ಶ್ರೀ ಮಡಿವಾಳಪ್ಪನ ಭಕ್ತಿಗೆ ಒಲಿದ ಗುರುನಾಥ
ಶ್ರೀ ಮಡಿವಾಳಪ್ಪನವರದು ಕ್ರಮಬದ್ಧ ಜೀವನವಾಗಿದ್ದು, ನೀತಿ ಧರ್ಮ ಸದಾಚಾರಗಳನ್ನು ಚಾಚೂ ತಪ್ಪದೆ ನಡೆಸಿಕೊಂಡು ಬಂದು ಶರಣರ ಬದುಕನ್ನು ಬದುಕಿದವರು.
ಪ್ರತಿ ದಿವಸ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಅಂಚಟಗೇರಿ ರಸ್ತೆಯಲ್ಲಿ ವ್ಯಾಯಾಮಕ್ಕಾಗಿ ಓಡುತ್ತಿದ್ದರು. ಆರು ಗಂಟೆಗೆ ಶ್ರೀ ಸಿದ್ಧಾರೂಢ ಮಠಕ್ಕೆ ಬಂದು ದರ್ಶನ ಪಡೆದು ಮಂಗಳಾರತಿ ಮುಗಿದ ನಂತರ ತೀರ್ಥ ಪ್ರಸಾದ ತೆಗೆದುಕೊಂಡು, ಮನೆಗೆ ಬಂದು ಅಲ್ಪೊಪಹಾರ ತೀರಿಸಿಕೊಂಡು ತಮ್ಮದೇ ಆದ ಸರಾಫಿ ಅಂಗಡಿಗೆ ಹೋಗುತ್ತಿದ್ದರು. ಇದು ಪ್ರತಿ ದಿನದ ಜೀವನದ ಪದ್ಧತಿಯಾಗಿತ್ತು. ಪ್ರತಿದಿನ ಲಿಂಗ ಪೂಜೆ ಮಾಡಿ ಲಿಂಗಯ್ಯನಿಗೆ ಪ್ರಸಾದ ಅರ್ಪಿಸದೆ ಎಂದೂ ಊಟ ಮಾಡುತ್ತಿರಲಿಲ್ಲ.
ಮಡಿವಾಳಪ್ಪನವರು ಸರಾಫಿ ವ್ಯಾಪಾರ ಮಾಡುವುದರಲ್ಲಿ ಎತ್ತಿದ ಕೈ. ಅವರು ಲಾಭದ ಕಡೆಗೆ ವಿಶೇಷ ಲಕ್ಷ ಕೊಡದೆ ಗಿರಾಕಿಯ ಸಂತೃಪ್ತಿಯನ್ನು ಗಮನಿಸಿ ವ್ಯಾಪಾರ ಮಾಡುತ್ತಿದ್ದರು. ಬಡವ ಶ್ರೀಮಂತನೆನ್ನದೆ ಬೆಳ್ಳಿ ಬಂಗಾರದ ವಸ್ತುಗಳನ್ನು ಎಲ್ಲರಿಗೂ ಒಂದೇ ತರದ ಯೋಗ್ಯ ಬೆಲೆಗೆ ಕೊಡುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದರು. ಆದ್ದರಿಂದ ಗಿರಾಕಿಗಳು ಮಡಿವಾಳಪ್ಪನವರ ಅಂಗಡಿ ಮಾಲಕರು ಪ್ರಾಮಾಣಿಕತನಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ನಂಬಿದ್ದರು. ಬಂಗಾರ, ಬೆಳ್ಳಿ, ಮುತ್ತು, ರತ್ನ ಖರೀದಿಗೆ ಈ ಅಂಗಡಿ ಪ್ರಸಿದ್ಧವಾಗಿತ್ತು. ಕಾಯಕವೇ ಕೈಲಾಸ, ಸರ್ವೇಜನಾಃ ಸುಖಿನೋ ಭವಂತು ಎಂದು ನಂಬಿದವರು. ಇವರ ಪತ್ನಿ ಭಾಗೀರಥಿಬಾಯಿಯವರಿಗೆ ಎಂಟು ಜನ ಮಕ್ಕಳು ಓರ್ವ ಹೆಣ್ಣುಗಳಿದ್ದು, ಇಷ್ಟು ದೊಡ್ಡ ಸಂಸಾರದ ಮಧ್ಯದಲ್ಲಿದ್ದರೂ ಪಾರಮಾರ್ಥಿಕ ತತ್ವಗಳನ್ನು ಮೈ ಮನಗಳಲ್ಲಿ ಗಟ್ಟಿಯಾಗಿರಿಸಿಕೊಂಡು ಬಾಳಿದ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು.
ಸ್ವತಃ ಖರ್ಚಿನಿಂದ ಎಷ್ಟೋ ಗುಡಿ ಗುಂಡಾರಗಳನ್ನು ಜೀರ್ಣೋದ್ಧಾರ ಮಾಡಿದ್ದಲ್ಲದೆ ತಮ್ಮ ಖರ್ಚಿನಿಂದಲೇ ಅನ್ನಪ್ರಸಾದ ನೀಡಿದವರು. ತಮ್ಮ ಮನೆಗೆ ಯಾರಾದರೂ ಧಾರ್ಮಿಕ ಕಾರ್ಯಕ್ಕೆ ದೇಣಿಗೆಗಾಗಿ ಬಂದಾಗ ಒಂದು ಸಲವೂ ಬರಿಗೈಯಿಂದ ಕಳಿಸಿರಲಿಲ್ಲ. ಶಕ್ತಾನುಸಾರ ದಾನ ಮಾಡಿದ ದಾನಿಗಳು, ಶ್ರೀ ಸಿದ್ಧಾರೂಢರ ನಂತರ ಶ್ರೀ ಗುರುನಾಥಾರೂಢರನ್ನು ಅಷ್ಟೇ ಭಕ್ತಿಯಿಂದ ಕಾಣುತ್ತಿದ್ದರು.
ಒಂದು ವರ್ಷ ದೀಪಾವಳಿಯ ಹಬ್ಬ ಹೂಬಳ್ಳಿಯಾಗಿ ಅಂದಚಂದದ ಅಲಂಕಾರ ಹೊಂದಿದ್ದು ನೋಡಿದವರಿಗೆಲ್ಲ ಸಂತೋಷವೆನಿಸುತ್ತಿತ್ತು. ಸರಾಫ ಬಜಾರದ ಒಂದೆಡೆ ಇವರ ಅಂಗಡಿಯಿದ್ದು ದೀಪಾವಳಿ ಪೂಜೆ ಮಾಡಿ ಗಿರಾಕಿಗಳಿಗಾಗಿ ಕಾಯ್ದು ಕಾಯ್ದು ಸಾಕಾಗಿ ಹೋಗಿತ್ತು. ಬೇರೆಯವರ ಅಂಗಡಿಯಲ್ಲಿ ಗಿರಾಕಿಗಳಿಂದ ವ್ಯಾಪಾರ ಹೆಚ್ಚಾಗಿದ್ದರೂ ಇವರ ಅಂಗಡಿಯಲ್ಲಿ ಗಿರಾಕಿಗಳೇ ಇಲ್ಲವಾದ್ದರಿಂದ ಖಿನ್ನ ಮನಸ್ಕರಾಗಿ ಇನ್ನೇನು ಅಂಗಡಿ ಬಂದು ಮಾಡಿ ಮನೆಗೆ ಹೋಗಬೇಕೆನ್ನುವಷ್ಟರಲ್ಲಿ ಅಕಸ್ಮಾತ್ ಟಾಂಗಾ ಗಾಡಿಯಲ್ಲಿ ಶ್ರೀಗುರುನಾಥರು ಬಂದವರೇ ನೇರವಾಗಿ ಅವರ ಅಂಗಡಿಗೆ ಹೊಕ್ಕಾಗ ಹೋದ ಜೀವ ಬಂದಂತಾಯಿತು. ಶ್ರೀಗಳನ್ನು ಉಚಿತಾಸನದಲ್ಲಿ ಕೂಡಿಸಿ ಪಾದ ಪೂಜೆ ಮಾಡಿ ತೃಪ್ತಿಯ ಉಸಿರು ಬಿಟ್ಟರು. ಶ್ರೀಗುರುನಾಥರು ಅಂಗಡಿಯಿಂದ ಹೊರ ಬಂದದ್ದೇ ತಡ ಬಂಗಾರ, ಬೆಳ್ಳಿ ಖರೀದಿಸಲು ಗಿರಾಕಿಗಳು ಅಂಗಡಿಯಲ್ಲಿ ತುಂಬಿಕೊಂಡು ವ್ಯಾಪಾರ ಹೆಚ್ಚಾಗಿ ಹಣದ ಪೆಟ್ಟಿಗೆಯೂ ತುಂಬಿ ಹಣವಿಡಲು ಜಾಗವಿಲ್ಲದಂತಾಯಿತು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
