ಸಿದ್ಧಾರೂಢರು ಶರಣಪ್ಪನಿಗೆ ಆತ್ಮಜ್ಞಾನ ಮಾಡಿಸಿದ ಕಥೆ

 🍀ಶರಣಪ್ಪನನ್ನು ವೃಕ್ಷದ ಮೇಲೆ ಹತ್ತಿಸಿದಾಗ ಆತನು ಬಿದ್ದನು. ಆಗ ಸದ್ಗುರುಗಳು ಆತನಿಗಾದ ಆ ಮೂರ್ಚ್ಛೇಯ ಅನುಭವವನ್ನೇ ಆತ್ಮಜ್ಞಾನವಾಗಿ ಉಪದೇಶಿಸಿ ಉದ್ಧರಿಸಿದರು.



ಒಂದಾನೊಂದು ದಿವಸ ಮಹಾರಾಜರ ಸನ್ನಿಧಿಯಲ್ಲಿ ಸುಮಾರು ಹನ್ನೆರಡು ವರ್ಷ ವಯಸ್ಸಿನ ಒಬ್ಬ ಬಾಲಕನು

ಅಳುತ್ತಾ ಬಂದು, ಅವರ ಚರಣಗಳ ಮೇಲೆ ಬೀಳುವಂಥವನಾದನು. ಬಹಳ ಹೊತ್ತು ಏಳಲೇ  ಇಲ್ಲವೆಂದು, ಆ ಕೃಪಾಕರನಾದ ಸದ್ಗುರುವು,  ಆತನನ್ನು ಎತ್ತಿ ತನ್ನ ಸಮೀಪ ಕೂಡ್ರಿಸಿಕೊಂಡು, ಅವನಿಗೆ ವಿಚಾರಿಸುತ್ತಾನೆ- “ನೀನು ಯಾರ ಮಗನಿದ್ದಿ ?' ಯಾತರ ದೆಸೆಯಿಂದ ಅಳುತ್ತೀ? ನೀನು ಎಲ್ಲಿಂದ ಬಂದಿರುವಿ? ಇದನ್ನೆಲ್ಲಾ ಪೂರ್ಣವಾಗಿ ನನಗೆ ಹೇಳು, ಏನೇನೂ ಭಯ ಪಡಬೇಡ.'' ಸದ್ಗುರುಗಳು ಇಂಥಾ ಕೃಪಾವಚನಗಳಿಂದ ಆ ಹುಡುಗನನ್ನು ಕುರಿತು ಅಂದಾಗ್ಗೆ, ಆತನು ಶಾಂತವಾಗಿ ಅಂದದ್ದೇನೆಂದರೆ “ಅಪ್ಪಾ, ನನ್ನ ವಚನವನ್ನು ಶ್ರವಣ ಮಾಡು. ಈ ಜಗತ್ತಿನಲ್ಲಿ ನನ್ನವರೆನ್ನುವರು ಯಾರು ಇರುವದಿಲ್ಲ. ನನ್ನವರೆಂಬವರೇ ನನ್ನನ್ನು ಹೊರಗೆ ಹಾಕಿರುತ್ತಾರೆ. ತಾಯಿ, ತಂದೆ, ಬಂಧು, ಭಗಿನಿ ಇತ್ಯಾದಿಕರು ಯಾರು ನನಗೆ ಸೇರರು. ಅವರ ಸೇವೆಯನ್ನು ನಾನು ಮಾಡಲಾರೆನು. ನನಗೆ ಶಿವಪೂಜೆ ಮಾಡುವುದರಲ್ಲಿಯೇ ಅಧಿಕ ಪ್ರೀತಿಯೆಂದು ನನ್ನನ್ನು ಹೊರಗೆ ಹಾಕಿರುವರು. ಈಗ ನಾನು ಮನೆಗೆ ತಿರುಗಿ ಹೋಗಲಾರೆನು. ಹೇ ಸದ್ಗುರುನಾಥನೇ, ನೀನು ಶಿವಸ್ವರೂಪನಿದ್ದಿ, ನೀನು ಶರಣು ಬಂದವರಿಗೆ ರಕ್ಷಣೆ ಮಾಡುತ್ತಿ ಎಂಬ ನಿನ್ನ ಕೀರ್ತಿಯನ್ನು ನಾನು ಕೇಳಿ,

ನಿನ್ನ ಚರಣಗಳಿಗೆ ಪ್ರಾಪ್ತನಾಗಿರುತ್ತೇನೆ. ಈ ದಿನನಾದ ನನ್ನನ್ನು ತಾರಿಸು. ಅಥವಾ ನಿನ್ನ ಹಸ್ತದಿಂದಲೇ ನನ್ನನ್ನು ಹೊಡೆದುಹಾಕು, ಆದರೆ ನನ್ನನ್ನು ಹೊರಗೆ ಕಳುಹಿಸಬೇಡ. ನನ್ನ ಭಾರವೆಲ್ಲಾ ನಿನ್ನ ಮೇಲಿರುತ್ತದೆ'', ಇಂಥಾ ಕರುಣಾರ್ದ್ರ ವಚನವನ್ನು ಕೇಳಿ, ಆ ದಯಾಘನನಾದ ಸದ್ಗುರುನಾಥನು ಅಂತಃಕರಣ ಕರಗಿದಂಥವನಾಗಿ, ಅನ್ನುತ್ತಾನೆ – “ನೀನು ಇಲ್ಲೇ 

ಇರು. ನಿನಗೆ ಶರಣನೆಂಬ ಹೆಸರು ಇಟ್ಟಿರುತ್ತಾನೆ.” ಈ ಪ್ರಕಾರ ಸದ್ಗುರು ವಚನವನ್ನು ಕೇಳಿ, ಆ ಶರಣನು ಮಠದಲ್ಲೇ ಇರುತ್ತಿದ್ದು, ನಿತ್ಯದಲ್ಲಿಯೂ ಊರೊಳಗೆ ಭಿಕ್ಷೆ ಬೇಡಲಿಕ್ಕೆ ಹೋಗುತ್ತಿದ್ದನು. ಭಿಕ್ಷೆ ಮಾಡಿಕೊಂಡು ತಂದ ಅನ್ನವನ್ನು ಸದ್ಗುರುಗಳ ಮುಂದಿಟ್ಟು, ಅವರು ಕೊಟ್ಟಷ್ಟು ಪ್ರೇಮದಿಂದ ತೆಗೆದುಕೊಳ್ಳುವನು. ಒಂದಾನೊಂದು ದಿನ, ಸದ್ಗುರುಗಳು ಆ ಶರಣನ  ಪರೀಕ್ಷಾ ಮಾಡುವದಕ್ಕೋಸ್ಕರ, ಆತನನ್ನು ಊಟಕ್ಕೆ ಕರೆಯಲಿಲ್ಲ; ಶರಣನಾದರೂ, ಸ್ವಸ್ಥ ಚಿತ್ತದಿಂದಿದ್ದು, ಸದ್ಗುರು ಚಿಂತನವನ್ನು ಮಾಡುತ್ತ ಇದ್ದನು. ಒಂದು ದಿನ ಪೂರಾ ಉಪವಾಸವಿದ್ದು, ಶರಣನು ಎರಡನೇ ದಿವಸ ಭಿಕ್ಷಕ್ಕೆ ಹೋದನು. ಆ ದಿವಸ ಬಹಳ ಭಿಕ್ಷೆ ಸಿಕ್ಕಿತು, ಆದರೂ ಅದರೊಳಗಿಂದ ಸ್ವಲ್ಪವಾದರೂ ತೆಗೆದುಕೊಳ್ಳಲಿಲ್ಲ.  ಸದ್ಗುರು ಆಜ್ಞೆ ವಿನಹಾ ತೆಗೆದುಕೊಳ್ಳುವ ಅನ್ನವು ವಿಷ ಸಮಾನವಾಗಿದ್ದು, ಹಸಿವಿನಿಂದ ಪ್ರಾಣ ಹೋಗುತ್ತಿದ್ದರೂ,

ಅದರೊಳಗಿನ ಅನ್ನವನ್ನು ಗುರುಗಳನ್ನು ಬಿಟ್ಟು ಸೇವಿಸಬಾರದೆಂದು ಶರಣನು  ತಕ್ಕೊಳ್ಳಲಿಲ್ಲ. ಮಠಕ್ಕೆ ಬರುತ್ತಲೆ, ಆತನನ್ನು ನೋಡಿ ಸದ್ಗುರುಗಳು ಅನ್ನುತ್ತಾರೆ, “ನೀನು ನಿನ್ನೆ  ಉಪವಾಸ ಇದ್ದಿ, ಭಿಕ್ಷೆ ತೆಗೆದುಕೊಂಡು ಬರುವಾಗ ದಾರಿಯಲ್ಲಿ ನೀನು ತಿನ್ನುತ್ತಾ ಬಂದಿರುವಿ, ಇದರೊಳಗೇನೂ ಸಂಶಯವಿಲ್ಲ.” ಈ ಪ್ರಕಾರ ಸದ್ಗುರುಗಳು ಅಂದಿದ್ದು ಕೇಳಿ, ಆ ಶರಣನು  ದೈನ್ಯಭಾವದಿಂದ, ಜೋಳಿಗೆಯನ್ನು ಅವರ ಮುಂದಿಟ್ಟು, ನಮಸ್ಕಾರ ಮಾಡಿ, ಸೇವಾ ಮಾಡುವದಕ್ಕೋಸ್ಕರ

ಹೋಗುವಂಥವನಾದನು. ಶರಣನು  ಸರ್ವಕಾಲದಲ್ಲಿ ಪ್ರಸನ್ನವದನನಾಗಿಯೂ ಮುಖದಿಂದ ಕೇವಲ ಸಿದ್ಧನಾಮವನ್ನು ಉಚ್ಚರಿಸುವಂಥವನಾಗಿಯೂ, ಎಲ್ಲರ  ಕೂಡ ವಿನೀತ ಭಾವದಿಂದ ಇರುತ್ತಿದ್ದನು. ಆಮೇಲೆ ಸದ್ಗುರುಗಳು ಶರಣನಿಗೆ ಹೇಳುತ್ತಾರೆ- "ನೀನು ಆ ಮರವನ್ನು ಹತ್ತಿ, ಚಲೋ ಪಕ್ವವಾದ ಹಣ್ಣುಗಳನ್ನು ಹರಿದು ಕೆಳಗೆ ಹಾಕು, ಅವನ್ನು ನಾವೆಲ್ಲರೂ ತೆಗೆದುಕೊಳ್ಳುವೆವು." ಇದನ್ನು ಕೇಳಿದ ಕೂಡಲೇ ಆ ಶರಣ ಬಾಲಕನ ಆ ಉದ್ದವಾದ ವೃಕ್ಷವನ್ನು ಹತ್ತಿದನು.  ಅವನ ಕೈಕಾಲುಗಳು ಅಶಕ್ತಿಯಿಂದ ಕಂಪಿಸುತ್ತಿದ್ದವು. ಆದರೆ ದೇಹವು ಸದ್ಗುರುವಿನದು, ಎಂದು ತಿಳಿದು ತನ್ನೊಳಗೆ ಶರಣನು ಚಿಂತಿಸುತ್ತಾನೆ - ಇಲ್ಲಿ ನನ್ನದೇನೂ ಇರುವುದಿಲ್ಲ; ಆತನಿಗೆ ಬೇಕಾದರೆ ಆತನೇ ರಕ್ಷಿಸುವನು, ಇಲ್ಲವಾದರೆ - ಸಂತೋಷದಿಂದ ಈ ದೇಹವನ್ನು ಹೋಗಗೊಡಲಿ, ನಾನು ಈ ಸಮ್ಮಂಧ ಚಿಂತೆ ಮಾಡುವದಕ್ಕೆ ಕಾರಣವೇ ಇರುವದಿಲ್ಲ.”

ಹೀಗೇ ಚಿಂತಿಸುತ್ತಾ, ಶರಣನು ಸಾವಕಾಶವಾಗಿ ಗಿಡವನ್ನು ಹತ್ತುತ್ತಿದ್ದನು. ಆತನಿಗೆ ಅನ್ನವಿಲ್ಲದೆ ಶರೀರದಲ್ಲಿ ಶಕ್ತಿ ಏನೂ

ಇರಲಿಲ್ಲ, ಆದರೆ ಗುರುಚರಣದಲ್ಲಿ ದೃಢ ಭಕ್ತಿ ಇತ್ತು. ಸದ್ಗುರುನಾಥನು ನನ್ನನ್ನು ತಾರಣ ಮಾಡುವದಕ್ಕೋಸ್ಕರ

ಉಪಾಯ ಮಾಡುತ್ತಾನೆ, ಎಂದು ಶರಣನು ತಿಳಿದುಕೊಂಡು, ಮನಸ್ಸಿಗೆ ಅನ್ನುತ್ತಾನೆ- "ಹೇ ಮನಸ್ಸೇ ಆ ಸದ್ಗುರುನಾಥನ ಚಿಂತನೆಯನ್ನು ಮಾಡುತ್ತಿರು. ಎರಡನೇದೇನೂ ನೋಡಬೇಡ.'' ಎತ್ತರ ಇದ್ದ ಒಂದು ಟೊಂಗೆಯ  ಮೇಲೆ ಹತ್ತಿ ಶರಣನು, ಅಲ್ಲಿ ಒಂದು ಕ್ಷಣ ಕುಳಿತುಕೊಂಡು, ಆಮೇಲೆ ಒಂದು ಹಣ್ಣು ತೆಗೆದುಕೊಳ್ಳುವ ದೆಶೆಯಿಂದ, ಅದರ ದೇಟಿನ ಕಡೆ

ಕೈಚಾಚಿದನು. ಆಗ ಕಾಲುಗಳು ನಡುಗುತ್ತಾ ಜಾರಿದವು,  ಕೈಹಿಡಿದ ಟೊಂಗೆ ಮುರಿಯಿತು. ಶರಣನು, “ಸಿದ್ಧಾರೂಢ ಎಂದು ಘಟ್ಟಿಯಾಗಿ ಕೂಗಿ, ಭೂಮಿಗೆ ಅಪ್ಪಳಿಸಿ ಬಿದ್ದು, ಕೂಡಲೇ ಮೂರ್ಛಾಗತನಾದನು. ಸಮೀಪವಿದ್ದ  ಇತರ

ಜನರು ಅಲ್ಲಿಗೆ  ಓಡಿ ಬಂದರು. ಸದ್ಗುರುಗಳಾದರೂ, ದೂರದಲ್ಲಿ ನಿಂತು ಹೇಳುತ್ತಾರೆ- “ಆತನಿಗೆ ಏನು ಭೀತಿ ಇಲ್ಲ. ನೀವೆಲ್ಲರೂ ಮಠಕ್ಕೆ ಹೋಗಿರಿ, ನಾನು ಇಲ್ಲಿ ಆತನ ಸಂಗಡ ಇರುವೆನು". ಸದ್ಗುರುಗಳು ಹೀಗೆ ಅಂದದ್ದು ಕೇಳಿ, ಅವರೆಲ್ಲರೂ ಆಶ್ಚರ್ಯಚಕಿತರಾಗಿ ಮಠದ ಕಡೆಗೆ ಹೋಗುವಂಥವರಾದರು. ಆಗ್ಗೆ ಏಕಾಂತವಿದ್ದದ್ದನ್ನು ನೋಡಿ ಸದ್ಗುರು ಮಹಾರಾಜರು, ಆ ಶರಣನ  ಸಮೀಪ ಹೋಗಿ ಕುಳಿತುಕೊಂಡು, ಅವನ ವಕ್ಷ ಸ್ಥಳದಲ್ಲಿ ಹಸ್ತ ಸ್ಪರ್ಶಮಾಡಿ, - "ಏಳಪ್ಪಾ ನನ್ನ ಪುತ್ರನೇ ಏಳು,'' ಎಂದು ಹೇಳಿದ ಕೂಡಲೆ, ಶರಣನಿಗೆ ಮೆಲ್ಲಗೆ ಸ್ಮೃತಿ ಬಂದು, ಆತನು ಕಣ್ಣು ತೆರೆದು ನೋಡಲಾಗಿ ಆ ಸದ್ಗುರು ಸಮರ್ಥನು  ಸಮೀಪ ಕುಳಿತಿರುವದನ್ನು ಕಂಡನು. ಆಗ ಸದ್ಗುರುಗಳು ಅವನನ್ನು ಕುರಿತು ಕೇಳುತ್ತಾರೆ- "ನಿನಗೆ ಇಷ್ಟು ಹೊತ್ತು ಏನು ಅನುಭವವಾಯಿತು ? ಅದಕ್ಕೆ ಶರಣನು - “ನಾನು ಏನೇನೋ ಅರಿಯಲಿಲ್ಲ, ಇದೇ ನನ್ನ ಅನುಭವವಾಗಿರುತ್ತದೆ' ಅಂದನು. ಅದಕ್ಕೆ ಸದ್ಗುರುಗಳನ್ನುತ್ತಾರೆ- ''ನೀನು ಏನೇನೂ ಅರಿಯದೆ  ಯಾವದಾಗಿ ಇದ್ದಿಯೋ, ಅದೇ ಸತ್ಯವಾಗಿ ನೀನಿರುತ್ತೀ- ಸ್ವರೂಪ ಜ್ಞಾನವೆಂಬುದು ಇದೇ ಇರುತ್ತದೆ. ಈಗ ಈ ಮೂರ್ಚ್ಛೇಯ ಅನುಭವವನ್ನು ನೀನು  ಅಖಂಡವಾಗಿ ಹಿಡಿದು, ಆ ಸ್ವರೂಪವೇ ನಾನೆಂದು ಧ್ಯಾನ ಮಾಡುತ್ತಿರು." ಈ ಪ್ರಕಾರ ಅಂದು ಸದ್ಗುರುನಾಥರು .

ಆ ಶರಣನ ಮಸ್ತಕದ ಮೇಲೆ ಅಮೃತ ಹಸ್ತವನ್ನು ಇಟ್ಟ ಕೂಡಲೇ, ಆತನು  ಕ್ಷಣ ಮಾತ್ರ ಕಣ್ಣು ಮುಚ್ಚಿ ಅಂತರ್ಯದಲ್ಲಿ  ಆತ್ಮ ಜ್ಯೋತಿಯನ್ನು ಕಾಣುವಂಥವನಾದನು. ಕೋಟಿ ಸೂರ್ಯರಿಗಿಂತಲೂ ಅಧಿಕ ತೇಜೋಮಯವಾದ ಆತ್ಮಜ್ಯೋತಿಯು

ಅವನಿಗೆ ತನ್ನ ಸ್ವರೂಪವಾಗಿ ವಿರಾಜಿಸುತ್ತಿತ್ತು. ಆ ನಂತರ, ಅದರೊಳಗೆ ಐಕ್ಯತ್ವವನ್ನು ಹೊಂದಿ, ಸ್ವೇತರಜ್ಞಪ್ತಿಯನ್ನು

ಮರೆಯುವಂಥವನಾದನು. ಶರಣನು  ಕ್ಷಣಮಾತ್ರ ಆ ಸ್ವರೂಪದಲ್ಲಿದ್ದು ಕೂಡಲೇ, ಶರೀರ ಸ್ಮೃತಿ ಬಂದು, ಹೊರಗೆ ಜಗತ್ತನ್ನು ನೋಡುವಾಗ್ಗೆ, ಎಲ್ಲ ವಸ್ತುಗಳು ಪಲ್ಲಟವಾಗಿ ಕಂಡನು. ಆ ಜ್ಯೋತಿಯೇ ಎಲ್ಲೆಲ್ಲಿಯೂ ಕಾಣಿಸುತ್ತಿತ್ತು. ಜಗವೆಲ್ಲ ತಾನೆ ಎಂದು ಭಾವಿಸುತ್ತಿದ್ದು, ತಾನು  ಗುರುವಿಗೆ ಬೇರೆ ಇದ್ದಂತೆ ಕಾಣಿಸಲೇ  ಇಲ್ಲ. ಸರ್ವತ್ರದಲ್ಲಿ ತಾನೇ ತುಂಬಿದ್ದ , ಸಾಕ್ಷಿತ್ವದಿಂದ ಉಳಿದನು. ಜಗವನ್ನು ದಿಟ್ಟಿಸಿ ನೋಡಲಾಗಿ, ದೃಶ್ಯವೆಲ್ಲ ಅದೃಶ್ಯವಾಗಿ ತಾನೊಬ್ಬನೇ ಅಭಂಗನಾಗಿದ್ದು,  ಇದೇ ತನ್ನ ಪೂರ್ಣ ಸ್ವರೂಪವೆಂದು ತಿಳಿದನು. ಇಂಥಾ ಸ್ವರೂಪ ಜ್ಞಾನವನ್ನು ಸದ್ಗುರುವರನ ಕೃಪೆಯಿಂದ ಶರಣನಿಗೆ ಪ್ರಾಪ್ತಿ ಮಾಡಿಕೊಟ್ಟಾಗ ಆ ಶರಣನು “ನಾನು ಧನ್ಯನಾದೆನು. ಇಂಥಾ ಆನಂದಕ್ಕಿಂತ ಅಧಿಕವಾದ ಆನಂದವು ಈ ತ್ರಿಭುವನದಲ್ಲಿ ಇರಲಾರದು. ಗುರುವರನು ಕೃಪೆಯಿಂದ ಆನಂದದ ಖಣಿಯನ್ನೇ ನನಗೋಸ್ಕರ ತೆರೆದು ಕೊಟ್ಟನು.” ಎಂದು ಸ್ತುತಿಸಿದನು. ಆಮೇಲೆ ಸದ್ಗುರುಗಳು ಆತನನ್ನು ಕುರಿತು ಅನ್ನುತ್ತಾರೆ- “ನಾನು ಈಗ ನಿನಗೋಸ್ಕರ ಏನು ಹೇಳುವೆನೋ  ಅದನ್ನು ಮನಸ್ಸಿನಲ್ಲಿ ದೃಢವಾಗಿ ಹಿಡಿಯತಕ್ಕದ್ದು. ಈ ಸ್ವರೂಪ ಧ್ಯಾನವನ್ನು ಹಗಲೂ  ರಾತ್ರಿ ಮಾಡತಕ್ಕದ್ದು, ಮತ್ತು ವಿಷಯ ಚಿಂತನೆಯನ್ನು ಬಿಟ್ಟುಬಿಡು. ನಾನು ಜ್ಞಾನಿಯಾದೆ, ಇನ್ನು ವಿಷಯಗಳಿಂದ ಭಯವಿಲ್ಲವೆಂದು ತಿಳಿದು ನೀನು ವಿಷಯಗಳನ್ನು ಸ್ವೀಕರಿಸಿದಿ ಅಂದರೆ  ನಿಶ್ಚಯವಾಗಿ ನೀನು ಸ್ವರೂಪ ಸ್ಥಿತಿಯಿಂದ ಪತನ ಹೊಂದಿ, ಸ್ವರೂಪ ಜ್ಞಾನಕ್ಕೆ ಆವರಣ ಮಾಡಿಕೊಳ್ಳುವಿ. ಕಣ್ಣುಗಳಿಂದ ಏನೇನು ವಿಷಯಗಳನ್ನು ಕಾಣುವಿಯೋ, ಅವುಗಳನ್ನು ಸೋಹಂಭಾವದ ಬಲದಿಂದ ನಿರ್ವಿಷಯಗಳನ್ನಾಗಿ ಮಾಡಿ ಹೊರಗೆ ಎಲ್ಲ ವಸ್ತುಗಳಲ್ಲಿ ಅದ್ವಯನಾದ, ಅವಶಿಷ್ಠ ಆತ್ಮನನ್ನೇ ಕಾಣುವಂಥವನಾಗು. ಅಂತರ್ವಿಷಯಗಳು ಸೂಕ್ಷ್ಮವಾಗಿರುವುದರಿಂದ, ನಿರಸನ ಮಾಡುವುದು ಅತ್ಯಂತ ಕಠಿಣವಾಗಿರುತ್ತದೆ. ಅವಕ್ಕಾದರು ಏನೂ ಉಪಾಯ ಮಾಡತಕ್ಕದ್ದೆಂದು ಹೇಳುವೆನು, ಕೇಳು, ಸದ್ಗುರುರೂಪದ ಮೇಲೆ ಸೋಹಂಭಾವವನ್ನು ಪ್ರಯೋಗಿಸುವದು. ಅತಿ ಸುಲಭವಾಗಿರುವದು. ಅದನ್ನು ಸಾಧಿಸಿದ ಮೇಲೆ, ಮನಸ್ಸಿನೊಳಗೆ ಏನೇನು ವಿಷಯಗಳು ಬರುತ್ತವೆಯೋ  ಅವೆಲ್ಲಾ ಸದ್ಗುರು ರೂಪವೆಂದು ತಿಳಿಯತಕ್ಕದ್ದು. ಸದ್ಗುರು ರೂಪವೆಂದು ಭಾವಿಸಲ್ಪಟ್ಟ ವಿಷಯಗಳನ್ನು ಸೋಹಂಭಾವದಿಂದ ಆತ್ಮರೂಪಗಳೆಂದು ನಿರ್ಧರಿಸಿದ್ದಾದರೆ, ಆಂತರ್ಯದಲ್ಲಿ ನಿರ್ವಿಕಲ್ಪ ಸ್ವರೂಪವನ್ನು ಕಾಣುವಿ, ಮತ್ತು ಹೊರಗೂ ಅದೇ

ಪ್ರಕಾರ ಎಲ್ಲಾ ವಸ್ತುಗಳನ್ನು ನೋಡುವಿ." ಇಂಥಾ ಗಹನವಾದ ಬೋಧನವನ್ನು, ಶರಣನು ಏಕಾಗ್ರ ಚಿತ್ತದಿಂದ ಶ್ರವಣ ಮಾಡಿ ಅನ್ನುತ್ತಾನೆ - ''ಹೇ ಸದ್ಗುರುನಾಥಾ, ನಿನ್ನ ಕೃಪೆಯಿಂದ ನಾನು ಧನ್ಯನಾದೆನು, ತ್ರಿವಾರ ಧನ್ಯನಾದೆನು." ಶರಣನ ಶರೀರವು ಪತನದಿಂದ ಜರ್ಜರವಾಗಿತ್ತು, ಆದರೆ ಸದ್ಗುರುಗಳು, ಅದನ್ನು ಹಸ್ತಸ್ಪರ್ಶಮಾತ್ರದಿಂದ ಯಥಾಪೂರ್ವ ಸಶಕ್ತ ಮಾಡಿದರು. ಕೂಡಲೇ ಶರಣನು ಎದ್ದು ತನ್ನ ಮಸ್ತಕವನ್ನು ಬಹು ಪ್ರೇಮಯುಕ್ತನಾಗಿ ಸಿದ್ಧಚರಣಗಳಲ್ಲಿ ಇಡುವಂಥವನಾದನು. ಸದ್ಗುರುಗಳು ತಮ್ಮ ಎರಡೂ  ಹಸ್ತಗಳಿಂದ ಆ ಶರಣನನ್ನು ಎಬ್ಬಿಸಿ, ಮಠಕ್ಕೆ ಕರೆದುಕೊಂಡು ಹೋಗವಂಥವರಾದರು.

ಅಲ್ಲಿ ಶರಣಪ್ಪನಿಗೆ ಸ್ನಾನ ಮಾಡಿಸಿ, ಸದ್ಗುರುಗಳು ಆತನನ್ನು ಕರೆದುಕೊಂಡು ಭೋಜನಕ್ಕೆ ಕುಳಿತರು. ತಮ್ಮ ಸ್ವಹಸ್ತದಿಂದ ಶರಣಪ್ಪನ ಮುಖದಲ್ಲಿ ಪ್ರೇಮ ಗ್ರಾಸವನ್ನು ಹಾಕಿ, ಆತನಿಗೆ ಆನಂದ ತೃಪ್ತಿಯನ್ನು ಉಂಟು ಮಾಡುವಂಥವರಾದರು.


ಒಂದಾನೊಂದು  ದಿವಸ ಒಬ್ಬ ಗೃಹಸ್ಥರು ಸಿದ್ಧಾಶ್ರಮಕ್ಕೆ ಬಂದು ಸದ್ಗುರುಗಳಿಗೆ ನಮಸ್ಕಾರ ಮಾಡಲು, ಸದ್ಗುರುಗಳು ಆತನಿಗೆ ಬಂಧಂಥಾ ಕಾರಣವನ್ನು ಕೇಳುವಂಥವರಾದರು. ಆಗ ಆ ಗೃಹಸ್ಥನಂದನು - ''ನಾನು ವಿಜಾಪುರವಾಸಿಯು ಷಣ್ಮುಖಸ್ವಾಮಿಯವರ ಸನ್ನಿಧಿಯಲ್ಲಿರುತ್ತೇನೆ. ತಮ್ಮ ದರ್ಶನೋತ್ಸುಕನಾಗಿ ಇಲ್ಲಿಗೆ ಬಂದಿರುವೆನು. ನನಗೆ ನಿಮ್ಮಲ್ಲಿರುವ ಶರಣಪ್ಪನ ಪರಿಚಯವಿದೆ. ತಮ್ಮ ಶಿಷ್ಯನಾದ ಈ ಶರಣಪ್ಪನು ಬಾಲ್ಯಾವಸ್ಥೆಯಿಂದ ಷಣ್ಮುಖ ಸ್ವಾಮಿಗಳವರ ಹತ್ತಿರ ಇರುತ್ತಿದ್ದು, ವಿಜಾಪುರದಿಂದ ಈತನು ಇಲ್ಲಿಗೆ  ಬಂದಿರುವನು. ಈಗ ಹನ್ನೆರಡು ವರ್ಷಗಳ ಹಿಂದೆ  ಷಣ್ಮುಖಸ್ವಾಮಿಯವರು ಒಂದು ದಿನ ರಾತ್ರಿಕಾಲದಲ್ಲಿ ನಿದ್ರಿಸ್ಥರಾಗಿರುವಾಗ, ನೀವು ಸ್ವಪ್ನದಲ್ಲಿ ಕಾಣಿಸಿಕೊಂಡು ಅಂದದ್ದೇನೆಂದರೆ - ''ನಾಳೆ  ಪ್ರಾತಃಕಾಲದಲ್ಲಿ ನಿಮಗೆ ಒಂದು ಕೂಸು ಸಿಗುವದು. ಆ ಕೂಸನ್ನು ರಕ್ಷಣೆ ಮಾಡುವಕ್ಕೋಸ್ಕರ ನೀವು ಅವಶ್ಯವಾಗಿ ವ್ಯವಸ್ಥೆ ಮಾಡತಕ್ಕದ್ದು.” ಈ ಪ್ರಕಾರ ನೀವು ಅವರಿಗೆ ಹೇಳಿ, ಅದೃಶ್ಯರಾದಿರಿ. ಆ ಕೂಡಲೇ ಷಣ್ಮುಖ ಸ್ವಾಮಿಯವರು ಎಚ್ಚತ್ತು ನೋಡುವಾಗ, ಅಂಧಕಾರ ಇದ್ದಲ್ಲಿ ದಿವ್ಯ ಪ್ರಕಾಶ ಕಾಣುತ್ತಿತ್ತು. ಕೂಡಲೇ ಆ ಪ್ರಕಾಶವು ಕುಂದಿ ಕತ್ತಲು ವ್ಯಾಪಿಸಿತು. ಮರುದಿವಸ ಷಣ್ಮುಖಸ್ವಾಮಿಯವರು ಪ್ರಾತಃಕಾಲದಲ್ಲಿ ಎದ್ದು, ದಿನಚರ್ಯದಂತೆ ಪುಷ್ಟವಾಟಿಕೆಯೊಳಗೆ ಹೋದ ಕೂಡಲೇ, ಅಲ್ಲಿ ಒಂದು ವಿಶೇಷ ಚಮತ್ಕಾರವನ್ನು ಕಂಡು ಆಶ್ಚರ್ಯಭರಿತರಾದರು. ಹೂವಿನ ಗಿಡದ ಬುಡಕ್ಕೆ, ಶುಭ್ರ ವಸ್ತ್ರದಿಂದ ಸುತ್ತಲ್ಪಟ್ಟು, ಮಲಗಿರುವ ಒಂದು ಸುಂದರ ಮಗುವನ್ನು ನೋಡುವಂಥವರಾದರು. ಅದನ್ನು ಆ ಮಹಾತ್ಮರು ಅತ್ಯಂತ  ಆನಂದಭರಿತರಾಗಿ, ಆ ಮಗುವನ್ನು ಎತ್ತಿಕೊಂಡು. ಆಶ್ಚರ್ಯಚಕಿತರಾಗಿ  ಆ ಕೂಸನ್ನು ತೆಗೆದುಕೊಂಡು ಮಠದೊಳಗೆ ಬಂದರು. ಅದನ್ನು ನೋಡಿ, ಅದರ ವೃತ್ತಾಂತವನ್ನು ಕೇಳಿ, ಅಲ್ಲಿದ್ದವರೆಲ್ಲರೂ ಬಹಳ ಆಶ್ಚರ್ಯ ಪಡುವಂಥವರಾದರು. ಅದೇ ಸಮಯದಲ್ಲಿ ಅಲ್ಲೇ  ಇರುತಿದ್ದ ನನ್ನನ್ನು ಸ್ವಾಮಿಯವರು ನೋಡಿ, - “ಈ ಕೂಸನ್ನು ನಿನ್ನ ಬಾಲಕನಂತೆ  ತಿಳಿದುಕೊಂಡು  ಜತನ ಮಾಡು, ಮತ್ತು ನೀನು ನಿತ್ಯದಲ್ಲಿ ವೇದಾಂತ ಶ್ರವಣಕ್ಕೊಸ್ಕರ ಮಠಕ್ಕೆ ಬರುವಾಗ್ಗೆ ಈತನನ್ನು ಕರೆದುಕೊಂಡು ಬಾ, ಎಂದು ಹೇಳಿದರು. ನನ್ನ ಮನೆಯ ಮಠದ ಸಮೀಪವೇ ಇತ್ತು. ಅಲ್ಲಿ ಈವರೆಗೂ ನಮ್ಮ ಸುಪುತ್ರನೆಂದು ಭಾವಿಸಿ, ಈತನನ್ನು ರಕ್ಷಿಸಿದೆನು. ಈಗ ಇವನು  ನಮ್ಮನ್ನು ಬಿಟ್ಟು ಬಂದಿರುತ್ತಾನೆ. ವಿಜಾಪುರದಲ್ಲಿ ಷಣ್ಮುಖ ಸ್ವಾಮಿಯವರ ಸನ್ನಿಧಿಯಲ್ಲಿ ಈತನಿಗೆ ನಿತ್ಯಶ್ರವಣ ಘಟಿಸುತ್ತಿತ್ತು. ಮತ್ತು ರಾತ್ರಿ ಹಗಲು ಈತನ ಕೆಲವು ಸತ್ಸಂಗದಲ್ಲಿಯೇ ಹೋಗುತ್ತಿತ್ತು. ಒಂದು ದಿನ ಪ್ರಾತಃಕಾಲದಲ್ಲಿ ಈತನು ಕಾಣದೆ ಹೋಗಿ ಎಲ್ಲೆಲ್ಲಿ ಹುಡುಕಿದರೂ ಸಿಗಲಿಲ್ಲ. ಅನಂತರ ಇಲ್ಲಿ ನಿಮ್ಮ ಚರಣಗಳಿಗೆ ಬಂದು ಪ್ರಾಪ್ತನಾಗಿರುವನೆಂಬ ವಾರ್ತೆ ಕೇಳಿ, ಇಲ್ಲಿಗೆ ಬರಲು, ಇಲ್ಲಿರುವನೆಂಬ ವಾರ್ತೆಯು  ಸತ್ಯವಾಯಿತು. ಮತ್ತು ನನ್ನ ಮನಸ್ಸಿಗೆ ಬಹಳ ಆನಂದವಾಯಿತು. ಈಗ ಈತನನ್ನು ಆಧೀನ ಕೊಡಬೇಕಾಗಿರುತ್ತದೆ". ಈ ಪ್ರಕಾರ ಆ ಗೃಹಸ್ಥನು ಅಂದದ್ದು ಕೇಳಿ, ಸದ್ಗುರುನಾಥನು ಶರಣಪ್ಪನಿಗೆ - ''ನೀನು ಇವರ ಕೂಡ ಹೋಗುವಿ ಏನು ?” ಎಂದು ಕೇಳಿದಾಗ್ಗೆ ಶರಣಪ್ಪನು- “ನನಗೆ ಲೌಕಿಕ ಜನರ ಸಂಗತಿಯೆಂಬುದು ದೊಡ್ಡ ವಿಪತ್ತು ಅನಿಸುತ್ತದೆ. ನಿಮ್ಮ ಚರಣಗಳಲ್ಲಿ ಪ್ರಾಣವನ್ನಾದರೂ ತ್ಯಜಿಸುವೆನು, ಇಲ್ಲಿಂದ ಬಿಟ್ಟು ಹೋಗಲಾರೆನು," ಎಂದು ಸದ್ಗದಿತನಾಗಿ ಅಂದನು. ಇದನ್ನು ಕೇಳಿ, ದಯಾಳುವಾದ ಸದ್ಗುರುರಾಯರು, ಬಂದವನಿಗೆ ಅತಿ ಉದಾರರಾಗಿದ್ದು, ಅನ್ನುತ್ತಾರೆ- “ಹೇ ಗೃಹಸ್ಥನೇ, ಈತನ ನಿರ್ಧಾರವನ್ನು ನೋಡು " ಆಗ ಆತನು ಅನ್ನುತ್ತಾನೆ -" ಹಾಗಾದರೆ, ಈ ಶರಣಪ್ಪನನ್ನು ಕರೆದುಕೊಂಡು ಹೋಗುವ ನನ್ನ ಆಗ್ರಹವಿಲ್ಲ. ಈತನು ಧನ್ಯನು. ನಿಮ್ಮ ಚರಣಗಳಲ್ಲಿಯೇ ಇರಲಿ, ಅದರಿಂದ ನಮಗಾದರೂ ಆನಂದವಿರುತ್ತದೆ. ಹೀಗಂದು ಆ

ಗೃಹಸ್ಥನು, ಸದ್ಗುರುನಾಥನಿಗೆ ನಮನ ಮಾಡಿ ತನ್ನ ಸ್ವಗ್ರಾಮಕ್ಕೆ ಹೊರಟು ಹೋದನು. ಆ ಸಮಯದಲ್ಲಿ ಶರಣಪ್ಪನು ಆತನ ಹತ್ತಿರ ಬಂದು, ನಮಸ್ಕಾರ ಮಾಡಿ, ಆತನ ಕೂಡ, ಅಪರಾಧಕ್ಷಮಾ ಮಾಡಬೇಕಾಗಿ, ದೈನ್ಯಭಾವದಿಂದ ಪ್ರಾರ್ಥಿಸುತ್ತಿರುವಾಗ, ಆ ಗೃಹಸ್ಥನು  ಶರಣಪ್ಪನಿಗೆ ಆಶೀರ್ವಾದ ಮಾಡಿ, ಹೊರಟು ಹೋದನು. ಹಿಂದಿನ ಅಧ್ಯಾಯದಲ್ಲಿ ಹೀಗೆ ಹೇಳಿತ್ತು. ದಾನವ್ವಗೆ ಸ್ವಪ್ನದಲ್ಲಿ ಸಿದ್ಧಾರೂಢರು ಬಂದು, ಆಕೆಯ  ಹೊಟ್ಟೆಯಲ್ಲಿ ಹುಟ್ಟಿದ ಕೂಸನ್ನು ತೆಗೆದುಕೊಂಡು

ಹೋದರು. ಅದೇ ಮಗುವನ್ನು ಸದ್ಗುರುಗಳು ಷಣ್ಮುಖ ಸ್ವಾಮಿಯವರಿಗೆ ಕೊಟ್ಟು ಹನ್ನೆರಡು ವರ್ಷತನಕ ಆ ಹುಡುಗನಿಗೆ ಸತ್ಸಂಗದಲ್ಲಿ ಇಡುವ ವ್ಯವಸ್ಥೆ ಮಾಡುವಂಥವರಾದರು. ಪೂರ್ವಜನ್ಮದ ತಪೋಬಲದಿಂದಲೂ, ಈ ಜನ್ಮದ ಸತ್ಸಂಗದ

ಮಹಿಮೆಯಿಂದಲೂ ಆ ಬಾಲಕನಿಗೆ ತೀವ್ರ ವೈರಾಗ್ಯವು ಪ್ರಾಪ್ತವಾಗಿ ಹೊರಟು ಬಂದನು. ಆತನು ಸಿದ್ಧಾರೂಢ ದತ್ತನಾಗಿರುವದರಿಂದ ಕಟ್ಟ ಕಡೆಗೆ ಆತನ ಚರಣಗಳಿಗೆ ಪ್ರಾಪ್ತನಾಗಿ ಅಮಲವಾದ ಬ್ರಹ್ಮವನ್ನು ತಿಳಿದು ಧನ್ಯನಾದನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗುರುಪಾದಯ್ಯನು, ಸಿದ್ಧನು ಮಹಾತ್ಮರೆಂದು ತಿಳಿದು, ತನ್ನ ಸ್ತ್ರೀ ಪುತ್ರಾದಿಗಳ ವಿರೋಧ ಕಟ್ಟಿಕೊಂಡು ಸದ್ಗುರು ಸೇವಾ ಬಿಡದೆ ಮಾಡಿದನು

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ