ಸದ್ಗುರು ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ ಮತ್ತು ಗರಗದಲ್ಲಿ ಲೀಲೆಗಳು

 🌺ಸದ್ಗುರು ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ ಮತ್ತು ವೇದಾಂತ 🌹




🍁ಮಡಿವಾಳ ಸ್ವಾಮಿಗಳ ಪೂರ್ವ ಚರಿತ್ರೆ 


ಪೂರ್ವದ ರಾಜಧಾನಿಯಾದ ಕಿತ್ತೂರ ನಗರವು ಕರ್ನಾಟಕ ದೇಶದಲ್ಲಿ, ಬಹು ಸುಂದರವಾಗಿಯೂ,ಅನೇಕ  ವನೋಪವನಗಳಿಂದ ಮನೋಹರವಾಗಿಯೂ ಇತ್ತು. ಸಕಲ ವೇದ ಶಾಸ್ತ್ರಗಳಲ್ಲಿ ಪಾರಾಂಗತನಾದ ಒಬ್ಬ ಮಹಾತ್ಮನು  ಈ ನಗರದಲ್ಲಿ ವಾಸ ಮಾಡುತ್ತಿದ್ದನು. ಆತನ ಹತ್ತಿರ ಮಡಿವಾಳಪ್ಪಾ ಎಂಬ ನಾಮವುಳ್ಳ ಒಬ್ಬ ಬ್ರಹ್ಮಚಾರಿಯು ವಿದ್ಯಾರ್ಥಿಯಾಗಿ ಬಂದನು. ಈತನು ವಿದ್ಯಾಭ್ಯಾಸದಲ್ಲಿ ಬಹು ಚತುರನಾಗಿದ್ದು, ತೀವ್ರವಾಗಿ ವಿದ್ಯಾಗ್ರಹಣ ಮಾಡುತ್ತಾ,  ಗುರು ಕೃಪೆಯಿಂದ ಸಕಲ ವೇದ ಶಾಸ್ತ್ರದಿಗಳನ್ನು ಮುಖೋದ್ಗತ ಮಾಡಿಕೊಂಡನು. ಒಂದಾನೊಂದು ದಿವಸ ಗುರುಗಳು ಗ್ರಾಮಾಂತರಕ್ಕೆ ಹೋಗಿರುವಾಗ ಅವರ ಮಠದೊಳಗೆ ಇಬ್ಬರು ರಾಜಕನ್ನಿಕೆಯರು ಬಂದು ಒಬ್ಬಂಟಿಗನಾಗಿರುವ ಮಡಿವಾಳಪ್ಪನನ್ನು ನೋಡಿದರು. ಆಗ ಆ ತರುಣಿಯರು ಈತನ ಮನೋವೃತ್ತಿ ಪರೀಕ್ಷಾರ್ಥವಾಗಿ, ನಾನಾ ಪ್ರಕಾರ ಕಾಮಚೇಷ್ಟೆಗಳನ್ನು ಮಾಡಲಾರಂಭಿಸಿದರು; ಆದರೆ ಆತನು  ಕಾಮವನ್ನು ಜಯಿಸಿದಂಥವನಾದ್ದರಿಂದ ಆತನ ವೃತ್ತಿಯು  ಅಚಲವಾಗಿ ನಿಂತಿತು. ಆತನ  ವೈರಾಗ್ಯವು ಅತ್ಯದ್ಭುತವಾಗಿದ್ದು, ಸ್ತ್ರೀಯರ ಕಡೆಗೆ ಅಕಸ್ಮಾತ್ತಾಗಿ ಸಹಾ ನೋಡುತ್ತಿದ್ದಿಲ್ಲ, ಮತ್ತು ತನ್ನ ಅಧ್ಯಯನದಲ್ಲಿಯೇ ಸ್ವಸ್ಥ ಚಿತ್ತನಾಗಿದ್ದು, ಕಿಂಚಿತ್ ಮಾತ್ರವೂ ಮಾತಾಡದೇ ಇದ್ದನು. ಆಗ ಆ ತರುಣಿಯರು ಮನಸ್ಸಿನಲ್ಲಿ ಅತ್ಯಂತ ಚಕಿತರಾಗಿ ತಮ್ಮ ಗೃಹವನ್ನು ಕುರಿತು ಹೋಗುವಂಥವರಾದರು. ಮಡಿವಾಳ ಮುನಿಯಾದರೂ, ಬಹು ಕ್ರೋಧದಿಂದ ಅನ್ನುತ್ತಾನೆ- “ಈ ತರುಣಿಯರು ಬಹು ಉಪದ್ರ ಕೊಡುವರು. ನಾನು ಈಗ ಈ ಗ್ರಾಮವನ್ನೇ ಬಿಟ್ಟು ಹೋಗುವೆನು, ಆದರೆ ನಾನು ಬರುವಷ್ಟರಲ್ಲಿ, ಇದು ನಾಶವಾಗಿ ಹೋಗುವುದು", ಎಂದು ಅನ್ನುತ್ತಾ ಹೊರಟುಹೋದನು. ತಾನು ಉಟ್ಟಂಥಾ ಧೋತರವನ್ನು ಹರಿದು ಹಾಕಿ, ಆಶ್ರಮ ತ್ಯಾಗಮಾಡಿ, ತತ್ಕಾಲವೇ ಉತ್ತರ ಹಿಂದೂಸ್ತಾನವನ್ನು ಕುರಿತು ಹೋಗುವಂಥವನಾದನು. ದಿಗಂಬರ ರೂಪಧರಿಸಿ, ಏಕಾಂಗಿಯಾಗಿ ಮಾರ್ಗದ ಮೇಲೆ ನಡೆಯುತ್ತಿರುವಾಗ ಈತನು ಸಾಕ್ಷಾತ್ ವಿದ್ಯಾಸೂರ್ಯನೋ ಎಂಬಂತೆ ಮುಖದ ಮೇಲೆ ತೇಜ ಕಾಣಿಸುತ್ತಿದ್ದುದ್ದನ್ನು ನೋಡಿ, ಎಲ್ಲರಿಗೂ ಬಹಳ ಆಶ್ಚರ್ಯವಾಗುತ್ತಿತ್ತು. ಮಡಿವಾಳ ಸ್ವಾಮಿಯು ಕಾಶಿಕ್ಷೇತ್ರಕ್ಕೆ ಹೋಗಿ, ಅಲ್ಲಿ ವಾದದಿಂದ ಎಲ್ಲಾ ಪಂಡಿತರನ್ನು ಜಯಿಸಿ, ಕ್ಷೇತ್ರದಲ್ಲೆಲ್ಲಾ ಕೀರ್ತಿ ಪಸರಿಸುತ್ತಾ, ಈ ಪ್ರಕಾರ ಬಹುಮಾನವನ್ನು ಸಂಪಾದಿಸಿದನು. ಅನಂತರ ಮಡಿವಾಳ ಸ್ವಾಮಿಯು ವಿಶ್ವನಾಥನ ದರ್ಶನವನ್ನು ತೆಗೆದುಕೊಂಡು ಒಂದು ಏಕಾಂತ ಸ್ಥಾನದಲ್ಲಿ ಕುಳಿತುಕೊಂಡು, ತನ್ನ ಮನಸ್ಸಿಗೆ ಹೀಗೆ ವಿಚಾರಿಸುವಂಥವನಾದನು. ''ಹಾ, ಹಾ, ನಾನು ಅತ್ಯಂತ ವಿರಕ್ತಿಯುಕ್ತನಾಗಿ ಎಲ್ಲಾ ವಿಷಯಗಳನ್ನು ತ್ಯಾಗ ಮಾಡಿ ಇಲ್ಲಿಗೆ ಬಂದೆನು. ಇಲ್ಲಿಗೆ ಬಂದು, ಇದೇನು ಮೂರ್ಖತ್ವವನ್ನು ಮಾಡಿದೆ ! - ಸಮಸ್ತ ಪಂಡಿತರನ್ನು ಜಯಿಸಿ, ಅವರ ಮುಖಭಂಗ ಮಾಡಿ, ನಾನು ಬಹಳ ಮಾನವನ್ನು ಸಂಪಾದಿಸಿದೆ, ಆದರೆ ಅವರು ಅತ್ಯಂತ ಖಿನ್ನರಾಗಿ, ಮಹಾ ದುಃಖವನ್ನು ಹೊಂದಿದ್ದಾರು. ಇಂದ್ರಿಯಗಳ ವಿಷಯಗಳನ್ನು ನಾನು ಬಿಟ್ಟು ಬಂದೆ. ಆದರೆ ಮಾನ ವಿಷಯವನ್ನು ಸಂಗ್ರಹಿಸಿ, ನಾನು ಮೋಸಹೊಂದಿದೆ. ಅಭಿಮಾನದಿಂದ ಪೂರ್ಣವಾಗಿ ನುಂಗಲ್ಪಟ್ಟು, ಅವಿಚಾರ ಮೂಲಕ ವ್ಯರ್ಥವಾಗಿ ನಾನು ವಂಚಿಸಲ್ಪಟ್ಟೆ. ವಾದದಲ್ಲಿ ಪಂಡಿತರನ್ನು ಜಯಿಸಿದ್ದರಿಂದ ನಾನು ಬ್ರಹ್ಮರಾಕ್ಷಸನಾಗಬೇಕಾಗುವದು. ನಾನು ಬ್ರಹ್ಮಜಿಜ್ಞಾಸವನ್ನು ಮಾಡದೆ ಇದ್ದದರಿಂದ ನನ್ನ ಈ ವೈರಾಗ್ಯವೇಷವಾದರೂ ವ್ಯರ್ಥವಾಗಿ ಹೋಯಿತು. ಎರಡನೇಯವರಿಗೆ ದುಃಖ ಕೊಟ್ಟಿದ್ದರಿಂದ ನನ್ನ ಪರಮಾರ್ಥವೆಲ್ಲಾ ನಾಶವಾಯಿತು. ಮಾನದ ಸಲುವಾಗಿ ಜನ್ಮದ್ದೇ  ಹಾನಿ ಮಾಡಿಕೊಂಡೆ. ಇವತ್ತಿನಿಂದ ನನ್ನ ಮುಖದೊಳಗಿಂದ ಸಂಸ್ಕೃತ ಭಾಷೆಯು  ಹೊರಡಬಾರದು.” ಹೀಗೆ ಅನ್ನುತ್ತಾ ಮಹಾ ಅನುತಾಪ ಹೊಂದಿದವನಾಗಿ, ತನ್ನ ಹತ್ತಿರ ಇದ್ದ ಭೂಷಣಾದಿಗಳನ್ನೆಲ್ಲಾ ಬಡವರಿಗೆ ಹಂಚಿಬಿಟ್ಟನು. ಕೂಡಲೇ ಹಿಮಾಲಯ ಪರ್ವತವನ್ನು ಕುರಿತು ಹೊರಟು ಹೋಗಿ, ಅಲ್ಲಿ ಒಂದು ಏಕಾಂತ ಸ್ಥಾನವನ್ನು ನೋಡಿ, ತಪಸ್ಸು ಮಾಡುತ್ತಾ ಇದ್ದು, ಮನಸ್ಸನ್ನು ದೃಢವಾದ ಅಭ್ಯಾಸದಲ್ಲಿ ಇಡುವಂಥವನಾದನು. ಕೆಲವು ಕಾಲದ ನಂತರ ಮನಸ್ಸಿನ ವೃತ್ತಿಯು ಅತ್ಯಂತ ಶಾಂತಿಯನ್ನು ಹೊಂದಿ ಅದೇ ರೀತಿಯಿಂದ ನಿರ್ಗುಣದಲ್ಲಿ ಪ್ರವೇಶಿಸಿ ಬ್ರಹ್ಮಸ್ಥಿಥಿಯನ್ನು ಸ್ಥಿರ ಪಡಿಸಿದನು. ಆತ್ಮಜ್ಞಾನವು ದೃಢವಾಗಿ, ಶಾಂತಿ ತೇಜವು ಮುಖದ ಮೇಲೆ ಭಾಸಿಸುವಂಥಾದ್ದಾಯಿತು. ಅದೇ ಸಮಯದಲ್ಲಿ ಜೀವನ್ಮುಕ್ತ ಸ್ಥಿತಿಯು ಆತನಿಗೆ ಪ್ರಾಪ್ತವಾಯಿತು.


 ಈ ಪ್ರಕಾರ ಆತ್ಮ ಜ್ಞಾನವನ್ನು ಪ್ರಾಪ್ತಮಾಡಿಕೊಂಡು, ಹಿಮಾಲಯ ಗಿರಿಯನ್ನು ಬಿಟ್ಟು, ದಕ್ಷಿಣಕ್ಕೆ ಬಂದು, ಕಿತ್ತೂರ ಗ್ರಾಮದ ಸಮೀಪ ಬಂದು ನೋಡುವಾಗ, ಅದೆಲ್ಲಾ ನಾಶವಾಗಿ ಹೋಗಿತ್ತು. ನಗರದಲ್ಲಿ ಪರಚಕ್ರಪ್ರವೇಶವಾಗಿ, ರಾಜಗ್ರಹದೊಳಗಿನ ಸ್ತ್ರೀಯರ ಸಮೇತ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು.  ಇದನ್ನು ನೋಡಿ ಮಡಿವಾಳ ಸ್ವಾಮಿಗೆ ಬಹು ದುಃಖವಾಯಿತು. ಮಹಾತ್ಮನಿಗೆ ಯಾವಲ್ಲಿ ಛಳನವಾಗುವದೋ ಆ ಸ್ಥಾನವು ಶಾಪಗ್ರಸ್ತವೆಂದು ತಿಳಿಯತಕ್ಕದ್ದು.

ಮಹಾತ್ಮನು ಆ ಸ್ಥಾನವನ್ನು ತನ್ನ ಅನುಗ್ರಹದಿಂದ ರಕ್ಷಿಸುವದಿಲ್ಲವಾದರೆ ಆ ಕೂಡಲೇ ಅದು ನಷ್ಟಪ್ರಾಯವಾಗುವದು ಇರಲಿ, ಈ ಕಾಲದಲ್ಲಿ ಮಡಿವಾಳ ಸ್ವಾಮಿಯವರು ಗರಗ ಗ್ರಾಮದಲ್ಲಿ ಹೋಗಿ ಇರುವಂಥವರಾದರು. ಇವರ ಜ್ಞಾನ

ಸ್ಥಿತಿಯನ್ನು ತಿಳಿದಿರುವ ಅನೇಕ ಜನ ಭಕ್ತರು ನಿತ್ಯದಲ್ಲಿಯೂ ದರ್ಶನಕ್ಕೆ ಬರುತ್ತಿದ್ದರು. ಎಲ್ಲಾ ಭಕ್ತ ಜನರು ಕೂಡಿ, ಒಂದು ಹಳ್ಳದ ದಂಡಿಯಲ್ಲಿ ರಮ್ಯ ಸ್ಥಾನವನ್ನು ನೋಡಿ, ಅವರಿಗೆ ಮಠವನ್ನು ಕಟ್ಟಿಸಿ ಕೊಟ್ಟರು. ಮತ್ತು ಅಂದಿನಿಂದ ಮಡಿವಾಳ ಸ್ವಾಮಿಯವರು ಆ ಮಠದಲ್ಲಿಯೇ ಇರುವಂಥವರಾದರು. ಇವರ ಸೇವಾ ಮಾಡುವುದರ ದಶೆಯಿಂದ ಬಹುಮಂದಿ  ಶಿಷ್ಯರು ಇರುತ್ತಿದ್ದರು. ಏನೋ ಒಂದು ನಿಮಿತ್ತದಿಂದ ಆ ಮಹಾತ್ಮರ ದೃಷ್ಟಿ ನಾಶವಾಗಿ ಕುರುಡರಾದರು. 


🕉️ಸಿದ್ಧಾರೂಢರಿಂದ ಗರಗದ ಮಡಿವಾಳಸ್ವಾಮಿಗಳ ದರ್ಶನ🙏


ಶ್ರವಣಾಪೇಕ್ಷಿಗಳು ಹೆಚ್ಚಾಗತೊಡಗಿದ್ದಲ್ಲದ ಪ್ರಶ್ನೆ ಮಾಡುತ್ತಾ ತಿಳಿದುಕೊಳ್ಳುವ ಕುತೂಹಲವುಳ್ಳವರಾಗಿದ್ದರು. ಒಂದು ದಿನ ಓರ್ವ ಭಕ್ತನು ಮುಂದೆ ಬಂದು, ಹೇ ಸ್ವಾಮಿಗಳೇ ಜ್ಞಾನಿಯ ಲಕ್ಷಣಗಳ ಬಗ್ಗೆ ತಾವು ಹೇಳಿದ್ದನ್ನು ಕೇಳಿದೇವು  ಮಿಥ್ಯವಾದ ಈ ಪ್ರಪಂಚದಲ್ಲಿ ವಿನೋದದಿಂದ ತೋರಿಕೆಯಾಗಿ ಜ್ಞಾನಿಯು ನಟನೆ ಮಾಡುವನು ಅಂತ ಹೇಳಿದ್ದೀರಿ. ಆದರೆ ನನಗೆ ಅನುಮಾನ ಮೂಡಿದೆ. ಅದೆಂದರೆ ಗರಗ ಗ್ರಾಮದಲ್ಲಿ ಮಡಿವಾಳಪ್ಪನೆಂಬ ಯೋಗಿವರ್ಯನಿದ್ದು  ದಿಗಂಬರನಾಗಿದ್ದು,  ಆತನು ಅಂದನು. ಈತನು ತ್ಯಾಗಿಯು  ಜ್ಞಾನಿಯು ಅಂತಾ ದರ್ಶನಕ್ಕಾಗಿ ಬಂದ ಭಕ್ತರಿಗೆ ಮನಬಂದಂತೆ ಬೇಡುತ್ತಾನೆ. ಹೀಗೆ ಬೇಡಿಕೆ ಇರುವಾತ ಜ್ಞಾನಿಯ ಬಗ್ಗೆ ನಾವು ತಿಳಿದುಕೊಳ್ಳಬೇಕು ಅಂತಾ ಮನಸ್ಸಿನಲ್ಲಿ ಒಡಮೂಡಿದೆ. ತಾವು ಸಂಚಾರದಲ್ಲಿದ್ದಾಗ ಈ ಮೊದಲಿಗೆ ಈ ಅಂಧ ಮಡಿವಾಳೇಶನ ದರ್ಶನವಾಗಿದ್ದರೆ ಆ ಬಗ್ಗೆ ತಿಳಿಸಬೇಕು ಅಂತ ಕೇಳಿದನು. ಅದಕ್ಕೆ ಸಿದ್ದನ ಪೇಳತೊಡಗಿದನು. ನಾನು ಗೋಕಾವಿ ನದಿಯನ್ನು ದಾಟುತ್ತಾ ಅನೇಕ ಊರುಗಳನ್ನು ಗ್ರಾಮಗಳನ್ನು ನೋಡುತ್ತಾ ಬೆಳಗಾವಿ ಮೇಲಿಂದ ಗರಗ ಗ್ರಾಮಕ್ಕೆ ಹೋದೆನು.ಊರ ಹೊರಗೆ ಇದ್ದಾಗಲೇ ಮಠದಲ್ಲಿ ಮಡಿವಾಳಸ್ವಾಮಿಯು ತನ್ನ ಶಿಷ್ಯನನ್ನು ಕರೆದು, ಗಂಟ್ಯಾ  ನಾನು ಬೆತ್ತಲೆ ಇರುವೆ. ಒಬ್ಬ ಮನುಷ್ಯ ನಮ್ಮಲ್ಲಿಗೆ ಬರುತ್ತಿರುವನು. ಬೇಗನೆ ನೀನು ಕಂಪನಿಯನ್ನು ತೆಗೆದುಕೊಂಡು ಬಾ ಅಂತಾ ಹೇಳಿದನು. ಕೂಡಲೇ ಕಪನಿ  ಧರಿಸಿದನು. ಆಗ ಎದುರಿಗಿದ್ದ ಭಕ್ತರು ಮಡಿವಾಳಸ್ವಾಮಿಗೆ, ಹೇ ಸ್ವಾಮಿಗಳೇ ಲಜ್ಜೆಯನ್ನು ಬಿಟ್ಟು ಇಷ್ಟು ದಿನ ದಿಗಂಬರನಾಗಿದ್ದು, ಈ ದಿನ ಯಾಕೆ ನಿಮಗೆ ಲಜ್ಜೆಯುಂಟಾಯಿತು. ನಾವು ಮನುಷ್ಯರಲ್ಲವೆ  ಅಂತ ಕೇಳಿದರು. ಅದಕ್ಕೆ ಸ್ವಾಮಿಯು , ಕೇಳಿರಿ ನೀವು ಶೌಚಕ್ಕೆ ಕೂತಾಗ ನಿಮ್ಮೆದುರಿಗೆ ಪಶುಗಳು ತಿರುಗಾಡಿದರೆ ನಿಮಗೆ ಲಜ್ಜೆ ಬಾರದೆಂಬಂತೆ  ನೀವೆಲ್ಲರೂ ಮನುಷ್ಯತ್ವ ಪಡೆದಿಲ್ಲ. ಕಾರಣ ನನಗೆ ಲಜ್ಜೆ ಬರಲಿಲ್ಲ. ಈಗ ಬರುವವನು  ಮನುಷ್ಯನು ಅಂತಾ ನುಡಿಯುತ್ತಿರುವಲ್ಲಿಯೇ, ಹೊರಗೆ ಯಾರೋ ಮಹಾತ್ಮರು ಬಂದಿರುವರು ಅಂತ ಗಂಟೆಪ್ಪನು ಹೇಳಿದ ಕೂಡಲೇ ಆತನನ್ನು ಕೂಡಲೇ ಕರೆ ತರಬೇಕೆಂದು ಹೇಳಿದರು. ಆಗ ಆತನು ನನ್ನನ್ನು ಒಳಗೆ ಕರೆದುಕೊಂಡು ಹೋದನು .ನಮಸ್ಕಾರ ಮಾಡಿದ ಕೂಡಲೇ,ಹೇ ಸಾಧು, ನಮಗೆ ನಿನ್ನ ಹೆಸರು ಹೇಳು''. ಅದಕ್ಕೆ ಸಿದ್ಧರು - “ನನಗೆ ಆರೂಢ ಅನ್ನುತ್ತಾರೆ.” ಎಂದು ಹೇಳಿದರು. ಅದಕ್ಕೆ ಮಡಿವಾಳಪ್ಪನವರು - “ಹೆಸರು ಆರೂಢ ಅನ್ನುತ್ತಿ,  ಒಮ್ಮೆಗೇ ಮೇಘದೊಳಗಿಂದ ಇಳಿದು ಬಂದಿದ್ದೀ  ಏನು? ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದಿಯೋ ಇಲ್ಲವೋ! ನಿನ್ನ ತಾಯಿ ಇಟ್ಟ ಹೆಸರು ಹೇಳು'' ಅಂದರು. ಅದಕ್ಕೆ ಸಿದ್ಧರು ಅನ್ನುತ್ತಾರೆ- “ನಿಜವಾಗಿ ನಾನು ಮಾಯಾವರಣ ಮಾಡಿಕೊಂಡು ಬ್ರಹ್ಮ ದೊಳಗಿಂದ ಬಂದಿರುವೆನು. ಉದರದೊಳಗೆ ಜನನವೆಂಬದು ಮಿಥ್ಯವಾಗಿರುತ್ತದೆ.” ಆಗ ಮಡಿವಾಳ ಸ್ವಾಮಿಯವರು ಸಿದ್ದರನ್ನು ಸಮೀಪ ಕರೆದು  ಅವರನ್ನು ಸ್ಪರ್ಶಿಸಿ ನೋಡಿ, ಬಹಳ ಕೃಶವಾದ ಶರೀರ ಉಳ್ಳಂಥವರಾಗಿ ಕಂಡು, ಚಿಂತಿಸುತ್ತಾರೆ - “ಸತ್ಯವಾಗಿ ಈತನು ದೇಹವನ್ನು ದಂಡಿಸಿರುತ್ತಾನೆ ಮತ್ತು ಮನಸ್ಸು ಸಹ ಶಮೆಯಿಂದ ಖಂಡಿಸಿದಂತೆ ತೋರುವದು. ಇವುಗಳ ವಿನಹಾ ಅಗತಕ್ಕ ಜ್ಞಾನವಾದರೂ ನಿಜವಲ್ಲ " ಹೀಗಂದುಕೊಂಡು ಸಿದ್ಧರನ್ನು ಕುರಿತು ವಿಚಾರಿಸಿ, ಈತನಲ್ಲಿಯ  ಜ್ಞಾನದ ದೃಢತೆ ಹೇಗಿರುವದು ಅಂತ ಪರೀಕ್ಷೆ ಮಾಡಬೇಕೆಂದು ಮಡಿವಾಳೇಶನು ನನ್ನನ್ನು ಪರೀಕ್ಷಿಸತೊಡಗಿದನು.


ಮಡಿವಾಳ ಸ್ವಾಮಿಗಳು ನನ್ನನ್ನು ಅಂದರೆ  ಸಿದ್ಧನನ್ನು ಕುರಿತು, ಹೇ ಸಿದ್ಧನೇ ನಾನು ದೇಶ ಸಂಚಾರದಲ್ಲಿದ್ದಾಗ ಒಂದು ನಗರದಲ್ಲಿಯ  ಶ್ರೀಮಂತನ ಸದನದಲ್ಲಿ ಮೂರು ನದಿಗಳು ಹರಿಯುತ್ತಿದ್ದುದನ್ನು ಕಂಡೆನು, ಅವುಗಳನ್ನು ದಾಟುತ್ತಾ ಮುನ್ನಡೆದೆನು. ನಂತರ ಆಕರ್ಷಣೀಯವಾದ ಮೂರು ಪುರಗಳನ್ನು ನೋಡುವ ಸೌಭಾಗ್ಯ ದೊರೆಯಿತು. ಒಂದರ ನಂತರ ಒಂದು ಪುರದ ದೃಶ್ಯಗಳನ್ನು ನೋಡುತ್ತಾ ನೋಡುತ್ತಾ ಹಸಿವಾಯಿತು. ಮೂರನೇ ಪುರದಲ್ಲಿ ಭೋಜನ ಮಾಡಿ ಸಂತೃಪ್ತಿಯ ಸುಖವನ್ನು ಅನುಭವಿಸಿದೆ. ಈ ಸುಖದ ಅನುಭವದ ಅಮಲಿನಲ್ಲಿ ಸಾಗುತ್ತಾ ಸಾಗುತ್ತಾ ಮೊದಲನೆ ಪುರದಲ್ಲಿ ಮರು ಪ್ರವೇಶ ಮಾಡಿದೆ. ಆ ಶ್ರೀಮಂತನ ಸದನದಲ್ಲಿ ಅತ್ಯಂತ ಕುತೂಹಲಕಾರಿ ಹರಿಯುತ್ತಿರುವ ಮೂರು ನದಿಗಳನ್ನಾಗಲಿ, ಮೂರು ಪುರಗಳಲ್ಲಿಯ ಮೂರನೆಯ ಪುರದಲ್ಲಿ ಪಡೆದ ಭೋಜನದ  ಸುಖದ ಆನಂದದ ಅಮಲು, ಪುನಃ ಅದೇ ಆನಂದದಲ್ಲಿ ಮೊದಲನೇ  ಪುರಕ್ಕೆ ಮರುಪ್ರವೇಶಿಸಿ, ಕಂಡ ದೃಶ್ಯ ಇತ್ಯಾದಿಗಳ ಸುಪ್ರಸಂಗದ ಸೌಭಾಗ್ಯದ ಅನುಭವ ನಿನಗೆ ನಿನ್ನ ಸಂಚಾರದಲ್ಲಿ ಲಭಿಸುತ್ತೆ ಅಂತಾ ಪ್ರಶ್ನಿಸಿದನು. ಹೇ ಮಡಿವಾಳ ಸ್ವಾಮಿಯೇ, ಈ ಸುಪ್ರಸಂಗದ ಘನವಾದ ನಿಮ್ಮ ಅನುಭವದಿಂದ ನೀವು ಪರಮ ಯೋಗಿಗಳಾಗಿದ್ದೀರಿ ಮತ್ತು ಯೋಗಿ ಜನವಂದ್ಯರಾಗಿದ್ದೀರಿ. ನನ್ನ ಸಂಚಾರದ ಅನುಭವ ತಿಳಿಸುವೆ ವಿರತಿಯಿಂದ ಸಂಚಾರದಲ್ಲಿ ಆರು ಪುರಗಳನ್ನು ಕಂಡೆ. ಒಂದು ಪುರದಲ್ಲಿ ಕೇವಲ ಹಂದಿಗಳಿದ್ದವು. ಎರಡನೇ ಪುರದಲ್ಲಿ


ಹಾವುಗಳು, ಮೂರನೇ ಪುರದಲ್ಲಿ ಗಿಡದಿಂದ ಗಿಡಕ್ಕೆ ಜಿಗಿಯುವ ಮಂಗಗಳು, ನಾಲ್ಕನೇ ಪುರದಲ್ಲಿ ಮಿಂಚುಹುಳುಗಳನ್ನು ನೋಡುತ್ತಾ ಐದನೇ ಪುರಕ್ಕೆ ಬಂದೆ. ಅಲ್ಲಿ ಜೀವಂತ ಹೆಣಗಳು ಇದ್ದವು. ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದೆನು. ಮನುಷ್ಯರ ಸುಳಿವೇ ಇರಲಿಲ್ಲ ಅಂತ ಹೇಳುತ್ತಿರುವಲ್ಲಿ ಮಡಿವಾಳ ಸ್ವಾಮಿಯು, ಮನುಷ್ಯರಿಲ್ಲದ  ಆ ಪುರಗಳಲ್ಲಿಯ ಪ್ರಾಣಿಗಳು ಹೇಗೆ ಜೀವಿಸುವವು  ಅಂತಾ ಪ್ರಶ್ನಿಸಿದರು. ಅದಕ್ಕೆ ನಾನು ಅವರನ್ನು ಕುರಿತು, ಊರ ಹೊರಗಿನ ನಾಯಿಗಳು ಬೇರೆ ದೇಶದಲ್ಲಿಯ ಸತ್ತ ಕತ್ತೆಯ ಮಾಂಸವನ್ನು ಎಳತಂದು ಆ ಸರ್ಪಗಳ ಒಡೆಯನಾದ ಪ್ರಾಣಕ್ಕೆ ಅರ್ಪಿಸುತ್ತಿದ್ದವು. ಅವುಗಳನ್ನು ತಿಂದು ಅವೆಲ್ಲ ಜೀವಿಗಳು ಜೀವಿಸಿಕೊಂಡಿರುವವು. ಬಹು ಪರಿಶ್ರಮದಿಂದ ಈ ಐದು ಪುರಗಳನ್ನು ದಾಟುತ್ತಾ ನಾನು ಆರನೇ ಪುರವನ್ನು ಪ್ರವೇಶಿಸಿದೆ. ಅಲ್ಲಿ ಓರ್ವನು ಸ್ವಪ್ನದಲ್ಲಿ ಮಾಡಿದ ಪಾಕವನ್ನು, ಜಾಗ್ರದಲ್ಲಿ ಉಂಡು ತೃಪ್ತಿಪಡದವನಿದ್ದನು. ಆನಂದದಿಂದ ಅವನ ಪಾದಪದ್ಮಗಳಲ್ಲಿ ನಾನು ವಂದಿಸಿದೆನು.

ಆನಂದದಿಂದ ಹುಚ್ಚು ನನ್ನ ತಲೆಗೇರಿ ಅರವು ತಪ್ಪಿ ನನ್ನನ್ನು ನಾನೇ ಹರಿದು ತಿಂದೆನು. ಕೊನೆಗೆ ನಾನು ಸತ್ತಂತಾಯಿತು. ಅದನ್ನು ತಿಳಿದುಕೊಂಡು ಮನುಜರ ಶೋಧಕ್ಕಾಗಿ ದೇಶ ದೇಶಗಳನ್ನು ಸಂಚರಿಸುತ್ತಾ ಇದ್ದೆ. ನನಗೆ ಒಬ್ಬನೂ ದೊರೆಯಲಿಲ್ಲ. ಹಾಗೆಯೇ ಸಂಚರಿಸುತ್ತಾ ಇಲ್ಲಿಗೆ ಬಂದೆ. ನನಗೆ ನೀನೊಬ್ಬನೇ ದೊರಕಿದೆ ಅಂತ ನುಡಿದ  ಕೂಡಲೇ ಮಡಿವಾಳಾಮಿಯು ಭಲೆ ಭಲೆ ಶಹಭಾಸ್ ಪರಮ ಸಿದ್ಧನೇ,  ನಾನು ಯೋಗ ಪರ ಸರಸವಾದ ಪ್ರಶ್ನೆ ಮಾಡಲು ನೀನು ಕೊಟ್ಟ ಜ್ಞಾನಪರವಾದ ಉತ್ತರವು  ಪ್ರಸ್ಥಾನತ್ರಯಗಳ ಸಾರವಾಗಿದೆ. ಶ್ರೀ ಗಜದಂಡ ಗುರುಗಳಲ್ಲಿ ಉಪದೇಶ ಪಡೆದು ಶ್ರವಣ ಮಾಡಿದ್ದನ್ನು ಮನನ  ಮಾಡಿದ್ದಕ್ಕೆ ಸಾರ್ಥಕವಾಯಿತು. ಗುರುಗಳು ನಿನಗೆ ಸಿದ್ಧಾರೂಢ ಭಾರತಿ  ಅಂತ ಕರೆದು  ನಾಮ ಯೋಗ್ಯವಾಗಿದೆ ಅಂತಾ ಹೇಳಿದರು. ಇದನ್ನೆಲ್ಲಾ ಸಿದ್ಧಾರೂಢರಿಂದ ಕೇಳುತ್ತಾ ಬಸವಂತಾಚಾರ್ಯರು ಮುಂದೆ ಬಂದು ಹೇ ಸ್ವಾಮಿಗಳೇ , ಮಡಿವಾಳ ಸ್ವಾಮಿಗಳು ನೋಡಿದ್ದ  ಶ್ರೀಮಂತನ  ಸದನದ ಮೂರು ನದಿಗಳು, ಮೂರು ಪುರಗಳ ಘಟನೆಯಿಂದ ಅವರು ಯೋಗಿಗಳೆಂದು ಕರೆದದ್ದು ಹಾಗೂ ತಾವು ನೀಡಿದ ಉತ್ತರದಲ್ಲಿ ಆರು ಪುರಗಳ ವರ್ಣನೇ  ಕೇಳಿ ನಿಮ್ಮ ಪ್ರಸ್ಥಾನತ್ರಯಗಳ ಸಾರವಾದ  ಜ್ಞಾನಪರ ಉತ್ತರ ಅಂತ ಮಡಿವಾಳ ಸ್ವಾಮಿಗಳು ಹೇಳಿದ್ದು ನನಗೆ ಯಾವುದೂ ಅರ್ಥವಾಗಲಿಲ್ಲ. ಅಲ್ಲದೆ ಇಲ್ಲಿ ಯಾರಿಗೂ ತಿಳಿಯಲಿಲ್ಲ ಅಂತಾ ಅವರ ಮುಖದ ಚಹರೆಯು ತೋರಿಸುತ್ತಲಿದೆ  ಅಂತಾ ನನಗನಿಸಿದೆ. ಕಾರಣ ಇದರ ಬಗ್ಗೆ ನನಗೆ ಮನವರಿಕೆಯಾಗುವಂತೆ ತಿಳಿಸಬೇಕು ಅಂತಾ ಪ್ರಾರ್ಥಿಸಿದನು. ಅದಕ್ಕೆ ಹರ್ಷದಿಂದ ಸಿದ್ದಾರೂಢರು ವಿವರಿಸತೊಡಗಿದರು.


ಭಕ್ತರೇ, ಕೇಳಿರಿ ಬ್ರಹ್ಮದೇವನು ಸೃಷ್ಟಿಸಿದ ೮೪ ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮವು ಅತಿ ಅಮೂಲ್ಯವಾದದ್ದು. ಪುಣ್ಯಗಳಿಂದಲೋ ಮಹಾತ್ಮರ ಕೃಪಾದೃಷ್ಟಿಯಿಂದಲೋ  ಜೀವನು  ಮಾನವ ಜನ್ಮ ಧಾರಣ ಮಾಡುವ ಕಾರಣ ಇದು ಶ್ರೀಮಂತನ ಸಧನವೆಂದು ಈ ಸದನದಲ್ಲಿ ಮೂರು ನದಿಗಳು ಅಂದರೆ ಇಡಾ, ಪಿಂಗಳಾ, ಸುಷುಮ್ನಾ  ನಾಡಿಗಳು. ಈ ನದಿಗಳು ಹರಿಯುತ್ತಿದ್ದು  ಅವುಗಳನ್ನು ದಾಟುವುದೆಂದರೆ ರೇಚಕ, ಪೂರಕ, ಕುಂಭಕ ಮುಖಾಂತರ ಪ್ರಾಣಾಯಾಮ ಮಾಡುವದೇ  ಹರಿಯುವಿಕೆ. ಇವುಗಳನ್ನು ದಾಟುವದು ಅಂದರೆ ಪ್ರಾಣಾಯಾಮದಿಂದ ಶಿರದಲ್ಲಿಯ  ಸಹಸ್ರಾರು ಕಮಲದಲ್ಲಿ ಚಿತ್ತವೃತ್ತಿಯನ್ನು ಲಯಿಸುವದು, ಜಾಗ್ರತ್ ಸ್ವಪ್ನ ಮತ್ತು ಸುಷುಪ್ತಿ ಅಂತ ಮೂರು ಪುರಗಳು ಮೂರನೇ ಪುರವಾದ ಸುಷುಪ್ತಿಯಲ್ಲಿ ಪ್ರಾಪ್ತಿಯಾಗುವ ಸುಖವನ್ನು ಯೋಗಿಯಾದವನು ಪ್ರಾಣಾಯಾಮದಿಂದ ಕುಂಭಕ ಮಾಡಿ ಬ್ರಹ್ಮ ಸ್ವರೂಪದಲ್ಲಿ ಲೀನನಾಗಿ ಸಮಾಧಿಸ್ಥನಾಗಿ ಅನುಭವಿಸುವದು. ಈ ಸಮಾಧಿ ಉತ್ಥಾನವಾದ ಕೂಡಲೇ ಮೊದಲಿನ  ಪುರವೆಂದರೆ ಜಾಗ್ರತ್ ಅವಸ್ಥೆಗೆ ಬರುವುದು. ಈ ಪ್ರಕಾರದ ಸುಪ್ರಸಂಗದ ಅನುಭವ ಪಡೆಯುವಾತನೇ  ಪರಮ ಯೋಗಿಯು. ಕಾರಣ ಇದನ್ನು ಗುರುತಿಸಿದ ನಾನು ಮಡಿವಾಳ ಸ್ವಾಮಿಗೆ ಪರಮಯೋಗಿ ಅಂತಾ ಹೇಳಿ ಆತನಿಗೆ ವಂದನೆಗಳನ್ನು ಅರ್ಪಿಸುದೆನು. ಇಂತಹ ಯೋಗಿಗಳು ದೊರಕುವದು ದುರ್ಲಭವು. ಇನ್ನು ನಾನು ಕಂಡ ಆರು ಪುರಗಳ ಬಗ್ಗೆ ತಿಳಿಸುವೆ.


ಮೊದಲ ಪುರದ ಲಕ್ಷಣ (ಅನ್ನಮಯಕೋಶ) :- ನಾನು ಬ್ರಾಹ್ಮಣ, ನಾನು ಬಾಲಕ, ನಾನು ಸುಂದರ, ನಾನು ಸ್ತ್ರೀ, ನಾನು ಪುರುಷನು ಎಂದು ಈ ಶರೀರವನ್ನು ಲಕ್ಷಿಸಿ ಈ ಶರೀರವೇ ಆತ್ಮವು, ವನಿತೆ, ಸುತ,  ಧನ, ಧಾನ್ಯ, ವಸ್ತ್ರ, ವಾಹನ ಮುಂತಾದವುಗಳನ್ನು ಈ ಶರೀರದಿಂದಲೇ  ಭೋಗಿಸಬೇಕು. ಶರೀರ ಸುಖವೇ ಸ್ವರ್ಗಸುಖ. ಅದನ್ನು ಬಳಲಿಸುವದು ನರಕವು. ಮರಣವೇ ಮುಕ್ತಿ. ಕಾರಣ ಈ ದೇಹದ ವಿಲಾಸಕ್ಕಾಗಿ ಭೋಗ  ಭಾಗ್ಯಗಳನ್ನು ಯಾವ ರೀತಿಯಿಂದಲೂ ಸಂಪಾದಿಸಿ ದೇಹ ಸುಖಪಡಿಸುವದೇ  ಪರಮ ಪುರುಷಾರ್ಥವು. ಈ ಶರೀರವೇ ಆತ್ಮನೆಂದು ಭಾವಿಸಿ ನರಕಪ್ರಾಯ ವಿಷಯೋಪಭೋಗಗಳಲ್ಲಿ ನಿರತರಾದವರೆಲ್ಲರೂ ಹಂದಿಗಳು. ಈ ಹಂದಿಗಳು ಇರುವ ಪುರವೆಂದರೆ  ಅನ್ನಮಯಕೋಶವು ಈ ಪುರವನ್ನು ಸಾಧಕರು ದಾಟಲೇಬೇಕು. 




ಎರಡನೇ ಪುರದ ಲಕ್ಷಣ (ಪ್ರಾಣಮಯ ಕೋಶ) : ಮೊದಲನೇ ಪುರವನ್ನು ಭೇದಿಸಿ ಸಾಧಕನು ಅದರಲ್ಲಿಯ 2ನೇ ಪುರ ಪ್ರವೇಶಿಸುವನು. ತ್ರಿಕಾಲದಲ್ಲಿ ಈ ದೇಹದ ತುಂಬಾ ಸತತವಾಗಿ ಮೂರು ಅವಸ್ಥೆಯಲ್ಲಿ ಹರಿದಾಡಿ ಈ ದೇಹವನ್ನು ರಕ್ಷಣೆ ಮಾಡುವುದೇ ಪ್ರಾಣವಾಯುವಿನ ಕಾರ್ಯವಾಗಿದೆ. ಇದಕ್ಕೆ ಪ್ರಾಣಮಯ ಕೋಶವೆಂದು ಕರೆಯಲ್ಪಡುವದು, ಈ ಎರಡನೇ ಪುರದಲ್ಲಿ ಕೇವಲ ಹಾವುಗಳಿದ್ದವು  ಎಂದರೆ ಈ ಪ್ರಾಣವಾಯು ದೇಹದಲ್ಲಿ ಪ್ರಾಣ ಹೋದರೆ ಹೆಣವಾಗುತ್ತದೆ. ಕಾರಣ ಪ್ರಾಣವೇ ಆತ್ಮನೆಂದು ಪ್ರಾಣಮಯಕೋಶವಾದಿಯ ಮತವಾಗಿದೆ. ಸುಪ್ತಿಯಲ್ಲಿ ದೇಹದ ಮೇಲಿನ ಯಾವುದೇ ವಸ್ತು ತೆಗೆದುಕೊಂಡರೂ ಅದರ ಜ್ಞಾನ ಇರದೇ ಇದ್ದ ಪ್ರಾಣವಾಯುವಿಗೆ  ಅದೆಂತು ಆತ್ಮನೆನ್ನಬೇಕು? ಈ ಪ್ರಾಣಮಯಕೋಶವನ್ನು ದಾಟಿ ಮುನ್ನಡೆಯಬೇಕು. 




3ನೇ ಪುರದ ಲಕ್ಷಣ (ಮನೋಮಯ ಕೋಶ) :


ಇಂದ್ರಿಯಾಣಾಂ ಮನೋನಾಥ ಎಂಬ ಪ್ರಮಾಣವಿದೆ. ಜಡವಾದ ಇಂದ್ರಿಯಗಳೊಂದಿಗೆ ಮನಸ್ಸು ಸಂಬಂಧವಾಗಲು  ಎಲ್ಲ ವ್ಯವಹಾರಗಳು ನಡೆಯುವವು. ಮನಮುಳ್ಳುಡೆ  ಮಾರ್ಗಂ ಅಂತಾ ಹೇಳಿದ್ದಾರೆ. ಕಾರಣ ಎಲ್ಲ ವ್ಯವಹಾರಗಳಿಗೆ ಕಾರಣೀಭೂತ ಮನಸ್ಸೇ ಆತ್ಮ ಅಂತಾ ಇದಕ್ಕೆ ಮನೋಮಯಕೋಶ ಎನ್ನುವರು. ಆದರೆ ಮನಸ್ಸು ಚಂಚಲತೆಯುಳ್ಳದ್ದು, ಪ್ರಾಪಂಚಿಕ ವಿಷಯೋಪಭೋಗಗಳೆಂಬ ಗಿಡದಿಂದ ಗಿಡಕ್ಕೆ ಜಿಗಿಯುವ ಮಂಗನಂತೆ ಇದ್ದುದರಿಂದ ಈ ಪುರದಲ್ಲಿ ಮಂಗಗಳನ್ನು ಕಂಡೆ ಅಂತಾ ಹೇಳಿದ್ದೇನೆ. ಮನಸ್ಸು ಬುದ್ಧಿಯಲ್ಲಿ ಲಯವಾಗುವಿಕೆಯ ಸ್ವಭಾವವಿರುವುದರಿಂದ ಈ ಮನೋಮಯಕೋಶವು ಚೇತನರೂಪ ಆತ್ಮನಾಗಲಾರದು. ಕಾರಣ ಈ ಪುರವನ್ನು ದಾಟಿ 




೪ನೇ ಪುರದಲ್ಲಿ ಮಿಂಚು ಹುಳುಗಳನ್ನು ಕಂಡೆನೆಂದರೆ ಬುದ್ದಿಯು ಮನಸ್ಸಿಗೆ ಒಡೆಯನು. ಸೂರ್ಯನು ಉದಯವಾದಲ್ಲಿ ಅವನ ಕಿರಣಗಳು ಪಶ್ಚಿಮದ ತನಕ ಪ್ರಕಾಶ ಬೀರುತ್ತವೆ. ನೇತ್ರವಿದ್ದರೆ ದೃಷ್ಟಿಯು ಹರಿಯುತ್ತದೆ. ವಿಜ್ಞಾನರೂಪ ಬುದ್ದಿ ಇದ್ದರೆ ಮನಸ್ಸಿನ ಕಾರ್ಯ ಮುಂದೆ ನಡೆಯುತ್ತದೆ. ಕಾರಣ ಬುದ್ದಿಯೇ. ಕಾದ ಕಬ್ಬಿಣದಲ್ಲಿ ಅಗ್ನಿಯ ಶಕ್ತಿ ಇರುವವರೆಗೂ ಕತ್ತಲಲ್ಲಿ ಪ್ರಕಾಶಿಸುತ್ತದೆ. ಬುದ್ಧಿಗೆ  ಸ್ವಯಂ ಪ್ರಕಾಶವಿಲ್ಲ. ನನ್ನ ಬುದ್ದಿ ಮಂದವಾಯಿತು. ನನ್ನ ಬುದ್ಧಿಗೆ ಹೊಳೆಯಲಿಲ್ಲ ಅಂತಾ ಅನ್ನುವುದರಿಂದ ಬುದ್ಧಿಯು ಜಡವು. ಆತ್ಮ ಬೇರೆ. ಈ ಆತ್ಮನಿಂದ ಪ್ರಕಾಶ ಪಡೆದು ಕ್ಷಣಕ್ಷಣಕ್ಕೆ ಮಿಂಚುಹುಳುಗಳಂತೆ ಬುದ್ಧಿಯು ಬೆಳಗುತ್ತದೆ. ಕಾರಣ ಮಿಂಚುಹುಳುಗಳಿಂದ ತುಂಬಿದ ಈ ಪುರವನ್ನು ದಾಟುತ್ತಾ ಇದರಲ್ಲಿಯ ಐದನೇಪುರ ಪ್ರವೇಶಿಸಬೇಕು. 




ಐದನೇ ಪುರದ ಲಕ್ಷಣ (ಆನಂದಮಯ ಕೋಶ): ೪ನೇ ಪುರವನ್ನು ದಾಟಿ ಅದರಲ್ಲಿಯ ಐದನೇ ಪುರ ಪ್ರವೇಶ ಪಡೆಯುತ್ತಾ ಸಾಧಕನು ಮುನ್ನಡೆಯಬೇಕು. ಈ ಪುರದಲ್ಲಿ ಜೀವಂತ ಹೆಣಗಳನ್ನು ಕಂಡೆನು. ಅಂದರೆ ವಿಜ್ಞಾನಮಯಕೋಶ ಆತ್ಮನಲ್ಲ. ಅಂತ ತಿಳಿಯುತ್ತ ಸುಪ್ತಿ ಅವಸ್ಥೆಯಲ್ಲಿ ಮನಸ್ಸು ಆನಂದಮಯ ಕೋಶವಾಗಿದೆ. ಎಚ್ಚರಾದ ಕೂಡಲೇ ನಾನು ನಿದ್ರಾವಸ್ಥೆಯಲ್ಲಿ ಆನಂದದಲ್ಲಿದ್ದೆ ಅಂತಾ ಅನ್ನುತ್ತಾನೆ. ಆದರೆ ನಿದ್ರಾ ಸುಖವು ಕ್ಷಣಿಕವಾದುದು. ತೋರಿ ಅಡಗುವುದು. ಸಚ್ಚಿದಾನಂದ ಸ್ವರೂಪದ ಲಕ್ಷಣವಲ್ಲ. ಕಾರಣ ಈ ಆನಂದಮಯ ಕೋಶ ಆತ್ಮನಲ್ಲ ಅಂತಾ ಈ ಪುರವನ್ನು ಭೇದಿಸಿ ಮುನ್ನಡೆಯಬೇಕು. 




ಆರನೇ ಪುರ ಲಕ್ಷಣ (ತುರೀಯಾವಸ್ಥೆ) : ಹೇ ಭಕ್ತರೇ ಕೇಳಿರಿ. ಐದನೇ ಪುರದಲ್ಲಿ ಜೀವಂತ ಹೆಣಗಳಿದ್ದವು. ಅವೆಲ್ಲವುಗಳಿಗೆ ಜೀವಿಸುವ ಬಗೆಯೆಂತು  ಮಡಿವಾಳ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ್ದು ಆ ದೇಶದ ಹೊರಗಿನ ನಾಯಿಗಳು ಅಲ್ಲಿ ಸತ್ತಿರುವ ಕತ್ತೆ ಮಾಂಸಗಳ ತುಂಡುಗಳನ್ನು ಹಾಕುತ್ತಿದ್ದ ಬಗ್ಗೆ ವಿವರಿಸಿದ್ದೆ. ವಾಸನಾರೂಪ ನಾಯಿಗಳು, ವಿಷಯಾಧಿರೂಪ ಕತ್ತೆ  ಮಾಂಸದ ತುಂಡುಗಳನ್ನು ಜಠರಾಗ್ನಿಗೆ ಹಾಕುತ್ತಿದ್ದವು ಅಂತ ಅರ್ಥವಾಗಿದೆ. ಇಂತಹ ಪುರವನ್ನು ದಾಟುವುದೆಂದರೆ ವಿಷಯಾದಿಗಳ ಭೋಗ ತ್ಯಾಗ ಮಾಡುತ್ತಾ, ವಾಸನೆಗಳನ್ನು ಅಡಗಿಸುತ್ತಾ, ಮನಸ್ಸಿನ ಚಂಚಲತೆಯನ್ನು ನಿರೋಧಿಸುತ್ತಾ, ಪದ್ಮಾಸನಾಬದ್ಧನಾಗಿ ಕಣ್ಣು ಮುಚ್ಚುತ್ತಾ, ಕಿವಿಗಳ ಕಡೆ ಅಲಕ್ಷ್ಯ ಮಾಡುತ್ತಾ, ತದೇಕಚಿತ್ತದಿಂದ ಮಹಾಪ್ರಕಾಶಮಾನ ಮೂರ್ತಿಯ  ಧ್ಯಾನದಿಂದ ಇದ್ದಾಗ ಅನಾಹತವಾದ ಓಂಕಾರ ನಾದವು  ಕೇಳಿ ಬರುತ್ತದೆ. ಅದರಿಂದ ಉದ್ಭವಿಸಿದ ಆನಂದದಲ್ಲಿ ಮನಸ್ಸನ್ನು ಆನಂದವೇ ತುರಾವಸ್ಥೆಯೆನಿಸುತ್ತದೆ. ಈ ಪುರದಲ್ಲಿ ಸ್ವಪ್ನದಲ್ಲಿ ಮಾಡಿದ ಅಡಿಗೆಯನ್ನು ಜಾಗ್ರದಲ್ಲಿ ಉಂಡು ಸುಪ್ತಿಯಲ್ಲಿ ಪರಮ ತೃಪ್ತಿ ಪಡುತಿಹನೊಬ್ಬನನ್ನು ಕಂಡೆನೆಂದರೆ ನಾದಾನು ಸಂಧಾನದ ಪರಿಪಕ್ವತೆಯೇ  ಸ್ವಪ್ನದಲ್ಲಿ ಮಾಡಿದ ಅಡಿಗೆಯು ಜಾಗ್ರತ್ ಅವಸ್ಥೆಯಲ್ಲಿ ಉಣ್ಣುವದೆಂದರೆ ನಾದಾನು ಸಂಧಾನದ ಆನಂದ ಆವಿರ್ಭವಿಸುವ ಎಚ್ಚರದಿಂದ ಇರಬೇಕು. ಸುಪ್ತಿಯಲ್ಲಿ ತೃಪ್ತಿಪಡುವಿಕೆಯೆಂಬುದೆ ಈ ನಾದಾನು ಸಂಧಾನದ ಆನಂದದಲ್ಲಿ ಲೀನವಾಗಿ ತನ್ನನ್ನು ತಾನು ಮರೆಯುವುದೇ ಬಹಿರಂಗ ವ್ಯಾಪಾರದಲ್ಲಿ ಲಕ್ಷ್ಯಕೊಡದೇ ಇರುವುದೆ  ತೂರ್ಯಾತೀತ ಅವಸ್ಥೆಯು, ನನ್ನನ್ನು ಹರಿದು ತಿಂದೆ, ನಾನು ಸತ್ತೆ  ಅಂದರೆ ಮಮಕಾರ ಅಹಂಕಾರ ನಾಶವಾಗಿ, ಸತ್‌ಚಿತ್ ಆನಂದ ಘನನಾದೆ. ಇಂತಹನೇ ನಿಜವಾದ ಮನುಷ್ಯನು. ಇಂತಹ ಮನುಜನನ್ನು ಹುಡುಕುತ್ತಾ ಹುಡುಕುತ್ತಾ ದೇಶ ಪರ್ಯಟನೆ ಮಾಡಿದೆ. ಈಗ ನೀನೊಬ್ಬನೇ ದೊರಕಿದೆ ಅಂತಾ ಮಡಿವಾಳಸ್ವಾಮಿ ಕುರಿತು ಹೇಳಿದೆ. ಈ ಪ್ರಕಾರ ಮಡಿವಾಳ ಸ್ವಾಮಿಯ  ಯೋಗಪರ ಪ್ರಶ್ನೆಗಳಿಗೆ ಮೇಲ್ಕಾಣಿಸಿದ ಜ್ಞಾನಪರ ಉತ್ತರ ನೀಡಿದ ಅಂತಾ ಹೇಳಿದರು.




ಈ ಪ್ರಶ್ನಾವಳಿಗಳಿಗೆ  ಹೇಳಿದ ಉತ್ತರ ಗಳನ್ನು ಕೇಳುತ್ತಾ ಭಕ್ತರು ಹರ್ಷಭರಿತರಾದರು . ಆಗ  ಪುನಃ ಓರ್ವ ಭಕ್ತನು  ಹೇ ಸ್ವಾಮಿಗಳೇ ಮುಂದೆ ನಿಮ್ಮ ಮತ್ತು ಮಡಿವಾಳ ಸ್ವಾಮಿಗಳ ಜೊತೆಗೆ ಮಾತುಕತೆ ನಡೆದಿದ್ದಲ್ಲಿ ತಿಳಿಸಬೇಕು ಅಂತಾ ಪ್ರಾರ್ಥಿಸಿದನು. ಆಗ  ಸಿದ್ಧಾರೂಢರ ವಿವರಿಸಿತೊಡಗಿದರು. ಹೇ ಭಕ್ತರೆ  ಕೇಳಿರಿ, ಮಡಿವಾಳ ಸ್ವಾಮಿಯು ಪ್ರಶ್ನಿಸಿದು ಏನು  ಅಂದರೆ ಯೋಗವಾಸಿಷ್ಠ ಗ್ರಂಥದಲ್ಲಿ ಪ್ರತಿಪಾದನೆಯಾದದ್ದನ್ನು ಕೇಳಿದ್ದು, ಅನ್ನವು ಪಾತ್ರೆಯಲ್ಲಿ ಇರಲು ಹಾಗೂ ಹೊಟ್ಟೆಯಲ್ಲಿ ಹೋಗಲು ಅದರ ರುಚಿ ತಿಳಿಯುವುದಿಲ್ಲ. ನಾಲಿಗೆಯ ಮೇಲೆ ಅನ್ನವಿರಲು ಅದರ  ರುಚಿಯು  ತಿಳಿಯುವುದು. ಈ ಬಗ್ಗೆ ಯೋಗವಾಸಿಷ್ಠ ಗ್ರಂಥದ ಅಭಿಪ್ರಾಯವನ್ನು ತಿಳಿಸು  ಅಂತ ಕೇಳಿದರು. ಆಗ ನಾನು ಉತ್ತರಿಸಿದ್ದೇನೆಂದರೆ ಪೂರ್ವ ಅವಸ್ಥೆಯೆಂದರೆ ಅಜ್ಞಾನದಸೆಯಲ್ಲಿದ್ದಾಗ ಹಾಗೂ ವಿದೇಹ ಮುಕ್ತನಾದ ಸಾಧಕನಿಗೆ ನಿಜವಾದ ಸುಖ ಆನಂದದ ಅನುಭವ ತೋರಲಾರದು. ಆದರೆ ಸಾಧನೆಯಲ್ಲಿ ತತ್ಪರನಾದ ಸಾಧಕನು ಜೀವನ್ಮುಕ್ತಿ ಸ್ಥಿತಿಯ  ಹಂತದಲ್ಲಿದ್ದಾಗ ಮಾತ್ರ ನಿರ್ವಿಕ್ಷಯಾ ನಂದದ ಅನುಭವ ಗೋಚರವಾಗುವದು ಅಂತ ಉತ್ತರಿಸಿದ್ದನ್ನು ಕೇಳಿ ಮಡಿವಾಳ ಸ್ವಾಮಿಯು ಅಲ್ಲಿ ಕೂತವರನ್ನು ಕುರಿತು, ನೋಡಿದಿರಾ ಈತನು ಮನುಜನೆಂಬ ಬಗ್ಗೆ ಗೂಢಾರ್ಥವು  ತಿಳಿಯಿತೆ? ಜಗತ್ ಕಲ್ಯಾಣಕ್ಕಾಗಿ ಸಾಕ್ಷಾತ್ ಪರಶಿವನೇ ಈ ಧರೆಗೆ ಇಳಿದು ಬಂದಿರುವ ಈ ಸಿದ್ಧನ ಆಜ್ಞೆಯಂತೆ ನಾನು ಕೂಡ ಅವತಾರ ಧಾರಣ ಮಾಡುವಾತನೇ ಅಂತಾ ಹರ್ಷ ಪಡುತ್ತಾ, ನನ್ನನ್ನು ಒಂದು ತಿಂಗಳವರೆಗೆ ತನ್ನ ಆಶ್ರಮದಲ್ಲಿರಿಸಿಕೊಂಡನು ಇತ್ಯಾದಿಯಾಗಿ ವಿವರಿಸಿದರು. ನಮಗೂ ಗರಗದ ಮಡಿವಾಳ ಸ್ವಾಮಿಗಳ ದರ್ಶನ ಮಾಡಿಸಬೇಕು ಅಂತಾ ಭಕ್ತರು  ಕೇಳಿಕೊಂಡರು. ಆಗಲಿ ಅಂತಾ ಸಿದ್ಧಾರೂಢರು ಭಕ್ತರಿಂದೊಡಗೂಡಿ ಗರಗಕ್ಕೆ  ಆಗಮಿಸಿದರು, ಮಡಿವಾಳ ಸ್ವಾಮಿಗಳ ದರ್ಶನದಿಂದ ಸಂತಸಗೊಂಡು ಆತನ ಪಾದಪದ್ಮಗಳಲ್ಲಿ  ನತಮಸ್ತಕರಾಗಿ ವಂದನೆಗಳನ್ನಪಿಸಿದರು,


ಮಡಿವಾಳ ಸ್ವಾಮಿಯವರಿಗೆ ಅತ್ಯಂತ ಆನಂದವಾಗಿ, ಹುಬ್ಬಳ್ಳಿ ಭಕ್ತರನ್ನು ಕುರಿತು ಅನ್ನುತ್ತಾರೆ - ''ದೈವ ಯೋಗದಿಂದ ನಿಮಗೆ ಸಿಕ್ಕಿದ ಇಂಥಾ ಮಹಾತ್ಮನ  ಮಹಿಮೆಯಿಂದ ನೀವು ಧನ್ಯರಾಗುವಿರಿ. ಈತನನ್ನು ದೃಢಭಾವದಿಂದ ಭಜಿಸಿರಿ ಪೂಜಿಸಿರಿ. ಆಮೇಲೆ ಸ್ವಾಮಿಯವರು, ಸಿದ್ದರನ್ನು ಕುರಿತು ಅನ್ನುತ್ತಾರೆ - "ನಾನು ಹೇಳುವದನ್ನು ಮನಸ್ಸಿನಲ್ಲಿ ದೃಢವಾಗಿ ಹಿಡಿದುಕೊ. ವಾಕ್, ಹಸ್ತ ಮತ್ತು ಶಿಶ್ನ ಈ ಮೂರು ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊ, ಇನ್ನೊಂದು ಹೇಳುವುದೇನೆಂದರೆ - ಹುಬ್ಬಳ್ಳಿ ಜನರು, ಮೇಲಕ್ಕೆ ಎತ್ತಿ ಕೆಳಗೆ ಹಾಕಿವರು  ನೋಡಿ.” ಇದನ್ನು ಕೇಳಿ ಸಿದ್ಧರು - “ ಅದರ ಭಯವಿಲ್ಲ. ಯಾಕೆಂದರೆ ನಿಮ್ಮ ಕೃಪೆಯಿಂದ ಈ ವಿಷಯಗಳನ್ನೆಲ್ಲಾ ವರ್ಜಿಸಿರುತ್ತೇನೆ', ಅಂದರು. ಮಡಿವಾಳ ಸ್ವಾಮಿಯವರು ಪುನಃ ಸಿದ್ಧರಿಗನ್ನುತ್ತಾರೆ  - “ಭಕ್ತ

ಜನರು ನಿನಗೆ ವಸ್ತ್ರ ದ್ರವ್ಯಾದಿಗಳನ್ನು ಕೊಡುವರು. ಅವನ್ನು ಇತರರಿಗೆ ಕೊಡದೆ, ಹಾಗೆಯೇ ನಮಗೆ ಕಳುಹಿಸಿಕೊಡುತ್ತಿರು”. ಇದಕ್ಕೆ ನಗುತ್ತಾ ಸಿದ್ಧರನ್ನುತ್ತಾರೆ “ಸ್ವಾಮೀ ನೀವು ವಿರಕ್ತರೆಂದು ನಾನು ತಿಳಿದಿದ್ದೆ. ನೀವು ಸತ್ಯವಾಗಿ ದ್ರವ್ಯವನ್ನು ಸ್ವೀಕರಿಸುತ್ತೀರಾದರೆ, ನನಗೆ ಅಷ್ಟು ಹಣವನ್ನು ಕೊಡಿರಿ. ಅದನ್ನು ತೆಗೆದುಕೊಂಡು ದೊಡ್ಡ ವ್ಯಾಪಾರವನ್ನು ಮಾಡಿ ಅಪಾರ ಧನ ಸಂಗ್ರಹ ಮಾಡಿಕೊಂಡು, ಅದನ್ನೆಲ್ಲಾ ನಿಮಗೇನೇ ತಂದು ಕೊಡುವೆನು', ಸಿದ್ಧರ ಈ ಚತುರ ಭಾಷಣವನ್ನು ಮಡಿವಾಳ ಸ್ವಾಮಿಯವರು ಕೇಳಿ, ಬಹು ಪ್ರೇಮಯುಕ್ತರಾಗಿ ಸಿದ್ಧರನ್ನು ಆಲಿಂಗಿಸಿ, - ''ನೀನು ಸ್ವಬಂಧು ಭೆಟ್ಟಿಯಾದಿ,” ಅಂದರು. ವಸ್ತ್ರದ್ರವ್ಯಾದಿಗಳೆಂಬವೇ ಬ್ರಹ್ಮಾನುಭವ. ಅದನ್ನು ಅನಧಿಕಾರಿ ಇರುವಂಥವರಿಗೆ ಕೊಡಬಾರದು. ಆದರೆ ಗುರುಚರಣಗಳಲ್ಲಿ ಅದನ್ನು ಜತನ ಮಾಡತಕ್ಕದ್ದು, ಎಂಬ ಈ ಅರ್ಥದಿಂದ ಸ್ವಾಮಿಯವರು ಅಂದರು. ಅದಕ್ಕೆ ಸಿದ್ಧರು ಉತ್ತರ ಕೊಟ್ಟಿದ್ದೇನೆಂದರೆ " ನಿಮ್ಮ ಅನುಭವವನ್ನೇ  ನನಗೆ ಕೊಡಿರಿ. ಅದನ್ನು ತೆಗೆದುಕೊಂಡು ಮನನದಿಂದ  ವೃದ್ಧಿಗೊಳಿಸಿ, ತಂದು ನಿಮ್ಮ ಚರಣಗಳಿಗೆ ಅರ್ಪಿಸುವೆನು. " ಇದೇ ಸಮಯದಲ್ಲಿ ಒಂದು ಮಹಾ ಕೋಲಾಹಲ ಧ್ವನಿ ಹೊರಗಿನಿಂದ ಕೇಳಿ ಬಂತು. ಅದನ್ನು ಕೇಳಿ, ಮಡಿವಾಳ -ಸ್ವಾಮಿಯವರು ಅದೇನೆಂದು ತಿಳಿದುಕೊಂಡು ಬಂದು ಹೇಳೆಂದು ಒಬ್ಬ ಶಿಷ್ಯನಿಗೆ ಆಜ್ಞಾಪಿಸಿದರು. ಅವನು ಹೊರಗೆ ಹೋಗಿ ನೋಡಿದಾಗ, ಒಬ್ಬ ಮನುಷ್ಯನು ಹಾವು ಕಡಿದು ಸತ್ತಿರುತ್ತಾನೆ. ಅವನ ಹತ್ತಿರ ಬಂದು ಆತನ ಹೆಂಡತಿ ಮಕ್ಕಳು ಬಹಳ ಆಕ್ರಾಂತ ಮಾಡುತ್ತಿರುವವರು. ಇತರ ಅನೇಕ ಮಂದಿಯು ಅಲ್ಲಿ ಕೂಡಿದೆ. ಈ ಪ್ರಕಾರ ನಡೆದಿರುವದನ್ನು

ಆ ಶಿಷ್ಯನು ಕಂಡು ಸ್ವಾಮಿಗಳವರಿಗೆ ಬಂದು ತಿಳಿಸಿದ ಕೂಡಲೇ, ಅನ್ನುತ್ತಾರೆ- “ಈಗಲೇ ಈ ಸಿದ್ದರ ಪಾದೋದಕವನ್ನು

ಮಾಡಿಕೊಂಡು ಹೋಗಿ, ಅವನ ಅಂಗಕ್ಕೆಲ್ಲಾ ಹಚ್ಚಿ, ಮುಖದಲ್ಲಿಯೂ ಹಾಕಿ, ಎಲ್ಲರೂ ಭಜನ ಮಾಡಿದರೆಂದರೆ, ಅವನು ನಿಶ್ಚಯವಾಗಿ ಬದುಕುವನು''. ಆಗ ಭಕ್ತಜನರೆಲ್ಲಾ ಕೊಡಿ, ಸಿದ್ದರಿಗೆ ಒಂದು ಆಸನದಲ್ಲಿ ಕೂಡ್ರಿಸಿ, ಬಹು

ಪ್ರೇಮದಿಂದ ಅವರ ಚರಣಗಳನ್ನು ಪ್ರಕ್ಷಾಳಿಸಿ, ತೀರ್ಥವನ್ನು ತೆಗೆದುಕೊಂಡು ಹೋಗಿ ಆ ಮೃತನಾದವನ ಮುಖದಲ್ಲಿ

ಹಾಕಿದರು. ಮತ್ತು ಶರೀರಕ್ಕೂ ಲೇಪಿಸಲಾರಂಭಿಸಿದರು. ತರುವಾಯ ಆ ಶವದ ಮೇಲೆ ಒಂದು ಶುಭ್ರ ವಸ್ತ್ರವನ್ನು ಹಾಕಿ ಅದರ ಸುತ್ತಲು ಕುಳಿತು ಎಲ್ಲರೂ ಕೂಡಿ ಭಜನೆ ಮಾಡಲಾರಂಭಿಸಿದರು. ಒಂದು ಘಳಿಗೆ ಹೊತ್ತು ಭಜನ ಮಾಡುತ್ತಲೇ ಆ ಮೃತನಾದವನ ; ಶರೀರವು ಅಕಸ್ಮಾತ್ತಾಗಿ ಚಲನವಾಗಲಿಕ್ಕೆ ಹತ್ತಿ, ಕೂಡಲೇ ಆತನು ಎದ್ದು ಕುಳಿತನು. ಇದನ್ನು ನೋಡಿ ಎಲ್ಲರೂ ಅತ್ಯಂತ ಆನಂದಭರಿತರಾದರು. ಆಗ ಆತನ ಪತ್ನಿಯು ಬಂದು, ಆ ಇಬ್ಬರು ಮಹಾತ್ಮರ ಚರಣಗಳಿಗೆ ಬಿದ್ದು ಸ್ತುತಿಸುವಂಥವಳಾಗಿ, ಅನ್ನುತ್ತಾಳೆ- 'ಹೇ ದೀನೋದ್ದಾರಕರೇ ಶಿವವಿಷ್ಟು ರೂಪಗಳಿಂದ ಇದ್ದಂತೆ ನೀವಿಬ್ಬರೂ ಏಕ ಆಗಿರುತ್ತೀರಿ. ನನಗೆ ನೀವು ಇವತ್ತಿನ ದಿವಸ ಪತಿದಾನವನ್ನು ಕೊಟ್ಟು ಸನಾಥಳನ್ನು ಮಾಡಿದಿರಿ''. ಆಗ ಆಕೆಯ  ಪತಿಯಾದರೂ ಸಶಕ್ತನಾಗಿ ಎದ್ದು ಬಂದು, ಇಬ್ಬರ ಚರಣಗಳಿಗೆ ಸದ್ಭಾವದಿಂದ ನಮಸ್ಕರಿಸಿ, ಅನ್ನುತ್ತಾನೆ- 'ಈ ನನ್ನ ದೇಹ, ಮನ ಮತ್ತು ಧನ, ಇವಷ್ಟನ್ನೂ ನಿನ್ನ ಚರಣಗಳಿಗೆ ಅರ್ಪಿಸುತ್ತೇನೆ.” ಅದಕ್ಕೆ ಮಡಿವಾಳ ಸ್ವಾಮಿಗಳನ್ನುತ್ತಾರೆ- ''ನಿನ್ನ ಧನವನ್ನು ನಿನಗೆ ಕೊಟ್ಟಿರುತ್ತೇವೆ''. ಮನವನ್ನು ಆತ್ಮಸ್ವರೂಪದ  ವಿಚಾರಕ್ಕೆ ಯೋಜಿಸಬೇಕು, ಅದು ಪೂರ್ಣವಾಗಿ ನಮಗೆ ಬೇಕಾಗಿರುತ್ತದೆ. ಶರೀರವನ್ನು ಎರಡು ಕೆಲಸಗಳಿಗೆ ಉಪಯೋಗಿಸಬೇಕು, ಸ್ತ್ರೀ ಪುತ್ರಾದಿಗಳ ಜೀವನವನ್ನು ಸಾಧಿಸುವ ಕೆಲಸಕ್ಕೆ ಹಚ್ಚಬೇಕು, ಮತ್ತು ಇತರ ಕಾಲಗಳಲ್ಲಿ ನಿಷ್ಕಾಮದಿಂದ ಮಹಾತ್ಮರ ಸೇವೆ ಮಾಡುತ್ತಿರಬೇಕು. ಇಂಥಾ ಅಮೃತಪ್ರಾಯ ವಚನವನ್ನು ಕೇಳಿ, ಎಲ್ಲ ಭಕ್ತ ಜನರು ಜಯಜಯಕಾರವನ್ನೇ ಮಾಡಿ, ಆ ಇಬ್ಬರೂ ಮಹಾತ್ಮರಿಗೆ ಆರತಿ ಮಾಡಿದರು. ತ್ರಿಭುವನದಲ್ಲಿಯೂ ಆನಂದವು ಪೂರಿತವಾಗುವಂಥಾದ್ದಾಯಿತು. ಸಿದ್ಧರು ಕೆಲವು ದಿವಸ ಅಲ್ಲಿ ಇರುವಾಗ, ನಿತ್ಯದಲ್ಲಿಯೂ ವಾಶಿಷ್ಠಗ್ರಂಥವನ್ನು ಹೇಳುತ್ತಿದ್ದರು. ಆಗ ಸಿದ್ದನಾಥರ ದರ್ಶನಕ್ಕೋಸ್ಕರ ದೇಶ ದೇಶಗಳಿಂದ ಜನಸಮುದಾಯವು ಬರುವಂಥಾದ್ದಾಯಿತು. ಅಮೃತಕ್ಕಿಂತ ಅಧಿಕ ಮಧುರ ಮತ್ತು ಹಿತಕಾರಿಯಾದ, ಸಿದ್ಧರ ಮುಖದಿಂದ ಹೊರಡುವಂಥ ವೇದಾಂತ ಭಾಷಣವನ್ನು ಶ್ರವಣಮಾಡಿ ಧನ್ಯರಾಗಬೇಕೆಂದು ಅನೇಕ ಶಾಸ್ತ್ರೀವ ಪಂಡಿತ ಜನರು ಗರಗ ಗ್ರಾಮಕ್ಕೆ ಬರುವಂಥವರಾದರು. ಎರಡು ನದಿಗಳು ಎಲ್ಲಿ ಸಂಗಮವಾಗಿರುವವೋ ಆ ಸ್ಥಾನವು ಪವಿತ್ರವೆಂದು ತಿಳಿಯತಕ್ಕದ್ದು. ಹ್ಯಾಗೆ ಗಂಗಾ ಯಮುನಾ ನದಿಗಳು ಕೂಡಿದಲ್ಲಿ ಪ್ರಯಾಗ ಕ್ಷೇತ್ರವಿದ್ದು ಅಲ್ಲಿ ಸ್ನಾನ ಮಾಡಿ ಉದ್ಧೃತರಾಗಬೇಕೆಂದು ಜನರು ಹೋಗುವರೋ, ಅದೇ ಪ್ರಕಾರ, ಇಲ್ಲಿ ಇಬ್ಬರು ಮಹಾತ್ಮರು ಕೂಡಿರುತ್ತಾರಾದ್ದರಿಂದ ಈ ಗರಗ ಗ್ರಾಮವು ಅತ್ಯುತ್ತಮವಾದ ಮತ್ತು ಮುಮುಕ್ಷುಜನರಿಗೆ ಪರಮ ಪವಿತ್ರವಾದ ಕ್ಷೇತ್ರವಾಯಿತು. ಇರಲಿ, ಸಿದ್ದ ಮುಖದಿಂದ ವೇದಾಂತ ಭಾಷಣವು ನಡೆಯುತ್ತಿರುವಾಗ,

ಮಡಿವಾಳ ಸ್ವಾಮಿಯವರು ಅತ್ಯಾನಂದದಿಂದ ಆ ವಿಷದವಾದ ನಿರೂಪಣವನ್ನು ಕೇಳಿ ತಲೆದೂಗುತ್ತ ಇರುತ್ತಿದ್ದರು. ಒಮ್ಮೆ ಸಿದ್ಧರು ಜೀವನ್ಮುಕ್ತಿ ಪ್ರಕರಣವನ್ನು ನಿರೂಪಿಸುವಾಗ, ಮಡಿವಾಳಪ್ಪನವರು  ಸಿದ್ದರಿಗೆ “ನಿಲ್ಲು, ನಿಲ್ಲು” ಎಂದು ತಾವೇ ಭಾಷಣ ಮಾಡುವಂಥವರಾಗಿ ಅನ್ನುತ್ತಾರೆ- “ಉತ್ತಮ ಪಕ್ವಾನ್ನವು ತಪೇಲಿಯೊಳಗಿರುವಾಗ, ಅಥವಾ ಹೊಟ್ಟೆಯೊಳಗೆ ಹೋದ ಮೇಲೆ ಅದರ ರುಚಿಯನ್ನು ಅನುಭವಿಸಲಿಕ್ಕೆ ಬರುವುದಿಲ್ಲ. ಆದರೆ ಅದು ನಾಲಿಗೆಯ  ಮೇಲೆ ಇರುವಾಗ ಅಷ್ಟೇ ಅದರ ಸುಖ ಅನುಭವಿಸಲಿಕ್ಕೆ  ಬರುತ್ತದೆ. ಅದೇ ಪ್ರಕಾರ ಜೀವಶಿವರ ಐಕ್ಯತ್ವವಾಗುವದರಿಂದ ಉಂಟಾಗುವ ಆನಂದವು ಜೀವನ ಅಜ್ಞಾನಾವಸ್ಥೆಯಲ್ಲಿಯೂ ತಿಳಿಯದು , ಅಥವಾ ಜ್ಞಾನಾನಂತರವಾಗುವ ವಿದೇಹ ಕೈವಲ್ಯ ಸ್ಥಿತಿಯಲ್ಲಿಯೂ ಆ ಸುಖವು ಇರದು. ಆದರೆ ಜೀವನು  ಜೀವನ್ಮುಕ್ತ ಸ್ಥಿತಿಯಲ್ಲಿರುವಾಗ್ಗೆ ಆ ಆನಂದವು ಭೋಗಿಸಲಿಕ್ಕೆ ಬರುವದು. ಈ ಮಧ್ಯಾವಸ್ಥೆಯಲ್ಲಿಯೇ ಆ ಬ್ರಹ್ಮಾನಂದವು ಅನುಭವಿಸಲ್ಪಡುವದು. ಈ ಪ್ರಕಾರ ಮಡಿವಾಳ ಸ್ವಾಮಿಯವರು ಅಂದ ವಚನವನ್ನು ಕೇಳಿ, ಎಲ್ಲಾ ಭಕ್ತಜನರು, ಬಹು ಆನಂದದಿಂದ, ಜಯಜಯಕಾರವನ್ನು ಘರ್ಜಿಸುತ್ತಾ ಆ ಇಬ್ಬರು ಮಹಾತ್ಮರನ್ನು ಪೂಜಿಸುವಂಥವರಾದರು. 


ಅನಂತರ ಸಿದ್ದರು ಕೆಲವು ದಿನ ಅಲ್ಲೇ  ಕಳೆಯುತ್ತಾ ಇರುವಾಗ, ಎಲ್ಲರೂ ಆನಂದ ಮಹೋತ್ಸವವನ್ನು ಭೋಗಿಸುತ್ತಿದ್ದರು. ಆಮೇಲೆ ಸಿದ್ದಾರೂಡರು ಹುಬ್ಬಳ್ಳಿಗೆ  ತಿರುಗಿ ಹೋಗಲಿಕ್ಕೆ ಮಡಿವಾಳ ಸ್ವಾಮಿಯವರ ಆಜ್ಞಾ ಬೇಡುವಾಗ, ಸ್ವಾಮಿಯವರು ಅನ್ನುತ್ತಾರೆ- “ಸಿದ್ಧನೇ ಇನ್ನು ಸಂಸಾರವನ್ನು ಸಾಕು ಮಾಡು. ಹುಬ್ಬಳ್ಳಿಯನ್ನು ಬಿಟ್ಟು ಎಲ್ಲೆಲ್ಲಿಯೂ ಹೋಗಬೇಡ. ಅಲ್ಲಿ ಅವರ್ಣನೀಯವಾದ ವೈಭವವು ನಿನಗೆ ಪ್ರಾಪ್ತವಾಗಿರುವುದು. ಈಗ ನಿನ್ನ ಕಿವಿಯಲ್ಲಿಯೇ ಒಂದು ಮಾತು ಹೇಳುತ್ತೇನೆ ಕೇಳು. ಕಾಷ್ಟ ಪಾಷಾಣಮಯವಾಗಿರುವ ಸ್ತ್ರೀರೂಪವನ್ನು ಸಹಾ ನೋಡಬೇಡ. ಸ್ತ್ರೀಯಿಂದ  ಅನೇಕ ಋಷಿಮುನಿಗಳು ಮೋಸಹೊಂದಿರುವರಾದ್ದರಿಂದ, ನೀನಾದರೂ ಆ ಸ್ತ್ರೀ ದಶೆಯಿಂದ ನಿನ್ನ ಮನಸ್ಸನ್ನು ರಕ್ಷಿಸುತ್ತಿರು.” ಮಡಿವಾಳ ಸ್ವಾಮಿಯವರು ಈ ಪ್ರಕಾರ ಅಂದು, ಎರಡೂ ಹಸ್ತಗಳಿಂದ ಸಿದ್ಧರನ್ನು ಅಪ್ಪಿಕೊಂಡು, ವಕ್ಷಸ್ಥಳಕ್ಕೆ ಗಟ್ಟಿಯಾಗಿ ಹಿಡಿದು, ಅತ್ಯಂತ ಗದ್ಗದಿತಕಂಠಯುಕ್ತರಾಗಿ ಎರಡೂ ನೇತ್ರಗಳಿಂದ ನೀರು ಸುರಿಸುತ್ತಿದ್ದರು. ಪ್ರೇಮಕಲ್ಲೋಲದಲ್ಲಿ ಇಬ್ಬರೂ ಮುಳುಗಿರುವಾಗ ಆ ವಿರಹ ಪ್ರಸಂಗವು  ಅವರ್ಣನೀಯವಾಯಿತು. ಹ್ಯಾಗೆ ಪುತ್ರವಿಯೋಗದಿಂದ ದೀರ್ಘಕಾಲ ತನಕ ದುಃಖಿಸುತ್ತಿದ್ದ ಮಾತೆಯು ಪುತ್ರನು ಅಕಸ್ಮಾತ್ತಾಗಿ ಭೆಟ್ಟಿಯಾದ ಕೂಡಲೆ ಪ್ರೇಮ ಭರಿತಳಾಗುವಳೋ ಅದೇ ಪ್ರಕಾರ ಈ ಕಾಲದಲ್ಲಿ ಮಡಿವಾಳ ಸ್ವಾಮಿಯವರ ಪ್ರೇಮವು ಉಕ್ಕಿ ಬರುವಂಥದ್ದಾಯಿತು. ಅತ್ಯಂತ ಕಠಿಣವಾದ ವೈರಾಗ್ಯ ಉಳ್ಳಂಥಾ ಆ ಮಹಾ ಪುರುಷನು ಈ ಕಾಲದಲ್ಲಿ ಸಿದ್ಧನು ಹೋಗುತ್ತಾನೆಂದು ಬಹಳ ತಳಮಳಿಸುವಂಥವನಾಗಿದ್ದು, ಇಬ್ಬರ ನೇತ್ರಗಳಿಂದಲೂ , ಪ್ರೇಮಾಶ್ರುಗಳು ಸುರಿಯುವಂಥವಾದವು. ಆಗ ಸದ್ಗದಿತ ಕಂಠರಾಗಿ ಮಡಿವಾಳ ಸ್ವಾಮಿಯವರು “ಹೇ ಬಾಳಾ, ನನ್ನನ್ನು ಎಂದು ಮರೆಯಬೇಡ,” ಅಂದದ್ದನ್ನು ಕೇಳಿ, ಸಿದ್ಧರು ಆಶ್ವಾಸನ ಕೊಟ್ಟರು. ಸಿದ್ಧರ ಮಸ್ತಕದ  ಮೇಲೆ ಸ್ವಾಮಿಯವರು ಹಸ್ತ ವನ್ನಿಟ್ಟು - " ನಿನ್ನ ಜ್ಞಾನವು ಅಖಂಡಿತವಾಗಿರಲಿ " ಎಂದು ಆಶೀರ್ವಾದ ಮಾಡಿದರು. ಮತ್ತು ಸಿದ್ದರು ಮಡಿವಾಳ ಸ್ವಾಮಿಯವರ ಚರಣಗಳನ್ನು ವಂದಿಸಿದರು. ಸಿದ್ಧರ ಮೇಲಿನ ಸ್ವಾಮಿಯವರ ಪ್ರೇಮವನ್ನು ನೋಡಿ ಅಲ್ಲಿದ್ದ ಸರ್ವ ಭಕ್ತ ಜನರು ಸಹಾ ಗದ್ಗದಿತರಾದರು. ಆಮೇಲೆ ಇಬ್ಬರಿಗೂ ಪಂಚಾರತಿಯನ್ನೆತ್ತಿ ಮಂಗಳಾರತಿಯನ್ನು ಹಾಡುವಂಥವರಾದರು. ಭಕ್ತ ಜನರನ್ನು ಕೂಡಿಕೊಂಡು ಸಿದ್ಧರು ಹುಬ್ಬಳ್ಳಿಗೆ ಹೊರಟು ಹೋಗುವಾಗ, ಮಡಿವಾಳಪ್ಪನವರು ಅವರನ್ನು ಕಳುಹಿಸಲಿಕ್ಕೆ ಬಹಳ ದೂರದತನಕ ಬರುವಂಥವರಾದರು. ಆಗ ಸಿದ್ದರಾಜರು, ಆ ಅಂಧರಾಗಿಯೂ ವೃದ್ದರಾಗಿಯೂ ಇರುವಂಥಾ ಮಡಿವಾಳ ಸ್ವಾಮಿಯವರ ಚರಣ ಹಿಡಿದು ಪ್ರಾರ್ಥಿಸಿ, ಅವರನ್ನು ಹಿಂದಿರುಗಿಸಿದರು. ಸ್ವಾಮಿಯವರ ಶಿಷ್ಯರು ಅವರನ್ನು ಕೈಹಿಡಿದು, ಮಠಕ್ಕೆ ಕರೆಕೊಂಡು ಹೋದರು. ಅಲ್ಲಿ ಮಡಿವಾಳ ಸ್ವಾಮಿಯವರು ಗಾದಿಯ ಮೇಲೆ ಕುಳಿತುಕೊಂಡು, ಶಿಷ್ಯರನ್ನು ಕುರಿತು ಬಹು ಪ್ರಕಾರ ಸಿದ್ಧರ ಗುಣಗಳನ್ನು ವರ್ಣಿಸುತ್ತ, ಕಣ್ಣುಗಳಿಂದ ಅಶ್ರುಗಳನ್ನೇ  ಸುರಿಸುತ್ತಿದ್ದರು. ಹ್ಯಾಗೆ ದಶರಥರಾಜನು  ರಾಮನು  ವನಕ್ಕೆ ಹೋದಾಗ ಪುತ್ರನ ಗುಣಗಳನ್ನು ಸ್ಮರಣೆ ಮಾಡುತ್ತಾ ಪ್ರಲಾಪಿಸುತ್ತಿದ್ದನೋ, ಹಾಗೆಯೇ ಈ ಸಮಯದಲ್ಲಿ ಮಡಿವಾಳಪ್ಪನವರು  ಕಾಣಿಸುವಂಥವರಾದರು. ಇದಾದ ಅಲ್ಪಕಾಲದಲ್ಲಿಯೇ ಅವರು ದೇಹವನ್ನಿಟ್ಟು, ವಿದೇಹ ಕೈವಲ್ಯ ಸ್ಥಿತಿಯನ್ನು ಹೊಂದಿದರು. ಅದೇ ಗರಗ ಗ್ರಾಮದಲ್ಲಿ ಅವರ ಭಕ್ತಜನರು, ಮಠದ ಸಮೀಪ ಒಂದು ಭವ್ಯವಾದ ಸಮಾಧಿ ಮಂದಿರವನ್ನು ಕಟ್ಟಿಸಿ ಅದರಲ್ಲಿ ಮಡಿವಾಳ ಸ್ವಾಮಿಯವರ ಶರೀರವನ್ನು ಸ್ಥಾಪಿಸಿದರು. ಇಂಥಾ ಈ ಮಹಾತ್ಮರ ಅದ್ಭುತ ಕಥೆಯನ್ನು ಶ್ರವಣ ಮಾಡಿದ ಮಾತ್ರದಿಂದ ಸರ್ವ ಕಲಿಮಲವು ನಾಶವಾಗಿ, ಅಂತಃಕರಣ ಶುದ್ಧಿಯಾಗಿ, ಜ್ಞಾನಾಧಿಕಾರವು

ಪ್ರಾಪ್ತವಾಗುವುದು

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಬ್ರಾಹ್ಮಣ ಸ್ತ್ರೀಗೆ ಭೂತಬಾದೆ ಕಳೆದ ನರಸಿಂಹಸರಸ್ವತಿಗೆ ಕಾಣಿಕೆಕೊಡಲು ಹೋದಾಗ ಸಿದ್ದಾರೂಢರಿಗೆ ಕೊಡು ಅಂತ ಕನಸಲ್ಲಿ ಹೇಳಿದ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ