ಶಿವರಾತ್ರಿ ಉತ್ಸವದಲ್ಲಿ ಕರೆಗೆ ಮೇಘ ವಿಧ್ಯೆ ಮೂಲಕ ಮಳೆ ತರಿಸಿದ ಕಥೆ
ಸಿದ್ಧಾಶ್ರಮದಲ್ಲಿ ಪ್ರತಿ ವರ್ಷ ಶ್ರಾವಣ ಮತ್ತು ಶಿವರಾತ್ರಿಗೆ ಮಹೋತ್ಸವಗಳಾಗುವವು. ಆ ಸಮಯದಲ್ಲಿ ಏಳು ದಿವಸಗಳ ತನಕ ರಾತ್ರಿ ಹಗಲು, ಭಜನೆ ಕೀರ್ತನಾದಿಗಳು ನಡೆಯುತ್ತಿರುತ್ತವೆ. ಶಿವರಾತ್ರಿ ಮಹೋತ್ಸವಕ್ಕೆ ಲಕ್ಷಾವಧಿ ಜನರು ಬರುವರು. ಇವರೆಲ್ಲರ ದಶೆಯಿಂದ ಮಠದಲ್ಲಿ ಅಡುಗೆ ತಯಾರಾಗುವುದು, ಮತ್ತು ದಿನಕ್ಕೆರಡಾವರ್ತಿ ಜನರಿಗೆ ಭೋಜನವನ್ನು ಹಾಕುವರು. ಇಷ್ಟು ದೊಡ್ಡ ಜನಸಮುದಾಯಕ್ಕೊಸ್ಕರ ಬಹಳ ನೀರಿನ ಖರ್ಚು ಇರುತ್ತಿದ್ದು, ಅದಕ್ಕಾಗಿ ಮಳೆಯಿಂದಲೇ ನೀರು ತುಂಬುವಂಥಾ ಒಂದು ದೊಡ್ಡ ಕೆರೆ ಇರುವದು. ಮಳೆ ಬಾರದಿದ್ದರೆ, ಕೆರೆಯ ನೀರು ಬತ್ತಿ ಹೋಗುತ್ತಿತ್ತು, ಮತ್ತು ಒಂದು ಹರದಾರಿ ದೂರದಿಂದ ಬಹು ಪ್ರಯಾಸಪಟ್ಟು ನೀರು ತರಬೇಕಾಗುತ್ತಿತ್ತು. ಒಂದು ವರ್ಷ ಏನೇನೂ ಮಳೆಯಿಲ್ಲದೆ, ಕೆರೆಯು ಪೂರ್ಣ ಬತ್ತಿ ಹೋಗಿತ್ತು. ಶಿವರಾತ್ರಿ ಉತ್ಸವ ಸಮೀಪ ಬಂತು, ಆದರೆ ಕಿಂಚಿತ್ ಮಾತ್ರವೂ ನೀರಿಲ್ಲದೆ ಹೋಯಿತು. ಇದನ್ನು ನೋಡಿ, ಸದ್ಗುರುಗಳು ಭಕ್ತರನ್ನು ಕುರಿತು - “ಇಲ್ಲಿ ಕೆರೆಯು ಬರಿದಾಗಿರುವದು. ಉತ್ಸವದ್ದೆಶೆಯಿಂದ ನೀರಿಲ್ಲ, ಉತ್ಸವಕ್ಕೆ ಅಸಂಖ್ಯ ಜನರು ಬರುವರು, ಅವರಿಗೋಸ್ಕರ ಬಹಳ ನೀರು ಬೇಕಾಗುವುದು. ಬಹು ದೂರದಿಂದ ಅತಿ ಪ್ರಯಾಸಪಟ್ಟು ನೀರು ತರಬೇಕಾಗುತ್ತದೆ. ಆದ್ದರಿಂದ ನನ್ನ ಅಭಿಪ್ರಾಯವೆಂದರೆ, ಈ ವರ್ಷ ಉತ್ಸವ ನಡಿಸುವದೇ ಬಿಟ್ಟು ಬಿಡಬೇಕು. ಇಲ್ಲದಿದ್ದರೆ, ನಿಮಗೆ ನೀರು ಪೂರೈಸುವದರ ದೆಶೆಯಿಂದ ಬಹಳ ಕಷ್ಟವಾಗುವುದು. ಉತ್ಸವ ಅಂದರೆ ಎಲ್ಲರಿಗೆ ಉತ್ಸಾಹವಿರತಕ್ಕದ್ದು. ಆಗ ದುಃಖಪ್ರಾಪ್ತಿಯಾಗುವದಾದರೆ ಏನು ಉಪಯೋಗವು ಆದ್ದರಿಂದ ನಿಮಗೆ ನಾನು ಹೇಳುವದೇನೆಂದರೆ, - ಈ ವರ್ಷ ಉತ್ಸವವನ್ನು ಮಾಡಬೇಡಿರಿ,” ಅಂದರು. ಈ ವಚನಗಳನ್ನು ಕೇಳಿ, ಆ ಭಕ್ತ ಜನರು, ತಮ್ಮೊಳಗೆ- ''ನಮ್ಮ ಭಕ್ತಿ ಪರೀಕ್ಷಾರ್ಥವಾಗಿ ಸದ್ಗುರುಗಳು ಹೀಗಂದಿರಬೇಕು. ಇಷ್ಟು ಭಕ್ತಮಂಡಳಿ ಇದ್ದು ಗುರುಕಾರ್ಯದಲ್ಲಿ ಹಿಂಜರಿಯುತ್ತಾರೋ ನೋಡೋಣ ಎಂದು ತಿಳಿದುಕೊಳ್ಳಲಿಕ್ಕೆ ಸದ್ಗುರುಗಳು ಹೀಗೆನ್ನುವರು. ಇದರಲ್ಲಿ ಏನೇನೂ ಸಂಶಯವಿಲ್ಲ,'' ಎಂದು ಅನ್ನುತ್ತಿದ್ದರು. ಆಗ ಕೆಲವು ಕುಹಕರು - “ನೀವು ಸಿದ್ದನು ಈಶ್ವರನೆನ್ನುವಿರಿ, ಹಾಗಾದರೆ ಆತನಿಗೆ ಸಾಧ್ಯವಿಲ್ಲದ ಕೆಲಸ ಯಾವುದೆಂದು ನಮಗೆ ಹೇಳಿರಿ. ಈತನು ಸಂಕಲ್ಪ ಮಾಡಿದ್ದಾರೆ ಕೂಡಲೆ ಪೃಥ್ವಿಯ ಮೇಲೆ ಮಳೆ ಬರಬೇಕು. ಈತನು ಪೂಜಾ ತೆಗೆದುಕೊಳ್ಳಲಿಕ್ಕೆ ಯೋಗ್ಯನೇ ಆಗಿದ್ದಾದರೆ, ನೀರಿನ ಚಿಂತೆ ಯಾಕೆ ಮಾಡುತ್ತಿರಬೇಕು ?” ಎಂದು ಕುಹಕರು ಅಂದ ವಚನವನ್ನು ಕೇಳಿ, ತುಕ್ಕಪ್ಪನೆಂಬ ಭಕ್ತನು ಬಹಳ ಸಂತಾಪದಿಂದ, ಅವರನ್ನು ಕುರಿತು- 'ಹೇ ಮೂರ್ಖರುಗಳಿರಾ, ಶ್ರೀ ಸಿದ್ಧನು ಪ್ರತ್ಯಕ್ಷ ನಿರ್ಗುಣ ಬ್ರಹ್ಮನಿದ್ದು, ಸರ್ವಾಧಿಷ್ಠಾನವಾಗಿರುತ್ತಾನೆ. ಸೃಷ್ಟಿ, ಸ್ಥಿತಿ, ಲಯಾದಿ ಈ ಅಲ್ಪ ಕರ್ಮಗಳನ್ನು ತೈಮೂರ್ತಿಗಳಿಗೆ ಒಪ್ಪಿಸಿಕೊಟ್ಟು, ತಾನು ಉಪಾಧಿರಹಿತನಾಗಿದ್ದರೂ, ಭಕ್ತರ ಪ್ರೇಮಕ್ಕೋಸ್ಕರ ಈ ಲೋಕದಲ್ಲಿ ಕ್ರೀಡಾ ಮಾಡುತ್ತಿರುವನು. ಪ್ರಾಣಿಗಳ ಕರ್ಮಾನುಸಾರ ಅವರವರಿಗೆ ಸುಖವನ್ನು ಈಶ್ವರನು ಕೊಡುತ್ತಾನೆ. ನಮಗೆ ಸುಲಭವಾದರೆ ಭಕ್ತಿ ಮಾಡುವೆವು ಎಂಬ ಮಾತು, ಆಲಸೀ ಜನರದು ಇರುತ್ತದೆ. ಎಷ್ಟು ಸಂಕಟ ಪ್ರಾಪ್ತವಾದರೂ, ಭಕ್ತಿ ಕಾರ್ಯವನ್ನು ಬಿಡಲಾರೆವೆಂದು ಯಾರು ನಿರ್ಧಾರ ಮಾಡುವರೋ ಅಂಥವರ ಮೇಲೆ ಸದ್ಗುರುವು ಕೃಪಾ ಮಾಡುವನು. ನಮ್ಮ ದೃಢನಿಶ್ಚಯವನ್ನು ಪರೀಕ್ಷೆ ಮಾಡುವದರ ದಶೆಯಿಂದ ಸದ್ಗುರುವು ಈ ಯುಕ್ತಿ ತೆಗೆದಿದ್ದಾನೆ. ಪ್ರಾಣ ಹೋಗುವದಾದರೂ ಗುರುಕಾರ್ಯವನ್ನು ಬಿಡೆವು, ಎಂದು ನಾವೆಲ್ಲರೂ ನಿಶ್ಚಯ ಮಾಡೋಣ,'' ಎಂದು ತುಕ್ಕಪ್ಪನು ಅಂದ ಮಾತನ್ನು ಕೇಳಿ, ಇತರ ಭಕ್ತರು “ಶಾಭಾಸ' ಅಂದರು. ಆ ದಿವಸ ಎಲ್ಲ ಭಕ್ತರು ಕೂಡಿ ಇದನ್ನೆ ನಿರ್ಣಯ ಮಾಡುವಂಥವರಾದರು. ಮರುದಿವಸ ಎಲ್ಲರೂ ಕೂಡಿ, ತುಕ್ಕಪ್ಪನನ್ನು ತನ್ನೊಳಗೆ ಪ್ರಮುಖನನ್ನಾಗಿ ಮಾಡಿ, ಸದ್ಗುರು ಸನ್ನಿಧಿಯಲ್ಲಿ ಬಂದರು. ತುಕ್ಕಪ್ಪನು ಸಿದ್ಧರನ್ನು ಕುರಿತು - 'ಹೇ ಪ್ರಭೋ, ನೀವು ನಮ್ಮಂಥ ಪಾಮರರನ್ನು ಉದ್ಧರಿಸುವದಕ್ಕಾಗಿ ಈಶ್ವರೀ ಅವತಾರಿಕರಿದ್ದೀರಿ. ನಿನ್ನೆಯ ದಿವಸ, ನೀವು ಆಡಿದ ಮಾತು ಸತ್ಯವಾಗಿ ಆಜ್ಞೆಯಲ್ಲವೆಂದು ನಾವು ತಿಳಿಯುತ್ತೇವೆ. ನಮ್ಮ ಭಕ್ತಿ ಪರೀಕ್ಷಾರ್ಥವಾಗಿ ನೀವು ಹಾಗೆ ಮಾತಾಡಿರುವಿರೆಂದು ನಾವು ನಿಜವಾಗಿ ತಿಳಿದಿರುತ್ತೇವೆ. ಯಾಕೆಂದರೆ ಉತ್ಸವಗಳು ಲೋಕೋದ್ಧಾರಾರ್ಥವಿದ್ದು ಆ ಕಾಲದಲ್ಲಿ ಬಹಳ ಸೇವಾ ಮಾಡುವ ಸಂಧಿಯು ನಮಗೆ ದೊರೆಯುವುದು. ಈ ಸಂಧಿ ತಪ್ಪಿತೆಂದರೆ ಸಂಸಾರದೊಳಗೆ ತೊಡಕಿ ಬಿದ್ದಿರುವ ನಮ್ಮಂಥವರಿಗೆ ಬೇರೆ ರೀತಿಯಿಂದ ಸೇವಾ ಘಟಿಸದೆ ಇದ್ದು, ನಮಗೆ ಗತಿ ಯಾವದು ? ಇದಲ್ಲದೆ, ನಿಮ್ಮ ದರ್ಶನೋತ್ಸುಕರಾಗಿ ಲಕ್ಷಾವಧಿ ಪರಸ್ಥಳಿಕ ಜನರು ಬರುವರು. ಅವರೆಲ್ಲರೂ ಇಲ್ಲಿ ಸದ್ಗುರು ಸೇವಾ ಮಾಡಿ ಕೃತಕೃತ್ಯರಾದವೆಂದು ತಿಳಿದುಕೊಂಡು ಹೋಗುವರು. ಉತ್ಸವ ಮಾಡುವುದು ಬಿಟ್ಟರೆ, ಅವರಿಗೆ ಈ ವರ್ಷ ನಿರಾಶೆಯಾಗಿ ನಿಮ್ಮ ದರ್ಶನವೂ ಘಟಿಸದೆ, ನಿಮ್ಮ ಭಕ್ತೋದ್ಧಾರ ಕಾರ್ಯವೂ ನಿಂತು ಹೋಗುವುದು, ಎಂಬುದಕ್ಕೋಸ್ಕರ ನಾವು ನಿಮ್ಮನ್ನು ಕುರಿತು ಪ್ರಾರ್ಥಿಸುತ್ತವೆ. ಈ ವರ್ಷ ಅಧಿಕ ಸೇವಾ ಇದ್ದರೆ, ನಮ್ಮ ಮೇಲೆ ಅಧಿಕ ಕೃಪೆಯೆಂದು ತಿಳಿಯುವೆವು. ಪ್ರಾಣ ಹೋಗುವುದಾದರೂ ಶ್ರಮಕ್ಕೆ ಹೆದರದೆ, ಗುರುಕಾರ್ಯವನ್ನು ಯೋಗ್ಯರೀತಿಯಿಂದ ಮಾಡುವೆವು. ನಮ್ಮ ಶರೀರವು ಅಶಾಶ್ವತವಿದ್ದು, ಈ ಉತ್ತಮಸಂಧಿ ತಪ್ಪಿತೆಂದರೆ, ಮುಂದೆ ಎಂದೂ ಇಂಥ ಸೇವಾ ಕಾರ್ಯ ದೊರೆಯಲಾರದು ಎಂದು ನಿರ್ಧಾರವಾಗಿ ಹೇಳುವೆವು. ಆದ್ದರಿಂದ ಜಾತ್ರೆ ಕೆಲಸವನ್ನು ನಡಿಸಲಿಕ್ಕೆ ನಮಗೆ ಆಜ್ಞೆಯಾಗಬೇಕು' ಎಂದು ಪ್ರಾರ್ಥಿಸಿದನು. ಇದನ್ನು ಕೇಳಿ, ಸದ್ಗುರುಗಳು - “ಎಷ್ಟು ಸಂಕಟಗಳು ಬಂದರೂ ಕಾರ್ಯ ನಡಿಸುವೆವು ಎಂದು ನೀವು ನಿಶ್ಚಯ ಮಾಡಿದ್ದಾದರೆ, ಉತ್ಸವವನ್ನು ನಡಿಸಿರಿ, ಭಾರವೆಲ್ಲ
ನಿಮ್ಮ ಮೇಲೆಯೇ ಇರುತ್ತದೆ,'' ಎಂದು ಹೇಳಿದರು. ಈ ಪ್ರಕಾರ ಅಂದು, ಸದ್ಗುರುಗಳು ತಮ್ಮೊಳಗೆ ನಗುವಂಥವರಾದರು. ಯಾಕೆಂದರೆ, ಭಕ್ತರ ಮೇಲೆ ಭಾರ ಹಾಕಿದರೂ, ಕಡೆಗೆ ಅದು ತನ್ನ ಮೇಲೆಯೇ ಬರುವದು. ಸದ್ಗುರುಗಳ ಕೃಪಾವಚನವನ್ನು ಕೇಳಿ, ಎಲ್ಲ ಭಕ್ತ ಜನರು ಆನಂದ ಪಟ್ಟು, ಸದ್ಗುರು ನಾಮಸ್ಮರಣೆ ಮಾಡುತ್ತ ತಮ್ಮ ಗೃಹಗಳಿಗೆ ತೆರಳುವಂಥವರಾದರು. ಅತ್ಯಂತ ದಯಾಳುವಾದ ಸದ್ಗುರುನಾಥನು ಭಕ್ತರ ದಶೆಯಿಂದ ಚಿಂತೆ ಮಾಡುತ್ತ ಕುಳಿತನು. ಮರುದಿವಸ ಸಿದ್ದರು ಒಂದು ಬರಿದಾದ ಮೃತ್ತಿಕಾ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡು ಹೊರಟರು. ಕೆರೆಯ ದಂಡೆಯ ಮೇಲೆ ಬಂದು ಆ ಬರೇ ಕೆರೆಯೊಳಗೆ ಇಳಿದು, ಮೃತ್ತಿಕಾ ಪಾತ್ರೆಯನ್ನು ಸಮೀಪ ಇಟ್ಟುಕೊಂಡು ಕುಳಿತುಕೊಂಡರು. ಆ ಪಾತ್ರೆಯ ಮೇಲೆ ಹಸ್ತವಿಟ್ಟು, ಮೂರು ಘಳಿಗೆ ತನಕ ಕುಳಿತುಕೊಂಡು, ಆಮೇಲೆ ಅದನ್ನು ಕೈಯಲ್ಲಿ ತೆಗೆದುಕೊಂಡು, ಪೂರ್ವಸ್ಥಾನಕ್ಕೆ ಬಂದರು . ಯಾರೋ ಒಬ್ಬರು ಆ ಪಾತ್ರೆಯೊಳಗೆ ನೋಡುವಾಗ, ಅದರೊಳಗೆ ನೀರು ತುಂಬಿದ್ದನ್ನು ಕಂಡರು. ಎಲ್ಲರಿಗೂ ಆಶ್ಚರ್ಯವಾಯಿತು. ಮಹಾತ್ಮರಾದರೂ, ತೂಷ್ಣಿಂ ಸ್ಥಿತಿಯಲ್ಲಿದ್ದರು. ಅಷ್ಟರೊಳಗೆ ಆಕಾಶದಲ್ಲಿ ನಾಲ್ಕೂ ಕಡೆಯಿಂದ ಮೇಘಗಳು ಬಂದು ತುಂಬಿದವು. ವಿದ್ಯುಲ್ಲತೆಯು ಝಳಕಿಸಿತು. ಮೇಘ ಗರ್ಜನೆಯು ಕೇಳಿಸಿತು. ಆಗ ಭಕ್ತರೆಲ್ಲಾ ಆನಂದಭರಿತರಾಗಿ, ಸಿದ್ದರನ್ನು ಕುರಿತು - “ಮಳೆ ಬರಲಿಕ್ಕೆ ಆರಂಭವಾಯಿತು. ಇದು ನಿಮ್ಮ ಮಹಿಮೆಯ ಕಾರ್ಯವಿರುತ್ತದೆ.” ಎಂದು ಹೇಳಿದರು. ಒಳ್ಳೆ ಭರದಿಂದ ಘನವಾದ ಮಳೆಯು ಬೀಳಲಾರಂಭಿಸಿತು. ಕಾಲುವೆಯೊಳಗಿಂದ ಹಳ್ಳಬಂದು , ಒಂದೇ ತಾಸಿನೊಳಗೆ ಕೆರಯು ಪೂರ್ಣವಾಗಿ ನೀರಿನಿಂದ ತುಂಬುವಂಥಾದ್ದಾಯಿತು. ಇದನ್ನು ನೋಡಿ ತುಕ್ಕಪ್ಪನು ಆನಂದದಿಂದ ಕುಣಿಯುತ್ತಿದ್ದನು. ಆತನು ಎನ್ನುತ್ತಾನೆ - “ಸದ್ಗುರು ಕರುಣಾಮೂರ್ತಿಯಿದ್ದು, ಭಕ್ತರ ದುಃಖವು ಆತನಿಂದ ನೋಡಲಾರದೆ, ನಮ್ಮ ಪರೀಕ್ಷೆ ಮಾಡಿದರೂ, ಕಾರ್ಯವನ್ನು ನಿಶ್ಚಯವಾಗಿ ಆತನೇ ಕೈಕೊಂಡನು”. ಎಲ್ಲಾ ಭಕ್ತರ ಹೃದಯದಲ್ಲಿ ಆನಂದವು ವ್ಯಾಪಿಸಿತು. ಆಗ ಕೆರೆಯ ಸಮೀಪ ಸದ್ಗುರುನಾಥರು ಬಂದರು. ಅಲ್ಲಿ ಎಲ್ಲಾ ಭಕ್ತರು ಸದ್ಗುರುಗಳಿಗೆ ಆರತಿಯನ್ನು ಬೆಳಗುವಂಥವರಾದರು. ಅದೇ ಸಮಯದಲ್ಲಿ ಆ ಕುಹಕರಾದರೂ ಸಿದ್ದರ ಮುಂದೆ ಬಂದು - 'ಹೇ ಸದ್ಗುರುಗಳೇ, ನಾವು ನಿಮ್ಮ ನಿಂದೆ ಬಹಳ ಮಾಡಿದೆವು. ಈಗ ನಿಮ್ಮ ಪಾದಕ್ಕೆ ಬೀಳುವೆವು. ನಮ್ಮನ್ನು ಕ್ಷಮಾ ಮಾಡಬೇಕಾಗಿ ಪ್ರಾರ್ಥಿಸುವೆವು", ಅಂದರು. ಅವರಿಗೆ ಮಹಾರಾಜರು - “ಈಶ್ವರನೇ ನಿಮ್ಮ ಮಾತುಗಳನ್ನು ಮಾನ್ಯ ಮಾಡಿ ಮಳೆಯನ್ನು ತರಿಸಿದನು, ಮತ್ತು ನಿಮ್ಮಿಂದ ಪೂಜಾ ತೆಗೆದುಕೊಳ್ಳುವುದಕ್ಕೆ ಯೋಗ್ಯತೆಯನ್ನು ಸಂಪಾದಿಸಿಕೊಂಡನು. ನಿಮ್ಮಿಂದಲೇ ಎಲ್ಲರಿಗೂ ಕ್ಷೇಮವಾಯಿತು. ಇಲ್ಲದಿದ್ದರೆ ಬಹಳ ದುಃಖ ಅನುಭವಿಸಬೇಕಾಗುತ್ತಿತ್ತು. ಈಶ್ವರನು ನಿಂದಕರಿಗೂ ವಂದಕರಿಗೂ ಸಮಾನ ಫಲವನ್ನು ಕೊಡುತ್ತಾನೆ. ಯಾವ ರೀತಿಯಿಂದಲಾದರೂ ಆತನ ಚಿಂತನೆಯಾಗಬೇಕು. ಇದೇ ಮುಖ್ಯ ಗುಟ್ಟಾಗಿರುತ್ತದೆ. ಆದರೆ ವಂದಕರಿಗೆ ಸುಖ, ನಿಂದಕರಿಗೆ ಈ ಲೋಕದಲ್ಲಿ ದುಃಖವಾಗುತ್ತಿದೆ. ಈಗ ನಿಮಗೆ ಅನುತಾಪವಾಯಿತು. ಇದೇ ನಿಮಗೆ ಕ್ಷಮಾರೂಪವಾಗಿರುತ್ತದೆ. ಅಹೋರಾತ್ರಿ ನಾಮವನ್ನು ಜಪಿಸುವುದರಿಂದ ದುಃಖದ ಭಯವೇ ಇರುವದಿಲ್ಲ,” ಅಂದರು. ಮಹಾತ್ಮರ ಸದ್ಗುಣ ವಿಶೇಷವನ್ನು ನೋಡಿ ಸರ್ವರಿಗೂ ಕಂಠ ಗದ್ಗದಿತವಾಯಿತು. ಸರ್ವ ಸ್ತ್ರೀ ಪುರುಷರಿಗೂ ಬಾಲಕರಿಗೂ ನೇತ್ರಗಳಿಂದ ಪ್ರೇಮಾಶ್ರುಗಳು ಸುರಿಯುವಂಥಾದ್ದಾಯಿತು. ಭಕ್ತ ಕರುಣಾಕರನಾದ ಸದ್ಗುರುನಾಥನು ಭಕ್ತರ ಪರೀಕ್ಷಾರ್ಥವಾಗಿ, ಲೀಲಾ ತೋರಿಸಿದನು. ಆದರೆ ನಿತ್ಯತೃಪ್ತ ನಿಷ್ಕಾಮನಾದ ಆತನು ಕೂಡಲೇ ಭಕ್ತ ರಕ್ಷಣಾರ್ಥವಾಗಿ ಪ್ರವರ್ತನಾದನು.
ಈಗ ಕಥೆಯ ಲಕ್ಷ್ಯಾರ್ಥವನ್ನು ಶ್ರವಣ ಮಾಡಿರಿ, ನಿರಂಜನ ವಸ್ತುವಿನಲ್ಲಿ ನಿತ್ಯ ತತ್ಪರನಾಗಿರುವ ಮುಮುಕ್ಷು ಜನರಿಗೆ ಈ ಪ್ರಕಾರ ಅಧ್ಯಾತ್ಮ ವಿಚಾರ ಮಾಡುವದರಿಂದ ಆನಂದವಾಗುತ್ತದೆ. ಸಿದ್ಧನೇ ಸದ್ಗುರುನಾಥನಿದ್ದು, ಜಾತ್ರಯೆಂಬುದು
ಭವದೊಳಗಿಂದ ತಾರಣ ಮಾಡುವಂಥದ್ದಾಗಿರುತ್ತದೆ. ಇದಕ್ಕೋಸ್ಕರ ಆನಂದ ಜಲವು ಅವಶ್ಯವಾಗಿರುತ್ತದೆ. ಆದ್ದರಿಂದ
ಮುಮುಕ್ಷುಗಳಾದ ಭಕ್ತಜನರನ್ನು ಕುರಿತು ಸದ್ಗುರುವು ಅನ್ನುತ್ತಾನೆ - “ಸರ್ವ ಜನರೆಂಬ ವೃತ್ತಿಗಳ ತಾರಣ ಕಾರ್ಯವು ನಮ್ಮಿಂದಾಗದು, ಯಾಕೆಂದರೆ ಆನಂದ ರೂಪ ಜಲವಿಲ್ಲ. ನೀವು ಯೋಗಾಭ್ಯಾಸ, ತಪಶ್ಚರ್ಯ ಇತ್ಯಾದಿ ದಾರುಣ ರೀತಿಯಿಂದ ದೇಹದಂಡನೆ ಮಾಡಿದ್ದಾದರೆ ಆನಂದ ಪ್ರಾಪ್ತಿಯಾಗಿ, ನಿಮ್ಮ ತಾರಣ ಕಾರ್ಯವಾಗುವದು. ಇಲ್ಲದಿದ್ದರೆ ಬೇರೆ ಉಪಾಯವಿಲ್ಲ. ಅಥವಾ ತಾರಣ ಕಾರ್ಯವನ್ನು ಬಂದ ಇಡುವೆವು, ಅಂದರೆ ದೇಹ ದಂಡನೆಯ ಕೆಲಸವಿಲ್ಲ. ಅನ್ಯ ಯುಕ್ತಿ ಇಲ್ಲ. ಇದನ್ನು ಕೇಳಿ, ಎಲ್ಲರೂ ಘಾಬರಿಯಾದರು. ಆಮೇಲೆ ಸದ್ಭಾವವೆಂಬ ತುಕ್ಕಪ್ಪನನ್ನು ಮುಂದೆ ಮಾಡಿ, ''ತಪಾದಿಗಳಿಗೆ ಹೆದರಿ ಕಾರ್ಯ ಬಿಡಲಾರೆವು,'' ಎಂದು ಸದ್ಗುರುಗಳಿಗೆ ವಿಜ್ಞಾಪಿಸಿದಲ್ಲಿ, ಸದ್ಗುರುಗಳು ಅವರ ಮಾತನ್ನು ಮಾನ್ಯ ಮಾಡಿದರು. ಆದರೆ ಆಂತರ್ಯದಲ್ಲಿ ಭಕ್ತಿ ಕರುಣಾಕರನಾದ ಸದ್ಗುರುವು ಏಕಾಗ್ರ ಚಿತ್ತದಿಂದ ವಿಚಾರ ಮಾಡಿ, ಉತ್ತಮವಾದ ಬ್ರಹ್ಮ ವಿದ್ಯೆಯನ್ನು ತೆಗೆದನು. ಮೇಘ ವಿದ್ಯೆಯಿಂದ ಮಳೆ ತರಿಸಿದನು. ಅಂದರೆ ಬ್ರಹ್ಮ ವಿದ್ಯೆಯಿಂದ ಬೋಧವೆಂಬ ಪರ್ಜನ್ಯ ತರಿಸಿದನು. ಅದರಿಂದ ಆನಂದ ಪ್ರವಾಹವು ಬಂದು, ಎಲ್ಲರಿಗೂ ತಾರಕವಾಯಿತು. ತಪಾದಿ ದೇಹ ದಂಡನೆ ಮಾಡದೆ, ಯೋಗಾದಿ ಕಠಿಣ ಸಾಧನೆಯನ್ನು ನಡೆಸದೆ, ಸದ್ಗುರುಬೋಧ ಮಾತ್ರದಿಂದ ಸರ್ವರಿಗೂ ಭವದೊಳಗಿಂದ ತಾರಣವಾಗುವಂಥಾದ್ದಾಯಿತು. ಇಂಥಾ ದಯಾಳು ಆದ ಸದ್ಗುರುನಾಥನು ಸರ್ವ ಕಾಲದಲ್ಲಿಯೂ ಭಕ್ತ ಕಾರ್ಯದಲ್ಲಿ ರತನಾಗಿರುವನು. ಆದ್ದರಿಂದಲೇ ಅನಾಥನಾಥನಾದ ಆತನ ಪಾದಗಳನ್ನು ತ್ವರೆಯಿಂದ ಹಿಡಿಯತಕ್ಕದ್ದು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ಶಿವಪ್ಪನೆಂಬ ಭಕ್ತನು ನಿಚ್ಚಿಣಿಕೆಯಿಂದ ಬಿದ್ದು ಸತ್ತಾಗ ಸದ್ಗುರುನಾಥರು ಬದುಕಿಸಿದ ಕಥೆ.
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
