ಶಿವಾಯನಮಃ ನಿಗೆ ಶಿಪಾಯರು ಹಿಡಿದುಕೊಂಡು ಹೋಗುವಾಗ ಸಿದ್ಧಾರೂಢರು ಫೌಜುದಾರ ರೂಪಧರಿಸಿ ಕುದುರೆ ಮೇಲೆ ಬಂದು ಅವನನ್ನು ಬಿಡಿಸಿದರು.
🌼ಶಿವಾಯನಮಃ ನಿಗೆ ಶಿಪಾಯರು ಹಿಡಿದುಕೊಂಡು ಹೋಗುವಾಗ ಸಿದ್ಧಾರೂಢರು ಫೌಜುದಾರ ರೂಪಧರಿಸಿ ಕುದುರೆ ಮೇಲೆ ಬಂದು ಅವನನ್ನು ಬಿಡಿಸಿದರು.
ನಿತ್ಯ ಪ್ರಾತಃಕಾಲದಲ್ಲಿ ಸದ್ಗುರು ಸನ್ನಿಧಿಯಲ್ಲಿ ಅನೇಕ ಜನ ಭಕ್ತರು ಬರುತ್ತಿರುವರು. ಭಜನವಾದ ಮೇಲೆ ಸದ್ಗುರುವಿಗೆ ಮಂಗಳಾರತಿಯನ್ನು ಬೆಳಗುವರು. ಭಕ್ತ ಜನರನ್ನು ಈ ಕಾರ್ಯಕ್ಕಾಗಿ ಪ್ರಾತಃಕಾಲದಲ್ಲಿ ಎಚ್ಚರಗೊಳಿಸುವದಕ್ಕೋಸ್ಕರ ಒಬ್ಬಾನೊಬ್ಬನು ಅವರ ಮನೆ ಮುಂದೆ ಬಂದು ಒದರುವನು. ಶಿವಾಯನಮಃ ಎಂಬ ಈ ನಾಮವನ್ನು ಗರ್ಜಿಸುತ್ತಾ ಆತನು ದ್ವಾರದಲ್ಲಿ ಬಂದು ನಿಂತು, ಮನೆಯವರೆಲ್ಲರೂ ಎಚ್ಚರವಾದ ಮೇಲೆ ಎರಡನೇ ಮನೆಗೆ ಹೋಗುವನು. ಆದ್ದರಿಂದ ಭಕ್ತ ಜನರು ಆತನಿಗೆ ಶಿವಾಯನಮಃ ಎಂದು ಹೆಸರಿಟ್ಟಿರುವರು. ಈತನು ದ್ವಾರದಲ್ಲಿ ಬಂದು ಒದರಿದ ಕೂಡಲೇ ನಿದ್ರಾಭ್ರಮೆಯನ್ನು ಬಿಟ್ಟು,ಸದ್ಗುರುಗಳ ಕಡೆಗೆ ಹೋಗಲಿಕ್ಕೆ ಸಿದ್ಧರಾಗುತ್ತಿದ್ದರು. ಈ ಪ್ರಕಾರ ಭಕ್ತಿ ಮತ್ತು ಉಪಕಾರಕೃತ್ಯ ಈತನು ಶ್ರದ್ಧೆಯಿಂದ ನಿತ್ಯದಲ್ಲಿಯೂ ಮಾಡುತ್ತಿದ್ದನು. ಭಜನೆಗೋಸ್ಕರ ಎಬ್ಬಿಸುವನೆಂದು ಆತನ ಮೇಲೆ ಭಕ್ತ ಜನರು ಬಹಳ ಪ್ರೇಮ ಮಾಡುತ್ತಿದ್ದರು. ಮಳೆ, ಕತ್ತಲು ಎಂಬುದನ್ನು ಲಕ್ಷಿಸದೆ, ಭಕ್ತ ಜನರ ಹಿತಾರ್ಥವಾಗಿ ಶಿವಾಯ ನಮಃನು ನಿತ್ಯದಲ್ಲಿಯೂ ತಿರುಗುತ್ತಿರುವಾಗ, ಒಂದು ಕಾಲದಲ್ಲಿ ಚಮತ್ಕಾರಿಕ ಕಥಾ ಸಂಭವಿಸಿತು. ಅದನ್ನೆ ಶ್ರೋತಾ ಜನರುಗಳಿರಾ, ಶ್ರವಣ ಮಾಡುವಂಥವರಾಗಿರಿ. ಒಮ್ಮೆ ನಾಲ್ಕು ತಾಸು ರಾತ್ರಿ ಇರುವಾಗ ಶಿವಾಯನಮಃನು ಎದ್ದು ಹೊರಗೆ ಬಂದು ರಸ್ತೆಯ ಮೇಲೆ ನಾಮಗರ್ಜನೆ ಮಾಡುತ್ತಾ ನಡೆದನು. ಪ್ರಾತಃಕಾಲವಾಯಿತೆಂದು ತಿಳಿದು, ಆತನು ನಿತ್ಯನೇಮವನ್ನು ಸಾರಿಸುತ್ತ, ಮಂದಿ ದ್ವಾರದಲ್ಲಿ ನಿಂತು ನಾಮ ಗರ್ಜನೆಯಿಂದ ಅವರನ್ನು ಎಬ್ಬಿಸುತ್ತಿದ್ದನು. ಈ ಪ್ರಕಾರ ಆತನು ರಸ್ತೆ ಮೇಲೆ ಹೋಗುತ್ತಿರುವಾಗ, ಗಸ್ತಿ ತಿರುಗುವ ಸರ್ಕಾರಿ ಸಿಪಾಯರು ಭೆಟ್ಟಿಯಾಗಿ, ಅವರು ಇವನನ್ನು ಹಿಡಿದು, ನಿಂದಿರಿಸಿ, - "ನೀನು ಯಾರು ? ರಾತ್ರಿಯೊಳಗೆ ರಸ್ತೆಯ ಮೇಲೆ ತಿರುಗುತ್ತ, ಗಟ್ಟಿಯಾಗಿ ಕೂಗಿ, ನಿದ್ರಿಸ್ತರಾದ ಜನರನ್ನು ಏಕೆ ಎಬ್ಬಿಸುವಿ? ನಿನ್ನಿಂದ ಜನರಿಗೆ ಬಹಳ ತ್ರಾಸ ಉಂಟಾಗುವದು. ಈಗ ಮುಂದೆ ಹೊಗಬೇಡ'', ಎಂದು ನುಡಿಯುತ್ತಿರುವಾಗ್ಗೆ, ಆತನು ಅವರ ಹೇಳಿದ್ದಕ್ಕೆ ಕಿವಿಗೊಡದೆ, ನಾಮ ಘರ್ಜಿಸುತ್ತಾ ನಡೆದನು. ಆಗ ಸಿಪಾಯರು ಸಿಟ್ಟಿಗೆದ್ದು, ಹೋಗಿ ಅವನನ್ನು ಹಿಡಿದು, ಅವನ ಕೈಗಳನ್ನು ಕಟ್ಟಿ, ಚೌಕಿ ಕಡೆಗೆ ಕರೆದುಕೊಂಡು ಹೋಗುವಂಥವರಾದರು. ಆದರೂ ಆತನು ನಾಮೋಚ್ಛಾರವನು ಘೋಷಿಸುತ್ತಿರುವನು ಎಂದು ಆ ಸಿಪಾಯರು ಆತನ ಮುಖದೊಳಗೆ ವಸ್ತ್ರವನ್ನು ತುರಕಿ, ಬಾಯಿ ಬಂದ ಮಾಡಿ, ಈ ಪ್ರಕಾರ ಅವನನ್ನು ಹಿಡಿದುಕೊಂಡು ರಸ್ತೆ ಮೇಲಿಂದ ಚೌಕಿ ಕಡೆಗೆ ಒಯ್ಯುತ್ತಿದ್ದರು. ಭಕ್ತ ಕಾರ್ಯವನ್ನು ಯಾವಾತನು ಜನರೂಳಗೆ ಮಾಡುವನೋ, ಆತನ ಅಭಿಮಾನವು ಸದ್ಗುರುರಾಯನಿಗೆ ಇರುವದು. ಹೀಗೆ ತನ್ನ ಭಕ್ತನನ್ನು ಸಿಪಾಯರು ಪೀಡಿಸುವದು ತಿಳಿದು, ಸದ್ಗುರುರಾಯನು ಎದ್ದನು. ಏನೇನೂ ಅನ್ಯಾಯವಿಲ್ಲದೆ, ತನ್ನ ಭಕ್ತನನ್ನು ಆ
ನಿರ್ದಯರಾದಂಥವರು ಪೀಡಿಸುವರು, ಮತ್ತು ಪುಣ್ಯ ಕಾರ್ಯವು ನಿಂತು ಹೋಗವುದು, ಎಂದು ಸದ್ಗುರುರಾಯನು ಕಳವಳಿಸಿದನು. ನಂತರ ಫೌಜದಾರನ ರೂಪವನ್ನು ಧರಿಸಿ ಅವನಂತೆ ಪೋಷಾಕು ಮಾಡಿಕೊಂಡು, ಕುದುರೆಯನ್ನು ಹತ್ತಿ ಸದ್ಗುರುರಾಯನು ಇವರ ಮುಂದೆ ಬರುವಂಥವನಾದನು. ಫೌಜದಾರರನ್ನು ಸಿಪಾಯರು ಕಂಡ ಕೂಡಲೇ ಆತನಿಗೆ ಮುಜ್ರೆ ಮಾಡಿದರು. ಆಗ ಫೌಜುದಾರನು ಅವರನ್ನು ಕುರಿತು, - "ಯಾರನ್ನು ನೀವು ಹಿಡಿದುಕೊಂಡು ಬರುತ್ತಿರುವಿರಿ. ಈತನು ಎಲ್ಲಿ ಏನು ಮಾಡಿರುವವನು ಎಂದು ಅವನ ಕೈ ಕೊಟ್ಟಿರುತ್ತೀರಿ ಮತ್ತು ಬಾಯೊಳಗೆ ವಸ್ತ್ರವನ್ನು ಯಾಕೆ ತುಂಬಿರುತ್ತೀರಿ ? ಸಿಪಾಯರೇ ಹೇಳಿರಿ,” ಎಂದು ವಿಚಾರಿಸಿದ್ದನ್ನು ಸಿಪಾಯರು ಕೇಳಿ, ''ಸಾಹೇಬರೇ, ಈತನು ರಾತ್ರಿಯೊಳಗೆ ಊರೊಳಗೆಲ್ಲ ಅಡ್ಡಾಡುತ್ತಿದ್ದು, ಮನೆಮನೆಗೆ ಹೋಗಿ ಒದರ್ಯಾಡುತ್ತಿದ್ದಾನೆ. ರಾತ್ರಿಯಲ್ಲೆಲ್ಲಾ ಈತನ ಒದರ್ಯಾಟದಿಂದ ಜನರಿಗೆ ಭಯಂಕರ ಉಪದ್ರವವಾಗುವದು, ಎಂದು ಇವನಿಗೆ ಅಡ್ಡಿ ಮಾಡಿದರು ಇವನು ಬಿಡದೆ ಒದರುವನು. ಆದ್ದರಿಂದ ಇವನ ಬಾಯಿಯಲ್ಲಿ ವಸ್ತ್ರ ತುಂಬಿ ಒದರದಂತೆ ಮಾಡಿರುತ್ತೇವೆ. ಇವನಿಗೆ ಶಿಕ್ಷೆ ಕೊಟ್ಟ ವಿನಹಾ ಇವನು ಬಿಡನು ಎಂದು ಇವನಿಗೆ ಚೌಕಿ ಕಡೆಗೆ ಒಯ್ಯುತ್ತೇವೆ. ಇವನನ್ನು ಬಂದಿಯೊಳಗೆ ಇಡೋಣವೇ? " ಎಂದು ಕೇಳಿದರು. ಇದನ್ನು ಕೇಳಿ ಫೌಜದಾರನು- “ಸಿಪಾಯರೇ, ನೀವು ಇದೊಂದು ಅವಿಚಾರದ ಕೆಲಸವನ್ನು ಮಾಡಿದಿರಿ. ಇವನನ್ನು ಈಗಿಂದೀಗಲೇ ಬಿಟ್ಟು ಬಿಡಿರಿ, ಮತ್ತು ಬಾಯಿಯೊಳಗೆ ತುಂಬಿದ ಅರಿವೆಯನ್ನು ತೆಗೆಯಿರಿ. ಇವನೇನೂ ಕಳ್ಳನಲ್ಲ, ನಿಜವಾಗಿ ನಿಮ್ಮದೇ ಕಾರ್ಯವನ್ನು ಮಾಡುತ್ತಿರುವನು. ನೀವಾದರೂ ರಾತ್ರಿಯೆಲ್ಲ ಒದರುತ್ತ ಜನರು ಎಚ್ಚರ ಇರುವಂತೆ ಮಾಡುತ್ತೀರಿ. ಇವನಾದರೂ ನಿಮ್ಮ ಇದೇ ಕೆಲಸವನ್ನು ಪಗಾರ ತೆಗೆದುಕೊಳ್ಳದೆ ಮಾಡುತ್ತಾ ತಿರುಗುವನು. ನೀವು ಸುಮ್ಮನೇ ಒದರ್ಯಾಡುತ್ತಿರುವಿರಿ. ಈತನು ಈಶ್ವರ ನಾಮವನ್ನಾದರು ಉಚ್ಚರಿಸುವನು, ನೀವು ಬರೇ ಹೊರಗಿನ ಕಳ್ಳರ ದಶೆಯಿಂದ ಜನರನ್ನು ಎಚ್ಚರಗೊಳಿಸುವಿರಿ. ಇವನಾದರೂ, ನಾಮಸ್ಮರಣೆಯಿಂದ ಅಂತರ್ಬಾಹ್ಯ ಕಳ್ಳರು ದೆಸೆಯಿಂದ ರಕ್ಷಿಸುತ್ತಾನೆ. ಲೋಕೋಪಕಾರಿಯಾದ ಇಂಥವರನ್ನು ನೀವು ವ್ಯರ್ಥವಾಗಿ ಪೀಡಿಸಿದಿರಿ. ಆದ್ದರಿಂದ ಇವನನ್ನು ಈಗಲೇ ಬಿಟ್ಟು ಬಿಡಿರಿ, ಇನ್ನು ಮೇಲೆ ಇವನಿಗೆ ಅಡ್ಡಿ ಮಾಡಬೇಡಿರಿ ?” ಎಂದು ಫೌಜದಾರನು ಅಂದದ್ದು ಕೇಳಿ, ಆ ಸಿಪಾಯರು ಶಿರಬಾಗಿಸಿ, ಶಿವಯನಮನನ್ನು ಬಿಟ್ಟು ತಮ್ಮ ಕೆಲಸದ ಮೇಲೆ ಹೋದರು. ಅನಂತರ ಫೌಜದಾರನು ಶಿವಯನಮನನ್ನು ಕುರಿತು - '' ಈ ಸಿಪಾಯರಿಗೆ ಏನು ತಿಳಿಯುವುದಿಲ್ಲ. ಇನ್ನು ಮೇಲೆ ನೀನು ನಿಸ್ಸಂಶಯವಾಗಿ ನಿನ್ನ ಕೆಲಸವನ್ನು ನಡಿಸುತ್ತಿರು. ಯಾರೊಬ್ಬರೂ ನಿನಗೆ ಅಡ್ಡ ಬರಲಾರರು.'' ಎಂದು ಹೇಳಿ, ಕತ್ತಲೆಯೊಳಗೆ ಹೋಗವಂಥವನಾದನು. ಇತ್ತ ಶಿವಾಯನಮಃನು , ಆ ಕ್ಷಣವೇ ತನ್ನ ನಿತ್ಯ ನೇಮವನ್ನು ಯಥಾರೀತಿ ಆರಂಭಿಸಿದನು. ಮರುದಿವಸ ಆ ಸಿಪಾಯರು, ಫೌಜದಾರನ ಮುಂದೆ ಬಂದು, ಕ್ಷಮಿಸಬೇಕೆಂದು ಪ್ರಾರ್ಥಿಸುವದನ್ನು ಕೇಳಿ ಆಥನು ಆಶ್ಚರ್ಯಚಕಿತನಾದನು. ಆತನು ಕೇಳಿದನು - ''ನೀವು ಯಾತರ ದಶೆಯಿಂದ ಕ್ಷಾಮಾ ಬೇಡುತ್ತಿರುವಿರಿ. ನಿಮ್ಮಿಂದ ಏನೂ ಅಪರಾಧ ಘಟಿಸಿತೆಂದು ಹೇಳುವಿರಿ? " ಇದನ್ನು ಕೇಳಿ ಸಿಪಾಯಿರು -"ನಿನ್ನೆ ರಾತ್ರಿ ಒಬ್ಬ ಒದರ್ಯಾಡುವವನನ್ನು ಹಿಡಿದುಕೊಂಡು ನಾವು ಚೌಕಿಗೆ ಬರುತ್ತಿರುವಾಗ ನೀವು ದಾರಿಯಲ್ಲಿ ಭೆಟ್ಟಿಯಾದದ್ದು ನಮಗೆ ವಿದಿತವದೆ. ಆಗ ನಮ್ಮ ಮೇಲೆ ಸಿಟ್ಟಾಗಿ, ಅವನನ್ನು ಬಿಡಿಸಿದಿರಿ ", ಎಂದು ಹೇಳಿದ್ದನ್ನು ಕೇಳಿ, ಪೌಜದಾರನು ಬಹಳ ಆಶ್ಚರ್ಯಪಟ್ಟು, ಅನ್ನುತ್ತಾನೆ - “ಇಡೀ ರಾತ್ರಿ ನಾನು ಮನೆಯೊಳಗೇ ಮಲಗಿದ್ದೆನು. ನೀವು ಹೇಳುವುದು ಹ್ಯಾಗೆ ಸತ್ಯವಾದೀತು ? ನೀವು ಸುಳ್ಳಾಡುತ್ತೀರಿ.'' ಇದನ್ನು ಕೇಳಿ ಸಿಪಾಯರು- “ನಾವು ಹೇಳುವದು ಸರ್ವಥಾ ಸತ್ಯವಾಗಿರುತ್ತದೆ' ಎಂದು ಹೇಳಿದ್ದಕ್ಕೆ ಫೌಜದಾರನು, -“ಇದರ ಸತ್ಯಾಸತ್ಯವು ಸಿದ್ಧಾರೂಢರ ಮುಂದೆ ಹೋದರೆ ಗೊತ್ತಾಗುವುದು. ಅಲ್ಲಿಯೇ ಶಿವಾಯನಮಃನು ಇರುವನು'', ಎಂದು ಆ ಕೂಡಲೇ ಆತನು ಸಿಪ್ಪೆಯನ್ನು ಕರೆದುಕೊಂಡು ಸದ್ಗುರುಗಳ ಕಡೆಗೆ ಬಂದು, ನಮಸ್ಕರಿಸಿ, ರಾತ್ರಿಯೊಳಗೆ ನಡೆದ ವೃತ್ತಾಂತವನ್ನು ನಿರೂಪಿಸಿದನು. ಅದನ್ನು ಕೇಳಿ ಸಿದ್ಧರು ಫೌಜುದಾರನನ್ನು ಕುರಿತು - ''ಸದ್ಗುರುವು ತನ್ನ ಭಕ್ತೋತ್ತಮನನ್ನು ರಕ್ಷಿಸುವದಕ್ಕೋಸ್ಕರ, ತನ್ನ ಮಹಿಮೆಯಿಂದ ನಿಮ್ಮ ರೂಪವನ್ನು ಧರಿಸಿ, ಆ ಸಮಯದಲ್ಲಿ ಬಂದಿರಬಹುದು' ಎಂದು ಹೇಳಿದರು. ಇದನ್ನು ಕೇಳಿ ಅವರೆಲ್ಲರು ಅತ್ಯಂತ ಹರ್ಷಯುಕ್ತರಾಗಿ, ಬಹು ಭಕ್ತಿಯಿಂದ ಸಿದ್ಧರಿಗೆ ನಮಸ್ಕರಿಸಿ, ಅವರ ಆಜ್ಞೆ ಪಡೆದುಕೊಂಡು ಹೋಗವಂಥವರಾದರು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಶಿವರಾತ್ರಿ ಉತ್ಸವಕ್ಕೆ ನೀರು ಇರದೇ ಇರುವಾಗ ಮೇಘ ವಿದ್ಯಾ ಮೂಲಕ ಮಳೆ ತರಿಸಿದ ಆರೂಢ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
