ಗಾಬರಿಯಾದನು. ಆತನ ಮೇಲೆ ಖಟ್ಲೆಯಾಗಿ ಅವನಿಗೆ ಒಂದು ವರ್ಷದ ಕಾರಾಗೃಹವಾಸ ನೇಮಿಸಿದರು. ಮನೆಯಲ್ಲಿದ್ದ ಸ್ತ್ರೀ ಮತ್ತು ಮಕ್ಕಳು, ಈ ವರ್ತಮಾನ ಕೇಳಿ, ಬಹಳ ದುಃಖಿತರಾದರು. ಆದರೂ ಅವರ ಚಿತ್ತವು ಧನದಲ್ಲಿ ತೊಡಗಿದ್ದು, ಅವರಿಗೆ ಸದ್ಗುರುವಿನ ಸ್ಮರಣೆ ಆಗದೇ ಹೋಯಿತು. ಕೆಲವು ದಿವಸಗಳಾದ ತರುವಾಯ ಬಸವಣ್ಣನ ಮನೆಯಲ್ಲಿ ಎಲ್ಲರೂ ಮಲಗಿಕೊಂಡಿರುವಾಗ, ಕಳ್ಳರು ಮನೆಯ ಗೋಡೆಗೆ ಕನ್ನಾ ಕೊರೆದು, ಒಳಗೆ ಬಂದು ಎಲ್ಲಾ ದ್ರವ್ಯವನ್ನು ಹರಣ ಮಾಡಿದರು. ವಸ್ತ್ರಾಭರಣಗಳನ್ನು ಕದ್ದುಕೊಂಡು, ಮನೆಗೆ ಬೆಂಕಿ ಹಚ್ಚಿ, ಕಳ್ಳರು ಓಡಿ ಹೋದರು. ಆಗ್ಗೆ ಗುರವ್ವಾ ಮತ್ತು ಮಕ್ಕಳು ಎದ್ದು ಬೆಂಕಿ ನೋಡಿ ಗಾಬರಿಯಾಗಿ, ಬಹಳ ಆಕ್ರಾಂತ ಮಾಡುವಂಥವರಾದರು. ಮನೆ ಬಿಟ್ಟು ಓಡಿ ಹೊರಗೆ ಬಂದರು. ನೆರೆಮನೆಯವರು, ಬೇರೆ ಬಹು ಜನರೂ ಓಡಿ ಬಂದು, ಅಗ್ನಿ ಶಾಂತಪಡಿಸಲಿಕ್ಕೆ ಎಷ್ಟು ಪ್ರಯತ್ನ ಮಾಡಿದರು ಸಾಧ್ಯವಾಗಲಿಲ್ಲ. ಗುರವ್ವಾ ಮಕ್ಕಳು ಸಹಿತ ಅಳುತ್ತಾ ನೆರೆಯವರ ಮನೆಗೆ ಹೋಗುವಂಥವಳಾದಳು. ಖಾತೆ ಪುಸ್ತಕಗಳು ಎಲ್ಲಾ ಸುಟ್ಟು ಹೋದವು. ಮನೆಯೊಳಗಿನ ಯಾವದೊಂದು ಸಾಮಾನು ಉಳಿಯಲಿಲ್ಲ. ಗುರವ್ವಗೆ ಈ ಸಮಯದಲ್ಲಿ ಎತ್ತ ನೋಡಿದರೂ ದುಃಖಮಯವಾಗಿ, ಮನಸ್ಸಿಗೆ ಸಮಾಧಾನ ಮಾಡಲಿಕ್ಕೆ ಏನೊಂದು ಉಳಿಯದೆ ಹೋಯಿತು. ಈಗ ಆಕೆ ಪೂರ್ವಸ್ಥಿತಿಯ ನೆನಪು ಬಂತು. ಯಾವ ಸಮಯದಲ್ಲಿ ತಾನು ದುಃಖಾತಿಶಯದಿಂದ ಭ್ರಮಿಷ್ಟಳಾಗಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರವೃತ್ತಿಸಿರುವಾಗ, ಸಿದ್ಧಾರೂಢರು ಬಂದು ರಕ್ಷಿಸಿದರು. ಆಗಿನ ಸ್ಮೃತಿಯಾಗಿ ಪ್ರಲಾಪಿಸುವಂಥವಳಾದಳು. ಆಗ ಸದ್ಗುರುಗಳು ದಾರಿದ್ರ್ಯಾದೊಳಗಿಂದ ಸಹಾ ರಕ್ಷಿಸಿದರು. ಮತ್ತು ಎಲ್ಲಾ ಸಂಪತ್ತು ಅವರ ಕೃಪೆಯಿಂದಲೇ ಪ್ರಾಪ್ತಿಯಾಯಿತು. ಹೀಗೆ ಚಿಂತಿಸಿ, ಗುರವ್ವಾ ತನ್ನೊಳಗೆ ಅನ್ನುತ್ತಾಳೆ- ''ಹೇ ಸದ್ದುರುನಾಥನೇ, ನಾವು ಈಗ ಧನಮದದಿಂದ ನಿಮ್ಮ ಮಹದುಪಕಾರಗಳನ್ನು ಮರೆತು ಬಿಟ್ಟೆವು. ಎಂಬುದರಿಂದಲೇ ಈ ವಿಪತ್ತು ನಾವು ಭೋಗಿಸಬೇಕಾಯಿತು. ಧನವು ನಮಗೆ ನಿಮ್ಮನ್ನು ಮರೆಸುವಂಥದ್ದಾಯಿತು; ಇದರಿಂದ ಅಂತರ್ಯಾಮಿಯಾದ ಸದ್ಗುರುವು ಕ್ಷೋಭೆಗೊಂಡು, ನಮಗೆ ಇಂಥಾ ಅವದಶೆಯನ್ನು ಪ್ರಾಪ್ತಿ ಮಾಡಿಸಿದನು. ಇದಕ್ಕೀಗ ಏನು ಮಾಡಲಿ, ಹಿಂದೆ ಸಂಕಟ ಬಂದಾಗ, ಯಾವತನು ಬಂದು ರಕ್ಷಿಸಿದ್ದನೋ, ಆತನನ್ನೇ ಕುರಿತು, ಈಗ ಶರಣು ಹೋಗತಕ್ಕದ್ದಾಗಿರುತ್ತದೆ. ಆತನ ಹೊರತು ಅನ್ಯ ರಕ್ಷಣಕರ್ತಾ ಯಾರ್ಯಾರು ಇಲ್ಲವು. ಆದ್ದರಿಂದ ಅಂಥಾ ಸದ್ಗುರುವಿನ ಚರಣಗಳಿಗೆ ಧಾವಿಸಬೇಕು.ಆದರೆ ಜನರೆಲ್ಲಾ ನಮಗೆ ಹೀಗಂದು ನಗುವರು - “ದ್ರವ್ಯ ನಾಶವಾದ ಕೂಡಲೆ ಪುನಃ ಸದ್ಗುರು ಕೃಪೆಯಿಂದ ದ್ರವ್ಯ ಈ ಪ್ರಾಪ್ತಿ ಮಾಡಿಕೊಳ್ಳುವ ಉದ್ದೇಶದಿಂದ ನಾಚಿಕೆ ಬಿಟ್ಟು ತಿರುಗಿ ಬಂದರು'' ಎಂದು ಅನ್ನುವರು. ಯಾವ ಸಂಪತ್ತಿನ ಮೂಲಕ ಸದ್ಗುರು ಮೂರ್ತಿಯ ವಿಸ್ಕೃತಿ ಆಗಿ, ಇಂಥಾ ವಿಪತ್ತು ಅನುಭವಿಸಬೇಕಾಯಿತೋ ಅಂಥಾ ಸಂಪತ್ತನ್ನು ಈಗ ನಾನು ಎಂದಿಗೂ ಬೇಡಲಿಕ್ಕಿಲ್ಲ. ಸಂಪತ್ತಿನ ಸುಖವೆಲ್ಲಾ ನಾವು ಕಂಡೆವು, ಸದ್ಗುರು ಚರಣಗಳನ್ನು ಮರೆತು ದುಃಖಪಟ್ಟೆವು. ಇತ್ತ ಪವಿತ್ರವಾದ ಆ ಚರಣಲಾಭವೂ ತಪ್ಪಿತು. ಈ ಪ್ರಕಾರ ಎರಡೂ ಕಡೆಯಿಂದ ಹಾನಿಯಾಯಿತು. ಹಾಗಾದರೆ, ಈ ಎಲ್ಲಾ ಅಭಿಮಾನವನ್ನು ಬಿಟ್ಟು ಸದ್ದುರುವಿಗೆ ಶರಣು ಹೋಗಿ ಆತನ ಅನನ್ಯ ಭಕ್ತಿಯನ್ನು ಸಾಧಿಸಿ, ಜನ್ಮ ಸಾರ್ಥಕ ಮಾಡಿಕೊಳ್ಳತಕ್ಕದ್ದು'', ಈ ಪ್ರಕಾರ ಚಿಂತಿಸಿಕೊಂಡು ಗುರವ್ವನು ಮಕ್ಕಳ ಸಹಿತವಾಗಿ ಹೊರಟು ಸಿದ್ದ ಸದ್ಗುರುಗಳ ಚರಣಕ್ಕೆ ಬಂದು, ಸಾಷ್ಟಾಂಗ ನಮಸ್ಕಾರ ಮಾಡುವಂಥವಳಾದಳು. ಹಸ್ತಗಳನ್ನು ಜೋಡಿಸಿ ಸದ್ಗುರು ಸಮ್ಮುಖದಲ್ಲಿ ನಿಂತು ಅನ್ನುತ್ತಾಳೆ- ''ಹೇ ದೀನನಾಥರೆ, ನಮ್ಮ ಮೇಲೆ ನೀವು ಬಹಳ ಕೃಪಾ ಮಾಡಿದಿರಿ, ನಮ್ಮ ಅಭಿಮಾನದ ಬೀಜವನ್ನೇ ನಾಶಪಡಿಸಿದಿರಿ. ಆದ್ದರಿಂದಲೇ ನಾವು ನಿಮಗೀಗ ಶರಣು ಬಂದಿರುತ್ತೇವೆ. ನಮ್ಮನ್ನು ಯಥಾಸ್ಥಿತಿ ಇಟ್ಟು ಬಿಡಿರಿ. ಧನವು ನಮ್ಮನ್ನು ಉನ್ಮತ್ತರನ್ನಾಗಿ ಮಾಡಿ, ನಮ್ಮ ನಿಜಧನವನ್ನು ಹರಣ ಮಾಡುತ್ತದೆ. ಪೂರ್ವದಲ್ಲಿ ನಮ್ಮ ವಿಪತ್ತನ್ನು ನೋಡಿ, ನೀವು ಪ್ರಾಪ್ತರಾಗಿ ನಮ್ಮನ್ನು ರಕ್ಷಿಸಿದಿರಿ. ಈಗ ಸಂಪತ್ತಿನೊಳಗೆ ತೊಡಕು ಬಿದ್ದು, ನಿಮ್ಮನ್ನು ಮರೆತುಬಿಟ್ಟೆವು. ಆದ್ದರಿಂದ ನಮಗೆ ಸಂಪತ್ತು ಕೊಡಬೇಡಿರಿ. ನಿಮ್ಮ ಚರಣಗಳಲ್ಲಿ ಅನನ್ಯ ಭಕ್ತಿಯನ್ನು ಕೊಟ್ಟು, ನಮಗೆ ನಮ್ಮ ಪೂರ್ವ ಸ್ಥಿತಿಯನ್ನೇ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. ಇದಕ್ಕೂ ಹೆಚ್ಚಿನ ಸುಖವಿಲ್ಲ, ಇತರವೆಲ್ಲಾ ದುಃಖಕರವೆಂದು ನಿಶ್ಚಯಿಸಿರುತ್ತೇನೆ. ಇಷ್ಟು ಪೂರ್ವದಲ್ಲಿಯೇ ತಿಳಿಯಲಾರದೆ, ದುಃಖ ಹೊಂದಿದೆವು. ನೀವೇ ನಮ್ಮ ರಕ್ಷಕರಿರುತ್ತೀರಿ. ಹೇ ದಯಾಳುವಾದ ಸದ್ಗುರುಗಳೇ ನಮ್ಮ ಅಪರಾಧಗಳನ್ನು ಕ್ಷಮಿಸಿರಿ. ನಮಗೆ ಸರ್ವದಾ ನಿಮ್ಮ ಚಿಂತನ, ಮತ್ತು ಆಪತ್ತನ್ನು ಕೊಡುವಂಥವರಾಗಿರಿ.” ಈ ಪ್ರಕಾರ ಪ್ರಾರ್ಥಿಸಿ, ಗುರವ್ವಾ ಕಣ್ಣೀರು ಸುರಿಸುತ್ತ ಸಿದ್ಧ ಚರಣಗಳಲ್ಲಿ ಮಸ್ತಕವನ್ನಿಟ್ಟಳು. ಸದ್ಗುರುಗಳು ಆಕೆಯ
ಅನುತಾಪವನ್ನು ನೋಡಿ, ಅಂತಃಕರಣ ಕರಗಿದಂಥವರಾಗಿ, ಆಕೆಯನ್ನು ಕುರಿತು - “ನೀನು ಸದ್ಗುರು ಚಿಂತನವನ್ನು ಮಾಡುತ್ತ ಇರು. ನಿನ್ನ ಪತಿಯು ಶೀಘ್ರದಲ್ಲಿ ಕಾರಾಗೃಹದೊಳಗಿಂದ ಬಿಡುಗಡೆ ಹೊಂದಿ ಬರುವನು”, ಅಂದರು. ಅಮೃತ ಸಮಾನವಾದ ಈ ಸದ್ಗುರು ವಚನವನ್ನು ಗುರುವ್ವಾ ಕೇಳಿ, ತಾನು ಕೃತಕೃತ್ಯಳಾದೆನೆಂದು ತಿಳಿದು, ಬಹು ಪ್ರೇಮದಿಂದ ಗುರುಗಳ ಪಾದದ ಮೇಲೆ ಶಿರವನ್ನಿಟ್ಟು ಅನ್ನುತ್ತಾಳೆ- “ದಯಾಳುವಾದ ಸದ್ಗುರು ಮಾತೆಯೇ, ನಮ್ಮ ಮೇಲೆ ಕೃಪಾ ಮಾಡಿದಿ.” ಹೀಗಂದು ಆಕೆಯು ತನ್ನ ಸ್ಥಾನಕ್ಕೆ ಹೋಗುವಂಥವಳಾದಳು. ಇತ್ತ ಕಾರಾಗೃಹದಲ್ಲಿರುವ ಬಸವಣ್ಣನು, ಹೃದಯದಲ್ಲಿ ಅನುತಾಪ ಹೂಂದಿ, ಬಹು ತಳಮಳಿಸುತ್ತ - 'ಹೇ ಸದ್ಗುರುವೇ, ಈ ಸಮಯದಲ್ಲಿ ನೀನು ಪ್ರಾಪ್ತನಾಗಿ, ನನ್ನ ಸರ್ವ ಆಪರಾಧಗಳನ್ನು ಕ್ಷಮಿಸುವಂಥವನಾಗು. ನಾನು ಧನಮದದಿಂದ ಉನ್ಮತ್ತನಾಗಿದ್ದೆನು. ಈಗ ಅನುತಾಪ ಉಂಟಾಗುತ್ತದೆ. ಇನ್ನು ಮುಂದೆ ಪ್ರಾಣ ಹೋಗುವತನಕ ನಿನ್ನನ್ನು ಮರೆಯಲಿಕ್ಕಿಲ್ಲ. ಇದಕ್ಕಾಗಿ ನನ್ನನ್ನು ಯಾವಾಗಲೂ ದುಃಖದಲ್ಲಿಯೇ ಇಡು, ಅಂದರೆ ನಿನ್ನ ಚರಣಗಳ ವಿಸ್ಕೃತಿ ಎಂದೂ ಆಗಲಾರದು. ನಿನ್ನ ಪಾದದಲ್ಲೇ ಭಕ್ತಿಯನ್ನು ಕೊಡುವಂಥವನಾಗು” ಎಂದು ಪ್ರಾರ್ಥಿಸುವಂಥವನಾದನು. ಆ ಕೂಡಲೇ ಕಾರಾಗೃಹದ ದ್ವಾರ ತೆರೆದು, ಒಬ್ಬ ಅಧಿಕಾರಿಯು ಒಳಗೆ ಬಂದು -“ವರಿಷ್ಠಾಧಿಕಾರಿಯು ನಿನ್ನನ್ನು ಬಿಟ್ಟು ಬಿಟ್ಟಿರುತ್ತಾರೆ. ನೀನು ಮನೆಗೆ ಹೋಗು'' ಎಂದು ಬಸವಣ್ಣನನ್ನು ಹೊರಗೆ ಕಳುಹಿಸಿದನು. ಆತನು ಮನೆಗೆ ಬಂದು ನೋಡುವಾಗ್ಗೆ ಅಲ್ಲಲ್ಲಿ ಇನ್ನೂ ಅಗ್ನಿ ಜ್ವಾಲೆಗಳು ಕಾಣಿಸುತ್ತಿದ್ದವು. ಮನೆಯಲ್ಲಾ ಸುಟ್ಟು ಬೂದಿಯಾಗಿ ಹೋಗಿತ್ತು. ತನ್ನ ಸಂಪತ್ತೆಲ್ಲಾ ಅಗ್ನಿಗೆ ಅರ್ಪಣವಾದದ್ದನ್ನು ನೋಡಿ - 'ಹೇ ಸದ್ಗುರುವೇ, ನೀನು ಕೃಪೆ ಮಾಡಿದಿ. ನನ್ನ ಕರುಣಾವಚನವನ್ನು ಕೇಳಿದಿ, ಇವುಗಳ ಸಂಗತಿಯಲ್ಲಿ ವಿಷಯ ಮೋಹವು ಸುಟ್ಟ, ನಮಗೆ ಪೂರ್ವ ಸ್ಥಿತಿಯನ್ನೇ ಪ್ರಾಪ್ತ ಮಾಡಿಸಿಕೊಟ್ಟೆ. ಆದರೆ ನಿನ್ನ ಚರಣಗಳಲ್ಲಿ ಭಾವ ಒಂದು ಉಳಿದದ್ದು, ಇದೇ ದೊಡ್ಡ ಲಾಭವಾಗಿರುತ್ತದೆ. ಈಗಲಾದರೂ, ಹೇ ಶ್ರೀ ಗುರುದೇವನೇ, ನಮ್ಮನ್ನು ಮೋಹದೊಳಗೆ ಹಾಕಬಾರದು. ನಮ್ಮಿಂದ ಅದನ್ನು ಆವರಿಸಿಕೊಳ್ಳೋಣಾಗುವದಿಲ್ಲ. ನಿನ್ನ ಚರಣಗಳಲ್ಲೇ ನಮ್ಮ ಭಾವವನ್ನು ಕಾದಿಡಬೇಕಾಗಿರುತ್ತದೆ." ಎಂದು ತನ್ನೊಳಗೆ ಅನ್ನುತ್ತಿರುವಾಗ ತನ್ನ ಪತ್ನಿಯು ಅಲ್ಲಿಗೆ ಬರುವುದನ್ನು ಕಂಡಳು. ಗುರವ್ವಾ ಪತಿಯನ್ನು ನೋಡಿದ ಕೂಡಲೇ ಅತ್ಯಾನಂದಭರಿತಳಾಗಿ, ಆಕೆಗೆ ಪ್ರೇಮ ತಡೆಯಲಾಗದೆ, ಓಡಿ ಬಂದು ಪತಿ ಪಾದಕ್ಕೆ ಎರಗಿದಳು. ಎದ್ದು, ಪತಿಯನ್ನು ಕುರಿತು ''ಸದ್ಗುರುಗಳು ನನ್ನ ಮೇಲೆ ಕೃಪಾ ಮಾಡಿ, ನಿಮ್ಮನ್ನು ಕಾರಾಗೃಹದೊಳಗಿಂದ ಬಿಡಿಸಿದರು'' ಅಂದಳು. ಆಗ ಬಸವಣ್ಣನು ಸದ್ಗುರುಗಳ ಕಡೆಗೆ ಹೋಗಿ, ಪಾದಕ್ಕೆ ಬಿದ್ದು, ನಡೆದ ವರ್ತಮಾನವೆಲ್ಲಾ ನಿವೇದಿಸಿದನು. ಅದನ್ನು ಕೇಳಿ ಈ ಸಿದ್ಧಾರೂಢರು - ''ನಿಮ್ಮ ಹತ್ರ ಎಷ್ಟು ದ್ರವ್ಯ ಉಳಿದಿರುವದೋ ಅದನ್ನು ತೆಗೆದುಕೊಂಡು ಸುಖದಿಂದಿರ್ರಿ” ಅಂದರು. ಮಂದಿ ಕಡೆಯಿಂದ ಬರತಕ್ಕಂಥಾ ಸ್ವಲ್ಪ ದ್ರವ್ಯವನ್ನು ಕೂಡಿಸಿಕೊಂಡು, ಬಸವಣ್ಣನು ಸದ್ಗುರು ಪಾದದಲ್ಲಿ ಇಟ್ಟನು. ಶ್ರೀ ಸಿದ್ಧರು ಅದನ್ನು ಅವನಿಗೆ ತಿರುಗಿ ಕೊಟ್ಟು - ''ಇದನ್ನು ನನ್ನ ಕೈಯಿಂದ ಆಶೀರ್ವಾದವೆಂದು ತಿಳಿದುಕೊ. ಇನ್ನು ಮುಂದೆ ನಿಮಗೆ ಮೋಹವು ಸರ್ವಥಾ ಬಂಧಿಸಲಿಕ್ಕಿಲ್ಲ' ಅಂದರು. ಬಸವಣ್ಣನು ಆ ದ್ರವ್ಯವನ್ನು ತೆಗೆದುಕೊಂಡು ದರಿದ್ರಾವಸ್ಥೆಯಲ್ಲಿ ಕಾಲಕ್ಷೇಪ ಮಾಡುತ್ತಿದ್ದು, ಸದ್ಗುರುಗಳನ್ನು ಎಂದೂ ಮರೆಯದೆ, ಅವರ ಅಖಂಡ ನಾಮಸ್ಮರಣೆಯೊಳಗೆ ತತ್ಪರನಾಗಿದ್ದನು. ಆ ದಂಪತಿಗಳಿಗೆ ದೃಢವೈರಾಗ್ಯ ಪ್ರಾಪ್ತವಾಗಿ, ಸಂಸಾರಕ್ಕೆ ಉದಾಸೀನರಾದರು. ಅನಂತರ ಅವರಿಗೆ ಸದ್ಗುರುಗಳು, ಕೃಪೆಯಿಂದ ಜ್ಞಾನವನ್ನು ಬೋಧಿಸಿ, ಭವಭಯವನ್ನು ನಾಶ ಮಾಡಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
