ಗರ್ಭನಿಲ್ಲದ ದಾನವ್ವ ಸದ್ಗುರು ದಯೆಯಿಂದ ಹಡೆದಾಗ , ಸದ್ಗುರುಗಳು ಕೂಸನ್ನು ತೆಗೆದುಕೊಂಡು ಹೋದ ಕಥೆ .
🌳 ಗರ್ಭನಿಲ್ಲದ ದಾನವ್ವ ಸದ್ಗುರು ದಯೆಯಿಂದ ಹಡೆದಾಗ , ಸದ್ಗುರುಗಳು ಕೂಸನ್ನು ತೆಗೆದುಕೊಂಡು ಹೋದರು. ಆಮೇಲೆ ಆಕೆಯನ್ನು ಅನುಗ್ರಹಿಸಿ ಎರಡನೇ ಪುತ್ರನನ್ನು ಕೊಟ್ಟರು.
ಕುರಂದಕೊಪ್ಪನಂಬ ಮನೋಹರವಾದ ಗ್ರಾಮದಲ್ಲಿ ಬಸಪ್ಪನೆಂಬ ಹೆಸರಿನ ಚತುರನಾದ ಗೃಹಸ್ಥನಿರುವನು. ಆತನಿಗೆ ದಾನವ್ವ ಎಂಬ ಪತ್ನಿಯು ಇದ್ದಳು. ಆಕೆಯು ಗರ್ಭಿಣಿಯಾಗಿ ನವಮಾಸ ತುಂಬುತ್ತಿರುವಾಗ ಬಸಪ್ಪನಿಗೆ ಬಹಳ ಹರ್ಷವಾಯಿತು. ಅದು ಪ್ರಥಮ ಗರ್ಭವೆಂದು ಆ ದಂಪತಿಗಳಿಗೆ ವಿಶೇಷ ಆನಂದವಾಗಿರುವದು. ಆದರೆ ಒಂಭತ್ತು ತಿಂಗಳು ಆದ ಮೇಲೆ ಪ್ರಸೂತಿಯಾಗದೆ ಗರ್ಭವು ತನ್ನಷ್ಟಕ್ಕೆ ಜೀರ್ಣವಾಗಿ ಹೋಯಿತು. ಕಾಲಾಂತರದಲ್ಲಿ ಪುನಹ ಗರ್ಭ ಚಿನ್ಹೆಗಳು ಕಂಡುಬಂದು, ಇನ್ನೊಮ್ಮೆ ಒಂಭತ್ತು ತಿಂಗಳು ಆಗುತ್ತಲೆ ಗರ್ಭವು ಅಲ್ಲಿಂದಲೇ ಜೀರ್ಣವಾಯಿತು. ಮೂರನೇ ಸರ್ತಿ ಗರ್ಭಿಣಿಯಾದಳು. ಈ ಸಮಯದಲ್ಲಿ, ಒಬ್ಬ ಸ್ತ್ರೀಯು ದಾನವ್ವನಿಗೆ ಬೆಟ್ಟಿಯಾಗಿ, ಆಕೆಯ ವೃತ್ತಾಂತವನ್ನು ಸಂಪೂರ್ಣವಾಗಿ ಕೇಳಿಕೊಂಡು, ಆಕೆಗೆ ಅನ್ನುತ್ತಾಳೆ- “ಈ ಪ್ರಕಾರ ಎರಡು ಸರ್ತಿ ಗರ್ಭಿಣಿಯಾಗಿ ಒಂಬತ್ತು ತಿಂಗಳಾದರೂ, ಪ್ರಸವಳಾಗದೆ ಇರುವುದು, ಬಹಳ ಅಪೂರ್ವವಾಗಿರುವದು. ಅದ್ದರಿಂದ ನೀವಿಬ್ಬರೂ ಹೀಗೆ ಮಾಡಿರಿ. ಹುಬ್ಬಳ್ಳಿ ಶಹರದೊಳಗೆ ಸಿದ್ಧಾಶ್ರಮವೆಂಬಲ್ಲಿ ಸಿದ್ಧಾರೂಢ ಸ್ವಾಮಿಯವರಿರುವರು. ಭಕ್ತ ಸಂಕಟ ನಿವಾರಣಾ ಮಾಡುವುದರಲ್ಲಿ ಅವರು ಯಾವಾಗಲೂ ಜಾಗ್ರತರಾಗಿರುವರು. ಭಕ್ತರ ಸಂಕಷ್ಟಗಳನ್ನು ಪರಿಹರಿಸಿ, ಅವರಿಗೆ ಕಲ್ಯಾಣ ಮಾಡುವರು. ನೀವು ದಂಪತಿಗಳು ಅವರ ಕಡೆಗೆ ಹೋಗಿ, ಅವರಿಗೆ ಪ್ರಾರ್ಥಿಸಿ, ನಿಮ್ಮ ವೃತ್ತಾಂತವನ್ನು ಹೇಳಿರಿ. ಆತನು ಬಹು ದಯಾವಂತನಾದ ಸದ್ಗುರು ಇದ್ದು, ಭಕ್ತಿ ಕರುಣಾಕರನಿದ್ದಾನೆ. ಆತನನ್ನು ವರ್ಣಿಸಲು ಸಾಧ್ಯವಿಲ್ಲ. ಅವನೊಬ್ಬನೇ ಜಗದ್ಗುರು ಇರುವನು. ನೀವು ಆತನಿಗೆ ನಿಮ್ಮ ಸಂಕಟವನ್ನು ನಿವೇದಿಸಿ, ಪುತ್ರ ಬೇಕೆಂದು ಬೇಡಿದರೆ ಆ ಕರುಣಾಕರನು ಅದಕ್ಕೋಸ್ಕರ ತತ್ಕಾಲವೇ ಉಪಾಯ ಮಾಡಿದನು.” ಇದನ್ನು ಕೇಳಿ ದಾನವ್ವ ಅನ್ನುತ್ತಾಳೆ- "ಹಾಗಾದರೆ, ನಮಗೆ ಪುತ್ರನನ್ನು ಕೊಡುವದಕ್ಕಾಗಿ, ಅವರು ಏನು ತೆಗೆದುಕೊಂಡಾರು? ಇದನ್ನು ನನಗೆ ಹೇಳುವಂಥವಳಾಗು, ನಾವು ಶ್ರೀಮಂತರಾಗಿದ್ದು ಅವರಿಗೆ ಬೇಕಾದಷ್ಟು ದ್ರವ್ಯವನ್ನು ಕೊಡಲಿಕ್ಕೆ ಸಮರ್ಥರಿದ್ದೇವೆ'' ಅದಕ್ಕೆ ಆ ಸ್ತ್ರೀಯು “ಆತನು ದ್ರವ್ಯ ಬೇಡುವದಿಲ್ಲ. ಆತನಿಗೆ ನಿರ್ಮಲವಾದ ಚಿತ್ತವೊಂದೇ ಬೇಕಾಗುವುದು. ಶುದ್ಧ ಚಿತ್ತದಿಂದೊಡಗೂಡಿ ಆತನಿಗೆ ಶರಣು ಬಂದವರಿಗೆ ಬೇಡಿದ್ದನ್ನು ಕೊಡುವನು. ಶ್ರೀಮಂತನಿದ್ದಾನೋ ದರಿದ್ರನಿದ್ದಾನೋ ಎಂಬುದು ನೋಡದೇ, ದುಃಖಿತನಿದ್ದವನ ದುಃಖವನ್ನು ಪರಿಹರಿಸುವನು", ಎಂದು ಅಂದಳು. ಈ ವಚನ ಕೇಳಿ ದಾನವ್ವ ಬಹಳ ಆನಂದಪಟ್ಟು - ''ಹೇ ಸ್ತ್ರೀಯೇ ನೀನು ಸದ್ಗುರುವೇ ಆಗಿ ನಮ್ಮ ಉದ್ಧಾರಾರ್ಥ ಬಂದಿರುವಿ'' ಎಂದು ಆಕೆಯನ್ನು ಉಪಚರಿಸಿ ಕಳುಹಿಸಿದಳು. ಆಮೇಲೆ ದಾನವ್ವ ತನ್ನ ಪತಿಯನ್ನು ಕುರಿತು, ಎಲ್ಲ ಸಂಗತಿಯನ್ನು ಹೇಳಿ, ಅನ್ನುತ್ತಾಳೆ -" ಇವತ್ತೇ ಹೊರಟು ಹುಬ್ಬಳ್ಳಿಗೆ ಹೋಗಿ ಸಿದ್ಧಾರೂಢ ಸದ್ಗುರುಗಳ ದರ್ಶನವನ್ನು ತೆಗೆದುಕೊಳ್ಳೋಣ'' ಸದ್ಗುರುಗಳಿಗೆ ಅರ್ಪಿಸಲಿಕ್ಕೆ ಫಲಾದಿ ವಸ್ತುಗಳನ್ನು ತೆಗೆದುಕೊಂಡು ಗ್ರಾಮದಿಂದ ಹೊರಟು, ಸಂಜೆ ಹೊತ್ತಿಗೆ ಸಿದ್ಧಾಶ್ರಮಕ್ಕೆ ಬಂದು ಮುಟ್ಟಿದರು. ಬರುವಾಗ ದೂರದಿಂದಲೇ ಆ ಸತೇಜವಾದ, ಸದ್ಗುರುಮೂರ್ತಿಯನ್ನು ನೋಡುವಂಥವರಾದರು. ಸದ್ಗುರುಗಳ ಎರಡೂ ಪಾರ್ಶ್ವಗಳಲ್ಲಿ ಭಕ್ತ ಜನರು ಸಾಲಾಗಿ ನಿಂತು, ಆನಂದದಿಂದ ಭಜನೆ ಮಾಡುತ್ತಿದ್ದರು. ಮೇಲೆ ಕರ್ಪೂರ ಜ್ಯೋತಿಯನ್ನು ಹಚ್ಚಿ, ಎಲ್ಲರೂ ಸುಸ್ವರದಿಂದ ಮಂಗಳಾರತಿಯನ್ನು ಹಾಡಿದರು. ಆ ಆನಂದಕ್ಕೆ ಗಣನೆ ಇಲ್ಲದಂತಾಯಿತು. ನಂತರ ಸ್ತ್ರೀಪುರುಷ ಭಕ್ತ ಜನರೆಲ್ಲರೂ, ಸದ್ಗುರು ಮುಂದೆ ಸಾಷ್ಟಾಂಗ ನಮಸ್ಕಾರಗಳನ್ನು ಹಾಕಿ ಆತನ ಆಜ್ಞೆಯನ್ನು ಪಡೆದುಕೊಂಡು, ತಮ್ಮ ತಮ್ಮ ಸ್ವಸ್ಥಾನಕ್ಕೆ ಹೋಗುವಂಥವರಾದರು. ಬಸಪ್ಪಾ ಮತ್ತು ದಾನವ್ವಾ ಓಡುತ್ತ ಬಂದು, ಅತ್ಯಾನಂದದಿಂದ ಗುರುಚರಣಕ್ಕೆ ಬಿದ್ದು, ಫಲಾದಿ ವಸ್ತುಗಳನ್ನು ಮುಂದಿಟ್ಟು ನಿಂತುಕೊಂಡರು. ಇವರನ್ನು ನೋಡಿ ಸದ್ಗುರುಗಳು - "ಯಾವ ಕಾರ್ಯಕ್ಕೋಸ್ಕರ ಇಲ್ಲಿಗೆ ಬಂದಿರುವಿರಿ ?' ಎಂದು ಕೇಳಲಾಗಿ, ಬಸಪ್ಪನು ಬಹುದೈನ್ಯ ಭಾವದಿಂದ ಅನ್ನುತ್ತಾನೆ. - “ಈ ನನ್ನ ಸ್ತ್ರೀಯು ಎರಡು ವೇಳೆ ಗರ್ಭಿಣಿಯಾದಳು. ಆದರೆ ನವಮಾಸಾಂತ್ಯದಲ್ಲಿ ಗರ್ಭವು ಜೀರ್ಣವಾಗಿ ಹೋಗುವಂಥದ್ದಾಯಿತು. ಈಗ ಮೂರನೇ ಸರ್ತಿ ಗರ್ಭಿಣಿಯಾಗಿರುತ್ತಾಳೆ. ಈ ಸಾರಿಯಾದರೂ ಈಕೆಯಲ್ಲಿ ಪುತ್ರೋತ್ಪತ್ತಿಯಾಗಬೇಕೆಂದು ಇಚ್ಛಾ ಹಿಡಿದು ತಮ್ಮ ಚರಣಕ್ಕೆ ಬಂದಿರುತ್ತೇವೆ. ಆದ್ದರಿಂದ, ಹೇ ಸ್ವಾಮಿ, ನನ್ನ ಮೇಲೆ ಕೃಪೆ ಮಾಡಬೇಕು''. ಆಗ ಸದ್ಗುರುವು ತನ್ನೊಳಗೆ ವಿಚಾರಿಸಿ ಮೃದು ವಚನವನ್ನು ನುಡಿಯುವಂಥವನಾದನು - “ ಬಸಪ್ಪನೇ ನೀನು ಮಹಾಪುಣ್ಯವಂತನು. ಈಕೆಯ ಹೊಟ್ಟೆಯಲ್ಲಿ ಪುತ್ರನು ಹುಟ್ಟುವನು. ಆತನು ಮಹಾ ತಪೋನಿಧಿಯಾಗಿದ್ದು, ಅವನಿಗೆ ಉಪಾಧಿಯು ಸೇರದಿರುವದರಿಂದ, ಹುಟ್ಟಿದ ಕೂಡಲೇ, ಆತನು ಸಾಧುಗಳ ಮಧ್ಯದಲ್ಲಿ ಹೋಗಿರುವನು. ನಿಮಗೂ ಆತನಿಗೂ ಎಂದೂ ಭೆಟ್ಟಿಯಾಗಲಿಕ್ಕಿಲ್ಲ” ಪುತ್ರನಾಗುವನು, ಎಂಬ ವಚನವನ್ನು ಕೇಳಿ, ಆ ದಂಪತಿಗಳು ಮನಸ್ಸಿನಲ್ಲಿ ಆನಂದಪಟ್ಟರು. ಸಿದ್ಧಾರೂಢರು ಅವರಿಗೆ ಭೋಜನವನ್ನು ಮಾಡಿಸಿ ಊರಿಗೆ ಕಳುಹಿಸುವಂಥವರಾದರು. ಇಬ್ಬರೂ ಸ್ವಗೃಹಕ್ಕೆ ಬಂದು ಅಂದಿನಿಂದ ಸದ್ಗುರು ಚಿಂತನೆಯನ್ನು ಮಾಡುತ್ತ ಆನಂದದಿಂದ ಕಾಲ ಕಳೆಯುತ್ತಿರುವಾಗ, ಒಂದು ಚಮತ್ಕಾರವಾಯಿತು. ಒಂದಾನೊಂದು ರಾತ್ರಿ ಕಾಲದಲ್ಲಿ ದಾನವ್ಯಾ ಹಾಸಿಗೆಯ ಮೇಲೆ ಮಲಗಿಕೊಂಡು ನಿದ್ದೆ ಮಾಡುತ್ತಿರುವಾಗ ಒಂದು ವಿಚಿತ್ರವಾದ ಸ್ವಪ್ನ ಬಿತ್ತು. ಆಕೆಗೆ ಸ್ವಪ್ನದಲ್ಲಿ ಪ್ರಸವವೇದನೆಯುಂಟಾಗಿ, ಸಿದ್ದಾರೂಢ ಸದ್ಗುರುನಾಮ ಉಚ್ಛರಿಸಿದ ಮಾತ್ರದಿಂದ ಆತನನ್ನು ತನ್ನ ಮುಂದೆ ನೋಡುವಂಥವಳಾದಳು. ಆತನು ಕೃಪಾಕಟಾಕ್ಷದಿಂದ ನೋಡುತ್ತಿರುವಾಗ ದಾನವ್ಯಾ ಪ್ರಸವಿಸಿದಳು. ಆಗ ಸದ್ಗುರುವು ಆ ಕೂಸನ್ನು ಎತ್ತಿಕೊಂಡು, ಅನ್ನುತ್ತಾನೆ - "ಹೇ ಪತಿವ್ರತಾ ಸ್ತ್ರೀಯೆ, ಇದು ಬರೇ ಸ್ವಪ್ನವೆಂದು ತಿಳಿಯಬೇಡ, ನಿನ್ನ ಮಗುವನ್ನು ನಾನು ತೆಗೆದುಕೊಂಡು ಹೋಗಿ, ಎರಡನೇ ಸ್ಥಾನದಲ್ಲಿ, ಸಾಧು ಸತ್ಪುರುಷರ ಪಾಲನೆಯೊಳಗೆ ಇಡುವೆನು. ನಿಮಗೋಸ್ಕರ ಎರಡನೇ ಪುತ್ರನನ್ನು ಕೊಡುವೆನು. ಇದನ್ನು ನಿಶ್ಚಯವಾಗಿ ನಂಬಿರು. ನೀವು ಏನೂ ಚಿಂತಾ ಮಾಡಬೇಡಿರಿ. ಸದ್ಗುರು ಚಿಂತನೆಯನ್ನು ಮಾಡುತ್ತಾ ಇದ್ದೀರೆಂದರೆ ವರ್ಷಾಂತ್ಯದಲ್ಲಿ ಎರಡನೇ ಪುತ್ರನು ಜನಿಸುವನು''. ಆಕೆಗೆ ಈ ಪ್ರಕಾರ ಆಶೀರ್ವಚನವನ್ನು ಕೊಟ್ಟು, ಸಿದ್ಧರಾಯರು ಅದೃಶ್ಯರಾದರು. ದಾನವ್ವಾ ಈ ಸ್ವಪ್ನವನ್ನು ಕಂಡು, ಕೂಡಲೇ ಎಚ್ಚರವಾಗಿ ನೋಡಿದರೆ, ಪ್ರಸೂತಿ ಚಿನ್ಹೆಗಳನ್ನು ಕಾಣುವಂಥವಳಾದಳು. ಆಗ ಸಮೀಪ ಮಲಗಿದ್ದ ಇತರ ಸ್ತ್ರೀಯರನ್ನು ಎಬ್ಬಿಸಿದಳು. ಅವರು ಎದ್ದು ಬಂದು ನೋಡಿ, ಬಹಳ ಆಶ್ಚರ್ಯಪಟ್ಟು, ಎಲ್ಲಿ ನೋಡಿದರೂ ಕೂಸು ಕಾಣಿಸದೇ ಇದ್ದದರಿಂದ, ಅವರಿಗೆ ಬಹಳ ಚಮತ್ಕಾರವೆನಿಸಿತು. ಬಸಪ್ಪನು ಈ ವರ್ತಮಾನವನ್ನು ಕೇಳಿ ಓಡಿಬಂದನು. ಎಲ್ಲರೂ ಕೂಸನ್ನು ಹುಡುಕುತ್ತಿರುವರು. ದಾನವ್ವಾ ಆತನನ್ನು ಕುರಿತು ಸ್ವಪ್ನವಾರ್ತೆಯನ್ನು ಹೇಳಿ - “ ಸದ್ಗುರುನಾಥನೇ ಕೂಸು ತಗೊಂಡನು” ಅಂದಳು. ಎಲ್ಲಾ ಆಗುವಂಥಾದ್ದು ಮೊದಲೇ ತಿಳಿದಿದ್ದರಿಂದ ಬಸಪ್ಪನು ವೃಥಾ ಚಿಂತಾ ಮಾಡಲಿಲ್ಲ. ದಾನವ್ವಗೆ ಕೆಲವು ದಿನ ಚಿಂತೆ ಇತ್ತು. ಆದರೆ ಅದೂ ಕಾಲ ಕೂಡಿ ಹೋಯಿತು. ಕೆಲವು ದಿವಸಗಳಾದ ಮೇಲೆ, ಆ ದಂಪತಿಗಳು ಸಿದ್ಧಾರೂಢರ ಕಡೆಗೆ ಹೋಗಿ, ನಡೆದ ವೃತ್ತಾಂತವನ್ನೆಲ್ಲಾ, ನಿವೇದಿಸಿದರು. ಅದನ್ನು ಕೇಳಿ ಸಿದ್ಧರು- '' ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ಪುರುಷನು ಪುನರ್ಜನ್ಮಕ್ಕೆ ಬಂದ ಮಹಾ ತಪಸ್ವಿ ಇರುವನು. ಆತನಿಗೆ ಸತ್ಸಂಗ ಬೇಕಾಗಿರುವದರಿಂದ, ಒಂದು ಪವಿತ್ರ ಸ್ಥಾನಕ್ಕೆ ಕಳುಹಿಸಲ್ಪಟ್ಟಿರುವನು. ಪವಿತ್ರವಾದ ಇನ್ನೊಬ್ಬ ಪುತ್ರನು ಹುಟ್ಟಿ ನಿಮ್ಮಲ್ಲೇ ಇರುವನು", ಎಂದು ಆ ದೀನಮಿತ್ರರಾದ ಸದ್ಗುರುಗಳು ಅಂದಿದ್ದು ಕೇಳಿ, ಆ ದಂಪತಿಗಳಿಗೆ ಅಪಾರವಾದ ಆನಂದ ಉಂಟಾಗುವಂಥಾದ್ದಾಯಿತು. ಆಗ ಅವರು ಸದ್ಗುರುಗಳಿಗೆ ನಮಸ್ಕರಿಸಿ, ಆತನ ಚಿಂತನೆಯನ್ನು ಮಾಡುತ್ತಾ ಸ್ವಗ್ರಾಮಕ್ಕೆ ಹೋದರು. ಮನೆಯಲ್ಲಿ ಆನಂದದಿಂದಿರುತ್ತಿರುವಾಗ, ದಾನವ್ವ ಪುನಃ ಗರ್ಭವತಿಯಾಗಿ, ನವಮಾಸಾಂತ್ಯದಲ್ಲಿ ದಿವ್ಯ ಪುತ್ರನನ್ನು ಹಡಿಯುವಂಥವಳಾದಳು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
