ಸೋಲಾಪುರ ನಿರ್ವಾಣೆಪ್ಪನಿಗೆ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಿದ್ಧಾರೂಢರು,
🕉️ಸೋಲಾಪುರ ನಿರ್ವಾಣೆಪ್ಪನಿಗೆ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಿದ್ಧಾರೂಢರು,
ಸೋಲಾಪುರ ಸಿದ್ದರಾಮೇಶ್ವರನ ದೇವಾಲಯದ ಕಾಸಾರ ದಂಡೆಯಲ್ಲಿ ವಾಸವಾಗಿದ್ದ ನಿರ್ವಾಣಪ್ಪನು, ತನ್ನ ಧರ್ಮದ ಪ್ರಕಾರ ಲಿಂಗಾರ್ಚನೆ ಮಾಡುತ್ತಿದ್ದನು. ನಂತರ ಹನ್ನೆರಡು ಹನ್ನೆರಡು ಮಾತ್ರೆಗಳ ರೇಚಕ ಪೂರಕ ಕುಂಭಕ ಪ್ರಾಣಾಯಾಮ ಮಾಡುತ್ತಾ ಇರುವಲ್ಲಿ ಚಿತ್ತ ನಿರೋಧವಾಗುತ್ತಿತ್ತು. ಮನಸ್ಸಿನ ನಿಗ್ರಹಕ್ಕೆ ಈ ಯೋಗ ಸಾಧನೆಯು ಬಹು ಮುಖ್ಯ ಕಾರಣವಾಗಿತ್ತು. ಇದರಿಂದ ಶುದ್ಧ ಬುದ್ಧಿಯು ಪ್ರಕಟವಾಗಿತ್ತು. ನಂತರ ಆತ್ಮನಾತ್ಮ ವಿಚಾರ ಪರವಾಗಿ ವಿವೇಕ ಜಾಗೃತಿಯಾಗಿದ್ದರಿಂದ ಯೋಗವನ್ನು ತ್ಯಜಿಸಿದನು. ಈ ವಿಚಾರ ಮಂಥನದಲ್ಲಿ ವೇದಾಂತಕ್ಕೂ ಹಾಗೂ ಶೈವ ಸಿದ್ಧಾಂತಕ್ಕೂ ಪರಸ್ಪರ ವಿರೋಧವಿದೆಯೋ ಹೇಗೆ, ಎಂಬ ಸಂಶಯವು ಸುಳಿಯ ತೊಡಗಿತು. ಕಾರಣ ಗುರುವಿನ ಶೋಧನೆಗೆ ಹೊರಟನು. ಅಲ್ಲಿ ಜಂಗಮರು ನಿರ್ವಾಣಯ್ಯನ ಮನಸ್ಸಿನ ಇಂಗಿತವನ್ನು ತಿಳಿದುಕೊಂಡು, ಆತನನ್ನು ಕುರಿತು, ಆಯ್ಯಾ ನಿರ್ವಾಣಯ್ಯ ಹುಬ್ಬಳ್ಳಿಯಲ್ಲಿ ಅಖಿಲಶಾಸ್ತ್ರಗಳನ್ನು ಬಲ್ಲ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳಲ್ಲಿ ಹೋಗು. ಅಲ್ಲಿ ನಿನ್ನ ಸಂಶಯ ನಿವಾರಣೆಯಾಗಬಲ್ಲವು ಅಂತಾ ತಿಳಿಸಿದರು. ಕೂಡಲೇ ಹುಬ್ಬಳ್ಳಿಗೆ ಧಾವಿಸಿ ಶ್ರೀಗಳ ದರ್ಶನವಾಗುತ್ತ ಶುದ್ಧಮನದಿಂದ ಮೈಮಣಿದು ಓಂ ಚೈತನ್ಯರ ಅಷ್ಟಕ ನುಡಿಯುತ್ತಾ ಶಿರಸಾಷ್ಟಾಂಗ ನಮಸ್ಕಾರ ಮಾಡಿದನು. ಎರಡೂ ಕೈಗಳಿಂದ ಹಿಡಿದೆತ್ತಿ, ನಿನ್ನ ಅಭೀಷ್ಟ ಏನು ಅಂತ ಕೇಳಿದರು. ಆಗ ನಿರ್ವಾಣಯ್ಯನು, ಹೇ ಪರಮಗುರುವೇ, ಕರ್ಮಗಳಿಂದ ಪ್ರಾಪ್ತಿಯಾದ ಫಲಗಳೆಲ್ಲ ಭ್ರಾಂತಿಕಾರಕವಿದ್ದು, ಕಾಲಾಂತರದಲ್ಲಿ ನಾಶವಾಗುವವು. ಆದರೆ ಸುಜ್ಞಾನದಿಂದ ನಿಜವಾದ ಸ್ವಸ್ವರೂಪ ಜ್ಞಾನವು ಪ್ರಾಪ್ತಿಯಾಗುವುದು. ಅದು ಸಹಜ ಸ್ವಭಾವದ್ದು. ಜ್ಞಾನದಿಂದ ಲಭಿಸಿದ ಫಲ ಎಂದಿಗೂ ನಾಶವಾಗಲಾರದು. ವಸ್ತುಸ್ಥಿತಿ ಹೀಗಿದ್ದರೂ ಚಂಚಲ ಸ್ವಭಾವದ ಮನಸ್ಸು ನನಗೆ ಕಾಡುತ್ತಿರುವುದು. ಸಾಧನೆಗಳಲ್ಲಿ ವಿಘ್ನಗಳು ತೋರತೊಡಗಿವೆ. ಮನಸ್ಸಿನ ಚಂಚಲತೆ ನಿಗ್ರಹಿಸಿದರೆ ಮನಸ್ಸೆ ಇಲ್ಲದಂತಾಗುತ್ತದೆ. ಆಗ ಪರಮಾರ್ಥ ಸಾಧನೆ ಹೇಗೆ ಸಾಧ್ಯ ಎಂಬ ಸಂಶಯವು ಸುರಿಯತೊಡಗಿದೆ. ಇದನ್ನು ನಿವಾರಿಸು ಅಂತಾ ಕೇಳಿಕೊಂಡನು.
ಈತನು ಯೋಗ್ಯ ಅಧಿಕಾರಿ ಇರುವನು ಅಂತಾ ತಿಳಿದು ಶ್ರೀಗಳು ಆತನನ್ನು ಕುರಿತು, ಅಯ್ಯಾ ಸಾಧಕನೆ ಮನಸ್ಸಿನ ಚಂಚಲತ್ವವು ನಿನಗೆ ಬಾಧೆ ತರಲಾರದು. ವಿಚಾರಿಸಿ ನೋಡು, ಆ ಮನಸ್ಸು ನನ್ನದು ಅಂತಾ ಅಭಿಮಾನವೇ ನಿನ್ನ ಬಾಧೆಗೆ ಕಾರಣವಾಗಿದೆ. ಅಭಿಮಾನ ತ್ಯಜಿಸಿದಲ್ಲಿ ನಿನಗೆಲ್ಲಿಯ ಬಾಧೆ? ಜಾಗ್ರತ್ ಮತ್ತು ಸ್ವಪ್ನ ಈ ಎರಡು ಅವಸ್ಥೆಗಳಲ್ಲಿ ಮಾತ್ರ ನಾನು, ನನ್ನದೆಂಬ ಅಭಿಮಾನವು ನಿನಗೆ ಬಾಧೆ ನೀಡುವುದು. ಇದು ಖೇದದಾಯಕವಾಗಿದೆ. ಆದರೆ ಸುಷುಪ್ತಿಯಲ್ಲಿ ಇವೆರಡೂ ಲಯವಾಗಿದ್ದರಿಂದ ಆನಂದ ತೋರುವುದಲ್ಲವೆ ? ಆಗ ನಿರ್ವಾಣಯ್ಯ, ಹೇ ಗುರುನಾಥ, ಹಾಗಾದರೆ ಈ ಅಭಿಮಾನ ನಾಶವಾಗುವ ಉಪಾಯವೇನು, ನನಗೆ ತಿಳಿಸು ಅಂತಾ ಕೇಳಿಕೊಂಡನು. ಆಗ ಸಿದ್ದಾರೂಢರು, ಹೇ ನಿರ್ವಾಣಯ್ಯನೆ ಕೇಳು, ಇಂತಹ ಅಭಿಮಾನಕ್ಕೂ ಅಂತಃಕರಣಕ್ಕೆ ಹಾಗೂ ಇಂದ್ರಿಯಗಳಿಗೂ ತಾನು ಕರ್ತನಲ್ಲ. ಯಾಕೆಂದರೆ ಆತ್ಮನು ಪರಿಶುದ್ಧನು, ಅಜಾತನೂ, ಅಸಂಗತನಾಗಿ ಅರಿಯುವುದರಿಂದ ಅಕರ್ತನು, ಅಭೋಕ್ತನು ಇರುವನೆಂದು ನೀನು ನಿಜವಾಗಿ ತಿಳಿಯುವನಾಗು. ಹೀಗೆ ತಿಳಿಯುವುದರಿಂದ ನಾತಿಶಯದ ಅಭಿಮಾನವು ನಾಶವಾಗುವುದು. ನಂತರ ಸಾಮೈಕ ಭಾವಭಾವನೆಗಳ ಬಗ್ಗೆ ನಿನಗೆ ಅನುಭವ ಬರುವುದು ಎಂದರು. ಆಗ ನಿರ್ವಾಣಯ್ಯನು, ಹೇ ಸದ್ಗುರುವೇ, ತಾವು ನುಡಿದ ಸಾಮೈಕ್ಯಭಾವಾಭಾವ ತಿಳಿಯಲಿಲ್ಲ. ಈ ಬಗ್ಗೆ ವಿವರಿಸಬೇಕು ಅಂತಾ ಕೇಳಿಕೊಂಡನು. ಆಗ ಸದ್ಗುರುಗಳು ಆತನನ್ನು ಕುರಿತು, ಹೇ ಭಕ್ತ ಶಿರೋಮಣಿಯೇ ಕೇಳು ಒಂದು ವಸ್ತುವು ಒಂದೇ ಸಮಯಕ್ಕೆ ಒಂದೇ ಸ್ಥಾನ ದೇಶಗಳಲ್ಲಿ ಇದ್ದರೆ ಅದೇ ಸಮಯಕ್ಕೆ ಆ ವಸ್ತುವು ಇನ್ನೊಂದು ಸ್ಥಾನದಲ್ಲಿ, ದೇಶದಲ್ಲಿ ಅಭಾವವಾಗಿರುತ್ತದೆ. ಇದೇ ದೇಶಭೇದವು ಇದುವೇ ಭಾವಭಾವ ಎಂದು ಹೇಳಿಸಿಕೊಳ್ಳುವುದು ಹೇಗೆಂದರೆ ಮನೆಯೊಳಗೆ ಒಂದು ಜಾಗದಲ್ಲಿ ಒಂದು ಕೊಡವು ಇದ್ದುದನ್ನು ಕಂಡರೆ ಅದಕ್ಕೆ ಭಾವ ಅಂತಾ ಕರೆಯುವರು. ಆ ಕೊಡವನ್ನು ಯಾರಾದರೂ ತೆಗೆದುಕೊಂಡು ಹೋದಲ್ಲಿ ಆ ಕಾರಣದಿಂದಲೇ ಅದು ಅಭಾವವಾಗುತ್ತದೆ. ಇದಕ್ಕೆ ಸಾಮೈಕ್ಯಭಾವ ಅಂತಾ ಕರೆಯುವರು. ಇದರಂತೆ ಜೀವನದಲ್ಲಿಯ ಕರಣ, ಕರ್ತೃತ್ವದ
ಅಭಿಮಾನವು ಈಶ ಮತ್ತು ಆತ್ಮನಲ್ಲಿ ಇರುವುದಿಲ್ಲ.
ಇನ್ನು ಈಶನಲ್ಲಿಯ ಸಂಕಲ್ಪ ಕರ್ತೃತ್ವದ ಅಭಿಮಾನವು ಜೀವ ಮತ್ತು ಆತ್ಮನಲ್ಲಿ ಇರುವುದಿಲ್ಲ ಮತ್ತು ಆತ್ಮನಲ್ಲಿಯ ಸನ್ನಿದಾನ ಕರ್ತೃತ್ವದ ಅಭಿಮಾನ ಜೀವ ಮತ್ತು ಈಶ್ವರನಲ್ಲಿ ಇರುವುದಿಲ್ಲ. ಈ ಮೂವರಲ್ಲಿ ಮೂರು ಅಭಿಮಾನ ಇದ್ದರೂ ನೀನು ಮಾತ್ರ ಅದಕ್ಕೆ ಸಾಕ್ಷಿಕನು. ಭವರಹಿತವಾದ ನಿಮಗೆ ಯಾವ ಕರ್ತೃತ್ವವೂ ಸಂಭವಿಸುವುದಿಲ್ಲ. ಅತ್ಯಂತ ಅಭಾವವಿರುವ ಕರ್ತೃತ್ವಾದಿ ಅಭಿಮಾನಿಗಳು, ಸೂರ್ಯ ಮತ್ತು ಸೂರ್ಯಕಾಂತ ಮಣಿಗಳೆರಡರ ಸನ್ನಿಧಾನದಲ್ಲಿ ಇಚ್ಛೆ ಯತ್ನಗಳಿಲ್ಲದೆ ದಾಹರೂಪ ಕಾರ್ಯವು ತೋರುವಂತೆ, ಅವರವರ ಸನ್ನಿಧಾನದಲ್ಲಿ ಅವು ತೋರಿಸುತ್ತಿರುವವು. ಭ್ರಾಂತಿರಹಿತನಾಗಿ ಅಕರ್ತ, ಅಭೋಕ್ತ ನೀನಿರಲಾಗಿ, ಚಿಂತೆ ಬಾಧಗಳಿರದ ಸುಖ ರೂಪಾತ್ಮನೇ ನೀನಿರುವಿ. ಈ ಬಗ್ಗೆ ಉಪನಿಷತ್ತಿನಲ್ಲಿ ಅನೇಕ ಪ್ರಶೋತ್ತರಗಳಿವೆ. ಸಂತೋಷ ನೀಡುವ ಪ್ರಮಾಣಗಳು ಇರುತ್ತವೆ ಅಂತ ವಿವರಿಸಿದರು. ಅದಕ್ಕೆ ನಿರ್ವಾಣಯ್ಯನು ಶ್ರೀಗಳನ್ನು ಕುರಿತು, ಆ ಪ್ರಮಾಣಗಳಾವವು ಎಂದು ಪ್ರಶ್ನಿಸಿದನು. ಆಗ ಶ್ರೀಗಳು ಆರು ಉಪನಿಷತ್ತಿನ ಸರಸವಾದ ನಾಲ್ಕು ಖಂಡ, ಕಠೋಪನಿಷತ್ತಿನ ಎರಡು ಸಂಧಿಗಳಲ್ಲಿಯ ಆರು ವಲ್ಲಿ ಹಾಗೂ ಪ್ರಶ್ನೋಪನಿಷತ್ತಿನ ಆರು ಪ್ರಶ್ನೆಗಳ ಕುರಿತು ಸಂತೋಷದಿಂದ ವಿವರಿಸಿದರು. ನಂತರ ಶ್ರೀಗಳು ನಿನಗೇನಾದರೂ ಸಂಶಯಗಳಿದ್ದಲ್ಲಿ ಕೇಳಬಹುದು ಅಂತಾ ಪ್ರಶ್ನಿಸಿದರು. ಆಗ ನಿರ್ವಾಣಯ್ಯ ಶ್ರೀಗಳ ಚರಣ ಕಮಲಗಳಲ್ಲಿ ವಂದನೆಗಳನ್ನು ಮಾಡುತ್ತಾ, ಹೇ ಗುರುವೇ, ಶೈವ ಸಿದ್ಧಾಂತದಲ್ಲಿಯ ಷಟ್‌ಸ್ಥಳಗಳು ವೇದಾಂತಕ್ಕೆ ಅನುಗುಣವಾಗಿರುವವೋ ಅಥವಾ ಬೇರೆಯಾಗಿರುವೆಯೋ ಎಂಬುದರ ಸಂಶಯ ನಿವಾರಿಸು ಅಂತಾ ಕೇಳಿಕೊಂಡನು. ಆಗ ಶ್ರೀಗಳು ವೀರಶೈವ ಸಿದ್ಧಾಂತದ ಕುರಿತು ವಿವರಿಸಿತೊಡಗಿದರು.
🕉️ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ವಿವರಿಸಿದ್ದು 🕉️
" ಏಕಮೇವಾದ್ವಿತೀಯಂ ಬ್ರಹ್ಮ " ಎಂಬಂತೆ ಎರಡಿಲ್ಲದ ಒಂದೇಯಾದ ಸಚ್ಚಿದಾನಂದ ಲಕ್ಷಣವುಳ್ಳ ಪರಬ್ರಹ್ಮನಾದ ಶಿವತತ್ವಕ್ಕೆ ಶಿವಾಚಾರ್ಯರು ಭಕ್ತಿಯಿಂದ ಸ್ಥಲವೆನ್ನುತ್ತಾರೆ. ಬ್ರಹ್ಮ ಶಬ್ದಕ್ಕೂ ಸ್ಥಲ ಶಬ್ದಕ್ಕೂ ಭೇದವಿಲ್ಲ. ಆ ಶಿವತತ್ವದಲ್ಲಿದ್ದ ಮಾಯಾ ಶಕ್ತಿಯ ಚಲನವಲನದಿಂದ ಆ ಶಿವತತ್ವ ಸ್ಥಲವು ಆರು ಭಾಗವಾಗಿರುವುದರಿಂದ ಅದಕ್ಕೆ ಷಟ್‌ಸ್ಥಲವೆನ್ನುವರು. ಈ ಮಾರ್ಗದಲ್ಲಿ ಜೀವನು ಭಕ್ತಿಸ್ಥಲದಿಂದ ಐಕ್ಯಸ್ಥಲವರೆಗೆ ಸಾಧಿಸುತ್ತಾ ಬ್ರಹ್ಮ ಸ್ವರೂಪನಾಗುವನು. ಪಿಂಡ ಜೀವನಿಗೆ ಸದ್ಭಕ್ತಿ ಹುಟ್ಟಲು ಆ ಭಕ್ತಿಯ ಸಂಬಂಧದಿಂದ ಆ ಜೀವಾತ್ಮನಿಗೆ ಭಕ್ತಸ್ಥಲ ಪ್ರಾಪ್ತವಾಗುವವುದು. ನಂತರ ಭಕ್ತಿ ಮತ್ತು ಕರ್ಮಗಳ ಆಚಾರವನ್ನು ಮಾಡಿ ಭಕ್ತನು
೧. ಆಚಾರ ಲಿಂಗದಲ್ಲಿ ಕೂಡುವನು. ಭಕ್ತಸ್ಥಲದಲ್ಲಿದ್ದ ಸದ್ಭಕ್ತಿಯು ನಿಷ್ಠೆಯಿಂದ ಪೂರ್ಣವಾದಾಗ ಅದಕ್ಕೆ ನೈಷ್ಠಿಕ ಭಕ್ತಿ ಎನ್ನುವರು. ಈ ಭಕ್ತಿಯಿಂದ ಜೀವಾತ್ಮನಿಗೆ ಮಹೇಶ್ವರ ಸ್ಥಲ ಪ್ರಾಪ್ತವಾಗಿ ಅವನು
೨. ಗುರುಲಿಂಗದಲ್ಲಿ ಕೂಡುವನು. ಆ ಮಾಹೇಶ್ವರನಲ್ಲದ್ದ ಭಕ್ತಿಯು ಕಾಮಾದಿಗಳಿಂದ ಕಲುಷಿತವಾಗಿದೆ ಸಾತ್ವಿಕ ಮನಸ್ಸಿನ ಸ್ಥರತ್ವಕ್ಕೆ ಅವಧಾನ ಭಕ್ತಿ ಎನ್ನುವರು. ಈ ಅವಧಾನ ಭಕ್ತಿಯಿಂದ ಜೀವನಿಗೆ ಪ್ರಸಾದಿ ಸ್ಥಲ ದೊರತು ೩. ಶಿವಲಿಂಗದಲ್ಲಿ ಕೂಡುವನು, ಈ ಪ್ರಸಾದಿ ಸ್ಥಳದಲ್ಲಿದ್ದ ಅವಧಾನ ಭಕ್ತಿಗೆ ಸ್ವಾನುಭವದ ಸಂಬಂಧದಿಂದ ಅನುಭವ ಭಕ್ತಿ ಎನ್ನುವರು. ಈ ಅನುಭವ ಭಕ್ತಿಯಿಂದ ಜೀವಾತ್ಮನಿಗೆ
೪, ಪ್ರಾಣಲಿಂಗಿಯ ಸ್ಥಲ ದೊರೆತು ಪ್ರಾಣಲಿಂಗಿಯು ಜಂಗಮಲಿಂಗದಲ್ಲಿ ಕೂಡುವನು. ಈ ಪ್ರಾಣಲಿಂಗಿಯ ಸ್ಥಳದಲ್ಲಿದ್ದ ಅನುಭವ ಭಕ್ತಿಗೆ ಆನಂದ ಯೋಗದಿಂದ ಆನಂದಾತ್ಮಿಕ ಭಕ್ತಿಯೆನ್ನುವರು. ಇದರಿಂದ ಜೀವನಿಗೆ ಶರಣ ಸ್ಥಲ ದೊರತು ಶರಣನು
೫, ಪ್ರಸಾದ ಲಿಂಗದಲ್ಲಿ ಕೂಡುವನು. ಶರಣನಲ್ಲಿರತಕ್ಕ ಆನಂದಾತ್ಮಿಕ ಭಕ್ತಿಯು ಲಿಂಗಾಂಗ ಸಾಮರಸ್ಯದ ಪ್ರಭಾವದಿಂದ ಸಮರಸ ಭಕ್ತಿ ಎನಿಸುವುದು. ಈ ಭಕ್ತಿಯಿಂದ ಜೀವನಿಗೆ ಐಕ್ಯಸ್ಥಲ ದೊರೆತು ಜೀವನು
೬. ಮಹಾ ಲಿಂಗದಲ್ಲಿ ಕೂಡುವನು. ಈ ಐಕ್ಯಸ್ಥಲದಲ್ಲಿರತಕ್ಕ ಸಮರಸ ಭಕ್ತಿಯು ಸ್ವಸ್ವರೂಪದಿಂದ ಇರುವುದು, ಈ ಜೀವನು ಆರು ಅಂಗಸ್ಥಲದ ಯೋಗ ಮಾರ್ಗದಿಂದ ಪರಬ್ರಹ್ಮನನ್ನು ಸಾಧಿಸುವನಾದ್ದರಿಂದ ಈ ಸಾಧಕ ಜೀವನಿಗೆ ಕೂಡಲೇ ಷಟ್‌ಸ್ಥಲ ಬ್ರಹ್ಮಪ್ರಾಪ್ತಿಯು ಈ ಷಟ್‌ಸ್ಥಲದ ಆರು ಲಿಂಗಗಳಲ್ಲಿ ಕೂಡುವ ಗುರುವಿನ ಅನುಗ್ರಹದಿಂದ ಯಾವಾತನು ಅಭ್ಯಾಸ ಮಾಡುವನೋ ಅವನಿಗೆ ಸಾಯುಜ್ಯ ಮುಕ್ತಿ ದೊರೆಯುವುದು. ಲಿಂಗಾಂಗ ಸಾಮರಸ್ಯವೇ ಅದ್ವೈತವಾಗಿದೆ. ಕಾರಣ ವೇದಾಂತ ಶಾಸ್ತ್ರಕ್ಕೂ ಶಿವಸಿದ್ಧಾಂತಕ್ಕೂ ಭೇದವು ಇಲ್ಲ ಅಂತ ಬೋಧಿಸಿದರು. ಸಂಶಯ ನಿವಾರಣೆಗೊಂಡು ಹರ್ಷ ಚಿತ್ತದಿಂದ ಎದ್ದು ನಿರ್ವಾಣಯ್ಯನು ಗುರುಗಳ ಪಾದಾರವಿಂದಗಳಲ್ಲಿ ನತಮಸ್ತಕರಾಗಿ ವಂದನೆಗಳನ್ನು ಅರ್ಪಿಸಿದನು.
👇👇👇👇👇👇👇👇👇👇👇👇👇👇
👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ತಿರುಕಂಭಟ್ಟನಿಗೆ ಮಾಂಡಕ್ಯೋಪನಿಷತ್ತನ್ನು ಬಾಧಿಸಿದ ಸಿದ್ಧಾರೂಢರು,
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
