ಸದ್ಗುರುಗಳ ಕಾಲಾ ನೋಡಲು ಶಿವ ಪಾರ್ವತಿ ಬಂದಿದ ಕಥೆ,

 🍀ಸದ್ಗುರುಗಳು ಕಾಲಾ ನೋಡಲು ಶಿವ ಪಾರ್ವತಿ ಬಂದಿದ್ದು ಕಾಲಾ ಪ್ರಸಾದದಿಂದ ಶರಣಾಗತನ ಕುಷ್ಠವನ್ನು ಪರಿಹರಿಸಿ ಮತ್ತು ಅಶುದ್ದ ನೀರು ಶುದ್ಧ ಮಾಡಿ ಶಿಷ್ಯರಿಗೆ ಕುಡಿಸಿದ ಕಥೆ,



ಒಂದಾನೊಂದು ದಿವಸ ಶ್ರೀ ಸಿದ್ಧಾರೂಢ ಸದ್ಗುರುನಾಥರು, ಮೂರು ಪ್ರಹರ ಹೊತ್ತಾಗಿರುವಾಗ, ಎಲ್ಲಾ ತಮ್ಮ ಶಿಷ್ಯರನ್ನು ಕರೆದು - “ಸರ್ವರೂ ಕೂಡಿ, ಪಶ್ಚಿಮ ದಿಕ್ಕಿನ ಗುಡ್ಡಕ್ಕೆ ಹೋಗೋಣ ನಡೆಯಿರಿ, ಎಲ್ಲರಿಗೂ ಸಾಕಾಗುವಷ್ಟು ರೊಟ್ಟಿಗಳನ್ನೂ, ಒಂದು ಪಾತ್ರೆಯಲ್ಲಿ ಸಾಕಷ್ಟು ಆಮಠಿಯನ್ನೂ ತೆಗೆದುಕೊಳ್ಳಿರಿ'' ಎಂದು ಹೇಳಿದರು. ಆಜ್ಞೆಯಾದ ಮೇರೆಗೆ ಅಷ್ಟ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಹೊರಟರು. ಗುರು ಆಜ್ಞೆಯೇ  ಪ್ರಮಾಣವೆಂದು ಮನ್ನಿಸುವ ಇಪ್ಪತೈದು ಮಂದಿ ನಿಕಟ (ಸಮೀಪದ) ಶಿಷ್ಯರನ್ನು ಸಂಗಡ ಕರೆದುಕೊಂಡು ಸದ್ಗುರುಗಳು ಹೊರಟರು. ಸರ್ವ ಶಿಷ್ಯರು ಗುರು ಭಜನೆ ಮಾಡುತ್ತಾ, ಎರಡು ಘಳಿಗೆ ಪರ್ಯಂತ ನಡೆಯುತ್ತ ತ್ವರೆಯಿಂದ ಗುಡ್ಡಕ್ಕೆ ಬಂದು ಮುಟ್ಟಿದರು. ಎಲ್ಲರೂ ಗುಡ್ಡದ ಮೇಲೆ ಹತ್ತಿ, ಕಲ್ಲು ಭೂಮಿಯ ಸಪಾಟವಾದ ಸ್ಥಾನ ನೋಡಿ, ಅಲ್ಲಿ ಆನಂದದಿಂದ ನಾಮಗರ್ಜನೆ ಮಾಡುತ್ತ ಕುಳಿತುಕೊಂಡರು, ಶಿಷ್ಯರೆಲ್ಲರೂ ಕೂಡಿ ಸದ್ಗುರುವರನ್ನು ಒಂದು ಎತ್ತರವಾದ  ಕಲ್ಲಿನ ಮೇಲೆ ಕೂಡ್ರಿಸಿ,  ಪೂಜಾ ಆರಂಭಿಸಿದರು. ಬಹು ವಿಚಿತ್ರವಾದ ಅಲಂಕಾರ ಮಾಡಿದರು. ಅನೇಕ ಪ್ರಕಾರದ ಪತ್ರ ಪುಷ್ಪಗಳನ್ನು ಪೋಣಿಸಿ, ಒಂದು ವನಮಾಲೆಯನ್ನು ತಯಾರಿಸಿ, ಪಾದತನಕ ಬರುವಂಥಾ ಆ ಮಾಲೆಯನ್ನು ಕೊರಳಿಗೆ ಹಾಕಿದ್ದಾಗ, ಸದ್ಗುರುಗಳು ಶಿಲಾ ಸಿಂಹಾಸನದ ಮೇಲೆ ಬಹು ರಮ್ಯವಾಗಿ ಶೋಭಿಸುವಂಥವರಾದರು. ಅನಂತರ ಸರ್ವ ಶಿಷ್ಯಜನರು ಒಬ್ಬರ ಕೈ ಒಬ್ಬರು ಹಿಡಿದು, ಸದ್ಗುರು ಸಮ್ಮುಖದಲ್ಲಿ ಚಕ್ರಾಕಾರವಾಗಿ ನಿಂತು, ಭಜನೆ ಹಾಡುತ್ತ ಆನಂದದಿಂದ ನೃತ್ಯ ಮಾಡಲಾರಂಭಿಸಿದರು. ಈ ಪ್ರಕಾರ ಭಜನೆ ಕಲ್ಲೋಲದೊಳಗೆ ಅವರೆಲ್ಲರೂ ನಾಲ್ಕು ಗಳಿಗೆ ಆನಂದದಲ್ಲಿರುವಾಗ, ಸದ್ಗುರುಮುಖವು ಬಹು

ಆನಂದದಿಂದ ಪ್ರಕಾಶಿಸಲ್ಪಟ್ಟು ಪ್ರಸನ್ನವಾಗಿತ್ತು. ಎಲ್ಲರೂ ಶ್ರಮಪಟ್ಟರು  ಎಂದು ತಿಳಿದು, ಸದ್ಗುರುನಾಥರು ಅವರನ್ನು ಕರೆದು, ಕೂಡ್ರಲಿಕ್ಕೆ ಹೇಳಿದ ಪ್ರಕಾರ, ಸರಸಭಾಷಣ ಮಾಡುತ್ತಾ ಒಂದು ಸ್ಥಾನದಲ್ಲಿ ಕುಳಿತುಕೊಂಡರು. ಆಗ ರೂಟ್ಟಿ, ಸಾರು, ಪಲ್ಯ ಮುಂತಾದ್ದನ್ನು ತಂದು ಕಲ್ಲಿನಲ್ಲಿದ್ದ ಒಂದು ತಗ್ಗು ಪ್ರದೇಶದಲ್ಲಿ ಹಾಕಿ ರೊಟ್ಟಿಗಳನ್ನು ಮುರಿದು

ಅವೆಲ್ಲವನ್ನು ಕಲಿಸಿದರು. ಈ ಪ್ರಕಾರ ದೊಡ್ಡದೊಂದು ಕಾಲಾ ಸಿದ್ಧ ಮಾಡಿಸಿ, ಸದ್ಗುರುಗಳು ಅದರೊಳಗಿಂದ ಸ್ವಲ್ಪ ಕೈಯಲ್ಲಿ ತೆಗೆದುಕೊಂಡು, ಪ್ರೀತಿ ಒಬ್ಬನ  ಮುಖದಲ್ಲಿ ಹಾಕುತ್ತ ನಡೆದರು. ಆ ಅಮೃತರೂಪ ಪ್ರಸಾದವನ್ನು ಸೇವಿಸಿ ಬಹು ಆನಂದಪಟ್ಟರು. ಬಳಿಕ ಆ ತಗ್ಗಿನ ಸುತ್ತಲೂ ಗುರು ಸಹಿತ ಶಿಷ್ಯರೆಲ್ಲರೂ ಕುಳಿತುಕೊಂಡು, ಒಂದೇ ಶರೀರದ ಎಲ್ಲಾ ಅಂಗಗಳು ಎಂಬಂತೆ ಐಕ್ಯಭಾವದಿಂದ ಒಬ್ಬರ ಮುಖದಲ್ಲಿ ಒಬ್ಬರು ಹಾಕುತ್ತ ಭೋಜನ ಆರಂಭಿಸಿದರು. ಈ ಮಹಾ ಸಮಾರಂಭವನ್ನು ನೋಡಲಿಕ್ಕೆ ದೇವತೆಗಳೂ ವಿಮಾನಗಳಲ್ಲಿ ಕುಳಿತು ಬರುವಂಥವರಾದರು. ಅಂತರಿಕ್ಷದಲ್ಲಿ ವಿಮಾನಗಳ ಸಂದಣಿಯಾಯಿತು. ದೇವತೆಗಳ ದೃಷ್ಟಿಗಳೆಲ್ಲಾ ಸದ್ಗುರುಗಳ ಮೇಲೆ ಸ್ಥಿರವಾದವು. ಸೃಷ್ಟಿಯೊಳಗೆಲ್ಲ ಆನಂದವು

ಪೂರ್ಣವಾಯಿತು. ದೇವತೆಗಳೆಲ್ಲಾ ಹತಾಶರಾಗಿ ಅನ್ನುತ್ತಾರೆ- “ಈ ಸದ್ಗುರುವು ಪೃಥ್ವಿಯಲ್ಲಿ ಕಾಲಾ ಮಾಡಿ ಈ ಮೂಲಕ ಜೀವರನ್ನು ತಾರಿಸುತ್ತಾನೆ. ನಾವು ವ್ಯರ್ಥವಾಗಿ ಸ್ವರ್ಗದಲ್ಲೇ ಉಳಿದೆವು . ನಮ್ಮ ಭೋಗಗಳು ನಮ್ಮನ್ನು ಬಂಧಿಸುತ್ತವೆ. ನಾವು ಮನುಷ್ಯರಾಗಿದ್ದದ್ದಾದರೆ, ಸಿದ್ಧಾರೂಢ ಸ್ವಾಮಿಗಳನ್ನು ಎಂದೂ ಬಿಡುತ್ತಿರಲಿಲ್ಲ. ಈತನ ಹಸ್ತದಿಂದ ನಿತ್ಯದಲ್ಲಿಯೂ ನಾವು ಇಂಥಾ ಪ್ರೇಮದ ಅಮೃತವನ್ನು ಸೇವಿಸುತ್ತಿದ್ದೆವು. ನಮ್ಮ ಅಮೃತವೆಂಬದು ನಾಮ ಮಾತ್ರವಾಗಿದ್ದು, ನಮಗೆ ನಿರಂತರ ಪತನ ಭಯವಿರುವದು. ಸದ್ಗುರು ಹಸ್ತದಿಂದ ಸೇವಿಸುವಂಥಾ ಅಮೃತವು ಸತ್ಯವಾಗಿದ್ದು, ಜನ್ಮ ಮರಣಗಳನ್ನು ತಪ್ಪಿಸುತ್ತದೆ".


ಅದೇ ಸಮಯದಲ್ಲಿ ಪಾರ್ವತಿ ಪರಮೇಶ್ವರರು  ನಂದಿಕೇಶ್ವರನ ಮೇಲೆ ಕುಳಿತುಕೊಂಡು ಅಂತರಿಕ್ಷದಲ್ಲಿ ಹೋಗುತ್ತಿರುವಾಗ, ದೇವತೆಗಳ ಸಮೂಹವನ್ನು ನೋಡಿ, ಕೌತುಕಪಟ್ಟು ಪಾರ್ವತಿಯು ಪರಮೇಶ್ವರನನ್ನು   ಕುರಿತು, - “ಹೇ ಭೋಳಾನಾಥನೇ,ಇಲ್ಲಿ ಏನು ನಿಮಿತ್ಯ ದೇವತೆಗಳೆಲ್ಲಾ ಕೂಡಿರುವರು ? ಇವರು ವಿಮಾನಗಳಲ್ಲಿ ಕುಳಿತು ನೋಡುತ್ತಿರುವದಕ್ಕೆ ಅಂಥಾ ಏನು ಚಮತ್ಕಾರವು ಜಗತ್ತಿನೊಳಗೆ ನಡೆದಿರುವುದು ? ಎಂದು ಕೇಳಲು, ಶ್ರೀ ಶಂಕರನು - “ಅದೇನು ಕೌತುಕವೆಂದು ನಾವಾದರೂ ಹೋಗಿ ನೋಡೋಣ' ಎಂದು ನಂದಿಕೇಶ್ವರನಿಗೆ ಆಜ್ಞಾಪಿಸಿ ಇಲ್ಲಿಗೆ ಬಂದು, ಸಿದ್ಧಾರೂಢ ಸದ್ದುರುವಿನ ಈ ನವಲೀಲಾ ನೋಡುವಂಥವರಾದರು. ಅದ್ಭುತವಾದ ಆ ಕಾಲಾ ನೋಡಿ, ಪಾರ್ವತಿಯು ಮನಸ್ಸಿನಲ್ಲಿ ಹಿಡಿಸಲಾರದಂಥಾ ಆನಂದವನ್ನು ಹೊಂದಿ, ಪತಿಯನ್ನು ಕುರಿತು - ಹೇ ಶೂಲಪಾಣಿಯೇ ಈ ಸಿದ್ದ ಮುನಿಯು ಯಾರಿರುವನು? ಎಂದು ಕೇಳಲು ಆ ಗಿರಿಜೆಯನ್ನು ಕುರಿತು ಶಂಕರನು ಅನ್ನುತ್ತಾನೆ -“ಹೇ ದೇವಿ, ಈ ಸಿದ್ಧಾರೂಢನು  ನನ್ನ ಅವತಾರವಿರುತ್ತಾನೆ. ಪೃಥ್ವಿಯಲ್ಲಿ ಯಾವಾಗ ಪಾಪವು ವಿಶೇಷವಾಗಿ ಬೆಳೆಯಿತು, ಆಗ ಸರ್ವ ದೇವತೆಗಳು ನನ್ನ ಬಳಿಗೆ ಬಂದು, ಪ್ರಾರ್ಥಿಸುತ್ತಾರೆ' - ಹೇ ದೇವನೇ, ಪೃಥ್ವಿಯ ಮೇಲೆ ಪಾಪವು ಬಹಳವಾಗಿದೆ. ಕಲಿಕಾಲನು ಜನರನ್ನು ಬಹು ರೀತಿಯಿಂದ ಪೀಡಿಸುತ್ತಿರುವನು. ಆದ್ದರಿಂದ ಈ ಕಾಲದಲ್ಲಿ ನೀನು ಅವತಾರ ಧಾರಣ ಮಾಡತಕ್ಕದ್ದು, ಆ ಅವತಾರವು ಹೀಗಿರಬೇಕು - ಪಾಪದಿಂದ ಜನರನ್ನು ಉದ್ಧರಿಸತಕ್ಕದ್ದು. ಆದರೆ ದುರ್ಜನರನ್ನು ನಾಶ ಮಾಡದೆ, ಅವರು ತಮ್ಮ ಪಾಪ ಬುದ್ಧಿಯನ್ನು ಬಿಟ್ಟು ಬಿಡುವಂತೆ ವ್ಯವಸ್ಥೆ ಮಾಡಬೇಕು. ಆತನು ಕರುಣಾ ಮೂರ್ತಿಯಿದ್ದು, ದುಷ್ಟರ ಮೇಲೆ ಅಧಿಕ ಪ್ರೀತಿ ಮಾಡಿ ಅವರನ್ನು ತಾರಿಸಿದನೆಂದರೆ, ಇತರರೆಲ್ಲರೂ ಆತನಿಂದ ಅವಶ್ಯವಾಗಿ ತಾರಣ ಹೊಂದವರು. ಭಕ್ತಿ ಬಲದಿಂದ ಸರ್ವರನ್ನು ಉದ್ಧರಿಸಿ ಜ್ಞಾನ ಬಲದಿಂದ ಅವರನ್ನು ಮೋಕ್ಷಕ್ಕೆ ಒಯ್ಯಬೇಕು. ದುಷ್ಟರ ಮೇಲೆ ಶಾಂತಿಯ ವಿನಹ ಬೇರೆ ಶಸ್ತ್ರವನ್ನು ಎತ್ತಬಾರದು. ಪೂರ್ವದಲ್ಲಿ ಅನೇಕ ಅವತಾರಗಳನ್ನು ಧರಿಸಿದಿ. ಆದರೆ ಆ ಕಾಲದಲ್ಲಿ ದುಷ್ಟರನ್ನು ನಾಶ ಮಾಡಿದಿ. ಅವರಾದರೂ ಪುನಃ ಪುನಃ ಜನ್ಮವೆತ್ತಿ ಬಂದರು. ಇದರಿಂದ ಕಾರ್ಯವು ಯಥಾ ಪೂರ್ವ ಉಳಿಯಿತು. ಇನ್ನು ಮುಂದೆ ಈ ಪ್ರಕಾರ

ಮಾಡಿ ಉಪಯೋಗವಿಲ್ಲ. ದುಷ್ಟರನ್ನು ಇಟ್ಟು ಅವರ ದುರ್ಗುಣಗಳನ್ನು ನಾಶ ಮಾಡಬೇಕು. ಇದರಿಂದ ಸರ್ವರ ಉದ್ದಾರವಾಗಿ ಪಾಪವು ಲೋಕದೊಳಗಿಂದ ಕಿತ್ತುಕೊಂಡು ಹೋಗುವದು,


ಈ ಪ್ರಕಾರ ದೇವತೆಗಳ ವಚನವನ್ನು ಕೇಳಿ, ಹೇ ಸತೀ, ನಾನು ಅವರನ್ನು ಕುರಿತು ಹೇಳಿದ್ದೇನೆಂದರೆ - “ ದೇವತೆಗಳಿರಾ, ನೀವು ಅನ್ನುವ ಪ್ರಕಾರ ಕಾರ್ಯವನ್ನು ನಡಿಸುವದು ನನಗೆ ಬಹಳ ದುಸ್ಸಾಧ್ಯವಾಗಿ ತೋರುವದು ದುಷ್ಟರನ್ನು ಕೊಲ್ಲದೆ  ಅವರನ್ನು ತಾರಿಸುವಂಥ ಅವತಾರವನ್ನು ನಾನು ಎಂದು ತೆಗೆದುಕೊಂಡಿಲ್ಲ ಇದು ಹ್ಯಾಗಾಗಬೇಕೆಂದು ನನಗೇನೂ ಸೂಚಿಸುವುದಿಲ್ಲ. ಆದರೂ ಇದರ ವಿಚಾರ

ಮಾಡತಕ್ಕದ್ದು,” ಹೀಗೆ ಹೇಳಿ, “ಹೇ, ದೇವಿ, ನಾನು ಆ ದೇವತೆಗಳನ್ನು ಅವರ ಸ್ವಸ್ಥಾನಕ್ಕೆ ಕಳುಹಿಸಿದೆನು. ಆನಂತರ ಬಹು ದಿವಸಗಳವರೆಗೆ ನಾನು ವಿಚಾರ ಮಾಡಿ, ಒಂದು ವಿಶೇಷವಾದ ಅವತಾರವನ್ನು ಧಾರಣೆ ಮಾಡಿದೆನು. ಆಗ ಭಕ್ತ ಜನರಾಗಿ ಭೂಮಿಯ ಮೇಲೆ ಬಂದು ನನಗೆ ಸಹಾಯವಾಗಬೇಕೆಂದು ದೇವತೆಗಳಿಗೆ ಆಜ್ಞಾಪಿಸಿದರು. ಸಿದ್ಧಾರೂಢ ಎಂಬ ನಾಮದಿಂದ ನಾನು  ಅವತರಿಸಿದೆನು. ಆಗ ದೇವತೆಗಳೂ ಅಪಾರ ಭಕ್ತ ಜನರಾಗಿ ಪೃಥ್ವಿಯಲ್ಲಿ ಹುಟ್ಟಿದರು. ಈ ಅವತಾರದಲ್ಲಿ ದುಷ್ಟರನ್ನು ತಾರಿಸಿದೆನು, ಆದರೆ ಯಾರನ್ನೂ ನಾಶಮಾಡಲಿಲ್ಲ. ಶಾಂತಿ ಶಸ್ತ್ರವನ್ನು ಧರಿಸಿಕೊಂಡು 

ಅವರ ದುಷ್ಟತ್ವವನ್ನು ಮಾತ್ರ ಸಮೂಲ ಕಿತ್ತು ಬಿಟ್ಟೆನು. ಇದಲ್ಲದೆ ಸಾಧನ ಸಂಪನ್ನರಾಗಿ ಬಂದವರಿಗೆ ಅತ್ಯುತ್ತಮವಾದ ಆತ್ಮ ಜ್ಞಾನವನ್ನು ಪ್ರಾಪ್ತಮಾಡಿಕೊಟ್ಟೆನು. ಅದರಿಂದ ಅವರು ನನ್ನ ಸಮಾನರಾದರು. ನನ್ನ ಅವತಾರವು ಪೂರ್ಣವಾದರೂ, ಅವರು ಪೃಥ್ವಿಯಲ್ಲಿ ನನ್ನ ಕಾರ್ಯವನ್ನು ಮುಂದೆ ನಡೆಸುವರು. ಮತ್ತು ದುಃಖಮಯಾವಾದ ಸಂಸಾರದೊಳಗಿರುವ ಅಜ್ಞಾನಿ  ಜೀವರನ್ನು ಅವರು ತಾರಣ ಮಾಡುವರು.” ಈ ಪ್ರಕಾರ ಪರಮೇಶ್ವರನು  ನುಡಿದ ವಚನವನ್ನು ಕೇಳಿ, ಪಾರ್ವತಿಯು ಅತ್ಯಾನಂದಭರಿತಳಾದಳು. ಆಮೇಲೆ ಪಾರ್ವತಿ ಪರಮೇಶ್ವರರು  ನಂದಿಯ ಮೇಲೆ ಆರೋಹಣ ಮಾಡಿ, ಕೈಲಾಸಕ್ಕೆ ತೆರಳಿದರು:


ಇತ್ತ ದೇವತೆಗಳು ವಿಮಾನದಲ್ಲಿ ಕುಳಿತುಕೊಂಡು ನೋಡುತ್ತಾರೆ. ಪೃಥ್ವಿಯ ಮೇಲೆ ಸಿದ್ಧಾರೂಢರು ಕಾಲಾ  ಮಾಡುವಾಗ ಭಕ್ತ ಜನರು ಒಬ್ಬರ ಮುಖದಲ್ಲಿ ಒಬ್ಬರು ಗ್ರಾಸಹಾಕಿ ವಿನೋದದಿಂದಿದ್ದರು. ಇದೇ ಸಮಯದಲ್ಲಿ ಅಲ್ಲಿ ಒಬ್ಬ ಕುಷ್ಠರೋಗಿಯು  ಬಂದನು. ಆತನ ಸರ್ವಾಂಗವು ವೃಣಗಳಿಂದ ತುಂಬಿತ್ತು. ಆತನು  ಸದ್ಗುರುಗಳ ಬಳಿಗೆ ಬಂದು ಅವರ ಪಾದಕ್ಕೆ ಬಿದ್ದು ಪ್ರಾರ್ಥಿಸುತ್ತೇನೆ - 'ಹೇ ಸಿದ್ದರಾಯನೇ, ದೀನನಾಗಿರುವ ನನ್ನ ಮೇಲೆ ನೀನಾದರೂ ದಯಮಾಡು. ನನ್ನ ಈ ಜನ್ಮವೆಲ್ಲ ವ್ಯರ್ಥವಾಯಿತು. ಈಗ ಯಾಕೆ ವ್ಯರ್ಥ ಪ್ರಾಣವನ್ನು ಇಟ್ಟುಕೊಳ್ಳಲಿ. ನಿನ್ನ ಚರಣಗಳಲ್ಲಿ

ಮಸ್ತಕವನ್ನಿಟ್ಟು ನಾನು ಪ್ರಾಣ ಬಿಟ್ಟಿದ್ದಾದರೆ ನಿನ್ನ ಚರಣ ಕೃಪೆಯಿಂದ ಸತ್ಯವಾಗಿ ನಾನು ಧನ್ಯನಾಗುವೆನು. ನನಗೆ ಈ ಜನ್ಮ ಯಾತಕ್ಕೆ ಬೇಕಾಗಿರುವುದು? ಸರ್ವ ಜನರು ನನ್ನನ್ನು ತ್ಯಜಿಸುವರು. ಅಂತ್ಯಕಾಲದಲ್ಲಿ ನಿನ್ನ ಪಾದಕ್ಕೆ ಬಂದಿರುವ ಈ ಪಾಪಿಯನ್ನು ನೀನಾದರೂ ಅಂಗೀಕಾರ ಮಾಡು.' ಅವನನ್ನು ನೋಡಿ ಶಿಷ್ಯ ಜನರನ್ನುತ್ತಾರೆ - “ದೂರ ನಿಲ್ಲು, ಚರಣಗಳಿಗೆ ಮುಟ್ಟಬೇಡ”. ಆಗ ಸದ್ಗುರುಗಳು ಶಿಷ್ಯರಿಗೆ, - “ಇರಲಿ, ಅವನು ಭಕ್ತನಿದ್ದಾನೆ,'' ಎಂದು ಹೇಳಿದರು. ಆಗ ಆ ಶಿಷ್ಯ ಜನರು ಸದ್ಗುರುಗಳನ್ನು ಕುರಿತು, - “ಹೇ ಸದ್ಗುರುಗಳೇ, ಯಾವ ಕರ್ಮದಿಂದ ಜೀವನಿಗೆ ಇಂಥಾ ರೋಗವು ಬರುವುದು, ಇದನ್ನು ನಮಗೆ ಹೇಳಬೇಕು," ಎಂದು ಕೇಳಲು, ಸದ್ಗುರುರಾಯರು - “ಹೇ ಸಚ್ಚಿಷ್ಯರುಗಳಿರಾ,

ಕೇಳಿರಿ. ಕುಷ್ಠರೋಗವು ಸ್ಥೂಲ  ಮತ್ತು ಸೂಕ್ಷ್ಮ ಎಂದು ಎರಡು ಪ್ರಕಾರವಾಗಿರುತ್ತದೆ. ಸ್ಥೂಲ  ರೋಗವು ಸ್ಥೂಲ ದೇಹದ್ದು, ಅದರ ಲಕ್ಷಣಗಳನ್ನು ಇವನಲ್ಲೇ ನೋಡಿರಿ. ಯಾವ್ಯಾವ ದೋಷಗಳ ದೆಶೆಯಿಂದ ಈ ರೋಗವು

ಪ್ರಾಪ್ತವಾಗುತ್ತದೆಂಬದನ್ನು ಹೇಳುತ್ತೇನೆ, ಕೇಳಿರಿ, 


ಯಾವಾತನು ಪರದಾರಾಗಮನದಲ್ಲಿ ರತನಿರುವನೋ, ಯಾವನು ಜನರನ್ನು

ಮೋಸಗೊಳಿಸಿ ದ್ರವ್ಯವನ್ನು ಪಡೆಯುವನೋ, ಯಾರು ಸದ್ಗುರು ನಿಂದಾ ಮಾಡುವರೋ, ಇಂಥವರಿಗೆ ಈ ರೋಗವು ಬರುವದು. ಮಾತೃಗಮನ, ಗುರುತಲ್ಪಗಮನ, ಮತ್ತು ನಿರಪರಾಧಿಯ  ಹನನ, ಇವೆಲ್ಲಾ ದೋಷಗಳ ದೆಸೆಯಿಂದ ಮಹಾ ಕುಷ್ಟರೋಗವು ಪ್ರಾಪ್ತವಾಗುವದು. ತನ್ನ ತಾಯಿ ತಂದೆಗಳನ್ನು ಯಾವತನು ಅತ್ಯಂತ ದ್ವೇಷಿಸುವನೋ, ಆ ದುರ್ಗುಣಿ ಪುತ್ರನು ಜನ್ಮಾಂತರಗಳಲ್ಲಿ ಕುಷ್ಠ ರೋಗಿಯಾಗಿ ಹುಟ್ಟುವನು. ಯಾವನು ಶೈವನಿದ್ದು, ವಿಷ್ಣುನಿಂದಾ ಮಾಡುವನೋ ಅಥವಾ ವೈಷ್ಣವನಿದ್ದು ಶಿವನಿಂದಾ- ಮಾಡುವನೋ, ಆತನು ಆ ಜನ್ಮ ಕುಷ್ಠರೋಗಿಯಾಗುವನೆಂದು ನಿಶ್ಚಯವಾಗಿ ತಿಳಿಯಿರಿ. ಈ ರೋಗವು ಬರಲಿಕ್ಕೆ ಕಾರಣವಾಗಿರುವ ಇನ್ನೂ ಅನೇಕ ಪಾತಕಗಳಿರುವವು. ಎಷ್ಟೆಂತ ಹೇಳಲಿ, ನೀವೇ ಅವನ್ನೆಲ್ಲಾ ವಿಚಾರದಿಂದ ತಿಳಿಯತಕ್ಕದ್ದು. ಈಗ ಸೂಕ್ಷ್ಮ ಕುಷ್ಠವು ಸೂಕ್ಷ್ಮದೇಹಕ್ಕಿದ್ದು, ಅದರ ಲಕ್ಷಣಗಳು ಸ್ಪಷ್ಟವಾಗಿ ತೋರುವದಿಲ್ಲ. ಆದರೆ ಅದರಿಂದ ಬುದ್ದಿಯು  ನಷ್ಟವಾಗಿ, ಸರ್ವ ಪ್ರಕಾರದ ಅರಿಷ್ಟಗಳೂ ಪ್ರಾಪ್ತವಾಗುವವು. ಇತರರ ಮೇಲೆ  ಮತ್ಸರ ಬುದ್ಧಿಯಿಂದ ಯಾವತನು  ರಾತ್ರಿ ಹಗಲು ಮನಸ್ಸಿನಲ್ಲೇ ಚಡಪಡಿಸುವನೋ ಅಥವಾ ನಿಂದಾದ್ವೇಷಗಳನ್ನು  ಸರ್ವಕಾಲದಲ್ಲಿಯೂ ಮುಖದಿಂದ ಉಚ್ಚರಿಸುವನೋ ಎರಡನೆಯವರಿಗೆ ಘಾತಮಾಡಬೇಕೆಂದೇ  ಯಾವನು ಸರ್ವದಾ ಚಿಂತಿಸುತ್ತಿರುವನೋ, ಇಂಥವನಿಗೆ ಈ ಸೂಕ್ಷ್ಮ ಕುಷ್ಠದ ಲಕ್ಷಣಗಳು ಲಿಂಗದೇಹದಲ್ಲಿ ಇರುತ್ತವೆ. ಮೇಲೆ ಹೇಳಿದ

ಪಾಪಕರ್ಮಗಳಲ್ಲಿ ಪ್ರವರ್ತನಾಗುವದರಿಂದ, ಈ ಲಕ್ಷಣಗಳು ಸಂಸ್ಕಾರ ರೂಪದಿಂದಿರುತ್ತವೆ. ಜೀವನ ಬುದ್ಧಿಯನ್ನು ಇವು ಆವರಿಸಿಕೊಂಡು ಅನಿವಾರ್ಯ ದುಃಖವನ್ನು ಕೊಡುತ್ತಿರುವವು. ಈ ಎರಡೂ ಪ್ರಕಾರದ ರೋಗಗಳ ಮೇಲೆ ಔಷಧೋಪಾಯವೇನೂ ನಡಿಯುವುದಿಲ್ಲ. ಆದರೆ ಸತ್ಸಂಗ ಮತ್ತು ಸದ್ಗುರು ಸೇವಾ ಘಟಿಸುವದರಿಂದ ಇವು ಶೀಘ್ರವಾಗಿ

ಹೋಗುತ್ತವೆ,'' ಎಂದು ಸದ್ಗುರುರಾಯರು ಅಂದದ್ದನ್ನು ಶಿಷ್ಯರೆಲ್ಲಾ ಏಕಾಗ್ರಚಿತ್ತದಿಂದ ಕೇಳಿದವರಾಗಿ, ಬಹು ಆನಂದ ಪಟ್ಟರು. 


ಆಮೇಲೆ ಸಿದ್ದ ದಯಾಘನರು ಏನು ಮಾಡಿದರೆಂದರೆ - ಆ ಅಮೃತ ಸಮಾನವಾದ ಕಾಲಾದೊಳಗಿಂದ ಸ್ವಲ್ಪ ತೆಗೆದುಕೊಂಡು ಆ ಕುಷ್ಠ ರೋಗಿಯ ಮುಖದಲ್ಲಿ ಹಾಕಿ “ಶಿವಾಯನಮಃ' ಈ ನಾಮೋಚ್ಛಾರ ಮಾಡಿದರು. ರೋಗಿಯು

ಆ ಪ್ರಸಾದವನ್ನು ನುಂಗಿದ ಕೂಡಲೇ, ದೇಹದಿಂದ ಶೀತಲತ್ವವನ್ನು ಹೊಂದಿದನು. ತತ್ಕಾಲವೇ ಮೈಮೇಲಿನ ವೃಣಗಳು ಅದೃಶ್ಯವಾಗಿ ಹೋದವು. ಇದನ್ನ ನೋಡಿ ಸರ್ವರೂ ಅತ್ಯಾಶ್ಚರ್ಯಭರಿತರಾದರು. ಆ ರೋಗಿಯ ಶರೀರವು ಪೂರ್ಣ ಶುದ್ದವಾಗಿ ಕುಷ್ಠವು ಅಣುಮಾತ್ರವೂ  ಕಾಣಿಸದಂತಾಯಿತು. ಆಗ ಆತನು ಬಹು ಆನಂದದಿಂದ  ಗುರುವರನನ್ನು ಸ್ತುತಿಸುವಂತವನಾದನು - 'ಹೇ ದೇವಾಧಿದೇವಾ, ಸದ್ಗುರುನಾಥಾ, ನಿನ್ನ ಚರಣಗಳಲ್ಲಿ ನನ್ನ ಮಸ್ತಕವನ್ನಿಟ್ಟಿರುವೆನು. ಹೇ ದಿನತ್ರಾತನೇ, ದಯಾನಿಧಿಯೇ, ನನ್ನ ಜನ್ಮದ ಸಾರ್ಥಕವನ್ನು ಮಾಡಿದಿ. ಈಗ ಶುದ್ಧನಾದ ಈ ನನ್ನ ಶರೀರವನ್ನು ನಿನ್ನ ಪಾದಕ್ಕೆ ಅರ್ಪಿಸಿರುವೆನು. ಹೇ ಕರುಣಾಕರನೆ ನಿನ್ನ ಸೇವೆಯನ್ನೇ  ನನ್ನ ಈ ಜನ್ಮವು ಮುಗಿಯುವ ತನಕ ಕೊಡಬೇಕು”

 ಈ ಪ್ರಕಾರ ಪ್ರಾರ್ಥಿಸುವಾಗ ಆತನಿಗೆ ಕಣ್ಣುಗಳಿಂದ ಆನಂದಾಶ್ರುಗಳು ಸುರಿಯುತ್ತಿದ್ದವು. ಆತನು ಸದ್ಗುರುಗಳ ಮುಂದೆ ಭೂಮಿಯ ಮೇಲೆ ಸಾಷ್ಟಾಂಗ ನಮನ ಮಾಡಿದನು. ಸದ್ಗುರುಗಳು ಆತನನ್ನು ಎಬ್ಬಿಸಿ ಹೇಳುತ್ತಾರೆ - "ಭಕ್ತನೇ, ದೇಹವು ನನ್ನದೇ ಇರುವುದು. ಆದರೆ ನನ್ನಲ್ಲೇ ಮನಸ್ಸು ಇಟ್ಟು ನೀನೇ ಅದರ ರಕ್ಷಣೆ ಮಾಡುತ್ತಿರುವ. ಯಾವಾಗಲೂ ನಾಮಸ್ಮರಣೆ

ಮಾಡುತ್ತಿರಬೇಕು. ಸರ್ವ ಜೀವರ  ಮೇಲೆ ದಯಾವಂತನಾಗಿರಬೇಕು, ಮತ್ತು ಸದ್ಗುರು ದರ್ಶನವನ್ನು ನಿತ್ಯ ಪಡೆಯುತ್ತಿದ್ದರೆ, ಈ ರೋಗವು ಪುನಃ ಪ್ರಾಪ್ತವಾಗುವದಿಲ್ಲ.” ಈ ಅದ್ಭುತ ಚಮತ್ಕಾರವನ್ನು ನೋಡಿ, ದೇವತೆಗಳೆಲ್ಲಾ ಜಯಜಯಕಾರ ಮಾಡುವಂಥವರಾಗಿ, ಸದ್ಗುರುಗಳ ಮೇಲೆ ಪುಷ್ಪವೃಷ್ಟಿಯನ್ನು ಮಾಡುತ್ತಾ ದುಂದುಭಿಗಳನ್ನು ಬಾರಿಸಿದರು. ಅನಂತರ ದೇವತೆಗಳು ಸ್ವಸ್ಥಾನಕ್ಕೆ ತೆರಳಿದರು.


ಇತ್ತ ಸದ್ಗುರುರಾಯರು ಸರ್ವ ಶಿಷ್ಯ ಜನರ ಸಮೇತ ಆ ಕಾಲಾ  ಪೂರ್ಣ ಮುಗಿಸಿದರು. ಆಗ ಶಿಷ್ಯರು 'ಹೇ ಸದ್ಗುರುನಾಥನೇ, ನಮಗೆ ಬಹಳ ನೀರಡಿಕೆ ಆಗಿರುತ್ತದೆ. ಜಲಾಶಯವಾದರೂ ಇಲ್ಲಿ ಎಲ್ಲಿಯೂ ಕಾಣಿಸುವದಿಲ್ಲ. ತೃಷಾ ಶಾಂತಿಗೋಸ್ಕರ ಏನು ಮಾಡುವದು ? ಎಂದು ಪ್ರಾರ್ಥಿಸಿದ್ದು ಕೇಳಿ, ಆ ದಯಾಳುವಾದ ಸದ್ಗುರುನಾಥರು ಏನು ಮಾಡಿದರೆಂದರೆ, ಒಂದು ಸ್ಥಾನಕ್ಕೆ ಹೋಗಿ, ಶಿಷ್ಯರನ್ನು ಕರೆದು, - ಇಲ್ಲಿ ನಿಜವಾಗಿ ನೀರವೆ. ಆದರೆ ಇದರೊಳಗೆ  ಹುಳುಗಳು ತುಂಬ ಅವೆ. ನೀವೆಲ್ಲ ಹುಳುಗಳನ್ನು ಬಿಟ್ಟು ಈ ನೀರನ್ನೇ ಕುಡಿಯಿರಿ,'' ಎಂದು ಹೇಳಿದಾಗ, ಆ ಶಿಷ್ಯರೆಲ್ಲ ಅಲ್ಲಿಗೆ ಹೋಗಿ ನೋಡುತ್ತಾರೆ, ನೀರೊಳಗೆ ತುಂಬಾ ಹುಳಗಳಿವೆ. ಅದನ್ನು ಕುಡಿಯಲಿಕ್ಕೆ ಯಾವನೊಬ್ಬನೂ ಮುಂದೆ ಬರುವದಿಲ್ಲವೆಂದು ನೋಡಿ, ಸದ್ಗುರುಗಳು - "ಹಾಗಾದರೆ ನಾನೇ ಮೊದಲು ಈ ನೀರನ್ನು ಕುಡಿಯುವೆನು,'' ಎಂದು

ನುಡಿದು, ತಾವೇ ಆ ನೀರಿಗೆ ಬಾಯಿ ಹಚ್ಚಿ ಕುಡಿಯುವಂಥವರಾದರು. ಆಗ ಶಿಷ್ಯರು ನೋಡುತ್ತಾರೆ - ಆ ನೀರೆಲ್ಲಾ ನಿರ್ಮಲವಾಯಿತು. ಒಂದು ಹುಳ ಅದರೊಳಗೆ ಕಾಣಿಸದಾಯಿತು. ಇದನ್ನು ನೋಡಿ, ಶಿಷ್ಯರು ಆಶ್ಚರ್ಯ ಪಟ್ಟು ತಾವಾದರೂ ಆ ನೀರನ್ನು ಕುಡಿಯುವವರಾದರು. ಈಗ ಸಂಜೆ ಹೊತ್ತು ಆಯಿತೆಂದು ತಿಳಿದು, ಸರ್ವ ಶಿಷ್ಯರನ್ನು ಕೂಡಿಕೊಂಡು ಸದ್ಗುರುಗಳು ಮಠದ ಕಡೆಗೆ ತಿರುಗಿದರು. ಸರ್ವರೂ ಭಜನೆ ಮಾಡುತ್ತಾ, ಮಠಕ್ಕೆ ಬಂದು ಮುಟ್ಟಿದರು.


ಈಗ ಕಥೆಯ ಲಕ್ಷ್ಯಾರ್ಥವನ್ನು ಶ್ರವಣ ಮಾಡಿರಿ. ಶಿಷ್ಯರೆಂಬ  ಇಪ್ಪತ್ತೈದು ತತ್ವಗಳು ಕೂಡಿಕೊಂಡು, ಇಪ್ಪತ್ತಾರನೇ ತತ್ವವಾದ ಸದ್ಗುರುನಾಥನ ಮುಂದೆ ಆಡಲಿಕ್ಕೆ ಆರಂಭಿಸುವರು. ಚಕ್ರಾಕಾರ ಆಟವೇ ಅವರು ಜನ್ಮ ಮರಣಗಳಲ್ಲಿ ತಿರುಗುವದು, ಸದ್ಗುರುನಾಥನು ಸತ್ತಾಮಾತ್ರವಿದ್ದು ನೋಡುತ್ತಿರುವನು. ಹೀಗೆ ಆಡುತ್ತಾ ಬೇಗನೇ ಶ್ರಮ ಹೊಂದಿದರು. ಆನಂತರ ಎಲ್ಲಾ ಸದ್ಗುಣಗಳನ್ನು ಒಟ್ಟುಗೂಡಿಸಿ, ಅವರ ದೆಶೆಯಿಂದ ಕಾಲಾ ಸಿದ್ದ ಮಾಡಲ್ಪಟ್ಟಿತು. ಯಾವಾತನಿಗೆ ಸಂಸಾರವೆಂಬ ಧಾರುಣವಾದ ಕುಷ್ಠವು ಹತ್ತಿತ್ತೋ ಆತನಿಗೆ ಅದನ್ನು ಕೊಟ್ಟಿದ್ದರಿಂದ ಆತನ ಸಂಸಾರ ದುಃಖವು ನಾಶವಾಯಿತು. ಸದ್ಗುಣ ಸೇವನೆಯಿಂದ ಮೋಕ್ಷೇಚ್ಛೆಯಾಗುವದೇ ತೃಷೆಯು. ಆಗ ಸದ್ಗುರುವು ಸಮೀಪದಲ್ಲಿರುವ ಅಮೃತವೆಂಬ ನೀರನ್ನು ತೋರಿಸಿದನು. ನೀರು ಕುಡಿಯುವುದರಿಂದ ತೃಷಾಶಾಂತಿ, ಅಮೃತ ಪಾನದಿಂದ ಮೋಕ್ಷ ಪ್ರಾಪ್ತಿಯು. ಆದರೆ ಆ ಅಮೃತ ಸೇವಿಸಲಿಕ್ಕೆ ನೋಡಿದರೆ ಮೇಲೆ ಸಾಧನದುಃಖಗಳೆಂಬ ಹುಳಗಳು ಕಾಣುವುದರಿಂದ ಅದನ್ನು ಸೇವಿಸಲಿಕ್ಕೆ ಯಾರೂ ಒಲ್ಲರು. ಆಗ ಸದ್ಗುರುವು ದುಃಖವನ್ನು ತಾನೇ ಸಹನಮಾಡಿ ಮೋಕ್ಷ ಸಾಧನವನ್ನು ದುಃಖ ರಹಿತ ಮಾಡಿದನು. ಆಮೇಲೆ ಸರ್ವರಿಗೂ ಅಮೃತಪಾನವನ್ನು ಮಾಡಿ ತೃಪ್ತಿ ಎಂಬ ಮುಕ್ತಿಯನ್ನು ಹೊಂದಿದರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಕಬೀರದಾಸನೆಂಬ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಬೋಧಿಸಿದ ಕಥೆ

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ