ಸರ್ಪ ಸುತ್ತಿ ಕಚ್ಚುತ್ತಿರುವ ಬಾಲಕನನ್ನು ಕಾಪಾಡಿ , ಅವನ ಗಾಯಗಳನ್ನು ವಾಸಿ ಮಾಡಿದ ಸಿದ್ಧರ ಕಥೆ.
🍀 ಹುಡುಗನ ಕಾಲಿಗೆ ಸರ್ಪ ಸುತ್ತಿ, ಕಚ್ಚುವಾಗ ಅವನನ್ನು ಸದ್ಗುರುವು ಸರ್ಪದಿಂದ ಬಿಡಿಸಿ, ಅವನ ಗಾಯಗಳನ್ನು ವಾಸಿ ಮಾಡಿದ ಕಥೆ.
ಶ್ರೀ ಸಿದ್ಧಾಶ್ರಮದಲ್ಲಿ ಸ್ತ್ರೀ ಪುರುಷ ಭಕ್ತ ಜನರು ನಿತ್ಯದಲ್ಲಿಯೂ ಭೋಜನ ಪದಾರ್ಥಗಳನ್ನು ತೆಗೆದುಕೊಂಡು ಬರುತ್ತಿರುವರು. ಅವನ್ನು ಮೊದಲು ಸಿದ್ಧಾರೂಢರಿಗೆ ಸಮರ್ಪಿಸಿ, ಅನಂತರ ಎಲ್ಲರೂ ಕೂಡಿ ಶೇಷ ಪ್ರಸಾದವನ್ನು ಭುಂಜಿಸುವರು. ಒಂದಾನೊಂದು ದಿವಸ ಅನೇಕ ಭಕ್ತರು ಭೋಜನವಾದ ಬಳಿಕ ಸದ್ಗುರುಗಳ ಸನ್ನಿಧಿಯಲ್ಲಿ ಭಜನ ಮಾಡುತ್ತಿದ್ದು, ಸದ್ಗುರುಗಳು ವಿಶ್ರಾಂತಿ ಸ್ಥಾನಕ್ಕೆ ತೆರಳಿದ ಮೇಲೆ, ಆ ಜನರು ಕೆರೆದಂಡೆಗಿರುವ ವೃಕ್ಷಗಳ ಛಾಯೆಗೆ ಹೋದರು. ಅಲ್ಲಿ ಗಿಡಗಳ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ, ಕೆಲವು ಚಿಕ್ಕ ಹುಡುಗರು ಆಡುತ್ತಾ ಆಡುತ್ತಾ ಕೆರೆಯ ಹತ್ತಿರ ಬಂದು ಅತ್ತಿತ್ತ ನೋಡುತ್ತಿರುವ ಒಂದು ಸರ್ಪವನ್ನು ಕಂಡರೂ. ಅದು ಸುಮಾರು ನಾಲ್ಕು ಮೊಳ ಉದ್ದವಿದ್ದು ಬಿಸಿಲಿನೊಳಗೆ ಬಿದ್ದಿತ್ತು. ಆಗ್ಗೆ ಅವರ ಪೈಕಿ ಒಬ್ಬ ಹುಡುಗನು ಆ ಸರ್ಪದ ಸಮೀಪ ಹೋಗಿ, ಕುತೂಹಲದಿಂದ ಅದರ ಕಡೆಗೆ ಒಂದು ಕಲ್ಲು ಒಗೆದನು, ಆ ಕಲ್ಲು ಸರ್ಪಕ್ಕೆ ತಾಗಿ, ಅದು ಮಹಾ ಕ್ರೋಧದಿಂದ ಹೆಡೆಯನ್ನು ಎತ್ತಿ ಹುಡುಗನನ್ನು ನೋಡಿ, ತತ್ಕಾಲವೇ ಅವನ ಕಾಲಿಗೆ ಸುತ್ತಿಕೊಂಡು ಬಿಗಿದು ಕಟ್ಟುವಂಥಾದ್ದಾಯಿತು. ಆಮೇಲೆ ಆ ಸರ್ಪವು ಬಹು ಸಿಟ್ಟಿನಿಂದ ಅವನಿಗೆ ಕಡಿಯಲಾರಂಭಿಸಿತು. ಹುಡುಗನಾದರೂ ಅದನ್ನು ಬಿಡಿಸಿಕೊಂಡು ಹೋಗಬೇಕೆಂದು ನೋಡಿದರೆ ಆತನ ಶಕ್ತಿ ನಡಿಯದಂತಾಯಿತು. ಸರ್ಪವು ಅವನ ಸರ್ವಾಂಗದಲ್ಲಿ ಕಡಿಯುತ್ತಿತ್ತು. ಇದರಿಂದ ಅವನು ವಿಕಳನಾಗಿ ದೀರ್ಘಸ್ವರ ದಿಂದ ರೋಧನ ಮಾಡಲಾರಂಭಿಸಿದನು. ಇದನ್ನೆಲ್ಲಾ ಕಂಡು ಇತರ ಹುಡುಗರು, ಏನು ಮಾಡಬೇಕೆಂಬುದು ತೋಚದೆ, ಅವನ ತಾಯಿ ತಂದೆಗಳನ್ನು ಕರಿಯುವಂಥವರಾದರು. ಆ ತಾಯಿ ತಂದೆಗಳು ಬಂದು, ಕಾಲಿಗೆ ಸರ್ಪ ಸುತ್ತಿದ ತಮ್ಮ ಮಗನನ್ನು ನೋಡಿ, ಬಹಳ ಆಕ್ರಾಂತ ಮಾಡಿದರು. ಹುಡುಗನ ತಾಯಿಯು ಆತನಿಗೆ - ' " ಬಾರಪ್ಪಾ ಮಗುವೇ, ನಿನ್ನನ್ನು ನೋಡಿ ನನ್ನ ಜೀವ ಕಸಿವಿಸಿಯಾಗುತ್ತದೆ. ಆ ಹಾವನ್ನು ಅಲ್ಲೇ ಬಿಟ್ಟು ಬೇಗನೇ ಬಾ, ನನ್ನ ಕಾಲುಗಳು ಥರಥರನೇ ನಡುಗುತ್ತಿವೆ. ಮತ್ತು ನನಗೆ ಬಹಳ ಭಯವಾಗುತ್ತಿದೆ' ಅಂದಳು. ಆಕೆಯ ಗಂಡನಾದರೂ ಭಯದಿಂದ ಹಿಂದೆ ನಿಂತುಬಿಟ್ಟನು. ದೀರ್ಘಸ್ವರದಿಂದ ತಾಯಿಯು ಅಳುತ್ತಿದ್ದಳು. ತಂದೆಯು ಸಮೀಪ ಹೋಗಲು ಹೆದರುತ್ತಿದ್ದನು. ಇತರ ನೆರದ ಜನರಾದರೂ ಬಹಳ ಗಾಬರಿಯಾಗಿ ಅತ್ತಿತ್ತ ಗಡಬಡಿಸುತ್ತಿದ್ದರು. ಆ ಹುಡುಗನಾದರೂ ಅತ್ತಿತ್ತ ಓಡುತ್ತಾ ಅಲ್ಲಲ್ಲಿ ಬೀಳುತ್ತಾ ಮತ್ತು ಎದ್ದು ನಿಂತು ಎಷ್ಟು ಪೇಚಾಟಪಟ್ಟರೂ, ಆ ಹಾವು ಅವನನ್ನು ಬಿಡಲೊಲ್ಲದು. ಅಳುತ್ತಿದ್ದ ತಾಯಿಯನ್ನು ನೋಡಿ ತಂದೆಯು - “ನೀನು ವ್ಯರ್ಥ ಯಾಕೆ ಅಳುತ್ತೀ, ಅವನು ತಿಳಿದು ತಿಳಿದು ಸರ್ಪದ ಹತ್ತಿರ ಹೋಗಿದ್ದನು , ಏನು ಯತ್ನ ಮಾಡಿದರೂ , ಅವನು ಸಾಯುವನು, ಅಳಬೇಡ' ಅಂದನು. ಇತರ ಜನರು ಶಂಖಧ್ವನಿ ಮಾಡುತ್ತಿದ್ದರು. ಆದರೆ ಯಾರೊಬ್ಬರಿಗೂ ಸರ್ಪದ ಸಮೀಪ ಹೋಗಲಿಕ್ಕೆ ಧೈರ್ಯವಾಗಲಿಲ್ಲ. ಆಗ ಒಬ್ಬರು ಶ್ರೀ ಸಿದ್ಧಾರೂಢ ಕಡೆಗೆ ಹೋಗಿ ಈ ವರ್ತಮಾನವನ್ನು ತಿಳಿಸಿದರು. ಆ ದಯಾಘನರಾದ ಸಿದ್ದರು ಇದನ್ನು ಕೇಳಿದಾಕ್ಷಣವೇ ಗಡಬಡಿಸಿ ಓಡಿಬಂದು, ನೋಡಿದರೂ. ಜನರೆಲ್ಲಾ ಬಹಳ ಆಕ್ರಾಂತ ಮಾಡುತ್ತ ಸುಮ್ಮನೆ ನೋಡುತ್ತಿದ್ದರು. ಯಾರೋ ಒಬ್ಬರು ಒಂದು ಉದ್ದವಾದ ಕಟ್ಟಿಗೆಯನ್ನು ತಂದು ಅದರಿಂದ ಆ ಹಾವನ್ನು ಬಿಡಿಸಲಿಕ್ಕೆ ನೋಡುತ್ತಿದ್ದರು. ಆದರೆ ಅದು ಬಿಡಲೊಲ್ಲದು. ಸಮೀಪ ಹೋಗಲಿಕ್ಕೆ ಯಾರೊಬ್ಬರಿಗೂ ಧೈರ್ಯ ಸಾಲುತ್ತಿದ್ದಿಲ್ಲ. ಅಗ ಸಿದ್ದರು ಜನರನ್ನು ಅತ್ತಿತ್ತ ಸರಿಸಿ, ನೆಟ್ಟಗೆ ಆ ಬಾಲಕನ ಹತ್ತಿರ ಹೋಗಿ, ಆ ಹಾವಿನ ಹೆಡೆ ಹಿಡಿದು ಮತ್ತೊಂದು ಹಸ್ತದಿಂದ ಹುಡುಗನನ್ನು ಹಿಡಿಯುವಂಥವರಾದರು. ಆಮೇಲೆ ಸದ್ಗುರುಗಳು ಆ ಹಾವನ್ನು ಸರಕ್ಕನೆ ಜಗ್ಗಿ, ಹುಡುಗನನ್ನು ಬಿಡುಗಡೆ ಪಡಿಸಿದರು. ಮತ್ತು ಹಾವನ್ನು ದೂರ ಚಲ್ಲಿದರು, ಅದು ಅಲ್ಲಿ ನಿಶ್ಚೇಷ್ಠಿತವಾಗಿ ಬಿತ್ತು. ಹೇ ಶ್ರೋತಾ ಜನರುಗಳಿರಾ, ನೋಡಿರಿ, ಲೋಕದಲ್ಲಿ ಇದೇ ರೀತಿ ಇರುತ್ತದೆ. ತಂದೆ ತಾಯಿಗಳಿಗೆ ಮಗನ ಮೇಲೆ ಬಹಳ ಪ್ರೇಮವಿರುತ್ತದೆ. ಆದರೆ ಸಂಕಟದಲ್ಲಿ ರಕ್ಷಿಸುವದಕ್ಕೆ ಅವರ್ಯಾರೂ ಬರುವದಿಲ್ಲ. ಸದ್ಗುರುನಾಥನೊಬ್ಬನೇ ನಿಜವಾಗಿ ಮಿತ್ರನಾಗಿರುತ್ತಾನೆ. ತಮ್ಮ ಕಾರ್ಯವಾಗುವ ತನಕ ಜನರು "ನನ್ನವನು ನನ್ನವನು " ಎನ್ನುವರು. ಆದರೆ ಸಂಕಟ ಪ್ರಾಪ್ತವಾದಾಗ ಸದ್ಗುರುನಾಥನ ಹೊರ್ತು ಮತ್ಯಾರೂ ಬರುವುದಿಲ್ಲ. ವಿಪತ್ತಿನೊಳಗೆ ರಕ್ಷಿಸುವಂಥಾ ಸದ್ಗುರು ಒಬ್ಬನೇ ಸ್ನೇಹಿತರಾಗಿರುತ್ತಾನೆ. ಆತನನ್ನು
ಆಶ್ರಯಿಸಿದರೆ, ನಾವು ಎಂದೂ ದುಃಖವನ್ನು ಕಾಣೆವು. ಜೀವರನ್ನು ದುಃಖದೊಳಗಿಂದ ಪಾರುಮಾಡುವದಕ್ಕಾಗಿಯೇ ಆತನ ಅವತಾರವಾಗಿರುತ್ತದೆ. ಆದ್ದರಿಂದ ಎಲ್ಲಿ ತನಕ ಮರಣ ಸಮೀಪ ಬಂದಿಲ್ಲವೋ ಅಷ್ಟರಲ್ಲಿಯೇ ಆತನ ಚರಣಗಳನ್ನು ಹಿಡಿಯಿರಿ. ಆತನು ದಯಾಳು ಇದ್ದಾನೆ, ದೋಷ ಗುಣಗಳನ್ನು ನೋಡುವವನಲ್ಲ, ಶರಣು ಬಂದ ಮಾತ್ರದಿಂದ ಆತನು ತಾರಿಸುತ್ತಾನೆ. ಇತ್ತ ಸದ್ಗುರುಗಳು ಹುಡುಗನನನ್ನು ನೋಡುತ್ತಾರೆ, ಅವನ ಸರ್ವಾಂಗದಲ್ಲಿ ಸರ್ಪದಂಶಗಳು ಕಾಣಿಸುತ್ತಿದ್ದವು, ಆಮೇಲೆ ಸದ್ಗುರುಗಳು ಹುಡುಗನ ಮೈಮೇಲೆಲ್ಲಾ ತಮ್ಮ ಅಮೃತ ಹಸ್ತವನ್ನು ಆಡಿಸಿದ ಮಾತ್ರದಿಂದ ಅವನು ಸ್ವಸ್ಥನಾದನು. ಆಗ ಆ ಮಹಾತ್ಮರು ಹುಡುಗನ ಕೈಹಿಡಿದು ಮಠದೊಳಗೆ ಕರೆದುಕೊಂಡು ಹೋಗಿ ಆತನ ಶರೀರಕ್ಕೆ ಪ್ರಸಾದ ವಿಭೂತಿ ಹಚ್ಚಿ - “ಎಲೆ ಬಾಳಾ, ನಿನಗೆ ಇನ್ನು ಮೇಲೆ ಈ ಸರ್ಪದಂಶದ ಭೀತಿ ಹೋಯಿತು, ಸ್ವಸ್ಥದಿಂದಿರು', ಎಂದು ಕೃಪಾವಚನವನ್ನು ದಯಪಾಲಿಸಿದರು. ಇಂಥಾ ದಯಾಳುವಾದ ಆ ಸದ್ಗುರುರಾಯನು, ದೀನ ಅನಾಥರಾಗಿರುವಂಥವರನ್ನು ರಕ್ಷಣೆ ಮಾಡುತ್ತಾನೆ. ಅಭಯದಾತನೆಂಬ ತನ್ನ ಬಿರುದನ್ನು ಆತನ್ನು ಸದಾ ಜತನಮಾಡುತ್ತಿರುವನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
