ಸಿದ್ಧಾರೂಢರ ಮಹಾತ್ಮೆಯನ್ನು ಕೇಳಿ, ತಾಯಿಬಾಯಿಯು ದರ್ಶನಕ್ಕೆ ಬಂದಾಗ ನಳಿನಿಗೆ ತೀವ್ರ ಜ್ವರ ಬಂದಾಗ ರಾತ್ರಿಯೇ ಸದ್ಗುರುಗಳು ಪ್ರಕಟವಾಗಿ ಗುಣ ಮಾಡಿದ ಕಥೆ.
🌱ಸದ್ಗುರುಗಳ ಮಹಾತ್ಮೆಯನ್ನು ಕೇಳಿ, ತಾಯಿಬಾಯಿಯು ಸದ್ಗುರು ಬೆಟ್ಟೆಗೆ ಬಂದಾಗ ನಳಿನಿಗೆ ಜ್ವರ ಬಂದಿರುವಾಗ ರಾತ್ರಿಯೇ ಸದ್ಗುರುಗಳು ಪ್ರಕಟವಾಗಿ ಗುಣ ಮಾಡಿದ ಕಥೆ.
ತಾಯಿಬಾಯಿ ದಾಭೋಳಕರ ಎಂಬಾಕೆಗೆ ಸದ್ಗುರುನಾಥನ ಮೇಲೆ ದೃಢ ವಿಶ್ವಾಸವಿರುವದು. ಆಕೆಯು ಸಿದ್ಧ ಚಿಂತನೆಯಲ್ಲಿ ರಾತ್ರಿ ಹಗಲು ರಮಿಸುತ್ತಿರುವಳು. ಮುಂಬಯಿ ಶಹರಿನಲ್ಲಿ ವಾಸ ಮಾಡುತ್ತಿರುವಾಗ, ಒಂದಾನೊಂದು ದಿವಸ ಒಬ್ಬ ಸಾಧುವು ಮನೆಗೆ ಬಂದನು. ತಾಯಿಬಾಯಿಯು ಆಂತರ್ಯದೊಳಗೆ ಅತ್ಯಂತ ಸದ್ಭಾವವುಳ್ಳವಳಾಗಿ ಆ ಸಾಧುವಿಗೆ ಬಹಳ
ಸತ್ಕಾರ ಮಾಡಿದಳು. ತನ್ನ ಮಕ್ಕಳನ್ನು ಮೊಮ್ಮಕ್ಕಳನ್ನೂ ಕರೆದು ಆತನ ಪಾದಕ್ಕೆ ಹಾಕಿದಳು. ಆಗ ಆ ಸಾಧುವು
ಬಹಳ ಆನಂದಭರಿತನಾಗಿ ತಾಯಿಬಾಯಿಯನ್ನು ಕುರಿತು - “ಸಾಧುಗಳ ಮೇಲಿನ ನಿಮ್ಮ ಶ್ರದ್ಧಾ ನೋಡಿ ನಾನು ಮನಸ್ಸಿನಲ್ಲಿ ಅತ್ಯಂತ ಆನಂದ ಹೊಂದಿದೆನು, ಲೋಕದಲ್ಲಿ ನಿಮ್ಮಂಥಾ ಶ್ರೀಮಂತರಿಗೆ ಈ ಪ್ರಕಾರ ಭಕ್ತಿ ಇರುವುದು ಕ್ವಚಿತ್ತಾಗಿರುತ್ತದೆ. ಹಾಗಾದರೆ ನಿಮಗೆ ಒಂದು ಮಾತು ಹೇಳುವೆನು ಕೇಳಿರಿ, ಹುಬ್ಬಳ್ಳಿಯಲ್ಲಿ ಸದ್ಗುರುಗಳಾದ ಸಿದ್ಧಾರೂಢರು, ಭಕ್ತಸಖರಾಗಿದ್ದು, ಈ ಭೂಮಿಯಲ್ಲಿ ಬಹು ಪ್ರಸಿದ್ದರಾಗಿಯೂ ಅತ್ಯಂತ ಶ್ರೇಷ್ಠ ರಾಗಿಯೂ ಇರುವರು. ಅಸಂಖ್ಯ ಭಕ್ತ ಜನರು ಅವರೆಡೆಗೆ ಬಂದು, ಅವರ ಚರಣ ಸ್ಪರ್ಶದಿಂದ ಕೃತಕೃತ್ಯರಾಗಿ ಹೋಗುವರು. ಅವರ ಭಕ್ತರು ಏನೇನು ಮನೋರಥಗಳನ್ನು ಬಯಸುವರೋ ಅವುಗಳನ್ನು ಆತನ ಕೃಪೆಯಿಂದ ಕೂಡಲೇ ಹೊಂದುವರು. ಆತನ ರೂಪವು ಅತ್ಯಂತ ಮನೋಹರವಾಗಿದ್ದು ಇದು ಶಾಂತಿಯ ಸಾಗರವೋ ಎಂಬಂತೆ ಕಾಣಿಸುವದು, ಮುಖವನ್ನು ನೋಡಿದ ಮಾತ್ರದಿಂದ ತ್ರಿತಾಪಗಳೆಲ್ಲಾ ಆ ಕ್ಷಣವೇ ಪರಿಹಾರವಾಗುವವು. ಇದು ನೋಡಿರಿ. ಆತನ ಭಾವಚಿತ್ತವು.” ಎಂದು ಮನೋಹರವಾದ ಸಿದ್ಧರೂಪವನ್ನು ತೋರಿಸುವಂಥವನಾದನು. ಅದನ್ನು ನೋಡಿದ ಕೂಡಲೇ ತಾಯಿಬಾಯಿಗೆ ಮಹದಾನಂದವಾಗಿ, ಸಾಧುವನ್ನು ಕುರಿತು, -“ನೀವೇ ನಮಗೆ ಗುರು ರೂಪದಿಂದಿದ್ದು ನಿಜವಾದ ದೇವರನ್ನು ತೋರಿಸಿದಿರಿ. ಈಗ ನಮ್ಮ ಮೇಲೆ ಕೃಪಾ ಮಾಡಿ, ಆತನ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗಿರಿ,” ಎಂದು ಹೇಳಿದ್ದಕ್ಕೆ ಆ ಸಾಧುವು - “ನೀವು ಹೊರಡುವ ಸಿದ್ಧತೆಯನ್ನು ಮಾಡಿರಿ. ನಾನು ನಿಮ್ಮ ಕೂಡ ಬರುವೆನು, ಅಲ್ಲಿ ತನಕ ಇಲ್ಲೇ ಇರುವೆನು,” ಎಂದು ಉತ್ತರ ಕೊಟ್ಟನು. ಆ ಸಾಧುವಿಗೆ ಬಹಳ ಉಪಚಾರಗಳಿಂದ ಪೂಜಿಸಿ, ಮರುದಿನ ಹೊರಡುವದೆಂದು ನಿರ್ಣಯಿಸಿದರು.
ತಾಯಿಬಾಯಿಗೆ ಸದ್ಗುರು ಧ್ಯಾನವು ಹತ್ತಿ, ಒಂದು ಚಮತ್ಕಾರವಾಯಿತು. ಅದನ್ನು ಹೇಳುವೆನು ಕೇಳಿರಿ, ಹುಬ್ಬಳ್ಳಿಯಲ್ಲಿರುವ ಸಿದ್ದ ಸದ್ಗುರುವಿನ ಮೂರ್ತಿಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತ ತಾಯಿಬಾಯಿಯು ಆ ರಾತ್ರಿ ಹಾಸಿಗೆ ಮೇಲೆ ಮಲಗಿಕೊಂಡಳು. ಆಗ ಸ್ವಪ್ನದಲ್ಲಿ ಆಕೆಯು ಪ್ರತ್ಯಕ್ಷ ಶ್ರೀ ಗುರುನಾಥನನ್ನು ಕಾಣುವಂಥವಳಾದಳು. ತನ್ನೆದುರಿಗೆ ಬರುವುದನ್ನು ನೋಡಿ, ಆತನ ಹಸ್ತವನ್ನು ಹಿಡಿದು, ಒಂದು ಆಸನದ ಮೇಲೆ ಕೂಡ್ರಿಸಿದಳು. ಸದ್ಗುರುವಿನ ವಿಶೇಷವಾದ ತೇಜೋಭರಿತ ರೂಪವನ್ನು ನೋಡಿದ ಕೂಡಲೇ ಬಹಳ ಆನಂದವುಂಟಾಗಿ, ಹ್ಯಾಗೆ ಸದ್ಗುರು ರೂಪವನ್ನು ಆ ಸಾಧುವು ವರ್ಣಿಸಿದ್ದನೋ ಅದೇ ಪ್ರಕಾರ ಕಂಡಳು. ಆ ದಿವ್ಯ ರೂಪವನ್ನು ತಾಯಿಯು ನೋಡಿ, ತತ್ಕಾಲ ಆತನ ಪಾದಕ್ಕೆ ಬಿದ್ದಳು. ಆತನು ಆಕೆಯನ್ನು ಪ್ರೇಮದಿಂದ ಎಬ್ಬಿಸಿದನು. ಆಮೇಲೆ ತಾಯಿಬಾಯಿಯು ಪೂಜಾ ಸಾಮಗ್ರಿಗಳನ್ನು ತಂದು, ಬಹು ಪ್ರೇಮದಿಂದ ಸದ್ಗುರು ಪೂಜಾ ಮಾಡಿ - “ನನ್ನ ಮೇಲೆ ಕೃಪೆ ಮಾಡಿ, ಇದೇ ಪ್ರಕಾರ ನಿತ್ಯದಲ್ಲಿಯೂ ದರ್ಶನ ಕೊಡುತ್ತಿರಬೇಕು. ಇದೇ ವರದಾನ ನನಗೆ ಕೊಡಬೇಕೆಂಬುವದೇ ನನ್ನ ಪ್ರಾರ್ಥನೆ ಇರುತ್ತದೆ. ಇದರ ಹೊರತು ಬೇರೆ ಏನೇನು ಬೇಡುವುದಿಲ್ಲ” ಎಂದು ಹೇಳಿದ್ದು ಕೇಳಿ - ಸದ್ಗುರುವು ''ತಥಾಸ್ತು'' ಎಂದು ಹೇಳಿ ಅಂತರ್ಧಾನ ಹೊಂದಿದನು. ಈ ಪ್ರಕಾರ ಸ್ವಪ್ನ ನೋಡಿ,
ತಾಯಿಬಾಯಿಯು ಅತ್ಯಂತ ಆನಂದಭರಿತಳಾದಳು. ಪ್ರಾತಃಕಾಲದಲ್ಲಿ ಎಚ್ಚರವಾದ ಕೂಡಲೆ, ಎಲ್ಲರನ್ನೂ ಕರೆದು ತನ್ನ ಸ್ವಪ್ಪ ವೃತ್ತಾಂತವನ್ನು ಹೇಳಿ “ ಸದ್ಗುರುನಾಥನ ಮಹಿಮಾ ಏನು ನೋಡಿರಿ, ಅದು ವರ್ಣನಾತೀತವಾಗಿರುವದು,'' ಎಂದು
ಬಹು ಪ್ರೇಮದಿಂದ ಅಂದಳು. ಹೃದಯದಲ್ಲಿ ಅತ್ಯಂತ ಸದ್ಗುರು ಭಕ್ತಿಯು ಪೂರ್ಣವಾಗಿ, ಕ್ಷಣಕ್ಷಣಕ್ಕೆ ಸಿದ್ಧಮೂರ್ತಿಯು ಧ್ಯಾನದಲ್ಲಿ ಹೊಳೆಯುತ್ತಿದ್ದು, ಚಿತ್ತಕ್ಕೆ ಆನಂದವನ್ನುಂಟು ಮಾಡುತ್ತಿತ್ತು. ಎಲ್ಲರೂ ದರ್ಶನಕ್ಕೋಸ್ಕರ ಆತುರ ಪಡುತ್ತಿದ್ದರು. ಅದೇ ದಿವಸ ಗಾಡಿಯೊಳಗೆ ಕುಳಿತು ಸದ್ಗುರು ದರ್ಶನೋತ್ಸುಕರಾಗಿ, ಪ್ರೇಮದಿಂದ ಆತನನ್ನು ಸ್ಮರಿಸುತ್ತ ಮರುದಿವಸ ಹುಬ್ಬಳ್ಳಿಗೆ ಬಂದು ಇಳಿದರು.
ಹಿಂದಿನ ಅಧ್ಯಾಯದಲ್ಲಿ ಹೇಳಿತ್ತೇನಂದರೆ - ತುಕ್ಕಪ್ಪನ ಗೃಹದಲ್ಲಿ ಸಿದ್ದರನ್ನು ಮಂಟಪದಲ್ಲಿ ಕೂಡ್ರಿಸಿ, ಅವರ ಮುಂದೆ ಕೀರ್ತನ ನಡೆಯುತ್ತಿತ್ತು. ಇಲ್ಲಿಗೆ ಬಂದು ತಾಯಿಬಾಯಿಯು ಇಳಿದಳು. ಮಂಟಪದಲ್ಲಿ ಆ ದಿವ್ಯ ಮೂರ್ತಿಯನ್ನು ನೋಡಿ, ತಾಯಿಗೆ ಮನಸ್ಸಿನಲ್ಲಿ ಹಿಡಿಸಲಾರದಂಥಾ ಆನಂದವಾಯಿತು. ಆಕೆಯು ಧಾವಿಸಿ ಆತನ ಚರಣಗಳ ಮೇಲೆ ಬಿದ್ದು, ಅವನ್ನು ಘಟ್ಟಿಯಾಗಿ ಹಿಡಿದಳು, ಕಣ್ಣೊಳಗಿಂದ ಆನಂದಾಶ್ರುಪಾತವಾಗುತ್ತಿದ್ದು, ಅದ್ಭುತವಾದ ಪ್ರೇಮ ಉಳ್ಳವಳಾಗಿ, ಸದ್ಗುರು ಮುಖವನ್ನು ನೋಡುತ್ತ ನೋಡುತ್ತ, ಎಷ್ಟು ನೋಡಿದರೂ ಸಾಕು ಅನಿಸಲಿಲ್ಲ. ಆಗ ಸಿದ್ದರು - 'ಇವತ್ತು ಯಾವಲ್ಲಿಂದ ಆಗಮನವಾಯಿತು ?” ಎಂದು ಕೇಳಿದ್ದಕ್ಕೆ ತಾಯಿಬಾಯಿಯು - “ನಾವು ಮುಂಬೈವೂರಿನೊಳಗಿರುವವರು, ನಿಮ್ಮ ದರ್ಶನೆದ್ದೆಶೆಯಿಂದ ಬಂದಿರುವೆವು. ಸ್ವಪ್ನದಲ್ಲಿ ಬಂದು ನೀವು ದರ್ಶನವನ್ನು ಕೊಟ್ಟಿರಿ. ಆಗ ನಿಮ್ಮ ಪ್ರತ್ಯಕ್ಷ ದರ್ಶನಕ್ಕೊಸ್ಕರ ಮನಸ್ಸು ಬಹಳ ಉತ್ಕಂಠಿತವಾಗಿ, ತತ್ಕಾಲ ಹೊರಟು ಬಂದೆವು,'' ಎಂದು ನಮ್ರ ಭಾವದಿಂದ ಉತ್ತರ ಕೊಟ್ಟಳು. ಆಮೇಲೆ ಸದ್ಗುರುಗಳ ಪೂಜೆಯನ್ನು ನೋಡಿ, ತಾಯಿಬಾಯಿಯು ಬಹಳ ಆನಂದಪಟ್ಟು - “ಆಹಾ ಸದ್ಗುರುವಿನ ಕೃಪೆಯು ಎಷ್ಟಂತ ವರ್ಣಿಸಲಿ, ಇಂಥಾ ಪೂಜಾ ಕಾಲದಲ್ಲಿಯೇ ನಮ್ಮನ್ನು ಕರೆಸಿಕೊಂಡನು'' ಎಂದು ಗದ್ಗದಿತಳಾದಳು. ಭೋಜನವಾದ ಬಳಿಕ, ತಾಯಿ ಮತ್ತು ಆಕೆಯ ಮಂದಿಯನ್ನು ಕೂಡಿಕೊಂಡು ಸದ್ಗುರುಗಳ ಮಠಕ್ಕೆ ಹೋಗುವಂಥವರಾದರು. ಸಿದ್ದಾಶ್ರಮದಲ್ಲಿ ಕೆಲವು ದಿನ ಆನಂದದಿಂದ ವಾಸಿಸಿ, ಸದ್ಗುರು ಆಜ್ಞೆಯನ್ನು ತೆಗೆದುಕೊಂಡು, ತಾಯಿಬಾಯಿ ತನ್ನ ಮಂಡಳಿ ಸಮೇತ ತಮ್ಮೂರಿಗೆ ಹೋದಳು. ಅಂದಿನಿಂದ ಪ್ರತಿಯೊಂದು ಉತ್ಸವಕ್ಕೆ ತಾಯಿಬಾಯಿಯು ತನ್ನ ಮಕ್ಕಳು ಮರಿ ಎಲ್ಲರನ್ನೂ ಕರೆದುಕೊಂಡು ಮುಂಬಯಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದಳು ಮತ್ತು ಅವರನ್ನೆಲ್ಲಾ ಸದ್ಗುರು ಪಾದಕ್ಕೆ ಹಾಕಿ ಕೃತಕೃತ್ಯತೆಯನ್ನು ಹೊಂದುತ್ತಿದ್ದಳು.
ತಾಯಿಬಾಯಿಗೆ ಮೂರು ಮಂದಿ ಗಂಡುಮಕ್ಕಳು. ಅವರ ಪೈಕಿ ಎರಡನೇಯವನಾದ ಪ್ರಭಾಕರನೆಂಬವನಿಗೆ ನಲಿನಿಯಂಬ ಪುತ್ರಿಯು ಇರುವಳು. ಒಮ್ಮೆ ಎಲ್ಲ ಮನೆ ಮಂದಿಯನ್ನು ಕೂಡಿಕೊಂಡು, ತಾಯಿಬಾಯಿಯು ಹುಬ್ಬಳ್ಳಿಗೆ ಬಂದು ಸಿದ್ಧಾಶ್ರಮದಲ್ಲಿ ಉತ್ಸವದ್ದಶೆಯಿಂದ ಇರುತ್ತಿರುವಾಗ, ಏಳು ವರ್ಷ ವಯಸ್ಸಿನ ನಳಿನಿಗೆ ವಿಪರೀತವಾದ ಜ್ವರವೂ ಪೀಡಿಸಲಾರಂಭಿಸಿತು. ಮೂರು ದಿವಸಗಳವರೆಗೆ ಜ್ವರವು ಹೆಚ್ಚುತ್ತ ಹೋಗಿ, ಮೂರನೇ ದಿವಸ ರಾತ್ರಿ ಹೊತ್ತಿಗೆ ಹುಡುಗಿಗೆ ಪ್ರಾಣಾಂತವಾಗುತ್ತದೋ ಎಂಬಂತೆ ಕಂಡು ಬಂತು. ಔಷಧೋಪಾಯವು ಏನೇನೂ ಮಾಡಬಾರದೆಂದು ತಾಯಿಬಾಯಿಯ ಆಜ್ಞೆಯಾದ್ದರಿಂದ, ಸದ್ಗುರುಗಳ ಪಾದತೀರ್ಥದ ವಿನಹಾ ಎರಡನೇದೇನೂ ನಳಿನಿಗೆ ಕೊಡುತ್ತಿದ್ದಿಲ್ಲ. ಈ ಸಮಯದಲ್ಲಿ ಸಿದ್ದರು ಮಲಗಿ ನಿದ್ರಿಸುತ್ತಿದ್ದರು. ಆಗ ನಳಿನಿಯ ತಾಯಿಯು, ಅಳುತ್ತ, - '' ಹೇ ಸದ್ಗುರು ಮಾತೆಯೇ, ಹುಡುಗಿಯ ಪ್ರಾಣಾಂತಕಾಲ ಬಂತಲ್ಲ, ಏನು ಮಾಡಲಿ, ನಿನ್ನನ್ನು ಹ್ಯಾಗೆ ಎಬ್ಬಿಸಲಿ, ನೀನು ಸರ್ವಾಂತರದಲ್ಲಿ ವ್ಯಾಪಿಸಿರುತ್ತಿ. ಈ ಕಾಲದಲ್ಲಿ ಬೇಗನೆ ಬಂದು ಈ ಹುಡುಗಿಯನ್ನು ಎಬ್ಬಿಸುವವನಾಗು,'' ಎಂದು ಪ್ರಾರ್ಥಿಸುತ್ತಿರುವಾಗ ತಾಯಿಬಾಯಿಯು, -"ಸದ್ಗುರುರಾಯನೇ, ಸರ್ವರನ್ನು ನಿನ್ನ ಪಾದದ ಮೇಲೆ ಹಾಕಿರುತ್ತೇನೆ, ನಿನ್ನ ಬಿರುದು ವ್ಯರ್ಥವಾಗಿ ಹೋದೀತು. ಇದರ ಮೇಲೆ, ನೀನು ಏನು ಮಾಡತಕ್ಕದ್ದು ಅದನ್ನೇ ಮಾಡು'' ಎಂದು ದೀನವಾಣಿಯಿಂದ ಅನ್ನುತ್ತಿದ್ದಳು. ಇತ್ತ ಸದ್ಗುರುಗಳು ನಿದ್ರೆಯೊಳಗಿಂದ ಎಚ್ಚತ್ತು ಬಹಳ ಗಡಿಬಿಡಿಯಿಂದ ಪಾದಗಳಿಗೆ ಜೋಡುಗಳನ್ನು ಹಾಕಿಕೊಂಡು ಮುಂಬಯಿಯವರು ಇಳಿದ ಸ್ಥಾನಕ್ಕೆ ಪ್ರಾಪ್ತರಾದರು. ಅವರು ಬರುವದನ್ನು ತಾಯಿಬಾಯಿಯು ನೋಡಿ, ತತ್ಕಾಲವೇ
ಸಾಷ್ಟಾಂಗ ನಮನವನ್ನು ಮಾಡಿ, “ಹೇ ದಯಾಳುವಾದ ಸದ್ಗುರುನಾಥನೇ, ನಿನಗೆ ಈ ಸಮಯದಲ್ಲಿ ಯಾರು ಎಬ್ಬಿಸಿರಬಹುದು ?” ಎಂದು ಅಂದದ್ದು ಕೇಳಿ, ಸಿದ್ದರು - “ನಿಮ್ಮ ಆರ್ತಸ್ವರವು ಕಿವಿಯಲ್ಲಿ ಬಿದ್ದ ಕೂಡಲೇ ನಾನು
ಶೀಘ್ರವಾಗಿ ಬಂದೆನು. ನಲಿನಿಯು ಎಲ್ಲಿರುವಳು, ಬೇಗನೇ ನನಗೆ ತೋರಿಸು,” ಎಂದು ನುಡಿದರು. ಸಿದ್ದರಿಗೆ ಕೈಹಿಡಿದು, ತಾಯಿಬಾಯಿಯು ನಲಿನಿಯು ಮಲಗಿದ್ದಲ್ಲಿ ಕರೆದುಕೊಂಡು ಬಂದಳು. ಆ ಹುಡುಗಿಯನ್ನು ಸದ್ಗುರುಗಳು ಕೃಪಾದೃಷ್ಟಿಯಿಂದ ನೋಡಿ, -“ನೀವು ಸ್ವಸ್ಥ ಚಿತ್ತದಿಂದಿರ್ರಿ . ಈಗಲೇ ನಳಿನಿಯು ನೆಟ್ಟಗಾಗುವಳು," ಎಂದು ಅನ್ನುವಾಗ, ತಾಯಿಯು ಆಕೆಯನ್ನು ಸಿದ್ದರ ಪಾದದ ಮೇಲೆ ಹಾಕಿದಳು. ಅನಂತರ ಸದ್ಗುರುಗಳು ಶಯನಕ್ಕೆ ತೆರಳಿದರು. ತಾಯಿಬಾಯಿಗೆ ಈಗ ಧೈರ್ಯ ಬಂತು. ಅಷ್ಟರಲ್ಲಿ ನಳಿನಿಯು ಎದ್ದು ಕೂತಿದ್ದು ನೋಡಿ, ತಾಯಿಗೆ ಬಹಳ ಆನಂದವಾಯಿತು. ಇಂಥಾ ಸದ್ಗುರು ಮಹಾರಾಜರು ಭಕ್ತ ಕಾರ್ಯ ಮಾಡುವದಕ್ಕೆ ಯಾವಾಗಲೂ ಜಾಗೃತರಾಗಿರುತ್ತಿರುವರು. ಭಕ್ತರ ಸುಖವೇ ಅವರು ಸುಖವು, ಭೇದ ಭಾವವೇ ಅವರಿಗಿರುವದಿಲ್ಲ.
👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
