ಸಿದ್ಧಾರೂಢರ ಮಹಾತ್ಮೆ ಕೇಳಿ ದ್ವಾರಕೆಯಿಂದ ಬಂದ ಗೋವಿಂದಾನಂದ ಕಥೆ

 🌼ಕೃಷ್ಣನಿಗೆ ತಂದೆಯು ಕಟ್ಟಿ ಹಾಕಿರುವಾಗ ಶ್ರೀರಾಮನು ಆತನಿಗೆ ದರ್ಶನ ಕೊಟ್ಟನು . ಆ ಗೋವಿಂದಾನಂದನು ಸಿದ್ಧಾರೂಢರ ಮಹಾತ್ಮೆ  ಕೇಳಿ ಅವರಿಗೆ ಬಂಧು ಭೆಟ್ಟಿಯಾದರು.



ಮಹಾ ಕ್ಷೇತ್ರವಾದ ಹರಿದ್ವಾರದಲ್ಲಿ ಒಬ್ಬ ಚತುರನಾದ ಬ್ರಾಹ್ಮಣನಿರುವನು. ಅವನಿಗೆ ಕೃಷ್ಣನೆಂಬ ಹೆಸರಿನ ಒಬ್ಬನೇ ಮಗನಿರುವನು. ಆ ಬ್ರಾಹ್ಮಣನು ಗೃಹದಲ್ಲಿ ನಿತ್ಯ ತುಲಸೀದಾಸಕೃತ ರಾಮಾಯಣವನ್ನು ಓದುತ್ತಿರುವಾಗ, ಕೃಷ್ಣನು ಅತ್ಯಾದರದಿಂದ ಶ್ರವಣ ಮಾಡುತ್ತ, ತಲ್ಲಿನ ಚಿತ್ತನಾಗಿರುತ್ತಿದ್ದನು. ಸಾಧು ಸತ್ಪುರುಷರ ಕಥೆಗಳನ್ನು ಸಹಾ ಆಗಾಗ ಕೇಳಿ, ಬಹು ಆನಂದ ಪಡುತ್ತಿದ್ದನು. ಹೀಗಾಗಿ ಆತನಿಗೆ ಸಾಧುಗಳ ಮೇಲೆ ಬಹಳ ಶ್ರದ್ಧಾ ಉತ್ಪನ್ನವಾಗಿ, ಅವರ ಸೇವೆ ಮಾಡುವುದಕ್ಕೆ ಇಚ್ಛಿಸುತ್ತಿದ್ದನು. ಸಂತ ಜನರ ಭಕ್ತರಾಗಿದ್ದ ಕಬೀರದಾಸರ ಚರಿತ್ರವನ್ನು ಕೇಳಿ, ಕೃಷ್ಣನಿಗೆ ಕಣ್ಣೊಳಗಿಂದ ನೀರು ಸುರಿಯುತ್ತಿದ್ದವು, ಮತ್ತು ಅವರಂತೆ ತಾನು ಆಗಬೇಕೆಂದು ನಿಶ್ಚಯಿಸಿದನು. ನಿತ್ಯವೂ ಗಂಗಾನದಿಯ ತೀರಕ್ಕೆ ಹೋಗಿ, ಅಲ್ಲಿರುವ ಸಾಧುಗಳ ಸೇವೆ ಮಾಡುತ್ತಾ, ಬಹು ಪ್ರೇಮದಿಂದ ಅವರ ಹತ್ತಿರದಲ್ಲೇ ಯಾವಾಗಲೂ ಕೂಡ್ರುತ್ತಿದ್ದನು. ವಿದ್ಯಾಭ್ಯಾಸವನ್ನು ತಪ್ಪಿಸಿ, ಸೇವಾ ಮಾಡುವುದರಲ್ಲಿ ಬಹಳ ಆದರ ಯುಕ್ತನಾಗಿದ್ದನು. ಇದನ್ನು ನೋಡಿ ಆತನ ಹಿರಿಯರಿಗೆ ಬಹಳ ಚಿಂತೆ ಹತ್ತಿತು. ಕೃಷ್ಣನಿಗೆ ಹತ್ತು ವರ್ಷ ವಯಸ್ಸಾದಾಗ, ವಿದ್ಯಾಭ್ಯಾಸವನ್ನು ಪೂರ್ಣ ಮಾಡೆಂದು, ತಾಯಿ ತಂದೆಗಳು ಹೇಳುತ್ತಿದ್ದರೆ ಇವನು ಅವರ ಮಾತಿಗೆ ಕಿವಿಗೊಡುತ್ತಿದ್ದಿಲ್ಲ. ಯಾರಾದರೂ ಸಾಧುಗಳು ಭೆಟ್ಟಿಯಾದರೆ, ಅವರನ್ನು ಊಟಕ್ಕೆ ಮನೆಗೆ ಕರೆದುಕೊಂಡು ಬರುವನು. ಕೆಲವು ಸಾರಿ ಹೀಗೆ ಮಾಡಿದ ಮೇಲೆ, ತಂದೆಯು ಕೃಷ್ಣನಿಗೆ ಒಮ್ಮೆ ಹೇಳುತ್ತಾನೆ- “ಸಾಧುಗಳನ್ನು ಮನೆಗೆ ಕರೆದುಕೊಂಡು ಬರುವ ಕೆಲಸವನ್ನು ನೀನು ಮಾಡಬಾರದು. ಈ ಪ್ರಕಾರ ನೀನು ಮಾಡುವುದರಿಂದ, ನಿನ್ನ ದೆಶೆಯಿಂದ ಬಹಳ ತ್ರಾಸ ಅನಿಸುವದು ಮತ್ತು ನಿನ್ನ ಸಾಧುವನ್ನು ನಾನು ಹೊರಗೆ ಕಳುಹಿಸುವೆನು  ನೋಡು'' ಈ ಪ್ರಕಾರ ತಂದೆಯೂ ಅಂದದ್ದು ಕೇಳಿ, ಕೃಷ್ಣನಿಗೆ ಬಹಳ ಚಿಂತೆಯುಂಟಾಗಿ, ರಾತ್ರಿ ನಿದ್ದೆ ಬರುತ್ತಿರಲಿಲ್ಲ.


ಒಮ್ಮೆ ಗಂಗಾತೀರಕ್ಕೆ ಹೋದಾಗ, ಅಲ್ಲಿ ಒಬ್ಬ ಸಾಧು ಬಿದ್ದಿರುವದನ್ನು ನೋಡಿ, ಅವನ ಸಮೀಪಕ್ಕೆ ಹೋಗಿ, ವಿಚಾರಿಸಿದಾಗ, ಆತನು ಅನ್ನುತ್ತಾನೆ- “ನನಗೆ ಏನೇನು ಆಹಾರ ಸಿಗಲಿಲ್ಲ. ನಾನು ಅನ್ನ ಉಣ್ಣುವದಿಲ್ಲ. ಬರೇ ಹಾಲು ಕುಡಿದು ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತೇನೆ. ಅದರ ಹೊರ್ತು ಮತ್ತ್ಯಾವ  ಆಹಾರವನ್ನು ನಾನು ಸೇವಿಸುವದಿಲ್ಲ.” ಕೃಷ್ಣನು ಮನೆಗೆ ಹೋಗಿ ನೋಡಿದರೆ ಹಾಲು ಇದ್ದಿಲ್ಲ. ಇದರಿಂದ ಆತನಿಗೆ ಬಹಳ ಚಿಂತೆಯಾಯಿತು. ಆಗ ಏನು

ಮಾಡಿದರೆಂದರೆ - ಸಾಧುಗೋಸ್ಕರ ಹಾಲು ತರಲಿಕ್ಕೆ ತನ್ನ ತಂದೆಯ ಹಣವನ್ನು ಕದ್ದುಕೊಂಡು ಪೇಟೆಗೆ ಹೋಗಿ, ಹಾಲು ಕೊಂಡುಕೊಂಡು, ಆ ಸಾಧುವಿಗೆ ಕೊಡುವಾಗ, ಅಕಸ್ಮಾತ್ತಾಗಿ ಆತನ ತಂದೆಯು ನೋಡಿ, ಕೃಷ್ಣನಿಗೆ “ ಅದೆಲ್ಲಿಯದು ?”

ಎಂದು ಕೇಳಿದನು. ಕೃಷ್ಣನು ಅನ್ನುತ್ತಾನೆ - “ಈ ಸಾಧುವು  ಉಪವಾಸ ಸಾಯುತ್ತಿದ್ದದ್ದನ್ನು ನೋಡಲಾರದೆ, ನಿನ್ನ ರೊಕ್ಕವನ್ನು ಕದ್ದುಕೊಂಡು ಬಂದು, ಹಾಲು ತಂದು ಕೊಟ್ಟಿರುತ್ತೆನೆ', ಇದನ್ನು ಕೇಳಿ ತಂದೆಯು ಬಹಳ ಕ್ರೋಧ ಹೊಂದಿ, ಕೃಷ್ಣನಿಗೆ ಕಟ್ಟಿಗೆಯಿಂದ ಚೆನ್ನಾಗಿ ಹೊಡೆದು, ಮನೆಗೆ ಕರೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿಹಾಕಿದನು. ಆ ಸಮಯದಲ್ಲಿ ಕೃಷ್ಣನು ಸಾಧು ದೆಸೆಯಿಂದ ಬಹಳ ಚಿಂತೆ ಮಾಡುವಂಥವನಾಗಿ, ತನ್ನೊಳಗೆ ಅನ್ನುತ್ತಾನೆ- “ಆತನಿಗೆ ಯಾರು ಹಾಲು ಒಯ್ದು ಕೊಡುವರು ? ಹಾಲು ಸಿಗದಿದ್ದರೆ, ಆತನು ಸಾಯುವನಲ್ಲ. ಹೇ ಶ್ರೀರಾಮನೇ , ನೀನು ಬಂದು ನನ್ನನ್ನು ಬಿಡಿಸುವಿಯಾದರೆ, ನಾನು ಓಡಿ ಆ ಸಾಧುವಿನ ಹತ್ತಿರ ಹೋಗಿ, ನನ್ನ ದೇಹವನ್ನಾದರೂ ಮಾರಿಕೊಂಡು, ಆತನಿಗೆ ಹಾಲು ಕೊಡುತ್ತಿದ್ದೆ.”ಹೀಗನ್ನುತ್ತಾ ಕೃಷ್ಣನು ಅಳಹತ್ತಿದನು. ಕೂಡಲೇ ಆ ಸಾಧುವು  ತನ್ನ ಸಮೀಪವೇ ಬಂದು ನಿಂತಿದ್ದನ್ನು ಕೃಷ್ಣನು ನೋಡಿದನು. ಸಾಧುವಾದರೂ ಕೃಷ್ಣನನ್ನು ಬಹು ಪ್ರೇಮದಿಂದ ಅಪ್ಪಿಕೊಂಡನು. ಕೂಡಲೇ ಕೃಷ್ಣನನ್ನು ಕುರಿತು, - “ನೀನು ಈಗ ಏನೂ ಚಿಂತೆ ಮಾಡಬೇಡ. ನಾನು ನಿತ್ಯದಲ್ಲಿಯೂ ನಿನ್ನ ಸಮೀಪವೇ ಇರುವೆನು. ಯೋಗ್ಯ ಕಾಲದಲ್ಲಿ ನಿನ್ನನ್ನು ಬಿಡಿಸುವೆನು'', ಎಂದು ಅಂದನು. ಆಗ್ಗೆ ಕೃಷ್ಣನು ಅನ್ನುತ್ತಾನೆ - ''ತಂದೆಯೇ ನನ್ನನ್ನು ನಿನ್ನ ಹತ್ತಿರ ಇಟ್ಟುಕೊ, ನಿನ್ನ ಸೇವೆ ಬಹಳ ಸುಖದಾಯಕವಾಗಿರುತ್ತದೆ'' ಹೇಗೆ ಅನ್ನುವಾಗ, ಕೃಷ್ಣನು ಗದ್ಗದಿತಕಂಠನಾಗಿ, ಕಣ್ಣುಗಳಿಂದ ನೀರು ಸುರಿಸುತ್ತ - 'ಹೇ ದಯಾಳುವೇ, ನೀನು ನನ್ನನ್ನು ಇಲ್ಲಿ ಬಿಡಬೇಡ, ನನ್ನ ಪ್ರಾಣಾಂತವಾಗುವದು, ಆದ್ದರಿಂದ ನಿನ್ನನ್ನು ಪ್ರಾರ್ಥಿಸುವೆನು" ಎಂದು ಅಂದದ್ದು ಕೇಳಿ, ಆ ಸಾಧುವು  ಆತನಿಗೆ ಆಶ್ವಾಸನವನ್ನು ಕೊಟ್ಟು ನೀನು ಚಿಂತೆ ಮಾಡಬೇಡ ನನ್ನ ನಿರ್ವಾಣರೂಪವನ್ನು ನೋಡು'' ಎಂದು ಹೇಳಿದನು. ಕೂಡಲೇ ಸಾಧು ರೂಪವು ಅದೃಶ್ಯವಾಯಿತು, ಮತ್ತು ಅಲ್ಲೇ  ಶ್ರೀರಾಮನು ಪ್ರಕಟನಾದನು. ಆಗ ಎಲ್ಲಾ ಕಡೆಯಲ್ಲಿಯೂ ತೇಜವೇ ಕಾಣಿಸುವಂಥದ್ದಾಗಿ, ಮಧ್ಯದಲ್ಲಿ ಆ ರಾಮರೂಪವನ್ನು ಕೃಷ್ಣನು ನೋಡುವಂಥವನಾದನು. ಘನಶ್ಯಾಮ ವರ್ಣ ಶರೀರ ಕಾಂತಿ ಇದ್ದು, ಕಿರೀಟ ಕುಂಡಲಗಳಿಂದ ಶೋಭಾಯಮಾನನಾಗಿ, ಕೊರಳೊಳಗೆ ವೈಜಯಂತಿ ಮಾಲಾ ತೂಗುತ್ತ, ಮುಖ ಕಮಲವು ಸೂರ್ಯ ಮಂಡಲವೋ ಎಂಬಂತೆ ಶ್ರೀರಾಮನು ವಿರಾಜಮಾನವಾಗು ವಂಥವನಾದನು. 


ಇಂಥಾ ಸುಂದರ ರೂಪವನ್ನು ನೋಡಿ, ಕೃಷ್ಣನು ಬ್ರಹ್ಮಾನಂದದಲ್ಲಿ ಮಗ್ನನಾಗಿ, ದೇಹ ಭಾನವನ್ನು ಮರೆತು ರಾಮ ರೂಪದಲ್ಲಿ ತಲ್ಲೀನ ವೃತ್ತಿಯುಳ್ಳಂಥವನಾದನು. ಆಗ ಶ್ರೀರಾಮನು ಕೃಷ್ಣನನ್ನು ಕುರಿತು ಅತ್ಯಂತ ಮಧುರ ಮತ್ತು ಪ್ರೇಮಯುಕ್ತ ಭಾಷಣ ಮಾಡುತ್ತಾನೆ - ''ಬಾಳಾ,  ನಿನ್ನ ಅನಂತ ಜನ್ಮಗಳ ಪುಣ್ಯವು ಒಟ್ಟುಗೂಡಿ, ನೀನು ಈ ಕಾಲದಲ್ಲಿ ನನ್ನನ್ನು ನೋಡುತ್ತಿ, ಸಂತ ಚರಣದಲ್ಲಿ ನಿನ್ನ ಭಕ್ತಿಯು ದೃಢವಾಗಿರುವದೋ  ನೋಡೋಣ,  ಎಂದು ನಾನು ಬಂದಿರುತ್ತೇನೆ. ನಿನಗೆ ಸಾಧು ಸ್ಥಿತಿಯ  ಹೊರತು ಎರಡನೇ ಏನೊಂದೂ ಆಸಕ್ತಿ ಇರುವದಿಲ್ಲ. ಅದನ್ನು ನೀನು  ಅಲ್ಪ ಕಾಲದಲ್ಲಿ ಹೊಂದುವಿ. ಅಲ್ಲಿವರೆಗೆ ನೀನು ಸಾಧು ಸೇವೆಯಲ್ಲಿ ರಮಿಸುವಂಥವನಾಗು. ನನ್ನ ನಾಮವನ್ನು ನಿರಂತರದಲ್ಲಿಯೂ ನೀನು ಜಪಿಸಿದಿಯೆಂದರೆ, ನಾನು ಸರ್ವದಾ ನಿನ್ನ ಹತ್ತಿರವೇ ಇರುವೆನು.” ಹೀಗೆ ಕೃಪಾ ವಚನವನ್ನು ನುಡಿದು, ಶ್ರೀ ರಾಮನು ಅಂತರ್ಧಾನನಾಗುವಂಥವನಾದನು. ತತ್ಕಾಲವೇ ಕೃಷ್ಣನ ತಂದೆಯು ಬಂದು ಕೃಷ್ಣನನ್ನು ಪ್ರೀತಿಯಿಂದ ಆಲಂಗಿಸಿ, ಅನ್ನುತ್ತಾನೆ- “ನಿನ್ನ ಮುಖದ ಮೇಲೆ ಎಂಥಾ ತೇಜವು ಕಾಣಿಸುವದು! ಇಂದಿನಿಂದ ನಿನ್ನ ಇಚ್ಚೆ ಇದ್ದಂತೆ ಮಾಡು, ನಿನಗೆ ನಾನು ಅಡ್ಡಿ ಮಾಡುವದಿಲ್ಲ. ಆದರೆ ನೀನು ಮನೆಯಲ್ಲಿಯೇ ಇರು.” ಪಿತನ ಈ ವಚನವನ್ನು ಕೇಳಿ, ಕೃಷ್ಣನಿಗೆ ಅತ್ಯಂತ ಆನಂದ ಉಂಟಾಗಿ, ಪ್ರೇಮ ಭರದಿಂದ ನಾಮವನ್ನು ಹಾಡುತ್ತಾ, ಆತನು ಸತೇಜ ಮುಖ ಉಳ್ಳವನಾಗಿ, ಕುಣಿಯಲಾರಂಭಿಸಿದನು. ಆ ಹೊತ್ತಿನಿಂದ ಕೃಷ್ಣನು ನಿತ್ಯದಲ್ಲಿಯೂ ಸಾಧುಗಳನ್ನು ಮನೆಗೆ 

ಕರೆದುಕೊಂಡು ಬಂದು, ಬಹಳ ಆನಂದದಿಂದ ಅವರಿಗೆ ಯಥೇಷ್ಟ ಭೋಜನಿತ್ಯಾದಿ ಉಪಚಾರಗಳನ್ನು ಮಾಡಿಸಿ, ಮುಂದೆ ಕಳುಹಿಸುತ್ತಿರುವನು. ಕೃಷ್ಣನಿಗೆ ಹದಿನಾರು ವರ್ಷಗಳಾಗುತ್ತಲೇ, ತಂದೆಯು ಆತನಿಗೆ ಬಹಳ ಆಗ್ರಹದಿಂದ ಲಗ್ನ ಮಾಡಿದನು. ಕೃಷ್ಣನು ಆಮೇಲೆ ಒಂದು ವರ್ಷ ತನಕ ಮನೆಯಲ್ಲಿಯೇ  ಇದ್ದನು. 


ಒಂದಾನೋಂದು ದಿವಸ ಆತನಿಗೆ ಒಬ್ಬ ಸಾಧುವು ಬೆಟ್ಟಿಯಾಗಿ, ವೈರಾಗ್ಯ ಬೋಧಿಸಿದನು. ಆತನ ಬೋಧವನ್ನು ಕೇಳಿದ ಕೂಡಲೇ, ಕೃಷ್ಣನಿಗೆ ತೀವ್ರ ವೈರಾಗ್ಯ ಪ್ರಾಪ್ತವಾಗಿ ತಾಯಿ, ತಂದೆ, ಪತ್ನಿ ಮುಂತಾದವರನ್ನು ಬಿಟ್ಟು, ರಾತ್ರಿ ಹೊತ್ತಿನಲ್ಲಿ ಯಾರಿಗೂ ತಿಳಿಸದೆ, ಆ ಸಾಧು ಕೂಡ ಹೊರಟು ಹೋದನು. ಮನೆ ಬಿಟ್ಟು ಅರಣ್ಯ ಪಥವನ್ನು ಹಿಡಿದು ಹೋಗುತ್ತಾ ಇಬ್ಬರೂ ಅನೇಕ ಕ್ಷೇತ್ರಗಳಲ್ಲಿ ಸಂಚರಿಸುತ್ತ ಕಡೆಗೆ  ಕಾಶೀ ಕ್ಷೇತ್ರಕ್ಕೆ ಬಂದರು. ಅಲ್ಲಿ ಅವರು ಒಬ್ಬ ಸನ್ಯಾಸಿಯ ಕಡೆಗೆ ಹೋಗಿ ಆತನ ಸೇವೆ ಮಾಡುತ್ತಿದ್ದರು. ಆ ಸನ್ಯಾಸಿಯು ವಿಚಾರಿಸಿದಾಗ ಕೃಷ್ಣನು, ತನ್ನವರು ಯಾರೂ ಇಲ್ಲ, ಸನ್ಯಾಸ ದೀಕ್ಷೆ ಕೊಡಬೇಕೆಂದು ಗುರುಗಳಿಗೆ ಪ್ರಾರ್ಥಿಸಿದನು. ಆಗ ಗುರುಗಳು ಆತನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು, ಕಿವಿಯಲ್ಲಿ ಪ್ರಣವ ಮಂತ್ರ ಉಪದೇಶ ಮಾಡಿ, ಕೃಷ್ಣನಿಗೆ ಗೋವಿಂದಾನಂದ ಎಂಬ ಹೆಸರಿಟ್ಟವರು. ಕೆಲವು ದಿವಸಗಳಾದ ಮೇಲೆ ಗುರ್ವಾಜ್ಞೆಯನ್ನು ಪಡೆದು ಗೋವಿಂದಾನಂದನು ಕ್ಷೇತ್ರ ಸಂಚಾರಕ್ಕೆ ಹೊರಟು, ದ್ವಾರಕಾ ಕ್ಷೇತ್ರಕ್ಕೆ ಬಂದನು. ಅಲ್ಲಿ ಶಿವಾನಂದನೆಂಬ ಸಾಧುವು ಭೆಟ್ಟಿಯಾದನು. ಶಿವಾನಂದನು ಗೋವಿಂದಾನಂದ ಯತಿಯನ್ನು ಕುರಿತು, - ಹುಬ್ಬಳ್ಳಿ ನಗರದಲ್ಲಿ ಸಾಕ್ಷಾತ್ ಶಿವಾವತಾರವಾಗಿರುವ ಸದ್ಗುರು ಸಿದ್ಧಾರೂಢರು ಇರುವರು. ನಾನು ಅವರ ಶಿಷ್ಯನಿದ್ದೇನೆ; ಅವರಿಗೆ ನನ್ನ ಮೇಲೆ ವಿಶೇಷ ಪ್ರೇಮವಿರುತ್ತಿದ್ದು, ನಾನು ಅಲ್ಲಿಯ ಉತ್ಸವಗಳ ಸಲುವಾಗಿ ದೇಶಾಂತರಗಳಿಂದ ಅನೇಕ ಸಾಮಗ್ರಿ ತಂದು, ಪೂರೈಸುತ್ತೇನೆ. ಮಾಘಮಾಸದಲ್ಲಿ ಮತ್ತು ಶ್ರಾವಣದಲ್ಲಿ, ಮಹೋತ್ಸವಗಳು ನಡಿಯುತ್ತಿರುತ್ತವೆ, ಆ ಸಮಯದಲ್ಲಿ ಮಹಾ ವೈಭವದಿಂದ ಸದ್ಗುರುಗಳನ್ನು ಪೂಜಿಸುತ್ತಾರೆ. ಆ ಸದ್ಗುರುವು ಬಹು ಕೃಪಾವಂತನಿದ್ದು, ಸರ್ವರಿಗೂ ಸುಖ ಪ್ರಾಪ್ತಿ ಮಾಡಿಕೊಡುವದರಲ್ಲಿಯೇ ರತನಾಗಿರುತ್ತಾನೆ. ತನ್ನ ಭಕ್ತರಿಗೆ ಬಂದ ಸಂಕಟ ಕಾಲದಲ್ಲಿ, ಆತನ ಚಿಂತನ ಮಾಡಿದ ಮಾತ್ರದಿಂದ ಪ್ರಾಪ್ತನಾಗಿ ರಕ್ಷಿಸುವವನಾಗಿರುವದರಿಂದ, ಆತನು ದೀನನಾಥನೆನಿಸಿಕೊಳ್ಳುವನು. ಆತನನ್ನು ಒಮ್ಮೆ ನೋಡಿದಿರಾದರೆ, ಶಾಂತಿ ಸುಖದಿಂದ ಮನಸ್ಸು ತತ್ಕಾಲ ತಣ್ಣಗಾಗುವುದು. ಆತನು ಪ್ರಶಾಂತಾತ್ಮನಾಗಿದ್ದು, ಮುಖದ ಮೇಲೆ ದಿವ್ಯ ತೇಜಯುಕ್ತನಾಗಿ, ದರ್ಶನ ಮಾತ್ರದಿಂದ ತ್ರೈತಾಪಗಳನ್ನು ಹರಣ ಮಾಡುವನು.” ಎಂದು ಹೇಳಿದ ವಚನವನ್ನು ಕೇಳಿ, ಗೋವಿಂದಾನಂದನು ಪ್ರೇಮಯುಕ್ತನಾಗಿ, ಸಿದ್ದ ಸದ್ಗುರುವನ್ನು ನೋಡಬೇಕೆಂಬ ಉತ್ಕಟೇಚ್ಛೆಯು ಆತನಿಗೆ ಪ್ರಾಪ್ತವಾಯಿತು. 


ಆ ಕೂಡಲೇ ದ್ವಾರಕಾ ಬಿಟ್ಟು, ನೆಟ್ಟಗೆ ಹುಬ್ಬಳ್ಳಿಗೆ ಇಳಿದು, ಸಿದ್ದಾಶ್ರಮಕ್ಕೆ ಬರುವಾಗ ಮಧ್ಯ ರಾತ್ರಿಯಾಗಿದ್ದು ಎಲ್ಲಾ ಜನರು ನಿದ್ರಸ್ಥರಾಗಿದ್ದರು. ಅದೇ ಸಮಯದಲ್ಲಿ ಸದ್ಗುರುಗಳು ಅಕಸ್ಮಾತ್ತಾಗಿ ಹೊರಗೆ ಬಂದರು. ಗೋವಿಂದಾನಂದನು ಸಿದ್ಧರನ್ನು ನೋಡಿ, ಬಹಳ ಆನಂದದಿಂದ - 'ಹೇ ಮಹಾರಾಜರೇ, ಸಿದ್ಧಾರೂಢ ಯತೀಶ್ವರರು ಎಲ್ಲಿ ಇದ್ದಾರೆಂದು ಹೇಳಿರಿ,'' ಅಂದದ್ದು ಕೇಳಿ, ಸದ್ಗುರುಗಳಂದರು  ''ನಿಮಗೆ ಬಹಳ ಹಸಿವಾಗಿರುತ್ತದೆ, ಬೇಗನೆ ಮಠದೊಳಗೆ ಬನ್ನಿರಿ.” ಇದನ್ನು ಕೇಳಿ ಗೋವಿಂದಾನಂದನು ನನ್ನ ಪೂರ್ವಾಪರ ಏನೂ ವಿಚಾರಿಸಿಕೊಳ್ಳುವ ಮೊದಲೇ ನನಗೆ ಹಸಿವಾದದ್ದು ಇವರಿಗೆ ಹ್ಯಾಗೆ ತಿಳಿಯಿತು ಎಂದು ಬಹಳ ಆಶ್ಚರ್ಯಪಟ್ಟನು. ಸದ್ಗುರುಗಳು ಗೋವಿಂದಾನಂದನ ಕೈಹಿಡಿದು, ಮಠದೊಳಗೆ ಕರೆದುಕೊಂಡು ಹೋದರು. ಅಲ್ಲಿದ್ದ ಶಿಷ್ಯರನ್ನು ಎಬ್ಬಿಸಿ, ಗೋವಿಂದಾನಂದನಿಗೆ ಭೋಜನ ಮಾಡಿಸಲಿಕ್ಕೆ ಅಪ್ಪಣೆ ಕೊಟ್ಟರು. ಸಿದ್ಧರು ಅವರನ್ನು ಕುರಿತು, - “ಈತನು ಮೂರು ದಿವಸಗಳಿಂದ ಉಪವಾಸ ಇದ್ದಾನೆ'' ಅಂದದ್ದು ಕೇಳಿ, ಗೋವಿಂದಾನಂದನು - “ನಾನು ಸಿದ್ಧರ ದರ್ಶನದ ವಿನಹಾ ಉಣ್ಣಲೊಲ್ಲೆ ” ಅಂದರು. ಆಗ ಆ ಶಿಷ್ಯರನ್ನುತ್ತಾರೆ- "ಹೇ ಸಾಧುವರ್ಯ, ಇವರೇ ಸಿದ್ಧಾರೂಢ ಸದ್ಗುರುರಾಯರು'' ಎಂದು ಅವರ ಕಡೆಗೆ ತೋರಿಸಿದರು. ಇದನ್ನು ಕೇಳಿದ ಕೂಡಲೇ, ಗೋವಿಂದಾನಂದನು ಅತ್ಯಂತ ಪ್ರೇಮದಿಂದ ಸದ್ಗುರು ಚರಣಾರವಿಂದಗಳಿಗೆ ಸಾಷ್ಟಾಂಗ ನಮನ ಮಾಡಿ - '' ಹೇ ದಯಾಳು ಸದ್ಗುರುನಾಥಾ, ಕಿಂಕರನಾದ ನನ್ನ ಸಲುವಾಗಿ ಎಷ್ಟೊಂದು ಚಿಂತೆ ಮಾಡುತ್ತೀರಿ, ಶಿವಾನಂದನು ನಿಮ್ಮ ವಿಷಯ ಅಂದದ್ದೆಲ್ಲ, ಇಲ್ಲಿ ಸತ್ಯವಾಗಿ ನೋಡುತ್ತೇನೆ. ಗುರುವರರಾದ ನೀವು ಅಕಸ್ಮಾತ್ತಾಗಿ ಬಂದಂಥಾ ನನ್ನ ಮೇಲೆ,  ಇಷ್ಟು ದಯಾ ತೋರಿಸುವಂಥಾ ನನ್ನ ಅಧಿಕಾರವಲ್ಲ. ನಿಮ್ಮ ಚರಣಗಳಲ್ಲಿ ನಾನೊಬ್ಬ ಪಾಮರನಿರುತ್ತೇನೆ.'' ಈ ಪ್ರಕಾರ ಅಂದು , ಆ ಪರಮಹಂಸರು ಪುನಃ ಸಿದ್ಧರ ಚರಣಕ್ಕೆ ಬೀಳುವಂಥವರಾದರು. ಶಿಷ್ಯರು ಸರ್ವಾ ಸ್ಥಾನಗಳಲ್ಲಿ ಹುಡುಕಿದರೂ ಫಲಹಾರ ದ್ರವ್ಯ ಏನೇನೂ ಸಿಗಲಿಲ್ಲ; ಇದನ್ನು ತಿಳಿದು ಸಿದ್ಧರು ಅನ್ನುತ್ತಾರೆ- “ದೂರ್ವಾಸ ಮುನಿಗಳು, ಧರ್ಮರಾಯನ ಪರ್ಣಕುಟಿರಿಗೆ ರಾತ್ರಿ ಕಾಲದಲ್ಲಿ ಭೋಜನಕ್ಕೆ ಬಂದಂತೆ ಇಲ್ಲಿ ಈಗ ಆಯಿತು. ಆ ಸಮಯದಲ್ಲಿ ದ್ರೌಪದಿಯು  ಕೃಷ್ಣನನ್ನು ಪ್ರಾರ್ಥಿಸುವಂಥವಳಾದಳು. ಹಾಗೆ ಇಲ್ಲಿ ನಾನು ಯಾರನ್ನು ಕುರಿತು ಶರಣು ಹೊಗಲಿ!'' ಅಂದಾಗ ಗೋವಿಂದಾನಂದನು, - '' ತಾನು ತನಗೇನೇ ಶರಣು ಹೋಗಬೇಕು,'' ಎಂದು ಅಂಧರು. ಆಗ ನಗುತ್ತಾ ಸದ್ಗುರುಗಳು ಮಠದ ಹೊರಗೆ ಹೋಗಿ, ಕೂಡಲೇ ಕೈಯಲ್ಲಿ ಧೋತರ ಹಿಡಕೊಂಡು  ಬಂದರು. ಅದನ್ನು ತೆಗೆದು ನೋಡಲು ಅದರೊಳಗೆ  ಅನೇಕ ಫಲಹಾರ ವಸ್ತುಗಳಿದ್ದು, - '' ಇವನ್ನು ನಾನು ತೆಗೆದುಕೊಂಡು ಬಂದೆನು,” ಎಂದು ಸದ್ಗುರುಗಳಂದರು. ಎಲ್ಲಿಂದ ಆ ವೇಳೆಗೆ ತೆಗೆದುಕೊಂಡು ಬಂದರು ಎಂಬುದು ಯಾರಿಗೂ ತಿಳಿಯಲಿಲ್ಲ. ಗೋವಿಂದಾನಂದನಾದರೂ ಇವರು ಸಾಕ್ಷಾತ್ ಈಶ್ವರಾವತಾರವೆಂದು ತಿಳಿದುಕೊಂಡನು. ಅನಂತರ ಆತನು ಫಲಾಹಾರವನ್ನು ಸೇವಿಸಿದ ಮೇಲೆ, ಎಲ್ಲರೂ ಶಯನಕ್ಕೆ ತೆರಳಿದರು. 


ಮರುದಿವಸ, ಸದ್ಗುರುಗಳನ್ನುತ್ತಾರೆ , - "ಹೇ ಆನಂದಮೂರ್ತಿಯಾದ ಗೋವಿಂದಾನಂದನೇ, ನೀನು ಇಲ್ಲಿಯೇ ಇರುತ್ತಿದ್ದು,

ನಿನ್ನ ಸಂಗತಿ ಲಾಭವನ್ನು ನಮ್ಮೆಲ್ಲರಿಗೂ ಕೊಡಬೇಕು". ಅದಕ್ಕೆ ಗೋವಿಂದಾನಂದನು ಅನ್ನುತ್ತಾನೆ , -“ನನ್ನ ಅನಂತ ಜನ್ಮಗಳ ಪುಣ್ಯವಿತ್ತೆಂದು,  ನಿಮ್ಮ ದರ್ಶನವಾಯಿತು, ಇನ್ನು ಮರಣ ಪರ್ಯಂತರ  ಇಂಥಾ ದಿವ್ಯ ಚರಣಗಳ ಲಾಭವನ್ನು ನಾನು  ಬಿಡಲಾರೆನು. ದೇಶ ದೇಶಗಳಲ್ಲಿ ನಿಮ್ಮ ಪುಣ್ಯ ಕೀರ್ತಿಯನ್ನು ವರ್ಣಿಸುವದಕ್ಕೆ ನನಗೆ ಬೇಕಾಗುವ ಶುದ್ಧಮತಿಯನ್ನು ದಯಪಾಲಿಸಬೇಕಾಗಿ, ನಿಮ್ಮ ಚರಣ ಕಮಲಗಳಲ್ಲಿ ನನ್ನ ಪ್ರಾರ್ಥನೆಯು  ಇರುತ್ತದೆ. ಆಗ ಗೋವಿಂದಾನಂದ ಪರಮಹಂಸರು ನಿರೂಪಣ ಮಾಡಲಿಕ್ಕೆ ನಿಂತು, ಸದ್ಗುರು ಕೀರ್ತಿಯನ್ನು ವರ್ಣಿಸುತ್ತಿರುವಾಗ ಶ್ರೋತಾ  ಜನರ ಮನಸ್ಸುಗಳೆಲ್ಲಾ ತಲ್ಲೀನವಾದವು. ಕೀರ್ತನದಲ್ಲಿ ಅದ್ಭುತ ಪ್ರೇಮವು ಉಕ್ಕಿ ಬಂದು, ಎಲ್ಲರ ನೇತ್ರಗಳು ಪ್ರೇಮಾಶ್ರುಗಳಿಂದ ತುಂಬಿ ಸರ್ವರೂ  ಆನಂದ ಭರಿತರಾದರು. ಈ ಪ್ರಕಾರ ಅನೇಕ ದೇಶಗಳಿಂದ ಸತ್ಪುರುಷರು ಸಿದ್ಧನಾಥರನ್ನು ಹುಡುಕುತ್ತ ಬಂದು, ದರ್ಶನ ಮಾತ್ರದಿಂದ ಅವರ ವೃತ್ತಿ ಸ್ಥಿರವಾಗಿ, ಬೇರ ಸ್ಥಾನಕ್ಕೆ ಹೋಗಲಿಕ್ಕೆ ಮನಸ್ಸು ಬಾರದಂತಾಗುವದು. ಶ್ರೀ ಸಿದ್ಧಾರೂಢ ಸದ್ಗುರುಗಳು ಸಾಕ್ಷಾತ್ ಪರಮೇಶ್ವರನ ಪೂರ್ಣಾವತಾರವಾಗಿರುವದರಿಂದ, ಯಾರ್ಯಾರು  ಜ್ಞಾನಾಧಿಕಾರಿಗಳಿರುವರೋ, ಅವರು ಗುರುಗಳನ್ನು ಶೋಧಿಸಿ ಇಲ್ಲಿಗೆ ಬರುವರು. ಸದ್ಗುರುರಾಜನು ದಯಾಸಾಗರನಿದ್ದು, ಸತ್ವರೂಪ ಎಲ್ಲ ನದಿಗಳನ್ನು ತನ್ನಲ್ಲಿ ಸ್ವೀಕರಿಸಿ, ಐಕ್ಯ ಮಾಡಿಕೊಳ್ಳುವನು. ಇತರರಿಗೆ ಸುಖವೆಂಬ ಜಲವನ್ನು ಕೊಡುವಂಥವನಾಗುತ್ತಾನೆ.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಬಡಿಗೇರ ಕಾಳಪ್ಪ ಮನೆಯಲ್ಲಿ ಮಾವಿನ ಹಣ್ಣಿನಲ್ಲಿ ಹುಳುಗಳನ್ನು ಮಾಯಾ ಮಾಡಿದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮದ ಲೀಲಾಕಥೆ,

ಸಿದ್ಧಾರೂಢರ ಅಭಯ ಹಸ್ತದಿಂದ ಹುಲಿ ಜನ್ಮ ಮುಕ್ತನಾಗಿ ನರಜನ್ಮಕ್ಕೆ ಅವತರಿಸಿದ ಗುರುನಾಥರೂಢರು