ವಿರಕ್ತನಾದ ನಿರ್ವಾಣಪ್ಪನಿಗೆ ಸದ್ಗುರುಗಳು ವಾಸನಾನಾಶ ಮಾಡುವಂಥಾ ಆತ್ಮಜ್ಞಾನವನ್ನು ಉಪದೇಶಿಸಿದ ಕಥೆ,
✡️ ವಿರಕ್ತನಾದ ನಿರ್ವಾಣಪ್ಪನು ಸದ್ಗುರುಗಳಿಗೆ ವಾಸನಾಕ್ಷಯವನ್ನು ವಿಚಾರಿಸಿದಾಗ, ವಾಸನಾ ನಾಶ ಮಾಡುವಂಥಾ ಆತ್ಮಜ್ಞಾನವನ್ನು ಅವರು ಉಪದೇಶಿಸಿದ ಕಥೆ,
ಕರ್ನಾಟಕ ದೇಶದಲ್ಲಿರುವ ಉಗರಗೋಳ ಎಂಬ ಗ್ರಾಮದಲ್ಲಿ, ನಿರ್ವಾಣಪ್ಪ ಎಂಬ ನಾಮವುಳ್ಳ ಒಬ್ಬ ಸತ್ವಶೀಲ ವಿರಕ್ತನಿದ್ದನು. ಆತನು ಚಿಕ್ಕಂದಿನಿಂದ ವೈರಾಗ್ಯಯುಕ್ತನಾಗಿದ್ದು, ಬಹುಕಾಲ ಯೋಗಾಭ್ಯಾಸ ಮಾಡಿದನು. ಆದರೆ ಮನಸ್ಸಿಗೆ ಸಮಾಧಾನ ಪ್ರಾಪ್ತಿಯಾಗುತ್ತದೆ, ಗುರುಕೃಪೆ ವಿನಹಾ ಯಾವ ಸಾಧನೆಯೂ ವ್ಯರ್ಥವೆಂದು ಆತನು ತಿಳಿಯುವವನಾದನು. ಹದಿನಾರು ವರ್ಷ ವಯಸ್ಸಿನವನಿದ್ದಾಗ, ಸಿದ್ಧಾರೂಢ ಸದ್ಗುರುಗಳ ಕೀರ್ತಿಯನ್ನು ಕೇಳಿ, ಹುಬ್ಬಳ್ಳಿಗೆ ಬಂದು ಅವರಿಗೆ ಭೆಟ್ಟಿಯಾದನು. ಆತನು ಬಂದು ಸದ್ಗುರು ಚರಣಗಳಿಗೆ ನಮಸ್ಕರಿಸಿ, ಅವರ ಎದುರಿಗೆ ಕೈಜೋಡಿಸಿಕೊಂಡು ನಿಂತನು, ಅದರೆ ಏನೇನೂ ಮಾತಾಡಲಾಗಲಿಲ್ಲ. ಸದ್ಗುರುಗಳ ಆತನ ಅತ್ಯಂತ ನಿರಭಿಮಾನ ಸ್ಥಿತಿಯನ್ನು ಇತರ ಲಕ್ಷಣಗಳನ್ನು ನೋಡಿ, ಅಧಿಕಾರಿ ಇದ್ದಾನೆಂದು ತಿಳಿದು, ಆತನಿಗೆ 'ಹೇ ಸದ್ಭಕ್ತನೇ, ಏನು ಕೆಲಸಕ್ಕೋಸ್ಕರ ಇಲ್ಲಿಗೆ ಬಂದಿರುವಿ, ಎಂದು ನನಗೆ ಹೇಳು,'' ಎಂದು ಕೇಳಲು ನಿರ್ವಾಣಿಯು - 'ಹೇ ದಯಾನಿಧಿ, ಸದ್ಗುರುನಾಥನೇ, ನೀನು ಸರ್ವಜ್ಞನಿದ್ದು ನನ್ನ ವೃತ್ತಾಂತವನ್ನೆಲ್ಲಾ ತಿಳಿದಿರುವಿ. ನನ್ನಿಂದ ಸಂಸಾರ ವ್ಯಥೆಯು ಸಹಿಸೋಣಾಗುವದಿಲ್ಲ. ವ್ಯರ್ಥವಾಗಿ ಯಾತಕ್ಕೆ ಅದನ್ನು ಅನುಭವಿಸಬೇಕು ! ಸದ್ಗುರು ಸಮ್ಮುಖದಲ್ಲಿ ಬಂದ ಕೂಡಲೇ ಸರ್ವ ದುಃಖಗಳು ನಾಶವಾದವು. ಈಗ ಪುನಃ
ಸಂಸಾರ ಜಾಲದಲ್ಲಿ ಸಿಲುಕಿ ಮೃತ್ಯು ಮುಖದಲ್ಲಿ ಯಾತಕ್ಕೆ ಬೀಳಬೇಕು ! ಹೀಗೆ ನನ್ನ ಮನಸ್ಸಿಗೆ ತೋರುತ್ತದೆ. ಸಮರ್ಥನಾಗಿರುವ ನೀನು ಪೂರ್ಣ ಅರಿತಿರುವಿ,” ಎಂದು ಪ್ರಾರ್ಥಿಸಿದನು. ಇದನ್ನು ಕೇಳಿ ಸದ್ಗುರುಗಳು, - ''ನಿನ್ನ ಇಚ್ಛೆ ಇದ್ದರೆ, ನೀನು ಇಲ್ಲೇ ನಮ್ಮ ಹತ್ತಿರ ಇರು. ನಿತ್ಯ ವೇದಾಂತ ಶಾಸ್ತ್ರ ಶ್ರವಣ ಮಾಡುವುದರಿಂದ ಮನಸ್ಸಿನ ತಾಪವೆಲ್ಲ ನಿಃಶೇಷವಾಗಿ ಹೋಗುವದು,” ಎಂದು ಹೇಳಿದ್ದು ಕೇಳಿ, ನಿರ್ವಾಣಪ್ಪನಿಗೆ ಸುಖವಾಗಿ ಮನಸ್ಸಿನಲ್ಲಿ, - “ಸದ್ಗುರುನಾಥನು ನನ್ನ ಭಾವವನ್ನು ತಿಳಿದುಕೊಂಡು ಅಭಿನಯವನ್ನು ಕೊಟ್ಟನು. ಈಗ ಮನಸ್ಸಿನ ಭಯವೆಲ್ಲಾ ಪರಿಹಾರವಾಯಿತು,'' ಅಂದುಕೊಂಡನು. ಅಂದಿನಿಂದ
ಅವನು ಆನಂದದಿಂದ ಮಠದಲ್ಲಿರಲಿಕ್ಕೆ ಆರಂಭಿಸಿದನು. ನಿತ್ಯ ಗುರುಮುಖದಿಂದ ವೇದಾಂತ ಶ್ರಾವಣ ಮಾಡುತ್ತಿದ್ದುದರಿಂದ ಪೂರ್ವದಲ್ಲಿ ಪ್ರದೀಪ್ತವಾಗಿದ್ದ ಆತನ ವೃತ್ತಿಯು ಈಗ ಶಾಂತವಾಯಿತು. ಶ್ರವಣವಾದ ಮೇಲೆ ಅನುದಿನ ಏಕಾಂತಸ್ಥಾನವನ್ನು ಸೇವಿಸಿ, ಅಲ್ಲಿ ಕುಳಿತುಕೊಂಡು ಗುರುವಾಕ್ಯಗಳನ್ನು ಮನನ ಮಾಡುತ್ತಿರುತ್ತಿದ್ದನು. ನಿಜಾನಂದದಲ್ಲಿ ತಲ್ಲೀನನಾಗಿ ಎರಡನೇಯವರ ಕೂಡ ಮಾತಾಡುತ್ತಿದ್ದಿಲ್ಲ. ಸದ್ಗುರು ಸೇವಾ ಅತ್ಯಾದರದಿಂದ ಮಾಡುತ್ತಿರುವನು. ಸರ್ವ ಭೂತ ಮಾತ್ರಗಳ ಮೇಲೆ ಅತ್ಯಂತ ದಯಾಭರಿತನಾಗಿದ್ದು, ಚೇತನ ಮತ್ತು ಅಚೇತನ ವಸ್ತುಗಳನ್ನು ಹಿಂಸಿಸುತ್ತಿದ್ದಿಲ್ಲ. ಆಂತರ್ಯದಲ್ಲಿ ಅವನು ಇಷ್ಟು ಕೃಪಾಳುವಾಗಿದ್ದನು.
ಒಂದಾನೊಂದು ದಿವಸ, ಸುಮತಿಯಾದ ನಿರ್ವಾಣಪ್ಪನು ಸದ್ಗುರು ಸಮೀಪ ಬಂದು, ನಮಸ್ಕರಿಸಿ, ಅತ್ಯಂತ ಭಯಭಕ್ತಿಯುಕ್ತನಾಗಿ, ದೈನ್ಯಭಾವದಿಂದ ಅವರನ್ನು ಕುರಿತು ವಿಚಾರಿಸುತ್ತಾನೆ - ''ಹೇ ದೀನದಯಾಳುವಾದ ಸದ್ಗುರುನಾಥನೇ, ನಿನ್ನ ಸಂಗತಿಯಿಂದ ಬಹು ಲಾಭವಾಯಿತು. ಸಂಸಾರ ತಪವು ಪೂರ್ಣ ನಾಶವಾಯಿತು. ಆದರೆ ಒಂದು ಸಂಶಯ ಉಳಿದಿರುವದು. ನೀನು ಕೃಪೆಯಿಂದ ಆಜ್ಞಾಪಿಸಿದಿಯೆಂದರೆ, ನಾನು ಚರಣಕ್ಕೆ ನಿವೇದಿಸುವೆನು,” ಎಂದು ಹೇಳಿದ್ದು ಕೇಳಿ ಆ ಭಕ್ತ ಕೈವಾರಿಯು ನಿರ್ವಾಣಪ್ಪನನ್ನು ಕುರಿತು - ''ಬಾಲಕನೇ, ನಿನ್ನ ಮನಸ್ಸಿನ ಸಂಶಯವನ್ನು ಈಗಲೇ ನನಗೆ ಹೇಳು. ನನ್ನಿಂದ ನಿರಸನವಾಗುವಂತಿದ್ದರೆ, ಉಪಾಯವನ್ನು ಹೇಳುವೆನು,'' ಎಂದು ಅಂದನು. ಆಗ ಮನಸ್ಸಿನಲ್ಲಿ ಪೂರ್ಣ ಧೈರ್ಯಯುಕ್ತನಾಗಿ ದೀನಭಾವದಿಂದ ನಿರ್ವಾಣಿಯು ಅನ್ನುತ್ತಾನೆ - “ಹೇ ಸದ್ಗುರು ದೇವರೇ, ಚಿತ್ತಕ್ಕೆ ಗುಣಗಳೊಳಗಿಂದ ನಿವೃತ್ತಿ ಹ್ಯಾಗಾಗುವದು ? ವಿಷಯ ಸೇವನೆಯನ್ನು ಸಂಪೂರ್ಣ ಬಿಟ್ಟರೂ, ಸ್ಥೂಲ ದೇಹಾಭಿಮಾನವನ್ನು ತ್ಯಾಗ ಮಾಡಿದರೂ, ಆಂತರ್ಯದಲ್ಲಿ ವಾಸನೆಗಳಿರುವವು, ಮತ್ತು ಅವುಗಳಿಂದ ಮನಸ್ಸು ವಿಕಾರ ಹೊಂದುವದು, ವಿಷಯ ದರ್ಶನ ಮಾತ್ರದಿಂದ ತ್ರಿಗುಣಗಳು ಈ ನಾನಾ ವಿಕಾರಗಳು ಉತ್ಪನ್ನವಾಗಿ, ಅನಂತರ ವಿಷಯಗಳು ಸಮಕ್ಷಮದಲ್ಲಿ ಇಲ್ಲದಿದ್ದರೂ, ಒಳಗೆ ನಿರಂತರ ಚುಚ್ಚುತ್ತ ಇರುವವು. ಇದರಿಂದ ವಿಚಾರವು ಪ್ರತಿಬಂಧಿಸಲ್ಪಟ್ಟು ಮನಸ್ಸಿನಲ್ಲಿ ಪೂರ್ಣವಾಗಿ ಉಳಿಯುವುದೇ ಇಲ್ಲ. ಮತ್ತು ಹೀಗೆ ವಿಕಾರ ಹೊಂದುವದರಿಂದಲೇ ಮನಸ್ಸು ಚಂಚಲವಾಗಿ ಕ್ಷಣ ಕ್ಷಣಕ್ಕೆ ದುಃಖ ಕೊಡುತ್ತಾ ಇರುವದು. ಚಿತ್ತವು ಗುಣಗಳಲ್ಲಿ ಪ್ರವೇಶಿಸಬಾರದು, ಅಖಂಡ ನಿರ್ಗುಣ ಸ್ವರೂಪದಲ್ಲಿಯೇ ಇರಬೇಕು, ಇದಕ್ಕೋಸ್ಕರ ಏನು ಮಾಡಬೇಕೆಂದು ಕೃಪೆಯಿಂದ ನನಗೆ ನಿರೂಪಿಸತಕ್ಕದ್ದೆಂದು ಪ್ರಾರ್ಥಿಸುತ್ತೇನೆ.''
ಈ ಪ್ರಕಾರ ಆಡಿದ ದಿನ ವಚನವನ್ನು ಕೇಳಿ, ಸಿದ್ಧ ದಯಾಘನನು ಮನಸ್ಸಿನಲ್ಲಿ ಸಂತೋಷಪಟ್ಟು ನುಡಿದದ್ದೇನೆಂದರೆ - 'ಹೇ ನಿರ್ವಾಣೀ, ನೀನು ಈ ಸಂದರ್ಭದಲ್ಲಿ ಪೂರ್ಣ ಅಧಿಕಾರಿ ಇರುವಿ. ನಿನ್ನ ಅಪರ ವಿರಕ್ತಿಯು ಸ್ಥಿರವಾಗುವದು. ಈಗ ಪರ ವೈರಾಗ್ಯವನ್ನು ತಿಳಿಯತಕ್ಕದ್ದು. ಇದನ್ನು ಸಾಧಿಸಿದರೆ, ಸತ್ಯವಾಗಿ ನಿರ್ವಿಕಾರ ರೂಪನಾಗಿರುವ ಆತ್ಮನನ್ನು ನೀನು ತಿಳಿಯುವಿ. “ನಾನು ನನ್ನದು' ಎಂಬ ಭಾವಗಳು ಆತ್ಮನಿಗೆ ಬಂಧಕಗಳು. ಇವುಗಳಿಲ್ಲದಿದ್ದರೆ ಆತ್ಮನು ನಿತ್ಯಮುಕ್ತನೇ ಇರುವನು. ತ್ರಿಗುಣಗಳು ಬಂಧಮೋಕ್ಷಗಳಿಗೆ ಕಾರಣಗಳು. ಅವು ಪ್ರಕೃತಿಯಿಂದ ಉತ್ಪನ್ನವಾಗುತ್ತದೆ. ನಾನು ದೇಹವೆಂದು ತಿಳಿಯುವದೇ ಆತ್ಮನ ಸ್ವರೂಪಹನನವು. ಇದರಿಂದ ಜೀವತ್ವವು ಪ್ರಾಪ್ತವಾಗಿ ಆತನು ಸ್ವರೂಪವನ್ನು ತಿಳಿಯಲಾರನು. ಜೀವನು ಇಂದ್ರಿಯ ಗೊಂದಲದೊಳಗೆ ಬಿದ್ದು, ಪಂಚಭೂತಗಳ ಆಟದಲ್ಲಿ ಸಿಕ್ಕಿ ಭ್ರಾಂತನಾಗಿರುವನು. ಅನೇಕ ವಿಷಯ ಸಮ್ಮೇಳನದಲ್ಲಿ ಸಿಲುಕಿ ನಿರ್ಬಲನಾಗಿ
ಹೋಗಿರುವನು. ವಿಷಯ ಸೇವನೆಯಿಂದ ಆತನಿಗೆ ರಾಗದ್ವೇಷ ಗಳು ದೃಢವಾಗಿ ಕಟ್ಟುವವು. ಭೋಗದಿಂದ ವಾಸನೆಗಳು ವಿಶೇಷವಾಗಿ ಬೆಳೆದು, ಎಷ್ಟು ಯತ್ನ ಮಾಡಿದರೂ ಬಿಡುವುದಿಲ್ಲ. ವಿಷಯ ಭೋಗಗಳ ದೆಶೆಯಿಂದ ಅನೇಕ ಜನ್ಮಗಳ ಪರ್ಯಂತರ ದುಃಖ ಅನುಭವಿಸುತ್ತಿದ್ದರೂ ಅವನ್ನು ಬಿಡಲಾರದೆ, ಪುನಃ ಪುನಃ ಯೋನಿಗಳಲ್ಲಿ ತಿರುಗುತ್ತಿರುವನು.
ಹೀಗಿರುತ್ತಾ ಎಂದಾದರೂ ಒಂದು ಕಾಲದಲ್ಲಿ ದೈವಯೋಗದಿಂದ ಆ ಜೀವನಿಗೆ ಸತ್ಸಂಗ ಲಭಿಸುವುದು. ವಿಷಯ ಸುಖಕ್ಕೆ ಅನ್ಯವಾದ ಮತ್ತು ಅದಕ್ಕೂ ವಿಶೇಷವಾದ ಸುಖವಿರುವದೆಂದು, ಸತ್ಸಂಗದಿಂದ ಆತನು ತಿಳಿಯುತ್ತಾನೆ. ಆಗ ಆ ಅಧಿಕ ಸುಖದ ಸಲುವಾಗಿ ಕ್ಷಣಿಕವಾದ ವಿಷಯ ಸುಖಗಳನ್ನು ತ್ಯಜಿಸುವುದು. ದೀರ್ಘಕಾಲದ ಅನುಭವದಿಂದ ವಿಷಯಗಳೆಲ್ಲಾ ದುಃಖಮಯವೆಂದು ನಿರ್ಧರಿಸಿದ್ದರೂ, ಆತನಿಗೆ ಆತ್ಮಸುಖದ ಅನುಭವವು ಇನ್ನೂ ಆಗಿರುವುದಿಲ್ಲ. ಅನೇಕ ಜನ್ಮಗಳ ದುಃಖದ ಸ್ಮರಣೆಯಿಂದ ಆತನು ಸರ್ವ ವಿಷಯಗಳನ್ನು ಬಿಟ್ಟಿರುವನು. ಇದರಿಂದ ಬಾಹ್ಯ ವಿಷಯಗಳಷ್ಟೇ ಅಭಾವವಾಗಿ ಜೀವನು ಸುಖ ಹೊಂದುವನು.
ನಿರ್ವಾಣಿ ಶಿಷ್ಯನೇ ಕೇಳು, ಜ್ಞಾನಪಥದಲ್ಲಿ ಇಲ್ಲಿ ತನಕ ನೀನು ಬಂದಿರುವಿ. ಎಲ್ಲ ಮೋಹ ಮಮತೆಯನ್ನು ಬಿಟ್ಟು, ವಿಷಯ ವಾರ್ತೆಯೇ ಇಲ್ಲದಂತೆ ನೀನು ಅವನ್ನು ತ್ಯಜಿಸಿರುವಿ. ಆದರ ಭೋಗ ಸಂಸ್ಕಾರಗಳು ಉಳಿದಿರುವವು. ಇವು ಚಿತ್ತದೊಳಗಿಂದ ಬೇಗನೇ ಹೋಗುವದಿಲ್ಲ. ಅವು ಜನ್ಮಗಳ ಬೀಜವಾಗಿದ್ದು ಅವುಗಳ ಮೇಲೆ ಇತರ ಉಪಾಯ ನಡಿಯುವುದಿಲ್ಲ. ಯಾವಾಗ ಜೀವನು ಆತ್ಮ ಜ್ಞಾನವನ್ನು ಪಡಿಯುವನೋ ಆಗ ಈ ವಾಸನೆಯು ಖಂಡಿತವಾಗಿ ಹೋಗುವುದು. ಗುರು ಕೃಪೆಯಿಂದ ಈ ವಾಸನೆಯು ಪೂರ್ಣ ಪರಿಹಾರವಾದ ಮೇಲೆ ಜೀವನ ಬಂಧನವು ನಾಶವಾಗುವದು.”
ಈ ಪ್ರಕಾರ ಸದ್ಗುರು ವಚನವನ್ನು ಕೇಳಿ, ನಿರ್ವಾಣಪ್ಪನ್ನು ಬಹು ಆನಂದಪಟ್ಟು ಕೈಮುಗಿದು ಪುನಃ ವಿಚಾರಿಸುತ್ತಾನೆ - "ಹೇ ಸದ್ಗುರುನಾಥನೇ ಇಂಥಾ ಅಮೋಘವಾದ ಆತ್ಮಜ್ಞಾನವನ್ನು ಯಾವ ಸಾಧನದಿಂದ ನಾನು ಹೊಂದುವೆನು ? ಆ ಆತ್ಮ ಜ್ಞಾನದ ಸ್ವರೂಪವನ್ನು ನನಗೋಸ್ಕರ ನಿರೂಪಿಸಬೇಕೆಂದು ಪ್ರಾರ್ಥಿಸುವೆನು.” ಆಗ ಸದ್ಗುರುನಾಥರನ್ನುತ್ತಾನೆ - “ಎಲೇ ಸಚ್ಚಿಷ್ಯನೇ, ಕೇಳು. ಪರವೈರಾಗ್ಯವೆಂದು ಕರೆಯಲ್ಪಡುವಂಥಾ ಮತ್ತು ವಾಸನಾಕ್ಷಯವನ್ನು ಪ್ರಾಪ್ತ ಮಾಡಿಕೊಡುವಂತಹ ಆ
ಸಾಧನೋಪಾಯವನ್ನು ನಿನಗೆ ನಿರೂಪಿಸುವೆನು. ಮೂಲಮಾಯೆಯು ಮತ್ತು ಅದರ ಗುಣಗಳು ಕೂಡಿ ಮೃಗಜಲವತ್ ಭಾಸಮಾನವಾಗುವ ಈ ನಾಮರೂಪಾತ್ಮಕ ಜಗತ್ತು ಕಲ್ಪಿತವಾಯಿತು. ಇಲ್ಲಿ ಸತ್ಯತ್ವವು ಇಲ್ಲೇ ಇಲ್ಲ, ಆದರೆ ಇದನ್ನೆಲ್ಲ
ತಿಳಿಯುವಂಥವನಾದ ನೀನು ಸತ್ಯವಾಗಿರುವಿ. ಸರ್ವ ವಿಕಾರಗಳ ನಡುವೆ ನಿರ್ವಿಕಾರನಾಗಿ, ಶರೀರ ರಹಿತವಿರುವ ರೂಪದಿಂದ ನೀನಿರುತ್ತಿ, ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ, ಈ ಮೂರೂ ನಿನ್ನ ಅನುಭವಕ್ಕೆ ಬರುತ್ತವೆ. ಈ ಪ್ರಕಾರ ಅವಸ್ಥಾತ್ರಯಕ್ಕೆ
ಸಾಕ್ಷಿಯಾಗಿರುವವನೇ ನಿಶ್ಚಯವಾಗಿ ನೀನಿದ್ದಿ. ನಾನು, ನನ್ನದು, ಎಂಬುದು ಯಾರಿಗೆ ತೋರುವದೋ ಅವನೇ ಜಾಗ್ರದಲ್ಲಿ ವಿಶ್ವಾಭಿಮಾನಿಯು. ನಾನು ಕರ್ತಾ ಭೋಕ್ತಾ ಎಂದು ತಿಳಿಯುವವನೇ, ಸೂಕ್ಷ್ಮತ್ವದಿಂದಿದ್ದು ಸ್ವಪ್ನದಲ್ಲಿ ತೈಜಸನೆನಿಸಿಕೊಳ್ಳುವನು. ಅದು ಧೈಯ, ನಾನು ಧ್ಯಾತಾ, ಎಂದು ಸಾಧಕನಾಗಿ ಧ್ಯಾನ ಮಾಡುತ್ತಿರುವವರೇ, ಅಜ್ಞಾನ ಸುಪ್ತಿಯನ್ನು ಭೋಗಿಸುತ್ತಿರುವ ಪ್ರಾಜ್ಞ ಅಭೀಮಾನಿ ಅನ್ನಿಸಿಕೊಳ್ಳುವನು. ಈ ಪ್ರಕಾರ ವಿಶ್ವ, ತೈಜಸ, ಪ್ರಾಜ್ಞ ಈ ಮೂರೂ ರೂಪ ನೀನೇ ಇರುವಿ. ಮತ್ತು ಈ ಮೂರಕ್ಕೂ ಸಾಕ್ಷಿಯಾಗಿರುವ ತುರೀಯಘನನೂ ನೀನೇ ಇರುತ್ತಿ. ಜಾಗ್ರತ, ಸ್ವಪ್ನ ಸುಷುಪ್ತಿ ಇವುಗಳ ಕಿಂಚಿನ್ಮಾತ್ರ ಅಭಿಮಾನ ಇತ್ತೆಂದರೆ, ಅಲ್ಲಿ ಅಜ್ಞಾನವೆಂತಲೇ ತಿಳಿಯತಕ್ಕದ್ದು. ಇದು ಆತ್ಮಜ್ಞಾನವಲ್ಲ.
ಹಾಗಾದರೆ ಆತ್ಮಜ್ಞಾನದ ಲಕ್ಷಣ ಏನೆಂದು ಕೇಳಿದರೆ, ಹೇಳುತ್ತೇನೆ, ಶ್ರವಣಮಾಡು. ಹೇ ಶಿಷ್ಯ ರತ್ನನೇ, ಇದನ್ನು ತಿಳಿದಿಯೆಂದರೆ, ಸಾಧನೋಪಾಯವು ತಾನೇ ಗೋಚರವಾಗುತ್ತದೆ. ಆತ್ಮಜ್ಞಾನ ಯಾವಾತನಿಗೆ ಪ್ರಾಪ್ತಿಯಾಗಿರುವದೋ, ಅವನಿಗೆ ಹೇಗೆ ಕಾಣಿಸುತ್ತದಲ್ಲ - ಇಷ್ಟು ಹೊತ್ತು ನಾನು ಸ್ವಪ್ನದೊಳಗಿದ್ದು ಏನೋ ಒಂದು ಜಗತ್ತೆಂಬುದನ್ನು ನೋಡುತ್ತಿದ್ದೆನು. ಅದು ಹ್ಯಾಗೆ ಸತ್ಯವಾದೀತು ? ಅದೂ ಸತ್ಯವಾದಂತೆ ಅಂಥದ್ದೇನು ನನ್ನಲ್ಲಿ ಇಲ್ಲ. ನಾನೊಬ್ಬನೇ ನಿಃಸ್ಸಂಗವಾಗಿ ಇಲ್ಲಿರುತ್ತೇನೆ. ನನ್ನ ಹೊರತು ಎರಡನೇದೆಂಬುದು ಕಾಲತ್ರಯದಲ್ಲಿಯೂ ಮಿಥ್ಯಾ ಇರುವದು. ಒಂದು ವೇಳೆ ಏನಾದರೂ ನನಗೆ ಕಾಣಿಸುವದೆಂದರೆ, ಅದೂ ಸಂಪೂರ್ಣ ನಾನೇ ಆಗಿದ್ದೇನೆ. ನನಗನ್ಯವಾಗಿ ಏನೇನು ಇಲ್ಲವೆಂಬುದು ಅನಾಯಾಸದಿಂದ ನನಗೆ ತಿಳಿಯುವದು. ದ್ವೈತದ ಸ್ಮೃತಿ ಆಯಿತೆಂದರೆ, ನನ್ನಲ್ಲಿ ಅದಕ್ಕೆ ಸ್ಥಾನವೇ ಇಲ್ಲ; ಹ್ಯಾಗೆಂದರ ವಂಧ್ಯಾಪುತ್ರನು ಈ ಲೋಕದಲ್ಲಿ ಯಾರಿಗೂ ಎಂದೂ ಭಾಸಮಾನವಾಗಲಿಲ್ಲ. ಹಾಗೆಯೇ ಜಗತ್ತು ಎಂಬುದು ನನಗೆ ಎಂದೂ ತೋರಲಿಲ್ಲ. ಸ್ತ್ರೀ ಪುತ್ರಾದಿಕರಂಬವೂ, ವಸ್ತುವಿಲ್ಲದೆ ನಾಮ ಮಾತ್ರ ಕಲ್ಪಿಸಲ್ಪಟ್ಟಿವೆ. ನಾನು ಒಂದು ವೇಳೆ ಆಕಾಶದಂತಿದ್ದರೆ, ನನ್ನ ಶರೀರವು ಕಾಣಿಸುತ್ತಿದ್ದಿಲ್ಲ. ಹಾಗೆಯೇ ಇಲ್ಲದ ದೇಹಕ್ಕೆ ನಾನೆಂತ ಹೇಳುವದೆಂದರೆ ಮನಸ್ಸಿನೊಳಗೆ ನಗೆ ಬರುವುದು. ನಾನು ಏನಾದರೂ ಮಾಡಿದನೆಂದರೆ, ನನಗೆ ಸರ್ವಥಾ ಕರಣಗಳಿಲ್ಲದಿರುವದರಿಂದ ಕಾರ್ಯ ಹ್ಯಾಗಾಗಬೇಕು ? ಆ ಕಾರ್ಯವೂ ಇಲ್ಲದಿರುವಾಗ ನನಗೆ ಕರ್ತೃತ್ವವು ಹ್ಯಾಗೆ ಹತ್ತುವದು ? ನಾನು ಭೋಕ್ತಾ ಆದನೆಂದರೆ, ಉಣ್ಣಲಿಕ್ಕೆ ನನಗೆ ಮುಖವೇ ಇಲ್ಲ, ಮತ್ತು ನನ್ನ ಹೊರತು ತಿನ್ನಲಿಕ್ಕೆ ಎರಡನೇ ವಸ್ತುವೇ ಇಲ್ಲದಿರುವಾಗ, ನಾನು ಭೋಕ್ತಾ ಹ್ಯಾಗಾಗುವೆನು ? ಈ ಪ್ರಕಾರ ಎಲ್ಲಾ ಇಂದ್ರಿಯ ವ್ಯಾಪಾರವು ಸಹಜವಾಗಿ ಮಿಥ್ಯಾಚಾರವಾಗುವದು, ಸ್ವರೂಪ ಸ್ಥಿತಿಯಲ್ಲಿ ಆಗುವ ಈ ಅನುಭವ ತೆಗೆದುಕೊಂಡು ಹೊರಗೆ ಬಂದಾಗ ಈ ಜಗತ್ತು ವಿಚಿತ್ರವಾಗಿ ಭಾಸಿಸುವದು, ಅವನಿಗೆ ಹೀಗೆ ಕಾಣಿಸುತ್ತಿಲ್ಲದಲ್ಲ, ಹ್ಯಾಗೆ ಘಟರೂಪದಿಂದ ಮೃತ್ತಿಕೆಯೇ ಇರುವದೋ ಹಾಗೆಯೇ ಈ ಜಗತ್ತಿನ ರೂಪದಿಂದ ನಾನು ಇರುವೆನು. ಮತ್ತು ಸಾಕ್ಷಿ ರೂಪದಿಂದ ಉಳಿದಿರುವೆನು. ಇದೇ ಪ್ರಕಾರ ಸರ್ವತ್ರ ಭಾಸವಾಗುತ್ತದೆ.
ಇಂಥಾ ಆತ್ಮಜ್ಞಾನ ಪ್ರಾಪ್ತಿಮಾಡಿಕೊಳ್ಳಲಿಕ್ಕೆ ಯಾವ ಉಪಾಯ ಮಾಡಬೇಕು, ಎಂದು ಕೇಳಿದರೆ, ಶಿಷ್ಯರಾಯನೇ ಹೇಳುತ್ತೇನೆ ಕೇಳು. ಹಗಲೂ ರಾತ್ರಿ ನಾಮವನ್ನು ಜಪಿಸಬೇಕು. ನಾಮ ಜಪದಿಂದ ಚಿತ್ತ ಶುದ್ಧಿಯೂ ಆಗುವದು, ದೇಹಾಭಿಮಾನವೂ ಹೋಗುವುದು; ಮತ್ತು ಅಭ್ಯಾಸ ಬಲದಿಂದ ಚಿತ್ತಸ್ಥೆರ್ಯವನ್ನೂ ಏಕಾಗ್ರತೆಯನ್ನು ಮುಮುಕ್ಷುವು ಹೊಂದುತ್ತಾನೆ. ಆಗ ಅಂಥಾ ಏಕಾಗ್ರ ಚಿತ್ತದಿಂದ ಏನೇನು ನೋಡುವನೋ ಅದು ತಾನೇ ಎಂಬುದಾಗಿ ಕಾಣುವನು. ಇದೇ ಸೋಹಂಭಾವವು ಇದನ್ನು ಸರ್ವತ್ರ ಯೋಜಿಸಬೇಕು. ಯಾವ ಸೂಕ್ಷ್ಮ ವಸ್ತುಗಳು ಮನಸ್ಸಿನಲ್ಲಿ ಬರುವವೋ ಅವನ್ನು ಕೂಡಲೇ ಸೋಹಂಭಾವದಿಂದ ನೋಡಬೇಕು. ಈ ಪ್ರಕಾರ ದೃಢಾಭ್ಯಾಸವನ್ನು ಮಾಡುತ್ತಾ
ಮಾಡುತ್ತಾ ದ್ವೈತ ಭ್ರಾಂತಿಯೆಲ್ಲಾ ಹೋಗಿ ಆತ್ಮಸ್ಥಿತಿಯು ಸ್ಥಿರವಾಗುತ್ತದೆ. ದ್ಯೇಯ ವಸ್ತುವಿನ ಧ್ಯಾನ ಮಾಡುತ್ತಿರುವಾಗ ಧ್ಯಾತನು ತಾನೇ ಧ್ಯೇಯಾಕಾರವಾಗಿ ಹೋಗಿ, ವೃತ್ತಿಯು ಸ್ವರೂಪಾಕಾರವಾಗಿ, ಅದರೊಳಗೆ ಆತ್ಮನು ಅನುಭವಕ್ಕೆ ಬರುತ್ತಾನೆ. ಇಂಥಾ ಧ್ಯಾನವನ್ನು ಏಕಾಂತದಲ್ಲಿ ಮಾಡತಕ್ಕದ್ದು. ಜನರ ಮಧ್ಯದಲ್ಲಿರುವಾಗ ಅದರ ಅನುಸಂಧಾನ ಹಿಡಿದು ಸರ್ವವನ್ನು ಸೋಹಂ ಭಾವದಿಂದಲೇ ನೋಡಬೇಕು. ಒಂದು ಕ್ಷಣವಾದರೂ ಈ ಧ್ಯಾನವನ್ನು ಬಿಡಬಾರದು. ಈ ಪ್ರಕಾರ ದೃಢ ಅಭ್ಯಾಸ ನಡಿಸುತ್ತಿರುವಾಗ, ತಾನು ನಿತ್ಯ ಆತ್ಮನೇ ಎಂಬುದು ಸಹಜವಾಗಿ ಕಾಣಿಸುವದು, ತಾನು ದೇಹವೆಂಬುದು ಎಂದೆಂದಿಗೂ
ಭಾಸವಾಗುವದಿಲ್ಲ, ಹೀಗಿರುವಾಗ ಇತರ ವಸ್ತುಗಳು ಹ್ಯಾಗೆ ಸತ್ಯವಾದಾವು? ಇಂಥಾ ಈ ಅಭ್ಯಾಸವನ್ನು ಸರ್ವಾದಾ ಮಾಡುತ್ತಾ, ಸೋಹಂಭಾವವನ್ನು ಜೀವ ಪ್ರಾಣ ಮಾಡಿ ಸರ್ವತ್ರದಲ್ಲಿ ಯೋಜಿಸುವದರಿಂದ ಸರ್ವ ಅಂತರ್ವಾಸನೆಗಳು ನಾಶವಾಗಿ, ಆತ್ಮನು ನಿತ್ಯ ಅಪರೋಕ್ಷನಾಗುವನು"
ಈ ಪ್ರಕಾರ ಸದ್ಗುರುಗಳ ಭಾಷಣವನ್ನು ಕೇಳಿ, ವೃತ್ತಿತದಾಕಾರವಾಗಿ, ಕ್ಷಣಮಾತ್ರ ನಿರ್ವಿಕಲ್ಪ ಸ್ಥಿತಿಯನ್ನು ಹೊಂದಿ, ಆಮೇಲೆ ನಿರ್ವಾಣಪ್ಪನು ಅನ್ನುತ್ತಾನೆ. “ಹೇ ಸದ್ಗುರುನಾಥನೇ, ಈ ಹೊತ್ತು ನಾನು ಕೃತಾರ್ಥತೆಯನ್ನು ಹೊಂದಿದೆನು. ಅನಾಥನಾಗಿದ್ದ ನನ್ನನ್ನು ಜ್ಞಾನ ಬೋಧದಿಂದ ರಕ್ಷಿಸಿದಿ. ನಿನ್ನ ಕೃಪೆಯಿಂದ ನಾನು ಧನ್ಯತೆಗೆ ಪ್ರಾಪ್ತನಾದೆ,” ನಿರ್ವಾಣಪ್ಪನು ನಿತ್ಯ ಏಕಾಂತದಲ್ಲಿ ಹೋಗಿ ಈ ಸದ್ಗುರುವಾಣಿಯನ್ನು ಮನನ ಮಾಡುತ್ತ ಇರುತ್ತಿದ್ದನು. ಸದಾ ವೇದಾಂತ ಅಧ್ಯಯನದಲ್ಲಿಯೂ, ಶ್ರವಣದಲ್ಲಿಯೂ, ರತನಾಗಿದ್ದನು. ಸದ್ಗುರು ಕೃಪೆಯಿಂದ ದೃಢಜ್ಞಾನವನ್ನು ಹೊಂದಿ, ಆತನು ಸಂಪೂರ್ಣ ಆತ್ಮಜ್ಞಾನಿಯಾದನು. ಅನಂತರ ನಿರ್ವಾಣಪ್ಪನು ಪಂಚೀಕರಣವೆಂಬ ಒಂದು ವೇದಾಂತ ಗ್ರಂಥವನ್ನು ರಚಿಸಿದನು. ಅತ್ಯಂತ ಸುರಸವಾದ ಈ ಗ್ರಂಥವನ್ನು ಪಠಿಸಿದ ಮಾತ್ರದಿಂದ ಮುಮುಕ್ಷುಗಳಿಗೆ ಜ್ಞಾನ ಪ್ರಾಪ್ತವಾಗುವುದು. ನಿರ್ವಾಣಪ್ಪನ ಜ್ಞಾನ ವಿಶೇಷವು ಆ ಗ್ರಂಥದೊಳಗೆ ಪ್ರಕಟವಾಗುತ್ತದೆ. ಈ ಅಧ್ಯಾಯವು ಸರ್ವದರೂಳಗೆ ಉತ್ತಮವಾಗಿದ್ದು ನಿತ್ಯ ಇದನ್ನು ಪಠಿಸುವದರಿಂದ,
ಸುಲಭವಾಗಿ ಗುರುಕೃಪೆಯು ದೊರತು, ಸರ್ವಭ್ರಮ ನಿರಸನವಾಗುವದು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
