ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ

ಲಿಂಗ ಇಲ್ಲದ ಸಿದ್ಧಾರೂಢರಿಗೆ ಅಕ್ಕಲಕೋಟಿ ಶರಣ್ಣಪ್ಪ ಲಿಂಗ ಕಟ್ಟಲು ಬಂದ ಕಥೆ

ಕಾರಜೋಳ ಎಂಬುದು ಅಕ್ಕಲಕೋಟ ಬಳಿಯ ಒಂದು ಸಣ್ಣ ಉರು, ಅಲ್ಲಿ ದಾನಪ್ಪನೆಂಬವ ಒಬ್ಬ ಗಟ್ಟಿ ಕುಳ ಇದ್ದ. ಬಾಲ್ಯದಲ್ಲಿ ವಿವಾಹವಾಗಿತ್ತು, ಅವನ ಪತ್ನಿ ಮಡಿದ ಮೇಲೆ, ಅವನಿಗೆ ಎಳೆತನದಲ್ಲಿಯೇ ವೈರಾಗ್ಯ ಬೆಳೆಯತೊಡಗಿತು. ಆಸಮಯಕ್ಕೆ ಕಾರಜೋಳಕ್ಕೆ ಒಬ್ಬ ಹಟಯೋಗಿ ಬಂದನು. ದಾನಪ್ಪ ಆ ಹಟಯೋಗಿಯ ಸೇವೆಯನ್ನು ಮನಮುಟ್ಟಿ ಮಾಡತೊಡಗಿದ. ಸ್ವಾಮೀ ದಯಮಾಡಿ ನನಗೆ ಸನ್ಯಾಸಿ ದೀಕ್ಷೆ ನೀಡಿ ಎಂದು ಪ್ರಾರ್ಥಿಸಿದ. ಆ ಹಟಯೋಗಿಯ ಕರುಳು ಕರಗಲಿಲ್ಲ. ಮನಸ್ಸು ಮರುಗಲಿಲ್ಲ. ಅವನ ಸೇವೆ ಮುಂದುವರೆಯಿತು, ಸ್ವಾಮೀ! ನನಗೆ ಸನ್ಯಾಸಿ ದೀಕ್ಷೆ ಕೊಟ್ಟು ಶಿಷ್ಯನನ್ನಾಗಿ ಮಾಡಿಕೊಂಡು ಉದ್ಧಾರದ ಹಾದಿ ತೋರಿಸಿರೆಂದು ದಾನಪ್ಪ ದುಂಬಾಲ ಬೀಳತೊಡಗಿದ. ಸಿಟ್ಟಿಗೆದ್ದ ಆ ಯೋಗಿ, “ಎಲೋ ತೊಲಗಾಚೆ ಎಂದು ಜೋರಾಗಿ ಕಲ್ಲು ಬೀಸಿದ. ಆಕಲ್ಲು ಬಂದು ದಾನಪ್ಪನ ತಲೆಗೆ ಬಡಿದು ರಕ್ತ ಸುರಿಯಿತು. ದಾನಪ್ಪ ಆ ಕಲ್ಲನ್ನೆ ಗುರುಕೊಟ್ಟ ಲಿಂಗವೆಂದು ಅದಕ್ಕೆ ರೇವಣಸಿದ್ದೇಶ್ವರ ಎಂದು ಹೆಸರಿಟ್ಟು ಪೂಜಿಸತೊಡಗಿದ. ೧೨ ವರ್ಷಗಳ ಕಾಲ ಬೇವಿನಮರದ ಮೇಲೆಯೇ ವಾಸ. ಅದೇ ತಪ್ಪಲು ಆಹಾರ. ಹೀಗೆ ಉಗ್ರತಪಸ್ಸು ನಡೆಯಿತು. ಆ ದಾನಪ್ಪನಿಗೆ ಬಸಲಿಂಗಮ್ಮ ಎಂಬವಳು ಸಹೋದರಿ. ಅವಳು ಅಣ್ಣನ ಸೇವೆಯಲ್ಲಿ ದೇಹವನ್ನು ಸವೆಸಿದಳು. ಅವನ ಸೇವೆಯ ಕರುಣೆಯಿಂದೆಂಬಂತೆ ಆ ತಾಯಿಯ ಉದರದಲ್ಲಿ ಏಳು ಹೆಣ್ಣಿನ ಮೇಲೆ ಒಂದು ಗಂಡು ಮಗು ಹುಟ್ಟಿತು. ಅವನ ಹೆಸರು ರೇವಣಸಿದ್ದ ಎಂದಿಟ್ಟರು. ಮನೆಯ ವೀರಶೈವ ಸಂಸ್ಕಾರ, ಮಾವನ ತಪಸ್ಸು, ತಾಯಿಯ ಘನ ನಿಷ್ಠೆಗಳು ಶರಣರ ಜೀವನವನ್ನು ರೂಪಿಸಿದವು. ರೇವಣಸಿದ್ದನು ವಚನಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿದ. ಕಲ್ಯಾಣದ ಶರಣರ ಕ್ರಾಂತಿಕಾರಿ ವಿಚಾರಗಳು ಅವನ ನರನಾಡಿಗಳಲ್ಲಿ ಹರಿದವು. ಅವನ ಸೇವಾಕಾರ್ಯ, ಧರ್ಮಪಾರಾಯಣತೆ, ಲಿಂಗನಿಷ್ಠೆ ಭಕ್ತರ ಗಮನವನ್ನು ಸೆಳೆದವು. ಒಮ್ಮೆ ಅಕ್ಕಲಕೋಟಿ ಸಂಸ್ಥಾನದಲ್ಲಿ ಮಳೆಯೇ ಆಗಲಿಲ್ಲ. ಜನರು ಕಂಗಾಲಾದರು. ಬರದ ಭೀಕರತೆ ಕಂಡು ಎಲ್ಲರೂ ಹೌಹಾರಿದರು. ಫತೇಹಸಿಂಹ ಮಹಾರಾಜರು ಎಲ್ಲೆಡೆಯಲ್ಲಿ ಪೂಜೆ ಪ್ರಾರ್ಥನೆ ಏರ್ಪಡಿಸಿದರು. ಪುರೋಹಿತರು ಯಜ್ಞ, ಹೋಮ ಹವನ ಮಾಡಿದರು. ಪ್ರಯೋಜನವಾಗಲಿಲ್ಲ. ಶರಣರು ಅನುಷ್ಠಾನ ಕೈಕೊಂಡರು. ಮಳೆ ಬರುವವರೆಗೆ ಮೇಲೇಳುವದಿಲ್ಲ ಎಂದು ಪ್ರತಿಜ್ಞೆಗೈದರು. ಅನ್ನ ನೀರು ಬಿಟ್ಟು ಘೋರ ತಪವನ್ನಾಚರಿಸಿದರು. ಏಳು ದಿನ ಕಳೆಯಲಿಲ್ಲ. ದೇವರಿಗೆ ಕರುಣೆ ಹುಟ್ಟಿತೇನೋ! ಮಳೆ ಎಲ್ಲಡೆಗೂ ಧೋ ಧೋ ಎಂದು ಸುರಿಯಿತು. ಕೆರೆಭಾವಿ, ಹೊಳೆಹಳ್ಳಗಳು ತುಂಬಿ ಸೂಸಿದವು. ರಾಜರು ಹರ್ಷಪಟ್ಟರು. ಶರಣರೆಂದು ಕೊಂಡಾಡಿದರು.

ಬಸವಣ್ಣನವರ ಪರಮ ಭಕ್ತರಾದ ಶರಣರು ಕ್ರಾಂತಿಕಾರಕ ವಿಚಾರಗಳನ್ನು ಜನರೆದೆಯಲ್ಲಿ ಬಿತ್ತತೊಡಗಿದರು. ಸಾಮಾನ್ಯನಿಗೂ ಪೀಠಾಧಿಪತಿಯಾಗಲು ಸಾಧ್ಯವೆಂದು ಸಾರಿದರು. ನಾನು ೧೨ನೆಯ ಶತಮಾನದಲ್ಲಿ ಹುಟ್ಟಿದ್ದರೆ, ಬಸವಣ್ಣ, ಪ್ರಭು ದೇವರ ಸೇವೆ ಮಾಡಿ ಸದ್ಗತಿ ಪಡೆಯುತ್ತಿದ್ದೆ. ಅಂಥ ಮಹಾತ್ಮರು ಈಗೆಲ್ಲಿ? ಎಂದು ಅವರು ಒಂದು ಸಭೆಯಲ್ಲಿ ಹೇಳಿದರಂತೆ, ಆಗ ಒಬ್ಬರು ಸಾಧುಗಳು ಬಸವಣ್ಣನವರೇ ಈಗ ಸಿದ್ಧಾರೂಢರಾಗಿ ಹುಬ್ಬಳ್ಳಿಯಲ್ಲಿದ್ದಾರೆ ಎಂದು ಹೇಳಿದರು. ಶರಣರು ಸಿದ್ಧರ ಬಗೆಗೆ ಹೆಚ್ಚು ತಿಳಿಯಲೆತ್ನಿಸಿದರು. ಮೊದಲು ಲಿಂಗಾಯತರಾಗಿದ್ದ ಸಿದ್ಧಾರೂಢರಿಗೆ ಈಗ ಅಂಗದ ಮೇಲೆ ಲಿಂಗವಿಲ್ಲವೆಂಬ ವಿಷಯ ಗೊತ್ತಾಗಿ ಶರಣರಿಗೆ ಬಲು ಕೆಡುಕೆನಿಸಿತು. ಅಂಗದ ಮೇಲೆ ಲಿಂಗವಿಲ್ಲದ ಸಿದ್ಧರಿಗೆ ಲಿಂಗ ತೊಡಿಸಿಯೇ ಬರುತ್ತೇನೆ ಎಂದು ಅವರು ಹುಬ್ಬಳ್ಳಿಗೆ ಏಕಾಏಕಿ ಹೊರಟರು. ಅವರು ಹುಬ್ಬಳ್ಳಿಯನ್ನಾಗಲಿ, ಸಿದ್ಧಾರೂಢರನ್ನಾಗಲಿ ಈ ಮೊದಲು ಕಂಡಿರಲಿಲ್ಲ. ಶರಣರು ನಸುಕಿನ ಸಮಯಕ್ಕೆ ಹುಬ್ಬಳ್ಳಿಗೆ ಬಂದರು. ಸಿದ್ಧರ ಮಠಕ್ಕೆ ನಡೆದೇ ಹೊರಟರು. ಎದುರಿಗೆ ದೂರದಲ್ಲಿ ಸಿದ್ದರು ಟಾಂಗಾದಲ್ಲಿ ಕುಳಿತು ಬರುತ್ತಿದ್ದರು. ಇನ್ನೂ ಶರಣಪ್ಪನವರು ಬಹು ದೂರದಲ್ಲಿರುವಾಗಲೇ ಸಿದ್ಧರು ಟಾಂಗಾ ಹೊಡೆಯುವ ಸಾಹೇಬನಿಗೆ, “ಸಾಹೇಬಾ, ಅದೋ ಅಲ್ಲಿ ದೂರದಲ್ಲಿ ಒಬ್ಬ ನಮ್ಮ ಕಡೆಗೆ ಬರುತ್ತಿದ್ದಾನಲ್ಲ! ಅವನ ಹತ್ತಿರ ಟಾಂಗಾ ನಿಲ್ಲಿಸು' ಎಂದು ಹೇಳಿದರು. ಶರಣರ ಹತ್ತಿರವೇ ಟಾಂಗಾ ಬಂದು ನಿಂತಿತು.

ಸಿದ್ಧಾರೂಢರು ನೇರವಾಗಿ ಶರಣರಿಗೆ, 'ನೀನು ಕಾರಜೋಳ ಶರಣಪ್ಪ ಅಲ್ಲವೇ? ಅಂಗದ ಮೇಲೆ ಲಿಂಗವಿಲ್ಲದ ಸಿದ್ಧಾರೂಢರಿಗೆ ಲಿಂಗ ತೊಡಿಸಲೆಂದು ಹುಬ್ಬಳ್ಳಿಗೆ ಬಂದೆಯಲ್ಲವೇ? ಶರಣಾ! ನನಗೊಂದು ಲಿಂಗ ಬೇಕಾಗಿತ್ತು.
ಎಲ್ಲಿ ತಾ ನೀ ತಂದ ಲಿಂಗ' ಎಂದರು. ಆಗ ಶರಣಪ್ಪನವರಿಗೆ ಮಾತೇ ಬರಲಿಲ್ಲ. ಸಾವರಿಸಿಕೊಂಡು "ಸ್ವಾಮೀ! ಲಿಂಗವನ್ನು ತರಲಿಲ್ಲ” ಎಂದರು. ಆಗ ಸಿದ್ಧರು, 'ಶರಣಾ! ತರದ ಲಿಂಗವನ್ನು ಹೇಗೆ ಕಟ್ಟುತ್ತೀ?' ಎಂದರು. ಆಗ ಮಳೆ ಬೀಳುತ್ತಿತ್ತು. ಶರಣರ ಮೈ ತೊಯ್ದಿತ್ತು. ಅಂಥ ತಂಪು ಹವೆಯಲ್ಲಿಯೂ ಅವರು ಬೆವೆತಿದ್ದರು. ಆಗಲೇ ಸಿದ್ದರ ದೈವೀ ಶಕ್ತಿಯ ಎದುರು ಶರಣಪ್ಪನವರು ಶರಣಾಗತರಾಗಿದ್ದರು.

ಸಿದ್ದರು ಶರಣರನ್ನು ಮಠಕ್ಕೆ ಕರೆತಂದರು. ಬಂದವರೆಲ್ಲರಿಗೆ ಸಿದ್ಧರು ಬೊಗಸೆ ತುಂಬ ಉತ್ತತ್ತಿ ಕಲ್ಲುಸಕ್ಕರೆ, ನೀಡಿದರೆ, ಶರಣರಿಗೆ ತಾವು ತಿಂದ ಬಾಳೆಹಣ್ಣನ್ನು ಕೊಟ್ಟರು. ತ್ರಿಕಾಲ ಪೂಜಾನಿಷ್ಠರಾಗಿದ್ದ ಶರಣರಿಗೆ ಆಗ ಸ್ನಾನವಾಗಿರಲಿಲ್ಲ. ಪೂಜೆ ಆಗಿರಲಿಲ್ಲ. ಒಂದು ಕ್ಷಣ ಒಂದು ಸಂಶಯ ಕಾಡಿತು. ಅಂಗದ ಮೇಲೆ ಲಿಂಗವಿಲ್ಲದ ಈ ಸಿದ್ಧರು ಕೊಟ್ಟ ಎಂಜಲ ಪ್ರಸಾದ ತಿನ್ನುವುದೇ ? ಎಂದು ಚಿಂತಿಸಿದರು. ವಿಪ್ರ ಮೊದಲಾಗಿ ಅಂತ್ಯಜ ಕಡೆಯಾಗಿ ಎಲ್ಲರನ್ನೂ ಒಂದೇ ಎನ್ನುವ ಬಸವಣ್ಣ ಹೋರಾಟವನ್ನೇ ಸಿದ್ಧರು ಕೈಕೊಂಡಿದ್ದುದು ಶರಣರಿಗೆ ತಿಳಿಯಿತು. ಕಕ್ಕಯ್ಯನ ಮನೆಯ ಮಿಕ್ಕ ಪ್ರಸಾದಕ್ಕೆ ಬಸವಣ್ಣನವರೇ ಹಸಿದಿದ್ದರೆಂದ ಮೇಲೆ ಸಿದ್ಧಾರೂಢರು ಪ್ರಸಾದ ಪರಮ ಪ್ರಸಾದವೆಂದು ಹಿಂದು ಮುಂದೆ ನೋಡದೆ ಅವರು ಸ್ವೀಕರಿಸಿದರು.

ಒಂದು ದಿನ ಶರಣ್ಣಪ್ಪ ಸಿದ್ಧಾರೂಢರ ಹತ್ತಿರ ಹೋಗಿ ನಮಸ್ಕರಿಸಿ ಸದ್ಗುರುವೇ, ನನಗೆ ಸ್ವರೂಪ ಜ್ಞಾನವಾಗಬೇಕೆಂಬ ಇಚ್ಛೆಯಿಂದ ಬಂದಿದ್ದೇನೆ. ದಯವಿಟ್ಟು ಸ್ವರೂಪಜ್ಞಾನ ಮಾಡಿಕೊಡಿರಿ' ಎಂದು ಪ್ರಾರ್ಥಿಸಿಕೊಂಡನು. ಆಗ ಸಿದ್ಧರು `ಹಾಗೇ ಆಗಲಿ ಎಂದು ಹೇಳಿ ಶಾಸ್ತ್ರ ಪ್ರವಚನಕ್ಕೆ ಕರೆದುಕೊಂಡು ಹೋದರು. ಅಲ್ಲಿ ಶಾಸ್ತ್ರ ಪ್ರವಚನ ಕೇಳಿದ ನಂತರ ಸಿದ್ಧರಿಗೆ ` ಅಪ್ಪಾ , ನನಗೆ ಜ್ಞಾನ ಮರ್ಮ ಗೊತ್ತಾಯಿತು. ಇನ್ನು ಮೇಲೆ ಸ್ವರೂಪಜ್ಞಾನ ಮಾಡಿ ಕೊಡಿರಿ' ಎಂದು ಬೇಡಿಕೊಂಡರು. ಆಗ ಆರೂಢರು ಹಾಗೇ ಆಗಲಿ ಎಂದು ಶಯನಗ್ರಹಕ್ಕೆ ಹೋದರು. ಆಗ ರೇವಣಸಿದ್ಧರು ಮನಸ್ಸಿನಲ್ಲಿ ನನ್ನ ಪರೀಕ್ಷೆ ಮಾಡುವರೆಂದು ತಿಳಿದು, ಗುರುಗಳ ಶಯನ ಮಂದಿರದ ಮುಂಭಾಗದಲ್ಲಿ ಒಂಟಿಗಾಲಿನಿಂದ ಬೆಳತನಕ ಸಿದ್ಧಾರೂಢರ ಧ್ಯಾನ ಮಾಡುತ್ತ ನಿಂತರು. ಮಧ್ಯರಾತ್ರಿ ಅಂತಃಕರಣ ಸ್ತಬ್ದವಾಯಿತು. ಸ್ವಸ್ವರೂಪವೇ ಪ್ರಕಾಶಮಯವಾಗಿ ತೋರಿದ ರೇವಣಸಿದ್ದರು ಆಗ ಸಿದ್ಧಾರೂಢರು ಮುಂಜಾನೆ ಹೊರಬಂದು ಶರಣಾ, ಶರಣಾ, ಶರಣಾ ಎಂದು ಮೂರು ಸಲ ಕರೆದರು. ಅಲ್ಲಿಂದ ಅವರ ಶರಣಪದವು ಸಾರ್ಥಕವಾಯಿತು ಮತ್ತು ಸಿದ್ಧರು ನುಡಿದದ್ದೇನೆಂದರೆ `ಯಾಕೋ ಶರಣಾ, ನಿನಗೆ ಸ್ವಸ್ವರೂಪ ಜ್ಞಾನ ಮಾಡಿಕೊಡಲು ಬಂದಿದ್ದೇನೆ ಎಚ್ಚರಾಗು' ಎಂದಾಗ ಶರಣರು, ಎಚ್ಚರಾಗಿ ಸಾಷ್ಟಾಂಗ ನಮಿಸಿ `ಸದ್ಗುರುನಾಥಾ, ನನ್ನ ಸ್ವರೂಪಜ್ಞಾನ ನನಗಾಯಿತು. ಇನ್ನು ತಿಳಿಯುವುದು ಏನೂ ಉಳಿದಿಲ್ಲ. ನಿಮ್ಮ ಕೃಪೆಯಿಂದ ನಾನು ಧನ್ಯನಾದೆನು' ಎಂದನು. ಆಗ ಆರೂಢರು `ಶರಣಾ, ನಿನ್ನ ಸ್ವರೂಪಜ್ಞಾನವಾದುದರ ಬಗ್ಗೆ ಹೇಳು ನೋಡೋಣ ಎಂದು ಕೇಳಿದ್ದಕ್ಕೆ ಅದನ್ನು ಹೇಳಲು ಬರುವುದಿಲ್ಲ. ಅದು ಮಾತು ಮನಂಗಳಿಂದ ಅತ್ತತ್ತವೆಂದು ತಿಳಿದು ಸುಮ್ಮನಾದನು. ಆಗ ಸಿದ್ಧರು `ಶರಣಾ, ನಿನ್ನ ಅನಂತ ಜನ್ಮದ ಪುಣ್ಯವೇ ನಿನ್ನ ಸ್ವರೂಪಜ್ಞಾನಕ್ಕೆ ಕಾರಣವಾಗಿದೆ. ಆದ್ದರಿಂದ ನೀನು ಸದ್ಯೋನ್ಮುಕ್ತನು. ಇದರಲ್ಲಿ ಸಂಶಯವಿಲ್ಲ. ಮತ್ತು ಹುಬ್ಬಳ್ಳಿಯು ಬಿಂಬವಿದ್ದಂತೆ ಅಕ್ಕಲಕೋಟೆಯು ಪ್ರತಿಬಿಂಬವಿದ್ದಂತೆ. ಈ ನಂಬುಗೆ ನಿನಗಿರಲಿ' ಎಂದು ಮಸ್ತಕದ ಮೇಲೆ ಹಸ್ತವನ್ನಿಟ್ಟು ಆಶೀರ್ವದಿಸಿ ಕಳುಹಿಸಿಕೊಟ್ಟರು. ಶರಣರ ಮೈಮನದ ಮಂದಿರದಲ್ಲಿ ಸಿದ್ಧಾರೂಢರೇ ಕುಳಿತರು.

ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಶರಣರು ಸಿದ್ಧರ ತತ್ವಗಳನ್ನು ಪ್ರಚಾರ ಮಾಡಿದರು. ಅವರು ಸೊಂಟಕ್ಕೆ ವಸ್ತ್ರ ಸುತ್ತಿ ಭಕ್ತಿಯ ಭರದಿಂದ ಸಾಧು ಬಂದಾನ ನೋಡ ತಂಗೀ, ಸಿದ್ಧಾ ಬಂದಾನ ನೋಡ ತಂಗಿ' ಎಂದು ಸಿದ್ಧಾರೂಢರ ಸಮ್ಮುಖದಲ್ಲಿ ಕೈಲಾಸಮಂಟಪದಲ್ಲಿ ಕುಣಿಕುಣಿದು ಹಾಡುತ್ತಿದ್ದರೆ, ಸ್ವಾಮಿಗಳು ಕುಲುಕುಲು ನಗುತ್ತಿದ್ದರು. ಶ್ರೀಮಠದಲ್ಲಿ ಆಗ ಎಷ್ಟೋ ಜನ ಪಂಡಿತರಿದ್ದರು. ಆ ಪಂಡಿತರಿಗೆ ಶರಣಪ್ಪನವರ ಬಗೆಗೆ ಗೌರವ ಇರಲಿಲ್ಲ. ಅವರಲ್ಲಿ ಅಸಮಾಧಾನ ತುಂಬಿ ತುಳುಕುತ್ತಿತ್ತು. ಆ ಪಂಡಿತರು ಪ್ರವಚನ ಪ್ರಾರಂಭಿಸಿದರೆ, ಸಿದ್ಧಾರೂಢರು ಸುಮ್ಮನೇ ಕುಳಿತಿದ್ದರು. ಶರಣಪ್ಪ ಶಾಸ್ತ್ರ ಹೇಳುವದನ್ನು ನೋಡಿದ ಪಂಡಿತರಿಗೆ ಅಸಂತೋಷವಾಗಿ ಅವರು ಸಿದ್ಧಾರೂಢರ ಬಳಿಗೆ ಹೋದರು. “ಏನಪ್ಪಾ ಆ ಹುಚ್ಚು ಶರಣಗ ಶಾಸ್ತ್ರಜ್ಞಾನ ಇಲ್ಲ. ಅವನಿಗೆ ಅಡಿಗಣ ಪ್ರಾಸ ಗೊತ್ತಿಲ್ಲ, ಅವನೊಬ್ಬ ಹಳ್ಳಿಗಾಡ ಹುಂಬ. ಮಠಕ್ಕೆ ಕಾಳಕಡಿ, ಕಟಿಗಿ ತರತಾನ, ನಿಮ್ಮ ಸೇವಾ ಮಾಡತಾನ. ನಾವು ಈ ರೀತಿ ಏನೂ ತರುವದಿಲ್ಲ. ನಾವು ಪ್ರವಚನ ಮಾಡುವಾಗ ನೀವು ಸುಮ್ಮನಿರುತ್ತೀರಿ. ಶರಣಪ್ಪ ಹಾಡುತ್ತಿದ್ದರೆ, ಹರ್ಷಚಿತ್ತರಾಗಿರುತ್ತೀರಿ. ಅದರಿಂದ ನಮ್ಮ ಮನಸ್ಸಿನೊಳಗ ಒಂದು ಸಂಶಯ ಮೂಡಿದೆ. ನೀವು ನಮ್ಮ ಸಂಶಯವನ್ನು ಪರಿಹರಿಸಬೇಕು' ಎಂದು ಕೇಳಿದರು.

ಆಗ ಸಿದ್ಧಾರೂಢರು ಆ ಪಂಡಿತರಿಗೆ, “ನಾನೇನು ನಿಮ್ಮಂತ ಪಂಡಿತನಾ, ಪಂಡಿತರ ಸಂಶಯ ಪಾಮರನಾದ ನಾನು ಹ್ಯಾಂಗ ಪರಿಹರಿಸಲಿ, ಆದರೂ ಕೇಳಿ ಬಹಳ ಭೇಷ ಮಾಡಿದಿರಿ, ನೋಡ್ರಿ, ಕಾಲೊಳಗಿನ ಮುಳ್ಳು, ಕಣೋಳಗಿನ ಹಳ್ಳು, ಮನೆಯೊಳಗಿನ ಜಗಳ, ಮನಸ್ಸಿನೊಳಗಿನ ಸಂಶಯ ಮೊದಲ ಕಳೆದುಕೊಳ್ಳಬೇಕು' ಎಂದು ಸಿದ್ಧಾರೂಢರು ಮಾತು ಪ್ರಾರಂಭಿಸಿದರು. ಪಂಡಿತರೇ ನಿಮ್ಮಲ್ಲಿ ನೀವು ಪಂಡಿತರೆಂಬ ಅಭಿಮಾನ ಉಂಗುಟದಿಂದ ಹಿಡಿದು ನೆತ್ತಿಯ ವರೆಗೆ ತುಂಬಿದೆ. ಅದರಿಂದ ನಿಮ್ಮ ವಾಣಿ ನರವಾಣಿ ಎನಿಸುತ್ತಿದೆ. ಅದರಿಂದ ನನಗೆ ಬೇಸರ, ಶರಣಪ್ಪನಿಗೆ ಅಭಿಮಾನವಿಲ್ಲ. ನಾನು ಹೇಳತೀನಿ ಎಂಬ ಜಂಬವಿಲ್ಲ. ಗುರುವೇ ನನ್ನೊಳಗೆ ಕುಳಿತು ನುಡಿಸುತ್ತಿದ್ದಾನೆ ಎಂಬ ನಿರಭಿಮಾನ ಅವನೊಳಗಿರುವದರಿಂದ ಅವನ ವಾಣಿ ದೇವವಾಣಿ ಎನಿಸುತ್ತದೆ. ಅದರಿಂದ ನನಗೆ ಆನಂದವಾಗುತ್ತಿದೆ ಎಂದು ನುಡಿದರು. ಸಾಮಾನ್ಯ ಜನರಲ್ಲಿ ಮೂಡಿದ್ದ ಅಜ್ಞಾನವನ್ನು ತೊಲಗಿಸುತ್ತ ಧರ್ಮದ ಬೀಜವನ್ನು ಬಿತ್ತುತ್ತ ಶರಣರು ಊರೂರು, ಕೇರಿಕೇರಿ ಅಲೆದರು. ಸಿದ್ಧಾರೂಢರ ಮಹಿಮೆಗಳನ್ನು ಜನರ ಎದೆಯ ಹೊಲದಲ್ಲಿ ಬಿತ್ತಿದರು. ಕರ್ನಾಟಕ, ಮಹಾರಾಷ್ಟ್ರಗಳ ಉದ್ದಗಲಕ್ಕೂ ಶರಣರು ಸಂಚರಿಸಿದರು. ಪುಣೆಯ ಒಂದು ಕಾರ್ಯಕ್ರಮದಲ್ಲಿ ಒಬ್ಬರು ಹಿರಿಯ ಅನುಭಾವಿಗಳು ಶರಣರ ವಾಣಿಯನ್ನು ಆಲಿಸಿ, ಇವರೇ ಹೀಗಿದ್ದ ಮೇಲೆ ಇವರ ಗುರುಗಳಾದ ಸಿದ್ಧಾರೂಢರು ಹೇಗಿದ್ದಿರಬೇಕು ಎಂದು ಉದ್ಗಾರ ತೆಗೆದರಂತೆ. ಶರಣರು ಮುಂಬಯಿಗೂ ಹೋದರು. ಪಾರಶೀ ಬಂಧುಗಳಿಗೆ ಸಿದ್ಧಾರೂಢರ ಅಗಾಧ ಆತ್ಮಜ್ಞಾನ ಮಾಡಿಕೊಟ್ಟರು. ಶರಣರ ಕೀರ್ತನಗಳಿಂದ ಎಲ್ಲೆಡೆಯಲ್ಲಿ ಸಿದ್ದಾರೂಢರ ಹೆಸರಾಯಿತು. ಭಕ್ತರು ಹೊಳೆಯಂತೆ ಹರಿದು ಬಂದರು. ಸಿದ್ಧಾರೂಢರ ಜಾತ್ರೆಗೆ ಹುಬ್ಬಳ್ಳಿಯ ನೆಲ ಹಿಡಿಸದಾಯಿತು. ಮೂರು ಮೂರು ತಿಂಗಳಕಾಲ ಜಾತ್ರೆ ನಡೆಯಿತು. ಒಮ್ಮೆ ಶರಣರನ್ನು ಸಿದ್ಧಾರೂಢರು ಕೈಲಾಸಮಂಟಪದ ಮೇಲೆ ಕರೆದುಕೊಂಡು ಹೋದರು, ಕಣ್ಣದೃಷ್ಟಿ ಹರಿಯುವವರೆಗೂ ಜನ ಸಾಗರ ಸೇರಿತ್ತು. ಚಕ್ಕಡಿ ಬಂಡಿಗಳ ಮಹಾಪೂರವೇ ಬಂದಂತಿತ್ತು. ಆ ದೃಶ್ಯವನ್ನು ಕಂಡ ಸಿದ್ಧಾರೂಢರು, 'ನೋಡೋ ಶರಣ ಭಕ್ತ ಸಮೂಹ ನೋಡೋ' ಎಂದರು. ಆಗ ಶರಣರು ವಿನಮ್ರರಾಗಿ ದೇವಾ ! ಇದೆಲ್ಲ ನಿನ್ನ ಮಹಿಮಾ ! ನಿನ್ನ ಮಹಿಮಾದಿಂದ ಇದೆಲ್ಲ ನಡೀತದ' ಎಂದರು. ಆಗ ಸಿದ್ಧಾರೂಢರು 'ಶರಣಪ್ಪಾ' ಇದು ನನ್ನ ಮಹಿಮಾ ಅಲ್ಲೊ! ನಿನ್ನ ಶ್ರಮಾ, ನಿನ್ನ ಶ್ರಮಾ ಇಷ್ಟೆಲ್ಲ ಮಾಡಿದೆ. ಇದು ಭೂತ ಪಿಶಾಚಿ ಇರುವ ಸುಡುಗಾಡ ಭೂಮಿ, ನೀನು ಸಿದ್ಧಾರೂಢರ ಬಗ್ಗೆ ಓಣಿ ಓಣಿ, ಕೇರಿ ಕೇರಿ, ಊರ ಪಟ್ಟಣ ಹಗಲು ರಾತ್ರಿ ತಿರುಗಿ ತಿರುಗಿ ಶ್ರಮಪಟ್ಟು ಹೇಳಿದ್ದಕ್ಕೆ ಇದೆಲ್ಲ ಕೂಡ್ಯಾದೋ ಎಂದರು.

ಶರಣರು ಸಂಚಾರಿ ಜೀವಿಗಳು. ಒಂದೂರಿನಲ್ಲಿ ಅವರು ನಾಲ್ಕಾರು ದಿವಸಗಳ ಕಾಲ ನಿಂತಿದ್ದೇ ಹೆಚ್ಚು. ಹೊರಡಬೇಕೆಂದರೆ ಹೊರಟೇ ಬಿಡುತ್ತಿದ್ದರು. ಮೋಟರ ತಪ್ಪಿದರೆ ನಡೆಯುತ್ತಲೇ ಹೊರಡುವರು. ಶರಣರ ಸಂಚಾರೀ ಜೀವನವನ್ನು ಕಂಡು ಸಿದ್ಧಾರೂಢರು ಶರಣಪ್ಪಾ ಒಂದೆಡೆಯಲ್ಲಿ ಕುಂತಲ್ಲೇ ಕೂಡು, ನಿನ್ನ ಮೂರು ಜನ್ಮದ ಸಂಕಲ್ಪಗಳು ಈಡೇರುವವು ಎಂದು ನುಡಿದರು. ಆಗ ಶರಣರು ತಂದೇ ಹೋದ ವ್ಯಾಳ್ಯಾದಂಥ ವ್ಯಾಳ್ಯಾನೇ ತಿರುಗಿ ಸಿಗದು! ಕುರುಡ ಹುಡುಗನ ಕೈಗೆ, ಆಟದೊಳಗ ಕಾಗಿ ಸಿಕ್ಕ೦ಗ ಈ ಮನುಷ್ಯ ಜನ್ಮ ಅಪರೂಪಕ್ಕ ಸಿಕ್ಕಾದ. ಇನ್ನೊಮ್ಮೆ ಮನುಷ್ಯ ಶರೀರ ಹ್ಯಾಂಗ ಸಿಕ್ಕೀತು. ಸ್ವರ್ಗದಲ್ಲಿರುವ ಆ ಶಿವನೇ, ಶರೀರ ತೊಟ್ಟು ನೆಲಕ್ಕೆ ಬಂದಂತಿರುವ ನಿಮ್ಮ ಸೇವೆ ಮಾಡುವ ಸದವಕಾಶ ಈ ಜನ್ಮದಲ್ಲಿ ಸಿಕ್ಕಿದೆ. ಅಂಥ ಭಾಗ್ಯವನ್ನು ಒಂದೇ ಕಡೆ ಕುಳಿತು ಹಾಳುಮಾಡುವದೇ ತಂದೇ ? ಎಂದು ಶರಣರು ನುಡಿದರು. ಸಿದ್ಧಾರೂಢರ ಮಠದಲ್ಲಿ ಅಕ್ಕಲಕೋಟಿ ಶರಣರು ಭಕ್ತಿ ಜ್ಞಾನ ವೈರಾಗ್ಯಗಳ ಮಹಾ ಮೇರು ಪರ್ವತವೇ ಆಗಿದ್ದರು. ಸಿದ್ಧಾರೂಢರ ಜೀವನ, ದರ್ಶನ, ಸಮಾನಭಾವ, ಸಮದೃಷ್ಟಿ, ಲೋಕ ಕಲ್ಯಾಣ ಕಾರ್ಯ, ವಿಶ್ವ ಬಂಧುತ್ವಗಳನ್ನು ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಂಚರಿಸಿ ಜನಕ್ಕೆ ಪರಿಚಯಿಸಿದವರು ಶರಣರು ಎನ್ನಬೇಕು.

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ