ಸ್ತ್ರೀಯು ಸಿದ್ಧಾರೂಢರಿಗೆ ವಿಷ ಕೊಟ್ಟಾಗ ಅವರು ಗುಣವಾಗಿ ಅವಳೇ ಸತ್ತು ಹೋದ ಕಥೆ
☘️ಸಿದ್ಧಾರೂಢರಿಗೆ ವೃದ್ಧೆಯಿಂದ ವಿಷದ ಊಟ
ಸಿದ್ಧಾಶ್ರಮದಲ್ಲಿ ದಯಾಘನರಾದ ಸಿದ್ಧಾರೂಢರು ವಿರಾಜಮಾನರಾಗಿರುವಾಗ ಅನೇಕ ಪ್ರೇಮಳ ಭಕ್ತ ಜನರು, ಇವರನ್ನು ಪಲ್ಲಕ್ಕಿಯೊಳಗೆ ಕೂಡ್ರಿಸಿ, ಹುಬ್ಬಳ್ಳಿ ನಗರದಲ್ಲೆಲ್ಲಾ ಉತ್ಸವದಿಂದ ಮೆರೆಯಿಸುವ ಸಮಯದಲ್ಲಿ, ಇದನ್ನು ನೋಡಿ ದುರ್ಮನಸ್ಯರಾದವರಿಗೆ ಬಹಳ ತಳಮಳವಾಗುತ್ತಿತ್ತು. ಉಪ್ಪಿನ ಬಸಪ್ಪನೆಂಬ ಲಿಂಗಾಯತರು ಹುಬ್ಬಳ್ಳಿಯಲ್ಲಿರುವರು. ಆತನಿಗೆ ಸಿದ್ಧಾರೂಢರ ಮೇಲೆ ಬಹಳ ಭಕ್ತಿ ಇದ್ದು, ನಿತ್ಯದಲ್ಲಿ ದರ್ಶನಕ್ಕೋಸ್ಕರ ಬರುವನು. ಆತನ ಮನೆಯ ಸಮೀಪ ಪ್ರಸಿದ್ಧವಾದ ರುದ್ರಾಕ್ಷ ಮಠವೆಂಬುದಿರುವದು. ಹೀಗಿರುತ್ತಾ, ಸದ್ಗುರುಗಳನ್ನು ಆ ಮಠದಲ್ಲಿ ಕರೆದುಕೊಂಡು ಬಂದು ಪೂಜಿಸಬೇಕೆಂಬ ಉತ್ಕಟ ಇಚ್ಚಾ ಆತನಿಗೆ ಉತ್ಪನ್ನವಾಯಿತು. ಶಿವರಾತ್ರಿಯ ಪುಣ್ಯ ದಿವಸದಲ್ಲಿ ಪ್ರತಿವರ್ಷ ಆ ಮಠದಲ್ಲಿ ಉತ್ಸವದಿಂದ ಸದ್ಗುರುಗಳನ್ನು ಕರೆದುಕೊಂಡು ಹೋಗಿ, ಬಸಪ್ಪನು ಬಹು ಆದರದಿಂದ ಪೂಜಿಸುವನು. ಎಷ್ಟೋ ವರ್ಷಗಳು ಹೀಗೆಯೇ ನಡೆಯುತ್ತಿರುವಾಗ, ಕೆಲವು ಜನ ಲಿಂಗಾಯತರಿಗೆ ಮತ್ಸರ ಬುದ್ದಿ ಹುಟ್ಟಿ, - “ಈ ಸಿದ್ಧನಿಗೆ ಲಿಂಗವಿಲ್ಲದಿದ್ದು, ಈತನು ಮಠದೊಳಗೆ ಬಂದು, ಮಠವನ್ನು ಭ್ರಷ್ಟ ಮಾಡುತ್ತಾನೆ.” ಎಂದು ಅಂದುಕೊಂಡು, ಇತರ ಜನರಿಗೆ ಹೋಗಿ ಹೇಳುತ್ತಾರೆ, - “ನೋಡಿರಿ, ರುದ್ರಾಕ್ಷಮಠದಲ್ಲಿ ಸಿದ್ಧನು ಬಂದನೆಂದರ ನಮ್ಮ ಧರ್ಮಕ್ಕೆ ಕೊರತೆ ಬರುವುದು. ಆದ್ದರಿಂದ ಆತನು ಬಾರದಂತೆ ಪ್ರತಿಬಂಧಕ ಮಾಡತಕ್ಕದ್ದು.” ಒಂದು ವರ್ಷ ಶಿವರಾತ್ರಿ ಉತ್ಸವ ಸಮೀಪ ಬಂದಾಗ, ಸಿದ್ಧಾರೂಢರನ್ನು ರುದ್ರಾಕ್ಷಮಠದಲ್ಲಿ ಕರೆತಂದು ಪೂಜಿಸುವದಕ್ಕೆ ಬಸಪ್ಪನು ಸಿದ್ಧ ಮಾಡುತ್ತಿದ್ದನು . ಆಗ ದುರ್ಜನರು ಬಂದು ಬಸಪ್ಪನನ್ನು ಕುರಿತು, - “ನಾವು ಪೂಜಾ ಮಾಡಗೊಡುವದಿಲ್ಲ. ಆ ಭವಿಯನ್ನು ಇಲ್ಲಿಗೆ ಕರೆದುಕೊಂಡು ಬಂದಿಯೆಂದರೆ ಆತನಿಗೆ ಇಲ್ಲಿಂದ ಜೀವಂತವಾಗಿ ಹೋಗಗೊಡುವದಿಲ್ಲ,” ಎಂದು ಹೇಳಿದರು. ಇದನ್ನು ಕೇಳಿ ಬಸಪ್ಪನಿಗೆ ಬಹಳ ದುಃಖವಾಯಿತು. ಆತನು ಸಿದ್ದಾರೂಢರ ಕಡಗೆ ಬಂದು, ದುರ್ಜನರ ಈ ಹೇತುವನ್ನು ನಿವೇದಿಸಿದಾಗ ಶ್ರೀ ಸಿದ್ದರು - “ಜನರಿಗೆ ದುಃಖವಾಗುವದಾದರೆ, ರುದ್ರಾಕ್ಷಿಮಠದಲ್ಲಿ ಪೂಜೆಯನ್ನು ಮಾಡಬೇಡ,” ಅಂದರು. ಇಷ್ಟರಲ್ಲಿ ಸರ್ಕಾರಿ ಅಧಿಕಾರಿ ಬಂದು,-" 'ಸ್ವಾಮಿಯವರಿಗೆ ರುದ್ರಾಕ್ಷಿಮಠದಲ್ಲಿ ದರವರ್ಷ ಪೂಜೆ ಮಾಡುವಂತೆ ಮಾಡಿರಿ. ಅಡ್ಡಿ ಮಾಡುವವರಿಗೆ ನಾವು ನಿವಾರಿಸುವೆವು" ಎಂದು ಹೇಳಿದ್ದು ಕೇಳಿ ಬಸಪ್ಪನಿಗೆ ಬಹಳ ಆನಂದವಾಯಿತು. ಆಗ ಆ ಅಧಿಕಾರಿಯು ಲಷ್ಕರ ತಗೊಂಡು ಬಂದನು, ಮತ್ತು ಉತ್ಸವವು ಬಹು ಸಂಭ್ರಮದಿಂದ ರುದ್ರಾಕ್ಷಿಮಠಕ್ಕೆ ಮುಟ್ಟಿತು. ಸಶಸ್ತ್ರ ಶಿಪಾಯಿಗಳನ್ನು ನೋಡಿ, ದುರ್ಜನರೆಲ್ಲಾ ಅಲ್ಲಿಂದಲ್ಲೇ ಅಡಗಿದರು. ಸಿದ್ಧಾರೂಢರನನ್ನು ಬಹು ವೈಭವದಿಂದ ಪೂಜಿಸಿ, ಬಸಪ್ಪನು ಉತ್ಸವದಿಂದ ಮಠಕ್ಕೆ ಮುಟ್ಟಿಸಿದನು.
ತಮ್ಮ ಪ್ರಯತ್ನಗಳೆಲ್ಲಾ ನಿಷ್ಪಲವಾದವೆಂದು, ಆ ದುರ್ಜನರು ಬಹಳ ತಳಮಳಿಸುತ್ತ, ಅವರೆಲ್ಲರೂ ಕವದೀ ಮಠದಲ್ಲಿ ಒಟ್ಟುಕೂಡಿ ವಿಶೇಷ ವಿಚಾರವನ್ನು ಮಾಡಲಾರಂಭಿಸಿದರು. ಒಬ್ಬನನ್ನುತ್ತಾನೆ- “ಆ ಭವಿಯನ್ನು ಬಿಡಬಾರದು. ಹಿಡಿದುಕೊಂಡು ಬಂದು ಕೊಂದೇ ಬಿಡಬೇಕು. ಇವನನ್ನು ಜೀವದಿಂದ ಇರಗೊಟ್ಟರೆ, ನಮ್ಮ ಲಿಂಗಾಯತ ಧರ್ಮವನ್ನು ಈತನು ಸಂಪೂರ್ಣವಾಗಿ ನಾಶಮಾಡುವನು. ಕೆಲವು ಮೂಢ ಲಿಂಗಾಯತರನ್ನು ಮತಿಕೆಡಿಸಿ, ಇವನು ಧರ್ಮ ನಾಶ ಮಾಡುತ್ತಾನೆ. ಇದನ್ನು ನೋಡಿ, ನೋಡಿ, ಸುಮ್ಮನಿದ್ದರೆ, ಬಸವಣ್ಣನು ನಮ್ಮ ಮೇಲೆ ಕ್ಷೋಭೆಗೊಳ್ಳುವನು' ಇದಕ್ಕೆ ಮತ್ತೊಬ್ಬನು “ಆತನನ್ನು ಕೊಲ್ಲಲಿಕ್ಕೆ ನಮಗೆ ವೇಳೆ ಹಿಡಿಯುವದಿಲ್ಲ. ಊಟಕ್ಕೆ ಕರೆದರೆ ಯಾರ ಮನೆಗಾದರೂ ಆತನು ಬರುತ್ತಾನೆ” ಎಂದು ಹೇಳಲು, ಮೂರನೆಯವನು, -“ಹಾಗಾದರೆ ನಾನು ಆತನ ಭಕ್ತನೆಂದು ತೋರಿಸಿಕೊಂಡು, ಊಟಕ್ಕೆ ಕರೆದುಕೊಂಡು ಬಂದು ಇದೇ ಮಠದೊಳಗೆ ನಮ್ಮ ಮನೋರಥವನ್ನು ತೀರಿಸಿಕೊಳ್ಳುವಾ,” ಎಂದು ಹೇಳಿದನು. ಈ ಭಾಷಣವನ್ನು ಕೇಳಿ, ಎಲ್ಲರಿಗೂ ಸಂತೋಷವಾಗಿ, -"ಇನ್ನು ಮೇಲೆ ಆರೂಢವೆಂಬ ನಾಮವೇ ಉಳಿಯದಂತೆ ಅದನ್ನು ಅಳಿಸಿ ಬಿಡುವೆವು, " ಎಂದು ನುಡಿದರು. ಒಂದು ದಿನ ಸಂಜೆ ಹೊತ್ತಿಗೆ, ಒಬ್ಬ ಲಿಂಗಾಯತನು ಸ್ವಾಮಿಯವರ ಬಳಿಗೆ ಬಂದು, ಸದ್ಭಾವದಿಂದ ನಮಸ್ಕರಿಸಿ, ಮಧುರ ವಾಣಿಯಿಂದ ಅನ್ನುತ್ತಾನೆ- “ಹೆ ಮಹಾಪ್ರಭೂ, ಸದ್ಗುರುರಾಯರೇ, ನಿಮ್ಮ ಚರಣಕ್ಕೆ ದೈನ್ಯ ಭಾವದಿಂದ ನಾನು ಪ್ರಾರ್ಥಿಸುವದೇನೆಂದರೆ - ದೀನನಾದ ನನ್ನ ಮೇಲೆ ಕೃಪಾಮಾಡಿ, ನಮ್ಮ ಗೃಹಕ್ಕೆ ಭೋಜನಕ್ಕೆ ಬರಬೇಕು,” ಇದನ್ನು ಕೇಳಿ, ಸದ್ಗುರುಗಳು, - 'ನಾನು ರಾತ್ರಿಯಲ್ಲಿ ಎಂದೂ ಉಣ್ಣುವದಿಲ್ಲ. ಬೇಕಾದರೆ ನಾಳೆ ಪ್ರಾತಃಕಾಲಕ್ಕೆ ನಿನ್ನಲ್ಲಿಗೆ ಬರುವೆನು,” ಎಂದು ಅಂಧರು. ಆಗ ಆತನು ಸದ್ಗದಿತನಾಗಿ, - “ನಿಮ್ಮನ್ನು ಇವತ್ತು ಪೂಜಿಸಲಿಕ್ಕೇಬೇಕೆಂದು ನಮ್ಮಲ್ಲಿ ಎಲ್ಲರೂ ಆತುರವುಳ್ಳವರಾಗಿರುತ್ತಾರೆ. ಪೂಜೆಗೆ ವೇಳೆ ಹಿಡಿಯಲಿಕ್ಕಿಲ್ಲ. ಏನಾದರೂ ಅಲ್ಪ ಪ್ರಸಾದವನ್ನು ತೆಗೆದುಕೊಂಡು ನೀವು ಶೀಘ್ರವಾಗಿ ಮಠಕ್ಕೆ ತಿರುಗಿ ಬರಬಹುದು. ಈ ಹೊತ್ತು ನೀವು ಬಾರದಿರಲು ನಮ್ಮಲ್ಲಿ ಯಾರೊಬ್ಬರೂ ಉಣಲಾರರು. ದೀನನ ಮೇಲೆ ಕೃಪೆ ಮಾಡಬೇಕು,'' ಎಂದು ಆಡಿದ ಕರುಣಾ ವಚನವನ್ನು ಕೇಳಿ ಆ ಭೋಳಾನಾಥನು, ಆ ಮನುಷ್ಯನ ಅಭಿಪ್ರಾಯವನ್ನು ವಿಚಾರಿಸದೆ, ತತ್ಕಾಲವೇ ಹೊರಟನು. ಮಠದೊಳಗಿದ್ದ ಇತರ ಶಿಷ್ಯರಿಗೆ ಆತನು ಊಟಕ್ಕೆ ಕರೆಯದೇ, ಸಿದ್ಧಾರೂಢರನ್ನು ಮಾತ್ರ ಕವದಿ ಮಠಕ್ಕೆ ಕರೆದುಕೊಂಡು ಹೋದನು. ಒಂದು ಖೋಲಿಯೊಳಗೆ ಕೂಡ್ರಿಸಿ ಬರುತ್ತೇನೆಂತ ಹೇಳಿ ಆತನು ಹೊರಗೆ ಬಂದು ಬಾಗಿಲು ಎಳೆದುಕೊಂಡು ಕೀಲಿ ಹಾಕಿಬಿಟ್ಟನು. ಸಿದ್ದರು ಒಳಗೆ ಸಿಕ್ಕರಂದು ಆ ದುರ್ಜನರಿಗೆ ಬಹಳ ಆನಂದವಾಗಿ - “ರಾತ್ರಿಯೊಳಗೆ ಈ ಭವಿಗೆ ಯಮವುರಿಗೆ ಕಳುಹಿಸೋಣ," ಎಂದು ಅಂದು, ಮಧ್ಯರಾತ್ರಿಯಾಗುವ ದಾರಿ ನೋಡಿ ಸ್ವಸ್ಥ ಹೊರಗೆ ಕುಳಿತರು. ಖೋಲಿಯೊಳಗಿದ್ದ ಸಿದ್ದನಾಥರು, ಜ್ಞಾನದೃಷ್ಟಿಯಿಂದ ಸರ್ವವನ್ನು ತಿಳಿದು ಮನಸ್ಸಿನಲ್ಲಿ ವಿಚಾರಿಸುತ್ತಾರೆ, -“ಈ ಮೂರ್ಖರಿಗೆ ಏನು ಮಾಡಬೇಕಾದೀತು ? ಇವರು ಅಜ್ಞಾನಿಗಳಿದ್ದು ತಮ್ಮ ಹಾನಿಯನ್ನು ತಾವು ತಿಳಿಯಲಾರರು. ಆದ್ದರಿಂದ ಇವರಿಗೆ ಮಹಿಮೆಯನ್ನು ತೋರಿಸಿ ಇವರ ಮನಸ್ಸು ಭಕ್ತಿಪಂಥಕ್ಕೆ ಹಚ್ಚಬೇಕು. ಹೀಗೆ ಮಾಡಿದರೆ ನನ್ನ ಅವತಾರವು ಈ ಕಾಲದಲ್ಲಿ ಸಫಲವಾಗುವದು,” ಹೀಗಂದು, ಸಿದ್ಧ ಮುನೇಶ್ವರರು ಆತ್ಮಧ್ಯಾನದಲ್ಲಿ ಮಗ್ನರಾಗಿ ಶಾಂತಸ್ಥಿತಿಯಲ್ಲಿ ಕುಳಿತುಬಿಟ್ಟರು.
ಇತ್ತ ಮಠದಲ್ಲಿದ್ದ ಶಿಷ್ಯ ಜನರಿಗೆ ಮನಸ್ಸಿನಲ್ಲಿ ಬಹಳ ಚಿಂತೆ ಉಂಟಾಯಿತು. ಸದ್ಗುರುಗಳ ದಾರೀ ನೋಡುತ್ತ ಬಹಳ ಹೊತ್ತಾಯಿತು. ಆದರೂ ಬರಲಿಲ್ಲವೆಂದು ಚಿಂತಾಕ್ರಾಂತರಾಗಿ ಅವರನ್ನು ಶೋಧಿಸಲಿಕ್ಕೆ ಊರೊಳಗೆ ಹೋಗುವಂಥವರಾದರು. ದಾರಿಯಲ್ಲಿ ಜನರಿಗೆ ಕೇಳುತ್ತಾರೆ - "ನೀವೇನಾದರೂ ಶ್ರೀ ಸಿದ್ಧಾರೂಢರನ್ನು ನೋಡಿದ್ದೀರೇನ್ರಪ್ಪಾ ?'' ಅದಕ್ಕೆ ಅವರು - “ನಾವು ನೋಡೇ ಇಲ್ಲ" ಅಂದಾಕ್ಷಣ ಶಿಷ್ಯರು ಬಹಳ ತಳಮಳಪಡುತ್ತ - 'ಹೇ ಸದ್ಗುರುರಾಯನೇ ನಿನಗೆ ಎಲ್ಲೆಂತ ಹುಡುಕೋಣ! ನಾವು ನಿನ್ನನ್ನು ಕುರಿತು ಮಾಡಿದ ಶೋಧನೆಯು ವ್ಯರ್ಥವಾಗುವದಲ್ಲ. ಬೇಗನೇ ಬಂದು ನಮಗೆ ಭೆಟ್ಟಿಯಾಗಪ್ಪಾ, ಅನೇಕ ಗೃಹಗಳಲ್ಲಿ ನಿನ್ನನ್ನು ಹುಡುಕಿದೆವು, ಆದರೆ ಅಲ್ಲಿ ನಿನ್ನ ವಾರ್ತೆಯೇ ಇಲ್ಲ. ಗಿರಿವನ ಪ್ರವಾಹಗಳಲ್ಲಿಯೂ ನಿನ್ನನ್ನು ಹುಡುಕಿದೆವು, ಆದರೆ ಎಲ್ಲಿಯೂ ನೀನು ಸಿಗಲಿಲ್ಲ. ನೀನು ಕೃಪಾ ಮಾಡಿದಿಯೆಂದರೆ ನಿಶ್ಚಯವಾಗಿದ್ದ ನೀನಿರುವ ಸ್ಥಾನವು ನಮಗೆ ತಿಳಿಯಲಾಗದು. ಹೊರಗೆಲ್ಲಾ ಕಡೆಗಳಲ್ಲಿ ಹುಡುಕಿ ಹುಡುಕಿ, ನಾವು ಬಹಳ ಶ್ರಮ ಪಟ್ಟೆವು ಯಾರ ಮನೆಯಲ್ಲಿ ನೀನು ಇರುವಿಯೋ ತಿಳಿಯದು. ಕೃಪಾಳುವಾದ ಸದ್ಗುರುನಾಥನೇ, ಅನಾಥರಾದ ನಮಗೆ ಶೀಘ್ರ ಪ್ರಾಪ್ತನಾಗು. ನಿನ್ನ ದಿನ ಭಕ್ತರಾದ ನಮಗೆ ಭೇಟಿಕೊಡು,” ಈ ಪ್ರಕಾರ ಅನ್ನುತ್ತಾ, ನಗರವೆಲ್ಲಾ ತಿರುತಿರುಗಿ ಬಹು ಶ್ರಮಪಟ್ಟು, ಕಟ್ಟಕಡೆಗೆ ಒಂದು ಬಾವಿಯ ಕಟ್ಟೇ ಮೇಲೆ ಎಲ್ಲರೂ ಕುಳಿತುಕೊಂಡು ಸದ್ಗುರು ಪ್ರಾರ್ಥನೆ ಮಾಡಲಾರಂಭಿಸಿದರು. ಕಂಠ ಗದ್ಗದಿತವಾಗಿ, ಕಣ್ಣೊಳಗಿಂದ ದುಃಖಾಶ್ರುಗಳನ್ನು ಸುರಿಸುತ್ತ, ಸದ್ಗುರುಗಳ ಅನೇಕ ಗುಣಗಳನ್ನು ನೆನಸುತ್ತಾ ಅಂಧಕಾರದೊಳಗೆ ಕುಳಿತಿರುವರು. ಅಕಸ್ಮಾತ್ತಾಗಿ ಮುಂದೆ ಒಂದು ಪ್ರಕಾಶವನ್ನು ಕಂಡರು. ಆ ಪ್ರಕಾಶ ಮಧ್ಯದಲ್ಲಿ ಸದ್ಗುರು ಮೂರ್ತಿಯನ್ನು ನೋಡಿ, ತಕ್ಷಣವೇ ಎದ್ದು, ಆತನನ್ನು, ಭರದಿಂದ ಆಲಿಂಗಿಸುವಂಥವರಾದರು. ಅನಂತರ ಆ ಸದ್ಗುರುವಿನ ಎರಡೂ ಕೈವಿಡಿದು ಅತ್ಯಾನಂದದಿಂದ ಮಠಕ್ಕೆ ಕರೆದುಕೊಂಡು ಹೋಗಿ ವಿಚಾರಿಸುತ್ತಾರೆ, - “ಇದೇನು
ಕೆಲಸ ಮಾಡಿದಿಪ್ಪಾ ಗುರುವೇ ?” ಅದಕ್ಕೆ ಸಿದ್ಧಾರೂಢರು, -“ಆ ಮನುಷ್ಯನ ನನ್ನನ್ನು ಕರೆದುಕೊಂಡು ಹೋಗಿ, ಒಂದು ಕೋಣೆಯೊಳಗೆ ಕೂಡ್ರಿಸಿ, ಬಾಗಿಲು ಹಾಕಿಬಿಟ್ಟನು. ನಾನು ಅಲ್ಲೇ ಧ್ಯಾನಸ್ಥನಾಗಿ ಕುಳಿತಿದ್ದೆ. ಹೀಗೆ ಕುಳಿತಿರುವಾಗ, ನಿಮ್ಮ ಅರ್ತಧ್ವನಿಯು ಅಕಸ್ಮಾತ್ತಾಗಿ ನನ್ನ ಕಿವಿಯೊಳಗೆ ಬಿತ್ತು. ಕೂಡಲೇ ಗಡಬಡಿಸಿ ಎದ್ದು, ನಿಮ್ಮ ಬಳಿಗೆ ಓಡಿ ಬಂದೆ," ಎಂದು ಅಂದದ್ದು ಕೇಳಿ, ಶಿಷ್ಯ ಜನರು - “ನಮ್ಮ ಈ ನಿಧಿಯನ್ನು ಆ ದುರ್ಜನರು ಏನು ಮಾಡುತ್ತಿದ್ದರೋ ! ನಮ್ಮ ದೈವ ಬಲದಿಂದ ತಿರುಗಿ ನಮ್ಮ ಕೈಸೇರಿತು,'' ಎಂದು ಹೇಳಿದರು.
ಇತ್ತ ಕವದಿ ಮಠದಲ್ಲಿ ಆ ದುರ್ಜನರು ಮಧ್ಯ ರಾತ್ರಿ ವೇಳೆ ನಿರೀಕ್ಷಿಸುತ್ತ ಕುಳಿತಿದ್ದರು. ದ್ವೇಷ ಬುದ್ಧಿಯ ಮೂಲಕ ಅವರ ಮನದಲ್ಲಿ, ಧ್ಯಾನದಲ್ಲಿ ಸದ್ಗುರುನಾಥನೇ ತುಂಬಿದ್ದನು. “ ಊರೊಳಗೆ ನಿಃಶಬ್ದ ಆಯಿತೆಂದರೆ, ಮೆಲ್ಲಗೆ ಖೋಲಿಯೊಳಗೆ ಹೋಗಿ, ಆತನ ಬಾಯಿಯೊಳಗೆ ಅರಿವೆ ತುಂಬಿ, ಆ ಮೇಲೆ ಅವನಿಗೆ ಪೂಜಿಸೋಣ'' ಎಂದು ತಮ್ಮ ತಮ್ಮೊಳಗೆ ಅನ್ನುತ್ತಿದ್ದರು, ಮಧ್ಯರಾತ್ರಿಯಾಗುತ್ತ ಬಂತು. ನಗರವಾಸಿಗಳ ಗಲಬಿಲಿಯು ಮೆಲ್ಲಮೆಲ್ಲಗೆ ಶಾಂತವಾಗುತ್ತ ಕಡೆಗೆ ಸರ್ವತ್ರಪೂರ್ಣ ನಿಃಶಬ್ದವಾಯಿತು. ಆಗ ದುರ್ಜನರು ಮೆಲ್ಲಗೆ ಎದ್ದು, ಖೋಲಿಯ ಬಾಗಿಲು ತೆರೆದು ದೀಪ ಹಿಡಿದು ನೋಡಿದಾಗ ಅಲ್ಲಿ ಸಿದ್ಧರು ಕಾಣಿಸಲಿಲ್ಲ. ಪ್ರತಿ ಒಬ್ಬನು ಕೈಯಲ್ಲಿ ಒಂದು ಬಡಿಗೆ ಹಿಡಿದುಕೊಂಡು, ಅಲ್ಲಿ ಇಲ್ಲಿ ಹುಡುಕಲಿಕ್ಕೆ ಆರಂಭಿಸಿದರು. ಒಬ್ಬನು - ''ಇಲ್ಲಿ ಇದ್ದಾನೆ' ಎಂದು ಒಂದು ಮೂಲೆಗೆ ಓಡುತ್ತೇನೆ. ಎಲ್ಲರಿಗೂ ಸಿದ್ಧಧ್ಯಾನ ಹತ್ತಿ, ದೇಹಭಾವವನ್ನು ಮರೆತರು. ಅಲ್ಲಲ್ಲಿ ಸಿದ್ಧ ರೂಪದಂತೆ ಅವರಿಗೆ ಭಾಸಿಸುತ್ತಿತ್ತು. ಆಗ ಒಬ್ಬನನ್ನು ನೋಡಿ ಮತ್ತೊಬ್ಬನು ಅನ್ನುತ್ತಾನೆ “ನೋಡು, ನೋಡು, ಸಿದ್ಧನು ಇವನೇ ನೋಡು'' ಹೀಗಂದಾಕ್ಷಣ ಮತ್ತೊಬ್ಬನು
ಬಡಿಗೆಯಿಂದ ಅವನನ್ನು ಹೊಡೆದನು. ಹೀಗೆಯೇ “ಸಿದ್ಧ ಸಿದ್ಧ'' ಎಂದು ಒಬ್ಬರನ್ನೊಬ್ಬರು ಹೊಡೆಯಲಾರಂಭಿಸಿದರು. ಒಬ್ಬಗೆ ವಿಶೇಷ ಹೊಡೆತ ಬಿದ್ದು, ಅವನು ದುಃಖದಿಂದ ಶಂಖ ಧ್ವನಿ ಮಾಡಲಾರಂಭಿಸಿದನು. ಇದನ್ನು ಕೇಳಿ ನೆರಮನೆ ಜನರು ಗಾಬರಿಯಿಂದ ಎದ್ದು ಓಡಿ ಬಂದು ನೋಡುವಾಗ, ಆರು ಮಂದಿ ಒಬ್ಬರಿಗೊಬ್ಬರು ಹೊಡೆಯುತ್ತ, “ಸಿದ್ಧ ಸಿದ್ಧ' ಅನ್ನುತ್ತ ಆದೇಶದಿಂದ ಹುಚ್ಚು ಹಿಡಿದವರಂತೆ ಅತ್ತಿತ್ತ ಓಡುತ್ತಿದ್ದರು. ಆಗ ಈ ಜನರಲ್ಲಾ ಕೂಡಿ, ಆ ಆರೂ ಮಂದಿಯನ್ನು ಹಿಡಿದು ಹೊರಗೆ ತಂದು, ನೋಡಿ ನಗುತ್ತಾ - "ನೀವು "ಸಿದ್ಧ ಸಿದ್ಧ" ಅನುತ್ತೀರಿ. ಆತನು ಸಿದ್ಧಾಶ್ರಮದಲ್ಲಿರುತ್ತಾನೆ. ನಿಮ್ಮ ಹುಚ್ಚು ಬಿಡಿಸಲಿಕ್ಕೆ ನಿಮ್ಮನ್ನು ಅಲ್ಲಿಗೇ ಹಿಡಕೊಂಡು ಹೋಗುವೆವು' ಎಂದು ಜನರ ಭಾಷಣವನ್ನು ಕೇಳಿ, ಆ ಆರು ಮಂದಿಯು ಶರೀರದ ಮೇಲೆ ಸ್ವಲ್ಪ ಎಚ್ಚರಿಕೆ ಬಂದವರಾಗಿ, ಜನರನ್ನು ನೋಡಿ : ನಾಚಿಕೆ ಪಟ್ಟು ಓಡಿ ಹೋದರು. ಅನಂತರ ಅಲ್ಲಿ ಬಂಧ ಜನರೆಲ್ಲ ತಮ್ಮ ತಮ್ಮ ಸ್ಥಾನಗಳಿಗೆ ಹೋದರು. ಆ ದಿವಸದಿಂದ ಈ ಆರು ಮಂದಿ ಸಿದ್ಧರ ಮೇಲೆ ಭಕ್ತಿಯುಳ್ಳವರಾಗಿ, ಸದ್ಗುರುಗಳ ಬಳಿಗೆ ಬಂದು ಅಂದಿನ ರಾತ್ರಿಯಲ್ಲಿ ನಡೆದ ವರ್ತಮಾನವನ್ನೆಲ್ಲಾ ನಿವೇದಿಸಿದರು.
ಸಿದ್ದರಾಜರಿಗೆ ಘಾತ ಮಾಡುವ ಉದ್ದೇಶದಿಂದ ಯಾವತನು ಈ ಆರು ಜನರಿಗೆ ಪ್ರೇರಿಸಿದ್ದನೋ, ಆತನು ತನ್ನ ನಾನಾ ಉಪಾಯಗಳು ನಿಷ್ಪಲವಾದದ್ದು ನೋಡಿ, ಏನು ಮಾಡಿದರೆಂದರೆ - ಒಬ್ಬಾಕೆ ದರಿದ್ರ ಸ್ತ್ರೀಗೆ ಕರೆದು, ಅವಳ ಕೈಯಲ್ಲಿ ಸ್ವಲ್ಪ ಹಣ ಕೊಟ್ಟು - "ನೀನು ನನ್ನದೊಂದು ಕೆಲಸ ಮಾಡಿಕೊಡಬೇಕು. ಉತ್ತಮ ಪಕ್ವಾನ್ನಗಳನ್ನು ತಯಾರಿಸಿ, ಅದರೊಳಗೆ ತೀಕ್ಷ್ಮ ವಿಷಹಾಕಿ, ಸಿದ್ದನಿಗೆ ಒಯ್ದು ಕೊಡಬೇಕು. ವಿಷ ಇಂಥಾದ್ದಿರಬೇಕು, ಅದನ್ನು ತಿಂದ ಕೂಡಲೇ ಅವನು ಸಾಯಬೇಕು. ನಿನ್ನ ಪಕ್ವಾನ ತಿಂದು ಆತನು ಸತ್ತಿದ್ದಾದರೆ ನಿನಗೆ ಬಹಳ ದ್ರವ್ಯವನ್ನು ಕೊಡುವೆನು' ಎಂದು ಹೇಳಿದ್ದು ಕೇಳಿ ಅ ಹೆಂಗಸಿಗೆ ದ್ರವ್ಯಲೋಭದಿಂದ ಬಹಳ ಸಂತೋಷವಾಯಿತು. ಆ ದಿವಸದಿಂದ ಆ ಹೆಂಗಸು ಅನುದಿನ ಸಿದ್ಧಾರೂಢರಿಗೆ ಭೆಟ್ಟಿಯಾಗುತ್ತಿದ್ದು, ಆಮೇಲೆ ಒಂದು ದಿನ ವಿಷಹಾಕಿದ ಉತ್ತಮ ಪಕ್ವಾನ್ನವನ್ನು ಸಿದ್ಧಮಾಡಿದಳು. ಅದನ್ನು ತೆಗೆದುಕೊಂಡು ಸಿದ್ಧಾರೂಢರ ಬಳಿಗೆ ಬಂದು, ಒಳಗೆ ಕೌಟಿಲ್ಯ ತುಂಬಿದವಳಾಗಿ ಹೊರಗೆ ಬಹು ಪ್ರೇಮಳ ಮತ್ತು ಮಧುರ ಭಾಷಣ ಮಾಡುತ್ತಾಳೆ- “ಮಹಾರಾಜರೇ, ಈ ಉತ್ತಮ ಪಕ್ವಾನ್ನವನ್ನು ನಿಮ್ಮ ಸಲುವಾಗಿ ನಾನು ಸ್ವಹಸ್ತದಿಂದ ಸಿದ್ಧಮಾಡಿ ತಂದಿರುವೆನು. ನೀವು ಈಗಲೇ ಇದನ್ನು ಸೇವಿಸಬೇಕು''. ಇಂಥಾ ಪ್ರೇಮಳ ವಚನವನ್ನು ಕೇಳಿ ಸದ್ಗುರುಗಳು ಅವಳನ್ನು ಕುರಿತು, -“ನನ್ನ ಈಗಲೇ ಭೋಜನ ತೀರಿಸಿ ಹೊರಗೆ ಬಂದಿರುವೆನು,” ಎಂದು ಉತ್ತರ
ಕೊಟ್ಟರು. ಆಗ ಆಕೆಯು ಬಹಳ ಆಗ್ರಹ ಮಾಡಿದ್ದರಿಂದ ಸಿದ್ಧರು ಒಂದೇ ಗ್ರಾಸವನ್ನು ಸ್ವೀಕರಿಸಿ - ''ಇನ್ನು ಸಾಕು, ನೀನು ಮನೆಗೆ ಹೋಗು,'' ಅಂದರು. ಅದು ವಿಷಾನ್ನವೆಂತ ಸದ್ಗುರುಗಳು ಆಗಲೇ ತಿಳಿದು, ಆ ಸ್ತ್ರೀಯನ್ನು ಕುರಿತು, ಯಾವ ಪ್ರಾಣಿಗಾದರೂ ಈ ಅನ್ನವನ್ನು ಕೊಡಬೇಡ ಇದನ್ನೆಲ್ಲಾ ಭೂಮಿಯಲ್ಲಿ ಹುಗಿದು ಬಿಡು” ಎಂದು ನುಡಿದದ್ದನ್ನು ಕೇಳಿ ಗಾಬರಿಯಾಗಿ, ಭಯದಿಂದ ನಿಸ್ತೇಜಳಾಗಿ ಮನೆಕಡೆಗೆ ಓಡಿಹೋದವಳು, ಪುನಃ ಮಠಕ್ಕೆ ಬರಲೇ ಇಲ್ಲ. ಅವಳಿಗೆ ಮಹತ್ತಾದ ಭಯ ಉತ್ಪನ್ನವಾಗಿ, ರಾತ್ರಿ ಹಗಲು ಸಿದ್ಧರಾಮಯನ ರೂಪವೇ ಕಾಣಿಸುತ್ತಿತ್ತು. ಅಂತರ್ಬಾಹ್ಯದೊಳಗೆ ಎಲ್ಲವೂ ಸಿದ್ಧರೂಪವನ್ನೇ ಕಾಣುವಂಥವಳಾಗಿ, ಬಹಳ ಭಯ ಪಡುತ್ತಿದ್ದಳು. ಏನೇನು ನೋಡುವಳೋ ಅದೆಲ್ಲಾ ಭಯಂಕರ ರೂಪದಿಂದ ಸಿದ್ಧನೇ ಎಂಬಂತೆ ಕಾಣಿಸುತ್ತಿದ್ದು, ಜನ, ಗೃಹ, ಸೂರ್ಯ, ಚಂದ್ರ ಮುಂತಾದ್ದೆಲ್ಲಾ ಸಿದ್ಧ ಗುರುವಿನಂತೆ ಕಾಣಿಸುತ್ತಿದ್ದವು. ಈ ಪ್ರಕಾರ ಹದಿನೈದು ದಿನ ತನಕ, ಅವಳು ಭಯದ್ದೇ ದುಃಖವನ್ನು ಭೋಗಿಸುತ್ತ, ಹದಿನಾರನೇ ದಿವಸ “ಸಿದ್ಧ ಸಿದ್ಧ' ಅನ್ನುತ್ತಾ ಪ್ರಾಣವನ್ನು ಬಿಟ್ಟಳು. ಅವಳು ಸದ್ಗುರುಗಳಲ್ಲಿಯೇ ಐಕ್ಯಳಾದಳು, ಆದರೆ ಬಹು ದುಃಖ ಅನುಭವಿಸಬೇಕಾಯಿತು.
ಇತ್ತ ಸರ್ವಜ್ಞರಾದ ಸದ್ಗುರುಗಳು ವಿಷ ತಿಂದದ್ದರಿಂದ ಸುಖವಾಯಿತು ಎಂದು ತಿಳಿದುಕೊಂಡು. ಮನಸ್ಸಿನಲ್ಲಿ ವಿಚಾರಿಸುತ್ತಾರೇ -“ಸತ್ಯವಾಗಿ ದೇಹದಲ್ಲಿ ವಿಷ ಪ್ರಯೋಗವಾಗಿದೆ. ಲೋಕ ಹಿತವನ್ನು ಸಾಧಿಸುವದರ ದೆಸೆಯಿಂದ, ಅವರ ದುಃಖವನ್ನು ಈಗ ಸಹಿಸಬೇಕು. ವಿಷಯ ಸುಖವು ಜನರಿಗೆ ಈಗ ಬಹು ಸಿಹಿಯಾಗಿ ತೋರುತ್ತದೆ. ಆದರೆ ಮುಂದೇ ಆ ಸಂಬಂಧ ನಾನಾ ತರದ ದುಃಖವನ್ನು ಅನುಭವಿಸಬೇಕಾಗುವದು. ಅಂಥಾ ದುಃಖವನ್ನು ನಾನು ಈಗ ಸಹಿಸಿದ್ದರಿಂದ, ಅವರಿಗೆ ಪರಲೋಕದಲ್ಲಿ ಸುಖವಾಗುವದು.” ಹ್ಯಾಗೆ ರಾಡಿ ನೀರೊಳಗೆ ಸ್ವಲ್ಪ ಸ್ಪಟಿಕ ಹಾಕಿರುವಾಗ, ಪಾತ್ರೆಯ ತಳವು ನೀರೊಳಗಿನ ಮಣ್ಣು ಎಲ್ಲಾ ತನ್ನಲ್ಲಿ ತೆಗೆದುಕೊಂಡು ಶುದ್ಧ ನೀರನ್ನು ಜನರ ಹಿತಾರ್ಥ ಇಡುವದೋ, ಅದೇ ಪ್ರಕಾರ ವಿಷದ ನಿಮಿತ್ಯ ಮಾಡಿಕೊಂಡು, ಸಿದ್ಧರು ಜಗದ ದುಃಖವನ್ನೆಲ್ಲಾ ತನ್ನಲ್ಲಿ ತೆಗೆದುಕೊಂಡು ಜನರನ್ನು ಸುಖದಲ್ಲಿಡುವರು, ಅಥವಾ, ಯಾವ ಮುಮುಕ್ಷು ಜನರು ಬರುವರೋ, ಅವರು ಆತ್ಮಪ್ರಾಪ್ತಿ ದೆಶೆಯಿಂದ ತಪಾದಿ ದುಃಖಗಳನ್ನು ಸಹಿಸಬೇಕಾಗುವದು, ಎಂದು ದಯಾಳುವಾದ ಸದ್ಗುರುನಾಥನು, ಆ ಮುಮುಕ್ಷುಗಳ ಹಿತಕ್ಕಾಗಿ ದುಃಖವನ್ನೆಲ್ಲಾ ತಾನೇ ಸಹಿಸಿಕೊಂಡದ್ದರಿಂದ, ಅವರು ಗುರುಕೃಪೆಯಿಂದ ಸುಖದಿಂದ ಪರಮಾರ್ಥವನು ಸಾಧಿಸುವವರು. ಈ ಪ್ರಕಾರ ಚಿಂತಿಸಿ ಸದ್ಗುರುಗಳು ಅಂದಿನ ರಾತ್ರಿ ಮಲಗಿಕೊಂಡರು. ಮರುದಿವಸ ಪ್ರಾತಃಕಾಲದಲ್ಲಿ ಏಳುವಾಗ್ಗೆ, ಮೈಮೇಲೆಲ್ಲಾ ಗುಳ್ಳೆಗಳು ಎದ್ದಿದ್ದವು. ಶರೀರವೆಲ್ಲಾ ಅಗ್ನಿಯಿಂದ ವ್ಯಾಪಿಸಿದಂತೆ ಉರಿಯುತ್ತಿತ್ತು, ಮತ್ತು ಅನೇಕ ವಿಕಾರಗಳು ಕಾಣಿಸಲಾರಂಭಿಸಿದವು. ಮಾಂಸವು ಬಾತು ಬಹಳ ದುಃಖದಿಂದ ನರಳುತ್ತಿದ್ದರು. ನಾಲಿಗೆಯು ಉಬ್ಬಿ ಬಾಯಿತುಂಬ ಆಗಿ ಕಿಂಚಿತ್ ಮಾತ್ರವಾದರೂ ಆಹಾರವು ಹೋಗುತ್ತಿದ್ದಿಲ್ಲ. ಕಣ್ಣುಗಳು ಬಾತು ಕೆಂಪು ಆಗಿ, ರೂಪವೂ ಭೀಕರವಾಗಿ ಕಾಣಿಸುತ್ತಿತ್ತು. ಸದ್ಗುರು ದೇಹದಲ್ಲಿಯ ಈ ವಿಕಾರಗಳನ್ನು ನೋಡಿ, ಭಕ್ತಿ ಜನರೆಲ್ಲಾ ಗಾಬರಿಯಾಗಿ, ಕೆಲವರು ವೈದ್ಯನಲ್ಲಿಗೆ ಹೋಗಿ, ಅವನನ್ನು ಕರೆದುಕೊಂಡು ಬಂದು ಸ್ವಾಮಿಯವರನ್ನು ತೋರಿಸಿದರು. ಸದ್ಗುರುಗಳ ಸ್ಥಿತಿಯನ್ನು ಸಂಪೂರ್ಣ ನೋಡಿಕೊಂಡು, ಆ ಭಕ್ತ ಜನರನ್ನು ಕುರಿತು, ವೈದ್ಯನು - “ಇವರು ಬದುಕಲಿಕ್ಕಿಲ್ಲ. ಇಂಥಾ ವಿಕಾರಗಳ ಮೇಲೆ ನನ್ನ ಔಷಧವು ನಡಿಯಲಾರದು,” ಎಂದು ಹೇಳಿದ್ದು ಕೇಳಿ, ಅವರೆಲ್ಲಾ ಬಹು ತಳಮಳಿಸುವಂಥವರಾದರು. ಎಲ್ಲರೂ ಹಾಹಾಕಾರ ಮಾಡುವರು. ಸ್ತ್ರೀಯರು
ದೀರ್ಘಸ್ವರದಿಂದ ಅಳುವರು. ಕೆಲವರು ದೇಹಸ್ಮೃತಿಯೇ ಇಲ್ಲದೆ ಭೂಮಿಗೆ ಬೀಳುವರು. ಧೈರ್ಯ ಹಿಡಿಯಲಾರದೆ ಅನ್ನುತ್ತಾರೆ- “ನಮ್ಮ ಕರ್ಮವು ದುರ್ಧರವಾಗಿದೆ. ದಯಾಸಾಗರನಾದ ಸದ್ಗುರುವು ನಮ್ಮನ್ನು ಬಿಟ್ಟು ಹೋಗುತ್ತಾನಲ್ಲ. ಹೇ ಕರುಣಾಕರನಾದ ಪರಮೇಶ್ವರನೇ, ನಮ್ಮನ್ನು ಈ ದುಃಖಸಾಗರದಲ್ಲಿ ಬಿಟ್ಟು ಬಿಡಬೇಡ ನಮ್ಮ ಸದ್ಗುರುವರನನ್ನು ನೆಟ್ಟಗೆ ಮಾಡಿ ನಮಗೆ ಕೊಡು. ಸದ್ಗುರುವು ದೇಹವನ್ನು ಬಿಟ್ಟೆನೆಂದರೆ ನಮ್ಮ ಗತಿ ಏನು ? ನಮ್ಮನ್ನು ಸಂಕಷ್ಟದಲ್ಲಿ ರಕ್ಷಿಸುವವನ್ಯಾರು? ಪರಮೇಶ್ವರನೇ, ಈಗ ಓಡಿಬಂದು, ನಮ್ಮ ತಂದೆಯಾದ ಸಿದ್ದನನ್ನು ರಕ್ಷಿಸು, ಇಲ್ಲವಾದರೆ ನಮ್ಮನ್ನೆಲ್ಲ ಕರೆದುಕೊಂಡು ಹೋಗು, ಆತನನ್ನು ಬಿಟ್ಟು ನಾವು ಬದುಕಲಾರೆವು. ಸಿದ್ಧ ಸದ್ಗುರುವೇ ನಮ್ಮ ಪ್ರಾಣನು. ಅವನು ಹೋದದ್ದಾದರೆ ನಾವು ಹ್ಯಾಗೆ ಜೀವಂತರಾಗಿರುವೆವು ?' ಈ ಪ್ರಕಾರ ಬಹು ರೀತಿಯಿಂದ ದುಃಖ ಭಾಷಣಗಳನ್ನು ಮಾಡುತ್ತಿರುವಾಗ ಸದ್ಗುರುವು ಕೇಳಿ, ಹಸ್ತ ಸಂಜ್ಞೆಯಿಂದ - ''ಅಂಜಬೇಡಿರಿ, ಸ್ವಸ್ಥರಾಗಿರಿ,” ಎಂದು ಸೂಚಿಸಿದ್ದು ಕೇಳಿ, ಸರ್ವರಿಗೂ ಸುಖವಾಗಿ- “ಸದ್ಗುರುವು ನಮಗೆ ಅಭಯವನ್ನಿತ್ತನು. ಆ ದೇವಾಧಿ ದೇವನು ಪ್ರಾಪ್ತನಾದನು. ನಮಗೆ ಪರಮೇಶ್ವರನೇ ಆಗಿರುವ ಸಿದ್ದರಾಯನಿಗೆ ನಮ್ಮ ದುಃಖವು ಕೇಳಿಸಿತು' ಎಂದು ಎಲ್ಲರೂ ಅನ್ನುವರು. ಹದಿನೈದು ದಿನ ತನಕ ರಾತ್ರಿ ಹಗಲು ಜಾಗರಣ ಮಾಡಿ ಸರ್ವ ಭಕ್ತರು ಸದ್ಗುರು ಸಮೀಪವೇ ಕುಳಿತಿದ್ದರು. ಯಾರೂ ಮನೆಗೆ ಹೋಗಲಿಲ್ಲ. ಈ ಕಾಲದಲ್ಲಿ ಮಹತ್ ಪ್ರಾಣವು ಶರೀರಕ್ಕಾಗುತ್ತಿದ್ದರೂ, ಸದ್ಗುರುಗಳ ಮುಖವು ಶಾಂತವಾಗಿತ್ತು. ಸ್ವಲ್ಪವಾದರೂ ನರಳುವ ಧ್ವನಿ ಕೇಳಿಸುತ್ತಿದ್ದಿಲ್ಲ. ಮಾತಾಡಲಿಕ್ಕೆ ಆಗದಿದ್ದರೂ ಸಂಜ್ಞೆಯಿಂದಲೇ ಸರ್ವರಿಗೂ ಸ್ವಸ್ಥ ಮಾಡುವರು. ಇಂಥಾ ಸಂಕಟದೊಳಗಿರುವಾಗ ಸಹ, ಸದ್ಗುರು ರೂಪವು ಸಾಕ್ಷಾತ್ ಶಾಂತಿಯೇ ಮೂರ್ತಿವಂತವಾಗಿರುವದೋ ಎಂಬಂತೆ ಕಾಣಿಸುತ್ತಿದ್ದು, ಅವರನ್ನು ನೋಡುವವರು, ಕಣ್ಣೊಳಗೆ ನೀರು ಸುರಿಸುತ್ತ, - ''ಈ ಸ್ಥಿತಿಯು ಮನುಷ್ಯ ಮಾತ್ರರಿಗೆ ಅಸಂಭಾವ್ಯವಾಗಿದೆ'' ಎಂದನ್ನು ವರು. ಹದಿನೈದು ದಿವಸಗಳಾದ ಮೇಲೆ ಮೈಮೇಲಿನ ಗುಳ್ಳೆಗಳೆಲ್ಲಾ ಕರಗಿ ಹೋದವು. ನಾಲಿಗೆಯು ಪೂರ್ವದಂತಾಯಿತು, ಕಣ್ಣುಗಳು ನಿರ್ಮಲವಾದವು. ಇದನ್ನು ನೋಡಿ ಭಕ್ತ ಜನರೆಲ್ಲಾ ಆನಂದದಿಂದ ಜಯಜಯಕಾರ ಮಾಡುವಂಥವರಾದರು. ಬಹು ಆಹ್ಲಾದದಿಂದ ಈಗ ಸದ್ಗುರುಗಳಿಗೆ ಆರತಿಯನ್ನು ಬೆಳಗಿದರು. ಹೀಗೆ ದುರ್ಜನರು ಸದ್ಗುರುಗಳಿಗೆ ಅಪಾಯ ಮಾಡುತ್ತಿರುವಾಗ, ಅವನ್ನೆಲ್ಲಾ ಆ ದಯಾಳುವು ಭಕ್ತರ ತಾರಣಕ್ಕೋಸ್ಕರ ಉಪಾಯಗಳನ್ನಾಗಿ ಮಾಡುತ್ತಿರುವನು.
👇👇👇👇
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ದಿವಟೆ ಮಲ್ಲಪ್ಪಣ್ಣನವರಿಂದ ಶ್ರೀಗಳಗೆ ಟಾಂಗಾ ವ ಬಗಿ ಅರ್ಪಣೆ
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
