ಗೋವಾ ಮತ್ತು ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ ಕಥೆ
🕉️ ಗೋವಾ ಮತ್ತು ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ ಕಥೆ
ಪೋರ್ಚುಗೀಸರ ಕಪಿ ಮುಷ್ಠಿಯ ಆಡಳಿತದಲ್ಲಿದ್ದ ಗೋವಾ ರಾಜ್ಯದಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯರಾದ ಆನಂದಸ್ವಾಮಿ ಸಂಚಾರ ಮಾಡಿ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢ ಸ್ವಾಮಿಗಳ ದರ್ಶನ ಪಡೆದು ನತಮಸ್ತಕರಾಗಿ ಪ್ರಾರ್ಥಿಸಿದರು. ಆದಿ ಪರಶಿವನ ಪರಾವತಾರಿ ಸದ್ಗುರುನಾಥನೇ, ಗೋವಾ ರಾಜ್ಯದ ಜನತೆಯ ಉದ್ಧಾರಕ್ಕಾಗಿ ತಮ್ಮ ಆಶ್ರಮ ಸ್ಥಾಪನೆ ಮಾಡಬೇಕೆಂದೂ, ಅಲ್ಲಿ ತಮ್ಮ ಶಿಷ್ಯಂದಿರು ಉಳಿದುಕೊಂಡು, ಸತ್ಸಂಗ ಸಂಪ್ರದಾಯವನ್ನು ಆರಂಭಿಸುವ ಕಾರ್ಯ ನಡೆಯ ಬೇಕೆಂದು ಕೇಳಿಕೊಂಡು. ಹರ್ಷಚಿತ್ತವುಳ್ಳವರಾದ ಸಿದ್ದಾರೂಢರು ಅಲ್ಲಿಯೇ ಇದ್ದ ಶಿಷ್ಯೋತ್ತಮಳನ್ನು ಕರೆದು, ಹೇ ಗೋಕುಳಾ, ಗೋವೆಗೆ ಹೋಗಿ ಪಂಚವಾಡಿಯಲ್ಲಿ ಸಿದ್ದಾಶ್ರಮ ಸ್ಥಾಪನೆ ಮಾಡಿ ಭಜನೆ, ಕೀರ್ತನಾ ಸಪ್ತಾಹ ನಡೆಸಿ ಅನ್ನಸಂತರ್ಪಣೆ ಮಾಡಬೇಕು. ನನ್ನ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪನೆ ಮಾಡಿ ಅಂತ ಅಲ್ಲಿದ್ದ ಮೂರ್ತಿಯನ್ನು ಗೋಕುಳಾಗೆ ಕೊಟ್ಟು ಕೃಪಾರ್ಶಿವಾದ ಮಾಡಿದರು.
ಗುರುವಿನ ಆಜ್ಞೆಯ ಪ್ರಕಾರ ಗೋಕುಳಾಬಾಯಿಯು ಗೋವೆಯ ಪಂಚವಾಡಿಗೆ ಆಗಮಿಸಿದರು. ಇಲ್ಲಿನ ಜನರ ಸಹಕಾರದೊಂದಿಗೆ ಸಿದ್ದಾಶ್ರಮ ಕಟ್ಟಡವನ್ನು ಪೂರೈಸಿದಳು. ಮಧ್ಯಭಾಗದಲ್ಲಿ ಸುಂದರವಾದ ಮಂಟಪವನ್ನು ನಿರ್ಮಿಸಿದರು. ಸಪ್ತಾಹ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ಭಜನೆ, ಕೀರ್ತನೆಗಳು ಜರುಗಿದವು. ಕೊನೆಯ ದಿನ ಅಂದರೆ ಕ್ರಿ.ಶ. ಶಕೆ ೧೯೧೭ ಶಾಲಿವಾಹನ ಶಕೆ ೧೮೩೯ ವೈಶಾಖಮಾಸ ಶುದ್ದ ಅಷ್ಟಮಿ ಭವ್ಯವಾದ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿಯನ್ನು ಕುಳ್ಳಿರಿಸಿ ಭಜನಾಮೇಳ, ಸುಮಂಗಲೆಯರು ಆರತಿ ವಾದ್ಯ ವೈಭವದೊಂದಿಗೆ ಇಡೀ ಊರಿನ ಜನರೆಲ್ಲರೂ ನೆರೆದು ಪ್ರಮುಖ ಬೀದಿಗಳಲ್ಲಿ ಓಂ ನಮಃ ಶಿವಾಯ ಮಂತ್ರೋಚ್ಚಾರಣೆ, ಜಯಘೋಷಗಳ ನಿನಾದಗಳ ಪ್ರತಿಧ್ವನಿ ಮಧ್ಯ ಶ್ರೀಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆಯಾಯಿತು. ರಸ್ತೆಯ ಎರಡೂ ಬದಿಗಳಿಂದ ಜನಸ್ತೋಮವು ಹೂಮಳೆಗರೆಯಿತು. ಪಲ್ಲಕ್ಕಿ ಮರಳಿ ಬಂದು ಸುಂದರವಾದ ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಪ್ರತಿಮೆಯನ್ನು ಸ್ಥಾಪನೆ ಮಾಡಿದರು. ಸಹಸ್ರ ಸಹಸ್ರ ಸಂಖ್ಯೆಯ ಜನರಿಗೆ ಅನ್ನಸಂತರ್ಪಣೆಯಾಯಿತು. ಈ ಸಪ್ತಾಹದಲ್ಲಿ ಕಲಾವತಿಯೂ ಸಹ ಭಾಗವಹಿಸಿದಳು.
ಶ್ರೀ ಸಿದ್ಧಾರೂಢರ ಆಜ್ಞೆಯಂತೆ ಪಂಚವಾಡಿ ಸಪ್ತಾಹಕ್ಕೆ ಪಾಂಡುರಂಗ ಮಹಾರಾಜರು (ಪರಶುರಾಮ ಪಂತ) ತನ್ನ ಪತ್ನಿ ಜಾನಕಿ ಹಾಗೂ ಪುತ್ರರೊಂದಿಗೆ ಆಗಮಿಸಿದರು. ಭಜನೆ, ಕೀರ್ತನ, ಶಾಸ್ತ್ರ ಪ್ರವಚನಗಳನ್ನು ಮಾಡಿದರು. ಅವರ ಈ ಕಾರ್ಯಕ್ರಮಗಳು ಸುತ್ತಲಿನ ಗ್ರಾಮಗಳ ಜನರನ್ನು ಆಕರ್ಶಿಸಿದವು. ಭಕ್ತಿ ಭಾವಗಳು ಜಾಗೃತಗೊಂಡು. ಪಾಂಡುರಂಗ ಮಹಾರಾಜರು ಜಾತಿ, ಮತ, ಪಂಥ ಭೇದವಿಲ್ಲದೆ ಸಮಾನತೆಯಿಂದ ಭಕ್ತರನ್ನು ಕಂಡು ಧರ್ಮ, ಅರ್ಥ, ಕಾಮ, ಮೋಕ್ಷ ತತ್ವಗಳನ್ನು ಕ್ರಮಬದ್ಧವಾಗಿ ತಮ್ಮ ಪ್ರವಚನ ಕೀರ್ತನಗಳ ಮುಖಾಂತರ ಮನವರಿಕೆ ಮಾಡುತ್ತಿದ್ದರು. ಹಣವನ್ನು ಬೇಡುತ್ತಿದ್ದಿಲ್ಲ. ಬಂದವರಿಗೆಲ್ಲ ಪ್ರಸಾದ ನೀಡುತ್ತಿದ್ದರು. ಈ ಸಪ್ತಾಹ ಕಾರ್ಯಕ್ರಮಗಳ ಮುಖಾಂತರ ಶ್ರೀ ಸಿದ್ಧಾರೂಢರ ಕೀರ್ತಿಯು ಸುತ್ತ ಮುತ್ತಲೂ ಪ್ರಸಾರವಾಯಿತು. ಇದರಿಂದ ಪ್ರಭಾವಿತರಾದ ಅನೇಕ ಭಕ್ತರು ತಮ್ಮ ತಮ್ಮ ಗ್ರಾಮಗಳಲ್ಲಿ, ಶ್ರೀ ಸಿದ್ಧಾರೂಢರ ಮಠಗಳನ್ನು ಸ್ಥಾಪಿಸಲು ಮುಂದಾದರು. ಪಂಚವಾಡಿಯ ನಂತರ ಉಸಗಾಂವ ಮತ್ತು ಅಡಪೈ ಗ್ರಾಮಗಳಲ್ಲಿ ಮಠಗಳು ಸ್ಥಾಪನೆಗೊಂಡವು. ಪ್ರತಿವರ್ಷ ಪಂಚವಾಡಿಯಲ್ಲಿ ವೈಶಾಖ ಮಾಸದಲ್ಲಿ ಉಚಗಾಂವದಲ್ಲಿ ಪುಷ್ಯಮಾಸದಲ್ಲಿ ಹಾಗೂ ಅಡಪೈ ಗ್ರಾಮದಲ್ಲಿ ಜೇಷ್ಠ ಮಾಸಗಳಲ್ಲಿ ಸಪ್ತಾಹ ಕಾರ್ಯಕ್ರಮಗಳ ಸಂಪ್ರದಾಯಗಳು ಆರಂಭಗೊಂಡವು.
ಶ್ರೀ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಕಾರವಾರದಲ್ಲಿಯ ನೂರಾರು ಏಕರೆಗಳ ಜಮೀನುದಾರ ಶ್ರೀಮಂತ ಭದ್ರಾಯು ಹುಬ್ಬಳ್ಳಿಗೆ ಬಂದು ಶ್ರೀಗಳ ದರ್ಶನವಾದ ಕೂಡಲೇ ಆತನಲ್ಲಿ ವೈರಾಗ್ಯ ಪ್ರಾಪ್ತಿಯಾಯಿತು. ಸ್ತ್ರಿ, ಪುತ್ರ, ಧನ ಧನ, ಸಂಪತ್ತು ತ್ಯಾಗ ಮಾಡಿದನು, ನಗರದಲ್ಲಿ ಮನೆ ಮನೆಯಲ್ಲಿ ನಡೆಯುತ್ತಿದ್ದ ಓಂ ನಮಃ ಶಿವಾಯ ಭಜನೆ, ಶ್ರೀಗಳ ಮಠದಲ್ಲಿ ವೈಭವಯುತ ಜ್ಞಾನದಾಸೋಹದ ಸುಖಾನುಭವ ಆತನಲ್ಲಿ ಆವಿರ್ಭವಿಸಿ, ಆತನ ಮುಖದಲ್ಲಿ ನಾಲ್ಕು ವೇದಗಳು ಮುಖಪಾಠವಾಗಿ ವಿದ್ಯಾ ಪಾರಂಗತನಾಗಿದ್ದುದಲ್ಲದೆ ಅವಧೂತ ಅವಸ್ಥೆ ಅವಸರಿಸಿ ದಿಗಂಬರನಾದನು. ಇಂತಹ ಸ್ಥಿತಿಯಲ್ಲಿ ಗುರುಗಳಲ್ಲಿ ಆತನು ಪ್ರಾರ್ಥಿಸುತ್ತಾ ತತ್ವ ಪ್ರಚಾರಕ್ಕಾಗಿ ಸಂಚರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದನು. ಆತನಲ್ಲಿ ಉದಯಿಸಿದ ಈ ವೃತ್ತಿಯನ್ನು ಕಂಡು ಸಂತಸಭರಿತರಾದ ಸಿದ್ದಾರೂಢರು, ಅವರನ್ನು ತಮ್ಮ ಸಮೀಪ ಕರೆದು ಭದ್ರಾಯು ನೀನು ತತ್ವ ಪ್ರಚಾರಕ್ಕೆ ಹೋಗು, ನೀನಾಗಿ ಯಾರಿಗೂ ಹಣದ ಯಾಚನೆ ಮಾಡಬೇಡ. ನನ್ನ ಆಶೀರ್ವಾದದಿಂದ ನಿನಗೆ ಶುಭವಾಗಲಿ ಅಂತಾ ಆಶೀರ್ವದಿಸಿದರು. ಮುಂದೆ ಭದ್ರಾಯು ಬೆಳಗಾವಿ, ತಾಳಿಕೋಟಿ, ಸಂಕೇಶ್ವರ ಮುಂತಾದ ಊರುಗಳಲ್ಲಿ ಸಂಚರಿಸುತ್ತಾ, ಗೋವಾ ಪ್ರಾಂತದಲ್ಲಿ ಪ್ರವೇಶಿಸಿ ಪಂಚವಾಡಿ ಸಿದ್ಧಾಶ್ರಮದಲ್ಲಿ ಕೆಲಕಾಲ ಉಳಿದು, ಭಕ್ತರಿಗೆಲ್ಲ ತತ್ವಪ್ರಚಾರದಿಂದ ಜಾಗೃತ ಮಾಡಿದನು.
ಮುಂದೆ ದುರ್ಭಾಟ ಗ್ರಾಮಕ್ಕೆ ಆಗಮಿಸಿದನು. ಬಾಲ ಉನ್ಮತ್ತ ಪಿಶಾಚರಂತೆ ಹರಕು ಲಂಗೋಟಿ ಧರಿಸಿ ದಿಗಂಬರನಾಗಿಯೂ ಅವಧೂತವಸ್ಥೆಯಲ್ಲಿ ಈ ಗ್ರಾಮದಲ್ಲಿ ಸಂಚರಿಸುವಾಗ, ಈತನು ಹುಚ್ಚನೆಂದು ಕೆಲವರು ಈತನ ಮೈಮೇಲೆ ಕಸಕಡ್ಡಿ ಎರಚುತ್ತಾ ಕಾಟ ಕೊಡುತ್ತಿದ್ದರು. ಕೆಲವರು ಹಿಂಸೆ ಕೊಡುತ್ತಿದ್ದರು. ಇವೆಲ್ಲವುಗಳ ಗಮನ ಕೊಡದೆ ಓಂ ನಮಃ ಶಿವಾಯ ನಾಮಸ್ಮರಣೆ ಮಾಡುತ್ತಾ ತಿರುಗುತ್ತಿದ್ದನು. ಈತನ ಅವಸ್ಥೆಯನ್ನು ಕಂಡು ಈತನು ಮಹಾತ್ಮ ಅಂತಾ ಗುರುತಿಸಿದ ಕೋಳಿ ಸಮಾಜದ ಕೆಲವರು, ಭದ್ರಾಯುವನ್ನು ಬರಮಾಡಿಕೊಂಡರು. ಅವರೆಲ್ಲರಿಗೆ ಶಿವನಾಮ ಸ್ಮರಣೆ ಮಾಡುವ ಹಚ್ಚಿದನು. ನಾಮಸ್ಮರಣೆಯಿಂದ ಕೋಳಿ ಸಮಾಜದ ಜನರಿಗೆಲ್ಲ ಈತನಲ್ಲಿ ಭಕ್ತಿಯು ಉಕ್ಕೇರಿತು. ಮೀನು ಮಾರಾಟದಿಂದ ಜೀವನೋಪಾಯ ಸಾಗಿಸುತ್ತಿದ್ದ ಅವರಿಗೆ ಧರ್ಮ, ಅರ್ಥ, ಕಾಮ, ಮೋಕ್ಷದ ತತ್ವ ಬೋಧನೆ ಮಾಡತೊಡಗಿದನು. ಮುಂದೆ ನವವಿಧ ಭಕ್ಷಿ, ಬ್ರಹ್ಮವಿದ್ಯೆಯನ್ನು ಸಹ ಬೋಧಿಸಿದನು. ದೂರದೂರದಿಂದ ಭಕ್ತರು ಬರತೊಡಗಿದರು.
ಅಖಾಡ ಗ್ರಾಮದಲ್ಲಿ ಕೋಳಿ ಜನಾಂಗದ ಒಂದು ಮನೆತನದಲ್ಲಿ ಜನಿಸಿದ ಬಾಲಕ ಮಹಾದೇವನ ಕನಸಿನಲ್ಲಿ ಸಿದ್ಧಾರೂಢರು ಬಂದು, ಮಹಾದೇವಾ ನನ್ನ ಸ್ಥಾನಕ್ಕೆ ಬರಬೇಕು ಅಂತಾ ಕರೆದರು. ಆಗ ತಂದೆ ತಾಯಿಗಳನ್ನು ಕರಕೊಂಡು ಮಹದೇವನು ಹುಬ್ಬಳ್ಳಿಗೆ ಬಂದನು. ಸಿದ್ಧಾರೂಢರು ಆತನನ್ನು ಸಮೀಪಕ್ಕೆ ಕರೆದು ಆತನ ಕಿವಿಯಲ್ಲಿ ಓಂ ನಮಃ ಶಿವಾಯ ಮಹಾ ಮಂತ್ರೋಪದೇಶ ಮಾಡಿದರು. ಮಹಾತ್ಮರ ಮಹಾಮಂತ್ರದ ಧ್ಯಾನದಿಂದ ಬಾಲಕನು ಬೆಳೆದಂತೆ ಚುರುಕು ಬುದ್ಧಿಯುಳ್ಳವನಾಗಿ ತತ್ವ ವಿಚಾರದಲ್ಲಿ ಪಾರಂಗತನಾಗಿದ್ದಲ್ಲದೆ ಮಹಾವೈರಾಗ್ಯಶಾಲಿಯಾದನು. ಈತನಲ್ಲಿ ಬ್ರಹ್ಮ ತೇಜಸ್ಸು ಆಕರ್ಷಣೀಯವಾಗಿತ್ತು. ಮನೆಯನ್ನು ತೊರೆದು ಅಲ್ಲಲ್ಲಿ ತತ್ವ ಪ್ರಚಾರ ಮಾಡುತ್ತಾ ಪಣಜಿಯಲ್ಲಿ ವಾಸ ಮಾಡಿದನು. ಪಣಜಿಯು ಶ್ರೀ ಸಿದ್ಧಾರೂಢರ ತತ್ವ ಪ್ರಚಾರದ ಕೇಂದ್ರ ಬಿಂದುವಾಗಲು ಈ ವೈರಾಗ್ಯಶಾಲಿ ಮಹದೇವನೇ ಕಾರಣನಾದನು.
ಇದೇ ಪ್ರಕಾರ ಗೋವಾದ ಕುಂಡಯಿ ಗ್ರಾಮದ ಶ್ರೀಮಂತ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ೮ ವರ್ಷದ ಬಾಲಕ ವಾಮನ ಶ್ರೀ ಸಿದ್ಧಾರೂಢರ ಕೀರ್ತಿಗೆ ಪ್ರಭಾವಿತನಾಗಿ ಹುಬ್ಬಳ್ಳಿಗೆ ಬಂದು ಗುರುಸೇವೆ ಮಾಡುತ್ತಾ ಶಾಸ್ತ್ರ ಶ್ರವಣದಲ್ಲಿ ಗುರು ಧ್ಯಾನದಲ್ಲಿ ಮಗ್ನರಾದನು. ಉತ್ತಮ ಅಧಿಕಾರಿ ಲಕ್ಷಣಗಳನ್ನು ಗುರುತಿಸಿ ಮಹಾಮಂತ್ರ ಬೋಧಿಸಿದರು. ಪ್ರತಿನಿತ್ಯ ತದೇಕಚಿತ್ತದಿಂದ ಸಾಧನಾದಿಗಳ ಪರಿಪಕ್ವತೆಯಿಂದ ಮಹಾ ವೈರಾಗ್ಯಶಾಲಿಯಾದರು. ನಂತರ ಗುರುವಿನ ಆಜ್ಞೆ ಯಿಂದ ಪ್ರಬುದ್ಧನಾದ ವಾಮನ ತನ್ನ ಸ್ವಗ್ರಾಮ ಕುಂಡಯಿಗೆ ಬಂದು ತತ್ವ ಪ್ರಚಾರ ಮಾಡಹತ್ತಿದನು. ಅದೇ ಪ್ರಕಾರ ಬಿಢವಾದ ಗ್ರಾಮದ ಶ್ರೀಧರನು ಗುರುಕೃಪೆಗೆ ಪಾತ್ರನಾಗಿ ತನ್ನ ಗ್ರಾಮದಿಂದ ತತ್ವ ಪ್ರಚಾರವನ್ನು ಆರಂಭಿಸಿ ಸಂಚಾರ ಮಾಡುತ್ತಾ ರತ್ನಾಗಿರಿ ಜಿಲ್ಲೆಯ ದೇವಗಡ ಕಾಸಡೆ ಕುರ್ಪಿ ಕುರ್ಡಿ ಗ್ರಾಮ, ಮುಂದೆ ಮುಂಬೈ ನಗರದಲ್ಲಿ ಸಿದ್ಧಾರೂಢರ ತತ್ವ ಪ್ರಚಾರದಿಂದ ಜನರನ್ನು ಭಕ್ತಿ ಮಾರ್ಗಕ್ಕೆ ಹಚ್ಚಿದನು. ಇನ್ನೊಬ್ಬ ಗೋವಿಂದ ಸಂತನು ಶ್ರೀಗಳ ಆಶೀರ್ವಾದದ ಆಜ್ಞೆಯಂತೆ ಬೆಂಗಳೂರಿಗೆ ಹೋಗಿ ಶ್ರೀ ಸಿದ್ಧಾರೂಢರ ಮಠವನ್ನು ಸ್ಥಾಪಿಸಿದರು. ನಂತರ ಗೋವಾ ಪ್ರಾಂತಕ್ಕೆ ಬಂದು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸುತ್ತಾ ತತ್ವ ಪ್ರಚಾರ ಮಾಡತೊಡಗಿದನು. ನಂತರ ಮಡಗಾಂವ ತಲುಪಿ ಸಿದ್ಧಾರೂಢರ ಮಠವನ್ನು ಸ್ಥಾಪನೆ ಮಾಡಿ ಸಪ್ತಾಹ ಪ್ರಾರಂಭಿಸಿದನು. ಸಪ್ತಾಹದಲ್ಲಿ ಕೀರ್ತನ, ಸಿದ್ದನ ಚರಿತ್ರೆ, ಅನ್ನಸಂತರ್ಪಣೆ ವಿಜೃಂಭಣೆಯಿಂದ ಮಾಡಹತ್ತಿದನು. ಇದೇ ಸಮಯದಲ್ಲಿ ಸಾವಿನ ದವಡೆಯಲ್ಲಿ ಸಿಕ್ಕ ಎರಡು ವರ್ಷದ ಬಾಲಕನನ್ನು ರಕ್ಷಿಸಿದನು.
ಗೋಕುಳಾಬಾಯಿಯಿಂದ ಆರಂಭವಾದ ಸಿದ್ಧಾಶ್ರಮ ಭಕ್ತಿ, ಜ್ಞಾನ, ವೈರಾಗ್ಯ ಭರಿತ ಕೀರ್ತನ, ಸಿದ್ದನ ಚರಿತ್ರೆ ಪಠಣ, ಭಜನಾ ನಾಮಸ್ಮರಣೆ ಮುಂತಾದ ಸತ್ಕಾರ್ಯಗಳಿಂದ ಪ್ರಭಾವಿತವಾದ ಗೋವಾದ ಜನತೆಯಲ್ಲಿ ಜಾಗೃತಿದಾಯಕ ಅಲ್ಲಲ್ಲಿ ಸಿದ್ಧಾರೂಢ ಮಠಗಳು ಸ್ಥಾಪಿತಗೊಂಡಿದ್ದು ಅವರ್ಣನೀಯವಾಗಿದೆ.
🕉️ ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ 🕉️
ಮದ್ರಾಸ್ (ಚೆನ್ನೈ) ಮಹಾನಗರದಲ್ಲಿ ಲಕ್ಷ್ಮಣದಾಸ ಮತ್ತು ಲಕ್ಷ್ಮೀಬಾಯಿ ಬ್ರಾಹ್ಮಣ ದಂಪತಿಗಳಿದ್ದರು.ಅವರಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಕೃಷ್ಣ ಇದ್ದರು. ಕೃಷ್ಣನು ಒಂಬತ್ತನೇ ವಯಸ್ಸಿನಲ್ಲಿದ್ದಾಗ ಆತನ ತಂದೆ ತಾಯಿ ಅಕ್ಕ ಮರಣವಾದರು. ಕುಟುಂಬದಲ್ಲಿ ಒಬ್ಬನೇ ಉಳಿದುಕೊಂಡ ಕೃಷ್ಣನಿಗೆ ಜೀವನವೇ ಜಿಗುಪ್ಪೆಯಾಗಿ ಮದ್ರಾಸದಿಂದ ಶೃಂಗೇರಿ ಶಂಕರಾಚಾರ್ಯ ಮಠಕ್ಕೆ ಬಂದನು. ಈತನ ವೈರಾಗ್ಯವನ್ನು ಕಂಡು ಸಹಿಸದ ಕರ್ಮಠರು ಅಲ್ಲಿಂದ ಹೊರದೂಡಿದರು. ಮುಂದೆ ಉತ್ತರಾದಿ ಮಠಕ್ಕೆ ಬಂದರೂ ಸಮಾಧಾನವಾಗದ್ದರಿಂದ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರ ದರ್ಶನವಾದ ಕೂಡಲೆ ಆತನ ಹೃತ್ತಾಪವು ಶಮನಗೊಂಡಿತು. ದಂಡವತ ಪ್ರಣಾಮಗಳನ್ನು ಮಾಡಿ ಆ ಬಾಲಕನು, ಗುರುನಾಥಾ ನನ್ನ ತಂದೆ, ತಾಯಿ, ಅಕ್ಕ ಎಲ್ಲರನ್ನು ಕಳೆದುಕೊಂಡು ಅನಾಥನಾಗಿದ್ದೇನೆ. ನನ್ನ ಸಂರಕ್ಷಣೆ ಮಾಡ ಬೇಕು ಅಂತಾ ಬೇಡಿಕೊಂಡನು. ಆಗ ಶ್ರೀಗಳು ಆತನನ್ನು ಕುರಿತು, ಹೇ ಕೃಷ್ಣಾ ನೀನು ಊರಲ್ಲಿದ್ದುಕೊಂಡು ಭಿಕ್ಷಾನ್ನ ಉಂಡು ಶಾಸ್ತ್ರ ಶ್ರವಣಕ್ಕಾಗಿ ದಿನಾಲು ಮಠಕ್ಕೆ ಬರಬೇಕು ಅಂತ ಆಜ್ಞಾಪಿಸಿದರು. ಗುರುಗಳ ಆಜ್ಞೆಯಂತೆ ಭಿಕ್ಷಾನ್ನದಿಂದ ಉದರ ಪೋಷಣೆ ಮಾಡಿ ಹಳೇಹುಬ್ಬಳ್ಳಿಯ ಶಿವ ದೇವಾಲಯದಲ್ಲಿ ವಾಸ ಮಾಡುತ್ತಾ, ಪ್ರತಿನಿತ್ಯ ಶಾಸ್ತ್ರ ಶ್ರವಣಕ್ಕಾಗಿ ಮಠಕ್ಕೆ ಹೋಗಿ ಬರುತ್ತಿದ್ದನು.
ಸಿದ್ಧಾರೂಢರು ಊರೊಳಗಿನ ಭಕ್ತನಲ್ಲಿ ಪ್ರಸಾದ ಸ್ವೀಕರಿಸಿ ಮಠಕ್ಕೆ ಮರಳುವಾಗ ಮಾರ್ಗದಲ್ಲಿದ್ದ ಶಿವ ದೇವಾಲಯದಲ್ಲಿದ್ದ ಕೃಷ್ಣನನ್ನು ತಮ್ಮ ಟಾಂಗಾದಲ್ಲಿ ಕುಳ್ಳಿರಿಸಿಕೊಂಡು ಬಂದರೂ. ಆ ದಿನ ಆತನಿಗೆ ಮಹಾಮಂತ್ರೋಪದೇಶ ನೀಡಿ, ಆತನಿಗೆ ಬ್ರಹ್ಮಾನಂದ ಅಂತ ಹೆಸರಿಟ್ಟರು ಮತ್ತು ಮಠದಲ್ಲಿ ಇರಲು ಆಜ್ಞೆ ಮಾಡಿದರು. ಮಠದಲ್ಲಿ ಪ್ರತಿನಿತ್ಯವೂ ಸ್ಥಾನ ಸೇವೆ, ಶಾಸ್ತ್ರ ಶ್ರವಣ ಮಾಡುತ್ತಾ ಸರ್ವವಿದ್ಯಾ ಪಾರಂಗತನಾದನು. ಮುಂದೆ ಆತನಿಗೆ ಶಾಸ್ತ್ರ ಪ್ರವಚನ ಮಾಡಲು ಹೇಳಿದರು. ಹಾಗೆಯೇ ಇಪ್ಪತ್ನಾಲ್ಕು ವರ್ಷಗಳು ಗತಿಸಿದವು. ಒಂದಾನೊಂದು ದಿನ ಶ್ರೀಗಳು ಆತನನ್ನು ಕರೆದು ಬ್ರಹ್ಮಾನಂದಾ ದಕ್ಷಿಣದಲ್ಲಿ ತೀರ್ಥಯಾತ್ರೆಗೆ ಹೋಗು ಅಂತಾ ಆಜ್ಞಾಪಿಸಿದರು. ಅದಕ್ಕೆ ಗುರುಗಳ ಸ್ಥಾನದಿಂದ ಅಗಲಲಾರೆ ಅಂತಾ ಅಂಗಲಾಚಿ ಬೇಡಿಕೊಂಡನು. ಸಿದ್ಧಾರೂಢರು ಪುನಃ ಹೇಳುತ್ತಾ, ಬ್ರಹ್ಮಾನಂದ ವಿವಿಧ ಭಕ್ತೋದ್ಧಾರಕ್ಕಾಗಿ ನೀನು ಸಂಚಾರ ಮಾಡು ಅಂತ ಆಜ್ಞಾಪಿಸಲು ಅನಿವಾರ್ಯವಾಗಿ ಕಣ್ಣೀರಿಡುತ್ತಾ ಗುರುವಿನಾಜ್ಞೆ ಶಿರಸಾವಹಿಸಿ ಸಂಚಾರಕ್ಕೆ ತೆರಳಿದನು.
ಸಂಚಾರ ಮಾಡುತ್ತಾ ಅಲ್ಲಲ್ಲಿ ನಾಮಸ್ಮರಣೆ, ಕೀರ್ತನ, ಶಾಸ್ತ್ರ ಪ್ರವಚನಗಳಿಂದ ತತ್ವ ಪ್ರಚಾರ ಮಾಡುತ್ತಾ ರಾಮೇಶ್ವರಕ್ಕೆ ಆಗಮಿಸಿ ಬ್ರಹ್ಮಾನಂದರು ಅಲ್ಲಿ ಸಿದ್ದಾಶ್ರಮವನ್ನು ಸ್ಥಾಪಿಸಿದರು. ಭಕ್ತವೃಂದ ಬರತೊಡಗಿತು. ಅದರಲ್ಲಿ ಭಾಸ್ಕರ ಸೇತುಪತಿ ರಾಜೇಶ್ವರನಿಗೆ ಹದಿನಾಲ್ಕು ಜನ ಅಣ್ಣ ತಮ್ಮಂದಿರು. ಆ ವಂಶಜರಲ್ಲಿ ಯಾರೋ ಒಬ್ಬರು ಸಾಧುವಿನ ಕೊಲೆ ಮಾಡಿದ ಪಾಪಕ್ಕೆ ಅವರಿಗೆ ಸಂತಾನವಿಲ್ಲದೆ ದುಃಖಿಸುತ್ತಿದ್ದರು. ಸಿದ್ಧಾಶ್ರಮಕ್ಕೆ ಈ ಎಲ್ಲ ಅಣ್ಣ ತಮ್ಮಂದಿರು ಭಯ ಭಕ್ತಿಯಿಂದ ಸೇವೆ ಮಾಡುತ್ತಾ, ಬ್ರಹ್ಮಾನಂದರ ಕೀರ್ತನ, ಶಾಸ್ತ್ರ, ಪ್ರವಚನದಲ್ಲಿ ಅಚಲವಾದ ಭಕ್ತಿಯಿಂದ ಆಸಕ್ತಿಯುಳ್ಳವರಾಗಿದ್ದರು. ಸಾಧು ಸೇವೆಯಿಂದ ಇವರ ವಂಶಕ್ಕಾದ ಶಾಪ ವಿಮೋಚನೆಯಾಗಿ, ಸಿದ್ದ ಕೃಪೆಯಿಂದ ಪ್ರತಿಯೊಬ್ಬರಿಗೆ ಏಳೇಳು ಮಕ್ಕಳ ಸಂತಾನ ಪಡೆದರು. ಇವರೆಲ್ಲರೂ ಬ್ರಹ್ಮಾನಂದರ ಸೇವೆಯಲ್ಲಿದ್ದರು. ಬ್ರಹ್ಮಾನಂದರ ಶಿಷ್ಯ ಸೇತುಪತಿ ವ ಇತರ ಶಿಷ್ಯರ ವಾಯುವೇಗದ ತತ್ವ ಪ್ರಚಾರದ ಪ್ರಭಾವಕ್ಕೊಳಗಾಗಿ ಲಕ್ಷಾವಧಿ ಭಕ್ತರ ಸಂಖ್ಯೆ ಬೆಳೆಯಿತು. ಮದ್ರಾಸ್, ಕುಂಭಕೋಣಂ, ಕಂಡುನಾರ, ರಾಯದುರ್ಗ, ಮಧುರಾ, ಹೊಸೂರು ಇತ್ಯಾದಿ ಊರುಗಳಲ್ಲಿ ಆಶ್ರಮಗಳು ಸ್ಥಾಪನೆಗಳಾಗಿ ಸಿದ್ಧಾರೂಢರ ಭಕ್ತಿಪಂಥ ಪ್ರಚಾರವಾಯಿತು. ರಾಮೇಶ್ವರದಿಂದ ಬ್ರಹ್ಮಾನಂದರು ಶಿರಾ ಪುರಕ್ಕೆ ಆಗಮಿಸಿ ಅಲ್ಲಿ ಮಠವನ್ನು ಸ್ಥಾಪಿಸಿ, ಅಲ್ಲಿಯೇ ವಾಸ ಮಾಡುತ್ತಾ ತತ್ವ ಪ್ರಚಾರ ಮಾಡತೊಡಗಿದರು.
ಸಿದ್ಧಾಶ್ರಮಗಳು ಎಲ್ಲಿ ನೋಡಿದಲ್ಲಿ ಸ್ಥಾಪನೆಗೊಂಡು ಭಕ್ತೋದ್ಧಾರದ ಕಾರ್ಯದಲ್ಲಿ ತೊಡಗಿದವು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಐರಣಿ ಶ್ರೀ ಶ್ರೀ ಶ್ರೀ ಮುಪ್ಪಿನಾರ್ಯ ಮಹಾಸ್ವಾಮೀಜಿಗಳ ಕಥೆ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
