ನಾಟಕ ಕಂಪನಿ ಆರಂಭಿಸಲು ಶ್ರೀ ಸಿದ್ಧಾರೂಢ ಸ್ವಾಮಿಗಳು ಕಾಪಸೆ ಹನುಮಂತಪ್ಪನಿಗೆ ಪ್ರೇರೇಪಿಸಿ ಅವರಿಂದ ಅನೇಕ ಭಕ್ತಿ ನಾಟಕ ಮಾಡಿಸಿದ ಕಥೆ

 ✡️ನಾಟಕ ಕಂಪನಿ ಆರಂಭಿಸಲು ಶ್ರೀ ಸಿದ್ಧಾರೂಢ ಸ್ವಾಮಿಗಳು ಕಾಪಸೆ  ಹನುಮಂತಪ್ಪನಿಗೆ ಪ್ರೇರೇಪಿಸಿ ಅವರಿಂದ ಅನೇಕ ಭಕ್ತಿ ನಾಟಕ ಮಾಡಿಸಿದರು.



ಶ್ರೀ ಸಿದ್ಧಾರೂಢ ಭಾರತಿ ಸ್ವಾಮಿಗಳಲ್ಲಿ  ಶಾಸ್ತ್ರ ಶ್ರವಣ, ಭಜನ, ಸೇವೆ ಮಾಡಲು ನೇಕಾರರು  ಮುಂದಾದರು. ಸ್ವಕುಳಸಾಳಿ ಜನಾಂಗದ ಪೈಕಿ ತುಕ್ಕಮ್ಮ ಕಾಪಸೆ ಪ್ರತಿನಿತ್ಯ ಮಠಕ್ಕೆ ಬಂದು ಸೇವೆಯಲ್ಲಿ ಕಾಲ ಕಳೆಯುತ್ತಿದ್ದಳು. ಜೊತೆಗೆ ಮಗನಾದ ಹನುಮಂತಪ್ಪನ ಬರುತ್ತಿದ್ದ. ಸಂಗೀತದಲ್ಲಿ ಆಸಕ್ತಿಯಿಂದ ಹಾರ್ಮೋನಿಯಂ ಬಾರಿಸುತ್ತ ಪದ ಪದ್ಯಗಳನ್ನು ಹಾಡುತ್ತಿದ್ದ. ಬಂದ ಭಕ್ತರನ್ನಾಕರ್ಷಿಸಿದ್ದ. ಶ್ರೀಗಳು ಆತನನ್ನು ಕರೆದು, ಹನುಮಂತಾ  ನೀನು ಚೆನ್ನಾಗಿ ಹಾಡುತ್ತಿ, ಭಕ್ತಿ, ಜ್ಞಾನ, ವೈರಾಗ್ಯ ಭರಿತ ಕಥೆಗಳನ್ನು ಸಂಗ್ರಹಿಸಿ, ನಾಟಕ ಮಾಡು ಅಂತ ಹೇಳಿದರು. ಅದಕ್ಕೆ ನೇಕಾರ ಗೆಳೆಯರನ್ನು ಕೂಡಿಸಿ ಶ್ರೀಗಳ ಮನದ ಇಂಗಿತವನ್ನು ಹೇಳಲು ಆನಂದಭರಿತರಾದರು. ಶ್ರೀ ತಮ್ಮಣ್ಣ ಶಾಸ್ತ್ರಿಗಳ ಮಗನಾದ ಶ್ರೀ ಅಣ್ಣಪ್ಪ ಹಾಗೂ ನಲವಡಿ ಶ್ರೀಕಂಠಶಾಸ್ತ್ರಿಗಳನ್ನು ಕಂಡು ಶ್ರೀಗಳು ಈ ಇಚ್ಛೆಪಟ್ಟ ನಾಟಕಗಳನ್ನು ಬರೆಸಿದರು. ಹನುಮಂತಪ್ಪ ಕಾಪಸೆ ಹಾಗೂ ಹನುಮಂತಪ್ಪ ಕ್ಷೀರಸಾಗರ (ಭಡಜಿ ) ಕೂಡಿ ಕಲಾಕಾರರನ್ನು ಗುರ್ತಿಸಿ ಕಲೆಹಾಕಿದರು. ಕಾಪಸೆ ಅವರ ಮನೆಯಲ್ಲಿ ರಾತ್ರಿ ನಾಟಕ ತಾಲೀಮು ಆರಂಭಿಸಿದರು. ಪ್ರಮುಖ ಕಲಾಕಾರರಾದ  ಶ್ರೀ ಗಂಗಪ್ಪ ತಿಪ್ಪಣ್ಣ ಕ್ಷೀರಸಾಗರ, ಶ್ರೀ ಗಂಗಪ್ಪ ಆತಡಕರ, ಶ್ರೀ ಗಂಗಾಧರಪ್ಪ ಸೋಮಸಾಳೆ, ಶ್ರೀ ಆನಂದಪ್ಪ ತಾಂಬೆ, ವಿಠ್ಠಪ್ಪ ಕಾಂಬಳೆ, ಹೊನ್ನಪ್ಪ ಭರಾಡೆ,  ಬಾವಲಿ ಪುಟ್ಟಪ್ಪ, ಶಿವಾಜಿ ತಾಂಬೆ, ದಸ್ತಗೀರಸಾಬ, ರಾಂಭೋ ಕಾಪಸೆ, ರಾಮಣ್ಣ ಆತಡಕರ ಮುಂತಾದವರು ಪಾಲ್ಗೊಂಡರು. ಭಕ್ತಿಜ್ಞಾನ ವೈರಾಗ್ಯಭರಿತ ನಾಟಕಗಳಾದ  ಪ್ರಪಂಚ ಪರೀಕ್ಷೆ ಅಂದರೆ ರಾಜಾ  ಭರ್ತೃಹರಿ, ವಿಚಿತ್ರ ವಿಲಾಸ ಅಂದರೆ  ಮೊದಲಿಗೆ ಪುತ್ರಪ್ರಾಪ್ತಿ ನಂತರ ಸ್ತ್ರೀ ಪ್ರಾಪ್ತಿಯ ಉದ್ಧಾಲಕ ಮಹರ್ಷಿ, ನಚಿಕೇತ, ಶಕಕರ್ತ ಶಾಲಿವಾಹನ, ಶೈವಶಾಂತಿ, ಪ್ರಭುವಿಜಯ, ಪತಿವ್ರತಾ ಪ್ರತಾಪ, ಸಂತಸಂಗ ಇತ್ಯಾದಿ ಕಥೆಗಳನ್ನು ರೂಪಿಸಲಾಯಿತು. ಶ್ರೀಗಳ ಮುಖವಾಣಿಯಿಂದ ನಾಟಕದ ಪ್ರೇರಣೆ ದೊರೆತಿದ್ದಕ್ಕೆ " ಶ್ರೀ ಸಿದ್ಧಾರೂಢ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ, ಹಳೇಹುಬ್ಬಳ್ಳಿ " ಈ ಶಿರೋನಾಮೆಯಿಂದ ನಾಟಕ ಕಂಪನಿಯು ಆರಂಭವಾಯಿತು.


ಯಾವದೊಂದು ನಾಟಕದ  ಪ್ರಪ್ರಥಮ ಪ್ರಯೋಗ ನಡೆದಾಗ ಶ್ರೀ ಸಿದ್ಧಾರೂಢ ಸ್ವಾಮೀಜಿಯವರನ್ನು ಅಗ್ರ ಪೀಠದಲ್ಲಿ ಕುಳ್ಳಿರಿಸಿ, ಪಾದಪೂಜೆಯೊಂದಿಗೆ ಆರಂಭವಾಗುತ್ತಿತ್ತು. ಆರಂಭದಿಂದ ಕೊನೆಯವರೆಗೂ ನಾಟಕವನ್ನು ನಿರೀಕ್ಷಿಸುತ್ತಿದ್ದರು. ಅದರಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಶ್ರೀಗಳು ಕೊಡುವ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ಅಳವಡಿಸಿಕೊಂಡು, ಮುಂದಿನ ಪ್ರಯೋಗ ನಡೆಯುವ ರೂಢಿ ಹಾಕಿಕೊಂಡರು. ಪ್ರಥಮ ಪ್ರಯೋಗಕ್ಕೆ ಸಂದಾಯವಾದ ಹಣವನ್ನು ಶ್ರೀಗಳ ಚರಣಗಳಲ್ಲಿ ಅರ್ಪಿಸುತ್ತಿದ್ದರು. ಈ ಪ್ರಕಾರ ಬಂದ ನಾಟಕದ  ಹಣದಿಂದ ಶ್ರೀಗಳು ದೊಡ್ಡ ದೊಡ್ಡ ಹಂಡೆ,  ತಪೇಲಿ, ಕಡಾಯಿ ಮುಂತಾದ ಭಾಂಡೆ ಸಾಮಾನುಗಳನ್ನು ಖರೀದಿಸಿ ಅವುಗಳ ಮೇಲೆ ನಾಟಕ ಕಂಪನಿ ದೇಣಿಗೆ ಅಂತಾ ಬರೆಸಿದ್ದಾರೆ. ಆ ಭಾಂಡೆಗಳು ಈಗಲೂ ದೊಡ್ಡ ಅಡಗಿ ಮನೆಯಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೆ ಜಾತ್ರೆ ಕಾಲಕ್ಕೆ ಅನ್ನ ಸಂತರ್ಪಣೆಗೂ  ವಿನಿಯೋಗಿಸುತ್ತಿದ್ದರು. ಇದರ ಹೊರತಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಸಂಘ ಸಂಸ್ಥೆಗಳಿಗೂ  ಹಣಕಾಸಿನ ಸಹಾಯ ಮಾಡಲು ಪ್ರೇರಣೆ ನೀಡಿ, ಧರ್ಮಾರ್ಥ ನಾಟಕ ಪ್ರಯೋಗಗಳನ್ನು ಶ್ರೀಗಳೇ  ಮಾಡುಸುತ್ತಿದ್ದರು. ಈ ನಾಟಕ ಕಂಪನಿಯು ಸುತ್ತಲಿನ ಊರುಗಳಾದ  ಗದಗ, ಅಣ್ಣಿಗೇರಿ, ನವಲಗುಂದ, ಹಾವೇರಿ, ರಾಣೇಬೆನ್ನೂರ, ಹರಿಹರ ಮುಂತಾದ ಕಡೆ ಸಂಚಾರ ಮಾಡುತ್ತಿತ್ತು. ಈ ಎಲ್ಲ ನಾಟಕಗಳಲ್ಲಿ ಪ್ರಪಂಚ ಪರೀಕ್ಷೆ ಎಂಬ ನಾಟಕವು ಜಯಭೇರಿ ಬಾರಿಸಿತು. ಇದರಲ್ಲಿ ವಿಶೇಷ ಸನ್ನಿವೇಶವೇನೆಂದರೆ ರಾಜಾ ಭರ್ತೃ ಹರಿಯು ಮಾನಸಿಕ ಜಾರಿಣಿಯಾದ ಕಿರಿಯ ಹೆಂಡತಿಯ  ಬಗ್ಗೆ ಜಿಗುಪ್ಸೆಗೊಂಡು, ಗಂಡನು ಸತ್ತ ಸುದ್ದಿ ಕೇಳಿದ ತಕ್ಷಣ ಪ್ರಾಣ ಬಿಡುವಾಕೆ  ಮಹಾಪತಿವ್ರತೆ ಅಂತಾ ಹೇಳುತ್ತಿದ್ದ ಪಟ್ಟದರಾಣಿ ಭಾನುಮತಿಯ ಪಾತಿವ್ರತ್ಯ ಪರೀಕ್ಷಿಸಲು ಮುಂದಾದರು. ಬೇಟೆಗೆ ಹೋದಾಗ ಕಾಡು ಪ್ರಾಣಿಗಳಿಂದ ರಾಜನು ಸತ್ತ ಅಂತಾ ರಕ್ತಸಿಕ್ತ ಅರಿವೆಗಳನ್ನು ತಂದು ಸೇವಕನು ಗೋಗರೆದು ಆಳುವ ನಟನೆಗೆ ತಿಳಿದುಕೊಳ್ಳದೆ ಭಾನುಮತಿಯು  ಮೂರ್ಛಿತಳಾಗಿ ಪ್ರಾಣ ಬಿಟ್ಟಳು. ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಸ್ಮಶಾನದಲ್ಲಿ ಕಟ್ಟಿಗೆ ಮೇಲೆ ಇಡುತ್ತಲೇ ಓಡಿ ಬಂದ ಭರ್ತೃಹರಿಯ ದುಃಖಕ್ಕೆ ಪಾರವೇ ಇರಲಿಲ್ಲ. ಸ್ಟೇಜಿನ ಮೇಲೆ ಆ ಶವದ ಮುಂದೆ ಭರ್ತೃಹರಿ ಅಳುತ್ತಿದ್ದ ಸನ್ನಿವೇಶ, ಮುಂದೆ ಆತನಲ್ಲಿ ಪ್ರಪಂಚಾಕಾರ ವೃತ್ತಿಯನ್ನು ಪರಾವರ್ತನೆಗೊಳಿಸಿದ ಗೋರಖನಾಥನ  ಪಾತ್ರ, ವೈರಾಗ್ಯಶಾಲಿಯಾಗಿ ಭಿಕ್ಷುಕ ವೇಷಧಾರಿಯಾದ ಭರ್ತೃಹರಿಯ ಸನ್ನಿವೇಶ, ಭಕ್ತಿಜ್ಞಾನ ವೈರಾಗ್ಯದ ಲಕ್ಷಣಗಳು ಪ್ರೇಕ್ಷಕರನ್ನು ಬಹಳ ಆಕರ್ಷಿಸಿ ಸ್ಟೇಜಿನತ್ತ ತೂರಿದ ದುಡ್ಡಿನ ರಾಶಿಯು ಮನೋಹರವಾಗುತ್ತಿತ್ತು. ಇದರ ಅರ್ಧಭಾಗ ಶ್ರೀಗಳ ಚರಣಗಳಿಗೆ ಅರ್ಪಿತವಾಗುತ್ತಿದ್ದುದು ಅವರ್ಣನೀಯವಾಗಿತ್ತು.


ಕಾರಣಾಂತರಗಳಿಂದ ನಾಟಕ ಕಂಪನಿಯು  ಬಂದಾಯಿತು. ಭಕ್ತಿ, ಜ್ಞಾನ, ವೈರಾಗ್ಯ ಭರಿತ  ನಾಟಕಗಳನ್ನು ಆಡಿದ್ದರಿಂದ ಆಧ್ಯಾತ್ಮ ಚಿಂತನೆ ಕಲಾಕಾರರಿಗೆ ಜಾಗೃತಿಯಾಯಿತು. ಇವರೆಲ್ಲರೂ ಪ್ರತಿನಿತ್ಯ ಮಠದಲ್ಲಿ ಬಂದು ಭಜನೆ, ಕೀರ್ತನ, ಪ್ರವಚನ ಇತರೇ  ಸೇವೆಗಳಲ್ಲಿ ಭಾಗವಹಿಸತೊಡಗಿದರು. ನಾಟಕ ಮಾಸ್ತರ ಕಾಪಸೆ ಹನುಮಂತಪ್ಪ ಶ್ರೀಗಳ ಮಠದಲ್ಲಿ ಸಂಗೀತಯುಕ್ತ ಕೀರ್ತನ ಪ್ರವಚನ ಮಾಡತೊಡಗಿದರು. ಸದ್ಗುರುಗಳ ಕೃಪೆಯಿಂದ ಉಭಯ ಗಾನವಿಶಾರದ ಅಂತ ಮೈಸೂರು ಮಹಾರಾಜರಿಂದ ಬಿರುದನ್ನು ಪಡೆದರು. ಮಾರ್ಗಶಿರ ಮಾಸದಲ್ಲಿ ಗೀತಾ ಜಯಂತಿ ದಿನ ರಾಮ ರಾಮ ಅಂತ ಉಚ್ಚರಿಸುತ್ತಾ, ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರು ನನ್ನನ್ನು ಕರೆದೊಯ್ಯುತ್ತಿರುವರು ಅಂತಾ ಅವರ ಪ್ರಾಣಪಕ್ಷಿಯು  ಸದ್ಗುರು ಚರಣಗಳಲ್ಲಿ ಐಕ್ಯತೆಯಾಯಿತು. ಆ ಸಮಯಕ್ಕೆ ಪ್ರತಿವರ್ಷ ಗುರುಭಜನಾ ಸಪ್ತಾಹ ಕಾರ್ಯ ಕ್ರಮವು ಸುಮಾರು ೫೦ ವರ್ಷಗಳಿಂದಲೂ  ಕಾಪಸೆ ರಾಂಭೋ ಅವರು ನಡೆಸುತ್ತಾ ಬಂದಿದ್ದಾರೆ. ಅವರ ತಂದೆಯವರಂತೆ ಅವರೂ ಸಹ ಶ್ರೀಗಳ ಮಠದಲ್ಲಿ ಆಸ್ಥಾನದಲ್ಲಿ ಕೀರ್ತನ ಸೇವೆ ಮಾಡುತ್ತಿಲಿದ್ದಾರೆ. 


ಇದೇ ಪ್ರಕಾರ ಇನ್ನೊಬ್ಬ ಕಲಾಕಾರ ಶ್ರೀ ಹನುಮಂತಪ್ಪ ಕ್ಷೀರಸಾಗರ ಇವರು ಹಳ್ಳಿಹಳ್ಳಿಗೆ ಹೋಗಿ, ಸದ್ಗುರು ಹಾಕಿಕೊಟ್ಟ ಮಾರ್ಗದ  ಪ್ರಕಾರ ಹರಿಭಜನೆ ಕೀರ್ತನ ಸೇವೆಯನ್ನು ಅಂತ್ಯಕಾಲದವರೆಗೆ ಮಾಡಿದರು. ಇನ್ನೊಬ್ಬ ಹಾಸ್ಯ ಕಲಾಕಾರ ಶ್ರೀ ಗಂಗಾಧರಪ್ಪ ಸೋಮಸಾಳೆ  ಇವರು ಸಹ ಹಳೇಹುಬ್ಬಳ್ಳಿ ಶ್ರೀ ತುಳಜಾಭವಾನಿ ಗುಡಿಯಲ್ಲಿ ದಸರಾದಲ್ಲಿ, ಶ್ರಾವಣದಲ್ಲಿ ಪುರಾಣ ಪ್ರವಚನ ಮಾಡುತ್ತಾ ಇದ್ದರು. ಶ್ರೀ ಆನಂದಪ್ಪ ತಾಂಬೆ, ಶ್ರೀ ಗಂಗಪ್ಪ ಆತಡಕರ ಇವರು ಶ್ರೀದೇವಿ ಪುರಾಣವನ್ನು ಪದ್ಯರೂಪದಲ್ಲಿ ಗಾಯನ ಮಾಡುತ್ತಿದ್ದರು.


🙏 ಕಲಾಕಾರರು ಯೋಗಿರಾಜನಾದದ್ದು 🙏


ಈ ನಾಟಕ ಕಂಪನಿಯ ವಿವಿಧ ನಾಟಕಗಳಲ್ಲಿ ಸ್ತ್ರೀ ಪಾತ್ರ ಹಾಗೂ ಋಷಿ ಪಾತ್ರವನ್ನಾಡಿ ಪ್ರೇಕ್ಷಕರನ್ನಾಕರ್ಷಿಸಿದ ಕಲಾಕಾರರಾದ ಶ್ರೀ ಗಂಗಪ್ಪ ತಿಪ್ಪಣ್ಣ ಕ್ಷೀರಸಾಗರ ಇವರು ಸಾಮಾನ್ಯ ನೇಕಾರರಾದರೂ,  ಕೇವಲ ಮೂರನೇ ಇಯತ್ತೆಯ  ವರೆಗೆ ಅಭ್ಯಾಸ ಮಾಡಿದವರಿದ್ದರೂ. ಸದ್ಗುರು ಸೇವೆಯಲ್ಲಿ ಕಾಲ ಕಳೆಯುತ್ತಿದ್ದರು. ಸದ್ಗುರುವಿನ ಕೃಪೆಗೆ ಪಾತ್ರರಾಗಿ ಶಮೆ, ದಮೆ, ಸಾಧನಗಳಿಂದ ಯೋಗಿಗಳಾದರು.


ಭಜನಾ ಸಂಘ ಸ್ಥಾಪನೆ ಮಾಡಿ, ಪ್ರತಿನಿತ್ಯ ಹರಿಭಜನ ಶಾಸ್ತ್ರ ಪ್ರವಚನ ಜೊತೆಗೆ ತಾವು ಆಡಿದ ನಾಟಕಗಳ ಕಥೆಗಳನ್ನು ಪದ ಪದ್ಯಗಳಲ್ಲಿ ರಚಿಸಿ, ಭಕ್ತಿ ಜ್ಞಾನ ವೈರಾಗ್ಯಭರಿತ ಕೀರ್ತನೆಗಳನ್ನು ಮಾಡುತ್ತಾ, ಕೀರ್ತನ ಕಂಠೀರವ ಅಂತಾ ಬಿರುದಾಂಕಿತ ಪಡೆದರು. ಕೀರ್ತನ ಹೇಳುವಾಗ ಶೃಂಗಾರ ರಸ, ರೌದ್ರ ರಸ, ಶೋಕ ರಸ, ಭಕ್ತಿ ರಸಗಳ ಹಾವಭಾವಗಳಿಂದಲೂ, ಯೋಗಿಗಳಾಗಿದ್ದರಿಂದ ತದೇಕಚಿತ್ತತೆಯಿಂದ ನಿರ್ವಿಕಲ್ಪ ಸಮಾಧಿಸ್ಥಿತಿಯಿಂದಲೂ,  ತನ್ಮಯತೆಯಿಂದ ಮಾಡುತ್ತಿದ್ದ ಕೀರ್ತನೆಗಳನ್ನು ಸಹಸ್ರ ಸಹಸ್ರ ಶೋತೃಗಳು ಕೇಳುತ್ತಾ ಆಶ್ಚರ್ಯ ಚಕಿತರಾಗುತ್ತಿದ್ದರು. ಹುಬ್ಬಳ್ಳಿಯಲ್ಲಿ ಅಲ್ಲಲ್ಲಿ ಹಾಗೂ ಗದಗ ಬೆಟಗೇರಿ, ಹುಲಕೋಟಿ, ಲಕ್ಷ್ಮೀಶ್ವರ, ಹೊಳಲು, ದಾವಣಗೆರೆ ಮುಂತಾದ ಕಡೆ ಇವರಿಗೆ ಭಕ್ತರಾದರು. ಅಷ್ಟೇ ಅಲ್ಲದೆ ಇವರ ಭಕ್ತರಲ್ಲಿ ಕೆಲವರು ಸದ್ಗುರುವಿನ ಧ್ಯಾನ ಮಾಡುತ್ತ ಮಾಡುತ್ತ ಸ್ಥಿತಪ್ರಜ್ಞಾವಸ್ಥೆ ಪಡೆದುಕೊಂಡು ಮಹಾತ್ಮರ ಸಾಲಿಗೆ ಸೇರಿದರು. ಪ್ರೊ. ಬ್ರ. ಶ್ರೀ ಬಸವಂತಾಚಾರ್ಯರು ಕಲ್ಪದ್ರುಮವನ್ನು ರಚಿಸುವಾಗ ಅವರ ಪದ್ಯಗಳನ್ನು ಹಾಡುವಾಗ, ಅದರಲ್ಲಿ ಕಂಡುಬರುವ ಶಿಥಿಲತೆಯನ್ನು ಅವರ ಗಮನಕ್ಕೆ ತಂದು, ತಿದ್ದುಪಡಿ ಮಾಡಲು ಸಹಾಯಕರಾಗಿದ್ದರು. ಕೇವಲ ಮೂರನೇ ಇಯತ್ತೆ ಕಲಿತ ಒಬ್ಬ ನೇಕಾರ ಕಲಾಕಾರನು, ಸದ್ಗುರುವಿನ ಕೃಪೆಯಿಂದ ಸಂಸ್ಕೃತ ಗ್ರಂಥಗಳಾದ ಉಪನಿಷತ್, ಹಿಂದಿಯಲ್ಲಿಯ  ವೇದಾಂತ ಗ್ರಂಥ ಹಾಗೂ ಹಳಗನ್ನಡದ ನಿಜಗುಣ ಶಿವಯೋಗಿಗಳ ಶಾಸ್ತ್ರ ಪದ್ಯರೂಪ ಗ್ರಂಥದಲ್ಲಿಯ  ವಿಷಯವನ್ನು ಸರಳಗನ್ನಡದಲ್ಲಿ ಶ್ರವಣ ಮಾಡುಸುವ ವಿದ್ವತ್  ಪ್ರಾಪ್ತಿಯಾಗಿದ್ದುದು, ಭಕ್ತಿ ಜ್ಞಾನ ವೈರಾಗ್ಯ ಪರ ಕೀರ್ತನೆಗಳಿಂದ ಆಧ್ಯಾತ್ಮ ಚಿಂತನೆ ಜಾಗೃತಿ ಮೂಡಿ ತಮ್ಮ ೯೨ ವರ್ಷಗಳ ಅಖಂಡ ಬ್ರಹ್ಮಚರ್ಯಯಿಂದ ಧೀಮಂತ ಬ್ರಹ್ಮಜ್ಞಾನಿ ಯಾಗಿದ್ದುದು ಸರ್ವರ ಸ್ಮೃತಿ ಪಟಲದ ಮೇಲೆ ಅಚ್ಚಳಿಯದಂತೆ ಉಳಿದಿರುತ್ತದೆ.


ಪ್ರತಿನಿತ್ಯದಂತೆ ಶ್ರೀಗಳ ಸಮಾಧಿ ದರ್ಶನ ಪಡೆದು, ತಮ್ಮ ಭಜನಾ ಸಂಘದ ಸದಸ್ಯರಾದ ತಮ್ಮ ನರಸಪ್ಪ ಕ್ಷೀರಸಾಗರ, ಗಂಗಪ್ಪ ಆತಡಕರ, ಕೀರಪ್ಪ ಬಗಾಡೆ, ತಿಮ್ಮಪ್ಪ ನಾಗಳ್ಳಿ, ಗುರಪ್ಪ ನಾಝರೆ ಇವರೊಂದಿಗೆ ಗಂಗಾಧರಪ್ಪ ಕ್ಷೀರಸಾಗರ ಇವರ ಮೈಮೇಲಿನ ಉಟ್ಟ ಬಟ್ಟೆಯ  ಮೇಲೆ ಗೋಕರ್ಣದತ್ತ ಪಾದಯಾತ್ರೆ ಮಾಡಿದರು. ಮಾರ್ಗದುದ್ದಕ್ಕೂ ಓಂ ನಮಃ ಶಿವಾಯ ಭಜನೆ ಮಾಡುತ್ತ ಊರಿಂದೂರಿಗೆ ಹೋಗುವಾಗ ಅಲ್ಲಲ್ಲಿ ಭಾವುಕತೆಯುಳ್ಳವರು ಅವರೆಲ್ಲರಿಗೂ ಉಪಹಾರ, ಊಟ ಮಾಡಿಸುವ ಜೊತೆಗೆ ದಕ್ಷಿಣೆ ಸಹ ಕೊಡುತ್ತಿದ್ದರು. ಯಲ್ಲಾಪುರ ದಾಟಿ ಹುಲಿ ಬೆಟ್ಟಕ್ಕೆ ತಲುಪುತ್ತಲೇ, ಅಲ್ಲಲ್ಲಿ ಹುಲಿಗಳ ಘರ್ಜನೆ ಕೇಳುತ್ತಾ, ಅವರಿಗೆ ಭಯ ಆವರಿಸಿತು. ಮುಂದೆ ಸಾಗಲಿಕ್ಕಾಗದೆ  ಕಾಲುಗಳಲ್ಲಿ ನಡುಕ ಹುಟ್ಟಿತು. ಅಲ್ಲಿಯೇ ರಸ್ತೆ ಮೇಲೆ ಸ್ವಸ್ತಿಕ ಹಾಕಿ ಓಂ ನಮಃ ಶಿವಾಯ ಅಂತಾ ಬರದು ಏರುಧ್ವನಿಯಿಂದ ಭಜನೆ ಮಾಡುತ್ತ ಶ್ರೀಮದ್ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಹಾರಾಜ ಕೀ ಜಯ  ಅಂತಾ ಜಯಘೋಷ ಹಾಕಿದರು. ಎದುರಿನ ಪೊದೆಯಿಂದ ಹೊರಬಿದ್ದ ಭಯಂಕರ ಹುಲಿಯು  ನೆಟ್ಟ ದೃಷ್ಟಿಯಿಂದ ಇವರತ್ತ  ಠಣ್ಣನೆ ಹಾರಿದ ತಕ್ಷಣ ಹೇ ಹೇ ಜಂಗಲಕಾ ಬೇಟಾ ರುಕ್ ರುತ್ ಅಂತ ಉದ್ದಂಡ ದೇಹವುಳ್ಳ ಕಾವಿ ಭಗವಾ ಹಾಕಿಕೊಂಡ ಸಾಧುವು ಅಲ್ಲಿ ಪ್ರತ್ಯಕ್ಷವಾಗಿ ತನ್ನ ತ್ರಿಶೂಲದಿಂದ ಆ ಹುಲಿಯನ್ನು ತಿವಿಯುತ್ತ ಜಂಗಲದಲ್ಲಿ ಓಡಿಸಿದನು. ಹಾಗೆಯೇ ಇವರನ್ನು ಗೋಕರ್ಣದವರೆಗೆ ಹಿಂಬಾಲಿಸಿದನು. ಸಾಧು ಚಕ್ರವರ್ತಿ ಸದ್ಗುರು ಶ್ರೀ ಸಿದ್ಧಾರೂಢರೇ  ಸಾಧುವಿನ ರೂಪದಿಂದ ಬಂದು ನಮ್ಮೆಲ್ಲರನ್ನೂ ರಕ್ಷಿಸಿದನು ಅಂತಾ ಹೇಳುವಾಗ ಇವರಲ್ಲಿ ಅಶ್ರುಧಾರೆಗಳು ಧಾರಾಕಾರವಾಗಿ ಉದುರುತ್ತಿದ್ದವು. ಇದರಂತೆ ಅನೇಕ ಘಟನೆಗಳು ಜರುಗಿದ್ದವುಗಳನ್ನು ಹೇಳುತ್ತಿದ್ದುದು ಅವಿಸ್ಮರಣೀಯವಾಗಿದೆ.

ಸಾಧು ಚಕ್ರವರ್ತಿ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರು ಹವ್ಯಾಸಿ ಕಲಾವಿದರನ್ನು ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಸಿ  ಜಗದೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದುದು ಪ್ರಾತಃಸ್ಮರಣೀಯರಾಗಿದ್ದಾರೆ.

👇👇👇👇👇👇👇👇👇👇👇👇👇👇

 ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ ಬೇರೆರಿಗೂ share ಮಾಡಿ, ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಗೋವಾ ಮತ್ತು ತಮಿಳುನಾಡಿನಲ್ಲಿ ಸಿದ್ದಾಶ್ರಮ ಸ್ಥಾಪನೆ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ