ಹಿರೂಬಾಯಿಯನ್ನು ಒಯ್ಯಲಿಕ್ಕೆ ಯಮದೂತರು ಬಂದಾಗ ಸದ್ಗುರುಗಳು ಬಂದು ಬಿಡಿಸಿದ ಕಥೆ
🍁ಹಿರೂಬಾಯಿಯನ್ನು ಒಯ್ಯಲಿಕ್ಕೆ ಯಮದೂತರು ಬಂದಾಗ ಸದ್ಗುರುಗಳು ಬಂದು ಬಿಡಿಸಿದರು. ಆರುತಿಂಗಳ ಮೇಲೆ ಆಕೆಯನ್ನು ವಿಮಾನದಲ್ಲಿ ಕರೆದುಕೊಂಡು ಹೋದರು.
ವಿರೂಪಾಕ್ಷನೆಂಬ ಒಬ್ಬ ಭಕ್ತನಿರುವನು. ಆತನಿಗೆ ಹಿರೂಬಾಯಿಯೆಂಬ ಸುಗುಣಿಯಾದ ತಾಯಿ ಇರುವಳು. ಆಕೆಯು ಬಹಳ ವೃದ್ಧೆಯು ಆಗಿದ್ದು, ನಿತ್ಯದಲ್ಲಿಯೂ ಬಹು ಪ್ರೇಮದಿಂದ ಸಿದ್ಧ ಸದ್ಗುರು ನಾಮವನ್ನು ಜಪಿಸುತ್ತಿರುವಳು ಮತ್ತು ಒಂದೂ ದಿನ ತಪ್ಪದೆ ಪ್ರತಿ ದಿವಸ ಪುರಾಣ ಶ್ರವಣಕ್ಕೆ ಬಹು ಶ್ರದ್ಧಾಯುಕ್ತಳಾಗಿ ಹೋಗುತ್ತಿದ್ದಳು. ಒಂದು ದಿವಸ ಆಕೆಯು ಪುರಾಣಕ್ಕೆ ಹೋಗುವಾಗ ದಾರಿಯಲ್ಲಿ ಒಂದು ಕಲ್ಲಿಗೆ ಕಾಲು ತಗಲಿ ಬಿದ್ದಳು. “ಸದ್ಗುರುನಾಥಾ' ಎಂದು ಕೂಗಿ, ಏಳಲಿಕ್ಕೆ ನೋಡಿದಳು. ಆದರೆ ಏಳಲಿಕ್ಕಾಗಲಿಲ್ಲ. ಆಗ ಸಮೀಪ ಇದ್ದವರು ಆಕೆಯನ್ನು ಎತ್ತಿ ಮನೆಗೆ ಕರೆದುಕೊಂಡು ಹೋದರು. ಆಕೆಯ ಕಾಲಿನ ಎಲುಬು ಮುರಿದು ನಡಿಯಲಿಕ್ಕೆ ಬಾರದಂತಾಯಿತು. ಆಗ ಸಿದ್ದಾರೂಢರನ್ನು ಮನೆಗೆ ಕರೆಸಿ, ಅವರನ್ನು ಪಾದ ಪೂಜೆಯಿಂದ ಸಂತೋಷಪಡಿಸಿ, ಆ ವೃದ್ಧೆಯು ವಿಚಾರಿಸುವಂಥವಳಾದಳು, -“ಪುಣ್ಯ ಕಾರ್ಯಕ್ಕೆ ಹೋಗುವಾಗ ಈ ದುಃಖವು ಯಾಕೆ ಪ್ರಾಪ್ತವಾಯಿತು ?” ಎಂಬುದಕ್ಕೆ ಶ್ರೀಗುರುಗಳು - “ನಿನ್ನ ಆಯುಷ್ಯವು ಮುಗಿದಿತ್ತು. ಆದರೆ ಪುರಾಣಕ್ಕೆ ಹೋಗುತ್ತಿದ್ದಿ ಎಂದು ಚಲೋದಾಯಿತು. ನಿನ್ನನ್ನು ಸದ್ಗುರುವರನು ರಕ್ಷಿಸಿದನು.” ಎಂದು ಹೇಳಿ ಸಿದ್ಧಾಶ್ರಮಕ್ಕೆ ತೆರಳಿದರು. ಹಿರೂಬಾಯಿಯು ಸರ್ವ ಕಾಲವನ್ನು ನಾಮ ಚಿಂತನದಲ್ಲಿಯೇ ಕಳೆಯುತ್ತಿದ್ದಳು. ಕಾಲು ಮುರಿದು ಈ ಪ್ರಕಾರ ಆಕೆಯು ಮನೆಯೊಳಗೆ ಬಿದ್ದಿರುವಾಗ, ತನ್ನ ಮಗನಾದ ವಿರೂಪಾಕ್ಷನಿಗೆ ಹೇಳುತ್ತಾಳೆ- 'ನಿತ್ಯದಲ್ಲಿ ನೀನು ಪುರಾಣವನ್ನು ಕೇಳಿ, ಮನೆಗೆ ಬಂದು, ನನಗೆ ಪುರಾಣ ಕಥೆಯನ್ನು ಸವಿಸ್ತಾರವಾಗಿ ಹೇಳತಕ್ಕದ್ದು.” ಆಕೆಯ ಇಚ್ಛೆಯಂತೆ ವಿರೂಪಾಕ್ಷಪ್ಪನು ನಿತ್ಯ ಹೇಳುತ್ತಿದ್ದು, ಒಂದು ದಿನ ಮಾರ್ಕಂಡೇಯ ಋಷಿಯ ಕಥೆಯನ್ನು ಆಕೆಗೆ ಹೇಳಿದನು. ಮರಣ ಕಾಲದಲ್ಲಿ ಶೂಲಪಾಣಿಯನ್ನು ಚಿಂತಿಸಿದ ಮಾತ್ರದಿಂದ, ಆ ದೇವನು ಬಂದು ಯಮನನ್ನು ಓಡಿಸಿದನು. ಎಂಬ ಕಥೆಯನ್ನು ಕೇಳಿ, ಹಿರೂಬಾಯಿಯು - “ಹಾಗಾದರೆ ನಮ್ಮ ದೈವತವಾದ ಸಿದ್ಧ ಗುರುವಿನ ಧ್ಯಾನ ಮಾಡಿದರೂ ಮರಣಕಾಲದಲ್ಲಿ ಆತನು ನಿಶ್ಚಯವಾಗಿ ಬಂದು ನನ್ನನ್ನು ರಕ್ಷಿಸುವನು,” ಎಂದು ತಿಳಿದು ಸದ್ಗುರು ನಾಮವನ್ನು ಅಂದಿನಿಂದ ಕ್ಷಣವಾದರೂ ಮರೆಯದೆ, ನಿತ್ಯವೂ ಸದ್ಗುರು ರೂಪವನ್ನು ಹೃದಯದಲ್ಲಿ ಕಾಣುತ್ತಿದ್ದಳು.
ಹೀಗಿರುತ್ತಾ ಒಂದಾನೊಂದು ದಿವಸ ಭೋಜನವಾದ ನಂತರ, ಅಕಸ್ಮಾತ್ತಾಗಿ ಆಕೆಯ ಮಸ್ತಕ ಭ್ರಮಣವಾಗಲಾರಂಭಿಸಿತು. ಕೂಡಲೇ ಆಕೆಯು ತನ್ನೆದುರಿಗೆ ಇಬ್ಬರು ಭಯಂಕರ ಪುರುಷರು ನಿಂತಿರುವದನ್ನು ಕಂಡಳು. ಅವರ ರೂಪವು ಉಗ್ರವಾಗಿದ್ದು, ನಾಲಿಗೆಯು ಜೋತಾಡುತ್ತಿತ್ತು. ಶರೀರಗಳು ಅಂಧಕಾರವೇ ಎಂಬಂತೆ ಕುಣಿಯುತ್ತಿದ್ದವು. ಕೆಂಪಾದ ಕಣ್ಣುಗಳನ್ನು ತಿರುಗಿಸುತ್ತಾ, ಆ ಹಿರೂಬಾಯಿಗೆ ಒದರಲಿಕ್ಕೆ ಆರಂಭಿಸಿದರು. ಆಕೆಯಾದರೂ ಗುರು ರೂಪವನ್ನು ಚಿತ್ತದಲ್ಲಿ ಧರಿಸಿ ಆತನನ್ನೇ ಕರೆಯುವಂಥವಳಾಗಿ - “ಸದ್ಗುರು ಸಿದ್ದಾರೂಢನಾಥನೇ, ನನ್ನ ರಕ್ಷಕನಾಗಿ ಬಾರಪ್ಪಾ, ಈ ಯಮದೂತರ ಕೈಯಿಂದ ನನ್ನನ್ನು ರಕ್ಷಿಸುವದಕ್ಕೋಸ್ಕರ ಬೇಗನೆ ಬಾ. ನನಗೆ ಈ ಶರೀರ ಬದುಕಿಸಬೇಕೆಂಬ ಇಚ್ಛೆ ಇಲ್ಲ. ಆದರೆ ಪುರಾಣ ಕೇಳಬೇಕೆಂಬ ನನ್ನ ಮನೋರಥವು ಇರುತ್ತದೆ. ಈ ಪೀಡೆಯು ನನ್ನ ಆಯುಷ್ಯ ನಾಶ ಮಾಡಿತು. ಗುರು ಮುಖದಿಂದ ಕೇಳತಕ್ಕಂಥಾ ಬೋಧವು ಕೇಳಲಿಲ್ಲ. ಗುರು ಮುಖದಿಂದ ಶ್ರವಣ ಮಾಡಿದ ನಂತರ ಸುಖದಿಂದ ನಾನು ದೇಹವನ್ನು ಬಿಡುವೆನು", ಎಂದು ಈ ಪ್ರಕಾರ ಪ್ರಾರ್ಥಿಸಿದ ಕೂಡಲೇ ಸಿದ್ಧ ಸದ್ಗುರುವು ಪ್ರಕಟನಾದನು. ಹಿರೂಬಾಯಿಯು ತನ್ನ ಸಮೀಪದಲ್ಲಿಯೇ ಸದ್ಗುರುನಾಥನನ್ನು ಕಂಡು, ಧೈರ್ಯಗೊಂಡವಳಾಗಿ, ಯಮಧೂತರನ್ನು ಕುರಿತು - “ನಾನು ನಿಮ್ಮ ಕೂಡ ಬರುವದಿಲ್ಲ ನಡೀರಿ. ನನ್ನ ಈ ದುಃಖವು ಪರಿಹಾರವಾಗಿ, ಸಿದ್ಧಾರೂಢ ಸ್ಥಾನಕ್ಕೆ ಹೋಗಿ ಅವರಿಂದ ಉಪದೇಶವನ್ನು ಪಡೆದುಕೊಂಡ ಮೇಲೆ, ಅವರಾಜ್ಞೆಯಿಂದ ನಾನು ಬಂದೇನು. ಅಲ್ಲಿ ಪರ್ಯಂತ ನಾನು ಬರುವುದಿಲ್ಲ”, ಎಂದು ಹೇಳಿದ್ದನ್ನು ಕೇಳಿ ಆ ಯಮದೂತರು “ಹಿಡಿ, ಹಿಡಿ' ಎಂದು ಘರ್ಜಿಸುತ್ತಾ, ಆಕೆಯ ಸಮೀಪ ಬಂದರು. ತಮ್ಮ ಪಾಶಗಳನ್ನ ಬಿಚ್ಚಿ, ಆಕೆಯ ಸುತ್ತಲು ಹಾಕಲಿಕ್ಕೆ ನೋಡುವಾಗ, ಹತ್ತಿರ ನಿಂತ ಸದ್ಗುರುವಿಗೆ ತಗಲಿ, ಆ ಕ್ಷಣವೇ ಹರಿದು ಬಿದ್ದವು. ಅವರ ಯತ್ನಗಳೆಲ್ಲ ವ್ಯರ್ಥವಾದವು. ಆಗ ಸದ್ಗುರುವು ದಂಡಧಾರಿಯಾಗಿ ದೂತರ ಮೇಲೆ ಹೋಗುವಂಥವನಾದನು. ಆತನನ್ನು ಕಂಡ ಕೂಡಲೇ ಆ ಯಮದೂತರು ಭಯಂಕರವಾಗಿ ಕೂಗುತ್ತ ಓಟಾ ಹಿಡದರು. ಓಡುತ್ತಾ ಯಮನಗರಿಗೆ ಬಂದು, ಯಮನನ್ನು ಕುರಿತು - “ನೋಡಿರಿ, ನಿಮ್ಮ ಕೆಲಸವನ್ನು ಬರೋಬರಿ ರೀತಿಯಿಂದ ನಾವು ನಡೆಸುತ್ತಿರುವಾಗ ಯಾವನೋ ಒಬ್ಬ ಯತೀಶ್ವರನು ನಮಗೆ ಅಡ್ಡ ಬಂದನು,” ಎಂದು ಹೇಳಿದ್ದು ಕೇಳಿ, ಸರ್ವಜ್ಞನಾದ ಆ ಯಮನು - “ಎಲೆ ದೂತರುಗಳಿರಾ, ಸಿದ್ದರಾಯರನ್ನು ನೀವು ತಿಳಿಯದೇ ಹೋದಿರಿ. ಈ ಕಾಲದಲ್ಲಿ ಜಗತ್ತಿನಲ್ಲಿ ಈಶ್ವರಾವತಾರವೆಂದರೆ ಆತನೇ. ಆತನ ಭಕ್ತರನ್ನು ನೀವು ತರಲಿಕ್ಕೆ ನೋಡಿದರೆ, ಆತನಿಂದ ರಕ್ಷಿತನಾದ ಅವರ ಮೇಲೆ ನಿಮ್ಮ ಸತ್ತಾ ನಡಿಯಲಾರದು. ಸರ್ವ ಜಗತ್ತಿನ ನಿಯಂತನಿದ್ದು, ಸರ್ವ ಕರ್ತಾ ಹರ್ತಾ ಆತನೇ ಇರುವನು' ಎಂದು ದೂತರನ್ನು ಕುರಿತು ಹೇಳಿದನು. ಇತ್ತ ಸದ್ಗುರುಗಳನ್ನು ಕುರಿತು, ಹಿರೂಬಾಯಿಯು “ಹೇ ದಯಾಳುವೇ, ಯಮನಿಂದ ನನ್ನನ್ನು ಬಿಡಿಸಿದಿ. ಇನ್ನಾದರೂ ನನ್ನ ಕಾಲಿಗೆ ಶಕ್ತಿ ಕೊಡು,'' ಎಂದು ಹೇಳಿದ್ದು ಕೇಳಿ ಸಿದ್ಧರು-"ನೀನು ಇನ್ನು ಆರು ತಿಂಗಳ ಆಯುಷ್ಯ ತೆಗೆದುಕೊ. ಅಲ್ಲಿವರೆಗೆ ನಿನ್ನ ಆಯುಷ್ಯದ ಸಾಫಲ್ಯ ಮಾಡಿಕೋ. ಅನಂತರ ನನ್ನ ಲೋಕಕ್ಕೆ ನೀನು ಬರುವಿ. ಸ್ವಸ್ಥಚಿತ್ತದಿಂದ ಭಜನೆಯನ್ನು ಮಾಡುತ್ತ ಇರು,'' ಈ ಪ್ರಕಾರ ಸದ್ಗುರುಗಳು ಅಂದು, ತಮ್ಮ ಹಸ್ತದಿಂದ ಆಕೆಯ ಕಾಲಿಗೆ ಸ್ಪರ್ಶಿಸಿದ ಕೂಡಲೇ ಆ ಹಿರೂಬಾಯಿಯು ಸಶಕ್ತಳಾಗಿ, ಎದ್ದು ನಿಂತಳು . ಅವಳು ಅತ್ಯಾನಂದಭರಿತಳಾಗಿ ಸದ್ಗುರುಗಳನ್ನು ನಮಿಸಿ, ಎದ್ದು ನೋಡಿದರೆ, ಅವರು ಅಂತರ್ಧಾನರಾಗಿರುವರು ಅವಳ ಮಗನಾದ ವಿರೂಪಾಕ್ಷಪ್ಪನು ಈ ಸಮೀಪದಲ್ಲಿಯೇ ಇದ್ದರೂ ಆತನಿಗೆ ಈ ಯಾವ ಸಂಗತಿಯೂ ಗೊತ್ತಾಗಲಿಲ್ಲ. ಮುದುಕಿ ಅಕಸ್ಮಾತ್ತಾಗಿ ಎದ್ದು ನಿಂತದ್ದನ್ನು ನೋಡಿ - ಅವ್ವಾ ನಿನ್ನ ಕಾಲುಗಳಿಗೆ ಒಮ್ಮಿಂದೊಮ್ಮೆ ಹ್ಯಾಗೆ ಶಕ್ತಿ ಬಂತು? ಎಂದು ಕೇಳಿದ್ದಕ್ಕೆ, ಆಕೆಯು ಸರ್ವ ವೃತ್ತಾಂತವನ್ನು ಕಥಿಸಿ, - “ಸದ್ಗುರುವು ನನ್ನನ್ನು ರಕ್ಷಿಸಿ, ನನಗೆ ಆರು ತಿಂಗಳ ಆಯುಷ್ಯವನ್ನು ಕೊಟ್ಟನು ಮತ್ತು ಪುರಾಣ ಶ್ರವಣಕ್ಕೊಸ್ಕರ ಹೋಗಲಿಕ್ಕೆ ನನ್ನನ್ನು ಸಶಕ್ತಳನ್ನಾಗಿ ಮಾಡಿದನು. ಇನ್ನೂ ಆರು ತಿಂಗಳಲ್ಲಿ ನನ್ನನ್ನು ತನ್ನ ನಿಜಪದಕ್ಕೆ
ಕರೆದುಕೊಳ್ಳುವನೆಂದು ಹೇಳಿರುತ್ತಾನೆ' ಹೀಗಂದು ಆ ಹಿರೂಬಾಯಿಯ ವಚನವನ್ನು ಕೇಳಿ, ವಿರೂಪಾಕ್ಷನು ಬಹಳ ಆನಂದಪಟ್ಟನು.
ಆನಂತರ ಆತನು ತಾಯಿಯನ್ನು ಮಠಕ್ಕೆ ಕರೆದುಕೊಂಡು ಹೋಗಿ, ಸದ್ಗುರು ಚರಣಗಳ ಭೇಟಿ ಮಾಡಿಸಿದನು. ಹಿರೂಬಾಯಿಯು ಸದ್ಗುರುಗಳಿಗೆ, ಎಲ್ಲಾ ವೃತ್ತಾಂತವನ್ನು ನಿವೇದಿಸಿ, - 'ಹೇ ಸದ್ಗುರುವೇ , ಭಕ್ತರನ್ನು ನೀನು ಕಾಲನ ಕೈಯಿಂದ ರಕ್ಷಿಸುವಿ. ಭಕ್ತರ ಸಲುವಾಗಿ ಅವತಾರ ಧರಿಸಿಕೊಂಡು ಬಂದಿರುವ ಸಾಕ್ಷಾತ್ ಈಶ್ವರನೇ ನೀನಿರುವಿ. ಪೂರ್ವದಲ್ಲಿ ಯಾವಾಗ ಮಾರ್ಕಂಡೇಯ ಋಷಿಯು ನಿನ್ನನ್ನು ಪ್ರಾರ್ಥಿಸಿದನೋ ಆ ಕಾಲದಲ್ಲಿ ನೀನು ಬಂದು ಆತನನ್ನು ರಕ್ಷಿಸಿದಿ. ಅದೇ ಪ್ರಕಾರ, ಹೇ ದೇವನೇ , ನನ್ನನ್ನು ಯಮನ ಕೈಯಿಂದ ಬಿಡಿಸಿ ರಕ್ಷಿಸುವಂಥವನಾದಿ," ಎಂದು ಅನ್ನುವಂಥಾದ್ದು ಕೇಳಿ, ಸದ್ಗುರುಗಳು - ''ನಿನ್ನ ಶುದ್ಧ ಭಾವಕ್ಕೆ ಸದ್ಗುರು ಒಲಿದನು. ಯಾವತನು ಆತನನ್ನು ಚಿಂತಿಸುತ್ತಾನೋ ಅಂಥವನನ್ನು ಆ ಸದ್ಗುರುವು ಯಮಪಾಶದಿಂದ ಬಿಡಿಸುವನು. ಆದರೂ ನೀನು ಸದ್ಗುರು ನಾಮವನ್ನು ಸರ್ವಥಾ ಮರೆಯಬೇಡ, ಅದನ್ನು ಅಖಂಡವಾಗಿ ಜಪಿಸುತ್ತಿದ್ದರೆ, ಭ್ರಮವೆಲ್ಲ ಪರಿಹಾರವಾಗಿ, ನಿಜ ವಿಶ್ರಾಮವನ್ನು ಹೊಂದಿ, ಆಮೇಲೆ ಸದ್ಗುರುಧಾಮವನ್ನು ಪ್ರಾಪ್ತಿ ಮಾಡಿಕೊಳ್ಳುವಿ,'' ಎಂದು ಅಂದರು. ಈ ಪ್ರಕಾರ ಸದ್ಗುರು ಮುಖದಿಂದ ಉಪದೇಶವನ್ನು ಕೇಳಿ, ಹಿರೂಬಾಯಿಯು ಅತ್ಯಾನಂದ ಹೊಂದಿದವಳಾಗಿ, ಕ್ಷಣಮಾತ್ರ ಸಮಾಧಿ ಸುಖದಲ್ಲಿ ತಟಸ್ಥಳಾಗಿ ಕೂತು, ಆಮೇಲೆ ಎದ್ಧು ಸದ್ಗುರು ಪಾದಕ್ಕೆರಗಿದಳು. ಸದ್ಗುರು ಉಪದೇಶವನ್ನು ಚಿತ್ತದಲ್ಲಿ ಧರಿಸಿ, ತನ್ನ ಪುತ್ರನ ಸಂಗಡ ಮನೆಗೆ ಬಂದಳು. ಅಂದಿನಿಂದ ಹಿರೂಬಾಯಿಯು ರಾತ್ರಿ ಹಗಲು ಸದ್ಗುರು ನಾಮವನ್ನು ಜೀವ ಪ್ರಾಣವೆಂಬಂತೆ ಜಪಿಸುತ್ತಿದ್ದಳು.
ಆರು ತಿಂಗಳು ಮುಗಿದವು. ಒಂದು ದಿನ ಹಿರೂಬಾಯಿಯು ನಿದ್ದೆ ಹೋಗುತ್ತಿರುವಾಗ ಸದ್ಗುರುಗಳು ಬಂದು ಆಕೆಯನ್ನು ಎಬ್ಬಿಸಿ, -“ಈಗಲೇ ಎದ್ದು ಬಾ'' ಎಂದು ಹೇಳಿದರು. ಹಿರೂಬಾಯಿಯು ಎದ್ದು ನೋಡುವಾಗ ಸದ್ಗುರುಗಳು, ಮುಖದ ಮೇಲೆ ಅದ್ಭುತ ತೇಜಯುಕ್ತರಾಗಿಯೂ, ಅತಿಸುಂದರ ಸ್ವರೂಪ ಉಳ್ಳವರಾಗಿಯೂ, ಇರುವುದನ್ನು ಕಂಡಳು. ಅವರ ಸಮೀಪವೇ ರತ್ನಖಚಿತವಾದ ಮತ್ತು ದೇದೀಪ್ಯಮಾನ ದಿವ್ಯ ವಿಮಾನವನ್ನೂ ಅದರ ಮೇಲೆ ಸದ್ಗುರು ಸಮಾನರೂಪುಳ್ಳ ಇಬ್ಬರು ಪುರುಷರನ್ನೂ ಕಂಡಳು. ಹಿರೂಬಾಯಿಯ ಹಸ್ತವನ್ನು ಹಿಡಿದು ಸದ್ಗುರುಗಳು ವಿಮಾನದಲ್ಲಿ ಕೂಡ್ರಿಸಿದರು. ಆಗ ಆಕೆಗೆ ಆಗಿರುವ ಆನಂದವನ್ನು ವರ್ಣಿಸಲಿಕ್ಕೆ ಶ್ರುತಿ ಶಾಸ್ತ್ರಾದಿಗಳಿಗೆ ಸಹಾ ಅಸಾಧ್ಯವು. ಅಂಥಾ ಈ ಆನಂದದೊಳಗೆ ಲೀನಳಾಗಿ, ಪುತ್ರ ಪೌತ್ರಾದಿಕರನ್ನು ಸಹಾ ಮರೆತುಬಿಟ್ಟಳು. ತನ್ನ ಮನುಜತ್ವವನ್ನೂ ಮರೆತ ಆಕೆಯ ಚಿತ್ತವು ಆನಂದದಲ್ಲಿ ಮಗ್ನವಾಯಿತು. ಸಮೀಪದಲ್ಲಿಯೇ ಮಗನಾದ ವಿರೂಪಾಕ್ಷನಿದ್ದನು. ಆದರೆ ಇದೇನೂ ಆತನಿಗೆ ತಿಳಿಯದೆ ಒಂದು ಕ್ಷಣಮಾತ್ರ ಪ್ರಕಾಶವನ್ನು ಕಂಡನು. “ಸಿದ್ಧಾರೂಢಾ '' ಎಂಬ ನಾಮವನ್ನು ಉಚ್ಚರಿಸಿದ ಕೂಡಲೇ ಆಕೆಯ ಪ್ರಾಣವು ಹೋಯಿತು. ಆ ಕ್ಷಣವೇ ಆ ಪ್ರಕಾಶವು ವಿರೂಪಾಕ್ಷನಿಗೆ ಕಾಣಿಸಿತು. ಆಮೇಲೆ ಮನೆಯ ಹಾಗೂ ನೆರಮನೆಯ ಎಲ್ಲ
ಜನರು ಕೂಡಿ ಭಜನೆ ಮಾಡುತ್ತಾ ಬಹು ವೈಭವದಿಂದ ಆ ಪುಣ್ಯ ಶರೀರವನ್ನು ಸ್ಮಶಾನಕ್ಕೆ ಒಯ್ದು ದಹಿಸುವಂಥವರಾದರು. ಈ ಪ್ರಕಾರ ಸದ್ಗುರು ಮಹಾರಾಯನು ಕಾಲನಿಗೆ ಪರಾಜಯವನ್ನು ಮಾಡಿ, ತನ್ನ ನಿರಾಮಯನಾದ ಪದವನ್ನು ನಾಮವನ್ನು ಜಪಿಸಿದ ಮಾತ್ರಕ್ಕೆ ಭಕ್ತಳಿಗೆ ಕೊಟ್ಟನು.
👇👇👇👇👇👇👇👇👇👇👇👇👇👇
