ಹನುಮಂತನು ಮರಣಕಾಲದಲ್ಲಿ ಪ್ರಾರ್ಥನೆ ಮಾಡಿದ ಕೂಡಲೇ ಸಿದ್ಧಾರೂಢರು ಅವನಿದ್ದಲ್ಲಿ ಪ್ರಾಪ್ತರಾಗಿ ಅವನನ್ನು ಗುಣಪಡಿಸಿದರು .
ಹನುಮಂತನು ಮರಣಕಾಲದಲ್ಲಿ ಪ್ರಾರ್ಥನೆ ಮಾಡಿದ ಕೂಡಲೇ ಸಿದ್ಧಾರೂಢರು ಅವನಿದ್ದಲ್ಲಿ ಪ್ರಾಪ್ತರಾಗಿ ಅವನನ್ನು ಗುಣಪಡಿಸಿದರು .
ತುಕ್ಕಪ್ಪನೆಂಬ ಭಕ್ತರು ಬಹು ಪ್ರೇಮಳನಾಗಿಯೂ, ಸಿದ್ಧ ಸದ್ಗುರುವಿನ ಸೇವಾ ಮಾಡುವುದರಲ್ಲಿ ಅತಿ ತತ್ಪರನಾಗಿಯೂ ಇರುವನು. ತನ್ನ ಗೃಹದೊಳಗೆ ನವರಾತ್ರಿ ಮಹೋತ್ಸವ ನಡಿಯುವಾಗ, ಸದ್ಗುರುಗಳನ್ನು ಕರೆದುಕೊಂಡು ಬಂದು ಪೂಜಿಸುವನು. ಮನೆಯಲ್ಲಿ ದಿವ್ಯ ಮಂಟಪವನ್ನು ರಚಿಸಿದನು. ಅದು ಅನುಪಮವಾಗಿ ನವರತ್ನಾದಿಗಳಿಂದ ಕೆಚ್ಚಿತ್ತೋ ಎಂಬಂತೆ ಕಾಣಿಸುತ್ತಿತ್ತು.
ಮತ್ತು ಅತಿ ಜಾಜ್ವಲ್ಯವಾದ ದೀಪಗಳಿಂದ ಶೋಭಾಯಮಾನವಾಗಿ ಕಾಣಿಸುವದು. ಎಲ್ಲಾ ಸಾಹಿತ್ಯವನ್ನು ಸಿದ್ಧಮಾಡಿಕೊಂಡು, ಸದ್ಗುರುಗಳನ್ನು ಕರೆದುಕೊಂಡು ಬರಲಿಕ್ಕೆ ಹೋಗುವ ಸಮಯದಲ್ಲಿ ಆತನ ಪತ್ನಿಯು ಎದುರಿಗೆ ಬಂದು ಅನ್ನುತ್ತಾಳೆ - "ನೀವು ಪೂಜಾ ಮಾಡುವದಕ್ಕಾಗಿ ಸದ್ಗುರುಗಳನ್ನು ಕರೆದುಕೊಂಡು ಬರುವಿರಿ, ಆದರೆ ನಮ್ಮ ಮಗನಾದ ಹನುಮಂತನು ರೋಗದಿಂದ ವಿಶೇಷ ಪೀಡಿಸಲ್ಪಟ್ಟು, ಅವನಿಗೆ ಮೃತ್ಯು ಸಮೀಪ ಬಂದಂತೆ ಕಾಣಿಸುವದು; ನಿಶ್ಚೇಷ್ಠಿತನಾಗಿ ಬಿದ್ದಿರುವನು.” ಇದನ್ನು ಕೇಳಿ ತುಕ್ಕಪ್ಪನು ಪುತ್ರನಾದ ಹನುಮಂತನ ಸಮೀಪ ಹೋಗಿ- '' ಇವತ್ತು ಮನೆಗೆ ಸಿದ್ಧಾರೂಢ ಸದ್ಗುರುಗಳು ಬರುವರು. ನೀನು ನರಳುತ್ತ ಇರದೆ ಶಾಂತನಾಗಿ ಮಲಗಿಕೊಂಡು ಪೂಜೆಗೆ ವಿಘ್ನು ಮಾಡದಿರು, ನೀನು ಸಾಯುವಿಯಾದರೆ, ಸದ್ಗುರು ನಾಮವನ್ನು ಮುಖದಿಂದ ಉಚ್ಚರಿಸುತ್ತ ಪ್ರಾಣವನ್ನು ಬಿಟ್ಟು ಬಿಡು, ಆದರೆ ಪೂಜೆಗೆ ಅಡ್ಡಿ ಆಗುವಂಥಾ ಏನೊಂದೂ ಶಬ್ದ ಬಾಯಿಂದ ಹೊರಡಬಾರದು, ನೋಡಪ್ಪಾ,” ಎಂದು ಅಂದನು. ಹನುಮಂತನು ಸಂಜ್ಞೆಯಿಂದಲೇ ಕಬೂಲ ಮಾಡಿದನು, ಆದರೆ ತಾಯಿಗೆ ದುಃಖ ತಡಿಯಲಾರದೆ ಅಳಲಾರಂಭಿಸಿದಳು. ಆಗ ಆಕೆಯನ್ನು ಕುರಿತು ತುಕ್ಕಪ್ಪನು - “ನೀನು ಬಹಳ ಚಲೋ ಕೆಲಸ ಮಾಡುತ್ತಿ, ರೋಗಿಯಾದರೂ ಅಳುವುದಿಲ್ಲ, ಹೀಗಿದ್ದು ನೀನು ಇಂಥಾ ಆಕ್ರಾಂತ ಮಾಡುತ್ತಿ. ಸದ್ಗುರುನಾಥನು
ಬರುವ ಕಾಲದಲ್ಲಿ, ಇದು ನಿನಗೆ ಯೋಗ್ಯವಲ್ಲ ನೋಡು. ಈಗ ಸದ್ಗುರುವಿಗೆ ಕರೆಸಬೇಕೋ ಅಥವಾ ಆಕ್ರಾಂತ ಮಾಡುತ್ತಾ ಕೂಡ್ರಬೇಕೊ, ನಿನ್ನ ಮನಸ್ಸಿನೊಳಗೆ ಏನಿದೆ ಹೇಳು,” ಅಂದನು. ಆಗ್ಗೆ ಆ ಸ್ತ್ರೀಯು ವಿಚಾರಯುಕ್ತಳಾಗಿ ಅಂದಳು, “ನನ್ನ ಅಪರಾಧವಾಯಿತು. ಅವನು ಸತ್ತರೂ ನಾನು ಅಳಲಿಕ್ಕಿಲ್ಲಾ. ಸದ್ಗುರುಗಳು ಹೋಗುವ ತನಕ ಅವನ ಮೇಲೆ ಕಂಬಳಿ ಹಾಕಿ ಮುಚ್ಚಿ ಬಿಡುವೆನು.'' ಮಮತೆಗೆ ಲತ್ತೆ ಹೊಡೆದು ಹೊರಗೆ ಹಾಕಿ, ಸದ್ಗುರುಗಳನ್ನು ಒಳಗೆ ಕರೆದುಕೊಂಡು ಬಂದು ಸಾಂಗವಾಗಿ ಪೂಜಿಸಬೇಕೆಂಬ ನಿರ್ಧಾರವನ್ನು ಮಾಡಿ, ತುಕ್ಕಪ್ಪನು ಮಠಕ್ಕೆ ಹೊರಟು ಹೋಗುವಂಥವನಾದನು. ಮಹಾ ವೈಭವದಿಂದ ಸದ್ಗುರುಗಳನ್ನು ಗೃಹಕ್ಕೆ ಕರೆದುಕೊಂಡು ಬಂದು, ಮಂಟಪದೊಳಗಿನ ಸಿಂಹಾಸನದ ಮೇಲೆ ಕುಳ್ಳಿರಿಸಿದಾಗ ಅವರ ಮುಂದೆ ಕೀರ್ತನೆ ಆರಂಭವಾಯಿತು. ಆಗ ಏನು ವಿಶೇಷ ಚಮತ್ಕಾರವಾಯಿತು ಅದನ್ನೇ ಕೇಳಿರಿ, ಇತ್ತ ಹನುಮಂತನು, ಕಂಬಳಿ ಆತನ ಮೇಲೆ ಹೊಚ್ಚಲ್ಪಟ್ಟು, ಮೆಲ್ಲಗೆ ಸದ್ಗುರು ಚಿಂತನೆ ಮಾಡುತ್ತ, ಕಣೋಳಗಿಂದ ನೀರು ಸುರಿಸುತ್ತಿದ್ದು, ಆತನಿಗೆ ಪ್ರಾರ್ಥಿಸುತ್ತಾನೆ, - “ದೀನನಾಥನಾದ ಸದ್ಗುರುವೇ, ನನಗೆ ನಿನ್ನ ದರ್ಶನವಿಲ್ಲ, ನನ್ನಿಂದ ಎದ್ದು ಕೂಡ್ರೋಣ ಅಂದರೆ ಶಕ್ಯವಿಲ್ಲ. ನನ್ನ ಪ್ರಾಣವು ಹೋಗುವುದೋ ಎಂಬಂತೆ ಅನಿಸುವುದು. ಈ ಸಮಯದಲ್ಲಿ ನನಗೆ ನಿನ್ನ ಹೊರ್ತು ಮತ್ಯಾರಿರುವರು ? ನಾನು ನಿನ್ನ ಹೆಸರು ತೆಗೆದುಕೊಂಡು ಕೂಗಿದೆನೆಂದರೆ, - ಪೂಜೆಗೆ ನಿಶ್ಚಯವಾಗಿ ವಿಘ್ನ ಬರುವದು. ಈ ಕಾಲದಲ್ಲಿ ನೀನೇ ಬಂದು ನನ್ನ ಮೇಲೆ ಕೃಪಾ ಮಾಡು. ಸದ್ಗುರುರಾಯನೇ, ಒಮ್ಮೆಯಾದರೂ ನನಗೆ ದರ್ಶನ ಕೊಡು ಅಂದರೆ ನಾನು ಸುಖದಿಂದ ಪ್ರಾಣ ಬಿಡುವೆನು. ಬಹು ಘೋಷದಿಂದ ಕೀರ್ತನ ನಡೆದಿರುವಾಗ, ನನ್ನ ಈ ಅಲ್ಪ ಧ್ವನಿಯು ನಿನಗೆ ಕೇಳಿಸಲಾರದು, " ಹೀಗನ್ನುತ್ತಿದ್ದನು.
ಹೂರಗೆ ಕೀರ್ತನರಂಗ ನಡೆದಿರುವದು. ಆಗ ಸದ್ಗುರುವು ಮಂಟಪದೊಳಗೆ ಕೂತಲ್ಲಿಂದ ಒಮ್ಮಿಂದೊಮ್ಮೆ ಗಡಬಡಿಯಿಂದ ಎದ್ದು, ತುಕ್ಕಪ್ಪನನ್ನು ಕರೆದು, ಆತನ ಹಸ್ತ ಹಿಡಿದು, -“ನನಗೆ ಹನುಮಂತನಿದ್ದಲ್ಲಿಗೆ ಕರೆದುಕೊಂಡು ಹೋಗು” ಅಂದನು. ಅದಕ್ಕೆ ತುಕ್ಕಪ್ಪನು - “ಈಗ ಆತನ ಬಳಿಗೆ ಹೋಗುವದು ಏನೂ ಕೆಲಸವಿಲ್ಲ. ಆತನು ಸ್ವಸ್ಥನಾಗಿ ಮಲಗಿಕೊಂಡಿರುತ್ತಾನೆ. ಪೂಜೆ ಆದ ಮೇಲೆ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುವೆನು," ಅಂದಿದ್ದು ಕೇಳಿ, ಸದ್ಗುರುಗಳು “ಈಗಿಂದೀಗಲೇ ಆತನಿದ್ದಲ್ಲಿ ನನಗೆ ಹೋಗುವ ಕೆಲಸವಿದೆ,'' ಅಂದರು. ಆಗ್ಗೆ ತುಕ್ಕಪ್ಪನು ನಿರುಪಾಯನಾಗಿ, ಸದ್ಗುರುರಾಯರ ಹಸ್ತ ಹಿಡಿದು, ಭಯಯುಕ್ತನಾಗಿ ಹನುಮಂತನು ಮಲಗಿದ್ದಲ್ಲಿ ಕರೆದುಕೊಂಡು ಹೋದನು. ಸದ್ಗುರುಗಳು, ಕಂಬಳಿ ಹೊಚ್ಚಲ್ಪಟ್ಟ ಹನುಮಂತನನ್ನು ನೋಡಿ, ಆತನ ಮುಖದ ಮೇಲಿನ ಕಂಬಳಿ ತೆಗೆದು ನೋಡುವಾಗ, ಮೃತ್ಯುಕಳಾ ಕಾಣಿಸುತ್ತಿದ್ದು ಕಿವಿಗೊಟ್ಟು ಕೇಳಲಾಗಿ ಮೆಲ್ಲಗೆ ನಾಮೋಚ್ಛಾರವು ಕೇಳಿಸುತ್ತಿತ್ತು. ಕೂಡಲೇ, ಸದ್ಗುರುಗಳು ಶಿವಾಯನಮಃ ಎಂದು ಉಚ್ಚರಿಸಿ, ಅವನ ಮೈಮೇಲೆ ಹಸ್ತವನ್ನು ಎಳೆಯುವಂಥವರಾದರು. ಆಗ ಮುಖದ ಮೇಲೆ ತತ್‌ಕ್ಷಣವೇ ಕಾಂತಿ ಬಂದು, ಕೈಕಾಲು ಅಲ್ಲಾಡಲಿಕ್ಕೆ ಆರಂಭವಾದವು. ಆತನ ಹಸ್ತಗಳನ್ನು ಹಿಡಿದು ಸದ್ಗುರುನಾಥರು ಅವನನ್ನು ಎಬ್ಬಿಸಿ ಕೂಡ್ರಿಸಿದರು. ಆತನ ಮೈಯೊಳಗೆ ಶಕ್ತಿಯು ಬರಹತ್ತಿತು. ಈ ಪ್ರಕಾರ ಲಾಘವಿಯಾದ ಸದ್ಗುರುವು ಆತನ ಮೇಲೆ ಕೃಪಾ ಮಾಡಿದನು. ತುಕ್ಕಪ್ಪನಿಗಾದರೂ ಆನಂದಾಶ್ರುಗಳು ಸುರಿಯುತ್ತಿದ್ದವು. ಆಗ ಆತನ ಪತ್ನಿಯೂ ಅಲ್ಲಿಗೆ ಓಡಿಬಂದಳು. ತನ್ನ ಮಗನು ಸದ್ಗುರು ಕೃಪೆಯಿಂದ ಸುಕ್ಷೇಮವಾಗಿರುವದನ್ನು ನೋಡಿ, ಆಕೆಗೆ ಪ್ರೇಮ ಆವರಿಸಲಾಗದೆ ಉಕ್ಕಿ ಬರುವಂಥಾದ್ದಾಯಿತು. ಶ್ರೀ ಗುರುವಿನ ಚರಣವನ್ನು ಘಟ್ಟಿಯಾಗಿ ಹಿಡಿದು, “ಹೇ ದಯಾಳಾ, ದೀನೋದ್ಧಾರಕಾ, ನನ್ನ ಸಂಕಟದಲ್ಲಿ ನೀನೇ ಪ್ರಾಪ್ತನಾದಿ. ಪೂಜಾ ಸಮಯದಲ್ಲಿ ಈತನ ಪ್ರಾಣ ಹೋಗುತ್ತದೋ ಏನೋ, ಪೂಜೆಗೆ ವಿಘ್ನ ಬಂದಿತೇನೋ ಎಂದು ನನಗೆ ಬಹಳ ವ್ಯಥೆ ಆಗಿತ್ತು. ಆದರೆ ಕೃಪಾಳುವಾದ ನೀನು ಬಂದು, ಎಲ್ಲಾ ವ್ಯಥೆಯನ್ನು ಹರಣ ಮಾಡಿದಿ. ನಾವು ನಿನಗೆ ಪ್ರಾರ್ಥಿಸದಿದ್ದರೂ ನೀನಾಗಿ ಓಡಿ ಬಂದು ಕೃಪೆಯಿಂದ ನನ್ನ ಹುಡುಗನನ್ನು ಎಬ್ಬಿಸಿ, ನಮ್ಮನ್ನು ಕರುಣೆಯಿಂದ ಕಾಪಾಡಿದಿ,” ಅಂದಳು. ಆಗ ತುಕ್ಕಪ್ಪನು, -“ಹೇ ಸದ್ಗುರುನಾಥಾ, ನಿನ್ನ ಪೂರ್ಣಮಹಿಮೆಯು ಮೂಢರಾದ ನಮಗೆ
ತಿಳಿಯುವುದಿಲ್ಲ. ಆದರೂ ಒಂದು ಪ್ರಾರ್ಥನೆಯನ್ನು ಮಾಡುವೆನು. ಹನುಮಂತನ ಈ ವೃತ್ತಾಂತವನ್ನು ನಾನು ನಿನಗೆ ಎಂದೂ ಹೇಳಿದ್ದಿಲ್ಲ, ಹೀಗಿದ್ದು ಅದು ನಿನಗೆ ಹ್ಯಾಗೆ ತಿಳಿಯಿತು ಎಂಬದು ನನಗೆ ಕೃಪೆಮಾಡಿ ಹೇಳಬೇಕು, " ಎಂದು ನುಡಿಯುವದನ್ನು ಕೇಳಿ, ನಗುತ್ತ ಸದ್ಗುರುನಾಥರು, - “ನನ್ನ ಕರ್ಣಗಳು ದೀನರ ಆರ್ತಧ್ವನಿಯನ್ನು ಕೇಳುವದಕ್ಕೆ ಯಾವಾಗಲೂ ಸಾವಧವಿರುತ್ತವೆ. ಹೀಗಿರುತ್ತಾ ಮಂಟಪದಲ್ಲಿ ಕುಳಿತಿರುವಾಗ ಇವನ ಆರ್ತಧ್ವನಿಯು ಕೇಳಬಂತು. ಚಿತ್ತವು ಕೀರ್ತನದಲ್ಲಿ ರಮಿಸಿರುತ್ತಾ ಕಿವಿಯೊಳಗೆ ಈ ಹನುಮಂತನ ದೀನ ಪ್ರಾರ್ಥನೆಯು ಬಂದ ಕೂಡಲೇ, ನಿನ್ನನ್ನು ಕರೆದುಕೊಂಡು ಇಲ್ಲಿಗೆ ಬಂದೆ. ಈ ಪ್ರಕಾರ ಈ ಕೆಲಸವು ಘಟಿಸಿತು. ಈಗ ಇವರಿಗೆ ಮೃತ್ಯು ಭಯವಿಲ್ಲ. ಇವನು ಬೇಗನೆ ನೆಟ್ಟಗಾಗುವನು, ಇವನನ್ನು ಪೂಜಾಕಾಲಕ್ಕೆ ಕೈಹಿಡಿದು ಕರೆದುಕೊಂಡು ಬನ್ನಿರಿ,'' ಎಂದು ಹೇಳಿ ಮಂಟಪದಲ್ಲಿ ಹೋಗಿ ಕುಳಿತುಕೊಂಡರು.
ಇಷ್ಟರೊಳಗೆ ಕೀರ್ತನೆಯು ಮುಗಿಯಿತು, ಪೂಜೆ ಮಾಡಲಿಕ್ಕೆ ಸಿದ್ಧ ಮಾಡಿದರು. ಆಗ ಹನುಮಂತನಿಗೆ ಕೈಹಿಡಿದು ತುಕ್ಕಪ್ಪನು ಕರೆದುಕೊಂಡು ಬರುತ್ತಿದ್ದನು. ಸದ್ಗುರುಗಳನ್ನು ದೂರದಿಂದ ನೋಡಿದ ಕೂಡಲೇ, ಹನುಮಂತನು ತುಕ್ಕಪ್ಪನ ಕೈಬಿಟ್ಟು ಓಡಿಬಂದು ಸಿದ್ದ ಚರಣಕ್ಕೆ ಬಿದ್ದು - '' ಹೇ ದೀನ ದಯಾಳ ಸದ್ಗುರುರಾಜನೇ, ನನ್ನ ಪ್ರಾರ್ಥನೆಯನ್ನು ಕಿವಿಯಲ್ಲಿ ತೆಗೆದುಕೊಂಡು ನನ್ನ ರಕ್ಷಣೆಗೋಸ್ಕರ ಓಡಿಬಂದೆ. ಈ ಶರೀರವನ್ನು ನಿನ್ನ ಮೇಲಿಂದ ನಿವಾಳಿ ತೆಗೆದು, ಈ ಚರಣಗಳಲ್ಲಿ ಬಿಟ್ಟಿರುತ್ತೇನೆ. ನೀನೇ ನನ್ನ ಧನಿಯಾಗಿರುತ್ತಿ, ನಿನ್ನ ಹೊರತು ನನಗೆ ಮತ್ಯಾರೂ ಇಲ್ಲ,” ಎಂದು ಹೇಳಿದ್ದನ್ನು ಕೇಳಿ, ಸದ್ಗುರುಗಳು ಆತನನ್ನು ಪ್ರೇಮದಿಂದ ಎತ್ತಿಕೊಂಡು ಆಲಂಗಿಸಿ - "ಬಾಳಾ , ನಿನ್ನ ಪ್ರೇಮ ನೋಡಿ ನಾನು ಮರುಳಾದೆ. ನಿನ್ನಂಥಾ ಪ್ರೇಮಳ ಭಕ್ತರು ನನಗೆ ಬಹಳ ಬೇಕಾಗಿರುವುದು. ಆದರೆ ನೀನು ನಿನ್ನ ಮಾತಾಪಿತರನ್ನು ನನ್ನ ರೂಪವೆಂದು ತಿಳಿದುಕೊಂಡು, ಅವರ ಸೇವೆ ಮಾಡುತ್ತಾ, ನಿರ್ಮಲನಾಗಿರು,” ಎಂದು ನುಡಿಯುವದನ್ನು ಕೇಳಿ, ತುಕ್ಕಪ್ಪನು ಸಿದ್ದರ ಚರಣಗಳ ಮೇಲೆ ಬಿದ್ದು, ನೇತ್ರಗಳಿಂದ ಅಶ್ರುಗಳನ್ನು ಸುರಿಸುತ್ತ ಅತ್ಯಂತ ಪ್ರೇಮೋತ್ಕರ್ಷಯುಕ್ತನಾದನು. ಭಕ್ತರೊಳಗೆ, ಈ ಸದ್ಗುಣಿಯಾದ ತುಕ್ಕಪ್ಪನೇ ಅಗ್ರಗಣಿ ಇರುತ್ತಾನೆ. ಸಂತಮಾಲೆಯೊಳಗೆ ಶಿಖಾಮಣಿ ಇದ್ದಂತೆ ಈತನು ಸದ್ಗುರು ಚರಣಗಳಲ್ಲಿ ಶೋಭಿಸುವನು. ಸದ್ಗುರು ಪ್ರೇಮವೇ ಆತನ ಭೂಷಣವು ಇಲ್ಲವಾದರೆ ಆತನು ಬರೆ ಕೌಪೀನಧಾರಿಯಾಗಿದ್ದು, ಮಹಾ ವೈರಾಗ್ಯ ಶೀಲನಿರುವನು. ಸಿದ್ದ ವಚನ ವಿನಹಾ ಎರಡನೇ ಪ್ರಮಾಣವೇ ಒಲ್ಲನು.
ಇರಲಿ. ತುಕ್ಕಪ್ಪನು ಮುಂದೆ ಬಂದು, ಪೂಜಾ ಮಾಡಲಿಕ್ಕೆ ಆರಂಭಿಸಿದನು. ಸಿದ್ದರ ಮುಂದೆ ಒಂದು ಪರದೆಯನ್ನು ಹಿಡಿದು, ಅವರಿಗೆ ಅಲಂಕಾರ ಮಾಡುವುದರಲ್ಲಿ ಪ್ರವರ್ತಿಸಿದನು. ಅಲಂಕಾರ ಪೂರ್ಣವಾದ ಮೇಲೆ ಅಡ್ಡ ಪರದೆಯನ್ನು ತೆಗೆದರು. ಆಗ ಮಂಟಪದಲ್ಲಿ ವಿದ್ಯುಲ್ಲತೆಯಂಥ ಪ್ರಕಾಶಮಾನವಾಗಿರುವ ಮೂರ್ತಿಯು ಪ್ರಕಟವಾಯಿತು. ಮಸ್ತಕದಲ್ಲಿ ರತ್ನ ಖಚಿತವಾದ ಕಿರೀಟವು ದಿವ್ಯ ತೇಜದಿಂದ ಪ್ರದೀಪ್ತವಾಗಿತ್ತು, ಮತ್ತು ಮೇಲೆ ಅತ್ಯದ್ಭುತವಾದ ಸುವರ್ಣ ಶೇಷನು ಶೋಭಿಸುತ್ತಿದ್ದನು. ಮುಖದ ಮೇಲೆ ಸಹಸ್ರಕರನಿಗೆ ಬೇರೆಯಿಲ್ಲದಂತೆ ಅಪೂರ್ವ ಕಾಂತಿಯು ಇದ್ದು, ಆ ವಿದ್ಯುತ್ಪ್ರಾಯವಾದ ಮೂರ್ತಿಯು ಭಕ್ತರ ನೇತ್ರ ಕಮಲಗಳಿಗೆ ವಿರಾಜಮಾನವಾಗಿ ಕಾಣಿಸಿತು. ಕಂಠದ ಸರ್ಪಹಾರವು ಹೊಳೆಯುತ್ತ, ಅಪಾರ ಪುಷ್ಪಭಾರವು ಶೋಭಿಸುತ್ತ, ಸ್ಕಂಧದ ಮೇಲೆ ಸುವರ್ಣ ಪುಷ್ಪಗಳಿಂದ ಒಪ್ಪುತ್ತಿರುವ ದಿವ್ಯ ಪ್ರಾವರಣವು ರಾಜಿಸುತ್ತಿದ್ದು, ಕಂಠದಲ್ಲಿ ಮುಕ್ತಾಹಾರ, ವಕ್ಷ ಸ್ಥಳದಲ್ಲಿ ರತ್ನ ಖಚಿತ ಮನೋಹರವಾದ ಪದಕವು ಝಳಕಿಸುತ್ತ, ಪಾದಗಳಲ್ಲಿ ಸುವರ್ಣದ ಪಾದುಕೆಗಳು ಇದ್ದು ಈ ಪ್ರಕಾರ ಆ ಸಿದ್ದ ಸದ್ಗುರು ಮೂರ್ತಿಯು ಸಿಂಹಾಸನದ ಮೇಲೆ ಶೋಭಾಯಮಾನವಾಗಿ ಕಾಣಿಸುತ್ತಿತ್ತು. ಜಯ ಜಯಕಾರದಿಂದ ಭಕ್ತರೆಲ್ಲಾ ಗರ್ಜಿಸುವಂಥವರಾದರು. ಯಾರು ಮಂಗಳಾರತಿಯನ್ನು ಹಾಡುತ್ತಾ ಸದ್ಗುರುವಿಗೆ ಪಂಚಾರತಿಯನ್ನು ಎತ್ತಿದರು. ಹನುಮಂತನಾದರೂ ಆನಂದದಿಂದ ಬಹು ಶಕ್ತಿಯುಳ್ಳವನಾಗಿ ಕುಣಿಯಲಾರಂಭಿಸಿದನು. ಇದನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟು, “ಸದ್ಗುರು ಮಹಿಮೆಯು ಅಗಾಧವಾಗಿದೆ'' ಅನ್ನುವರು. ಪೂಜಾ ಸಮಾಪ್ತಿಯಾದ ಮೇಲೆ ತುಕ್ಕಪ್ಪನು ಸದ್ಗುರುಗಳನ್ನು ಕೈಹಿಡಿದು ಭೋಜನಕ್ಕೊಸ್ಕರ ಒಳಗೆ ಕರೆದುಕೊಂಡು ಹೋಗುವಂಥವನಾದನು. ಸರ್ವ ಭಕ್ತ ಮಂಡಳಿ ಭೋಜನಕ್ಕೆ ಕುಳಿತಿರುವಾಗ, ತಾರಾಂಗಣದ ಮಧ್ಯದಲ್ಲಿ ಚಂದ್ರನು ಶೋಭಿಸುವಂತೆ, ಆ ಭಕ್ತರ ನಡುವೆ ಸಿದ್ದ ಸದ್ದುರುವು ಶೋಭಿಸುವವನಾದನು. ಆತನ ಹಸ್ತ ಪ್ರಸಾದವನ್ನು ಬೇಡಲಿಕ್ಕೆ ಸಮೀಪ ಬರುವವರ ಮುಖದಲ್ಲಿ ಆತನು ಗ್ರಾಸವನ್ನು ಹಾಕುತ್ತಿದ್ದರು. ಈ ಪ್ರಕಾರ ಬಹಳ ಆನಂದದಿಂದ ಆ ಸಮಯದಲ್ಲಿ ಆ ಪ್ರೇಮ ಭೋಜನವು ನಡೆಯಿತು. ಸರ್ವ ಭೋಜನವಾದ ತರುವಾಯ, ಸದ್ಗುರುಗಳು ವಾಹನದ ಮೇಲೆ ಕುಳಿತು, ಮಠಕ್ಕೆ ತೆರಳುವಂಥವರಾದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
