ನಿರುಪಾದನನ್ನು ಕೋಣೆಯಲ್ಲಿ ಬಂಧಿಸಿ ಇಟ್ಟಾಗ ಆತನು ಸದ್ಗುರುಗಳನ್ನು ಪ್ರಾರ್ಥಿಸಿ ಸಾಯಲು ನಿಂತಾಗ ಆಕ್ಷಣವೇ ಸದ್ಗುರುಗಳು ಬಂದು ಆತನ ನೈವೇದ್ಯವನ್ನು ಸೇವಿಸಿದರು.
🌹ನಿರುಪಾದನಿಗೆ ಕೋಣೆಯಲ್ಲಿ ಬಂಧಿಸಿ ಇಟ್ಟಾಗ ಆತನು ಸದ್ಗುರುಗಳನ್ನು ಪ್ರಾರ್ಥಿಸಿ ಸಾಯಲು ನಿಂತಾಗ ಆಕ್ಷಣವೇ ಸದ್ಗುರುಗಳು ಬಂದು ಆತನ ನೈವೇದ್ಯವನ್ನು ಸೇವಿಸಿದರು.
ಹುಬ್ಬಳ್ಳಿ ನಗರದಲ್ಲಿ ನಿರುಪಾದಪ್ಪನೆಂಬ ಭಕ್ತನು ಇದ್ದನು. ಆತನು ಜೀವಿಕಾ ವೃತ್ತಿ ಏನೊಂದು ಮಾಡದೆ, ತನ್ನ ಅಣ್ಣನ ಮನೆಯಲ್ಲಿ ಊಟ ಮಾಡುತ್ತಿದ್ದನು. ಸಿದ್ಧಾರೂಢರ ಮೇಲೆ ಆತನಿಗೆ ಬಹಳ ಶ್ರದ್ದೆ ಇರುತ್ತಿದ್ದು, ನಿತ್ಯ ಮಠಕ್ಕೆ ಬರುತ್ತಿದ್ದನು. ಕೆಲಸವನ್ನು ಬಿಟ್ಟು, ಮಠದಲ್ಲೇ ಹೊತ್ತು ಕಳೆಯುತ್ತಾನೆಂದು ಮನೆಯಲ್ಲಿ ಎಲ್ಲರೂ ಆತನಿಗೆ ದೂಷಿಸುತ್ತಿದ್ದರು. ಒಂದು ಕಾಲದಲ್ಲಿ ಆತನ ಬಂದು ಮಾಡಿದ ಪ್ರಾರ್ಥನೆಯಿಂದ ಸದ್ಗುರುಗಳು ನಿರುಪಾದಪ್ಪನನ್ನು ಕುರಿತು - “ನೀನು ಕೆಲಸವನ್ನು ಬಿಟ್ಟು ಮಠಕ್ಕೆ ಬರಬಾರದು,'' ಎಂದು ಆಜ್ಞೆ ಮಾಡಿದರು. ಸದ್ಗುರು ವಚನವೇ ಪ್ರಮಾಣವೆಂದು ತಿಳಿದು, ಆ ನಿರುಪಾದಪ್ಪನು ಜೀವಿಕಾ ವೃತ್ತಿಯನ್ನು ಸ್ವೀಕರಿಸಿದನು. ಒಂದು ದಿನ ಆತನು ಅಣ್ಣನಿಗೆ ಹೇಳಿದ್ದೇನೆಂದರೆ, - ''ನಾನು ನಿತ್ಯದಲ್ಲಿಯೂ ಸಿದ್ಧಾರೂಢರಿಗೆ ನೈವೇದ್ಯ ಒಯ್ದು ಕೊಡುವೆನು." ಹೀಗೆ ಅಂದದ್ದು ಕೇಳಿ, ಆ ಬಂಧು ಇವನಿಗೆ ಬೈದು - “ನೀನು ನಿತ್ಯದಲ್ಲಿ ಹೀಗೆ ಮಾಡಿದರೆ, ಮನೆಯನ್ನು ಹಾಳು ಮಾಡುವಿ'' ಎಂದು ಅಂದನು. ನಿರುಪಾದಪ್ಪನ ಮನಸ್ಸಿನಲ್ಲಿ, ನಿತ್ಯದಲ್ಲಿಯೂ ಸದ್ಗುರುಗಳಿಗೆ ಪ್ರೇಮದಿಂದ ಉಣ್ಣಿಸಬೇಕೆಂದಿತ್ತು. ಆದರೆ ಈಗ ಅಣ್ಣನ ಪ್ರತಿಬಂಧಕ ಬಂದದ್ದರಿಂದ, ತನಗೆ ನೀಡಿದ್ದರ ಅರ್ಧ ಭಾಗವನ್ನಾದರೂ ಸದ್ಗುರುಗಳಿಗೆ ಅರ್ಪಿಸ ಬೇಕೆಂದು ನಿಶ್ಚಯಿಸಿದನು. ಹೀಗೆ
ನಿಶ್ಚಯವನ್ನು ಮಾಡಿ, ನಿತ್ಯ ತಾನು ಊಟಕ್ಕೆ ಕುಳಿತಿರುವಾಗ ತನಗೆ ನೀಡಿದರ ಅರ್ಧ ಭಾಗವನ್ನು ಗುಪ್ತಮಾಡಿ ಇಟ್ಟು, ಭೋಜನಾನಂತರ ಆ ಅನ್ನವನ್ನು ತೆಗೆದುಕೊಂಡು ಸಿದ್ಧಾಶ್ರಮಕ್ಕೆ ಓಡುತ್ತ ಮಠದ ಒಳಗೆ ಅದನ್ನು ತೆಗೆದುಕೊಂಡು ಹೋಗಿ, ಸದ್ಗುರುಗಳಿಗೆ ಅರ್ಪಿಸುವನು. ಆತನ ಆ ಪ್ರೇಮದ ಅನ್ನದೊಳಗಿಂದ ನಾಲ್ಕು ಗ್ರಾಸಗಳನ್ನು ಸದ್ಗುರುಗಳು ಸೇವಿಸಿ, ಬಹಳ ಆನಂದ ಪಡುತ್ತಿದ್ದರು. ಒಮ್ಮೆ ನಿರುಪಾದಪ್ಪನ ಅಣ್ಣನು ಸದ್ಗುರುಗಳಿಗೆ ಭೇಟಿಯಾದಾಗ ಸಿದ್ದರು
ಆತನನ್ನು ಕುರಿತು - “ನೀನು ನಿತ್ಯ ಮಠಕ್ಕೆ ಯಾತಕ್ಕೆ ನೈವೇದ್ಯವನ್ನು ಕಳುಹಿಸುತ್ತಿ! ಮನೆಯಲ್ಲಿರುವ ಮೂರ್ತಿಗೆ ನೈವೇದ್ಯ ತೋರಿಸಬೇಕು,'' ಎಂದು ಅಂದದ್ದು ಕೇಳಿ ಆತನು - “ನಾನು ಮಠಕ್ಕೆ ನೈವೇದ್ಯ ಎಂದೂ ಕಳುಹಿಸಲಿಲ್ಲ,” ಎಂದು ಅಂದನು. ಆಗ ಸದ್ಗುರುಗಳು,-“ನಿನ್ನ ತಮ್ಮ ನಿರುಪಾದಪ್ಪನು ನಿತ್ಯ ಅನ್ನ ತೆಗೆದುಕೊಂಡು ಬರುತ್ತಾನೆ,” ಅಂದರು. ಆಗ ಆತನು ಮನೆಗೆ ಹೋಗಿ, ನಿರುಪಾದನಿಗೆ - "ನಾಳಿನಿಂದ ನೀನು ಮಠಕ್ಕೆ ನೈವೇದ್ಯವನ್ನು ಒಯ್ದರೆ ನಿನಗೆ ಸದ್ಗುರು ಆಣೆ ಇರುವುದು; ನೈವೇದ್ಯ ಒಯ್ಯಬಾರದು,” ಎಂದು ಹೇಳಿದನು. ನಿರುಪಾದನು ಬಹಳ ಭೋಳೆ ಸ್ವಭಾವದವನಿದ್ದು, ಕಪಟವೇನೆಂದು ಆತನಿಗೆ ತಿಳಿಯುತ್ತಿದ್ದಿಲ್ಲ. ಆತನು ಅಣ್ಣನನ್ನು ಕುರಿತು - “ನನಗೆ ನೀಡಿದರೊಳಗಿಂದ ನಾನು ಅರ್ಧಭಾಗವನ್ನು ಸದ್ಗುರುಗಳಿಗೆ ಅರ್ಪಿಸುತ್ತಿದ್ದೆ" ಎಂದು ಅಂದದ್ದು ಕೇಳಿ, ಅಣ್ಣನು ''ಹಾಗಾದರೆ ನೀನು ಹೆಚ್ಚಿಗೆ ನೀಡಿಸಿಕೊಂಡು ಉಣ್ಣುತ್ತಿದ್ದಿ'' ಎಂದು ಹೇಳಿದ್ದನ್ನು ಕೇಳಿ, ನಿರುಪಾದಪ್ಪನು ಅತ್ಯಂತ ಚಿಂತಾಕ್ರಾಂತನಾದನು. ಮರುದಿವಸ ಅಣ್ಣನು ಬಂದು ನೋಡುವಾಗ್ಗೆ ನಿರುಪಾದಪ್ಪನಿಗೆ ಉಣ್ಣಲಿಕ್ಕೆ ನೀಡಿತ್ತು. ಆದರೆ ಆತನು ಉಣ್ಣಲೊಲ್ಲನು. ಅಣ್ಣನು ವಿಚಾರಿಸಿದಾಗ ನಿರುಪಾದಪ್ಪನು - ನೈವೇದ್ಯ ಸಿದ್ಧಾರೂಢರಿಗೆ ಇಲ್ಲೇ ಅರ್ಪಣೆ ಮಾಡಿಯೇ ಉಣ್ಣುವೆನು' ಎಂದನ್ನುತ್ತಾ, ತನಗೆ ಬಡಿಸಿದ ತಾಟು ತೆಗೆದುಕೊಂಡು ಏಕಾಂತ ಸ್ಥಾನಕ್ಕೆ ಹೋದನು. ಒಂದು ಕೋಣೆಯೊಳಗೆ ಹೋಗಿ, ಸಿದ್ದ ಸಮರ್ಥನನ್ನು ಕುರಿತು, - 'ಹೇ ದಯಾಳಾ ಸಿದ್ಧ ಮೂರ್ತಿಯೇ, ನಿನ್ನ ವಿನಹಾ ನನಗೆ ಮತ್ತೊಬ್ಬ ಮಿತ್ರನ್ಯಾವನು ಇದ್ದಾನೆ ? ಆದ್ದರಿಂದ ಈ ಸಮಯದಲ್ಲಿ ಓಡುತ್ತಾ ಬರುವಂಥವನಾಗು. ಹೇ ಗುರುರಾಯನೇ, ನಿನಗೆ ನಿತ್ಯದಲ್ಲಿಯೂ ಅನ್ನವನ್ನು ಕೊಡುತ್ತಿದ್ದೆ, ಆದರೆ ನನ್ನ ಅಣ್ಣನು ನನಗೆ ನಿನ್ನಾಣೆಯನ್ನು ಹಾಕಿ ಪ್ರತಿಬಂಧಕ ಮಾಡಿರುವವನು. ಆದ್ದರಿಂದ ನೀನೇ ಇಲ್ಲಿ ತನಕ ಬಂದು, ನೈವೇದ್ಯವನ್ನು ಉಣ್ಣುವಂಥವನಾಗು. ನೀನು ಒಂದು ವೇಳೆ ಬಾರದಿದ್ದರೆ, ನಾನು ಉಣಲಿಕ್ಕಿಲ್ಲ ನೋಡು, ಹೇ ಪ್ರಾಣಸಖನೇ, ತೀವ್ರವಾಗಿ ಬಾ, ಇಲ್ಲದಿದ್ದರೆ ನಾನು ಈಗಲೇ ಪ್ರಾಣವನ್ನು ಕೊಡುವೆನು'' ಎಂದು ಹೇಳಿ, ಕೆಲವು ಹೊತ್ತು ದಾರಿ ನೋಡಿದನು. ಸದ್ಗುರು ಬಾರದೇ ಇರುವದನ್ನು ನೋಡಿ, ಮೇಲಿದ್ದ ತೊಲೆಗೆ ಹತ್ತಿ, ಅಲ್ಲಿ ಹಗ್ಗ ಕಟ್ಟಿ ಮತ್ತೊಂದು ತುದಿಯನ್ನು ಉರುಲು ಮಾಡಿ ತನ್ನ ಕೊರಳಿಗೆ ಹಾಕಿಕೊಂಡು, ಕೆಳಗೆ ಹಾರಲಿಕ್ಕೆ ಸಿದ್ಧನಾಗಿ ಅನ್ನುತ್ತಾನೆ - "ಹೇ, ಸಿದ್ದಾರೂಢ ನಿನಗೆ ಇವತ್ತು ನೈವೇದ್ಯ ಯಾರೂ ಕೊಟ್ಟಿರಲಿಕ್ಕಿಲ್ಲ. ನೀನು ಉಪವಾಸ ಇರುವಿ. ಆದ್ದರಿಂದ ನಾನು ಹೇಳುವದೇನೆಂದರೆ, ನೀನು ಇಲ್ಲಿಗೆ ಬಂದು ನೈವೇದ್ಯವನ್ನು ಸ್ವೀಕರಿಸು, ಇಲ್ಲವಾದರೆ ನಿನಗೋಸ್ಕರ ಈಗಿಂದೀಗಲೇ ಪ್ರಾಣವನ್ನು ಕಳಕೊಳ್ಳುವೇನು,
ನೋಡಪ್ಪಾ.” ಹೀಗೆಂದು, ಆ ನಿರುಪಾದಪ್ಪನು ತೋಲೆಯ ಮೇಲಿಂದ ಕೆಳಕ್ಕೆ ಹಾರಿದನು. ಆ ಕೂಡಲೇ ಸದ್ಗುರುವು ಅಲ್ಲೇ ಪ್ರಕಟನಾಗಿ, ಆತನನ್ನು ಮೇಲಿಂದ ಮೇಲೆ ಹಿಡಿದು, ಅವನ ಕಂಠದೊಳಗಿಂದ ಉರಲನ್ನು ಬಿಚ್ಚಿ, ನೆಲಕ್ಕೆ ಮೆಲ್ಲನೆ ಇಳಿಸಿದನು. ಆಗ ಸದ್ಗುರುವನ್ನು ಕುರಿತು, ನಿರುಪಾದಪ್ಪನು- “ನೀನು ಚಲೋ ಬಂದಿ. ನೀನು ನನ್ನ ಗೆಳೆಯನೆಂಬುದು ಸತ್ಯವು. ಈಗ ತ್ವರೆಮಾಡಿ ನೈವೇದ್ಯವನ್ನು ಸ್ವೀಕರಿಸು, ಹೇ ದಯಾಳನೇ,'' ಎಂದು ಈ ಪ್ರಕಾರ ಅಂದು ಆತನು
ಸಿದ್ದರ ಮುಂದೆ ನೈವೇದ್ಯವನ್ನು ತಂದಿಟ್ಟು, ಕೈಯಿಂದಲೇ ಸದ್ಗುರು ಮುಖದಲ್ಲಿ ಗ್ರಾಸಗಳನ್ನು ಹಾಕುತ್ತಿದ್ದರು. ನಿರುಪಾದಪ್ಪನ ಹೃದಯದಲ್ಲಿ ಆನಂದವು ತುಂಬಿ, ತ್ರಿಭುವನದಲ್ಲಿ ಹಿಡಿಸಲಾರದಂತಾಯಿತು. ಆಮೇಲೆ ನಿರುಪಾದಪ್ಪನಿಗೆ ಉಣ್ಣಿಸಿ, ಸದ್ಗುರುಗಳು ಹೊರಗೆ ಬಂದು ಅದೃಶ್ಯರಾದರು. ಮತ್ತ್ಯಾರೂ ಅವರನ್ನು ಕಾಣಲಿಲ್ಲ.
ಈ ಪ್ರಕಾರ ನಿತ್ಯದಲ್ಲಿಯೂ ನಿರುಪಾದಪ್ಪನು ಉಣ್ಣುವಾಗ ಸದ್ಗುರುವು ನೈವೇದ್ಯ ತೆಗೆದುಕೊಳ್ಳಲಿಕ್ಕೆ ಬರುತ್ತಿದ್ದನು. ಒಂದಾನೊಂದು ದಿನ ನಿರುಪಾದಪ್ಪನ ಅಣ್ಣನು ಆತನು ಏನು ಮಾಡುತ್ತಾನೆಂದು ನೋಡಲಿಕ್ಕೆ ಗುಪ್ತನಾಗಿ ನಿಂತಿರುವಾಗ ಸದ್ಗುರುಗಳು ಸಾಕ್ಷಾತ್ ಪ್ರಕಟರಾಗಿ, ನಿರುಪಾದಪ್ಪನು ಅವರ ಮುಖದಲ್ಲಿ ಗ್ರಾಸ ಹಾಕುತ್ತಿರುವದನ್ನು ಕಂಡು ಬಹಳ ಆಶ್ಚರ್ಯಚಕಿತನಾಗಿ, ಓಡಿ ಬಂದು, ಸದ್ಗುರು ಪಾದವನ್ನು ಘಟ್ಟಿಯಾಗಿ ಹಿಡಿದು, - 'ತ್ರಾಹಿ ತ್ರಾಹಿ, ನಾನು ಮಹಾಮೂರ್ಖನೂ ಮಂದಮತಿಯೂ ಇರುತ್ತೇನೆ, ನಿನ್ನ ಅಗಾಧ ಮಹಿಮೆಯನ್ನು ನಾನು ತಿಳಿಯಲಾರದೆ ಹೋದೆನು. ನಿರುಪಾದಪ್ಪನು ಧನ್ಯನಿದ್ದಾನೆ; ಅವನ ಸಂಗತಿಯಿಂದ ನಾನಾದರೂ ಧನ್ಯನಾದನು. ಈತನಿಗೆ ನಿನ್ನ ಮೇಲೆ ಅನನ್ಯ ಭಕ್ತಿ ಇರುವದು. ಆದ್ದರಿಂದ, ಇವನನ್ನು ನೀನು ಮಠಕ್ಕೆ ಕರೆದುಕೊಂಡು ಹೋಗು. ನಾನಾದರೂ ನಿಮ್ಮಿಬ್ಬರಿಗೋಸ್ಕರ ನಿತ್ಯದಲ್ಲಿಯೂ ನೈವೇದ್ಯವನ್ನು ಅಲ್ಲಿಗೆ ತರುವೆನು. ಇನ್ನು ಮೇಲೆ ಈತನಿಗೆ ಉದ್ಯೋಗ ಮಾಡಲಿಕ್ಕೆ ಹೇಳುವದಿಲ್ಲ. ಈತನ ಬಂಧುತ್ವದಿಂದ ನನಗೆ ಧನ್ಯತ್ವ ಪ್ರಾಪ್ತವಾಯಿತು. ಹೇ ಸಿದ್ಧರಾಯನೇ, ನೀನಾದರೂ ಕೃಪೆ ಮಾಡಿ ಇಲ್ಲಿಗೆ ಬಂದು ನಮ್ಮ ಗೃಹವನ್ನು ಪವಿತ್ರ ಮಾಡಿದಿ, " ಎಂದು ಹೇಳಿದನು. ಆಗ ಸದ್ಗುರುಗಳು -"ನನ್ನನ್ನು ಬಿಟ್ಟು ಇವನು ತಾಳಲಾರನು. ಆದ್ದರಿಂದ ಈತನನ್ನು ಸಿದ್ಧಾಶ್ರಮಕ್ಕೆ ಕರೆದುಕೊಂಡು ಹೋಗುವೆನು. ಅಲ್ಲಿಯೇ ಸೇವೆ ಮಾಡಿಕೊಂಡಿರಲಿ' ಎಂದು ನುಡಿದ ಅಮೃತವಚನವನ್ನು ಕೇಳಿ, ನಿರುಪಾದಪ್ಪನು ಮನಸ್ಸಿನಲ್ಲಿ ಅತ್ಯಂತ ಹರ್ಷವನ್ನು ಹೊಂದಿ ಇವತ್ತು ನನ್ನ ಪುಣ್ಯವು ಉದಯವಾಯಿತು. ಪುಣ್ಯ ಸ್ಥಾನಕ್ಕೆ ನಾನು ಪ್ರಾಪ್ತನಾದೆ. ಇವತ್ತಿನಿಂದ ಸಿದ್ಧಾರೂಢರ ಸಮೀಪವೇ ಇದ್ದು, ನಿತ್ಯಕಾಲದಲ್ಲಿಯೂ ಸೇವೆ ಮಾಡುತ್ತಿರುವೆನು,'' ಎಂದು ಅನ್ನುವಾಗ, ಆತನ ಕಂಠ ಗದ್ಗದಿತವಾಗಿ ಕಣ್ಣೊಳಗಿಂದ ಪ್ರೇಮಾಶ್ರುಗಳು ಸುರಿಯಲಾರಂಭಿಸಿದವು. ಸದ್ಗುರುಗಳ ನಿಕಟದಲ್ಲಿದ್ದು ಕೆಲವು ಕಾಲ ಸೇವಾ ಮಾಡುತ್ತಿರುವಾಗ, ಆತನಿಗೆ ನಿರ್ಯಾಣಕಾಲವು ಸಮೀಪಿಸಿತು. ಆಗ ನಿರುಪಾದಪ್ಪನು - “ನಾನು ಕೈಲಾಸ ಪರ್ವತಕ್ಕೆ ಹೋಗುವೆನು,'' ಎಂದು ಹೇಳುತ್ತಾ, ಮಸ್ತಕವನ್ನು ಸದ್ಗುರು ಚರಣದಲ್ಲಿಟ್ಟು ಸದ್ಗುರು ಧ್ಯಾನವನ್ನು ಹೃದಯದಲ್ಲಿ ಮಾಡುತ್ತಾ, ಪ್ರಾಣವನ್ನು ತ್ಯಜಿಸಿದನು. ಕೊಡಲೇ ಒಂದು ವಿದ್ಯುಲ್ಲತೆಯಂಥ ತೇಜವು ಎಲ್ಲರಿಗೂ ಕಾಣಿಸುವಂಥಾದ್ದಾಯಿತು. ಆಗ್ಗೆ ಸರ್ವರೂ - "ಧನ್ಯ, ಧನ್ಯ ನಿರುಪಾದಪ್ಪನು. ಈತನು, ಭಕ್ತರಿಗೋಸ್ಕರ ಸಾಕ್ಷಾತ್ ಸದ್ಗುರು ರೂಪದಿಂದ ಬಂದಿರುವ ಕೈಲಾಸ ಪತಿಯನ್ನೇ ಸಂಪಾದಿಸಿಕೊಂಡನು." ಎಂದು ನುಡಿದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಭೋಳೆ ಭಕ್ತನಿಗೆ ಸಿದ್ಧಾರೂಢರು ತಮ್ಮ ಜ್ವರವನ್ನು ಕೊಟ್ಟರು. ಆತನ ಭಾವಿಯೊಳಗೆ ಬಿದ್ದಾಗ ಅವನಿಗೆ ದರ್ಶನವನ್ನು ಕೊಟ್ಟರು.
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
