ಅಕ್ಕಲಕೋಟ ಶರಣಪ್ಪನು ಸದ್ಗುರುಗಳನ್ನು ಉಣಕಲ್ಲಿಗೆ ಪಲಕ್ಕಿಯಲ್ಲಿ ಒಯೈದು ಲಕ್ಷ ಜನರಿಗೆ ಊಟ ಮಾಡಿಸಿದ ಕಥೆ .
🌿ಅಕ್ಕಲಕೋಟ ಶರಣಪ್ಪನು ಉಣಕಲ್ಲಿನಿಂದ ಹುಬ್ಬಳ್ಳಿಗೆ ಅನ್ನವನ್ನು ತರಿಸಿ ಭೋಜನ
ಮಾಡಿಸಿದನು. ಮತ್ತು ಉಣಕಲ್ಲಿನಲ್ಲಿ ಲಕ್ಷ ಜನರಿಗೆ ಉಣಿಸಿ ಸದ್ಗುರು ಪೂಜಾ ಮಾಡಿಸಿದ ಕಥೆ .
ಸಾಧುವಾದ ಶರಣಪ್ಪ ಅಕ್ಕಲಕೋಟ ಎಂಬಾತನು, ಸಿದ್ಧಸದ್ಗುರುಗಳ ಮೇಲೆ ಅತ್ಯುತ್ಕಟ ಪ್ರೇಮ ಉಳ್ಳಂಥವನಾಗಿದ್ದು, ಯಾವಾಗಲೂ ಜನರೊಳಗೆ ಸದ್ಗುರು ಕೀರ್ತಿಯನ್ನೇ ವರ್ಣಿಸುತ್ತ, ಲೋಕದಲ್ಲಿ ಬಹು ಖ್ಯಾತಿಗೊಂಡಿರುವನು. ಶ್ರಾವಣ ಮತ್ತು ಶಿವರಾತ್ರಿ ಉತ್ಸವಗಳಿಗೆ ನೇಮ ಹಿಡಿದು ಸದ್ಗುರುಗಳ ಕಡೆಗೆ ಬರುವನು. ಇತರ ಕಾಲದಲ್ಲಿ ಕೀರ್ತನದ್ದೆಶೆಯಿಂದ ದೇಶ ದೇಶಗಳಲ್ಲಿ ಸಂಚರಿಸುತ್ತಿರುವನು. ಚಿಕ್ಕಂದಿನಿಂದ ಈತನಿಗೆ ಲಿಂಗಜಂಗಮ ಪೂಜೆಯಲ್ಲಿ ಬಹಳ ಪ್ರೇಮವೂ, ವೀರಶೈವ ಧರ್ಮದ ಅಭಿಮಾನವೂ ಇರುತ್ತಿದ್ದು, ಗುರುಭಕ್ತಿ ಮತ್ತು ಪರೋಪಕಾರದ ಕೃತ್ಯಗಳನ್ನೇ ಚಿಂತಿಸುತ್ತಿದ್ದನು. ಮುಂದೆ ಶರಣಪ್ಪನು ವೀರಶೈವ ಮತಭೇದವನ್ನು ಕಳೆದು ಐಕ್ಯಮತವನ್ನು ಸ್ಥಾಪಿಸಿ, ಅಲ್ಲಿಯೊಳಗೆ ತ್ರಿಸಷ್ಟಿ ಮಂಟಪವನ್ನು ರಚಿಸಿ, ಪುರಾತನ ಜಂಗಮರೆಲ್ಲರನ್ನೂ ಪೂಜಿಸುವಂಥವನಾದನು. ಜಂಗಮರಿಗೋಸ್ಕರ ಅನೇಕ ಮಠಗಳನ್ನೂ, ವಿದ್ಯಾರ್ಥಿಗಳಿಗೋಸ್ಕರ ಸಂಸ್ಕೃತ ಪಾಠಶಾಲೆಗಳನ್ನೂ ಸ್ಥಾಪಿಸಿದನು. ದುಷ್ಕಾಲದಲ್ಲಿ ಅನ್ನವಿಲ್ಲದ ಅನೇಕ ಬಡಜನರಿಗೆ ವರ್ಷ ತನಕ ಅನ್ನ ವಸ್ತ್ರಾದಿಗಳನ್ನು ಕೊಡುತ್ತಿದ್ದನು. ಬಸವಣ್ಣನ ಕಾಲದಲ್ಲಿ ತಾನು ಇದ್ದದ್ದಾದರೆ, ಆ ಪ್ರಭುವಿನ ಸೇವೆ ಮಾಡುತ್ತಿದ್ದೆ, ಎಂದು ಶರಣಪ್ಪನು ಚಿಂತಿಸುವಾಗ, ಮಲ್ಲಿಕಾರ್ಜುನ ಗುರುಗಳು - “ಅದೇ ಮೂರ್ತಿಯು ಹುಬ್ಬಳ್ಳಿಯಲ್ಲಿ ಸಿದ್ದಾರೂಢರೆಂಬ ಹೆಸರಿನಿಂದ ಇರುವುದು', ಎಂದು ಹೇಳಿದ್ದು ಕೇಳಿ, ಆತನು ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರ ದರ್ಶನ ಮಾಡಿಕೊಂಡು, ಮನಸಿನಲ್ಲಿ ಅತ್ಯಂತ ಆನಂದಪಟ್ಟನು. ಬಹುಕಾಲ ಯೋಗಾಭ್ಯಾಸ ಮಾಡಿದ್ದನು, ಆದರೆ ಸ್ವರೂಪದಲ್ಲಿ ವೃತ್ತಿಯು ಸ್ಥಿರವಾಗಲಿಲ್ಲ. ಈಗ ಸಿದ್ದ ಸದ್ಗುರುಗಳ ಕಡೆಗೆ ಪ್ರಾಪ್ತನಾದ ಮೇಲೆ ಅವರ ಕೃಪೆಯಿಂದ ಪೂರ್ಣ ಜ್ಞಾನವನ್ನು ಹೊಂದಿದನು. ಅದರಿಂದ ಶರಣಪ್ಪನ ಚಿತ್ರವೃತ್ತಿಯು ಸ್ಥಿರವಾಗಿ, ಸದ್ಗುರು ಚರಣಗಳಲ್ಲಿ ದೃಢವಾದ ಭಕ್ತಿಯುಂಟಾಗಿ ಸಿದ್ಧ ಮಹಿಮೆಯು ಪ್ರತೀತಿಗೆ ಬಂತು. ಸರ್ವ ಜನರೊಳಗೆ ಗುರು ಕೀರ್ತಿಯನ್ನು ವರ್ಣಿಸಬೇಕೆಂಬ ಉತ್ಕಟ ಇಚ್ಛೆಯನ್ನು ಧರಿಸಿ, ದೇಶದೇಶಗಳಿಗೆ ಹೋಗುವಂಥವನಾದನು. ಪುರ, ಪಟ್ಟಣ, ಗ್ರಾಮಾದಿಗಳಲ್ಲಿ ಹೋಗಿ ಪ್ರೇಮಳ ಭಕ್ತಜನರನ್ನೆಲ್ಲಾ ಕೂಡಿಸಿ, ಅವರಿಗೆ ಸಿದ್ಧಾರೂಢರು ಸಾಕ್ಷಾತ್ ಈಶ್ವರಾವತಾರವೆಂದು ಬೋಧಿಸುವನು. ಮುಖದಿಂದ ಸಿದ್ದನಾಮವನ್ನು ಹಾಡುತ್ತಾ, ಅಂತರಂಗದೊಳಗೆ ಆತನು ಪ್ರೇಮದಿಂದ ಭರಿತನಾಗಿ, ಉತ್ತಮವಾದ ಕೀರ್ತನವನ್ನು ಮಾಡುತ್ತಿರುವಾಗ ಪರಮ ಆನಂದವು ಉದ್ಭವಿಸುತ್ತಿರುವದು. ಕೀರ್ತನೆಯೊಳಗೆ ಅದ್ಭುತ ಪ್ರೇಮವು ಉಕ್ಕಿ ಬರುತ್ತಿದ್ದು, ಶ್ರೋತಾ ಜನರೆಲ್ಲರೂ ಕಣ್ಣಿನಿಂದ ನೀರು ಸುರಿಸುತ್ತಿದ್ದರು. ಸಾಕ್ಷಾತ್ ತುಕಾರಾಮನೇ ಪುನಃ ದೇಹಧಾರಿಯಾಗಿ ಬಂದಿರುವನೋ ಎಂಬಂತೆ ಕಾಣಿಸುತ್ತಿತ್ತು. ಈ ಪ್ರಕಾರ ಸದ್ಗುರು ಭಕ್ತಿಯನ್ನು ಜನರೊಳಗೆ ಪಸರಿಸಿದ್ದರಿಂದ, ಅವರು ದರ್ಶನೇಚ್ಚೆಯನ್ನು ಮನಸ್ಸಿನಲ್ಲಿ ಹಿಡಿಯುವರು. ಶರಣಪ್ಪನು ಅವರನ್ನೆಲ್ಲ ಕರೆದುಕೊಂಡು ಬಂದು, ಸಿದ್ದ ಸದ್ಗುರುವರನ ಭಟ್ಟಿ ಮಾಡಿಸುವನು. ಶರಣಪ್ಪನು ಮಹೋತ್ಸವಕ್ಕೆ ಬರುವಾಗ ಸಾವಿರಾರು ಭಕ್ತ ಜನರನ್ನು ಸಂಗಡ ಕರದುತಂದು ಸಿದ್ದರ ಪಾದಕ್ಕೆ ಹಾಕಿ ತಾನು ಕೃತಕೃತ್ಯನಾದನೆಂದು ತಿಳಿದುಕೊಳ್ಳುವನು. ಸದ್ಗುರು ಬಳಿಗೆ ಒಮ್ಮೆಲೇ ಬಂದ ಮಾತ್ರದಿಂದ, ಗುರುಭಕ್ತಿಯು ಆತನ ಚಿತ್ತದಲ್ಲಿ ಸ್ಥಿರಗೊಂಡು ಆ ಮೇಲೆ ಗುರುಚರಣಗಳನ್ನು ಎಂದೆಂದೂ ಬಿಡನು. ಆ ಗುರುರಾಯನ ಚರಣ ಕೀರ್ತಿಯು ಹೀಗಿರುವದು. ಈ ಸಾಧು ಶರಣಪ್ಪನಿಗೆ ಕೆಲವರು ಕೇಳುವರು - “ನಮ್ಮ ಹೊಟ್ಟೆಯಿಂದ ಮಕ್ಕಳಿಲ್ಲ. ಮಕ್ಕಳಾಗಬೇಕಾದರೇ ಯಾವ ದೇವನನ್ನು ಭಜಿಸಬೇಕು ?” ಆಗ ಶರಣಪ್ಪನು - “ಹುಬ್ಬಳ್ಳಿಯೊಳಗೆ ವಾಸವಾಗಿರುವ ಶ್ರೀ ಸಿದ್ಧಾರೂಢ ಸದ್ಗುರುನಾಥನು ಸಾಕ್ಷಾತ್ ಶಿವನ ಅವತಾರವಿರುವನು. ಶ್ರಾವಣ ಮತ್ತು ಮಾಘ ಮಾಸಗಳಲ್ಲಿ ಆತನ ಮಹೋತ್ಸವಗಳಾಗುತ್ತವೆ. ಆ ಕಾಲ ಆತನ ದರ್ಶನಕ್ಕೆ ಹೋಗುವ ನೇಮವನ್ನು ಹಿಡಿದಿರಾದರೆ ನಿಮ್ಮ ಮನೋರಥಗಳು ಪೂರ್ಣವಾಗುವವು,'' ಎಂದು ಹೇಳುವನು. ಈ ವಚನದಲ್ಲಿ ವಿಶ್ವಾಸವಿಟ್ಟು, ಇಲ್ಲಿ ಮಹೋತ್ಸವಕ್ಕೆ ಬಂದು ಸಿದ್ದ ಚರಣಕ್ಕೆ ಬಿದ್ದರೆಂದರೆ ಅವರ ಕಾಮನೆಗಳೆಲ್ಲಾ ಸಿದ್ದಿಸುತ್ತಿರುವವು. ಬಳಿಕ ಅವರು ಮರಣ ಪರ್ಯಂತ ಈ ನೇಮನ್ನು ನಡಿಸುತ್ತ, ಆ ಮೂಲಕ ಸರ್ವಪ್ರಕಾರದ ಕಲ್ಯಾಣ ಪ್ರಾಪ್ತಿ ಮಾಡಿಕೊಳ್ಳುವರು. ಸಿದ್ಧಮೂರ್ತಿಯ ದರ್ಶನವಾಗುವದರಿಂದ ಇಹಪರ ಸುಖಗಳೆಲ್ಲಾ ಪ್ರಾಪ್ತವಾಗುವವು.
ಇರಲಿ, ಹುಬ್ಬಳ್ಳಿ ಸಮೀಪ ಉಣಕಲ್ಲವೆಂಬ ಗ್ರಾಮವಿರುವದು, ಆ ಗ್ರಾಮದ ಭಕ್ತರೆಲ್ಲಾ ಕೂಡಿ ಶರಣಪ್ಪನ ಬಳಿಗೆ ಬಂದು - '' ಹೇ ಶಿವಭಕ್ತ ಶರಣಪ್ಪ ಸ್ವಾಮಿಗಳೇ, ನೀವು ನಮ್ಮ ಮೇಲೆ ಕೃಪೆ ಮಾಡಿ ನಮ್ಮ ಗ್ರಾಮಕ್ಕೆ ಬಂದು, ಒಂದು ಮಾಸ ಪರ್ಯಂತ ಕೀರ್ತನ ಮಾಡಿದ್ದಾದರೆ, ಅದರಿಂದ ನಾವು ಕೃತಕೃತ್ಯರಾಗುವೆವು' ಎಂದು ಪ್ರಾರ್ಥಿಸಿದ್ದನ್ನು ಕೇಳಿ, ಶರಣಪ್ಪನು, “ನಿಮ್ಮ ಗ್ರಾಮಕ್ಕೆ ಬಂದು ನಾನು ಕೀರ್ತನ ಮಾಡುವೆನು. ಆದರೆ ನನ್ನದೊಂದು ಮನೋರಥವನ್ನು ನೀವೆಲ್ಲರೂ ಕೂಡಿ ಪೂರ್ಣಮಾಡಬೇಕು. ಅದು ಈ ಪ್ರಕಾರವದೆ, – ಶ್ರಾವಣ ಮಾಸದಲ್ಲಿ ಒಂದು ಸೋಮವಾರ ದಿನ ಗಾಡಿಗಳಲ್ಲಿ ಅನ್ನವನ್ನು ಹೇರಿ, ನೀವೆಲ್ಲರೂ ಭಜನೆ ಮಾಡುತ್ತಾ ಸಿದ್ದಾರೂಢರ ಸನ್ನಿಧಿಗೆ ಬಂದು ಅದನ್ನು ಅವರಿಗೆ ಅರ್ಪಿಸತಕ್ಕದ್ದು. ಇಂಥ ಸೇವೆಯನ್ನು ನೀವು ಮಾಡುವಿರಾದರೆ, ನಾನು ನಿಮ್ಮಲ್ಲಿ ಬಂದು ಕೀರ್ತನೆ ಮಾಡುವೆನು', ಎಂದು ಹೇಳಿದ್ದು ಕೇಳಿ, ಆ ಗ್ರಾಮದವರೆಲ್ಲಾ ಸಂತೋಷಭರಿತರಾಗಿ - ನಿಮ್ಮ ಸಂಗತಿಯಿಂದ ನಾವು ಧನ್ಯರಾಗುವೆವು' ಎಂದು ಅಂಧರು. ಶರಣಪ್ಪನ ಇಚ್ಛೆ ಇದ್ದಂತೆ ನಡಿಸುತ್ತೇವೆಂದು ಅವರು ವಚನ ಕೊಟ್ಟರು. ತರುವಾಯ ಆತನು ಉಣಕಲ್ಲಿಗೆ ಹೋಗಿ, ಸಹಸ್ರಾವಧಿ ಜನರು ಕುಳಿತಿರುವಲ್ಲಿ ಕೀರ್ತನೆ ಮಾಡುತ್ತಿದ್ದನು. ಕೀರ್ತನೆಯಲ್ಲಿ ಅದ್ಭುತ ಪ್ರೇಮವು ಉತ್ಪನ್ನವಾಗುತ್ತಿತ್ತು. ಅ ಸದ್ಭಕ್ತರು ಸಿದ್ದ ಸದ್ಗುರುವಿನ ಕೀರ್ತಿಯನ್ನು ಶರಣಪ್ಪನ ಮುಖದಿಂದ ಕೇಳಿ, ಸಿದ್ದನಾಮವನ್ನು ಗರ್ಜಿಸುತ್ತಿದ್ದರು, ಕೀರ್ತನ ಕೇಳಿದಾಕ್ಷಣ ತಲ್ಲೀನರಾಗಿ ಸರ್ವರಿಗೂ ದೇಹದ ವಿಸ್ಕೃತಿಯಾಗುತ್ತಿತ್ತು. ಭೂತ ಬಾಧೆಯಿಂದ
ಪೀಡಿತರಾಗಿರುವ ಇಬ್ಬರು ಕೀರ್ತನ ಶ್ರವಣಕ್ಕೆ ಬಂದು ಕುಳಿತಿದ್ದರು. ಸಿದ್ದ ನಾಮದ ಘೋಷವು ಕೇಳಿದ ಕೂಡಲೆ ಅವರಿಗೆ ಹಿಡಿದ ಭೂತಗಳು ಶಂಖಧ್ವನಿ ಮಾಡುತ್ತ ಓಡಿ ಹೋದವು. ಇದನ್ನು ನೋಡಿ, ಎಲ್ಲರೂ ಆನಂದಪಟ್ಟು - “ಈತನ ಸಂಗತಿಯಿಂದ ವಿಶೇಷ ಲಾಭವದೆ,'' ಅಂದರು. ಆಮೇಲೆ ಶರಣಪ್ಪನು ಉತ್ಸವ ಕಾರ್ಯ ಆರಂಭಿಸಲಿಕ್ಕೆ ಹೇಳಿದನು. ಸಾವಿರಗಟ್ಲೆ ಭಜನೆ ಮಾಡುವ ಜನರು, ಪ್ರತಿ ಒಬ್ಬರು ಕೈಯಲ್ಲಿ ತಾಳ ಹಿಡಿದು ಬಾರಿಸುತ್ತಾ, ಮುಖದಿಂದ ನಾಮವನ್ನು ಗರ್ಜಿಸುತ್ತ, ಬಹು ಪ್ರೇಮದಿಂದ ಗ್ರಾಮದ ಹೊರಗೆ ಹೊರಟು ಬಂದರು. ಇವರ ಹಿಂದೆ ಸಹಸ್ರಾವಧಿ ಸಾಲಂಕೃತ ಸುವಾಸಿನಿ ಸ್ತ್ರೀಯರು, ಪ್ರತಿ ಒಬ್ಬಳು ಕೈಯಲ್ಲಿ ಪಂಚಾರತಿಯನ್ನು ಎತ್ತಿಕೊಂಡು, ಸುಸ್ವರದಿಂದ ಸದ್ಗುರುರಾಯನ ಆರತಿಯನ್ನು ಹಾಡುತ್ತಾ ಹೊರಟರು. ಈ ಸ್ತ್ರೀಯರ ಹಿಂಭಾಗದಲ್ಲಿ, ನವಪಲ್ಲವಗಳಿಂದ ಅಲಂಕರಿಸಲ್ಪಟ್ಟ, ಮತ್ತು ಶಾಕಸೂಪಾದಿ ನಾನಾತರದ ಉತ್ತಮ ಅನ್ನಗಳನ್ನು ಹೇರಿದಂಥಾ ಅರವತ್ತು ಚಕ್ಕಡಿಗಳು ಹೊರಟವು. ಅನೇಕ ವಾದ್ಯಗಳ ಘೋಷಗಳಿಂದಲೂ, ನಾಮದ ಗರ್ಜನೆಯಿಂದಲೂ, ಅಂತರಿಕ್ಷವು ದುಮದುಮಿಸಿತು. ಉಣಕಲ್ಲಿನಿಂದ ಸಿದ್ಧಾಶ್ರಮ ಪರ್ಯಂತ ಒಂದು ಹರದಾರಿ ಉದ್ದ ರಸ್ತೆಯ ಮೇಲೆ ಜನರು ಸಿದ್ಧನಾಮದ ಭಜನೆಯ ಘೋಷ ಮಾಡುತ್ತಾ ನಡೆಯುತ್ತಿದ್ದರು. ಬರುವ ಭಕ್ತ ಜನರಿಗೆ ಭೆಟ್ಟಿ ಕೊಡುವದಕ್ಕೋಸ್ಕರ ಸಿದ್ದನಾಥರು ಸಿದ್ಧಾಶ್ರಮದಲ್ಲಿ ಕುಳಿತಿದ್ದರು. ಒಂದು ಪ್ರಹರ ಪರ್ಯಂತ ಜನರು ಬರುತ್ತಾ ಇದ್ದರು. ಮಧ್ಯಾಹ್ನ ಕಾಲವಾದ ಕೂಡಲೇ, ಕೆರೆಯ ದಂಡೆಯ ಮೇಲೆ, ಪತ್ರಾವಳಿ ಇಟ್ಟು ಹತ್ತು ಸಾವಿರ ಮಂದಿ ಊಟಕ್ಕೆ ಕುಳಿತರು, ಪಕ್ವಾನ್ನಗಳನ್ನು ನೀಡಲಿಕ್ಕೆ ಆರಂಭಿಸಿದರು. ನಾಮ ಉಚ್ಚಾರ ಮಾಡುತ್ತಾ ಸರ್ವರೂ ಊಟ ಮಾಡುತ್ತಿರುವಾಗ, ಸದ್ಗುರುನಾಥನು ಉಚ್ಚ ಸ್ಥಾನದಲ್ಲಿ ಕುಳಿತುಕೊಂಡು ನೋಡುತ್ತಿದ್ದನು. ಭಕ್ತರು ಸುಖದಿಂದಲೆ ಸುಖಿಸುವಂಥಾ ಆತನಿಗೆ ಭೋಜನ ಮಾಡುತ್ತಿರುವ ಈ ಜನ ಸಮುದಾಯವನ್ನು ನೋಡಿ, ಆನಂದವು ಉಕ್ಕಿ ಬರುತ್ತಿತ್ತು. ಈ ಪ್ರಕಾರ ಹತ್ತು ಹತ್ತು ಸಾವಿರದ ಪಂಕ್ತಿಗಳೂ ಕೆರೆಯ ದಂಡೆಯ ಮೇಲೆ ಆರು ಸರ್ತಿ ಆಗಿ, ಒಟ್ಟಿಗೆ ಅರವತ್ತು ಸಾವಿರ ಜನರು ಉಣ್ಣುವಂಥವರಾದರು. ಶರಣಪ್ಪನಿಗಾದರೂ ಬಹಳ ಆನಂದವಾಯಿತು, ಸರ್ವರ ಭೋಜನದ ನಂತರ, ಶರಣಪ್ಪನು ಸಿದ್ಧಸದ್ಗುರುಗಳ ಮುಂದೆ ಕೀರ್ತನೆಗೆ ನಿಂತು, ಎರಡು ತಾಸು ತನಕ ಆ ಮಹಾಸಭೆಗೆ ಸದ್ಗುರು ಕೀರ್ತಿಯನ್ನು ವರ್ಣಿಸಿದನು. ಬಳಿಕ ಜನರೆಲ್ಲಾ ಸ್ವಸ್ಥಾನಗಳಿಗೆ ಹೋಗುವಾಗ ಶರಣಪ್ಪನು ಅವರಿಗೆ - ಸದ್ಗುರುಗಳನ್ನು ಉಣಕಲ್ಲಿಗೆ ಕರೆದುಕೊಂಡು ಹೋಗಿ ಪೂಜಿಸಿದ್ದಾದರೆ, ನೀವು ಧನ್ಯರಾಗುವಿರಿ,'' ಎಂದು ಹೇಳಿದನು.
ಕೆಲವು ದಿವಸಗಳ ತರುವಾಯ ಉಣಕಲ್ಲಿನ ಸದ್ಭಕ್ತ ಜನರು ಅಲ್ಲಿ ಸಿದ್ಧಾರೂಢರನ್ನು ಮಹಾವೈಭವದಿಂದ ಪೂಜಿಸುವ ಉದ್ದೇಶದಿಂದ ತಯಾರಿ ನಡಿಸುವಂಥವರಾದರು. ಅವರು ಶರಣಪ್ಪನಿಗೆ- 'ಸದ್ಗುರುಗಳು ಹುಬ್ಬಳ್ಳಿ ಬಿಟ್ಟು ಎಲ್ಲಿಯೂ ಹೋಗುವದಿಲ್ಲ, ಆದರೆ ನಿಮ್ಮ ಪ್ರಾರ್ಥನೆಯಿಂದ ಅವರು ಇಲ್ಲಿ ಬರುವುದಾದರೆ ನಾವು ಅವಶ್ಯವಾಗಿ ಅತ್ಯಾದರದಿಂದ ಪೂಜಿಸುವೆವು' ಎಂದು ಅಂದರು. ಆಗ ಶರಣಪ್ಪನು ಶ್ರೀ ಸಿದ್ದರ ಬಳಿಗೆ ಬಂದು, - “ಹೇ ಗುರುನಾಥನೇ, ಉಣಕಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗಿ ಪೂಜಿಸಬೇಕೆಂಬ ಇಚ್ಛೆಯಿಂದ ಎಲ್ಲ ಸಿದ್ಧಪಡಿಸಿರುತ್ತದೆ,” ಎಂದು ಪ್ರಾರ್ಥಿಸಿದ್ದು ಕೇಳಿ, ಹುಬ್ಬಳ್ಳಿ ಭಕ್ತ ಜನರು ಶರಣಪ್ಪನನ್ನು ಕುರಿತು - “ಸ್ವಾಮಿಯವರು ಹುಬ್ಬಳ್ಳಿ ಬಿಟ್ಟು ಎಲ್ಲಿಯೂ ಹೋಗುವದಿಲ್ಲ, ನೀವು ಕರೆದುಕೊಂಡು ಹೋಗಬಾರದು. ನಾವಾದರೂ ಬಿಡಲಾರೆವು'' ಎಂದು ಹೇಳಿದರು. ಅದಕ್ಕೆ ಶರಣಪ್ಪನು- “ನೀವು ಸ್ವಾಮಿಯವರನ್ನು ಬಿಟ್ಟು ಇರಲಾರಿರಿಯಾದರೆ, ನಮ್ಮೆಲ್ಲರಿಗೆ ಈಗಲೇ ಆಮಂತ್ರಣ ಕೊಡುತ್ತೇನೆ. ನನ್ನ ಪ್ರಾರ್ಥನೆ ಏನೆಂದರೆ - ನೀವೆಲ್ಲರೂ ಸದ್ಗುರುಗಳನ್ನು ಕರೆದುಕೊಂಡೇ ಉಣಕಲ್ಲಿಗೆ ಬಂದು, ಅಲ್ಲಿ ಭೋಜನ ಮಾಡಬೇಕು. ಭೋಜನವಾದ ನಂತರ ಅತೀ ಉತ್ತಮವಾದ ಮಂಟಪ ಪೂಜೆಯನ್ನು ನೋಡಿ, ಎಲ್ಲರೂ ಕೂಡಿ ಪುನಃ ಸಿದ್ಧಾಶ್ರಮಕ್ಕೆ ಸದ್ಗುರುಗಳನ್ನು ಮುಟ್ಟಿಸಿರಿ,” ಎಂದು ನಮ್ರಭಾವದಿಂದ ಮಾಡಿದ ಭಾಷಣವನ್ನು ಕೇಳಿ, ಸರ್ವಾ ಭಕ್ತರು ಸಂತೋಷಪಟ್ಟರು. ಸದ್ಗುರು ಮಹಾರಾಜರಾದರೂ ಶರಣಪ್ಪನಿಗೆ- ''ನಿನ್ನ ಇಚ್ಛೆಯನ್ನು ಪೂರ್ಣ ಮಾಡಿಕೋ' ಎಂದು ವಚನವನ್ನಿತ್ತರು. ಸರ್ವ ಸಾಮಗ್ರಿ ಸಿದ್ಧವಾದ ಬಳಿಕ ಒಂದು ಯೋಗ್ಯ ದಿವಸವನ್ನು ನೋಡಿ ಉಣಕಲ್ಲಿನಿಂದ ಭಕ್ತ ಜನರು ಸಿದ್ದಾರೂಢರನ್ನು ಕರಿಯಲಿಕ್ಕೆ ಬಂದರು, ಹುಬ್ಬಳ್ಳಿಯ ಸಾವಿರಾರು ಮಂದಿ ಭಕ್ತ ಜನರನ್ನೆಲ್ಲಾ ಉಣಕಲ್ಲಿಗೆ ಬರಲಿಕ್ಕೆ ಆಮಂತ್ರಣ ಕೊಟ್ಟು, ಸದ್ಗುರುಗಳನ್ನು ಪಲ್ಲಕ್ಕಿಯೊಳಗೆ ಕೂಡ್ರಿಸಿಕೊಂಡು ಆ ಮಹಾ ಜನಸಮುದಾಯವು ನಡೆಯಿತು. ಅನೇಕ ವಾದ್ಯಗಳ ಘೋಷದಿಂದಲೂ, ಭಕ್ತರ ಜಯ ಜಯಕಾರ ಧ್ವನಿಯಿಂದಲೂ, ನಾಮ ಭಜನೆಯ ಗರ್ಜನೆಯಿಂದಲೂ, ಉಂಟಾದ ಮಹಾನಾದವು ಅಂಬರದೊಳಗೆ ಹಿಡಿಸಲಾರದಂತಾಯಿತು. ಪಲ್ಲಕ್ಕಿಯೊಳಗೆ ಸದ್ಗುರು ರೂಪವಾದರೂ ಅತ್ಯಂತ ಮನೋಹರವಾಗಿ ಶೋಭಿಸುತ್ತಿತ್ತು. ಸಾಕ್ಷಾತ್ ಶಾಂತಿಯೇ ಮೂರ್ತಿಮಂತವಾಗಿದೆಯೋ ಎಂಬಂತೆ ಆ ಸುಂದರವಾದ ಮುಖವು ವಿರಾಜಿಸುತ್ತಿತ್ತು. ಮಸ್ತಕದ ಮೇಲೆ ಕಿರೀಟವು ಅತ್ಯಂತ ಸೋಜ್ವಲವಾಗಿದ್ದು, ಮೈಮೇಲೆ ಹೊತ್ತಿರುವ ರೇಶಿಮೆ ಶಾಲು ಕೆಂಪು ವರ್ಣದ್ದಿದ್ದು, ಅದರ ಮೇಲೆ ಸುವರ್ಣ ಕುಸುಮಗಳು ಮಿಂಚುತ್ತಿದ್ದವು. ನೋಡುವವರ ಮನಸ್ಸಿಗೆ ಸದ್ಗುರುಮೂರ್ತಿ ಬಹು ಆಹ್ಲಾದಕರವಾಗಿ ಕಾಣಿಸುವದು ಸದ್ಗುರು ಮುಖವನ್ನು ನೋಡುತ್ತಾ, ನೋಡುತ್ತಾ ಹೃದಯದಲ್ಲಿ ಅಧಿಕಾಧಿಕ ಪ್ರೇಮವು ಉಕ್ಕಿ ಬರುತ್ತಿರುವದು. ಅದ್ಭುತ ಸುಖವನ್ನು ಭೋಗಿಸುತ್ತ, ಕಣ್ಣುಗಳು ಆ ರೂಪ ನೋಡುವದರಲ್ಲಿ ತೃಪ್ತಿ ಹೊಂದದೆ ದೃಷ್ಟಿಯು ಅಲ್ಲಿಂದ ಏಳುತ್ತಿರಲೇ ಇಲ್ಲ. ಆತನ ದೃಷ್ಟಿಯು ಬಿತ್ತೆಂದರೆ, ಕೂಡಲೇ ಹೃದಯ ಗ್ರಂಥಿಗಳು ಬಿಚ್ಚಿ ಹೋಗಿ, ಜೀವಾವಸ್ಥೆಯು ನಾಶವಾಗಿ ಬ್ರಹ್ಮವು ಭಾಸವಾಗುವದು. ಈ ಪ್ರಕಾರ ಆ ಉತ್ಸವವು ನಡೆದು, ಒಂದು ಮುಹೂರ್ತದೊಳಗೆ ಉಣಕಲ್ಲಿಗೆ ಮುಟ್ಟಿತು. ಸದ್ಗುರುಗಳನ್ನು ಪಲ್ಲಕ್ಕಿಯಿಂದ ಇಳಿಸಿ, ಒಂದು ಸಿಂಹಾಸನದ ಮೇಲೆ ಕುಳ್ಳಿರಿಸಿದರು. ಸೂರ್ಯನು ಮಧ್ಯ ಆಕಾಶದಲ್ಲಿ ಬರುತ್ತಲೇ ಭೋಜನಕ್ಕೆ ಆರಂಭ ಮಾಡಿಸಿದರು. ಸರೋವರದ ದಂಡೆಯಲ್ಲಿರುವ ಮೈದಾನ ಪ್ರದೇಶದಲ್ಲಿ, ಒಂದು ಲಕ್ಷ ಜನರು ಪಂಕ್ತಿ ಹಿಡಿದು ಊಟಕ್ಕೆ ಕುಳಿತರು. ಶರಣಪ್ಪನು ಅತ್ಯಂತ ಹರ್ಷಚಿತ್ತನಾಗಿ, ಸಿದ್ಧಾರೂಢರನ್ನು ಹಸ್ತ ಹಿಡಿದು, ಒಂದು ಉನ್ನತವಾದ ಸ್ಥಾನಕ್ಕೇ ಕರೆದುಕೊಂಡು ಹೋಗಿ ಅಲ್ಲಿಂದ ಆ ಜನಸಮುದ್ರವನ್ನು ತೋರಿಸುವಂಥವನಾದನು. ಮಾನಸ ಸರೋವರದ ತೀರದಲ್ಲಿ ಅಸಂಖ್ಯ ಹಂಸಕಾಂಡಗಳು ಹ್ಯಾಗೆ ಪಂಕ್ತಿ ಹಿಡಿದು ಕುಳಿತಿರುವವೋ ಅದೇ ಪ್ರಕಾರ ಅಲ್ಲಿ ಕಾಣಿಸುತ್ತಿತ್ತು. ಈ ಅದ್ಭುತವಾದ ನೋಟವನ್ನು ನೋಡಿ, ದೇವಾದಿಕರಿಗೆ ದುರ್ಲಭನಾದಂಥಾ, ಭಕ್ತರ ಸುಖದಿಂದ ಆನಂದ ಪಡುವಂಥಾ ಆ ಸದ್ಗುರುದೇವನು ಬಹಳ ಹರ್ಷಯುಕ್ತನಾಗಿ, ಶರಣಪ್ಪನನ್ನು ಕುರಿತು - ಶರಣಪ್ಪ
ಸ್ವಾಮಿ, ಈ ಮಹೋತ್ಸವವನ್ನು ಹ್ಯಾಗೆ ಸಾಧಿಸಿದಿ?' ಎಂದು ಕೇಳಿದ್ದಕ್ಕೆ, ಶರಣಪ್ಪ, - ''ನಾನು ನಿತ್ಯ ಕೀರ್ತನೆಯಲ್ಲಿ ಹೇಳುತ್ತಿದ್ದ ನಿನ್ನ ಕೀರ್ತಿಯ ಪ್ರಭಾವವು ಇಷ್ಟು ಮಾಡಿಸಿತು. ಈ ಮುಂದೆ ಕೀರ್ತನೆಯಲ್ಲಿ ನಿನ್ನ ಗುಣಗಾಣವನ್ನೇ ಮಾಡುತ್ತಿರುವೆನು. ಅದರ ಶ್ರವಣದಿಂದ ಅಂತಃಕರಣ ಶುದ್ಧವಾಗಿ, ಇವರು ಈ ಕಾರ್ಯದಲ್ಲಿ ಪ್ರವರ್ತರಾದರು,”
ಎಂದು ಉತ್ತರ ಕೊಟ್ಟನು. ಆ ಭೋಜನ ಸಮಾರಂಭವು ತೀರಿದ ಬಳಿಕ, ಸದ್ಗುರುನಾಥರನ್ನು ಮಂಟಪದಲ್ಲಿ ಕುಳ್ಳಿರಿಸಿ, ಮಹಾವೈಭವದಿಂದ ಪೂಜಿಸುವಂಥವರಾದರು. ಆಗಿನ ಆನಂದವು ಅವರ್ಣನೀಯವಾಯಿತು. ಪೂಜೆಯಾದ ನಂತರ ಸದ್ಗುರುಗಳನ್ನು ಪುನಃ ಪಲ್ಲಕ್ಕಿಯಲ್ಲಿ ಕೂಡ್ರಿಸಿ ಉತ್ಸವದಿಂದ ಮರಳಿ ಸಿದ್ಧಾಶ್ರಮಕ್ಕೆ ಕರೆದುಕೊಂಡು ಬಂದು ಇಳಿಸಿದರು. ಈ ಪ್ರಕಾರ ಲೋಕೋದ್ಧಾರಾರ್ಥವಾಗಿದ್ದಂಥಾ ಶರಣಪ್ಪನ ಸರ್ವ ಪ್ರಯತ್ನಗಳನ್ನೆಲ್ಲಾ ಸದ್ಗುರುನಾಥನು ಸಿದ್ಧಿಗೆ ಮುಟ್ಟಿಸುವನು.
ಒಮ್ಮೆ ಶ್ರಾವಣ ಮಾಸದಲ್ಲಿ ಶರಣಪ್ಪನು, ಹುಬ್ಬಳ್ಳಿಗೆ ಬರುವ ಉದ್ದೇಶದಿಂದ ಗೋಕಾಕದಿಂದ ಹೊರಟು ಬರುವಾಗ, ದಾರಿಯಲ್ಲಿ ಘಟಪ್ರಭಾ ನದಿಗೆ ಮಹಾಓಘ ಬಂದು ಹರಿಯುತ್ತಿತ್ತು. ಆ ದಿನ ಸದ್ಗುರು ದರ್ಶನ ಪಡೆದುಕೊಳ್ಳದ ವಿನಃ ಅನ್ನವನ್ನು ಸೇವಿಸಲಿಕ್ಕಿಲ್ಲವೆಂದು ಶರಣಪ್ಪನು ದಂಡೆಯ ಮೇಲೆ ನಿಂತುಕೊಂಡನು. ಅಲ್ಲಿರುತ್ತಿದ್ದ ಒಂದು ದೋಣಿಯು ಪ್ರವಾಹದ ಕೂಡ ಹೋಗಿತ್ತು. ಪರತೀರಕ್ಕೆ ದಾಟಿ ಹೋಗತಕ್ಕ ಬಹಳ ಜನರು ಬಂದು ನಿರುಪಾಯರಾಗಿ ನಿಂತು ಬಿಟ್ಟರು. ಕೆಲ ಹೊತ್ತು ನಿಂತುಕೊಂಡು, ಕಡೆಗೆ ಅವರೆಲ್ಲಾ ತಿರುಗಿ ಹೋದರು. ಆದರೆ ಶರಣಪ್ಪನು ಸದ್ಗುರು ನಾಮವನ್ನು ಘರ್ಜಿಸುತ್ತಾ ದಂಡೆಯ ಮೇಲೆಯೇ ನಿಂತನು. ಅವನನ್ನು ಕುರಿತು ಆ ಜನರು - “ಇಲ್ಲಿ ವ್ಯರ್ಥವಾಗಿ ಯಾಕೆ ನಿಂತಿರುವಿ? ನದಿ ನೀರು ಇಳಿದು ಮೇಲೆ, ನಾಳೆ ಹೋಗೋಣ, ಬಾ, ಈಗ ತಿರುಗಿ ಹೋಗುವಾ, "ಅಂದರು. ಅದಕ್ಕೆ ಶರಣಪ್ಪನು- '' ಸದ್ಗುರುವಿಗೆ ಭೆಟ್ಟಿಯಾದ ವಿನಃ ನಾನು ಅನ್ನವನ್ನು ಸೇವಿಸಲಿಕ್ಕಿಲ್ಲ' ಎಂದು ಅಂದದ್ದು ಕೇಳಿ, ಅವನನ್ನು ಬಿಟ್ಟು ಅವರೆಲ್ಲರೂ ಹೋದರು. ಇಷ್ಟರಲ್ಲಿ ಸೂರ್ಯಾಸ್ತವಾಗಿ, ಸರ್ವತ್ರ ಅಂಧಕಾರವು ವ್ಯಾಪಿಸಿತು. ಶರಣಪ್ಪನಾದರೂ ಅಲ್ಲೇ ನಿಂತು ಸದ್ಗುರುನಾಥನಿಗೆ ಪ್ರಾರ್ಥಿಸುತ್ತ, “ಹೇ ಸದ್ಗುರು ದಯಾಳನೇ, ನೀನು ಈ ಸಮಯದಲ್ಲಿ ಬಂದಿಲ್ಲವಾದರೆ, ನಿನ್ನ ಉತ್ಸವಕಾಲದಲ್ಲಿ ನಾನು ಕೀರ್ತನೆ ಮಾಡುವ ನೇಮವು ತಪ್ಪುವುದು. ಭವನದಿಯೊಳಗಿಂದ ಭಕ್ತರನ್ನು ತಾರಾಣ ಮಾಡುವಂಥಾ ನಿನಗೆ ಈ ಕ್ಷುಲ್ಲಕವಾದ ನದಿಯನ್ನು ದಾಟಿಸುವದಕ್ಕೆ ಚಿಂತೆ ಯಾಕೆ ನನ್ನನ್ನು ತಾರಿಸುವದಕ್ಕೆ ವೇಗದಿಂದ ಬಂದು ನಿನ್ನ ಪೂಜೆಗೆ ಕರೆದುಕೊಂಡು ಹೋಗು, ನನ್ನ ಮನಸ್ಸಿನ ನಿಶ್ಚಯವನ್ನು ನೋಡಬೇಕೆಂದು ನೀನು ಬಾರದಿರುವಿಯಾದರೆ, ಅದನ್ನು ತೋರಿಸುವೆನು, ನೋಡು'' ಎಂದು ಶರಣಪ್ಪನು ಏನು ಮಾಡಿದನೆಂದರೆ - ನದಿಯೊಳಗೆ ಇಳಿದನು. ಕೂಡಲೆ ಆ ಮಹಾ ಪ್ರವಾಹವು ಅವನನ್ನು ಎತ್ತಿಕೊಂಡು ಹೋಗುತ್ತಿರುವಾಗ ಶರಣಪ್ಪನು "ಸಿದ್ಧಾರೂಢಾ” ಎಂಬ ಹೆಸರಿನಿಂದ ಗರ್ಜಿಸಿದನು, ತಕ್ಷಣವೇ ಸದ್ಗುರುವು ಒಂದು ಡೋಣಿಯಲ್ಲಿ ಕುಳಿತು ಪ್ರಾಪ್ತನಾಗಿ, ನೀರಿನ ಮೇಲೆ ತೇಲಿ ಹೋಗುವ ಶರಣಪ್ಪನ ಸಮೀಪ ಬಂದು, ಆತನನ್ನು ಎತ್ತಿ ದೋಣಿಯೊಳಗೆ ಹಾಕಿ ಪರತೀರಕ್ಕೆ ದಾಟಿಸಿದವನು. ಆ ದಂಡೆಗೆ ಇಳಿಸಿದ ಕೂಡಲೆ ಶರಣಪ್ಪನು ಸಾವಧಾನವಾಗಿ ನೋಡುವಾಗ ಯಾರನ್ನೂ ಕಾಣಲಿಲ್ಲ ಆತನು ಗದ್ಗದಿತನಾಗಿ - ಕೈವಾರಿಯಾದ ಸದ್ಗುರುವೇ , ನೀನೇ ಬಂದು ನನ್ನನ್ನು ದಾಟಿಸಿದಿ, ಈಗ ಅದೃಶ್ಯನಾಗಿ ಹೋಗಿರುತ್ತಿ," ಎಂದು ಸ್ತುತಿಸಿದನು. ಹುಬ್ಬಳ್ಳಿಗೆ ಹೋಗಿ, ಸದ್ಗುರುಗಳಿಗೆ ಭೆಟ್ಟಿಯಾಗಿ, ಪ್ರವಾಹದ ಕೂಡ ಹೋಗುತ್ತಿರುವಾಗ, ನಡೆದ ವೃತ್ತಾಂತವನ್ನಲ್ಲಾ ನಿವೇದಿಸಿದನು. ಅದನ್ನು ಕೇಳಿ, ಶ್ರೀ ಗುರುಗಳು, - “ಜೀವನು ಮೋಹವೆಂಬ ಪ್ರವಾಹದಲ್ಲಿ ಹೋಗುವಾಗ ಆತನನ್ನು ರಕ್ಷಿಸುವವರು ಒಬ್ಬ ಸದ್ಗುರು ಹೊರತು ಮತ್ತ್ಯಾರೂ ಇಲ್ಲ", ಅಂದರು.
ಶರಣಪ್ಪನು ಲೋಕೋಪಕಾರಾರ್ಥವಾಗಿಯೂ, ಸರ್ವ ಜನರೊಳಗೆ ಸಿದ್ದ ಸದ್ಗುರು ಮಹಿಮೆಯನ್ನು ಪಸರಿಸುವದಕ್ಕಾಗಿಯೂ, ಅನೇಕ ಯತ್ನಗಳನ್ನು ಮಾಡಿದ್ದಾನೆ. ಅವುಗಳ ಪೈಕಿ ಕೆಲವನ್ನು ಇಲ್ಲಿ ಹೇಳುವೆನು. ಸದ್ಗುರು ಸೇವೆಗೋಸ್ಕರ, ಶಿವರಾತ್ರಿಗೆ ಮತ್ತು ಶ್ರಾವಣ ಉತ್ಸವ ಕಾಲದಲ್ಲಿ ಅನ್ನ ಛತ್ರವನ್ನು ಇಡುವನು. ನೂರಾರು ಚೀಲಧಾನ್ಯ ತಂದು, ಬಹು ಜನರಿಗೆ ಊಟ ಮಾಡಿಸುವನು, ಮತ್ತು ಅವರಿಗೆಲ್ಲರಿಗೂ ಕೀರ್ತನೆ ಹೇಳುವಾಗ ಸಿದ್ಧ ಕೀರ್ತಿಯನ್ನೇ ವರ್ಣಿಸುವನು. ಶರಣಪ್ಪ ಸ್ವಾಮಿಗೆ ಯಾವ ಸ್ಥಾನದಲ್ಲಿ ಪ್ರಥಮತಃ ಸಿದ್ಧಾರೂಢರ ದರ್ಶನವಾಗಿತ್ತೋ, ಆ ಸ್ಥಾನವು ಪೂಜ್ಯವೆಂದು, ಮಠದ ಸಮೀಪವಿರುವ ಆ ಸ್ಥಳವನ್ನು ತಾನು ಕ್ರಯಕ್ಕೆ ತೆಗೆದುಕೊಂಡನು. ಅಲ್ಲಿ ಸಾಧು ಜನರಿಗೋಸ್ಕರ ಧರ್ಮಛತ್ರ ಮತ್ತು ಭಜನಮಂದಿರ ಕಟ್ಟಿಸಿ, ಸಿದ್ಧ ಭಜನೆಯು ರಾತ್ರಿ ಹಗಲು ನಡಿಯುವ ಏರ್ಪಾಡು ಮಾಡಿರುತ್ತಾನೆ. ಇದೇ ರೀತಿಯಲ್ಲಿ ಅಖಂಡ ಭಜನೆಯನ್ನು ಇನ್ನೂ ನಾಲ್ಕು ಊರುಗಳಲ್ಲಿ ಸ್ಥಾಪಿಸಿರುವನು, ಮತ್ತು ಸಿದ್ಧಾರೂಢ ಉತ್ಸವ ಮತ್ತು ಚರಿತ್ರ ಪಠಣಾದಿಗಳನ್ನು ಅನೇಕ ಊರುಗಳಲ್ಲಿ ನೇಮಿಸಿರುವನು. ಸಿದ್ಧ ಮಹಿಮೆಯನ್ನು ಬೆಳೆಸಲಿಕ್ಕೆ ರಾಜವಾಡೆಗಳಲ್ಲಿ ಸಹಾ ಹೋಗಿ, ಶಿಷ್ಯ ಸಂಪ್ರದಾಯವನ್ನು ಊರ್ಜಿತಪಡಿಸಿ, ಜನರಿಗೆ ಪಂಚಾಕ್ಷರಿ ಮಂತ್ರವನ್ನು ಉಪದೇಶಿಸುವನು, ಪ್ರತಿ ಒಬ್ಬ ಶಿಷ್ಯನಿಗೆ ಸಿದ್ಧ ಚರಿತ್ರ ಮತ್ತು ಸದ್ಗುರುಗಳ ಭಾವಚಿತ್ರವನ್ನು ಕೊಟ್ಟು ಅವನಿಗೆ ಸಿದ್ದಸ್ತೋತ್ರಗಳನ್ನು ಪಾಠಮಾಡಿಸಿ, ಈ ರೀತಿಯಿಂದ ಜನರ ಉದ್ಧಾರ ಕೃತ್ಯವನ್ನು ಮಾಡುವನು. ಪನ್ನಾಲಾಲ ಮಹಾರಾಜರಿಗೆ ಬೆಳ್ಳಿ ಮೇರು ರಥ ಸಹಿತ ಅವರ ಕೇಶಲುಂಛನ ಕಾರ್ಯಕ್ಕಾಗಿ ಸದ್ಗುರುಗಳ ಶಿವರಾತ್ರಿ ಉತ್ಸವಕ್ಕೆ ಕರೆದುಕೊಂಡು ಬಂದಿದ್ದರು. ಯಡಳ್ಳಿ ಮತ್ತು ಚಿಮ್ಮಡ ಮಹಾರಾಜರುಗಳಿಗೆ ಮತ್ತು ಇತರ ಅನೇಕ ಸತ್ಪುರುಷರಿಗೆ ಸಿದ್ಧಾರೂಢರ ಭೆಟ್ಟಿ ಮಾಡಿಸಲಿಕ್ಕೆ ಕರೆದುಕೊಂಡು ಬಂದು, ಶರಣಪ್ಪನು ತಾನು ಸುಖಪಡುತ್ತಿದ್ದನು. ಶಿವರಾತ್ರಿಯ ದಿನ ದಿವ್ಯ ರುದ್ರಾಕ್ಷ ಮಂಟಪದಲ್ಲಿ ಶ್ರೀ ಸದ್ಗುರು ಸಿದ್ಧಾರೂಢರನ್ನು ಕೂಡ್ರಿಸಿ ಬಹು ವೈಭವದಿಂದ ಮಹಾ ಪೂಜೆಯನ್ನು ಮಾಡುವನು. ಈ ಶರಣಪ್ಪ ಸ್ವಾಮಿಯು ಧನ್ಯ ಧನ್ಯನು. ಸದಾ ಲೋಕೋದ್ಧಾರದಲ್ಲಿ ಚಿತ್ತವಿಟ್ಟು, ಆ ಪೂರ್ಣಾನಂದ ಪರಮಾತ್ಮನಾಗಿರುವಂಥಾ ಸಿದ್ಧ ಸದ್ಗುರುವಿನ ಪ್ರೀತಿಯನ್ನು ಸಂಪಾದಿಸಿಕೊಂಡನು. ಈ ಸದ್ಗುರುವಿನ ನಾಮ ಉಚ್ಚರಿಸುವದರಿಂದ ಆತನು ಕಾರ್ಯಗಳನ್ನು ಸಿದ್ಧಿಗೆ ಒಯ್ಯುವನು. ಅವನ ಚಿಂತನೆ ಮಾಡುವದರಿಂದ ಭವಬಂಧನವನ್ನು ಬಿಡಿಸುವನು
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
