ನಾರಾಯಣನ ಮಗಳಾದ ಚಂಪೂಬಾಯಿಯ ಜ್ವರವನ್ನು ಸಿದ್ಧಾರೂಢರು ಗುಣಪಡಿಸಿ ನಿಚ್ಚಯ ಮಾಡಿದ ವರನ ಜೊತೆ ಲಗ್ನ ಮಾಡಿಸಿದ್ದರು.

 ✡️ ನಾರಾಯಣನ ಮಗಳಾದ ಚಂಪೂಬಾಯಿಯ ಜ್ವರವನ್ನು ಸದ್ಗುರುಗಳು ಗುಣಪಡಿಸಿ ನಿಚ್ಚಯ ಮಾಡಿದ ವರನ ಜೊತೆ ಲಗ್ನ ಮಾಡಿಸಿದ್ದರು.



ಹುಬ್ಬಳ್ಳಿ ನಗರದಲ್ಲಿ ನಾರಾಯಣವೆಂಬ ನಾಮ ಮೋಡಕವೆಂಬ ಉಪನಾಮವುಳ್ಳ ಒಬ್ಬ ಬ್ರಾಹ್ಮಣನಿರುವನು. ಆತನಿಗೆ ಚಂಪೂ ಎಂದು ಕರೆಯಲ್ಪಡುವ ಒಬ್ಬ ಕನ್ನಿಕೆಯು  ಇರುವಳು. ಇವಳು ವಿವಾಹವಾಗತಕ್ಕವಳಾಗಿದ್ದು, ಅತಿ ಪ್ರಯಾಸದಿಂದ ಶೋಧಿಸಿ ಒಬ್ಬ ವರನನ್ನು ನಾರಾಯಣನು  ಗೋತ್ತು ಮಾಡಿದನು. ನಾರಾಯಣನಿಗೂ  ಆತನ ಕುಟುಂಬದವರೆಲ್ಲರಿಗೂ ಶ್ರೀ ಸಿದ್ಧಾರೂಢರ ಮೇಲೆ ಅತ್ಯಂತ ಭಕ್ತಿಯಿರುವದು. ಅವರು ನಿತ್ಯದಲ್ಲಿ ಸದ್ಗುರುಗಳ ಸ್ಥಾನಕ್ಕೆ ಬಂದು ಬಹು ಪ್ರೇಮದಿಂದ ಭಜಿಸುವರು. ಹೀಗಿರುತ್ತಾ ಕೆನ್ನೆಗೆ ವಿವಾಹ ಮಾಡುವುದು ನಿಶ್ಚಯಿಸಿ, ಸದ್ಭಕ್ತನಾದ ನಾರಾಯಣನು ಸಿದ್ಧಾಶ್ರಮಕ್ಕೆ ಬಂದು, ಬಹು ದೈನ್ಯಭಾವದಿಂದ ಸಿದ್ಧ ಸದ್ಗುರುಗಳನ್ನು ಕುರಿತು, - “ಚಂಪುವಿನ ಲಗ್ನವನ್ನು ನಿರ್ವಿಘ್ನ ಮಾಡು,'' ಎಂದು ಪ್ರಾರ್ಥಿಸಿದನು. ಈ ದೀನ ವಚನವನ್ನು ಕೇಳಿ, ಸದ್ಗುರುನಾಥನು ದಯಾವಾಣಿಯಿಂದ, - ''ನೀವು ಸದ್ಗುರು ಚಿಂತನೆಯಲ್ಲಿರುವಾಗ ವಿಘ್ನಗಳು ಹ್ಯಾಗೆ ಬಂದಾವು !" ಎಂದು  ಅಂದರು. ಈ ಪ್ರಕಾರ ಅಭಯವಚನವನ್ನು ಕೇಳಿ ನಾರಾಯಣನಿಗೆ ಮನಸ್ಸಿನಲ್ಲಿ ಬಹಳ ಸುಖವಾಯಿತು. ಮನೆಗೆ ಬಂದು, ಆತನು  ಲಗ್ನದ್ದೆಶೆಯಿಂದ ಎಲ್ಲ ಸಾಮಗ್ರಿಗಳನ್ನು ಸಿದ್ಧಪಡಿಸಿದನು. ಪಾಲ್ಗುಣ ಶುದ್ಧ ಬಿದಿಗೆ ದಿವಸ ಲಗ್ನವೆಂದು ಜೋಯಿಸನು ಠರಾಯಿಸಿದನು. ಆದರೆ ಲಗ್ನಕ್ಕೆ ಇನ್ನು ಎರಡೇ ದಿವಸ ಇರುವಾಗ ಒಂದು ಮಹಾ ಸಂಕಟ ಬಂದೊದಗಿತು. ವಧುವಾದ ಚಂಪುವಿಗೆ ಅದ್ಭುತವಾದ ಜ್ವರ ಬಂದದ್ದು ನೋಡಿ ಎಲ್ಲರೂ ಬಹಳ 

ಘಾಬರಿಯಾದರು. ಎರಡನೇ ದಿವಸವೂ ಜ್ವರವು ವಿಶೇಷವಾಗಿ, ಏನು ಮಾಡಿದರೂ ಇಳಿಯಲಿಲ್ಲ. ನಿಬ್ಬಣದ ಜನರು ಬಂದರು. ಅವರನ್ನು ಯೋಗ್ಯಸ್ಥಾನದಲ್ಲಿ ಇಳಿಸಿ, ನಾರಾಯಣನು  ಮನೆಗೆ ಬಂದು ಚಂಪುವಿನನ್ನು ನೋಡಿದಾಗ ಬಹಳ ದಿಗಿಲುಪಟ್ಟನು. ಹುಡುಗಿಯು ಎಚ್ಚರ ತಪ್ಪಿ ಆಗಾಗ ಬಡಬಡಿಸುತ್ತಿರುವಳು. ನಾರಾಯಣನು ಬಹು ಚಿಂತಾತುರನಾಗಿ, - 'ಹೇ  ಸದ್ಗುರುವೇ, ಈಗ ಪ್ರಾಪ್ತನಾಗು. ನಿನ್ನ ಆಶೀರ್ವಾದದಿಂದಲೇ ಚಂಪುವಿಗೆ ಯೋಗ್ಯ ವರನು ಸಿಕ್ಕಿರುವನು. ಆದರೆ ಈಗ ಲಗ್ನ ಕಾಲ ಸಮೀಪ ಬಂದಿರುವಾಗ ವಿಘ್ನವು ಬಂದಿದೆ ದಯಾಘನನಾದ ನೀನೇ ಇದನ್ನು ಕಳೆಯುವಂಥವನಾಗು. ನಾವು ವೈದ್ಯನ  ಕಡೆಗೆ ಹೋಗುವದಿಲ್ಲ. ನೀನೇ  ಈಗ ಆಶ್ರಯವನ್ನು ಕೋಡು. ನಾವು ನಿನ್ನ ಪಾದದಲ್ಲಿ ಇರುತ್ತಿದ್ದು,

ಎರಡನೇದೇನೂ ಮನ್ನಿಸಲಾರೆವು. ಆದ್ದರಿಂದ ಶೀಘ್ರವಾಗಿ ಬಂದು ನಮ್ಮ ಮನವನ್ನು ರಕ್ಷಿಸು. ಬೀಗರು ವರನನ್ನು ಕರೆದುಕೊಂಡು ಬಂದಿರುವರು. ಈಗ ನಾವು ಏನು ಮಾಡತಕ್ಕದ್ದಿದೆ ? ಹೇ ಸದ್ಗುರು ರಾಜನೇ, ಓಡುತ್ತಾ ಬಾರಪ್ಪಾ ನನ್ನ ಅಂತರಂಗವನ್ನು ಈಗ ನೋಡಬೇಡ, ಈ ಸಂಸಾರವೆಲ್ಲ ನಿನ್ನದೇ ಇರುತ್ತಿದ್ದು, ನಿನ್ನ ಹೊರತು ನಮಗೆ ಎರಡನೇಯವರು ಯಾರು ಇದ್ದಾರೆ ? ಕಾರ್ಯಕ್ಕೆ ವಿಘ್ನವಾಗಬಾರದು ಎಂದು ಪ್ರಥಮದಲ್ಲಿಯೇ ನಿನಗೆ ಪ್ರಾರ್ಥಿಸಿದ್ದೆ. ನೀನು ಅಭಯವನ್ನು ಕೊಟ್ಟಿರುವಿ. ಹೀಗಿದ್ದು ಈಗ ಹ್ಯಾಗೆ ನನ್ನನ್ನು ಬಿಟ್ಟು ಬಿಡುವಿ. ನಿನ್ನ ಬಿರುದು ರಕ್ಷಿಸಿಕೊಳ್ಳಬೇಕಾಗಿರುತ್ತದೆ. ನಿನ್ನ ಹೊರತು ಈ ಕಾಲದಲ್ಲಿ ನಾವು ಅನಾಥರಾಗಿರುತ್ತೇವೆ. ನೀನು ಯಾವಾಗ ಪ್ರಾಪ್ತನಾಗುವಿಯೋ ಇದೇ ಘೋರ ಚಿಂತೆಯಾಗಿರುವದು'' ಎಂದು ಕಣ್ಣೀರು ಸುರಿಸುತ್ತ ಪ್ರಾರ್ಥಿಸುತ್ತಿರುವಾಗ, ತಕ್ಷಣವೇ ಕೋಣೆಯ ದ್ವಾರವು ತೆರೆದು, ಶ್ರೀ ಸಿದ್ದ ಸದ್ಗುರುರಾಯರು ಪ್ರಕಟರಾದರು. ಅವರನ್ನು ನೋಡಿದ ಕೂಡಲೇ ನಾರಾಯಣನು  ಓಡಿ ಬಂದು ಪಾದಕ್ಕೆ ಬಿದ್ದು, ಎದ್ದು ಹಸ್ತಗ್ರಹಣ ಮಾಡಿ, ಒಳಗೆ ಕರೆದುಕೊಂಡು ಬಂದನು. ಸದ್ಗುರುಗಳನ್ನು ಕುರಿತು ನಾರಾಯಣನು - “ಹೇ ತಂದೆ, ಸಿದ್ದರಾಯನೇ, ನನ್ನ ಕರುಣಾ ವಚನವನ್ನು ನೀನು ನಿಜವಾಗಿ ಕೇಳಿದಿ. ಹೇ ಭಕ್ತ ಸಖನೇ, ದೀನಬಂಧೋ ತ್ವರೆಯಿಂದ ಓಡಿ ಬಂದಿ,” ಎಂದು ಅನ್ನುವಾಗ ಆತನು ಅತ್ಯಂತ ಪ್ರೇಮಯುಕ್ತನಾಗಿ, ಗದ್ಗದಕಂಠವುಳ್ಳವನಾಗಿ, ನೇತ್ರಗಳಿಂದ ಜಲವನ್ನು ಸುರಿಸುವಂಥವನಾದನು. ಆಗ ಸದ್ಗುರುನಾಥರು ಚಂಪುವಿನ ಸಮೀಪ ಬಂದು ಅವಳನ್ನು ಕೃಪಾದೃಷ್ಟಿಯಿಂದ ನೋಡಿ, ನಾರಾಯಣನನ್ನು ಕುರಿತು, - ''ನೀನು ಮನಸ್ಸಿನಲ್ಲಿ ಏನೇನೂ ಚಿಂತೆ ಪಡಬೇಡ, ಸುಖದಿಂದ ಸದ್ಗುರು ಚಿಂತನೆಯನ್ನು ಮಾಡುತ್ತಿರು. ಆತನ ಕೃಪೆಯಿಂದ ಕಾರ್ಯವು ನಿರ್ವಿಘ್ನವಾಗುವದು. ಭಯ ಪಡಬೇಡ ಅಂತರಾಯಗಳು ಬಂದರೂ ಆತನು ತನ್ನ ಕಾರ್ಯವನ್ನು ತಾನೇ ಸಿದ್ಧಿಗೆ ಮುಟ್ಟಿಸುವನು,” ಎಂದು ಹೇಳಿ ಸದ್ಗುರುಗಳು ಚಂಪುವಿನ ಮಸ್ತಕದ

ಮೇಲೆ ಹಸ್ತವನ್ನಿಟ್ಟರು. ಕೂಡಲೆ ಅವಳ ಜ್ವರವೆಲ್ಲಾ ಇಳಿದು ಹೋದದ್ದು ನೋಡಿ, ನಾರಾಯಣನಿಗೆ ಅತ್ಯಂತ ಆನಂದವಾಯಿತು.

ಸದ್ಗುರುರಾಯರು ಈ ಪ್ರಕಾರ ಮಾಡಿ ಅಲ್ಲಿಂದಲೇ ಅಂತರ್ಧಾನರಾದರು. ಇದನ್ನು ನೋಡಿ ನಾರಾಯಣನು ಆಶ್ಚರ್ಯ ಚಕಿತನಾಗಿ - “ಆಹಾ ದಯಾಘನನನ್ನು ಪೂಜಿಸಲಿಲ್ಲವಲ್ಲ," ಅಂದು, ಮನೆಯ ಮಂದಿಗೆಲ್ಲಾ ಕರೆದು, - ಸಿದ್ಧಾರೂಢ ಪರಮೇಶನು ಬಂದು, ಚಂಪುಗೆ ನೆಟ್ಟಗೆ ಮಾಡಿ ಹೋದನು,” ಅಂದನು. ಈ ಮಾತನ್ನು ಕೇಳಿ ಎಲ್ಲರೂ ಆನಂದದಿಂದ ಸದ್ಗುರುಗಳಿಗೋಸ್ಕರ ಜಯ ಜಯಕಾರವನ್ನು ಗರ್ಜಿಸುವಂಥವರಾಗಿ - 'ಸದ್ಗುರುವು ಈ ಕಾಲಕ್ಕೆ ಪ್ರಾಪ್ತನಾಗಿ ಘೋರವಾದ ವಿಘ್ನವನ್ನು ಕಳೆದನು,” ಎಂದು ಅಂಧರು. 


ಆಗ ಚಂಪುವಿನ ಸಮೀಪ ಬಂದು ನೋಡುತ್ತಾರೆ - ಅವಳ ಮೈ ಮೇಲೆ ಸಣ್ಣ ಸಣ್ಣ ಬುಕ್ಕಿಗಳು ಕಂಡು - 'ಇದು ಮತ್ತೊಂದು ವಿಘ್ನ ಬಂತು' ಎಂದು ಅಂಧರು. ಮುರುದಿವಸ ಎಲ್ಲರೂ ಚಂಪುವಿಗೆ ನೋಡಿ, ಮೈಲಿ ಬಂದಿದೆ ಅನ್ನುತ್ತಿದ್ದರು.

ಮನೆಮಂದಿ ಎಲ್ಲ ಗಾಬರಿಯಾಗಿ, ಇದು ದುರ್ಧರ ಪ್ರಸಂಗವು ಬಂದೊದಗಿತು  ಎಂದು ತಳಮಳಿಸುತ್ತಿದ್ದರು. ''ಮೈಲಿ ಬಂತೆಂದರೆ ಏನಾಯಿತೆಂದು ಹೇಳಲಾಗದು. ಕದಾಚಿತ್ ದುರ್ದೈವದಿಂದ ಕಣ್ಣುಗಳಾದರೂ ಹೋಗಬಹುದು, ವಿರೂಪಳಾದರೂ

ಆಗಬಹುದು, ಹೀಗಾದರೆ ಏನು ಮಾಡೋಣ'' ಎಂದನ್ನುತ್ತಿದ್ದರು. ಬೀಗರು ಬಂದು ಚಂಪುವಿನ ಸ್ಥಿತಿ ನೋಡಿ, ವಿಚಾರ ಮಾಡುತ್ತಾರೆ- ವಧುವಿಗೆ ನೆಟ್ಟಗಾಗುವದು ಪೂರ್ಣ ಈಶ್ವರನ ಆಧೀನವಿರುತ್ತದೆ. ಕೆಲವರು - “ವಧು ನೆಟ್ಟಗಾಗುವ  ದಾರಿ ನೋಡಿ ಇಲ್ಲೆ  ಇರೋಣ' ಎಂದು, ಅನ್ಯರು - “ಈಗ ಊರಿಗೆ ಹೋಗಿ ಮುಂದೆ ಎಂದಾದರೂ ಲಗ್ನ ನೋಡಿಕೊಂಡು ಬರೋಣ' ಎಂದು ಅನ್ನಲಾರಂಭಿಸಿದರು. ಈ ಮಾತುಗಳನ್ನು ಕೇಳಿ, ನಾರಾಯಣನು  ಬಹು ಖಿನ್ನನಾಗಿ - "ನೀವೆಲ್ಲರೂ ಒಂದು ದಿನ ಸ್ವಸ್ಥರಾಗಿರ್ರಿ, ಆಮೇಲೆ ಈಶ್ವರನು ಮಾಡತಕ್ಕದ್ದನ್ನು ಮಾಡಲಿ,” ಎಂದು ನುಡಿದನು. ವರನಾದರೂ ತನ್ನ ಮಿತ್ರನನ್ನು ಕುರಿತು - "ನಾಳೆ  ಇವಳ ಕೂಡ ಲಗ್ನ ಆಯಿತೆಂದರೆ, ಮುಂದೆ  ಈಕೆಯ ಕಣ್ಣು ಹೋದರೆ, ಏನು ಮಾಡೋಣ, ನೀನೇ ಹೇಳು. ರೂಪವು ವಿರೂಪವಾಗುವದೂ ಸಂಭವವದೆ, ದುಷ್ಟ ಕಾಲವೂ ಬಂದಿರಬಹದು. ಹಾಗಾದರೆ ಏನು ಮಾಡುವುದು ? ನನಗೆ ಈ ಲಗ್ನ ಮಾಡಿಕೊಳ್ಳುವು ಮನಸ್ಸಿಲ್ಲ”, ಎಂದು ಅನ್ನುತ್ತಿದ್ದನು. ಬೀಗರೆಲ್ಲರೂ ತಮ್ಮೊಳಗೆ- “ಲಗ್ನಕ್ಕೆ ಶಕುನ ಒಳ್ಳೆಯದು ಕಾಣಿಸುವದಿಲ್ಲ. ಇಷ್ಟಿದ್ದೂ, ಲಗ್ನ ಮಾಡಿದರೆ ಏನು ಗತಿಯಾದೀತು ತಿಳಿಯದು,” ಎಂದನ್ನುತ್ತಿದ್ದರು. ನಾರಾಯಣನು ಬಹು ಚಿಂತಾಕ್ರಾಂತನಾದನು. ಅಂತರಾಯ ಬಂದರೂ ಸದ್ಗುರುವು ತನ್ನ ಕಾರ್ಯವನ್ನು ತಾನೇ ನಡಿಸುವೆನೆಂದು ಸಿದ್ದರು ಅಂದ ವಚನವು,  ಆತನಿಗೆ ಈಗ ನೆನಪಿಗೆ ಬಂತು. ಅನಂತರ ಸದ್ಗುರುರಾಯನನ್ನು ಮನೆಗೆ ಕರೆದುಕೊಂಡು ಬರಬೇಕೆಂದು ನಿಶ್ಚಯಿಸಿದನು. ಯಾಕೆಂದರೆ ಅವರು ಬಂದ ಕೂಡಲೆ ದರ್ಶನಮಾತ್ರದಿಂದ ಬೀಗರ ಸಂಶಯಗಳೆಲ್ಲಾ ನಿರಸನವಾಗುವವು ಎಂದು ಆತನು ತಿಳಿದಿದ್ದನು, ತತ್ಕಾಲ ಒಂದು ಅಶ್ವರಥವನ್ನು ತೆಗೆದುಕೊಂಡು ನಾರಾಯಣನು ಸಿದ್ದಾಶ್ರಮಕ್ಕೆ ಬಂದು ಸಿದ್ಧಾರೂಢರ  ಚರಣಗಳನ್ನು ಹಿಡಿದು, - “ಹೇ ಸದ್ಗುರು ಸಿದ್ಧನಾಥನೇ, ಈಗ ದುಸ್ತರವಾದ ಸಂಕಟವು ಬಂದಿರುವದು; ಏನು ಮಾಡಬೇಕೆಂದು ತಿಳಿಯದೆ ಬಹಳ ಚಿಂತ್ತೆಯು ಉಂಟಾಗಿದೆ. ನಿನ್ನ ಕೃಪೆಯಿಂದ ಚಂಪುವಿನ ಜ್ವರವು ಹೋಯಿತು. ಆದರೆ ಆಕೆಗೆ  ಮೈಲಿ ಬಂದಿರುವುದರಿಂದ ಬೀಗರ ಭಾವವು ತಿರುಗಿರುತ್ತದೆ. ಈ ಸಮಯದಲ್ಲಿ ಏನು ಮಾಡಲಿ ? ನಿಬ್ಬಣದವರು  ಈಗ ತಿರುಗಿ ಹೋದರೆಂದರೆ, ಪುನಃ ಬರುವರೋ ಇಲ್ಲವೋ ತಿಳಿಯದು. ಲಗ್ನವಾಗದೆ ಅವರು ತಿರುಗಿ ಹೋದರೆ ಕೆನ್ನೆಗೆ ಎರಡನೇ ವರ ಸಿಗುವದಿಲ್ಲ. ಆದ್ದರಿಂದ ಕೃಪಾಳುವಾದ ಸದ್ಗುರುನಾಥನೇ, ಈಗ ನಮ್ಮ ಗೃಹಕ್ಕೆ ಬರಬೇಕು. ಅವರೆಲ್ಲರ ಸಮಕ್ಷಮ ನಿಮ್ಮನ್ನು ಪೂಜಿಸಿದ್ದಾದರೆ  ಅವರ ಮನಸ್ಸಿನ ಶಂಕೆಯು ಪೂರ್ಣವಾಗಿ ನಿರಸನವಾಗುವದು, ಎಂಬುದು ನನ್ನ ನಿರ್ಧಾರವಿರುವದು. ಅದಕ್ಕೋಸ್ಕರ ನೀವು ಕೃಪೆ ಮಾಡಿ, ಅಲ್ಲಿ ತನಕ ಬಂದು ಪೂಜಾ ಸ್ವಿಕರಿಸತಕ್ಕದ್ದು' ಎಂದು ಪ್ರಾರ್ಥಿಸಿದ್ದನ್ನು ಕೇಳಿ ಸಿದ್ಧರು ತುಷ್ಟರಾಗಿ- “ಹಾಗಾದರೆ ನಿನ್ನ ಗೃಹಕ್ಕೆ ಹೋಗೋಣ' ಎಂದು ರಥವನ್ನೇರಿ,  ಮನೆಗೆ ಬರಲು ಎಲ್ಲರೂ ಎದುರಾಗಿ ಬಂದು ನಮಸ್ಕರಿಸುವವರಾದರು. ಮಂಟಪದೊಳಗೆ ದಿವ್ಯ ಸಿಂಹಾಸನವನ್ನು ಹಾಕಿ ಅದರಲ್ಲಿ ಸಿದ್ದಾರೂಢರನ್ನು ಕುಳ್ಳಿರಿಸಿ, ಸರ್ವರೂ ಕೂಡಿ

ಷೋಡಶೋಪಚಾರಗಳಿಂದ ಪೂಜಿಸುವಂಥವರಾದರು. ಬೀಗರೆಲ್ಲಾ ಬಂದು ಸಿದ್ದರ ಚರಣಗಳಿಗೆ ಬಿದ್ದು, ವರನನ್ನು ಸಹಾ ಕರೆದುಕೊಂಡು ಬಂದು ಸದ್ಗುರುಗಳ ಪಾದಕ್ಕೆ ಹಾಕಿದರು. ಶ್ರೀ ಸಿದ್ಧಾರೂಢರ ದಿವ್ಯಮೂರ್ತಿಯನ್ನು ಕಂಡ ಕೂಡಲೇ ಅವರ ಮನಸ್ಸಿನ ಭ್ರಾಂತಿ ಎಲ್ಲಾ ಓಡಿಹೋಯಿತು. ಹ್ಯಾಗೆ ಸೂರ್ಯೋದಯವಾದ ಕೂಡಲೇ ಕತ್ತಲು ಅಡವೀ ಪಾಲಾಗುವದೋ, ಅಥವಾ ಹೃದಯದಲ್ಲಿ ಆತ್ಮರಾಜನು ಪ್ರಗಟನಾಗುತ್ತಲೇ ದುಷ್ಪಗುಣಗಳು ಸ್ಥಾನಭ್ರಷ್ಟವಾಗುವವೋ, ಹಾಗೆಯೇ ಸದ್ಗುರುನಾಥನ ದರ್ಶನ ಮಾತ್ರದಿಂದ ಹೃದಯದೊಳಗಿನ ಸಂಶಯಗಳೆಲ್ಲ ನಷ್ಟವಾಗಿ ಆತನ ವಚನದಲ್ಲಿ ಪ್ರೇಮ ಒಂದೇ ಉಳಿಯಿತು. ಆಗ ಸದ್ಗುರುಗಳು - “ನಾರಾಯಣನೇ, ಹೇಳುತ್ತೇನೆ ಕೇಳು. ಚಂಪುವಿಗೆ ನೆಟ್ಟಗಾಗುವದು. ವಧೂವರರಿಗೆ ಲಗ್ನ ಮಾಡಿ, ನಾಮ ಚಿಂತಿಸುತ್ತ ಅಕ್ಷತೆಗಳನ್ನು ಹಾಕು,” ಎಂದು ನುಡಿದು, ಸದ್ಗುರುಗಳು, ಮಂತ್ರಾಕ್ಷತೆಗಳನ್ನು ಕೈಯಲ್ಲಿ ತೆಗೆದುಕೊಂಡು ಸತಃ ವಧೂವರರ ಮೇಲೆ ಅವುಗಳನ್ನು ಚೆಲ್ಲಿದರು. ಎಲ್ಲರಿಗೂ ಆನಂದವಾಯಿತು. ಆ ಬಳಿಕ ನಾರಾಯಣನು ಸದ್ಗುರುಗಳಿಗೆ ಭೋಜನವನ್ನು ಮಾಡಿಸಿ, ಸಿದ್ಧಾಶ್ರಮಕ್ಕೆ ಕಳುಹಿಸಿದನು.


ಇತ್ತ  ಸರ್ವಬೀಗರ ಮುಖಗಳು ಪ್ರಸನ್ನವಾದವು. ಎಲ್ಲರ  ಸಂಶಯವೃತ್ತಿಯು ನಾಶವಾಯಿತು. ಈಗ ವರನು ತನ್ನ ಜನರಿಗೆ ಅನ್ನುತ್ತಾನೆ - 'ನಾವು ಲಗ್ನದ್ದೇಶೆಯಿಂದ ಹುಬ್ಬಳ್ಳಿಗೆ  ಬಂದೆವು. ಈಗ ಲಗ್ನವಾಗದೆ ಹೋಗಿ ಬಿಟ್ಟರೆ, ನಮಗೆ ಇದು ಬಹಳ ಹಾಸ್ಯಾಸ್ಪದವಾಗುವದು. ಬಂದಕಾರ್ಯವು ನೆರವೇರದೆ  ತಿರುಗಿ ಊರಿಗೆ ಹೋದೆನೆಂದರೆ, ನನಗೆಲ್ಲರೂ ನಗುವರು. ಅದರಿಂದ ನಾನು ಲಗ್ನವಾಗದೆ ತಿರುಗಿ ಹೋಗುವುದಿಲ್ಲ. ಕೆನ್ನೆಯ ಶರೀರದಲ್ಲಿ ಏನಾದರೂ ವ್ಯಂಗ ಸಂಭವಿಸಿದರೂ

ಚಿಂತೆಯಿಲ್ಲ. ನಾನು ಇವಳನ್ನೇ ಲಗ್ನ ಮಾಡಿಕೊಳ್ಳುವೆನೆಂಬ ನನ್ನ ನಿರ್ಧಾರವಿರುತ್ತದೆ. ಇದಲ್ಲದೆ ಕನೈಯಾದರೂ ನಿಶ್ಚಯವಾಗಿ

ನೆಟ್ಟಗಾಗುವಳೆಂದು ಮಹಾತ್ಮರು ವರವನ್ನು ಕೊಟ್ಟಿರುತ್ತಾರೆ. ಮತ್ತು ಅವರೆ ಈಗ ಲಗ್ನವನ್ನು ಮಾಡಿರುತ್ತಾರೆ. ಅವರ ವಚನದ  ಮೇಲೆ ನನಗೆ ಪೂರ್ಣವಿಶ್ವಾಸವಿರುತ್ತದೆ." ಎಂದು ಹೇಳುವುದು ಕೇಳಿ, ವರ ಹಿರಿಯರಾದರೂ ಲಗ್ನ ಕಾರ್ಯ

ನಡಿಸುವದಕ್ಕಾಗಿ ತಮ್ಮ ಅನುಮೋದವನ್ನು ಕೊಟ್ಟು - “ಸ್ವಲ್ಪ ನೆಟ್ಟಗಾಯಿತೆಂದರೆ ವಧೂವರರಿಗೆ ವಿವಾಹವನ್ನು ಮಾಡೋಣ''

ಅಂದರು. ಅಂತರ್ಯಾಮಿಯಾದ ಸದ್ಗುರುವು ಸರ್ವತ್ರ ಹೃದಯಧಾಮದಲ್ಲಿ ಇದ್ದು, ಜೀವಿಗಳಿಗೆ ಕರ್ಮಗಳಲ್ಲಿ ಪ್ರೇರಿಸುತ್ತಾನೆ. ಯಾರಿಗೂ ಸ್ವತಂತ್ರತೆ ಇಲ್ಲ. ಇತ್ತ ಚಂಪುವಿಗೆ ಬಂದು ನೋಡಿದರೆ, ಅವಳು ಎದ್ದು ನಿಂತಿರುವಳು. ಕೂಡಲೇ - 'ಈಗಲೇ ಲಗ್ನ ಮಾಡುವೆವು' ಎಂದು ಎಲ್ಲರೂ ಅಂಧರು. ಲಗ್ನ ಘಳಿಗೆ ಸಮೀಪ ಬಂತು. ವಧುವರರನ್ನು ಮಂಟಪದೊಳಗೆ

ಕರೆದುಕೊಂಡು ಬಂದರು . ಸರ್ವರಿಗೂ ಆನಂದದಿಂದ ನಾಮಘೋಷವನ್ನು ಮಾಡುತ್ತ, ವಧೂವರರ ಮೇಲೆ ಅಕ್ಷತೆ ಹಾಕಿದರು. ನಾಲ್ಕು ದಿವಸಗಳ ಪರ್ಯಂತ ಈ ವಿವಾಹ ಸಮಾರಂಭವು  ನಡೆಯಿತು. ತರುವಾಯ ನಾರಾಯಣನು  ನವದಂಪತಿಗಳನ್ನು ಕರೆದುಕೊಂಡು ಗುರುದರ್ಶನಕ್ಕೆ ಬಂದು ಅವರನ್ನು ಸಿದ್ಧಾರೂಢರ  ಚರಣಕ್ಕೆ ಹಾಕುವಂಥವನಾದನು. ಆಗ ಸದ್ಗುರುಗಳನ್ನು

ಕುರಿತು ನಾರಾಯಣನು - 'ಹೇ ಸದ್ಗುರುನಾಥನೇ, ಪರಮಾತ್ಮನು  ಭಯಕೃದ್ಭಯನಾಶನನು, ಎಂಬ ವಚನವನ್ನು ಸತ್ಯಮಾಡಿದಿ. ಮೊದಲು ನಮಗೆ ಸಂಕಷ್ಟವನ್ನು  ತಂದು ಅದರೊಳಗಿಂದ ರಕ್ಷಿಸಿದಿ,” ಎಂದು ಪ್ರಾರ್ಥಿಸಿಧನು. ಅನಂತರ ಸಿದ್ದರಾಯರು ದಂಪತಿಗಳಿಗೆ ಆಶೀರ್ವದಿಸಿದರು. ಸರ್ವರಿಗೂ ನಮಸ್ಕಾರ ಮಾಡಿದ ನಂತರ ಸ್ವಸ್ಥಾನಕ್ಕೆ ಹೋಗುವಂಥವರಾದರು. ಸದ್ಗುರುವಿನ ಉದ್ದಾರ ಕಾರ್ಯವು ಜನರಿಗೆ ಸಂಕಟ ಪ್ರಾಪ್ತವಾದಾಗ ನಡಿಯುವದು. ದುಃಖವಿಲ್ಲದಿದ್ದರೆ ಜೀವಿಗಳು ನಿರ್ಭಯರಾಗಿ ಸದ್ಗುರುನಾಥನನ್ನು ಮರೆತು ಸಂಸಾರದಲ್ಲಿರುವರು. ಇದರಿಂದ ಸರ್ವಹಾನಿಯು ಅವರಿಗೆ ಪ್ರಾಪ್ತವಾಗುವದು, ಎಂದು ಆ ದಯಾಳುವಾದವನು ತಿಳಿದು, ಭಯವನ್ನು ಹಾಕಿ ಅವರನ್ನು ಎಚ್ಚರಪಡಿಸುತ್ತಾನೇ. ಆ ಕೂಡಲೇ  ಅವರು ಸದ್ಗುರುವಿನ ಬಳಿಗೆ ಓಡಿ ಬರುವರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಅಕ್ಕಲಕೋಟ ಶರಣಪ್ಪನು ಉಣಕಲ್ಲಿನಿಂದ ಹುಬ್ಬಳ್ಳಿಗೆ ಅನ್ನವನ್ನು ತರಿಸಿ ಭೋಜನ ಮಾಡಿಸಿದನು. ಮತ್ತು ಉಣಕಲ್ಲಿನಲ್ಲಿ ಲಕ್ಷ ಜನರಿಗೆ ಉಣಿಸಿ ಸದ್ಗುರು ಪೂಜಾ ಮಾಡಿಸಿದ ಕಥೆ .

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ