ಸಿದ್ಧಾರೂಢ ಸ್ವಾಮೀಜಿ ಶುಭಾಶೀರ್ವಾದದಿಂದ ಗಜೇಂದ್ರಗಡ ಅಪ್ಪಾ ಸಾಹೇಬರ ಜೇಷ್ಠಪುತ್ರನಿಗೆ ಸೊಂಡೂರು ಸಂಸ್ಥಾನದ ಪಟ್ಟಾಭೀಷೇಕ
🦋 ಶ್ರೀ ಸಿದ್ಧಾರೂಢ ಸ್ವಾಮೀಜಿ ಶುಭಾಶೀರ್ವಾದದಿಂದ ಗಜೇಂದ್ರಗಡ ಅಪ್ಪಾ ಸಾಹೇಬರ ಜೇಷ್ಠಪುತ್ರನಿಗೆ ಸೊಂಡೂರು ಸಂಸ್ಥಾನದ ಪಟ್ಟಾಭೀಷೇಕ 🌱
ಗಜೇಂದ್ರಗಡದಿಂದ ಶ್ರೀ ಗೋವಿಂದಪ್ಪ ಕಡೇಮನಿ ವ ಮಿತ್ರರು ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರ ದರ್ಶನವಾದ ನಂತರ ತಮ್ಮ ಊರಿನಲ್ಲಿಯೂ ನಾಮಸಪ್ತಾಹ ಪ್ರಾರಂಭ ಮಾಡುವುದಾಗಿಯೂ ಕೀರ್ತನ, ಶಾಸ್ತ್ರ, ಪ್ರವಚನ ಏರ್ಪಡಿಸಲು ಆಶೀರ್ವಾದ ಪಡೆದರು. ಪ್ರತಿ ವರ್ಷ ವಿಜೃಂಭಣೆಯಿಂದ ಸಪ್ತಾಹ ಜರುಗುತ್ತಿತ್ತು. ಶ್ರೀ ಗಣೇಶ ಶಾಸ್ತ್ರಿಗಳ ಪ್ರವಚನ ನಡೆಯುತ್ತಿತ್ತು. ಒಂದಾನೊಂದು ಸಪ್ತಾಹದ ಕಾಲಕ್ಕೆ ಶ್ರೀ ಗಣೇಶ ಶಾಸ್ತ್ರಿಗಳು ತಮ್ಮ ಕನಸಿನಲ್ಲಿ ವಿಚಿತ್ರ ದೃಶ್ಯವನ್ನು ಕಂಡರು. ಶ್ರೀ ಸಿದ್ಧಾರೂಢರು ಆ ಸಂಸ್ಥಾನದ ರಾಣಿಯ ಬಂಗಲೆಯ ಹತ್ತಿರ ಅಲೆದಾಡುತ್ತಿದ್ದುದನ್ನು ಕಂಡು, ಇಲ್ಲಿಗೇಕೆ ಬಂದಿರಿ ಅಂತ ಪ್ರಶ್ನಿಸಲು, ಅದಕ್ಕೆ ನಾನು ಸಚ್ಚಿದಾನಂದರ ಪುರಾಣವನ್ನು ಕೇಳಲು ಬಂದಿರುವೆ. ಅವರೆಲ್ಲಿ ಅಂತ ಕೇಳಲು, ಅವರು ಶ್ರೀ ಗೋವಿಂದಪ್ಪ ಕಡೇಮನಿಯಲ್ಲಿರುತ್ತಾರೆ ಅಂದಾಗ ಜೋರಾಗಿ ನಗುತ್ತಾ ಸಿದ್ಧಾರೂಢರು, ಶಾಸ್ತ್ರಿಗಳೇ, ಕಡೇಮನಿ ಲಕ್ಷಾರ್ಥ ತೂರ್ಯಾವಸ್ಥೆ ಅನ್ನುತ್ತಲೇ ಶಾಸ್ತ್ರಿಗಳಿಗೆ ಎಚ್ಚರವಾಯಿತು. ಅದನ್ನು ಶಾಸ್ತ್ರಿಗಳು ತಿಳಿಸಲು ಶ್ರೀ ಸಚ್ಚಿದಾನಂದರು (ತಮ್ಮಣ್ಣ ಶಾಸ್ತ್ರಿಗಳು) ಆಶ್ಚರ್ಯ ಚಕಿತರಾಗಿ ಶಾಸ್ತ್ರಿಗಳೇ ನಿಮ್ಮ ಕನಸು ನನಸಾಗುವುದು. ರಾಣಿಸಾಹೇಬರು ತಮ್ಮ ವಾಡೆಯಲ್ಲಿ ಕೀರ್ತನ, ಪ್ರವಚನ, ಕಾರ್ಯಕ್ರಮ ಏರ್ಪಡಿಸುವ ವಿಚಾರದಲ್ಲಿರಬಹುದು, ಕೂಡಲೇ ಈ ಬಗ್ಗೆ ಖಚಿತ ಪಡಿಸಿಕೊಳ್ಳಿರಿ ಅಂತಾ ಆಜ್ಞಾಪಿಸಿದರು.
ಆಗ ಶಾಸ್ತ್ರಿಗಳು ಅರಮನೆಗೆ ಹೋಗಿ ರಾಣಿ ಸಾಹೇಬರನ್ನು ವಿಚಾರಿಸಲಾಗಿ, ಅದಕ್ಕೆ ಹೌದು ಅಂತ ಉತ್ತರಿಸಿದರು. ಅಲ್ಲದೆ ರಾಣಿ ಸಾಹೇಬರಿಗೆ ಅದೇ ತಾನೇ ಬಂದ ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಆಶೀರ್ವಾದದ ಪತ್ರವನ್ನು ಓದಲಾಗಿ, ಹೇ ರಾಣಿಯವರೇ, ಶ್ರೀ ಸಚ್ಚಿದಾನಂದರನ್ನು ಆದರ ಪೂರ್ವಕ ಬರಮಾಡಿಕೊಂಡು ಅವರಿಂದ ಪುರಾಣ, ಕೀರ್ತನ, ಪ್ರವಚನದ ಸತ್ಕಾರ್ಯವನ್ನು ಆರಂಭಿಸಿರಿ ಅಂತ ಬರೆಯಲಾಗಿತ್ತು. ಶ್ರೀ ಗಣೇಶ ಶಾಸ್ತ್ರಿಗಳ ಕನಸಿನಲ್ಲಿ ವಿಷಯ ನನಸಾಗುವುದನ್ನು ಕಂಡು ರಾಣಿ ಸಾಹೇಬರಿಗೂ ನೆರೆದವರಿಗೆ ಸಂತಸ ಇಮ್ಮಡಿಕೊಂಡಿತು. ಕೂಡಲೇ ಶ್ರೀ ಸಿದ್ಧಾರೂಢರ ಆಜ್ಞೆಯಂತೆ ಶ್ರೀ ಸಚ್ಚಿದಾನಂದರ ಪುರಾಣ ಪ್ರವಚನ, ಶ್ರೀ ಗಣೇಶ ಶಾಸ್ತ್ರಿಗಳ ಭಾಷಣ, ಮಥುರಾಬಾಯಿಯ ಕೀರ್ತನ ಕಾರ್ಯಕ್ರಮಗಳು ವೈಭವದಿಂದ ಜರುಗಿದವು. ಅವರೆಲ್ಲರಿಗೆ ಆದರದ ಸತ್ಕಾರ ಸಂಭಾವನೆ ಅರ್ಪಣೆಯಿಂದ ಕಳುಹಿಸಿದರು.
ಎಲ್ಲರೂ ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರಿಗೆ ವಂದಿಸಿ ಸಂಭವಿಸಿದ ಘಟನೆ ಗಳನ್ನು ವಿವರಿಸಿದರು. ಆಗ ಶ್ರೀ ಸಿದ್ಧಾರೂಢರು ಶ್ರೀ ಸಚ್ಚಿದಾನಂದರನ್ನು ಕುರಿತು ಮೂರು ಪ್ರಕಾರದ ಸೃಷ್ಟಿಗಳ ಬಗ್ಗೆ ತಿಳಿಸಿದರು. ಮೊದಲನೆಯದು ಸಂಕಲ್ಪ ಸೃಷ್ಟಿ. ಇದು ಬ್ರಹ್ಮನ ಸಂಕಲ್ಪದಿಂದ ಆಗುತ್ತದೆ. ಎರಡನೆಯದು ಈಕ್ಷಣ ಸೃಷ್ಟಿ, ಇದು ಈಶ್ವರನ ವೀಕ್ಷಣೆಯಿಂದ ತಯಾರಾಗುತ್ತದೆ. ಮೂರನೆಯದು ಸಾನ್ನಿಧ್ಯ ಸೃಷ್ಟಿ, ಇದು ನಿರ್ಗುಣ ಬ್ರಹ್ಮನೇ ಸದ್ಗುರುವಿರುವುದರಿಂದ ಆತನು ಪರಿಪಕ್ವ ಅಂತಃಕರಣವುಳ್ಳವರ ಸ್ವಪ್ನದಲ್ಲಿ ದರ್ಶನವಿತ್ತು, ದೃಷ್ಟಾಂತಗಳನ್ನು ತೋರಿಸಿ, ಅವರ ಅನುಭವಕ್ಕೆ ಬರುವಂತೆ ಮಾಡುತ್ತಾನೆ ಎಂದು ಉಪದೇಶಿಸಿದರು. ಈ ಉಪದೇಶವನ್ನು ಆಲಿಸಿದ ಗಜೇಂದ್ರಗಡ ಮಹಾರಾಜರಾದ ಅಪ್ಪಾಸಾಹೇಬ ಅವರ ಧರ್ಮಪತ್ನಿ ತಾರಾರಾಣಿ ಶ್ರೀಗಳ ಪರಮ ಭಕ್ತರಾದರು. ಮಹಾಶಿವರಾತ್ರಿ ಹಾಗೂ ಶ್ರಾವಣ ಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಜೇಷ್ಠ ಪುತ್ರನಾದ ಕೃಷ್ಣರಾವ್‌ನಿಗೆ ಸೊಂಡೂರು ಸಂಸ್ಥಾನಾಧಿಪತಿಗಳನ್ನಾಗಿ ಮಾಡಲು ಸಾಕಷ್ಟು ಹಣ ಖರ್ಚಿನೊಂದಿಗೆ ಮಾಡಿದ ಪ್ರಯತ್ನಗಳಿಗೆ ಫಲ ದೊರೆಯಲಿಲ್ಲ. ಚಿಂತಾಕ್ರಾಂತರಾದಾಗ ಶ್ರೀ ಸಚ್ಚಿದಾನಂದರು ಬಂದು ರಾಜದಂಪತಿಗಳಿಗೆ, ಹೇ ರಾಜನ್ ಅಘಟಿತ ಘಟನಾ ಸಾಮರ್ಥ್ಯಶಾಲಿ ಸಾಕ್ಷಾತ್ ಪರಶಿವನ ಅವತಾರಿ ಶ್ರೀ ಸಿದ್ಧಾರೂಢರನ್ನು ನಿಮ್ಮ ಹೃತ್ಕಮಲದಲ್ಲಿ ಭಕ್ತಿಪೂರ್ವಕವಾಗಿ ಆಹ್ವಾನಿಸಿ ಧ್ಯಾನಾಸಕ್ತರಾಗಿರಿ. ಆತನೇ ನಿಮ್ಮ ಚಿಂತೆಯನ್ನು ನಿವಾರಿಸುವನು ಅಂತಾ ಹೇಳಿದರು,
ಅದರಂತೆ ರಾಜದಂಪತಿಗಳು ಸಿದ್ಧನ ಧ್ಯಾನದಲ್ಲಿರತೊಡಗಿದರು. ಕೆಲ ಕಾಲದ ನಂತರ ಅಪ್ಪಾಸಾಹೇಬರು ಅರಣ್ಯಕ್ಕೆ ಬೇಟೆಯಾಡಲು ಹೋದಾಗ ಆಯಾಸದಿಂದ ಅಲ್ಲಿಯೇ ರಾತ್ರಿ ಮಲಗಿಕೊಂಡರು. ಸ್ವಪ್ನದಲ್ಲಿ ಶ್ರೀ ಸಿದ್ಧಾರೂಢ ದರ್ಶನಕೊಟ್ಟು, ಪಂಚ ಪಕ್ಷಾನ್ನದ ಭೋಜನದ ತಾಟನ್ನು ಕೊಟ್ಟರು. ಸದ್ ಭಕ್ತನೇ ಈ ಪ್ರಸಾದವನ್ನು ಸ್ವೀಕರಿಸು, ಚಿಂತೆಯನ್ನು ಬಿಡು. ನಿನ್ನ ಅಪೇಕ್ಷೆ ಈಡೇರಿಸುವುದು ಅಂತ ಹೇಳುತ್ತಿರುವಲ್ಲಿಯೇ ರಾಜನಿಗೆ ಎಚ್ಚರವಾಯಿತು. ಪರಿವಾರಸಹಿತ ಅರಮನೆಗೆ ಮರಳಿದರು. ಆ ದಿನವೇ ಬ್ರಿಟಿಷ್ ಸರ್ಕಾರ ಹುಕುಂನಾಮೆ ಹೊರಡಿಸಿ, ಅದರಲ್ಲಿ ಅಪ್ಪಾಸಾಹೇಬ ಘೋರ್ಪಡೆ ಇವರ ಜೇಷ್ಠ ಪುತ್ರ ಕೃಷ್ಣರಾವ್ ಇವರಿಗೆ ಸೊಂಡೂರು ಸಂಸ್ಥಾನಾಧಿಪತಿ ಅಂತಾ ನೇಮಣೂಕಿ ಆಗಿತ್ತು. ಕನಸಿನಲ್ಲಿ ಶ್ರೀಗಳು ಹೇಳಿದ ಅಮೃತವಾಣಿಯು
ಸಾಕಾರಗೊಂಡ ಬಗ್ಗೆ ಅರಮನೆಯು ಹರ್ಷದ ವಾತಾವರಣದಲ್ಲಿ ಮುಳುಗಿತು. ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರಿಗೆ ಸಾದ್ಯಂತ ವೃತ್ತಾಂತವನ್ನು ಹೇಳಿದರು.
ಗುರುಭಕ್ತಿಯು ಉತ್ತಮ ಫಲ ನೀಡಿದೆ. ಅದನ್ನು ಸಂತೋಷದಿಂದ ಭೋಗ ಮಾಡಬೇಕು ಅಂತ ಆಶೀರ್ವದಿಸಿದರು. ಶ್ರೀಗಳ ಆಶೀರ್ವಾದ ಫಲಪುಷ್ಪಗಳೊಂದಿಗೆ ಮರಳಿದರು. ಮುಂದೆ ಆಷಾಢ ಶುದ್ಧ ತೃತೀಯಾ ಬುಧವಾರ ಪುಷ್ಯ ನಕ್ಷತ್ರದ ಶುಭ ಮಹೂರ್ತದಲ್ಲಿ ವಿಭವ ನಾಮ ಸಂವತ್ಸರ ತಾ. ೨೦.೫.೧೯೨೮ನೇ ದಿನ ಶ್ರೀ ಅಪ್ಪ ಸಾಹೇಬ ಘೋರ್ಪಡೆ ಅವರ ಜೇಷ್ಠ ಪುತ್ರ ಶ್ರೀ ಕೃಷ್ಣರಾವ್ ಘೋರ್ಪಡೆ ಇವರನ್ನು ಸೊಂಡೂರು ಸಂಸ್ಥಾನದ ರತ್ನ ಖಚಿತ ಸಿಂಹಾಸನದಲ್ಲಿ ಕುಳ್ಳಿರಿಸಿ, ಸಕಲ ರಾಜ ಗೌರವಗಳೊಂದಿಗೆ ಶ್ರೀ ಸಚ್ಚಿದಾನಂದರ(ಶ್ರೀ ತಮ್ಮಣ್ಣ ಶಾಸ್ತ್ರಿಗಳ) ಮಾರ್ಗದರ್ಶನದೊಂದಿಗೆ ಪಟ್ಟಾಭಿಷೇಕವನ್ನು ಮಾಡಿದರು. ಶ್ರೀ ಸಿದ್ಧಾರೂಢರ ಶುಭಾಶೀರ್ವಾದದ ಫಲರೂಪವಾಗಿ ಸೊಂಡೂರು ಸಂಸ್ಥಾನದ ಸಿಂಹಾಸನಾಧಿಪತಿಗಳಾಗುವ ಸೌಭಾಗ್ಯ ಶ್ರೀ ಕೃಷ್ಣರಾವ್ ಘೋರ್ಪಡೆ ಇವರಿಗೆ ದೊರೆತದ್ದರ ಪ್ರತೀಕವಾಗಿ ಅರಮನೆಯ ಭವ್ಯ ಸಭಾಂಗಣದ ಸುಂದರ ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಭಾವಚಿತ್ರವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ನಿತ್ಯವೂ ಪೂಜೆ, ಪ್ರಾರ್ಥನೆಯಾಗುತ್ತದಲ್ಲದೆ ಕಾಲಕಾಲಕ್ಕೆ ಶಿವ ಭಜನೆ, ಕೀರ್ತನ ಕಾರ್ಯಕ್ರಮಗಳು ನಡೆಯುತ್ತಾ ಬಂದಿರುತ್ತವೆ. ಶ್ರೀಗಳ ಕೃಪಾಶೀರ್ವಾದ ದಿಂದ ಘೋರ್ಪಡೆ ಮನೆತನಕ್ಕೆ ಸೊಂಡೂರು ಸಂಸ್ಥಾನದ ಸಿಂಹಾಸನಾಧಿಪತಿ ಸ್ಥಾನವು ದೊರೆತದ್ದು ಪ್ರಶಂಸನೀಯವಾಗಿದೆ.
👇👇👇👇
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
👉ದರಿದ್ರ ನಾರಾಯಣನಿಂತಿದ್ದ ಮಡಿಮನ್ ಗಣಪತರಾವ್ ಗುರುಭಕ್ತಿಯಿಂದ ಲಕ್ಷ್ಮೀಪತಿ ಆಗಿದ್ದಲ್ಲದೆ ರೋಗಬಾಧೆಯಿಂದ ಪಾರಾದದ್ದು
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
