ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮದ ಲೀಲಾಕಥೆ,
🕉️ ಸಿದ್ಧಾರೂಢರು ಹಾಗೂ ನವಲಗುಂದ ನಾಗಲಿಂಗ ಸ್ವಾಮಿಗಳ ಸಂಗಮವಾದ ಕಥೆ,
ಶ್ರೀ ಸಿದ್ಧಾರೂಢ ಮಠದಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಭಜನೆ, ಕೀರ್ತನೆ, ಶಾಸ್ತ್ರಶ್ರವಣ ಇತ್ಯಾದಿಗಳು ಹುಬ್ಬಳ್ಳಿಯ ಜನರ ಜೊತೆಗೆ ದೇಶದ ನಾನಾ ಮೂಲೆಗಳಿಂದ ಭಕ್ತರನ್ನು ಆಕರ್ಷಿಸತೊಡಗಿದವು. ಸಹಸ್ರಾರು, ಮುಂದೆ ಲಕ್ಷಾವಧಿ ಭಕ್ತ ಸಮುದಾಯ ಶ್ರೀಗಳ ಮಠಕ್ಕೆ ಬಂದು ಶ್ರೀಗಳ ದರ್ಶನ ಅನ್ನಪ್ರಸಾದ ಸ್ವೀಕರಿಸುವ, ಶಾಸ್ತ್ರ ಶ್ರವಣ ಮಾಡುವ ಹವ್ಯಾಸ ದಿನೇ ದಿನೇ ಬೆಳೆಯತೊಡಗಿತು. ಕೆಲ ಕಾಲ ಗತಿಸಿದ ನಂತರ ಗೌರಿ ಹುಣ್ಣಿಮೆಯು ಸಮೀಪಿಸಿತು. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ವೈಭವದಿಂದ ರಥೋತ್ಸವ ಮಾಡಬೇಕೆಂದು ಪೂರ್ವ ಸಿದ್ಧತೆಗಳನ್ನು ಭಕ್ತರು ಮಾಡತೊಡಗಿದರು. ಸಪ್ತಾಹ ಇಡಬೇಕೆಂದೂ ಪ್ರತಿನಿತ್ಯ ಶಾಸ್ತ್ರ, ಶ್ರವಣ, ಕೀರ್ತನೆ, ಭಜನೆ, ಅನ್ನ ಸಂತರ್ಪಣೆ ಮಾಡಬೇಕೆಂದು ನಿರ್ಧರಿಸಲಾಯಿತು. ಸಣ್ಣದಾದ ತೆಪ್ಪದ ತೇರನ್ನು ಕಟ್ಟಿ ಶೃಂಗರಿಸಿದರು. ಭಕ್ತರು ಕಾರ್ಯಕ್ರಮಗಳ ಪತ್ರಿಕೆಗಳನ್ನು ವಿತರಣೆ ಮಾಡಿದರು. ಸಪ್ತಾಹದಲ್ಲಿ ಪಾಲ್ಗೊಳ್ಳಲು ಸಾಧು ಸಂತರು, ಕೀರ್ತನಕಾರರು, ಭಜನಾಮೇಳಗಳು ಶಾಸ್ತ್ರಿಗಳು ಹಾಗೂ ಮಹಾತ್ಮರು ಆಗಮಿಸಿದರು. ಸಪ್ತಾಹದ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಲು ತಂಡೋಪತಂಡವಾಗಿ ಕಾರ್ಯಕರ್ತರು ತಮ್ಮ ತಮಗೆ ನಿರ್ವಹಿಸಿಲಾದ ಕಾರ್ಯಗಳಲ್ಲಿ ತತ್ಪರರಾದರು. ಇಡೀ ನಗರವೇ ಹಬ್ಬದ ವಾತಾವರಣದಿಂದ ರಂಗು ರಂಗಾಯಿತು. ಎಲ್ಲಿ ನೋಡಿದಲ್ಲಿ ಓಂ ನಮಃ ಶಿವಾಯ ಮಹಾಮಂತ್ರ ಉಚ್ಚಾರಣೆಯ ಧ್ವನಿಗಳು ಕಿವಿಗಳಿಗಿಂಪಾಗಿ ಮನಸ್ಸು ಆ ಪರಶಿವನ ಅವತಾರೀ ಸಿದ್ಧನಲ್ಲಿ ಆಕರ್ಷಿಸಿದವು. ಲಕ್ಷೋಪಲಕ್ಷ ಜನ ಸಮುದಾಯದಿಂದ ಗೌರಿ ಹುಣ್ಣಿಮೆಯ ದಿನ ಸಿದ್ಧಾರೂಢರ ರಥೋತ್ಸವ ಬಹು ವೈಭವದಿಂದ ಜರುಗಿತು.
🕉️ಹುಬ್ಬಳ್ಳಿಗೆ ನಾಗಲಿಂಗಸ್ವಾಮಿಗಳ ಆಗಮನ 🌷
ಒಂದಾನೊಂದು ದಿನ ಸಿದ್ದಾಶ್ರಮಕ್ಕೆ ಬಂದ ಓರ್ವ ಭಕ್ತನು ತನ್ನ ಮನೆಗೆ ಭೋಜನಕ್ಕೆ ಬರಬೇಕು ಅಂತ ಸಿದ್ಧಾರೂಢ ಸ್ವಾಮಿಗಳಲ್ಲಿ ಪ್ರಾರ್ಥಿಸಲು, ಅದಕ್ಕೆ ಸಮ್ಮತಿಸಿ ಆತನ ಜೊತೆಗೆ ನಡೆದರು. ಮುಂದೆ ಕಲಘಟಗಿ ದಾರಿಯಿಂದ ಚೆಟ್ಟಿನ ಪಲ್ಲಕ್ಕಿಯಲ್ಲಿ ಕುಳಿತು, ನವಲಗುಂದ ನಾಗಲಿಂಗ ಸ್ವಾಮಿಗಳು ತಮ್ಮಷ್ಟಕ್ಕೆ ತಾವೇ ಅಜಾತಶತ್ರು ನಾಗಲಿಂಗ ಸ್ವಾಮಿ ಮಹಾರಾಜ ಕಿ ಜಯ ಅಂತಾ ಜಯಘೋಷ ಮಾಡುತ್ತಿದ್ದರು. ಮುಂದೆ ಒಬ್ಬ ತಪ್ಪಡಿ ಬಾರಿಸುತ್ತ ನಡೆದಿದ್ದ, ಪಲ್ಲಕ್ಕಿ ಹೊತ್ತವರೂ ಸಹ ಜಯಜಯಕಾರ ಹಾಡುತ್ತಿದ್ದರು. ಈ ಚಟ್ಟಿನ ಪಲ್ಲಕ್ಕಿಯು ದಾರಿಯುದ್ದಕ್ಕೂ ಜನರನ್ನು ಆಕರ್ಷಿಸಿತು. ಆಗ ನಾಗಲಿಂಗನ ದೃಷ್ಟಿಯು ಮುಂದೆ ಬರುತ್ತಲಿದ್ದ ಸಿದ್ಧಾರೂಢರ ಕಡೆಗೆ ಹರಿಯಿತು. ಆ ಪಲ್ಲಕ್ಕಿ ಹೊತ್ತವರನ್ನು ಕುರಿತು, ಈಶ್ವರನು ಈ ಲೋಕದ ನಟನೆಯನ್ನು ಅರಿಯಲಿಕ್ಕೆ ಹಾಗೂ ಇಲ್ಲಿರುವ ಸತ್ವ, ರಜ, ತಮ ಈ ಉಪಾಸನ, ಜ್ಞಾನಗಳಿಂದ ರಕ್ಷಿಸುತ್ತಾ, ಅದ್ವೈತ ಮತ ಸ್ಥಾಪನೆಗಾಗಿ ದೇವಾನುದೇವತೆ ಗಳಿಗೆ ವಂಚಿಸಿ, ಕೈಲಾಸದಿಂದ ಈ ಧರೆಗೆ ಅವತರಿಸಿ ಸಾಧುರೂಪದಿಂದ ಮೆರೆಯುತ್ತಿರುವಾತನೇ ಹುಬ್ಬಳ್ಳಿಯ ಸಿದ್ಧಾರೂಢ ಅಂತಾ ಅನ್ನುತ್ತಾ ಎದುರಿಗೆ ಕಂಡಿದ್ದರಿಂದ ಪಲ್ಲಕ್ಕಿಯಿಂದ ಕೆಳಗೆ ಇಳಿದ ನಾಗಲಿಂಗಸ್ವಾಮಿಯು ಸಿದ್ದನ ಸಮೀಪಕ್ಕೆ ಬಂದರು, ಆತನ ಮೈಮೇಲಿನ ವಸ್ತ್ರವನ್ನು ಸೆಳೆದುಕೊಂಡು ಚರಚರನೆ ಐದು ತುಂಡುಗಳನ್ನಾಗಿ ಮಾಡಿದರು. ಒಂದು ತುಂಡನ್ನು ಗಿಡದ ಮೇಲೆ ಹೊದಿಸಿ ಒಂದನ್ನು ಗಾಳಿಪಟದಂತೆ ತೇಲಿ ಬಿಟ್ಟರು. ಒಂದನ್ನು ಕಡ್ಡಿ ಕೊರದು ಬೆಂಕಿ ಹಚ್ಚಿ ಸುಟ್ಟರು. ಒಂದನ್ನು ನೀರಲ್ಲಿ ಬಿಟ್ಟರು. ಒಂದನ್ನು ಭೂಮಿಯಲ್ಲಿ ಹೂಳಿದರು, ಇದರ ತಾತ್ಪರ್ಯವೆನೆಂದರೆ ನಶ್ವರವಾದ ದೇಹವನ್ನೇ ವಸ್ತ್ರ ಮಾಡಿ ಪಂಚಭೂತಾತ್ಮಕ ದೇಹವು ಐದು ಭೂತಗಳಲ್ಲಿ ಲಯವಾಗುವುದು. ಗಿಡಕ್ಕೆ ಹಾಕಿದ ತುಂಡು ಆಕಾಶದಲ್ಲಿ ಇನ್ನೊಂದು ತುಂಡು ವಾಯು ಭೂತದಲ್ಲಿ, ಮತ್ತೊಂದು ತುಂಡು ಅಗ್ನಿ ತತ್ವ ಹಾಗೂ ಜಲತತ್ವ ಮತ್ತೆ ಪೃಥ್ವಿ ತತ್ವದಲ್ಲಿ ಲಯವಾದಂತೆ ಎಂಬ ಅರ್ಥವನ್ನು ತಿಳಿಸುವುದೇ ಮಹಾತ್ಮರ ಈ ಕಾರ್ಯದ ಗುರಿಯಾಗಿತ್ತು.
ನಂತರ ನಾಗಲಿಂಗಪ್ಪನು ತನ್ನ ಹೆಗಲಮೇಲಿದ್ದ ಬಿಳಿ ಕಂಬಳಿಯನ್ನು ಸಿದ್ಧನಿಗೆ ಹೊದಿಸಿ ಆತನನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿದನು. ಆಗ ಸಿದ್ಧನು, ಸದಯನೇ ಪಲ್ಲಕ್ಕಿಯಲ್ಲಿ ಕೂತವರಾರು, ನಿಂತವರಾರು ಮತ್ತು ಅದನ್ನು ಹೊತ್ತವರಾರು ಹೇಳು ಅಂತಾ ಪ್ರಶ್ನಿಸಿದ ಕೂಡಲೇ ಆಶ್ಚರ್ಯಕರ ಘಟನೆ ತೋರಿತು. ಎಲ್ಲಿ ನೋಡಿದಲ್ಲಿ ನಾಗಲಿಂಗಪ್ಪನೆ ಕಾಣಹತ್ತಿದನು. ಸಾಕ್ಷಾತ್ ಈಶನ ಅವತಾರಿ ಸಿದ್ಧನನ್ನು ಹಾಗೂ ಪಾರ್ವತಿಯ ಅವತಾರ ನಾಗಲಿಂಗಪ್ಪನನ್ನು ಅಂದರೆ ಶಿವ ಶಕ್ತಿಯರು ಜಾಣತನದಿಂದ ಅವತರಿಸಿ ಇವರೀರ್ವರು ಕೂಡಿದ ಈ ಸ್ಥಳಕ್ಕೆ ದೇವಾನುದೇವತೆಗಳು ಆಕಾಶದಲ್ಲಿ ಬಂಗಾರದ ಹೂವಿನ ಮಳೆಗರಿಯುತ್ತಿದ್ದರು. ದೇವ ದುಂಬಿಗಳು ಮೊಳಗುತ್ತಿದ್ದವು. ಇವರೀರ್ವರ ಮಾಡುವ ಲೀಲೆಗಳನ್ನು ಕಾಣುತ್ತಾ ಧನ್ಯರಾಗಿರಿ ಅಂತಾ ಆಕಾಶವಾಣಿ ಕೇಳುತ್ತಾ, ನೆರೆದ ಭಕ್ತರು ಅವಾಕ್ಕಾದರು. ನಮ್ಮ ಗುರುಗಳಾದ ಸಿದ್ದಾರೂಢರು ಎಲ್ಲಿಗೆ ಹೋದರು, ಅವರು ಯಾಕೆ ಕಾಣಲೊಲ್ಲರು ಅಂತಾ ಓರ್ವ ಭಕ್ತನು ಕೇಳಿದ ಕೂಡಲೇ ನಾಗಲಿಂಗ ಸ್ವಾಮಿಯು, ಕಡೆ ಓಣಿಯಲ್ಲಿ ವಿಷಮಜ್ವರದಿಂದ ಬಳಲುತ್ತಿರುವ ಗುರು ಶಾಂತವ್ವನತ್ತ ಹೋಗಿ, ಮೃತ್ಯು ಬಾಧೆಯಿಂದ ಆಕೆಯನ್ನು ಮುಕ್ತಮಾಡಲು ಅಲ್ಲಿಗೆ ಹೋಗಿದ್ದಾರೆ. ಈಗ ಬರುವರು, ಅಂತಾ ಹೇಳಿದ ಕೂಡಲೇ ಸಿದ್ಧಾರೂಢರು ಗುರುಶಾಂತವ್ವನ ಸಹಿತ ಪ್ರಕಟವಾದರು.
ಮರಣ ಬಾಧೆಯಿಂದ ನನ್ನನ್ನು ರಕ್ಷಿಸಿ ಸಿದ್ದನು ನನಗೆ ಪುನರ್ ಜನ್ಮ ನೀಡಿದ್ದಾನೆ ಅಂತ ಕೇಳುತ್ತಾ ಗುರುಶಾಂತವ್ವ ನಾಗಲಿಂಗ ಸ್ವಾಮಿಯ ಪಾದಗಳಲ್ಲಿ ವಂದನೆ ಸಲ್ಲಿಸಿದಳು . ಆಕೆಗೆ ಆಶೀರ್ವಾದ ಮಾಡಿದರು. ಅಷ್ಟರಲ್ಲಿ ಅಲ್ಲಿಗೆ ಜಗವನ್ನು ಹೊತ್ತ ಓರ್ವ ಜೋಗತಿ ಬಂದಳು. ಆ ಜಗವನ್ನು ಒದರಿಕೊಂಡು ನೆಲಕ್ಕಪ್ಪಳಿಸಿ ಆ ಜೋಗುತಿಯ ಸುತ್ತಲೂ ಉಧೋ ಉಧೋ ಅಂತಾ ಐದು ಸಲ ಪ್ರದಕ್ಷಿಣೆ ಮಾಡುತ್ತಾ ಇರಲು, ನಾಗಲಿಂಗ ಸ್ವಾಮೀಯು ತನ್ನ ಪಲ್ಲಕ್ಕಿಯಲ್ಲಿ ಕೂತು ಅಜಾತಶತ್ರು ನಾಗಲಿಂಗ ಸ್ವಾಮಿ ಮಹಾರಾಜಕಿ ಜಯ ಜಯಘೋಷ ಮಾಡುತ್ತಾ ಧಾರವಾಡದತ್ತ ಸಾಗಿದನು. ನಂತರ ಸಿದ್ದಾರೂಢರು ಭಕ್ತನಿಂದೊಡಗೂಡಿ ಆತನ ಮನೆಗೆ ಆಗಮಿಸಿದರು. ಭೋಜನ ಮಾಡಿದರು. ಅಷ್ಟರಲ್ಲಿ ಅಲ್ಲಿಯೇ ನಾಗಲಿಂಗ ಸ್ವಾಮಿಯು ಪ್ರಕಟಗೊಂಡು ಆ ಮನೆಯಲ್ಲಿಯ ಧೋತರಗಳ ಎರಡು ಗಂಟುಗಳನ್ನು ಹೊರತಂದು ಬಡಜನರಿಗೆ ದಾನ ಮಾಡಹತ್ತಿದನು, ಅದನ್ನು ಕಂಡ ಆ ಮನೆಯ ಯಜಮಾನರು ಕೋಪದಿಂದ ನಾಗಲಿಂಗ ಸ್ವಾಮಿಗೆ ಹೊಡೆಯಲು ಮುನ್ನುಗ್ಗಿದರು. ಆಗ ಸಿದ್ದರು, ಹೇ ಯಜಮಾನನೆ, ಏನಿದು ಸಾಧು ವರನನ್ನು ಹೊಡೆದರೆ ನಿನ್ನ ವಂಶವೇ ನಾಶವಾದೀತು ಎಚ್ಚರ. ಈಗ ಧೋತರದ ದಾನದಿಂದ ನಿಮಗೆ ಹಾನಿ ಕಂಡರೂ ಇನ್ನೊಂದು ವರ್ಷದಲ್ಲಿ ಈ ಸ್ವಾಮಿಯ ಕೃಪೆಯಿಂದ ವೈಭವದ ಜವಳಿ ಅಂಗಡಿಯನ್ನು ಸ್ಥಾಪಿಸುವ ಸೌಭಾಗ್ಯ ನಿನಗೆ ಬರುವದಿದೆ ಅಂತ ಹೇಳಿದ ಕೂಡಲೇ ಎಚ್ಚೆತ್ತ ಆ ಯಜಮಾನನು ಶಾಂತನಾಗುತ್ತ, ಸಿದ್ದನ ಮಾತುಗಳಲ್ಲಿ ವಿಶ್ವಾಸವಿಟ್ಟು, ನಾಗಲಿಂಗ ಸ್ವಾಮಿಯ ದಿವ್ಯ ಚರಣಕ್ಕೆರಗಲು ಸ್ವಾಮಿಯು ಆತನಿಗೆ ಶುಭಾಶೀರ್ವಾದ ಮಾಡುತ್ತಾ ಅದೃಶ್ಯನಾದನು. ಆ ಬಳಿಕ ಸಂತಸಗೊಂಡ ಸಿದ್ದನು ಆ ಭಕ್ತನಿಂದ ಅಪ್ಪಣೆ ಪಡೆದು ತಮ್ಮ ಮಠಕ್ಕೆ ಮರಳಿದರು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಸೋಲಾಪುರ ನಿರ್ವಾಣೆಪ್ಪನಿಗೆ ಷಟ್‌ಸ್ಥಲ - ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಿದ್ಧಾರೂಢರು,
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
