ಹುಬ್ಬಳ್ಳಿಯಲ್ಲಿ ಸಿದ್ಧರನ್ನು ಮೊದಲು ಮಹಾತ್ಮ ಅಂತ ಗುರುತಿಸಿದ ಗುರುಪಾದಯ್ಯನ ಭಕ್ತಿಕಥೆ

 🌿ಗುರುಪಾದಯ್ಯನು, ಸಿದ್ಧನು ಮಹಾತ್ಮರೆಂದು  ತಿಳಿದು, ತನ್ನ ಸ್ತ್ರೀ ಪುತ್ರಾದಿಗಳ ವಿರೋಧ ಕಟ್ಟಿಕೊಂಡು ಸದ್ಗುರು ಸೇವಾ ಬಿಡದೆ ಮಾಡಿದನು.



ಪೂರ್ವದಲ್ಲಿ, ಯಾವಾಗ ಸಿದ್ಧಾರೂಢರು ಹುಬ್ಬಳ್ಳಿಗೆ ಬಂದರೋ, ಆ ಸಮಯದಲ್ಲಿ ಅವರು ಡುಮಗೇರಿಯಲ್ಲಿರುತ್ತಿದ್ದು, ಕುರಿ ಕಾಯುತ್ತಿರುವ ಹುಡುಗರ  ಜೊತೆಯಲ್ಲಿ ಆಡುತ್ತ ಇದ್ದರು.

ಆ ಕಾಲದಲ್ಲಿ ಸಿದ್ಧರಿಗೆ ಜನರ ದರ್ಶನವು ಸೇರುತ್ತಿದ್ದಿಲ್ಲ. ಜನರನ್ನು ನೋಡಿದ ಕೂಡಲೇ ತಾವು ಓಡಿ ಹೋಗಬೇಕು. ಅಥವಾ ಮೌನ ಧರಿಸಿ ಕುಳಿತಿರಬೇಕು. ಒಂದಾನೊಂದು ದಿವಸ ಹಿರೇಮಠದ ಗುರುಪಾದಯ್ಯಾ ಎಂಬಾತನು ಸಿದ್ದರ ದರ್ಶನದ್ಧಶೆಯಿಂದ ಬಂದಾಗ, ಅವರನ್ನು ದೂರದಿಂದ ನೋಡಿದ ಕೂಡಲೆ ಆತನಿಗೆ ಆಶ್ಚರ್ಯವಾಯಿತು. ಕೈಯೊಳಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಹಿಡಿದುಕೊಂಡು ಸಿದ್ಧರು ಗಿಡದ ಮೇಲೆ ಹತ್ತಿ ಕುಳಿತಿದ್ದರು. ಆಗ ಕೆಳಗೆ ನಿಂತಿರುವ ಒಬ್ಬ ಹುಡುಗನ ಮೇಲೆ ಒಂದು ಕಲ್ಲು ಒಗೆದರು. ಮಸ್ತಕಕ್ಕೆ ಕಲ್ಲು ತಾಗಿದ ಕೂಡಲೇ ಆ ಹುಡುಗನು  ಕೂಗಲಿಕ್ಕೆ ಆರಂಭಿಸಿದನು. ಮತ್ತು ಇತರ ಬಾಲಕರೂ  ಆಕ್ರಾಂತ ಮಾಡುವುದನ್ನು ನೋಡಿ, ಸಿದ್ಧರು ಏನು ಮಾಡಿದರಂದರೆ - "ಮತ್ತೊಂದು ಕಲ್ಲು ಕೈಯಲ್ಲಿ ತೆಗೆದುಕೊಂಡು, ಅಳುತ್ತಿದ್ದ ಅದೇ ಹುಡುಗನಿಗೆ  ಶಿವಾಯ ನಮಃ ಅನ್ನುತ್ತಾ, ಎಸೆಯುವಂಥವರಾದರು. ಆ ಎರಡನೇ ಕಲ್ಲು ಭರದಿಂದ ಬಂದು ಆ ಹುಡುಗನಿಗೆ ತಾಗಿದ ಕೂಡಲೇ, ಆತನು  ಶಾಂತನಾದನು, ಆತನ ದುಃಖವೆಲ್ಲಾ ಹೋಗುವಂಥದ್ದಾಗಿ, ಆತನು ನಗುತ್ತಾ ನಿಂತನು. ಇದನ್ನು ನೋಡಿ ಗುರುಪಾದಯ್ಯನು ಅತ್ಯಂತ ಆಶ್ಚರ್ಯಪಟ್ಟ ತನ್ನೊಳಗೆ ಅನ್ನುತ್ತಾನೆ - "ಜನರು ಈತನಿಗೆ ಹುಚ್ಚನೆನ್ನುತ್ತಾರೆ. ಈತನು ಒಬ್ಬ ಅವಧೂತನಿರುವನೆಂದು ನನಗಾದರೂ ಕಾಣಿಸುತ್ತದೆ. ನಮ್ಮಂಥ ಮೂಢರಾದ ಜನರನ್ನು ಉದ್ಧಾರ ಮಾಡುವದಕ್ಕೆ ಈತನು ಬಂದಿರುವನು. ಸದ್ಭಾವದಿಂದ ಈತನನ್ನು ಸೇವಿಸಿದ್ದಾದರೆ  ನಮಗೆ ಸಂಸಾರದಿಂದ ಉದ್ಧೃತಿಯಾಗುವದು ನಿಶ್ಚಯವು, ಈತನು ಕೃಪಾದೃಷ್ಟಿಯಿಂದ ಯಾವಾತನ ಕಡೆಗೆ ನೋಡುವನೋ,

ಅಂಥಾತನ ಸಂಸಾರ ತಾಪಗಳೆಲ್ಲಾ ನಾಶವಾಗುವವು, ಎಂಬುದರಲ್ಲಿ ಏನೇನೂ ಸಂಶಯವಿಲ್ಲ. ಈತನು ಪೂರ್ಣವಾಗಿ ಬ್ರಹ್ಮ ಜ್ಞಾನಿ ಇರುತ್ತಿದ್ದು, ಈತಗೆ ದೇಹದ ಮೇಲೆ ಸ್ಮೃತಿ ಇರುವುದಿಲ್ಲ. ಇಂಥ ವಿದೇಹ ಸ್ಥಿತಿ ಪ್ರಾಪ್ತವಾಗಿದ್ದಂಥಾ ಮಹಾತ್ಮನಿಗೆ ಅನ್ನಾಹಾರವನ್ನು ಪೂರೈಸಿದ್ದಾದರೆ, ಸತ್ಯವಾಗಿ ಈತನ ಸೇವೆ ಮಾಡಿದ್ದಾದರೆ ಧನ್ಯನಾಗುವನು. ಆದರೆ ಈತನ ಪರಿಚಯವಿಲ್ಲದೆ, ನನ್ನ ಸಮೀಪ ಹೋಗಿದ್ದಾದರೆ ತನಗೆ ಉಪಾಧಿಯೆಂದು ಭಯ ಉಂಟಾಗಿ ಓಡಿಹೋಗಿಬಿಟ್ಟರೆ, ಏನು ಮಾಡಲಿ ! ಈ ಪ್ರಕಾರ ಮನಸ್ಸಿನಲ್ಲಿ ವಿಚಾರಿಸಿ, ಮೆಲ್ಲಗೆ ಸಮೀಪ ಬಂದು, ಯಾವ ಹುಡುಗನಿಗೆ ಸಿದ್ದರು ಕಲ್ಲಿನಿಂದ ಹೊಡೆದಿದ್ದರೋ, ಆ ಹುಡುಗನನ್ನು ಕುರಿತು ಗುರುಪಾದಯ್ಯನು ಕೇಳುತ್ತಾನೆ-“ಈತನು ನಿನಗೆ ಕಲ್ಲಿನಿಂದ ಹೊಡೆದಾಗ ನೀನು ಮೊದಲು ಅಳಲಾರಂಭಿಸಿದಿ, ಆದರೆ ಎರಡನೇ ಕಲ್ಲಿನಿಂದ ಹೊಡೆದ ಕೂಡಲೇ  ನೀನು ಶಾಂತನಾದಿ. ಇದರ ಕಾರಣವೇನು ?" ಆ ಹುಡುಗನಂದನು - “ಈ ಸಿದ್ದನು ನಿಜವಾಗಿ ಹುಚ್ಚನಿದ್ದಾನೆ. ಆದರೆ ಆತನಲ್ಲಿ ಒಂದು ಉತ್ತಮ ಗುಣವಿರುತ್ತದೆ. ಅದೇನೆಂದರೆ - ಯಾರೊಬ್ಬರಿಗೂ ದುಃಖವಾದದ್ದು ಈತನು ಕಂಡನಂದರೆ  ತತ್ಕಾಲ ಅದನ್ನು ಕಳೆದುಬಿಡುತ್ತಾನೆ. ಈತನು  ಮೊದಲನೇ ಕಲ್ಲು ಒಗೆದ ಕೂಡಲೇ ನನಗೆ ದುಃಖವಾಯಿತು. ಎರಡನೇ ಕಲ್ಲು ಈತನ ಕೈಯಿಂದ ತಾಗಿದ ಕೂಡಲೇ ಸುಖವಾಯಿತು. ಇದೆ ಪ್ರಕಾರ ಅವನು ನಮ್ಮ ಕೂಡ ನಿತ್ಯದಲ್ಲಿಯೂ ಆಡುತ್ತಿರುವನು. ಈತನ ಆಟ ಯಾರ್ಯಾರಿಗೆ  ತಿಳಿಯುವುದಿಲ್ಲ.” ಈ ಪ್ರಕಾರ ಆ ಹುಡುಗನ  ವಚನವನ್ನು ಕೇಳಿ, ಗುರುಪಾದಯ್ಯನ ಮನಸ್ಸಿನಲ್ಲಿ ಬಹಳ ಆನಂದವಾಗಿ, ಪುನಃ ಆ ಬಾಲಕನನ್ನು ಕುರಿತು ವಿಚಾರಿಸುತ್ತಾನೆ, ಸಿದ್ದನು ಏನು ಉಣ್ಣುತ್ತಾನೆ?' ಅದಕ್ಕಾ ಹುಡುಗನು - “ನಾವು ಕುರಿ ಕಾಯುತ್ತಿರುವಾಗ, ನಮಗೆ ಹಾಲು ಬೇಡಿಕೊಂಡು ಕುಡಿಯುತ್ತಾನೆ. ಒಮ್ಮೊಮ್ಮೆ ರೊಟ್ಟಿ ತುಂಡುಗಳನ್ನು ಕೊಡುತ್ತೇವೆ. ಇದ್ಯಾವದೂ ಇಲ್ಲದಿದ್ದಾಗ ನೀರೊಳಗೆ ಮಣ್ಣು ಕಲಿಸಿ ಕುಡಿಯುತ್ತಾನೆ.'' ಎಂದು ಆತನು ಅಂದದ್ದು ಕೇಳಿ, ಗುರುಪಾದಯ್ಯನು ಮನಸ್ಸಿನಲ್ಲಿ ಬಹಳ ತಾಪ ಹೊಂದುವಂಥವನಾಗಿ, ಈತನಿಗೆ ನಿತ್ಯ ಅನ್ನವನ್ನು ತಂದು ಕೊಡುವೆನೆಂದು ನಿಶ್ಚಯಿಸಿ, ಸಿದ್ಧರ ಸಮೀಪ ಹೋಗುವಂಥವನಾದನು. ವೃಕ್ಷದ ಕೆಳಗೆ ಗುರುಪಾದಯ್ಯನು  ಬಂದು ಕೂಡಲೇ ಸಿದ್ಧರು ಕೆಳಗೆ ಇಳಿದರು. ಆಗ ಗುರುಪಾದಯ್ಯನು ಬಹಳ ದೈನ್ಯಭಾವದಿಂದ ಸಿದ್ಧರ ಪಾದಕ್ಕೆ ಬೀಳುತ್ತಿರುವಾಗ, ಸಿದ್ದರು ಆತನ ಮಸ್ತಕಕ್ಕೆ ಓದಿಯುವಂಥವರಾದರು. ಈ ಪ್ರಕಾರ ಗುರುಪಾದಯ್ಯನ  ಮಸ್ತಕದ  ಮೇಲೆ ಲತ್ತಾ  ಪ್ರಹಾರ ಮಾಡಿ, ಸಿದ್ದರು ಆತನನ್ನು ನೋಡುತ್ತಾರೆ. ಗುರುಪಾದಯ್ಯನಾದರೂ, ತನ್ನ ಹಸ್ತಗಳನ್ನು ಜೋಡಿಸಿ, ಬಹಳ ನಮ್ರಭಾವದಿಂದ ಸಿದ್ದರ ಮುಂದೆ ತಟಸ್ಥನಾಗಿ  ನಿಂತುಕೊಂಡು ಅನ್ನುತ್ತಾನೆ-''ಹೇ ಸದ್ಗುರು , ತಾವು ನಮ್ಮ ಗೃಹಕ್ಕೆ ಬಂದು ನಮ್ಮೆಲ್ಲರಿಗೂ ಪವಿತ್ರ ಮಾಡಬೇಕಾಗಿ ಪ್ರಾರ್ಥನೆ  ಹ್ಯಾಗೆ ನನ್ನನ್ನು ಈಗ ಧನ್ಯನಾಗಿ ಮಾಡಿದಿರೋ ಅದರಂತೆ  ಎಲ್ಲಾ ಮನೆ ಮಂದಿಗೆ

ಮಾಡಿ, ಉದ್ಧರಿಸಬೇಕಾಗಿ ದೀನನಾದ ನಾನು ಪ್ರಾರ್ಥಿಸುತ್ತೇನೆ.” ಸಿದ್ಧರು ಮನಸ್ಸಿನಲ್ಲಿ ವಿಚಾರಿಸುತ್ತಾರೆ- ಈತನು ದೃಢವಾದ ಭಕ್ತನಿರುವಂತೆ ಕಾಣಿಸುತ್ತಾನೆ ಎಂದು ಆ ಗುರುಪಾದಯ್ಯನನ್ನು ಕುರಿತು - "ನಾನು ನಿಮ್ಮಲ್ಲಿಗೆ ಬಂದರೆ ನನಗೆ ಏನು ಕೊಡುವಿಯೋ ಅದನ್ನೇ  ಇಲ್ಲಿ ತಂದು ಕೊಡು. ನಾನು ನಿನ್ನ ಮನೆಗೆ ಬರುವುದಿಲ್ಲ. ಈಗ ಬೇಗ ಹೋಗು'' ಎಂದು ಹೇಳುತ್ತಾ ಗುರುಪಾದಯ್ಯನ್ನು ದೂಡಲಿಕ್ಕೆ ಆರಂಭಿಸಿದರು.


ಗುರುಪಾದಯ್ಯನಾದರೂ, ವೇಗದಿಂದ ಮನೆಗೆ ಹೋಗಿ ಪತ್ನಿಯನ್ನು ಕುರಿತು ಅನ್ನುತ್ತಾನೆ- “ನಮಗೆ ಒಂದು ನಿಧಿಯೇ ಸಿಕ್ಕಿರುವದು, ಆತನ ದಶೆಯಿಂದ ನಮ್ಮ ಜನ್ಮವೇ ಸಫಲವಾಗುವುದು. ನಾನು ಒಬ್ಬ ಅವಧೂತನನ್ನು ಇವತ್ತು ಕಂಡೆನು. ಆತನಿಗೆ ಅನ್ನವನ್ನು ಕೊಟ್ಟಿದ್ದಾದರೆ ನಮ್ಮ ಜನ್ಮವು ಸಾರ್ಥಕವಾಗುವದು. ಆದ್ದರಿಂದ ಶೀಘ್ರವಾಗಿ ನನಗೆ ಅನ್ನ ಮತ್ತು ರೊಟ್ಟಿ ಕೊಡು. ಅವನ್ನು ಒಯ್ದು ಆತನಿಗೆ ಕೊಡುವೆನು". ಈ ಪ್ರಕಾರ ಪತಿಯ ವಚನವನ್ನು ಕೇಳಿ, ಆ ಸ್ತ್ರೀಯು ಮನಸ್ಸಿನಲ್ಲಿ ಖಿನ್ನಳಾಗಿ, ಬಹಳ ಸಂಕೋಚದಿಂದ ಆತನಿಗೆ ಅನ್ನ ಕೊಟ್ಟಳು. ಅದನ್ನು ತೆಗೆದುಕೊಂಡು ಗುರುಪಾದಯ್ಯನು ಕೂಡಲೇ ಹೊರಟನು. ಅವರ ಮನೆಯಲ್ಲಿ ಬಹಳ ದರಿದ್ರಾವಸ್ಥೆ ಇರುತ್ತಿದ್ದು, ಭಿಕ್ಷಾವೃತ್ತಿಯಿಂದ ಜೀವನವನ್ನು ನಡೆಸುತ್ತಿದ್ದರು. ಗುರುಪಾದಯ್ಯನ  ಮಗನು  ಭಿಕ್ಷಾ ಮಾಡಿಕೊಂಡು ಬರುತ್ತಿದ್ದು, ಅದನ್ನು ಮೂರು ಮಂದಿ ಉಣ್ಣುತ್ತಿದ್ದರು. ಈ ಕಾರಣದಿಂದ ಇತರರಿಗೆ ಅನ್ನ ಕೊಡುವಾಗ, ಗುರುಪಾದಯ್ಯನ ಪತ್ನಿಯು ಸಂಕೋಚಪಡುತ್ತಿದ್ದಳು; ಆದರೆ ಶೃದ್ಧಾ, ಭಕ್ತಿಭರಿತನಾಗಿರುವ ಆತನಿಗೆ ಮನಸ್ಸಿನೊಳಗೆ ಏನೇನೂ ಶಂಕೆ ಇರುತ್ತಿದ್ದಿಲ್ಲ. ಇರಲಿ, ಗುರುಪಾದಯ್ಯನು ಆ ಅನ್ನ ರೊಟ್ಟಿ ಮುಂತಾದ್ದನ್ನು ತೆಗೆದುಕೊಂಡು ಹೋಗಿ, ಸಿದ್ಧರ ಮುಂದೆ ಇಡಲು, ಸಿದ್ಧರು ಅದನ್ನು ತೆಗೆದುಕೊಂಡು ಎಲ್ಲಾ ಹುಡುಗರಿಗೆ ಹಂಚಿ ಕೊಟ್ಟು, ಸ್ವಲ್ಪ ಉಳಿದಿದ್ದನ್ನು ತಾವು ಸೇವಿಸುವಂಥವರಾದರು. ಸಿದ್ಧಾರೂಢರು ಆಗ ಗುರುಪಾದಯ್ಯನಿಗೆ ಅನ್ನುತ್ತಾರೆ- “ನೀನು ನಮಗೆ ಬಹಳ ತುಸು ಅನ್ನ ತಂದು ಕೊಟ್ಟಿರುವಿ. ಇನ್ನೂ ಅಧಿಕ ತಂದು ಕೊಟ್ಟಿದ್ದಾದರೆ, ನಮ್ಮೆಲ್ಲರಿಗೆ ಸಾಕಾಗುವದು.” ಅದಕ್ಕೆ ಗುರುಪಾದಯ್ಯನು - “ಈಗಲೇ ನಾನು ತೆಗೆದುಕೊಂಡು ಬಂದು, ನಿಮ್ಮೆಲ್ಲರಿಗೂ ಅನ್ನ ಪೂರೈಸುವೆನು", ಎಂದು ಹೇಳಿ ಮನೆಗೆ ಹೋಗಿ ನೋಡುವಂಥವನಾದನು. ಅಲ್ಲಿ ತಾನು ಉಣ್ಣುವ ಭಾಗ ಮಾತ್ರ ಉಳಿದಿರುವದು, ಅದನ್ನು

ತೆಗೆದುಕೊಂಡು ಶೀಘ್ರವಾಗಿ ಹೊರಟು ಸಿದ್ದರ ಸಮೀಪ ಬಂದು ಅವರ ಮುಂದಿಟ್ಟು ನಮಸ್ಕರಿಸಿ ನಿಂತು ತಾನು ಉಪವಾಸವಿದ್ದರೂ, ಗುರುಪಾದಯ್ಯನಿಗೆ ಬಹಳ ಆನಂದವಾಗಿರುವದು. ಆತನು ಅನ್ನುತ್ತಾನೆ. "ಈ ಹೊತ್ತು ನಾನು ಧನ್ಯನಾದೆನು. ಈ ಸದ್ಗುರುವಿಗೆ ಉಣ್ಣಿಸಿ, ನಾನು ಪೂರ್ಣ ತೃಪ್ತಿಯನ್ನು ಹೊಂದಿದೆನು. ಒಂದು ವೇಳೆ ಉಪವಾಸವಾಯಿತೆಂದರೆ,ಈ ಹೊತ್ತು ಉತ್ತಮವಾದ ವ್ರತವು ನನಗೆ ಘಟಿಸಿತು ಎಂದು ತಿಳಿಯುವೆನು.' ಸಿದ್ಧಾರೂಢರು ಆ ಅನ್ನವನ್ನು ತೆಗೆದುಕೊಂಡು ಆ ಹುಡುಗರಿಗೆಲ್ಲಾ  ಪುನಃ ಹಂಚಿಕೊಟ್ಟು ಅಲ್ಪ ಶೇಷ ಉಳಿದದ್ದನ್ನು ತಾವು ತೆಗೆದುಕೊಳ್ಳುವಾಗ ರೊಟ್ಟಿಯ  ಒಂದು ಸಣ್ಣ ತುಂಡನ್ನು ಗುರುಪಾದಯ್ಯನಿಗೆ ಕೊಟ್ಟರು. ಅದನ್ನು ಎರಡೂ ಕೈಗಳನ್ನು ಜೋಡಿಸಿ, ಗುರುಪಾದಯ್ಯನು ಬಹಳ ಸಂತೋಷದಿಂದ ಸ್ವೀಕರಿಸಿ ಅಮೃತರೂಪ ಪ್ರಸಾದವೆಂದು ಭಾವಿಸಿ ಬಾಯಿಯೊಳಗೆ ಹಾಕಿಕೊಂಡು, ನುಂಗಿದ ಕೂಡಲೇ ಆತನಿಗೆ ವಿಶೇಷ ಚಮತ್ಕಾರ ಕಾಣುವಂಥಾದ್ದಾಯಿತು. ಆ ಪ್ರಸಾದವು ಕುಕ್ಷಿಯೊಳಗೆ ಪ್ರವೇಶಿಸಿದ ಕ್ಷಣವೇ ಆತನಿಗೆ ಹೊಟ್ಟೆ ತುಂಬ ಉಂಡಂತೆ ಕಾಣಿಸಿ, ಗುರುಪಾದಯ್ಯನು ತೇಗಲಿಕ್ಕೆ ಆರಂಭಿಸಿ, ಅತ್ಯಂತ ಆಶ್ಚರ್ಯಪಡುವಂಥವನಾದನು. ಆತನು ಮನಸ್ಸಿನಲ್ಲಿ ಚಿಂತಿಸುತ್ತಾನೆ - “ಈ ಸದ್ಗುರುನಾಥನು ಪ್ರತ್ಯಕ್ಷ ಈಶ್ವರನಿದ್ದಾನೆಂಬುವದು ಪೂರ್ಣ ನಿಃಸಂಶಯವಾಯಿತು. ಈತನ ಸೇವಾ ಮಾಡಲಿಕ್ಕೆ ಆರಂಭಿಸಿದೆನೆಂದರೆ, ನನ್ನ ಜನ್ಮ ಸಫಲತೆಯಾಗುವದು". 

ಆಮೇಲೆ ಸಿದ್ಧರಿಗೆ ನಮಸ್ಕರಿಸಿ, ಗುರುಪಾದಯ್ಯನು ಮನೆಯ ಕಡೆಗೆ ಹೊರಟು ಹೋಗುತ್ತಿರುವಾಗ, ಒಬ್ಬ ಅಯ್ಯನು ಆತನ ಹಿಂದಿನಿಂದಲೇ ಬಂದು ಅನ್ನುತ್ತಾನೆ - ''ಆ ಭವಿಯ ಕೈಯೊಳಗಿಂದ ರೊಟ್ಟಿ ತುಂಡನ್ನು ಇಸಕೊಂಡು, ನೀನು ಬಾಯಿಯೊಳಗೆ ಹಾಕಿಕೊಂಡು ತಿಂದಿ, ಇದನ್ನು ನಾನು ಕಣ್ಣಾರೆ ನೋಡಿರುತ್ತೇನೆ. ಈಗ ಈ ಸಂಗತಿಯನ್ನು ಎಲ್ಲರಿಗೂ ತಿಳಿಸುವೆನು. ನಿಜವಾಗಿ ನೀನು ಭ್ರಷ್ಟನಾದಿ. ಅವಶ್ಯವಾಗಿ, ನಿನಗೆ ಬಹಿಷ್ಕಾರ ಕೊಡುವೆವು. ನಿನ್ನನ್ನು ಯಾರು ಊಟಕ್ಕೆ  ಕರೆಯುವರೋ ಅವರನ್ನು ಸಹಾ ಕುಲದಿಂದ ಹೊರಗಿಡುವೆವು.'' ಈ ಪ್ರಕಾರ ಆ ಅಯ್ಯನು ಅಂದು, ಇತರ ಸರ್ವ ಅಯ್ಯನವರಿಗೂ ತಿಳಿಸಿ, ಎಲ್ಲರೂ ಕೂಡಿ, ಗುರುಪಾದಯ್ಯನಿಗೆ ಬಹಿಷ್ಕಾರ ಕೊಡುವಂಥವರಾದರು. ಆ ಅಯ್ಯನವರು ಗುರುಪಾದಯ್ಯನ  ಕಡೆಗೆ ಬಂದು ಹೇಳುತ್ತಾರೆ- “ನೀನು ಎಲ್ಲ ಮನೆಮಂದಿ ಕೂಡಿಕೊಂಡು ಮಠವನ್ನು ಬಿಟ್ಟು ಹೊರಗೆ ಹೋಗಬೇಕು. ಇಲ್ಲದಿದ್ದರೆ, ಆ ಭವಿಯ  ಸಂಗತಿ ಬಿಟ್ಟು ಬಿಡುತ್ತೇನೆ ಅನ್ನಬೇಕು, ಆತನ ಸಂಗತಿ ಬಿಟ್ಟಿಯಾದರೆ ನಿನಗೆ ಪ್ರಾಯಶ್ಚಿತ್ತ ಕೊಟ್ಟು, ಪುನಃ ಕುಲದೊಳಗೆ ತೆಗೆದುಕೊಳ್ಳುವೇವು." ಅದನ್ನು ಕೇಳಿ ಗುರುಪಾದಯ್ಯನು ಅನ್ನುತ್ತಾನೆ- “ಸಿದ್ಧಾರೂಡರನ್ನು ಬಿಟ್ಟು ನಾನು ಇರಲಾರೆನು. ಅವರು ಪ್ರತ್ಯಕ್ಷ ಈಶ್ವರನ ಅವತಾರವಿರುವರು. ಇವರದು ನನಗೆ ಪ್ರತೀತಿಯಾಗಿರುತ್ತದೆ. ನಾನೊಬ್ಬನಾದರೆ ಮಠವನ್ನು ಬಿಟ್ಟು ಎರಡನೇ ಸ್ಥಾನಕ್ಕೆ ಹೋಗುವೆನು. ನನ್ನ ಸ್ತ್ರೀ ಮತ್ತು ಮಗ ಇವರನ್ನು ಇಲ್ಲೇ ಬಿಟ್ಟು ಹೋಗುವೆನು” ಆಗ ಆ ಅಯ್ಯಗಳು ಅನ್ನುತ್ತಾರೆ- “ನೀನು ನಿಶ್ಚಯವಾಗಿ ನಿನ್ನ ಈಶ್ವರ ಅವತಾರ ಕಡೆಗೆ ಹೋಗಿ ಇರುವಿ. ಎಲೇ ಭ್ರಷ್ಟನೇ ನೀನು ನೀತಿಯನ್ನು ತಪ್ಪಿರುವಿ.” ಈ ವಚನವನ್ನು ಕೇಳಿ, ಗುರುಪಾದಯ್ಯನು ಅವರ ಕೂಡ ಏನೊಂದು ಮಾತಾಡದೆ ಸುಮ್ಮನೆ ಇದ್ದನು. ಆಗ ಆತನ ಪತ್ನಿಯು ಆತನಿಗೆ ಬಹಳ ಆಗ್ರಹದಿಂದ ಹೇಳುತ್ತಾಳೆ- 'ಆ ಸಿದ್ಧನನ್ನು ಬಿಟ್ಟು ಬಿಡಿರಿ.” ಮಗನಾದರೂ ಸಿಟ್ಟಿನಿಂದ ಗುರುಪಾದಯ್ಯನನ್ನು ಕುರಿತು ಅನ್ನುತ್ತಾನೆ - "ಆ ಭವಿಯ ಸಂಗತಿಯಲ್ಲಿ ಏನು ರುಚಿ ಕಂಡಿರುತ್ತಿ? ಮನೆಯಲ್ಲಿಯೇ ಇದ್ದಿಯೆಂದರೆ ನಿನ್ನ ಜೀವವು ಹಾರಿ ಹೋಗುತ್ತದೇನು? ಖಚಿತವಾಗಿ ನಿನಗೆ ಹುಚ್ಚು ಹಿಡಿದಿದೆ. ಈಗ ಮನೆ ಬಿಟ್ಟು ನಡಿ. ಮುದಿ ವಯಸ್ಸಿನಲ್ಲಿ ನಿನ್ನ ಬುದ್ದಿ ಭ್ರಂಶವಾಗಿರುತ್ತದೆ.” ಇಂಥಾ ಕಠೋರ ವಚನವನ್ನು, ತನ್ನವರಿಂದ ಕೇಳಿದರೂ, ಗುರುಪಾದಯ್ಯನು  ಏನೇನೂ ಉತ್ತರ ಕೊಡಲಿಲ್ಲ.


ಮನಸ್ಸು ಪೂರ್ಣವಾಗಿ ಸಿದ್ಧ ಚರಣಗಳಲ್ಲಿ ಇಟ್ಟಂಥವನಾಗಿ, ಗುರುಪಾದಯ್ಯನು  ತನ್ನ ಜೋಳಿಗೆಯನ್ನು ಹಾಕಿಕೊಂಡು, ಆ ಸಮಯದಲ್ಲಿ ಮನೆ ಬಿಟ್ಟು ಹೊರಟನು. ಊರೊಳಗೆ ಹೋಗಿ ಭಿಕ್ಷೆ ಮಾಡಿಕೊಂಡು ನೆಟ್ಟಗೆ ಸಿದ್ದಾರೂಡರು ಇದ್ದಲ್ಲಿಗೆ ಬಂದನು. ಸಿದ್ಧರ ಮುಂದೆ ಆ ಜೋಳಿಗೆ  ಇಟ್ಟು, ಅವರು ಕೊಟ್ಟಷ್ಟು ಪ್ರಸಾದ ತೆಗೆದುಕೊಂಡು, ಅಷ್ಟನ್ನೇ 

ಸೇವಿಸಿ, ಆನಂದದಿಂದ ಸಿದ್ದರ ಹತ್ತಿರ ಇರಲಾರಂಭಿಸಿದನು. ಗುರುಪಾದಯ್ಯನ  ಈ ಪ್ರಕಾರದ ಅನನ್ಯ ಭಕ್ತಿಯನ್ನು

ಕಂಡು, ಇತರ ಅನೇಕ ಭಕ್ತರು ಸಿದ್ಧರ ಕಡೆಗೆ ಬರಲಾರಂಭಿಸಿದರು, ಮತ್ತು ಸಿದ್ದಾರೂಡರನ್ನು ಕಂಡು - “ನಮಗೆ ಸತ್ಯವಾದ ಸದ್ಗುರು ಭೆಟ್ಟಿಯಾದರು,” ಎಂದು ಅನ್ನುತ್ತಿರುವರು. ಅಲ್ಲಿಂದ ಆ ಭಕ್ತರು, ಅತ್ಯಾಗ್ರಹದಿಂದ ಸಿದ್ಧರನ್ನು ಪ್ರಾರ್ಥಿಸಿ ತಮ್ಮ ತಮ್ಮ ಮನೆಗಳಿಗೆ ನಿತ್ಯ ಕರೆದುಕೊಂಡು, ಹೋಗಿ, ಅವರಿಗೆ ಭೋಜನಾದಿ ಉಪಚಾರಗಳಿಂದ ಸಂತೋಷಪಡಿಸಿ, ಧನ್ಯ ಭಾವವನ್ನು ಹೊಂದುತ್ತಿದ್ದರು. ಒಬ್ಬರು ಇತರ ಭಕ್ತರೊಡನೆ ಸಿದ್ದರನ್ನು ಮನೆಗೆ ಕರಕೊಂಡು ಬಂದು ಪುರಾಣವನ್ನು ಹಚ್ಚಿ ನಿತ್ಯ ಸಿದ್ಧಾರೂಢರ  ಮುಖದಿಂದ ವೇದಾಂತ ನಿರೂಪಣವನ್ನು ಶ್ರವಣ ಮಾಡಿ ಬಹಳ ಆನಂದ ಪಡುತ್ತಿದ್ದರು. ಉದ್ಧಾರ ಕಾರ್ಯಕ್ಕೆ ಸಿದ್ಧಾರೂಢರು ಆರಂಭ ಮಾಡಿದರು ಎಂದು ಗುರುಪಾದಯ್ಯನು ಮನಸ್ಸಿನಲ್ಲಿ ಬಹಳ ಆನಂದ ಪಟ್ಟನು. ಸಿದ್ಧರ ಮುಖದಿಂದ ಹೊರಡುವ ಭಾಷಣವನ್ನು ಶ್ರವಣ ಮಾಡಿದ ಮಾತ್ರದಿಂದ ಆ ಕ್ಷಣವೇ ಸ್ವರೂಪದಲ್ಲಿ ಪ್ರಬೋಧವಾಗುತ್ತಿರುವದು. 


ಒಮ್ಮೆ ಸರ್ವಭಕ್ತ ಜನರನ್ನು ಕೂಡಿಸಿ ಗುರುಪಾದಯ್ಯನು ಅನ್ನುತ್ತಾನೆ- "ಕಾರ್ತಿಕ ಶುದ್ಧ ಪೂರ್ಣಿಮೆ ದಿನ ಮಹಾ ವೈಭವದಿಂದೊಡಗೂಡಿ ಸಿದ್ಧಾರೂಢರನ್ನು ಪೂಜಿಸಬೇಕು.” ಈ ವಚನವು ಸರ್ವ ಸದ್ಭಕ್ತರಿಗೂ ಮಾನ್ಯವಾಯಿತು. ಆಗ ಒಂದು ಭವ್ಯವಾದ ಮಂಟಪವನ್ನು ನಿಂದಿರಿಸಿ ಅದರೊಳಗೆ ದಿವ್ಯ ಸಿಂಹಾಸನವನ್ನು ನಿರ್ಮಿಸಿ, ಸಿದ್ದರನ್ನು ಪೂಜಿಸುವದಕ್ಕೋಸ್ಕರ, ತಯಾರಿಸಿದರು. ಕಾರ್ತಿಕ ಪೂರ್ಣಿಮೆ ದಿವಸ, ಆ ಸಿಂಹಾಸನದಲ್ಲಿ ಸಿದ್ಧರನ್ನು ಕುಳ್ಳಿರಿಸಿ, ಅತ್ಯಂತ ಶೋಭಾಯಮಾನವಾದ ಅಲಂಕಾರ ಮಾಡುವಂಥವರಾದರು. ಮಸ್ತಕದ  ಮೇಲೆ ಪುಷ್ಪಗಳಿಂದ ಮಂಡಿತವಾದ ಕಿರೀಟ, ಕೊರಳಲ್ಲಿ  ದಿವ್ಯವಾದ ಹಾರ, ವಿರಾಜಿಸುತ್ತಿದ್ದವು. ವಕ್ಷಸ್ಥಲದ  ಮೇಲೆ ರತ್ನ ಪದಕವು ಮಿಂಚುತ್ತಿತ್ತು, ಕಂಠದಲ್ಲಿ ಮುಕ್ತಾಹಾರವು ತೂಗುತ್ತ, ಮೈಮೇಲೆ ಪುಷ್ಪಭಾರವು ಶೋಭಿಸುತ್ತಿದ್ದು, ಹೆಗಲ ಮೇಲೆ ದಿವ್ಯ ಪೀತಾಂಬರವು ಹೊತ್ತು, ಸತೇಜ ಸುಂದರ ಮತ್ತು ಅತ್ಯಂತ ಮನೋಹರ ರೂಪವುಳ್ಳ ಶ್ರೀ ಸಿದ್ದಾರೂಡರ ಮೂರ್ತಿಯು  ಸಿಂಹಾಸನದ ಮೇಲೆ ವಿರಾಜಿಸುತ್ತಿತ್ತು. ಮುಖದ ಮೇಲೆ ಶಾಂತಿ ಮುದ್ರೆಯುಳ್ಳಂಥವನಾಗಿ, ಕೃಪಾ ದೃಷ್ಟಿಯು ಪ್ರೇಕ್ಷಕರ ಹೃದಯಾಂತರದಲ್ಲಿ ಭೇದಿಸಿಕೊಂಡು ಹೋಗಿ, ಅಲ್ಲಿರುವ ಗ್ರಂಥಿಗಳನ್ನು ಹರಿದು ದುಷ್ಟರನ್ನು ಸಹಾ ಉದ್ಧಾರ ಮಾಡುತ್ತಿತ್ತು, ಪೂಜಾ ನೋಡಲಿಕ್ಕೆ ಬಂದವರಲ್ಲಾ - "ನಾವು ಧನ್ಯರು  ಧನ್ಯರು. ಸಗುಣ ರೂಪವನ್ನು ಧರಿಸಿರುವ ಸಾಕ್ಷಾತ್ ಗಿರಿಜಾರಮಣನಾದ ಶಂಕರನನ್ನು ಇವತ್ತು ಕಂಡೆವು' ಎಂದು ಅನ್ನುತ್ತಿದ್ದರು. 


ದಿನೇ ದಿನೇ ಹುಬ್ಬಳ್ಳಿಯೊಳಗಿನ ಭಕ್ತ ಮಂಡಳಿ ಬೆಳೆಯುತ್ತ ಹೋಗಿ, ದೇಶ ದೇಶಗಳಲ್ಲೆಲ್ಲಾ ಸಿದ್ಧಾರೂಢ ಸದ್ಗುರುಗಳ ಕೀರ್ತಿಯು ಪಸರಿಸುತ್ತ ನಡೆಯಿತು. ಪರದೇಶಗಳಿಂದಲೂ ಭಕ್ತ ಜನರು ಅನುದಾನದಲ್ಲಿ ಬರಲಾರಂಭಿಸಿದರು. ಭವ್ಯವಾದ ಒಂದು ಮಠವು ಕಟ್ಟಲ್ಪಟ್ಟು, ಶಿಷ್ಯ ಜನರು ನಿಕಟವಾಸಿಗಳಾಗಿರಲಿಕ್ಕೆ

ಹತ್ತಿದರು. ಅನೇಕ ಜನ ಲಿಂಗಾಯತರೂ ಸಿದ್ಧಾರೂಢರ  ಭಕ್ತರಾದರು; ಆಮೇಲೆ, ಅಯ್ಯನವರು ಸಹಾ  ಗುರುಪಾದಯ್ಯನನ್ನು ತಮ್ಮ ಕುಲದಲ್ಲಿ ತಿರುಗಿ ತೆಗೆದುಕೊಂಡರು. ಯಾವ ಗುರುಪಾದಯ್ಯನು ಅಸಹ್ಯವಾದ ಆಪತ್ತುಗಳನ್ನು ಸಹಿಸಿಕೊಂಡು, ಅತ್ಯಂತ ಶ್ರದ್ಧಾಭಕ್ತಿಯಿಂದ ಸೇವಾಬಾಧೆಯನ್ನು ಸಹಾ ಲೆಕ್ಕಿಸದೆ, ಸದ್ಗುರು ಚರಣಗಳನ್ನು ಹಿಡಿದನೋ ಆತನು ಸತ್ಯವಾಗಿ ಧನ್ಯನಾದನು. ಆತನೇ ಪ್ರಥಮದಲ್ಲಿ ಸದ್ಗುರುನಾತನ ಗುರುತು ಹಿಡಿದನು. ಅನಂತರ, ಆತನನ್ನು ಕಂಡು ಇತರರು ಭಕ್ತಿಯುಕ್ತರಾದರು. ಅಜ್ಞಾನ ಖಣಿಯೊಳಗಿಂದ, ಬಹಳ ದುಃಖವನ್ನು ಸಹಿಸಿ ಈ ರತ್ನವನ್ನು ಹುಡುಕಿ ತಗೆದವನು ಈ ಗುರುಪಾದಯ್ಯನೇ ಇರುವನು ಅನಂತರ ಅದರ ಲಾಭವು ಎಲ್ಲರಿಗೂ ಸಿಗುವಂಥಾದ್ದಾಯಿತು.


 ಮುಮುಕ್ಷು ಜನರುಗಳಿರಾ, ಈ ಸಂಪತ್ತಿಯನ್ನು ಲೂಟಿ ಮಾಡಿರಿ. ಗುರುಪಾದಯ್ಯನು  ಈ ಅಕ್ಷಯ ಸಂಪತ್ತನ್ನು ನಿಮ್ಮ ಕೈಯಲ್ಲಿ ತಂದು ಕೊಟ್ಟಿರುವನು. ಪೂರ್ಣ ದಯಾಳುವಾದ ಈ ಸಿದ್ಧ ಸದ್ಗುರುವು ಭಕ್ತರ ಅನರ್ಘ್ಯ  ರತ್ನದಂತಿರುವನು. ಆತನನ್ನು ಭಜಿಸಿದ ಮಾತ್ರದಿಂದ ಭವಬಂಧನವು ಆತನ ಕೃಪೆಯಿಂದ ಕೂಡಲೇ ನಾಶವಾಗಿ ಹೋಗುವದು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸದ್ಗುರು ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ ಮತ್ತು ವೇದಾಂತ ಚರ್ಚೆ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ ಒತ್ತಿ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ