ಬಿಸಿ ತುಪ್ಪ ಬಿದ್ದು ಮೈಸುಟ್ಟಕೊಂಡ ಸಾತಪ್ಪನನ್ನು ಸಿದ್ಧಾರೂಢರು ಗುಣಪಡಿಸಿದ ಕಥೆ
🌾ಭಕ್ತ ಸಾತಪ್ಪನ ಮೈಮೇಲೆ ಬಿಸಿ ತುಪ್ಪ ಬಿದ್ದು,ಮೈಸುಟ್ಟ ಮೂರ್ಚ್ಛಾಗತನಾಗಿ ಬಿದ್ದಿರುವಾಗ ಸದ್ಗುರುವು ಆತನನ್ನು ಆರಾಮ ಮಾಡಿದನು.
ಒಂದಾನೊಂದು ಕಾಲದಲ್ಲಿ ಅನೇಕ ಭಕ್ತ ಜನರು ಕೂಡಿ, ಸಂತ ಭೋಜನ ಮಾಡಿಸಬೇಕೆಂಬ ಇಚ್ಛೆಯಿಂದ ತಮ್ಮೊಳಗೆ ಸಾತಪ್ಪ ಎಂಬಾತನನ್ನು ಪ್ರಮುಖನನ್ನಾಗಿ ಮಾಡಿ, ಸದ್ಗುರುವಿಗೆ ಪ್ರಾರ್ಥಿಸುವಂಥವರಾದರು - “ಹೇ ಸಿದ್ಧಾರೂಢ ಸ್ವಾಮಿಗಳೇ,ಇಲ್ಲೇ ಸಮೀಪವಿರುವ ಮಾವನೂರ ಎಂಬ ಗ್ರಾಮದಲ್ಲಿ ಸಮಾರಾಧನೆಯನ್ನು ಮಾಡಲಿಚ್ಛಿಸುತ್ತೇವೆ. ತಾವಾದರೂ ಕೃಪಾ ಮಾಡಿ ಅಲ್ಲಿ ವರೆಗೆ ಬರಬೇಕಾಗಿರುತ್ತದೆ.''. ಅದಕ್ಕೆ ಸದ್ಗುರುಗಳು ತಥಾಸ್ತು ಅಂದರು. ಆಮೇಲೆ ಪಾಲಕಿ ತಯಾರಿಸಿ ಅದರ ಮೇಲೆ ಸ್ವಾಮಿಯವರನ್ನು ಕೂಡ್ರಿಸಿ ಹೊರಟರು. ಆ ಸಮಯದಲ್ಲಿ ಭಕ್ತರೆಲ್ಲಾ ಭಜನೆ ಮಾಡುತ್ತಾ ನಡಿಯುವಾಗ ಭಜನೆಯ ಘೋಷವು ಆಕಾಶದಲ್ಲೆಲ್ಲಾ ತುಂಬಿ, ಆಗಿನ ಆನಂದವು ತ್ರಿಭುವನದಲ್ಲಿ ಪೂರಿತವಾಯಿತು. ಉತ್ಸವದಿಂದ ಮಾರ್ಗ ಕ್ರಮಿಸುತ್ತಾ ಮಾವನೂರ ಗ್ರಾಮಕ್ಕೆ ಬಂದು, ಸಿದ್ದಾರೂಢರನ್ನು ಇಳಿಸಿ, ಒಂದು ಶುಭ ಗೃಹಕ್ಕೆ ಕರಕೊಂಡು ಹೋಗಿ, ದಿವ್ಯ ಪೀಠದ ಮೇಲೆ ಕೂಡ್ರಿಸಿದರೂ. ಎಲ್ಲ ಪೂಜಾ ಸಾಮಗ್ರಿಗಳನ್ನು ತಂದು ಸದ್ಗುರುಗಳಿಗೆ ಷೋಡಶೋಪಚಾರಗಳಿಂದ ಪೂಜಾ ಮಾಡಿದರು. ಅನಂತರ ಸಾತಪ್ಪನು ಪಾಕಕ್ರಿಯ ಸಲುವಾಗಿ ಪಾಕಶಾಲೆಗೆ ಹೋದನು. ಅಲ್ಲಿ ಸಾವಿರಾರು ಮಂದಿ ದೆಶೆಯಿಂದ ಅಡಿಗೆಯು ತಯಾರಾಗುತ್ತಿತ್ತು. ಆಗ್ಗೆ ಬಿರಂಜಿ ಅನ್ನ ಮಾಡುವದಕ್ಕೋಸ್ಕರ ಒಂದು ಕಡಾಯಿಯೊಳಗೆ ಬೆಣ್ಣೆ ಕಾಯಿಸಲಿಕ್ಕೆ ಇಟ್ಟಿತ್ತು. ಕುದಿ ಬಂದು ತುಪ್ಪ ತಯಾರಾದ ಕೂಡಲೆ, ಅದನ್ನು ಬಿರಂಜಿ ಮಾಡತಕ್ಕ ತಪೇಲಿಯೊಳಗೆ ಸುರಿಯುವದರ ಸಲುವಾಗಿ, ಸಾತಪ್ಪನು ಆ ಕಡಾಯಿಯನ್ನು ಒಂದು ಅರಿವೆಯಿಂದ ಹಿಡಿದು, ಎತ್ತಿ ತಪೇಲಿಯ ಅಂಚಿಗೆ ಹಚ್ಚಿದನು. ಆ ಕೂಡಲೇ ಅದು ಕೈಯೊಳಗಿಂದ ಜಾರಿ, ಭೂಮಿಗೆ ಬಿದ್ದು, ತುಪ್ಪವೆಲ್ಲಾ ನಾಲ್ಕೂ ಕಡೆಗೆ ಸಿಡಿಯಿತು. ಆ ಅತ್ಯುಷ್ಣವಾದ ತುಪ್ಪವು ಸಾತಪ್ಪನ ಮೈಮೇಲೆ ತುಂಬಾ ಸಿಡಿದು, ಅದರಿಂದ ಆತನ ಮೈಯಲ್ಲಾ ಉರಿಯಹತ್ತಿ ಕೂಡಲೇ ಗುಳ್ಳೆ ಎದ್ದವು. “ಸಿದ್ಧಾರೂಢಾ ರಕ್ಷಿಸು, ರಕ್ಷಿಸು", ಎಂದು ಕೂಗಿ ಸಾತಪ್ಪನು ನೆಲದ ಮೇಲೆ ಬಿದ್ದು, ವ್ಯಥೆ ಸಹಿಸಲಾರದೆ ಮೂರ್ಛಾಗತನಾದನು. ಜನರೆಲ್ಲಾ ಗಾಬರಿಯಾಗಿ ನಾಲ್ಕೂ ಕಡೆಗೆ ಓಡಹತ್ತಿದರು. ಯಾರು ಔಷಧ ತರುತ್ತೇವೆ ಅನ್ನುತ್ತಾರೆ, ಯಾರು ಎಣ್ಣೆ ತಂದು ಹಚ್ಚುತ್ತಾರೆ, ಮತ್ತು ಅನೇಕ ಉಪಚಾರಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ಈ ವರ್ತಮಾನ ಕೇಳಿ, ಬಹಳ ಗಡಿಬಿಡಿಯಿಂದ ಸದ್ಗುರುಗಳು ಅಲ್ಲಿಗೆ ಬರುವಂಥವರಾದರು. ಮತ್ತು ಆ ಭಕ್ತ ಶಿರೋಮಣಿಯಾದ ಸಾತಪ್ಪನ ಹತ್ತಿರ ಬಂದು ನೋಡುತ್ತಾರೆ. ಸಾತಪ್ಪನ ಪತ್ನಿ ಪುತ್ರರು ಭೂಮಿಯ ಮೇಲೆ ಬಿದ್ದು ಆತನನ್ನು ನೋಡಿ ಏನೇನೂ ಧೈರ್ಯ ಹಿಡಿಯಲಾರದೆ, ಬಹಳ ಆಕ್ರಾಂತ ಮಾಡುವಂಥವರಾದರು. ಅವರನ್ನು ನೋಡಿ ಸದ್ಗುರುಗಳು ಅನ್ನುತ್ತಾರೆ -"ನೀವು ಏನೂ ಭಯಪಡಬೇಡಿರಿ. ಆತನು ಪರೋಪಕಾರ ಕೆಲಸದಲ್ಲಿ ಪ್ರವರ್ತನಾಗಿರುವಾಗ, ಈ ಸಂಕಷ್ಟ ಬಂದಿರುವುದರಿಂದ ಸದ್ಗುರುವು ಆತನನ್ನು ಸರ್ವಥಾ ರಕ್ಷಣೆ ಮಾಡುತ್ತಾನೆ. ಹೀಗಂದು ಆ ದಯಾಳುವಾದ ಸದ್ಗುರುಗಳು, ಸಾತಪ್ಪ ಮೈಮೇಲೆ ಕೈಯಾಡಿಸಿ, ಅಂದದ್ದೇನೆಂದರೆ - “ಈ ತುಪ್ಪವು ತಣ್ಣಗದೆ. ಈತನು ಈಗಲೇ ಏಳುವನು.” ಈ ಪ್ರಕಾರ ಅಂದು, ನಿದ್ರಿಸ್ತನಿಗೆ ಎಬ್ಬಿಸದಂತೆ, ಸಾತಪ್ಪನ ಮೈಮೇಲೆ ಚಪ್ಪರಿಸಿ ಎಬ್ಬಿಸಿದರು. ಈ ಚಮತ್ಕಾರವನ್ನು ನೋಡಿ, ಸರ್ವರೂ ಆಶ್ಚರ್ಯಭರಿತರಾಗಿ ಜಯಜಯಕಾರ ಮಾಡುವಂಥವರಾದರು. ಆಗ ಸಾತಪ್ಪನು ಎದ್ದು ಕುಳಿತುಕೊಂಡು, ತನ್ನ ಮೈಮೇಲೆ ಕೈ ಸವರಿ ನೋಡಿ ಅನ್ನುತ್ತಾನೆ - “ನನ್ನ ಮೈಗೆ ಹ್ಯಾಗೆ ತುಪ್ಪ ಹತ್ತಿತು ?” ನಾನು ಸ್ನಾನ ಮಾಡಿ ಬರುವೆನು'', ಹೀಗಂದು ತನ್ನ ಸುತ್ತಮುತ್ತಲೂ ನೋಡಿದ ಕೂಡಲೇ ಎಲ್ಲಾ ಸಂಗತಿ ನೆನಪಿಗೆ ಬಂದು, ಮುಂದೆ ಸದ್ಗುರುಗಳನ್ನು ಕಂಡು, ಆತನಿಗೆ ಅತ್ಯಂತ ಆನಂದವು ಉಕ್ಕಿ ಉಕ್ಕಿ ಬರುವಂಥಾದ್ದಾಯಿತು. ಸಾತಪ್ಪನು ಅನ್ನುತ್ತಾನೆ - ''ಹೇ ದಯಾಳನೇ ನೀನು ರಕ್ಷಣ ಕರ್ತಾ ಇರುವಾಗ್ಗೆ, ಕಾಲನ ಸತ್ತಾ ಸಹಾ ನಮ್ಮ ಮೇಲೆ ನಡಿಯಲಾರದು. ನೀನು ಪ್ರತ್ಯಕ್ಷ ಲೀಲಾವತಾರಿಯಾದ ಈಶ್ವರನಿರುತ್ತಿ." ಪ್ರೇಮ ಭರದಿಂದ ಈ ಪ್ರಕಾರ ಅಂದು, ಸಾತಪ್ಪನು ದೃಢವಾಗಿ ಸದ್ಗುರು ಚರಣಗಳನ್ನು ಹಿಡಿದು, ಆ ಮೇಲೆ ಸ್ನಾನ ಮಾಡಲಿಕ್ಕೆ ಹೋದನು. ಆತನ ಶರೀರವೆಲ್ಲಾ ಗುರು ಹಸ್ತ ಸ್ಪರ್ಷದಿಂದ ತಣ್ಣಗಾಗಿದ್ದು, ಸ್ನಾನ ಮಾಡಿದ ಕೂಡಲೇ ಗುಳ್ಳೆಗಳು ಸಹಾ ಅಲ್ಲಿಂದಲೇ ಕರಗಿ ಹೋದವು, ಮತ್ತು ಶರೀರವು ಯಥಾಪ್ರಕಾರ ನಿರ್ಮಲವಾಯಿತು. ಮಹಾಕಾರ್ಯಕ್ಕೆ ಬಂದಂಥಾ ವಿಘ್ನವು ಶ್ರೀ ಸಿದ್ದ ಕೃಪೆಯಿಂದ ತಪ್ಪಿಹೋಯಿತು. ಎಲ್ಲಾ ಜನರು ಆನಂದಭರಿತರಾಗಿ, ಸದ್ಗುರುಗಳನ್ನು ಬಹು ಪ್ರೇಮದಿಂದ ಪೂಜಿಸುವಂಥವರಾದರು. ಆಗ ಭೋಜನ ಕಾರ್ಯ ಆರಂಭವಾಯಿತು. ಸದ್ಗುರುಗಳು ಸ್ವತಃ ನೀಡಲಿಕ್ಕೆ ಬಂದರು. ಹಸ್ತದಲ್ಲಿ ಒಂದು ರೊಟ್ಟಿ ಹಿಡಿದುಕೊಂಡು, ಅದರ ತುಂಡುಗಳನ್ನು ಊಟಕ್ಕೆ ಕೂತಿರುವ ಪ್ರತಿ ಒಬ್ಬನ ಭಕ್ತನ ಬಾಯಿಯೊಳಗೆ ಹಾಕುತ್ತಾ ನಡಿಯುತ್ತಿದ್ದರು. ಎಲ್ಲರ ಭೋಜನ ಆಗುತ್ತಿರುವಾಗ, ಆ ಸಿದ್ಧಮಾತೆಯು ಪಂಕ್ತಿಯೊಳಗೆ ಅಡ್ಡ್ಯಾಡುತ್ತಾ ಯಾರೂಬ್ಬರ ಎಲೆಯ ಮೇಲೆ ಏನೊಂದು ವಸ್ತು ಕಡಿಮೆಯಾಯಿತೆಂದರೆ, ಆ ಕೂಡಲೇ ಸದ್ಗುರುಗಳು ತಂದು ನೀಡುತ್ತಿದ್ದರು. ಸರ್ವ ಜನರು, ಈ ಸದ್ಗುರುಗಳ ಆನಂದ ಮುಖವು, ಭಕ್ತ ಜನರ ಭೋಜನ ಕಾಲದಲ್ಲಿ, ಪ್ರಫುಲ್ಲಿತವಾದ ಶೋಭೆಯನ್ನು ನೋಡಿ, ಭೋಜನಾನಂದಕ್ಕಿಂತ ಅಧಿಕವಾದ ಆನಂದವನ್ನು ಪಡುವಂಥವರಾದರು. ಸರ್ವರಿಗೂ ತೃಪ್ತಿಯಾದ ಬಳಿಕ ಸಿದ್ಧರು ತಾವು ಭೋಜನ ಮಾಡಿದರು. ಸದ್ಗುರುವು ಭಕ್ತ ಕಾರ್ಯವನ್ನು ಈ ರೀತಿಯಿಂದ ನಿರ್ವಿಘ್ನ ಮಾಡಿಸಿಕೊಟ್ಟನು. ಹ್ಯಾಗೆ ಬಾಲಕನ ಆನಂದ ನೋಡಿ ತಾಯಿಗೆ ಆನಂದವಾಗುವದೋ, ಅಥವಾ ಪ್ರಜೆಗಳ ಸೌಖ್ಯದಿಂದ ರಾಜನು ಸುಖಪಡುವನೋ ಹಾಗೆಯೇ ಭಕ್ತರ ಸುಖದಿಂದಲೇ ಆತನು ಸುಖಪಡುವನು. ಭಕ್ತರ ತಂದೆ ತಾಯಿಯೆಂದು ಭಾವಿಸಲ್ಪಟ್ಟ ಸದ್ಗುರುವು ಅವರ ತಾಪವನ್ನು ಹರಣ ಮಾಡಿ, ಅವರ ಪಾಪವನ್ನು ಕಳೆದು ಸುಖ ಸ್ವರೂಪವನ್ನು ತೋರಿಸುವನು. ಇರಲಿ, ಸದ್ಗುರುನಾಥರನ್ನು ಪಾಲಕಿ ಮೇಲೆ ಕೂಡ್ರಿಸಿ ಆನಂದದಿಂದ ಮರೆಸುತ್ತಾ, ಭಕ್ತರು ಭಜನೆ ಘೋಷದಿಂದ ಸಿದ್ಧಾಶ್ರಮಕ್ಕೆ ಬಂದು ಇಳಿಸಿ, ಜಯ ಜಯಕಾರ ಮಾಡಿ ಎಲ್ಲರೂ ತಮ್ಮ ತಮ್ಮ ಸ್ವಸ್ಥಾನಕ್ಕೆ ಹೋಗುವಂಥವರಾದರು. ಇಂಥಾ ನೀನು ಸದ್ಗುರು ಮಾತಾ, ಭಕ್ತ ಜನರಿಗೆ ಕೃಪೆಯಿಂದ ಒಲಿದು, ತ್ರಿಭುವನವನ್ನು ಆನಂದದಿಂದ ತುಂಬಿಸಿದಿ.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
