ಸದಾಶಿವನು ಸಿದ್ಧಾರೂಢ ನಾಮದಿಂದ ಭೂಮಿಯಲ್ಲಿ ಅವತರಿಸಿದ ಕಥೆ 🍁
ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತಾ ದಿನಾಲೂ ಶಾಸ್ತ್ರ ಶ್ರವಣ ಮಾಡುತ್ತಲಿದ್ದರು. ''ಒಂದಾನೊಂದು ದಿನ ಕನಸಿನಲ್ಲಿ ಪರಶಿವನು ಪ್ರಾತಃ ಕಾಲದಲ್ಲಿ ತನ್ನ ಹೃದಯದಲ್ಲಿ ಪ್ರವೇಶಿಸಿದಂತಾಯಿತು” ಅಂತಾ ಗುರುಶಾಂತಪ್ಪನು ತನ್ನ ಹೆಂಡತಿಗೆ ಹೇಳಿದನು. ಆಗ ದೇವಮಲ್ಲಮ್ಮ ತನಗೂ ಕಂಡ ಕನಸನ್ನು ಹೇಳುತ್ತಾ, ಹೇ ಪತಿರಾಯಾ ಶಾರದೆಯು ಕನಸಿನಲ್ಲಿ ಬಂದು ನನ್ನ ಉದರದಿಂದ ಸದಾಶಿವನು ಜನಿಸುವನು ಅಂತಾ ಹೇಳಿ ತೊಡೆಯ ಮೇಲೆ ಬಿಳೇ ತಾವರೆ ಹೂವನ್ನು ಇಟ್ಟು ಪ್ರಕಾಶ ಪುಂಜದಿಂದ ನನ್ನ ಹೃದಯದಲ್ಲಿ ಸೇರಿದಳು ಅಂತಾ ಹೇಳಿದರು. ಪರಸ್ಪರ ಕನಸಿನ ದೃಶ್ಯಗಳನ್ನು ಕೇಳುತ್ತಾ ಹೇಳುತ್ತಾ ಪರಶಿವನ ಧ್ಯಾನ ಮಾಡುತ್ತಿದ್ದರು.
ಯಮಧರ್ಮರಾಯನ ಪರವಾನಿಗೆ ಪಡೆದು ಸಾನಂದ ಋಷಿಗಳು ನರಕ ಲೋಕ ಪ್ರವೇಶಿಸಿ ಪಂಚಾಕ್ಷರಿ ಮಂತ್ರವನ್ನು ಉಚ್ಚರಿಸಲು ಹೇಳಿದ ಕೂಡಲೇ ನರಕವಾಸಿಗಳು ಉಚ್ಚಾರ ಮಾಡುತ್ತಾ ಕೈಲಾಸಲೋಕ ಸೇರಿದರು. ಈ ಸಾನಂದರು ಸದಾಶಿವನಲ್ಲದೆ ಬೇರಾರಲ್ಲ. ಈ ಸದಾಶಿವನೇ ಭೂಲೋಕದ ಮಾನವರ ಭವತಾರಣಿಗಾಗಿಯೇ ಈ ಶಿವಭಕ್ತ ದೇವಮಲ್ಲಮ್ಮನ ಪವಿತ್ರ ಗರ್ಭದಲ್ಲಿ ಪ್ರವೇಶಿಸಿದನು. ಗರ್ಭಿಣಿಯಾದ ಆ ಮಾತೆಯ ಮುಖಲಕ್ಷಣಾಕರ್ಷಣೀಯವಾಯಿತು. ಆಕೆಯ ಬಯಕೆಗಳನ್ನು ತೀರಿಸಲು ಮೃಷ್ಟಾನ್ನ, ಭಕ್ಷ್ಯ, ಫಲಗಳನ್ನು ಊರಿನ ಮಹಿಳೆಯರು ಬಂದು ಬಂದು ಕೊಟ್ಟರು. ಶುಕ್ಲಪಕ್ಷದ ಚಂದ್ರನಂತೆ ಗರ್ಭವು ವೃದ್ಧಿಯಾಗತೊಡಗಿತು.
ನವಮಾಸ ತುಂಬಿತು ಪ್ರಸವ ವೇದನೆಯನ್ನು ತಾಳದಲೇ ಹರಹರಾ, ಶಿವಶಿವಾ ಅಂತಾ ಧ್ಯಾನಿಸುತ್ತಲಿದ್ದಳು. ನೆರೆ-ಹೊರೆಯ ಮಹಿಳೆಯರು ಧಾವಿಸಿದರು. ಹೊರಸನ್ನು
ಹೆಣೆದರು, ಅರಿಷಿಣ ತಯಾರಿಸಿದರು. ನೀರನ್ನು ಕಾಸಿದರು. ದೇವಮಲ್ಲಮ್ಮನ ಪ್ರಸವ ಕಾಲಕ್ಕೆ ಅತೀವ ಪ್ರೇಮದಿಂದ ಉಪಚರಿಸಿದರು.
ಶ್ರೀ ಸಿದ್ಧಗುರುವರನು ತಾ. 26-03-1836 ನೇ ದಿನ ಶಾಲಿವಾಹನ ಶಕೆ 1758ನೇ ದುರ್ಮುಖನಾಮ ಸಂವತ್ಸರ ಚೈತ್ರಮಾಸ ಶುಕ್ಲಪಕ್ಷ ಶ್ರೀ ರಾಮನವಮಿ ಶನಿವಾರ ಸಾಯಂಕಾಲ ಶುಭನಕ್ಷತ್ರದಲ್ಲಿ ಕರ್ಕ ಲಗ್ನದಲ್ಲಿ ಕೋಟಿಸೂರ್ಯ ಪ್ರಕಾಶಮಾನ ತೇಜಪುಂಜ ಪುತ್ರರತ್ನ ಜನನವಾದನು. ಪರಶಿವನು ಅವತಾರವಾದ ಕೂಡಲೇ ಈ ಸಂತಸದ ಸುದ್ದಿ ಊರ ತುಂಬಾ ಪಸರಿಸಿತು. ಆದಿ ಪರಶಿವನು ದೇವಮಲ್ಲಮ್ಮ ವ ಗುರುಶಾಂತಪ್ಪ ದಂಪತಿಗಳ ಉದರದಿಂದ ಶ್ರೀರಾಮನವಮಿಯ ದಿನ ಅವತರಿಸಿದ, ಪುರದ ಜನರೆಲ್ಲರೂ ಹರ್ಷಾತಿರೇಕದಿಂದ ಕುಣಿದಾಡಿದರು. ಪರಮಾತ್ಮನೇ ಭೂಲೋಕಕ್ಕೆ ಬಂದಿದ್ದರಿಂದ ಸ್ವರ್ಗದಲ್ಲೇನಿದೆ. ಅಲ್ಲಿ ಯಾವ ಸುಖವಿದೆ ಅಂತಾ ಸುರರೆಲ್ಲರೂ ವಿಮಾನಗಳನ್ನೇರಿ ಭೂಮಂಡಲಕ್ಕೆ ಬರುತ್ತಿರುವರೋ ಏನೋ ಎಂಬಂತೆ ಆಕಾಶದಲ್ಲಿ ಮೋಡಗಳು ಕವಿದವು, ಲೋಕೋದ್ಧಾರಕ್ಕಾಗಿ ಧರೆಗೆ ಬಂದಿಹ ಶಿವನನ್ನು ನೋಡಲು ಭಯ ಭಕ್ತಿಯಿಂದ ಬಂದಿರುವನೋ ಏನೋ ಎಂಬಂತೆ ಮರುತನು ಸ್ವಚ್ಛ ಮಾಡುತ್ತಿರುವಂತೆ ಗಾಳಿ ಬೀಸಿತು, ವರುಣನು ಛಳಿ ಹೊಡೆದನು, ದೇವದುಂದುಭಿ ಬಾರಿಸುವಂತೆ ಅಬ್ಬರದ ಮಳೆ ಗುಡುಗಿನ ಆರ್ಭಟಗೊಂಡಿತು, ಪರಶಿವನ ಜಡೆಯಿಂದ ಗಂಗಾಮಾತೆಯು ಇಳಿದು ಬಂದಂತೆ ನದ ನದಿಗಳು ಹರಿದವು, ಗಿಡ-ಮರಗಳೆಲ್ಲ ಹಚ್ಚು ಹಸಿರು ಹೂಗಳಿಂದ ಕಂಗೊಳಿಸಿದವು,
ಆದಿ ಪರಶಿವನು ಧರೆಗೆ ಬಂದ ಕಾರಣ ಮನೆಗಳೆಲ್ಲ ಸಾರಣಿಯಾಗಿ ರಂಗವಲ್ಲಿಗಳಿಂದ ಅಲಂಕೃತವಾದವು, ಮಂಗಳ ಸ್ನಾನ, ವಾದ್ಯ, ಗೀತ, ದೇವ ಪೂಜೆ, ಗಂಧ ಪರಿಮಳದಿಂದ ಪುರವೆಲ್ಲವು ಸಂಭ್ರಮದಲ್ಲಿ ತಲ್ಲೀನವಾಗಿತ್ತು.
ನಂತರ ಹದಿಮೂರನೇ ದಿನ ನಾಮಕರಣದ ಸಂಭ್ರಮವಾಯಿತು,ವೀರಭದ್ರಸ್ವಾಮಿಗಳು ಬಂದು "ಸಿದ್ಧ " ಮಗುವಿಗೆ ನಾಮಕರಣ ಮಾಡಿದರು, ದಿನೇ ದಿನೇ ಶುಕ್ಲಪಕ್ಷದ ಚಂದ್ರನಂತೆ ಸಿದ್ಧ ಕಂದನು ಬೆಳೆಯತೊಡಗಿದನು. ಪುಟ್ಟ ಹೆಜ್ಜೆಯನ್ನಿರಿಸುತ್ತಾ ಕುಲಕುಲನೆ ನಗುತ್ತಾ ತಂದೆ ತಾಯಿಗಳ ಆನಂದೋತ್ಸಾಹಗಳನ್ನು ಇಮ್ಮಡಿಗೊಳಿಸುತ್ತಿರುವಲ್ಲಿಯೇ ಮೂರು ಸಂವತ್ಸರಗಳನ್ನು ಕಳೆದನು. ಪ್ರತಿ ನಿತ್ಯ ಚಿಕ್ಕವನಿರುವಾಗಲೇ ಸಿದ್ಧನು ತನ್ನ ತಾಯಿಯು ಶ್ರವಣಕ್ಕೆ ಕೂತಿರುವಾಗ ತಾನೂ ಸಮೀಪ ಕೂತುಕೊಂಡು ಬಹು ಆದರದಿಂದ ಶ್ರವಣ ಮಾಡುತ್ತಿದ್ದನು. ಬಾಲ್ಯಾವಸ್ಥೆಯಿಂದ ಸಿದ್ದನಿಗೆ ನಿತ್ಯ ಈ ಪ್ರಕಾರ ವೇದಾಂತ ಶ್ರವಣವಾಗುತ್ತಿದ್ದು ಆತನು ಮೂರು ವರ್ಷ ವಯಸ್ಸಿನಲ್ಲಿಯೇ ಶಾಸ್ತ್ರ ವಿಷಯದಲ್ಲಿ ಬಹು ಕುಶಲನಾದನು. ಒಂದಾನೊಂದು ದಿನ ಶ್ರವಣ ಕಾಲದಲ್ಲಿ ಲಿಂಗೈಕ್ಯ ವಿಚಾರವೂ ಹೊರಡಲು, ಅದನ್ನು ಸಂಪೂರ್ಣವಾಗಿ ವಿವೇಚನ ಮಾಡಿ ತಾನೂ ಲಿಂಗೈಕ್ಯವನ್ನು ಸಂಪಾದಿಸಿಕೊಳ್ಳಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡನು ಮತ್ತು ಈ ಆಶೆಯಿಂದ ಸರ್ವ ಪ್ರಾಣಿಗಳನ್ನು ಸಮಭಾವದಿಂದ ನೋಡಲಾರಂಭಿಸಿದನು.
ಪ್ರಾಪ್ತವಾಗುವುದು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು
ಪ್ರಥಮ ಸ್ಕಂದದ ಎಲ್ಲಾ ಕಥಾ ಸಂಗ್ರಹ ಕ್ಕಾಗಿ ಒತ್ತಿ 👇
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp share ಗಾಗಿ ಒತ್ತಿ 📲☎️
2)Facebook shareಗಾಗಿ ಒತ್ತಿ 👉
«««««ಓಂ ನಮಃ ಶಿವಾಯ »»»»»»»
