ಸುಬ್ಬಯ್ಯಶಾಸ್ತ್ರಿಯು ಪುನರ್ಜನ್ಮ ಪಡೆದು ಶಿವಪುತ್ರನಾಗಿ ಜನ್ಮಧರಿಸಿ, ವೇದ ಶಾಸ್ತ್ರ ಪಂಡಿತನಾಗಿ ಸಿದ್ಧಾರೂಢಕೃಪೆಯಿಂದ ಜ್ಞಾನ ಪಡೆದ ಕಥೆ.

 🍁 ಸುಬ್ಬಯ್ಯಶಾಸ್ತ್ರಿಯು ಪುನರ್ಜನ್ಮ ಪಡೆದು  ಶಿವಪುತ್ರನಾಗಿ ಜನ್ಮಧರಿಸಿ, ವೇದ ಶಾಸ್ತ್ರ ಪಂಡಿತನಾಗಿ ಸಿದ್ಧಾರೂಢಕೃಪೆಯಿಂದ ಜ್ಞಾನ ಪಡೆದ ಕಥೆ.




ಸಿದ್ಧಾರೂಢರು  ಉಜ್ಜಣ್ಣವರ ಮಗನಾದ ಬಳಿಕ ಭಕ್ತರೆಲ್ಲರೂ ಹರ್ಷಭರಿತರಾಗಿ ಗೋಕರ್ಣ ಕ್ಷೇತ್ರಕ್ಕೆ ಕರೆದೊಯ್ದರು. ಮಾರ್ಗದಲ್ಲಿ ಅಡುಗೆಯನ್ನು ಮಾಡಿ ವಿನೋದ ಮಾಡುತ್ತಾ ಭೋಜನವನ್ನು ಮಾಡಿದರು. ಗೋಕರ್ಣ ತಲುಪಿ ಮಹಾಬಲೇಶ್ವರ ದೇವಾಲಯವನ್ನು ತಲುಪಿದರು. ಇಲ್ಲಿ ಸಿದ್ಧಾ  ಸಿದ್ದಾ ಅಂತಾ ಧ್ಯಾನ ಮಾಡುತ್ತಾ ಮಲಗಿದ ಓರ್ವ ವೃದ್ಧ ಬ್ರಾಹ್ಮಣನನ್ನು ಕಂಡರು. ಆತನನ್ನು ನೋಡಿದ ಕೂಡಲೇ ಸಿದ್ಧರಿಗೆ ತಾವು ಬಾಲಕನಿದ್ದಾಗ ಅಮರಗೊಂಡದಲ್ಲಿ ಮಲ್ಲಿಕಾರ್ಜುನದ  ಮಠದ ಗುರು ಗಜದಂಡ ಸ್ವಾಮಿಗಳ ಸಮ್ಮುಖ ವಾದ ಮಾಡಿದ ಮುಖಭಂಗಿತನೋ ಹೀಗೆಂದು ಅನುಮಾನದಿಂದ ನೀನಾರು ಅಂತ ಕೇಳಿದರು. ಮುಖವೆತ್ತಿ ಆ ವೃದ್ದನು, ಹೇ ಸಿದ್ಧನೇ  ಸುರಪುರ ರಾಜಸಭೆಯ ಆಸ್ಥಾನ ಪಂಡಿತನಾದ ಸುಬ್ಬಯ್ಯಶಾಸ್ತ್ರಿ ನಾನಾಗಿರುವೆ ಗಜದಂಡ ಗುರುಗಳೆದುರಿಗೆ ಮಹಾಪಂಡಿತನೆಂಬ ಅಹಂಕಾರ ಮದ ದಿಂದ ನಿನ್ನ ಕೂಡ ವಾದ ಮಾಡಿ ಪರಾಜಿತನಾದ ಸುಬ್ಬಯ್ಯ ನಾನು ಪರಶಿವನ ಅವತಾರಿಯಾದ ನಿನಗೆ  ನಿಂದೆ ಮಾಡಿದೆನೆಂದು ಚಿಂತೆಯಿಂದ ನಿನ್ನನ್ನು ಕಂಡು ಕ್ಷಮೆಯನ್ನು ಕೇಳಲು  ಅನೇಕ ತೀರ್ಥಕ್ಷೇತ್ರ, ದೇಶ ಸಂಚಾರ ಮಾಡುತ್ತಾ ಎಲ್ಲೆಲ್ಲಿ  ತಿರುಗಿದರೂ ನಿನ್ನ  ಸುಳಿವು ನನಗೆ ತಿಳಿಯದಾಯಿತು. ಎಲ್ಲಿರುವಿಯೋ ಸಿದ್ದ ಸಿದ್ದ ಅಂತ ಹಂಬಲಿಸುತ್ತಾ ನಿನ್ನ ಧ್ಯಾನವನ್ನು ಸದಾಕಾಲ ಮಾಡುತ್ತಾ, ಈ ಗೋಕರ್ಣ ಕ್ಷೇತ್ರದ ಸಮುದ್ರದಲ್ಲಿ ಹಾರಿ ಪ್ರಾಣ ಬಿಡಬೇಕೆಂದು ನಿಶ್ಚಯಿಸಿ ಇಲ್ಲಿಗೆ  ಬಂದಿರುವೆ  ಕೊನೆಗೆ ಅಂತ್ಯಕಾಲಕ್ಕೆ ನಿನ್ನ ದರ್ಶನವಾಯಿತು. ಧನ್ಯನಾದೆ. ಶ್ರೀಹರಿಯಂತೆ ನಿನಗೆ ಭಕ್ತವತ್ಸಲ ಅಂತಾ ಬಿರುದಾಂಕಿತವಿದೆ, ತಿಲಮಾತ್ರವೂ  ಸಂದೇಹವಿಲ್ಲ. ಇನ್ನು ಮೇಲೆ ನಿನ್ನ ನಿತ್ಯವೂ ಸೇವೆ ಮಾಡಬೇಕೆಂಬ ಇಚ್ಛೆಯಾಗಿದೆ. ಈಗ ನನ್ನ ಆಯುಷ್ಯ ಮುಗಿದಿದೆ. ಮುಂದಿನ ಜನ್ಮದಲ್ಲಾದರೂ ನಿನ್ನ ಸೇವೆಯನ್ನು ಮಾಡುವ ಸೌಭಾಗ್ಯವನ್ನು ಅನುಗ್ರಹಿಸು.


ಮೊದಲಿಗೆ ಈಗ ಈ ಹಿಂದೆ ನಿನ್ನ ನಿಂದೆ ಮಾಡಿದ ನನ್ನ ಅಪರಾಧವನ್ನು ಕ್ಷಮಾ ಮಾಡು, ಮಹಾತ್ಮನೇ, ಪರಶಿವನ ಅವತಾರಿಯೇ, ಕ್ಷಮಾ ಮಾಡಿ ನನ್ನ ಮನಸ್ಸಿನ ಬಯಕೆಯನ್ನು ಈಡೇರಿಸು ಅಂತಾ  ಅಳುತ್ತಾ ಅಳುತ್ತಾ ಸಿದ್ಧಾರೂಢರ ಪಾದಪದ್ಮಗಳಲ್ಲಿ  ತನ್ನ ಶಿರೋಕಮಲವನ್ನಿಟ್ಟು. ಆಗ ಶ್ರೀಗಳು ಆತನ ತಲೆಯ ಮೇಲೆ ತನ್ನ ಅಮೃತಹಸ್ತವನ್ನಿಟ್ಟು 


" ಯಂ ಯಂ ವಾಪಿಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಂ | ತಂ ತಮೇವೈತ ಕೌಂತೇಯ | ಸದಾ ಸದ್ಭಾವ ಭಾವಿತ |

ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದಂತೆ, ಅಂತ್ಯಕಾಲದಲ್ಲಿ ಯಾವ ಭಾವನೆಯಿಂದ ಪ್ರಾಣವನ್ನು ಬಿಡುವರೋ ಅಂತಹ ಭಾವನೆಯ  ಶರೀರದಲ್ಲಿ ಜನಿಸಿ ಬರುವರು. ಕಾರಣ ನೀನು ಈಗ ಮಾಡಿದ ಸಂಕಲ್ಪದ ಪ್ರಕಾರ ಮುಂದಿನ ಜನ್ಮದಲ್ಲಿ ನನ್ನ ಹತ್ತಿರ ಬರುವ ಜನ್ಮ ಬರಲಿ ಅಂತ ಆಶೀರ್ವಾದ ಮಾಡುತ್ತಿರುವಲ್ಲಿ ತದೇಕ ಧ್ಯಾನದಿಂದ ಸುಬ್ಬಯ್ಯ


ಶಾಸ್ತ್ರಿಯು  ಶ್ರೀಗಳ ಪಾದಾರವಿಂದಗಳಲ್ಲಿ ಪ್ರಾಣವನ್ನು ಬಿಟ್ಟನು. ನಂತರ ಬ್ರಾಹ್ಮಣರೆಲ್ಲರೂ ಸುಬ್ಬಯ್ಯನ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಾಡಿದರು. ಭಕ್ತರಿಗೆಲ್ಲ ಸಿದ್ದರು ಗೋಕರ್ಣ ಕ್ಷೇತ್ರವನ್ನು ತೋರಿಸಿ ಅಲ್ಲಿ ಕೆಲ ದಿನ ಕಾಲ ಕಳೆದು ಹುಬ್ಬಳ್ಳಿಗೆ ಮರಳಿದರು.


🙏 ಸುಬ್ಬಯ್ಯ ಶಾಸ್ತ್ರಿಯು  ಶಿವಪುತ್ರನಾಗಿ ಜನಿಸಿದ್ದು 🕉️


ಇತ್ತ ಕಡೆ ಮರಣವಾದ ನಂತರ ಸುಬ್ಬಯ್ಯ ಶಾಸ್ತ್ರಿಯ  ಆತ್ಮವು ಸೂಕ್ಷ್ಮ ಶರೀರದಿಂದ ಸ್ವರ್ಗ ನರಕಗಳಲ್ಲಿಯ ಸುಖ ದುಃಖಗಳನ್ನು ಭೋಗಿಸಿ, ಮೇಘದ ಮುಖಾಂತರ ಧರೆಗಿಳಿದು ಗರಗ ಗ್ರಾಮದಲ್ಲಿಯ  ಸಾಧು ಪ್ರೇಮಿಯ ಮಾವಿನ ಹಣ್ಣುಗಳ ತೋಟದಲ್ಲಿಯ  ಮರದಲ್ಲಿಯ  ಹಣ್ಣಿನಲ್ಲಿ ಪ್ರವೇಶಿಸಿತು. ಕೆಲವು ಹಣ್ಣುಗಳನ್ನು ಗರಗದ ಮಡಿವಾಳೇಶ್ವರ ಮಠಕ್ಕೆ ಅರ್ಪಿಸಿದನು. ಆ ಗ್ರಾಮದಲ್ಲಿಯ ಶಿವ ಭಕ್ತರಾದ  ಶಿವಬಸಪ್ಪ ಶಿವಲಿಂಗಮ್ಮ ದಂಪತಿಗಳು ಮಠದ ಭಕ್ತರಾಗಿದ್ದರಿಂದ ಆ ಸಮಯಕ್ಕೆ ಆಗಮಿಸಿದ್ದರು. ಆ ದಂಪತಿಗಳಿಗೆ ಮಕ್ಕಳಾಗಿದ್ದಿಲ್ಲ. ಮಡಿವಾಳೇಶ್ವರ ಸ್ವಾಮಿಗಳ ಮರಿದೇವರು ಆ ದಂಪತಿಗಳನ್ನು ಕುರಿತು ನೀವು ಸ್ವಾಮಿಯ  ಪರಮ ಭಕ್ತರಾಗಿದ್ದೀರಿ, ಉತ್ತಮವಾದ ವರವನ್ನು ಕೇಳಿರಿ  ಅಂತ ನುಡಿದರು. ಅದಕ್ಕೆ ಆ ದಂಪತಿಗಳು ಗುರು ಕೃಪೆಯಿಂದ ನಮಗೆ ಸತ್ ಪುತ್ರನನ್ನು ಕರುಣಿಸಿರಿ  ಅಂತಾ ಕೇಳಿಕೊಂಡರು. ಆಗ ಮರಿದೇವರು ತಥಾಸ್ತು ಅಂತ ಆಶೀರ್ವಾದ ಮಾಡುತ್ತಾ ಎರಡು ಮಾವಿನ ಫಲಗಳನ್ನು ಕೊಟ್ಟರು. ಅವುಗಳಲ್ಲಿ ಸುಬ್ಬಯ್ಯ ಶಾಸ್ತ್ರೀಯ ಆತ್ಮವು ಸೇರಿತ್ತು. ನಿಮಗೆ ಬೇಕಾದ ಸುತನೇ ನಿಮ್ಮ ಗರ್ಭದಿಂದ ಜನಿಸುವನು ಅಂತ ಆಶೀರ್ವಾದ ಮಾಡಿದರು. ಮನೆಗೆ ಬಂದು ಪರಶಿವನ ಧ್ಯಾನ ಮಾಡುತ್ತಾ ಆ ಫಲಗಳನ್ನು ಸ್ವೀಕಾರ ಮಾಡಿದರು.


ಶಿವಲಿಂಗವ್ವ ಗರ್ಭಿಣಿಯಾದಳು. ಹತ್ತನೇ ತಿಂಗಳಿಗೆ ಪುತ್ರರತ್ನ ಜನನವಾದನು. ಜೋಯಿಸರನ್ನು ಕರೆಸಿ ಕೇಳಲು ಉತ್ತಮ ನಕ್ಷತ್ರದಲ್ಲಿ ಶಿವಪ್ರಸಾದದಿಂದ ಜನಿಸಿದ್ದರಿಂದ ಈತನಿಗೆ  ಶಿವಪುತ್ರ ಅಂತ ನಾಮಕರಣ ಮಾಡಬೇಕು ಅಂತ ತಿಳಿಸಿದರು.

“ಈತನು ಈಶ್ವರದತ್ತ ಪುತ್ರನಿದ್ದಾನೆ, ಆದ ಕಾರಣ ಈತನಿಗೆ ಶಿವಪುತ್ರನೆಂದು ಹೆಸರಿಡತಕ್ಕದ್ದು. ಈತನೊಬ್ಬ ಯೋಗ ಭ್ರಷ್ಟನು ಜನ್ಮಕ್ಕೆ ಬಂದಿರುವನು. ನಿರ್ದುಷ್ಟನಾದ ಇವನು, ಮುಂದೆ ಸದ್ಗುರು ಕೃಪೆಯಿಂದ ಬ್ರಹ್ಮನಿಷ್ಟನಾಗಿ ಕುಲ ಉದ್ದಾರಕನಾಗುವನು,'' ಎಂದು ಹೇಳಿ ಹೋದನು. ದಿನೇ ದಿನೇ ಆ ಬಾಲಕನ ಬೆಳೆಯುತ್ತಾ, ಹನ್ನೆರಡು ವರ್ಷ ವಯಸ್ಸಿನಲ್ಲಿ ಆತನಿಗೆ ಲಗ್ನ ಮಾಡಿದರು. ಆದರೆ ಹದಿನೈದು ವರ್ಷ ವಯಸ್ಸಾದಾಗ ಮಹಾ ವೈರಾಗ್ಯಪ್ರಾಪ್ತವಾಗಿ, ಸ್ತ್ರೀಯು  ಮಾತೃಗೃಹದಲ್ಲಿರುವಾಗ ಶಿವಪುತ್ರನು ತಂದೆ ತಾಯಿಗಳಿಗೆ ಹೇಳದೆ, ಮನೆ ಬಿಟ್ಟು ಹೊರಟು, ನೆಟ್ಟಗೆ ಹುಬ್ಬಳ್ಳಿಗೆ ಬಂದನು. ಶ್ರೀ ಸಿದ್ಧಾರೂಢರ  ಬಳಿಗೆ ಬಂದು ಅವರ ಚರಣಗಳನ್ನು

ದೃಢವಾಗಿ ಹಿಡಿದು, “ದಯಾಳುಗಳಾಗಿಯೂ, ಕರುಣಾಕರನಾಗಿಯೂ ಇರುವ ಸದ್ಗುರುವೇ ನಿನ್ನನ್ನು ಕುರಿತು ನಾನು ಶರಣು ಬಂದಿರುತ್ತೇನೆ. ನಿನ್ನ ಹೊರತು ಅನ್ಯರಕ್ಷಕರಿಲ್ಲವಾದ್ದರಿಂದ, ಹೇ ದೀನನಾಥನೇ, ನನ್ನನ್ನು ಈ ಭವದೂಳಗಿಂದ ತಾರಿಸುವಂಥವನಾಗು. ನನ್ನನ್ನು ನಿನ್ನ ಪಾದದಲ್ಲಿಯೇ ಇರಿಸಿಕೋ.” ಎಂದು ಪ್ರಾರ್ಥಿಸಿದನು. ಆಗ ದಯಾಳುವಾದ  ಸದ್ಗುರು ಸಿದ್ಧರಾಯರು, ಆತನನ್ನು ಎತ್ತಿ ಅಭಯವನ್ನು ಕೊಟ್ಟು - "ನೀನು ಇಲ್ಲಿ ನಿರ್ಭಯ ಚಿತ್ತದಿಂದಿರು. ಇಲ್ಲಿ ನಿನಗೆ ಸಂಸಾರ ಭಯವಿಲ್ಲ,” ಎಂದು ನುಡಿದರು. ಸದ್ಗುರುಗಳು ಇವನ ಗುರ್ತು ಹಿಡಿದರು. ಅಂತಕಾಲದ ಇಚ್ಛೆಯನ್ನು ಪೂರೈಸಿಕೊಳ್ಳಲಿಕ್ಕೆ . ಪುನರ್ಜನ್ಮವನ್ನು ಪಡೆದುಕೊಂಡು ಬಂದು ಸುಬ್ಬಯ್ಯಶಾಸ್ತಿಯೇ ಇವನು  ಎಂದು ಮನಸ್ಸಿನಲ್ಲಿ ತಿಳಿದುಕೊಂಡರು. ಈತನಿಗೆ ವಿದ್ಯಾ ಸಂಸ್ಕಾರವಿರುವದರಿಂದ ಚತುರನಾದ ಪಂಡಿತನಾಗುವನು, ಮತ್ತು ವೇದಾಂತ ವಿಚಾರವನ್ನು ಮಾಡಿ, ಈತನ ಬ್ರಹ್ಮಜ್ಞಾನವನ್ನು ಪಡೆಯುವುದು ಎಂದು ಸಿದ್ಧಾರೂಢರು ತಿಳಿಯುವಂಥವರಾದರು. ಶಿವಪುತ್ರನು ಸಂಸ್ಕೃತ ವಿದ್ಯಾ ಕಲಿಯುವದಶೆಯಿಂದ, ಸದ್ಗುರುಗಳು ಆತನನ್ನು ಸಂಸ್ಕೃತ ಪಾಠಶಾಲೆಗೆ ಕಳುಹಿಸಿದರು. ಅಲ್ಲಿ ಶೀಘ್ರದಿಂದ ವಿದ್ಯಾ ಪೂರ್ಣಮಾಡಿ, ಆತನು ಸರ್ವ ವೇದಾಂತ ಗ್ರಂಥಗಳನ್ನು ತಾನೇ  ಅಭ್ಯಾಸಿಸಿದನು. ಸರ್ವ ವೇದ ವೇದಾಂತದಲ್ಲಿ ಪಾರಂಗತನೂ, ಷಟ್‌ಶಾಸ್ತ್ರಗಳಲ್ಲಿ ಬಹು ನಿಪುಣನೂ, ಆದ ಮೇಲೆ ಶಿವಪುತ್ರನು ಸನ್ಯಾಸಾಶ್ರಮವನ್ನು ಗುರುಗಳಿಂದ ಸ್ವೀಕರಿಸಿ, ತ್ರಿಕರಣ ನಿಯತನಾದನು.


ಒಂದು ದಿನ ಶಿವಪುತ್ರನನ್ನು ಕುರಿತು, ಸಿದ್ಧಾರೂಢರು, - “ಈ ಕಲ್ಲನ್ನು ಎತ್ತಿಕೊಂಡು ತೀವ್ರವಾಗಿ ಓಡು,” ಎಂದು ಹೇಳಿದ ಕೂಡಲೇ ಆತನು ಹಾಗೆಯೇ ಮಾಡಿದನು. ಕಲ್ಲು ಬಹಳ ಭಾರವಾಗಿದ್ದು, ಓಡುವಾಗ ಶಿವಪುತ್ರನು ಬಹಳ  ಸೋತು ಹೋಗಿ, ಎಡವಿ ಭೂಮಿಗೆ ಬಿದ್ದನು. ಶರೀರವೆಲ್ಲಾ ಘಾಯವಾಗಿ, ಆತನು ದುಃಖದಿಂದ ಬಹು ಖಿನ್ನನಾದನು. ಆತನನ್ನು ನೋಡಿ, ಸದ್ಗುರುಗಳು, - “ನಿನಗ್ಯಾಕೆ ದುಃಖವಾಗುವದು, ಮ್ಲಾನವದನನಾಗಿ ಯಾಕಿರುವಿ ?” ಎಂದು ಕೇಳಿದ್ದಕ್ಕೆ, ಶಿವಪುತ್ರನು , “ನನಗೆ ಮೈಯೆಲ್ಲಾ ನೋಯುತ್ತದೆ,” ಎಂದು ಉತ್ತರ ಕೊಟ್ಟನು. ಆಗ ಸದ್ಗುರುಗಳು, - “ನೀನು ದೇಹವೇ ನಾನೆಂದು ತಿಳಿಯುವದರಿಂದ ದುಃಖ ಭೋಗಿಸಬೇಕಾಗುವದು. ದೇಹಕ್ಕೆ ದುಃಖವು ಸಹಜವಾಗಿರುತ್ತದೆ. ಆದರ ಅಭಿಮಾನ

ಹಿಡಿಯುವದರಿಂದ ನಿನಗೆ ದುಃಖವು ಭಾಸಿಸುತ್ತದೆ. “ಈ ದೇಹವು' ಎಂದು ನೀನು ತಿಳಿಯುವಾಗ, ದೇಹ ನೀನು

ಹ್ಯಾಗಾಗುವಿ? ಇಲ್ಲಿ ಬಿದ್ದಿರುವ ಕಲ್ಲು ನೀನು ನೋಡುತ್ತಿ, ಆದರೆ ಅದೇ ತಾನೆಂದು ನೀನು ಹೇಳಲೊಲ್ಲಿ. ಇದೇ

ಪ್ರಕಾರ ಜಡವಾಗಿರುವ ಈ ದೇಹವನ್ನು ಆತ್ಮತ್ವದಿಂದ ಹ್ಯಾಗೆ ತಿಳಿಯುವಿ?” ಎಂದು ಹೇಳಿದ್ದು ಕೇಳಿ ಶಿವಪುತ್ರನು ವಿಚಾರ ಮಾಡಲಿಕ್ಕೆ ಆರಂಭಿಸಿದನು. ನಿತ್ಯ ಏಕಾಂತದಲ್ಲಿ ಹೋಗಿ, ಈ ಸದ್ಗುರು ವಚನವನ್ನು ಮನನ ಮಾಡುತ್ತಿದ್ದು, - “ನಾನು ದೇಹವು ಅಲ್ಲ, ಎಂದು ಗುರುಗಳನ್ನುತ್ತಾರೆ, ಜಡತ್ವದಿಂದ ಅದು ನನಗೆ ಪ್ರತ್ಯೇಕವಾಗಿರುತ್ತದೆ. ಹಾಗಾದರೆ ಇಂದ್ರಿಯಗಳು 

ನಾನಿದ್ದು ಚೇಷ್ಟಿಸುತ್ತೇನೆ'' ಎಂದು ತಿಳಿದನು. ಒಂದು ವರ್ಷದತನಕ ಮನನ  ಮಾಡುತ್ತ,  ಇದನ್ನೇ  ನಿಶ್ಚಯ ಮಾಡುವಂಥವನಾದನು. ಸದ್ಗುರುನಾಥನಾದರೂ ಈ ಪ್ರಕಾರ ಆತನ ಭಾವವನ್ನು ತಿಳಿದು, ಏನು ಮಾಡಿದರು, ಅಂದರೆ, ಮೆಣಸಿನ ಕಾಳು ಜಜ್ಜಿ ಅದರ ನೀರು ಸ್ವಲ್ಪ ತಯಾರಿಸಿಕೊಂಡು, ಶಿವಪುತ್ರನನ್ನು ಸಮೀಪ ಕರೆದು, ಅಕಸ್ಮಾತ್ತಾಗಿ ಅವರ ಕಣ್ಣೊಳಗೆ  ಆ ನೀರನ್ನು ಚೆಲ್ಲಿದರು. ಆಗ ಆತನು "ಕಣ್ಣು ಉರಿಯುತ್ತದೆ.' ಎಂದು ಕಣ್ಣು ಒರಸಿಕೊಳ್ಳುತ್ತ ಅಂದನು. ಆಗ ಸಿದ್ಧಾರೂಢರು - “ಕಣ್ಣು ಉರಿಯುವದನ್ನು ನೀನು ಅರಿಯುವರಿಂದ, ನೀನು ಕಣ್ಣು ಹ್ಯಾಗಾಗುವಿ, ನನಗೆ ಹೇಳು, ನೀನು ಇಂದ್ರಿಯಗಳೇ  ತಾನೆಂದು ಹೇಳುವುದಾದರೆ, ಹತ್ತು ಇಂದ್ರಿಯಗಳಿರುತ್ತವೆ. ಇವುಗಳ ಪೈಕಿ ನೀನು ಯಾವ ಇಂದ್ರಿಯ ಇದ್ದಿ, ಅಥವಾ ಹತ್ತು ಇಂದ್ರಿಯಗಳು ನೀನೊಬ್ಬನೇ ಇದ್ದೀಯೋ ? ಎಂದು ಹೇಳಿದ್ದು ಕೇಳಿ, ಶಿವಪುತ್ರನು  ತನ್ನೊಳಗೆ ವಿಚಾರಿಸುತ್ತಾನೆ- “ಸತ್ಯವಾಗಿ ಮನಸ್ಸು ಒಂದು ಎಲ್ಲಾ ಇಂದ್ರಿಯಗಳ ಚಾಲಕವಾಗಿರುತ್ತದೆ. ಆದ್ದರಿಂದ ನಿಜವಾಗಿ ನಾನು ಮನಸ್ಸು ಇರುವೆನು, ಯಾಕೆಂದರೆ ಆ ನನ್ನಿಂದ ಎಲ್ಲಾ ಸಂಕಲ್ಪ ವಿಕಲ್ಪಾದಿಗಳೂ, ಇಂದ್ರಿಯ ವ್ಯಾಪಾರಗಳು ಉಂಟಾಗುತ್ತವೆ. ಮತ್ತು ಎಲ್ಲಾ ವೃತ್ತಿರೂಪದಿಂದ ನಾನೇ ಇದ್ದೇನೆ. " ಈ ಪ್ರಕಾರ ಪುನಃ ಒಂದು ವರ್ಷ ಪರ್ಯಂತ ಮನನ ಮಾಡಿ ಮನವೇ ತಾನೆಂಬುದಾಗಿ ನಿರ್ಧರಿಸಿದನು. ಹೀಗಿರುತ್ತಾ  ಒಂದಾನೊಂದು ದಿವಸ, ಸದ್ಗುರುಗಳು ಆತನನ್ನು ಕರೆದು  ಏನೂ ಇದ್ದಿ, ನನಗೆ ಹೇಳು, "ಎಂದು ಕೇಳಿದಾಗ, ಶಿವಪುತ್ರನು, -"ನಾನೂ ಸಂಕಲ್ಪ ವಿಕಲ್ಪ ಮಾಡುತ್ತೇನೆ. ನನಗೆ ಪುಣ್ಯ ಪಾಪಗಳು, ಸರ್ವತಾಪಗಳೂ ಆಗುವದರಿಂದ ಇವಕ್ಕೆ ಸ್ಥಾನವಾಗಿರುವ ಮನವೇ ನಾನು,” ಎಂದು ಉತ್ತರ ಕೊಟ್ಟನು. ಅದಕ್ಕೆ ಸದ್ಗುರುಗಳು, -“ಇಂಥಾ ವಿಕಾರಯುಕ್ತವಾದ ಮನಸ್ಸಿನ ಎಲ್ಲಾ ವೃತ್ತಿಗಳನ್ನು ಇಂಥಿಂಥವು ಎಂದು ನೀನು ನಿರ್ಧಾರ ಮಾಡುತ್ತಿ. ಇಂಥವನಾದ ನೀನು ಯಾರು ಎಂದು ವಿಚಾರ ಮಾಡಿ ನನಗೆ ಹೇಳು, " ಎಂದು ಅಂದರು. ಅನಂತರ ಶಿವಪುತ್ರನು ಏಕಾಂತದಲ್ಲಿ ಹೋಗಿ ಮತ್ತೊಮ್ಮೆ ವರ್ಷ ತನಕ ಮನನ  ಮಾಡುತ್ತಿದ್ದು, - “ವೃತ್ತಿ ಜಾಲವನ್ನು ನಾನೇ ನಿಶ್ಚಯಿಸಿರುತ್ತಿರುವೆನು. ಆದ್ದರಿಂದ ನಾನು ಬುದ್ಧಿ ಇರುತ್ತೇನೆ. ಸುಖ ದುಃಖಗಳನ್ನು ನಾನು ತಿಳಿಯುತ್ತೇನೆ. ಕರ್ತಾಭೋಕ್ತಾ ಎಂಬವನಾಗಿ ನಾನೇ ಇದ್ದೇನೆ. ಆದ್ದರಿಂದ ನಾನು ಬುದ್ಧಿ ಇದ್ದೇನೆ ಎಂದು ನಿರ್ಣಯಿಸಿದ್ದನ್ನು. ವರ್ಷಾಂತ್ಯದಲ್ಲಿ ಶಿವಪುತ್ರನು ಸದ್ಗುರುಗಳ ಕಡೆಗೆ ಹೋಗಿ, - 'ನಾನು ನಿಶ್ಚಯವಾಗಿ ಬುದ್ಧಿ ಇದ್ದೇನೆ,'' ಅಂದನು. ಆಗಲೇ ಸದ್ಗುರುಗಳು ಏನೊಂದು ಮಾತನಾಡದೆ, ಏನು ಮಾಡಿದನೆಂದರೆ – “ಒಂದು ದಿನ ಪ್ರಭಾತಕಾಲದಲ್ಲಿ ಶಿವಪುತ್ರನು ಎಚ್ಚರವಾಗುವ  ಮೊದಲು, ಸಿದ್ದರು ಅವನ ಸಮೀಪ ಬಂದು ಬೆನ್ನಿನ ಮೇಲೆ ಛಪ್ಪರಿಸಿದರು. ಆತನು ಗಡಬಡಿಸಿ ಎದ್ದಕೂಡಲೇ ಅವನಿಗೆ ವಿಚಾರಿಸುತ್ತಾರೆ - "ಇಷ್ಟು ಹೊತ್ತಿನ ತನಕ ನೀನು ಏನು ಅನುಭವಿಸುತ್ತ ಇದ್ದಿ, ನನಗೆ ಹೇಳು,” ಎಂದು ಕೇಳಲು, ಆತನು - “ನಾನು ಏನೇನು ಅರಿಯುತ್ತಿದ್ದಿಲ್ಲ. ನನ್ನ ಅನುಭವಕ್ಕೆ ಏನೇನೋ ಬಂದಿಲ್ಲ,” ಎಂದು ಪ್ರತ್ಯುತ್ತರ ಕೊಟ್ಟನು. ಅದಕ್ಕೆ ಸದ್ಗುರುಗಳು, - 'ತಾನು ಬುದ್ಧಿಯೆಂದು ನೀನು ಹೇಳುವಿ. ಹಾಗಾದರೆ ನೀನು ಎಲ್ಲಿದ್ದಿ ?” ಎಂದು ಕೇಳಿದ್ದಕ್ಕೆ, ಶಿವಪುತ್ರನು - “ನಾನು ಶೂನ್ಯನಿದ್ದೆ, ಸುಖದ ಹೊರತು ನಿದ್ರೆಯಲ್ಲಿ ಮತ್ತೇನೂ ತಿಳಿಯುತ್ತಿದ್ದಿಲ್ಲ,” ಎಂದು ಉತ್ತರ ಕೊಟ್ಟನು. ಆಗ ದಯಾಪರರಾದ ಸಿದ್ಧಾರೂಢರು - “ಸಜ್ಜನನಾದ ಶಿವಪುತ್ರನೇ ಕೇಳು, ತಾನು ಇದ್ದೆ, ಅನ್ನುವದರಿಂದ ನೀನು ಸತ್, ಶೂನ್ಯವನ್ನು ತಿಳಿದಿಯಾದ್ದರಿಂದ ನೀನು ಚಿತ್, ಮತ್ತು ಸ್ವರೂಪಸುಖ ಮಾತ್ರ ಅನುಭವಿಸುತ್ತಿದ್ದಿಯಾದ್ದರಿಂದ ನೀನು ಆನಂದನು. ಈ ಪ್ರಕಾರ ಸಚ್ಚಿದಾನಂದ ಸ್ವರೂಪವೇ ಇದ್ದಿ, ಇದೇ  ನಿನ್ನ ನಿತ್ಯ ಸ್ವರೂಪವಿದ್ದು, ಅದಕ್ಕೆ ಪುಣ್ಯ ಪಾಪಗಳು ಹತ್ತುವದಿಲ್ಲ. ಅದೇ ಈ ಜಗದ್ರೂಪವಾಗಿ ಭಾಸಿಸುತ್ತಿದೆ. ನೀನು ಸದಾ ಚಿದ್ರೂಪನಿದ್ದಿ, ಜಡದೇಹವನ್ನು ನೀನು ತಿಳಿಯುತ್ತಿ, ಇಂದ್ರಿಯಗಳನ್ನು ಪ್ರೇರಿಸುವಂಥಾ ಪ್ರಾಣಕ್ಕಾದರೂ ನೀನು ಪ್ರೇರಿಸುತ್ತಿ, ಪ್ರಾಣದ ಚಲನಾದಿಗಳನ್ನು ಮನಸ್ಸಿನಿಂದ ತಿಳಿಯುತ್ತಿ. ಮನೋವೃತ್ತಿಗಳನ್ನು ಬುದ್ಧಿಯಿಂದ ಅರಿಯುತ್ತಿ, ಬುದ್ಧಿಯ  ವ್ಯಾಪರಗಳಿಗಾದರೂ ನೀನು ಸ್ವತಃ ಸಾಕ್ಷಿಯಾಗಿದ್ದಿ. ಇಂಥಾ ಸಾಕ್ಷಿರೂಪದಿಂದ ನೀನು ಅಹೋರಾತ್ರಿ ವರ್ತಿಸುತ್ತಿರು. ಈ ಅಭ್ಯಾಸವನ್ನು ಎಂದೂ ಬಿಡಬೇಡ, ಅಖಂಡ ವೈರಾಗ್ಯ ವೃತ್ತಿಯಿಂದ ಇರುತ್ತ, ಯಾವಾಗಲೂ ದೇಹದಲ್ಲಿ ನಿರಭಿಮಾನನಾಗಿರು. ಇಂಥಾ ನಿರ್ವಿಕಾರ ಸ್ವರೂಪವೇ ತಾನೆಂದು ನಿತ್ಯ ತಿಳಿಯುವಂಥವನಾಗು. ಸರ್ವ ಕಾಲದಲ್ಲಿಯೂ ಇರಬೇಕಾಗಿರುವಂತಹ ಸ್ವರೂಪಧ್ಯಾನವನ್ನು ವಿಷಯಗಳ ಸಲುವಾಗಿ ಎಂದೂ ಬಿಡಬೇಡ, ವೇದಾಂತ ಚರ್ಚಾ, ಶ್ರವಣ, ಮನನ, ನಿದಿಧ್ಯಾಸನ ಇವುಗಳಲ್ಲೇ ಪ್ರವೃತ್ತಿ ಇದ್ದು  ಕಾಲಹರಣ ಮಾಡುತ್ತಿರು,” ಎಂದು ಅಂದ ವಚನ ಕೇಳಿದ ಕೂಡಲೇ, ಶಿವಪುತ್ರನ ಮನಸ್ಸು ಸ್ವರೂಪಾಕಾರವಾಗಿ, ಪೂರ್ಣ ಬ್ರಹ್ಮಾನಂದವು ಅನುಭವಕ್ಕೆ ಬಂತು. ಅನಂತರ ಎದ್ದು, ಪ್ರಾರ್ಥಿಸಿದ್ದೇನೆಂದರೆ, - 'ಹೇ ದಯಾಳುವಾದ ಸಿದ್ಧಾರೂಢನೇ, ನನ್ನ ಜನ್ಮವು ಸಾರ್ಥಕವಾಯಿತು. ನಿನ್ನ ಕೃಪೆಯಿಂದ ನನಗೆ ಆತ್ಮಾನುಭವವು ಪ್ರತೀತಿಯಾಯಿತು. ಈಗ ಅನನ್ಯಭಾವದಿಂದ ನಿನ್ನ ಚರಣದಲ್ಲಿ ಪ್ರಾರ್ಥಿಸುವದೇನೆಂದರೆ - ನನ್ನ ಮೇಲೆ ಕೃಪೆಯಿಂದ ಯೋಗ್ಯವಾದ ಸೇವೆಯನ್ನು ಕೊಟ್ಟು ಸದಾ ನಿನ್ನ ಚರಣಗಳಲ್ಲೆ  ಇರಗೊಡಬೇಕು.” ಈ ಪ್ರಕಾರ ಪ್ರಾರ್ಥನೆಯನ್ನು ಕೇಳಿ, ಆನಂದಮೂರ್ತಿಯಾದ ಸದ್ಗುರುಗಳು, - “ನೀನು ಮಾಡತಕ್ಕ ಸೇವಾ ಕಾರ್ಯವು ಯಾವುದೆಂದರೆ - ಮುಮುಕ್ಷು ಜನರಿಗೋಸ್ಕರ ವೇದಾಂತ ಗ್ರಂಥವನ್ನು ಬಹು ಪ್ರೇಮದಿಂದ ನಿರೂಪಿಸಿತಕ್ಕದ್ದು. ಇಂಥಾ ಲೋಕೋದ್ಧಾರ ಕಾರ್ಯವನ್ನು ಆರಂಭಿಸುವ ನಿಶ್ಚಯವನ್ನು ಮಾಡು. ಆದ್ದರಿಂದ ಈ ನಿನ್ನ ಜ್ಞಾನವು ದೃಢವಾಗುವದು,” ಎಂದು ಭಾಷಣ ಮಾಡಿದರು. ಆಗ ಶಿವಪುತ್ರನು ಗುರು ಆಜ್ಞೆಯೇ  ಪ್ರಮಾಣವೆಂದು ಆ ದಿವ್ಯ ಚರಣಗಳಲ್ಲಿ ಮಸ್ತಕವನ್ನಿಟ್ಟನು. ಅಂದಿನಿಂದ ಆತನು ಪ್ರತಿ ದಿನದಲ್ಲಿ ಗುರು ಸಮಕ್ಷಮದಲ್ಲಿ ಶಾಸ್ತ್ರ ವಿವರಿಸುವದಕ್ಕೆ ಪ್ರವರ್ತನಾದನು. ಆತನ ವೇದಾಂತ ವಿವೇಚನವನ್ನು ಕೇಳಿದ ಮಾತ್ರದಿಂದ ಶ್ರೋತಾ ಜನರಿಗೆ ಮನವು  ಉನ್ನನವಾಗಿ, ವೃತ್ತಿ ತದಾಕಾರವಾಗಿ, ಗುರುಪಾದಗಳಲ್ಲಿ ಅವರು ಲೀನರಾಗಿ ಹೋಗುವರು. ಶಿವಪುತ್ರನು ರಚಿಸಿದ ವೇದಾಂತ ಚಂದ್ರಿಕೆ ಎಂಬ ವಿಚಾರಪರ ಗ್ರಂಥವು ಮುಮುಕ್ಷು ಜನರಿಗೆ ಬಹಳ ಉಪಯುಕ್ತವಾಗಿದ್ದು  ಅದರೊಳಗೆ ಆತನ ಜ್ಞಾನ ಮತ್ತು  ವಿಚಾರ ಶಕ್ತಿ ಪೂರ್ಣವಾಗಿ ಹೊಳೆಯುತ್ತದೆ. ಸದ್ಗುರುರಾಯನು ಧನ್ಯ ಧನ್ಯನು. ಜೀವನಿಗೆ ಈತನ ಕೃಪೆಯಿಂದ ಭವಭಯವು ನಾಶವಾಗುವದು. ಮತ್ತು ಜೀವಭಾವವು ಹೋಗಿ, ನಿರಾಮಯ ಸ್ವರೂಪವಾದ  ಬ್ರಹ್ಮವೇ ತಾನಾಗುವನು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಸಿದ್ಧರ ಚರಿತ್ರೆ ಪಠಣದಿಂದ ರುಕ್ಮಿಣಿಯ ಭೂತವು ಬಿಟ್ಟು ಹೋದದ್ದು ಅವಳು ಸತ್ತಾಗ ಯತಿಯು ಬಂದು ಸದ್ಗುರು ವಿಭೂತಿಯಿಂದ ಬದುಕಿಸಿದ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ