ಖಾಸಗತ ಶಿವಯೋಗಿ ಅನಾರೋಗ್ಯದಿಂದ ಅಡವಿಯೋಳಗೆ ಹೋದಾಗ ಸದ್ಗುರುಗಳು ಆತನನ್ನು ಹುಡುಕಿಕೊಂಡು ಹೋದ ಕಥೆ

 🥀ಖಾಸಗತನು ಅನಾರೋಗ್ಯದಿಂದ ಅಡವಿಯೋಳಗೆ ಹೋದಾಗ ಸದ್ಗುರುಗಳು ಆತನನ್ನು ಹುಡುಕಿಕೊಂಡು ಹೋದದ್ದು, ಖಾಸಗತನ ಅದ್ಭುತ ವೈರಾಗ್ಯವು ವರ್ಣಿಸಲ್ಪಟ್ಟ ಕಥೆ 




ಶ್ರೀ ಸಿದ್ಧಾರೂಢ ಸದ್ಗುರುನಾಥರು ಸಿದ್ಧಾಶ್ರಮದಲ್ಲಿರುವಾಗ ಅವರ ಸೇವಕರಾಗಿ ಖಾಸಗತ ಮತ್ತು ನಿರ್ವಾಣಪ್ಪಾ ಎಂಬ ಇಬ್ಬರು ಶಿಷ್ಯರಿದ್ದರು. ಖಾಸಗತ ಸ್ವಾಮಿಯು  ಅಪರ ವಿರಕ್ತಿಯುಕ್ತನಾಗಿದ್ದು, ಆತನು ದೇಹಾಭಿಮಾನವನ್ನು ತ್ಯಜಿಸಿ ಹ್ಯಾಗೆ ಸಿದ್ಧ ಭಕ್ತಿಯನ್ನು ಸಾಧಿಸಿದನು, ಎಂಬ ಕಥೆಯನ್ನು ಇಲ್ಲಿ ಸವಿಸ್ತರ ಹೇಳುವೆನು. ಈತನು ತಾಳಿಕೋಟಿವೆಂಬ ಗ್ರಾಮದ ನಿವಾಸಿಯಾಗಿದ್ದನು. ಪರಮ ವೈರಾಗ್ಯ ಪ್ರಾಪ್ತವಾಗಿ, ಸ್ವಗೃಹವನ್ನು ಬಿಟ್ಟು ಸಿದ್ಧ ಚರಣಗಳಿಗೆ ಪ್ರಾಪ್ತನಾಗಿ ಇಲ್ಲಿ ವಿಶ್ರಾಂತಿಯನ್ನು ಹೊಂದಿದನು. ಖಾಸಗತನು ಮಹಾ ಕಠಿಣತರವಾದ ವೈರಾಗ್ಯದಿಂದ ದೇಹ ಬುದ್ಧಿಯನ್ನು ಸುಟ್ಟು ಬಿಟ್ಟು, ಮನಸ್ಸನ್ನು ವಿಷಯ ಸಂಗದಿಂದ ನಿವೃತ್ತಿಗೊಳಿಸಿ, ಗುರು ಕೃಪೆಗೆ  ಪೂರ್ಣ ಪಾತ್ರನಾದನು. ಶ್ರೀ ಸಿದ್ಧಾರೂಢ ಸದ್ಗುರುಗಳ ಸನ್ನಿಧಿಗೆ ಬಂದು, ಬಹು ದೀನಭಾವದಿಂದ ಖಾಸಗತನು ಪ್ರಾರ್ಥಿಸಿದ್ದೇನೆಂದರೆ - '' ಹೇ ಸದ್ಗುರುನಾಥನೇ  ತಮ್ಮ ಚರಣಗಳಲ್ಲಿ ನನಗೆ ಸ್ಥಾನ ಕೊಡಬೇಕು. ಇಲ್ಲದಿದ್ದರೆ ನನಗೆ ಮತ್ತೇನು ಗತಿ ? ನನ್ನ ಬುದ್ಧಿಯು ಸಂಸಾರದಿಂದ ಬೇಸತ್ತು ಹೋಗಿರುವುದು. ನನ್ನನ್ನು ತಮ್ಮ ಪಾದದಲ್ಲೇ  ಇಟ್ಟುಕೊಳ್ಳಬೇಕಾಗಿರುತ್ತದೆ. ಹೀಗಾದರೆ ಮಾತ್ರ ನನ್ನ ಜನ್ಮವು ಸಾರ್ಥಕವಾಗುವದು ಮತ್ತು ಸಂಸ್ಕೃತಿಯು  ನಿವಾರಿಸಲ್ಪಟ್ಟಿತು ". ಈ ಪ್ರಕಾರ ಆತನು ಅಂದದ್ದು ಕೇಳಿ, ಮತ್ತು ಆತನ ವೈರಾಗ್ಯ ಲಕ್ಷಣಗಳನ್ನು ನೋಡಿ ಸದ್ಗುರುಗಳು ಮನಸ್ಸಿನಲ್ಲಿ ಆನಂದಭರಿತರಾಗಿ, ಖಾಸಗತನನ್ನು ತಮ್ಮ ಹತ್ತರ

ಇಟ್ಟುಕೊಳ್ಳುವಂಥವರಾದರು. ಆದಿನ ಖಾಸಗತನ ಊರೊಳಗೆ ಭಿಕ್ಷೆಗೆ ಹೋಗುವಾಗ, ಒಬ್ಬ ಸ್ತ್ರೀಯು ಅವನನ್ನು ನೋಡಿ, - 'ಹೇ ಸ್ವಾಮಿ ಇವತ್ತು  ನಮ್ಮಲ್ಲಿ ಪಕ್ವಾನ್ನವು ಮಾಡಲ್ಪಟ್ಟಿರುತ್ತದೆ. ನೀವು ಮನೆಯೊಳಗೆ ಬಂದು ಅದನ್ನ ಯಥೇಷ್ಟ ಸೇವಿಸಿ, ನಮ್ಮ ಮೇಲೆ ಕೃಪೆ ಮಾಡಬೇಕು' ಎಂದು ಹೇಳಿದಳು. ಅದಕ್ಕೆ ಖಾಸಗತನ - 'ಹೇ ತಾಯಿ, ಯಾರೊಬ್ಬರ ಮನೆಯೊಳಗೆ ಕುಳಿತು ಊಟ ಮಾಡಲಿಕ್ಕೆ ನನಗೆ ಗುರುವಿನ ಆಜ್ಞೆ ಇಲ್ಲ. ಆದ್ದರಿಂದ ನನಗೆ ಭಿಕ್ಷೆ ಹಾಕಿ ತೀವ್ರವಾಗಿ ಕಳುಹಿಸು ” ಎಂದು ಹೇಳಿದನು. ಆ ಸ್ತ್ರೀಯನು ಬಹು ಆಗ್ರಹ ಮಾಡಿದರು ಕೂಡ ಆತನು ಒಪ್ಪದೆ,  ಅಲ್ಲಿಂದ ಮುಂದೆ ಹೊರಡುವಾಗ, ಅವಳು ಬಹಳ ಭಿಕ್ಷೆ ಹಾಕಿ ಆತನನ್ನು ಕಳುಹಿಸಿದಳು. ಖಾಸಗತನು ಜೋಳಿಗೆ ತಂದು ಸದ್ಗುರುಗಳ ಮುಂದಿಟ್ಟನು. ಸದ್ಗುರುಗಳು ಅದರೊಳಗಿನ ಪಕ್ವಾನ್ನಾದಿಗಳನ್ನು ಆತನಿಗೆ ಕೊಟ್ಟರೂ ತೆಗೆದುಕೊಳ್ಳಲಿಲ್ಲ.


ಸದ್ಗುರುಗಳು ಮತ್ತು ಸರ್ವ ಶಿಷ್ಯ ಜನರು ಭೋಜನ ಮಾಡಿದ ಮೇಲೆ, ಅವರ ಉಚ್ಚಿಷ್ಟ ಪತ್ರಾವಳಿಗಳನ್ನು ಎಲ್ಲಾ ಒಟ್ಟುಗೂಡಿಸಿ ತೆಗೆದುಕೊಂಡು ಹೊಲದೊಳಗೆ ಹೋದನು. ಅಲ್ಲಿ ಕುಳಿತುಕೊಂಡು ಅಪಾತ್ರವಳಿಗಳಿಗೆ ಹತ್ತಿರ ಉಚ್ಚಿಷ್ಟ  ಅನ್ನವನ್ನೆಲ್ಲಾ ಬಳಿದು ತಿನ್ನುತ್ತಿರುವಾಗ, ಒಂದು ನಾಯಿಯು ಆತನ ಹತ್ತಿರ ಬಂದು ನಿಂತಿತು. ಖಾಸಗತನು  ಆ ನಾಯಿಯನ್ನು ಕರೆದು, ತನ್ನ ಗ್ರಾಸವನ್ನು ಅದಕ್ಕೂ ಕೊಡುತ್ತಿದ್ದಳು. ಇದನ್ನು ನೋಡಿ ಇತರ ಶಿಷ್ಯರೆಲ್ಲಾ ಬಹು ಆಶ್ಚಯಪಟ್ಟರು. ಒಂದು ಕಾಗೆಯೂ 

ಬಂತು. ಕಾಗೆ, ನಾಯಿ ಮತ್ತು ಖಾಸಗತ  ಹೀಗೆ ಮೂವರು ಕೂಡಿ ಒಂದೇ ಪತ್ರಾವಳಿಯಲ್ಲಿ ಉಣ್ಣುತ್ತಿದ್ದರು. ಅವನು ಇತರ ಶಿಷ್ಯರ ಕೂಡ ಉಣ್ಣದೆ  ನಿತ್ಯ ಇದೇ ಪ್ರಕಾರ ಊಟ ಮಾಡುತ್ತಿದ್ದನು. ಉಚ್ಚಿಷ್ಟವೇನೂ ಸಿಗದಿದ್ದರೆ, ತಂಗಳ ರೊಟ್ಟಿ ಚೂರುಗಳನ್ನು ಹುಡುಕಿಕೊಂಡು ತಂದು,  ಅದರಿಂದ ಕ್ಷುಧಾ ನಿವಾರಣೆಯನ್ನು ಮಾಡುತ್ತಿದ್ದನು. ಸದ್ಗುರು ಶಿಷ್ಯನಾದ ಚನಮಲ್ಲಪ್ಪನು, ಒಂದು ದಿವಸ ಖಾಸಗತವನ್ನು ಕುರಿತು - 'ನೀನು ಉತ್ತಮ ಅನ್ನವನ್ನು ಬಿಟ್ಟು ತಂಗಳನ್ನ, ಉಚ್ಚಿಷ್ಟಾನ್ನಗಳನ್ನು ಯಾಕೆ ಇಚ್ಚಿಸುತ್ತಿ?” ಎಂದು ಕೇಳಿದ್ದಕ್ಕೆ ಆತನು, - "ನಾನು ರುಚಿಯುಳ್ಳ ಅನ್ನವನ್ನು ಸೇವಿಸಿದೆನೆಂದರೆ, ಅದು ರುಚಿಯ ಬಲದಿಂದ ಅಧಿಕವಾಗಿ ಹೊಟ್ಟೆಯೊಳಗೆ ಹೋಗುವುದು. ಹೆಚ್ಚಿಗೆ ಅನ್ನ ಹೊಟ್ಟೆಯೊಳಗೆ ಪ್ರವೇಶವಾಯಿತೆಂದರೆ ಆಲಸ್ಯವು ಹೆಚ್ಚಿ, ಅದರಿಂದ ಗುರುಸೇವಾ, ಧ್ಯಾನಾದಿಗಳನ್ನು ಮಾಡುವುದರಲ್ಲಿ ಪ್ರತಿಬಂಧಕವಾಗಿರುತ್ತದೆ. ಪಕ್ವಾನ ಸೇವನೆಯಿಂದ ಇನ್ನೊಂದು ದೋಷ ಏನು ಘಟಿಸುವದೆಂದರೆ - ಒಮ್ಮೆ ರುಚಿಯಿಂದ ಅದನ್ನು ಸೇವಿಸಿದ ಮೇಲೆ ಮನಸ್ಸು ಪುನಃ ಪುನಃ ಅದನ್ನೇ  ಇಚ್ಚಿಸುತ್ತದೆ. ಇದರಿಂದ ಬಹಳ ದುಃಖವಾಗುತ್ತಿದೆ. ಹೀಗೆ ಪಕ್ವಾನ್ನ ಸೇವನೆಯಲ್ಲಿ ಎರಡು ಪ್ರಕಾರದ ದುಃಖಗಳಿರುವದರಿಂದ ನಾನು ಅದನ್ನು ತ್ಯಾಗ ಮಾಡಿರುವೆನು. ಆಗ ಚನಮಲ್ಲಪ್ಪನು ತನ್ನ ಮನಸ್ಸಿನಲ್ಲಿ ವಿಚಾರ ಮಾಡುತ್ತಾನೆ - ''ಖಾಸಗಿತನು ಧನ್ಯನು. ಈತನ ವಿರಕ್ತಿಯು  ಶ್ಲಾಘನೀಯವು, ನಾನಾದರೂ ಇದೇ ಪ್ರಕಾರ ತ್ಯಾಗಮುಕ್ತನಾದನೆಂದರೆ, ಸದ್ಗುರು ಕೃಪೆಯನ್ನು ನಿಶ್ಚಯವಾಗಿ ಪಡಿಯುವೆನು. ಇದರಲ್ಲಿ ಏನೇನೊ ಸಂಶಯವಿಲ್ಲ."


ಮಠದೊಳಗೆ ಒಬ್ಬ ಸ್ತ್ರೀಯು ಬಂದರೆ, ಖಾಸಗತನು ತತ್‌ಕ್ಷಣವೇ ಹೊರಗೆ ಓಡಿ ಹೋಗುವನು. ಅವಳು ಮಠ  ಬಿಟ್ಟು ಹೋಗುವ ತನಕ ಆತನು ತಿರುಗಿ ಬರುತ್ತಿದ್ದಿಲ್ಲ. ಒಂದು ದಿನ ಸಿದ್ಧ ಸದ್ಗುರುಗಳು ಖಾಸಗಿತನನ್ನು ಕುರಿತು, - ಸ್ತ್ರೀಯರನ್ನು ನೋಡಲಿಕ್ಕೆ ನೀನು ಯಾಕೆ ಹೆದರುವಿ. ಮನಸ್ಸಿನಲ್ಲಿ ಭೇದ ಭಾವನೆಯನ್ನು ಹಿಡಿಯಬೇಡ ಸರ್ವತ್ರದಲ್ಲಿ ಬ್ರಹ್ಮರೂಪದ ಅನುಸಂಧಾನ ಹಿಡಿದು ಅಭೇದ ಭಾವನೆಯಿಂದ ಸ್ತ್ರೀ ಪುರುಷರನ್ನು ನೋಡತಕ್ಕದ್ದು. ಹ್ಯಾಗೆ ಚಿತ್ರದಲ್ಲಿರುವ ಸ್ತ್ರೀ ಪುರುಷರು ಬರೇ ವರ್ಣಮಯರಾಗಿದ್ದು ಏಕ ವಸ್ತು ಆಗಿರುವರೋ  ಹಾಗೆಯೇ ಜಗತ್ತಿನಲ್ಲಿ ಸರ್ವವೂ ಬ್ರಹ್ಮಮಯವಾಗಿದ್ದು ಅಭೇದವಾಗಿರುವದು,” ಎಂದು ಹೇಳಿದ್ದಕ್ಕೆ ಖಾಸಗತನು- “ಸದ್ಗುರು ಮಹಾರಾಜರೆ, ನನ್ನ ಬ್ರಹ್ಮ ಬುದ್ಧಿಯು ಸ್ಥಿರವಾಗಿಲ್ಲ. ನಿಮ್ಮ ಕೃಪೆಯಿಂದ ಅದು ದೃಢವಾಯಿತೆಂದರೆ ಆಮೇಲೆ ನಾನು ಅಂಜುವುದಿಲ್ಲ. ಈ ಕಾಲದಲ್ಲಿ ಸ್ತ್ರೀರೂಪ ನೋಡಿದಾಕ್ಷಣ ಮನಸ್ಸು ವಿಕಾರ ಹೊಂದುವದು. ಅಭೇದವಾದ ಬ್ರಹ್ಮವು ಇನ್ನೂ ಭಾಸಿಸುವದಿಲ್ಲ. ಆದ್ದರಿಂದಲೇ ಸ್ತ್ರೀರೂಪ ನೋಡಲಿಕ್ಕೆ

ನಾನು ಹೆದರುತ್ತೇನೆ.'' ಎಂದು ಉತ್ತರ ಕೊಟ್ಟನು. ಖಾಸಗತನ ಈ ವಚನವನ್ನು ಕೇಳಿ, ಸದ್ಗುರುಗಳು ಸಂತೋಷಪಟ್ಟು, - "ಈತನು ಬೇಗನೆ ಜ್ಞಾನವನ್ನು ಪಡೆಯುವನು. ಇದರಲ್ಲಿ ಏನೇನೂ ಸಂಶಯವಿಲ್ಲ'' ಎಂದು ಕಲ್ಪಿಸುವವರಾದರು.


ಒಮ್ಮೆ ಖಾಸಗತನಿಗೆ ಬಹಳ ಜ್ವರ ಬಂದಿರುವಾಗ, ಚನಮಲ್ಲಪ್ಪನು ಆತನಿಗೆ ಉಪಚಾರ ಮಾಡಿದನು. ಖಾಸಗತನು ಈ ಉಪಚಾರಗಳಿಗೆ ಬೇಸತ್ತು ಯಾರಿಗೂ ಹೇಳದೆ ಅಡವಿಯೋಳಗೆ ಹೋಗಿಬಿಟ್ಟು. ಜನಸಂಚಾರವಿಲ್ಲದ ಸ್ಥಾನವನ್ನು ನೋಡಿ, ಅಲ್ಲಿ ಒಂದು ಗಿಡದ ಬುಡಕ್ಕೆ ಹೋಗಿ ಮಲಗಿಕೊಂಡನು. ಒಂದು ಹರಕು ವಸ್ತ್ರ ಮಾತ್ರ ಮೈಮೇಲೆ ಹಾಕಿಕೊಂಡು, ಕಲ್ಲು ಮುಳ್ಳುಗಳಿಂದ ಶರೀರಕ್ಕೆ ವ್ಯಥೆಯಾಗುತ್ತಿದ್ದರೂ ಲೆಕ್ಕಿಸದೆ, ಬರೇ ಭೂಮಿಯ ಮೇಲೆ ಮಲಗಿದನು. ಜ್ವರವೂ ವಿಶೇಷವಾಗಿ ಬರಲಾರಂಬಿಸಿತು. ಆದರೆ ದೇಹಾಭಿಮಾನವನ್ನು ಬಿಟ್ಟು ಖಾಸಗತನು ಜ್ವರದ ಪರಿವೆಯಿಲ್ಲದೆ, ಹೃದಯದಲ್ಲಿ ಸದ್ಗುರು ಮೂರ್ತಿಯನ್ನು ಹಿಡಿದು, ಆತನ ನಾಮವನ್ನೇ ಜಪಿಸುತ್ತ ಇದ್ದನು. ಮಿತ್ರರು ಯಾರಾದರೂ ಅಕಸ್ಮಾತ್ತಾಗಿ ಬಂದರೆ ಮತ್ತೆಲ್ಲಿಗೆ ಹೋಗಲಿ, ಎಂಬ ಒಂದೇ ಭಯವು ಆತನ ಮನಸ್ಸಿನಲ್ಲಿ ಇರುವದು. "ನನ್ನ ದೆಶೆಯಿಂದ ಎರಡನೇಯವರು ಕಷ್ಟಪಟ್ಟರೆ ನನ್ನ ಜೀವನವು ವ್ಯರ್ಥವಾಗುವದು. ಇತರ ಪ್ರಾಣಿಗಳು ಶ್ರಮಪಡುವದನ್ನು ನೋಡಿದರೆ ನನಗಾಗುವ ವ್ಯಥೆಯು 

ಸಹಿಸಲಾಗದು,” ಅಂದನು. ಆಗ ಖಾಸಗತನು ತನ್ನ ಸಮೀಪಕ್ಕೆ ಬರುವ ಒಂದು ಕಾಗೆಯನ್ನು ನೋಡಿ ಅನ್ನುತ್ತಾನೆ- “ನಿನಗೆ ತಿನ್ನಲಿಕ್ಕೆ ಬೇಗನೆ ಈ ದೇಹವನ್ನು ಕೊಡುವೆನು. ನಾವು ಭಿಕ್ಷೆ ಬೇಡಲಿಕ್ಕೆ ಹೋದರೆ ಯಾರಾದರೂ ನಮಗೆ ಭಿಕ್ಷೆ ಕೊಡುವರು. ನೀನು ಹೋದಿಯೆಂದರೆ ಕೂಡಲೇ ನಿನ್ನನ್ನು ಹೊಡೆದು ಓಡಿಸುವರು. ನಿನ್ನ ಜನ್ಮವು ಎಷ್ಟು ದುಸ್ಸಹವಾಗಿದೆ !” ಆಮೇಲೆ ಆತನು ಚಿಂತಿಸುತ್ತಾನೆ - "ಇಲ್ಲಿಯ ಸುಖವು ಗ್ರಾಮದಲ್ಲಿ ಜನರ ಮಧ್ಯದಲ್ಲಿ ಇಲ್ಲವು. ಇಲ್ಲಿ ಮೃಗಪಕ್ಷಿಗಳೆಲ್ಲ ನಮ್ಮ ಮಿತ್ರರೇ ಇರುವರು. ಯಾರೂ ನಮ್ಮ ದ್ವೇಷಿಗಳಿಲ್ಲ. ಇಲ್ಲಿ ಸುಖದಿಂದ ನಾನು ವಾಸಿಸುವೆನು. ಜನರೂಳಗೆ ಇದ್ದರೆ, ಅಲ್ಲಿ ನಮ್ಮ ದ್ವೇಷಿಗಳಾಗಿರುವ ಸ್ತ್ರೀ ಇತ್ಯಾದಿ ವಿಷಯಗಳಿರುವವು, ಅವು ಆಗಾಗ ಮನಸ್ಸಿಗೆ ವ್ಯಥೆ ಕೊಡುವದರಿಂದ, ಹಗಲು ರಾತ್ರಿ ದುಃಖವಾಗುತ್ತಿದೆ. ಆದರೆ ಸದ್ಗುರುಗಳ ಕಡೆಗೆ ಮನಸ್ಸಿನ ಎಳೆದಾಟವಿದ್ದು, ಅದೊಂದೇ ಅತ್ಯಂತ

ಸುಖಸ್ಥಾನವಿರುವದು. ಇಷ್ಟರ ದೆಸೆಯಿಂದ ಗುರುಸ್ಥಾನ ಬಿಡಲಿಕ್ಕೆ ಮನಸ್ಸು ಬರುವದಿಲ್ಲ. ನನ್ನ ಸುದೈವದಿಂದ ಗುರುಚರಣಗಳಲ್ಲಿ ನನಗೆ ಸುಖ ಕಾಣಿಸುವದು. ಆದರೂ ನನ್ನ ಜ್ವರವು ಬಿಡುವವರೆಗೆ ನಾನು ಇದೇ ಸ್ಥಾನದಲ್ಲಿ ಇರುವೆನು. ಆಮೇಲೆ ಸದ್ಗುರು ಸ್ಥಾನಕ್ಕೆ ಹೋಗಿ ಗುರುಗೃಹದಲ್ಲಿ ಇರುವೆನು."


 ಈ ಪ್ರಕಾರ ಖಾಸಗತನು ಚಿಂತಿಸುತ್ತಿರುವಾಗ, ಸಿದ್ಧಾಶ್ರಮದಲ್ಲಿ ಏನು ಕಥೆಯು ವರ್ತಿಸಿತ್ತೆಂದರೆ ಸದ್ಗುರುಗಳು ಖಾಸಗತನನ್ನು ಮಠದಲ್ಲಿ ಕಾಣದೆ, ಬಹು ಚಿಂತೆ ಮಾಡಲಾರಂಭಿಸಿದರು. ಸಿದ್ದರನ್ನುತ್ತಾರೆ- “ಖಾಸಗತನು ನನ್ನ ಚಿಕ್ಕ ಮುದ್ದು ಮಗುವಿನಂತಿರುವನು. ಆತನು ದೇಹದ ಚಿಂತೆಯನ್ನೆಲ್ಲಾ ಬಿಟ್ಟು, ಎಲ್ಲಿಗೆ ಹೋಗಿರುವನೆಂದು ತಿಳಿಯದು. ಅವನು  ಎಲ್ಲಾ ಭಾರವನ್ನು ನನ್ನ ಮೇಲೆ ಹಾಕಿ ತಾನು ನಿಶ್ಚಿಂತನಾಗಿ, ಅಣುಮಾತ್ರ ದೇಹಭಾನವಿಲ್ಲದೆ ಯಥಾಸುಖದಿಂದ ಅಡ್ಯಾಡುತ್ತಾನೆ. ನನಗೆ ಆತನ ಚಿಂತೆ ಹತ್ತಿರುವದು.” ಈ ಪ್ರಕಾರ ಭಕ್ತರಕ್ಷಕರಾದ ಸದ್ಗುರುಗಳನ್ನುತ್ತಿರುವಾಗ, ಕಣ್ಣುಗಳಿಂದ ಪ್ರೇಮಾಶ್ರುಗಳು ಸುರಿಯುತ್ತಿದ್ದವು. ಅವನ್ನು  ಸಹಿಸಿಕೊಳ್ಳಲಾಗಲಿಲ್ಲ. ಆಗ ಆ ಸದ್ಗುರು ದಯಾಳುವು, ಶಿಷ್ಯರನ್ನು ಕುರಿತು,

“ನೀವೆಲ್ಲರೂ ಇಲ್ಲೇ ಇರ್ರಿ. ನಾನೇ ಹೋಗಿ ಆತನನ್ನು ಶೋಧಿಸುವೆನು,'' ಎಂದು ಹೇಳಿ ಜೀವ ಭಾವವನ್ನು ತೋರಿಸುವವನಾಗಿ ಶಿಷ್ಯ ಚನಮಲ್ಲಪ್ಪನೊಬ್ಬನನ್ನು ಕರೆದುಕೊಂಡು ಹೊರಟನು. ಸದ್ಗುರುನಾಥನು ಆಗ ಎಲ್ಲಾ ಕಡೆಗಳಲ್ಲಿ ಖಾಸಗತನನ್ನು ಹುಡುಕಲಾರಂಭಿಸಿ, - “ಈತನು ಯಾವ ಸ್ಥಾನದಲ್ಲಿರುವನು ?” ಎಂದು ಅನ್ನುತ್ತಾ ಅತ್ಯಂತ ಚಿಂತಾತುರನಾಗಿ, ಕಂಡ.

ಕಂಡವರಿಗೆ ವಿಚಾರಿಸುತ್ತ ನಡೆಯುತ್ತಿದ್ದನು. ಖಾಸಗತನನ್ನು ಹುಡುಕುತ್ತ ಹುಡುಕುತ್ತ, ಇಬ್ಬರು ಅಡವಿಯೋಳಗೆ ಪ್ರವೇಶಿಸಿದರು. ಅಲ್ಲಿ ಪ್ರತಿ ಒಂದು ಕಂಟಿಯೊಳಗೆ, ಗಿಡಪೊದೆಗಳೊಳಗೆ, ಎಷ್ಟು ಹುಡುಕಿದರೂ ಸಿಗಲಿಲ್ಲ. 


ವೃಕ್ಷದ ಬುಡಕ್ಕೆ ಮಲಗಿದ್ದ

ಖಾಸಗಿತನು, ಆನಂದದಿಂದ ಸದ್ಗುರು ಚಿಂತನೆಯನ್ನು ಮಾಡುತ್ತಿರುವಾಗ, ಸದ್ಗುರುಗಳು ದೂರದಿಂದ ಆತನನ್ನು ನೋಡಿ, ಓಡಿ ಬರುವಂತವರಾದರು. ಸಮೀಪ ಬಂದು, ಖಾಸಗತನೇ ಬಿದ್ದಿರುವನೆಂದು ತಿಳಿದ ಕೂಡಲೇ ಅತ್ಯಂತ ಹರ್ಷಚಿತ್ತರಾಗಿ  ಆ ಸದ್ಗುರುನಾಥರು ಓಡಿ ಬಂದು, ಆತನನ್ನು ಹಸ್ತಗಳಿಂದ ಎತ್ತಿ ಹಿಡಿದು - “ಈ ನನ್ನ ಬಾಲಕನಾದ ಖಾಸಗತನನ್ನು ಕಾಣದೆ ನಾನು ಬಹು ತಳಮಳಪಟ್ಟೆ'' ಎಂದು ಅನ್ನುತ್ತಿರುವಾಗ ಆ ಸದ್ಗುರು ದಯಾಳನ ನೇತ್ರಗಳಿಂದ ಪ್ರೇಮಾಶ್ರುಗಳು ಸುರಿಯುತ್ತಿದ್ದವು. ಅತ್ಯಂತ ಪ್ರೇಮ ಭರದಿಂದ ಆ ಖಾಸಗಿತನನ್ನು ಆಲಂಗಿಸಿ, ಆತನನ್ನು ಕುರಿತು ಕೇಳುತ್ತಾನೆ- ''ನಿನ್ನ

ಸಂಕಟ ಕಾಲದಲ್ಲಿ ಮಠವನ್ನು ಬಿಟ್ಟು ಈ ಅರಣ್ಯಕ್ಕೆ ಯಾತಕ್ಕೆ ಬಂದಿರುವಿ?” ಅದಕ್ಕೆ ಆತನು- "ಈ ಪ್ರಕಾರ ವೃತ್ತ ಎದ್ದಿತು,” ಎಂದು ಅಂದನು. ಆಗ ಚನಮಲ್ಲಪ್ಪನು ಖಾಸಗತನನ್ನು ಕುರಿತು, - "ನಾನು ಮಾಡಿದ ಉಪಕಾರಗಳಿಗೆ ನೀನು ಬೇಸತ್ತು ಇಲ್ಲಿಗೆ ಬಂದಂತೆ ಕಾಣಿಸುತ್ತದೆ. ಹಾಗಿದ್ದರೆ ನನ್ನ ಅಪರಾಧವನ್ನು ಕ್ಷಮಿಸಬೇಕಾಗಿ ನಿನ್ನ ಪಾದಕ್ಕೆ ಬಿದ್ದು , ಪ್ರಾರ್ಥಿಸುವೆನು'' ಎಂದು ಹೇಳಿದನು. ಇದನ್ನು ಕೇಳಿದಾಕ್ಷಣ ಖಾಸಗತನು  ಇಬ್ಬರ ಚರಣಗಳ ಮೇಲೆ ಬಿದ್ದನು. ನಂತರ ಎದ್ದು, ಸದ್ಗುರುಗಳನ್ನು ಕುರಿತು - “ಈ ನೀಚ ದೇಹದ್ದಶೆಯಿಂದ ಇಲ್ಲಿ ತನಕ ಯಾತಕ್ಕೆ ಬರೋಣವಾಯಿತು ? ಈ ಕಾರಣ ನನಗೆ ಬಹಳ ದುಃಖವಾಗುತ್ತದೆ,'' ಎಂದು ಅಂದನು. ಅದಕ್ಕೆ ಸಿದ್ದರು - “ನೀನು ನನ್ನನ್ನು ಬಿಟ್ಟು ವನಕ್ಕೆ ಬಂದದ್ದರಿಂದ ನಮಗೆಲ್ಲರಿಗೂ ಬಹಳ ದುಃಖವಾಯಿತು. ನಿನ್ನ ದೆಸೆಯಿಂದ ನನ್ನ ಮನಸ್ಸು ಬಹಳ ತಳಮಳಿಸಿತು. ಇನ್ನು ಮೇಲೆ ಎಂದು ಹೀಗೆ ಮಾಡಬೇಡ' ಎಂದು ಹೇಳಿದರು. ಸದ್ಗುರುಗಳು ಖಾಸಗತನನ್ನು ಸ್ಪರ್ಶಿಸಿದ ಕೂಡಲೇ ಆತನ ಜ್ವರವೆಲ್ಲಾ ಇಳಿದುಹೋಯಿತು.


 ಆಮೇಲೆ ಮೂವರು ಮಠಕ್ಕೆ ಬಂದರು. ಇವರನ್ನು ನೋಡಿ ಸರ್ವರೂ ಆನಂದಭರಿತರಾಗಿ ಅನ್ನುತ್ತಾರೆ- '' ಖಾಸಗತನು ಧನ್ಯಧನ್ಯನು, ಈತನಂಥ ಅದ್ಭುತ ವೈರಾಗ್ಯವನ್ನು ನಾವು ಎಲ್ಲೆಲ್ಲಿಯೂ ನೋಡಲಿಲ್ಲ. ಈತನು

ನಿಶ್ಚಯವಾಗಿ ಸದ್ಗುರು ಕೃಪೆಯನ್ನು ಸಂಪಾದಿಸಿಕೊಂಡನು. ಇವನು ಸದ್ಗುರುಗಳನ್ನು ಬಿಟ್ಟು ಹೋದರು ಸದ್ಗುರುಗಳು ಇವನನ್ನು ಬಿಡಲಿಲ್ಲ. ತಪ್ಪಿಸಿಕೊಂಡ ಬಾಲಕನನ್ನು ಹುಡುಕಿಕೊಂಡು ತಾಯಿಯು ಹೋಗುವಂತೆ, ಖಾಸಗತನು ಪ್ರಾರ್ಥಿಸದಿದ್ದರೂ, ಆ ದಯಾಳನು ಈತನನ್ನು ಶೋಧಿಸಿಕೊಂಡು ಕರೆದುತಂದರು." ಇತರರು ಅನ್ನುತ್ತಾರೆ - ''ಈತನ ವೈರಾಗ್ಯ ಸ್ಥಿತಿಯನ್ನು ನೋಡಿ ಭಕ್ತರ ಚಿತ್ತದಲ್ಲಿ ಸದಾ ಇರುವ ಸದ್ಗುರುರಾಯನು ಸಂಪೂರ್ಣ ಒಲಿದಿರುವನು." ಯಾವಾತನು ಸದ್ಗುರುವಿಗೆ

ತನುಮನಧನಗಳನ್ನು ಅರ್ಪಿಸಿ ಅಖಂಡವಾಗಿ ಆತನ ಚಿಂತನವನ್ನು ಮಾಡುವನೋ, ಆ ಭಕ್ತನು ಪ್ರಾರ್ಥಿಸದಿದ್ದರೂ ಸದ್ಗುರುನಾಥನು ಆತನಿದ್ದಲ್ಲಿ ಪ್ರಾಪ್ತನಾಗಿ ಅವನನ್ನು ರಕ್ಷಿಸುವನು.


👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಲಕ್ಷ್ಮೀಬಾಯಿಯು ಮುಳಗುತ್ತಿರುವ ಹಡಗದಲ್ಲಿರುವಾಗ, ಸದ್ಗುರುವನ್ನು ಪ್ರಾರ್ಥಿಸಿದ ಕೂಡಲೇ ಆತನು ದೋಣಿಯನ್ನು ತೆಗೆದುಕೊಂಡು ಬಂದು ಅವಳನ್ನು ರಕ್ಷಿಸಿದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ