ಗೊಂದವಲೇ ಬ್ರಹ್ಮಚೈತನ್ಯ ಮಹಾರಾಜರು ಹುಬ್ಬಳ್ಳಿಗೆ ಬಂದು ಸಿದ್ಧಾರೂಢರಿಗೆ ಭೆಟ್ಟಿಯಾಗಿ ಸದ್ಗುರುಗಳು ಜ್ಞಾನದೇವರ ಅವತಾರ ಅಂತ ಗುಣಗಾನ ಮಾಡಿದ ಕಥೆ

 🕉️ ಗೊಂದವಲೇ ಬ್ರಹ್ಮಚೈತನ್ಯ ಮಹಾರಾಜರು  ಹುಬ್ಬಳ್ಳಿಗೆ ಬಂದು ಸಿದ್ಧಾರೂಢರಿಗೆ ಭೆಟ್ಟಿಯಾಗಿ 

 ಸದ್ಗುರುಗಳು ಜ್ಞಾನದೇವರ ಅವತಾರ ಅಂತ ಗುಣಗಾನ ಮಾಡಿದ ಕಥೆ 



ಗೊಂದಾವಲೆ ಎಂಬ ಪುರದೊಳಗೆ, ಬ್ರಾಹ್ಮಣ ದಂಪತಿಗಳಿರುತ್ತಿದ್ದು, ಅವರು ನಿತ್ಯದಲ್ಲಿಯೂ ಪಾಂಡುರಂಗ ಭಜನೆಯನ್ನು ಮಾಡುತ್ತ ಸುಖದಿಂದ ಸಂಸಾರ ಮಾಡುತ್ತ ಇದ್ದರು. ಆಶಾಢ ಮತ್ತು ಕಾರ್ತಿಕ ಏಕಾದಶಿಗಳಿಗೆ ನೇಮದಿಂದ ಪಂಢರಪುರಕ್ಕೆ ಹೋಗುತ್ತಿದ್ದು, ತಮ್ಮ ಕುಲದೇವನಾದ ಶ್ರೀ ವಿಠ್ಠಲನಿಗೆ ಭಕ್ತಿ ಯುಕ್ತರಾಗಿ ದರ್ಶನವನ್ನು ಪಡೆಯುತ್ತಿದ್ದರು.

ವಿಠ್ಠಲನಾಮವನ್ನು ಮುಖದಿಂದ ಉಚ್ಚರಿಸುವಾಗ ಹೃದಯದಲ್ಲಿರುವ ಆತನ ರೂಪವನ್ನೇ ಕಣ್ಣಿನಿಂದ ನೋಡುತ್ತಾ, ಉತ್ಕಟವಾದ  ಪ್ರೇಮವು ತುಂಬುವಂಥಾದ್ದಾಗಿ, ಈ ಪ್ರಕಾರ ಸರ್ವ ಕಾಲದಲ್ಲಿಯೂ ಭಜನೆ ಮಾಡುವದರಲ್ಲಿ ಅವರು ತತ್ಪರರಾಗಿದ್ದರು. ಇಂಥಾ ದಂಪತಿಗಳಿಗೆ ಒಂದಾನೊಂದು ಕಾಲದಲ್ಲಿ ಹೃಶೀಕೇಶಿಯಾದ ಕೃಷ್ಣ ಪರಮಾತ್ಮನು ಸ್ವಪ್ನದಲ್ಲಿ ಬಂದು, ''ನಿಮ್ಮ ಹೊಟ್ಟೆಯಲ್ಲಿ ರಾಮದಾಸನು  ಜನ್ಮವನ್ನು ತೊಟ್ಟು ಬರುವನು. ಯಾವತನು  ಮಾರುತಿ ಅವತಾರನಾಗಿದ್ದು ಬಹು ಜನರ ಉದ್ಧಾರ ಮಾಡಿರುವನೋ, ಆತನೇ ಈ ಕಾಲದಲ್ಲಿ ಶರೀರವನ್ನು ಧಾರಣೆ ಮಾಡಿ, ನಿಮ್ಮಲ್ಲಿ ಪುತ್ರನಾಗಿ ಜನಿಸುವನು', ಎಂದು ಇಬ್ಬರಿಗೂ ಸ್ವಪ್ನದಲ್ಲಿ ಹೇಳಿದ ಕೂಡಲೇ, ಆ ಆನಂದವಾಣಿಯನ್ನು ಕೇಳಿ, ಅವರಿಗೆ ಬಹಳ ಹರ್ಷವಾಗಿ ಶ್ರೀ ಪಾಂಡುರಂಗನನ್ನು ವಂದಿಸಿ, -“ನಮ್ಮ ಜನ್ಮವು ಸಾರ್ಥಕವಾಯಿತು,'' ಎಂದು ನುಡಿಯುವಂಥವರಾದರು. ಅನಂತರ

ಸ್ತ್ರೀಯು ಗರ್ಭವತಿಯಾಗಿ ಸುಂದರನಾದ ಒಬ್ಬ ಪುತ್ರನನ್ನು ಪ್ರಸವಿಸಿದಳು. ಸಂಪ್ರದಾಯಕ್ಕನುಸರಿಸಿ, ಕೂಸಿಗೆ ಗಣಪತಿಯೆಂದು ಹೆಸರಿಟ್ಟು, ಅದಕ್ಕೆ ಚಿಕ್ಕಂದಿನಲ್ಲಿಯೇ ಪಾಂಡುರಂಗ ಭಜನೆ ಮಾಡಲಿಕ್ಕೆ ಕಳಿಸಿದರು. ಹುಡುಗನಿಗೆ ಗರ್ಭಾಷ್ಟಮದಲ್ಲಿ ಮೌಂಜಿ ಬಂಧನ ಮಾಡುವಾಗ ರಾಮನಾಮ ಸ್ಮರಣೆಯನ್ನೂ  ಉಪದೇಶಿಸಿದ ಪ್ರಕಾರ, ಆ ಕೂಡಲೇ ಹುಡುಗನು ರಾಮ ಮಂತ್ರದ ಪುನರುಶ್ಚರಣೆ ಆರಂಭಿಸಿದನು. ಏಳುವಾಗ ಕೂಡ್ರುವಾಗ, ಕೆಲಸ ಮಾಡುವಾಗ ಬಿಡದೆ, ನಾಮ ಉಚ್ಚರಿಸುವನು. ಈ ಪ್ರಕಾರ ಅಖಂಡವಾಗಿ ದೃಢ ಅಭ್ಯಾಸ ನಡೆಯುತ್ತಿರುವಾಗ, ಆತನಿಗೆ ವೈರಾಗ್ಯವು ಉಕ್ಕಿ  ಬರುವಂಥಾದ್ದಾಯಿತು. ಹದಿನೈದು ವರ್ಷ ವಯಸ್ಸಿನ ಆ ಗಣಪತಿಯು ತೀರ್ಥ ಪರ್ಯಟಣವನ್ನು ಮಾಡಲಿಕ್ಕೆ ಹೊರಟನು. ಈ ಪ್ರಕಾರ ತೀರ್ಥಗಳನ್ನು ಮಾಡುತ್ತ ಮಾಡುತ್ತ, ಕಟ್ಟ ಕಡೆಗೆ ಆತನಿಗೆ ಗುರುಸ್ಥಾನವು ದೊರೆಯಿತು.


ವರ್ಹಾಡ  ಪ್ರಾಂತದಲ್ಲಿ ಎಳೆ ಗ್ರಾಮವೆಂಬುದಿರುವದು. ಆ ಗ್ರಾಮ ಬಹಿರ್ಭಾಗದಲ್ಲಿ ತುಕಾರಾಮ ಚೈತನ್ಯರೆಂಬ

ಸತ್ಪುರುಷರಿರುವರು. ಇವರ ಅಗಾಧ ಕೀರ್ತಿಯನ್ನು ಕೇಳಿ, ಗಣಪತಿ ಬುವಾ ಅವರ ಕಡೆಗೆ ಹೋಗಿ, ನಮನ ಮಾಡುವಾಗ, ಅವರು ತಮ್ಮ ಶಿಷ್ಯರನ್ನು ಕುರಿತು - “ಈ ದರೋಡೆಕೋರ ಬಂದ ನೋಡಿರಿ,'' ಎಂದು ಹೇಳಿದ್ದು ಕೇಳಿ, ಅವರೆಲ್ಲಾ ಬಹಳ ಚಕಿತರಾದರು. ಆದರೆ ಗಣಪತಿಯು ಮನಸ್ಸಿನಲ್ಲಿ ತಾನು ಧನ್ಯನಾದೆನೆಂದು ತಿಳಿದುಕೊಂಡು, - " ಹೇ ದೇವನೇ, ಅನೇಕ ದೇಶಗಳನ್ನು ತಿರುತಿರುಗಿ, ಕಟ್ಟ ಕಡೆಗೆ ನಿರ್ದೋಷಿಯಾಗಿರುವ ನೀನು ಭೆಟ್ಟಿಯಾಗಿರುವಿ. ನಿನ್ನ ಸನ್ನಿಧಿಯಲ್ಲಿ

ದಾಸನಾಗಿರಲಿಕ್ಕೆ ನಾನು ಇಚ್ಚಿಸುವೆನು,'' ಎಂದು ಹೇಳಿದ್ದು ಕೇಳಿ, ಆ ಮಹಾತ್ಮರು -" ಗಣಪತಿ ಬುವಾ, ನಿನ್ನಿಂದ ನನ್ನ ಸೇವಾ ಮಾಡಲಿಕ್ಕೆ ಆಗಲಿಕ್ಕಿಲ್ಲ. ನಾನು ಜೀವಿಗಳಿಗೆ ಬಹು ಕ್ರೂರನಾಗಿದ್ದೇನೆ. ಇಲ್ಲಿ ನಿಂತಿರುವವರಿಗೆ ನೀನೇ

ಕೇಳು,'' ಎಂದು ಹೇಳಿ, ಆ ಸದ್ಗುರುನಾಥನು  ಗಣಪತಿಯ ಮೈಮೇಲೆ ಕಲ್ಲುಗಳನ್ನು ಎಸೆದನು. ತನ್ನ ಶರೀರಕ್ಕೆ ತಾಗಿ, ಕೆಳಗೆ ಬಿದ್ದ ಆ ಕಲ್ಲುಗಳನ್ನು ಗಣಪತಿಯು  ಒಟ್ಟುಗೂಡಿಸಿ, - '' ಈ ಕಲ್ಲುಗಳಿಗೆ ಸದ್ಗುರು  ಹಸ್ತ ಸ್ಪರ್ಶವಾಗಿರುವದರಿಂದ ಇವು  ನನಗೆ ಪೂಜ್ಯವಾಗಿವೆ,'' ಎಂದು ಅನ್ನುತ್ತಾ ಗುರುಪ್ರಸಾದ ಸಿಕ್ಕಿತೆಂದು, ಅವುಗಳನ್ನು ತನ್ನ ಮಸ್ತಕದ  ಮೇಲೆ ಇಟ್ಟುಕೊಂಡು. ಆಮೇಲೆ ಸದ್ಗುರುಗಳು ಆತನನ್ನು ಸಮೀಪ ಕರೆದು, ಒಳ್ಳೆ ಸಿಟ್ಟಿನಿಂದ ಅವನಿಗೆ ಬೈಯುತ್ತ  ತಮ್ಮ 

ಕಾಲುಗಳನ್ನು ಒತ್ತಲಿಕ್ಕೆ ಹೇಳಿದರು. ಗಣಪತಿಯು ಸಮೀಪಕ್ಕೆ ಬಂದು, ಆ ಚರಣಗಳನ್ನು ನೋಡಿ ಆಶ್ಚರ್ಯಪಟ್ಟು, ಕಮಲಗಳಿಗಿಂತ ಕೋಮಲವಾದ ಆ ಪಾದಗಳಿಗೆ ಹಸ್ತದಿಂದ ಸ್ಪರ್ಶ ಮಾಡಿದನು. ಕೂಡಲೆ ಗುರುಗಳು ಸಿಟ್ಟಿನಿಂದ ಆತನಿಗೆ ಒಂದು ಏಟು ಹೊಡೆದು, - " ಏಳು, ನಡಿ, ನಿನ್ನ ಕೈ ಕಲ್ಲಿಗಿಂತಲೂ ಬಿರುಸಾಗಿದೆ , ನನಗೆ ಅದರ ಸ್ಪರ್ಶ ಸಹನವಾಗುವದಿಲ್ಲ,'' ಅಂದದ್ದು ಕೇಳಿಯೂ ಗಣಪತಿಯ ಮನಸ್ಸು ಸಂಕೋಚಿತವಾಗಲಿಲ್ಲ. ಕೈಗಳನ್ನು ಜೋಡಿಸಿ ಸುಮ್ಮನೆ ಕೆಲವು ಹೊತ್ತು ಮುಂದೆ ನಿಂತನು . ಆಮೇಲೆ ಸದ್ಗುರುಗಳು, “ಈಗ ನಾವು ಅಡವಿಗೆ ಹೋಗಿ ಕಟ್ಟಿಗೆ ತೆಗೆದುಕೊಂಡು ಬರೋಣ,''

ಎಂದು ಹೇಳಿದ್ದು ಕೇಳಿ ಗಣಪತಿಯು  ಶಾಂತ ರೀತಿಯಿಂದ, “ನೀವು ಇಲ್ಲಿ ಕುಳಿತುಕೊಳ್ಳಿರಿ. ನಾನು ಕಟ್ಟಿಗೆ ತೆಗೆದುಕೊಂಡು ಬರುವೆನು'' ಎಂದು ಅಂದನು. ಆಗ ಸದ್ಗುರುಗಳು - "ನೀನು ಕೆಟ್ಟ ಕೆಟ್ಟ ಕಟ್ಟಿಗೆಯನ್ನು ತರುವಿ. ನಾನೂ ನಿನ್ನ ಕೂಡ

ಬರುವೆನು,” ಎಂದು ಹೇಳಿ ಇಬ್ಬರೂ ಹೊರಟರು. ಗುರುಶಿಷ್ಯರಿಬ್ಬರೂ ಅಡವಿ ಹೋಗಿ ಬಹಳ ಕಟ್ಟಿಗೆಗಳನ್ನು ಕೂಡಿಸಿ, ಶಿಷ್ಯನ ಧೋತರದಿಂದ ಅವನ್ನು ಕಟ್ಟಿ, ಹೊರೆಯನ್ನು ಗಣಪತಿಯ ತಲೆಯ ಮೇಲೆ ಗುರುಗಳಿಟ್ಟರು. ಹಸ್ತದಲ್ಲಿ ಒಂದು ಬಡಿಗೆಯನ್ನು ಹಿಡಿದು, ಗುರುಗಳು ಶಿಷ್ಯನನ್ನು ಕುರಿತು, - “ನೀನು ಮುಂದೆ ಹೋಗು . ನಾನು ಹಿಂದಿನಿಂದ ಬರುವೆನು,” ಎಂದು ಹೇಳಿದ ಪ್ರಕಾರ ಗಣಪತಿಯು ಮುಂದೆ ನಡೆದನು. ಇಬ್ಬರಿಂದ ಹೊರಲಾಗದಂಥಾ ಭಾರವನ್ನು ಹೊತ್ತುಕೊಂಡು ಹೋಗುವಾಗ ಆತನಿಗೆ ತಲೆಯು ನೋಯಲಿಕ್ಕೆ ಆರಂಭಿಸಿತು. ಕ್ಷಣಮಾತ್ರ ನಿಂತಕೂಡಲೇ ಬೆನ್ನಿನ ಮೇಲೆ ಗುರುಗಳು ಹೊಡೆದ ಬಡಿಗೆ ಪೆಟ್ಟು ಬೀಳುತ್ತಿತ್ತು. ಶಿರದ ಮೇಲೆ ಅಸಾಧ್ಯವಾದ ಭಾರ, ಬೆನ್ನ ಮೇಲೆ ಆಗಾಗ್ಗೆ ಪೆಟ್ಟು  ಮುಖದಿಂದ

ರಾಮನಾಮ ಉಚ್ಚಾರ, ಹಿಂದೆ ದಂಡಧಾರಿಯಾಗಿ ಬರುವಂಥಾ ಸದ್ಗುರುನಾಥನು, ಈ ಪ್ರಕಾರ ಗಣಪತಿಯು  ಒಂದು ಘಳಿಗೆ ಪರ್ಯಂತ ನಡೆದನು. ಆತನ ಚಿತ್ತವು ಗುರುಭಕ್ತಿಯಲ್ಲಿ ದೃಢವಾಗಿ ನಿರತವಾಗಿದ್ದರೂ, ಶರೀರವು ಈ ಸಂಕಷ್ಟವನ್ನು

ಸಹಿಸಲಾರದೆ, ಭಾರ ನಿಮಿತ್ತದಿಂದ ದಣಿದುಹೋಯಿತು. ಆಗ ಗಣಪತಿಯು  ಒಂದು ಕ್ಷಣ ನಿಂತನು. ಕೂಡಲೇ ಬೆನ್ನ ಮೇಲೆ ಬಡಿಗೆಯ ಹೊಡೆತ ಬಿತ್ತು. ಅತ್ಯಂತ ನಿಃಶಕ್ತನಾಗಿ ಭೂಮಿಗೆ ಬಿದ್ದು ತತ್ಕಾಲವೇ ಮೂರ್ಚ್ಛಾಗತನಾದನು.

ಶಿಷ್ಯನಿಗೆ ದೇಹಭಾನ  ತಪ್ಪಿತೆಂದು  ಸದ್ಗುರುಗಳು ಹೃದಯದಲ್ಲಿ ಬಹಳ ಕಳವಳಗೊಂಡು, ಕೃಪೆಯಿಂದ ಆತನ ಶಿರಕ್ಕೆ ಹಸ್ತ ಸ್ಪರ್ಶಿಸಿದ ಕ್ಷಣವೇ ಗಣಪತಿಯು  ಎಚ್ಚರ ಹೊಂದಿದನು. ಆಗ ಮಹಾತ್ಮರು ಆತನ ಕೈಹಿಡಿದು ವೃಕ್ಷ ಛಾಯೆಗೆ ಕರೆದುಕೊಂಡು ಹೋಗಿ ಕೂಡ್ರಿಸಿ, ಕೃಪಾದೃಷ್ಟಿಯಿಂದ ನೋಡಿದ ಮಾತ್ರದಿಂದ ಗಣಪತಿಯ ತಾಪವೆಲ್ಲಾ ಶಾಂತವಾಯಿತು. ಸದ್ಗುರು ಮುಖಾವಲೋಕನದಿಂದ ಆತನು ಸುಖವನ್ನು ಹೊಂದಿದನು. ಆಗ ತುಕಾರಾಮ ಚೈತನ್ಯ ಮಹಾರಾಜರು ನಗುತ್ತಾ - ''ನೀನು ದರೋಡೆಖೋರನೆಂದು ನಾನು ಹೇಳಿದ ಮಾತು ನಿಜಮಾಡಿ ತೋರಿಸಿದಿ.  ನನ್ನ ಹೃದಯವನ್ನು ನೀನು ಸಂಪೂರ್ಣವಾಗಿ ಹರಣ ಮಾಡಿಕೊಂಡಿ. ನಿನ್ನಂಥಾ  ಶಿಷ್ಯನನ್ನು ನಾನು ಎಂದೂ ಕಾಣಲಿಲ್ಲ,” ಎಂದು ಹೇಳಿದರು. ಅನಂತರ ಗಣಪತಿಗೆ ನಿರ್ಮಲವಾದ ಆತ್ಮಜ್ಞಾನವನ್ನು ಬೋಧಿಸಿದರು. ಶಿಷ್ಯನು  ಅದನ್ನು ಶ್ರವಣ ಮಾಡಿದ ಮಾತ್ರದಿಂದ ದೇವಾದಿಕರಿಗೆ ದುರ್ಲಭವಾದಂಥಾ ಆ ನಿಜಾತ್ಮ ಸ್ಥಾನವನ್ನು ತತ್‌ಕ್ಷಣವೇ ಹೊಂದಿದನು. ಶಿಷ್ಯನಿಗೆ ಸಮಾಧಿ ಹತ್ತಿತೆಂದು ತಿಳಿದು, ಆತನಿಗೆ ಉತ್ಥಾನವಸ್ಥೆಗೆ ತಂದು ಗುರುಗಳು - '' ಈ ಜ್ಞಾನವು ನಿನಗೆ ದೃಢವಾಗುವ ದೆಶೆಯಿಂದ, ನಾಮಸ್ಮರಣೆಯ ಅಭ್ಯಾಸವನ್ನು ಬಿಡಬೇಡ. ದಾಸಬೋಧವೆಂಬ ಗ್ರಂಥವನ್ನು ನಿತ್ಯ ಅಧ್ಯಯನ ಮಾಡುತ್ತಿದ್ದು, ಅದರಲ್ಲಿ ನಿರೂಪಿಸಿದಂತೆ ವರ್ತನವನ್ನು ತ್ರಿಕರಣಶುದ್ಧವಾಗಿ ಇಡತಕ್ಕದ್ದು, ಈಗ ನೀನು ನಿನ್ನ ಮನೆಗೆ ಹೋಗಿ, ಬರುವಂಥಾ  ಭಕ್ತರಿಗೆ ಅಧಿಕಾರ ಪರೀಕ್ಷೆ ಪೂರ್ವಕ ನಾಮಸ್ಮರಣೆಯನ್ನೇ  ಉಪದೇಶಿಸಿ ಉದ್ದರಿಸುವಂಥವನಾಗು. ಈಗ ನೀನು ಧನ್ಯನಾದಿ. ಶುದ್ಧವಾದ ಚೈತನ್ಯ

ನೀನಾದಿ. ಆದ್ದರಿಂದ ಇಂದಿನಿಂದ ನಿನಗೆ ಬ್ರಹ್ಮಚೈತನ್ಯವೆಂಬ ಹೆಸರು ಇರಲಿ,” ಎಂದು ಸದ್ಗುರುವರನ  ಅಮೃತಸಮಾನ

ವಚನವನ್ನು ಕೇಳಿ, ಗಣಪತಿ ಶಿಷ್ಯನಿಗೆ ಕಂಠ  ಗದ್ಗದಿತವಾಗಿ, ಕಣ್ಣೊಳಗಿಂದ ಆನಂದಾಶ್ರುಗಳನ್ನು ಸುರಿಸುತ್ತ ಆತನು  ಸದ್ಗುರುಗಳ ಚರಣಕ್ಕೆ ಬಿದ್ದು, ಎದ್ದು ನಿಂತು - 

“ ಎಷ್ಟು ದಯಾಳು  ಆಗಿರುವಿ, ಹೇ ಸದ್ಗುರುರಾಜನೇ, ನಾನು ಇವತ್ತು ಧನ್ಯನಾದೆನು. ನಿನ್ನ ನಿತ್ಯ ಸ್ವರೂಪವನ್ನು ನನಗೆ ತೋರಿಸಿ, ವಿಚಿತ್ರ ಕಾರ್ಯವನ್ನು ಮಾಡಿದಿ ” ಎಂದು ಬ್ರಹ್ಮಚೈತನ್ಯನು  ಅಂದು, ಪುನಃ ಸದ್ಗುರುಗಳಿಗೆ ನಮಸ್ಕರಿಸಿ, ಅವರ ಆಜ್ಞೆ ಪಡೆದುಕೊಂಡು ತನ್ನ ಸ್ವಸ್ಥಾನಕ್ಕೆ ಹೋದನು.


ಬ್ರಹ್ಮ ಚೈತನ್ಯರ  ಸ್ಥಾನಕ್ಕೆ ಅಸಂಖ್ಯ ಜನ ಭಕ್ತರು ಬಂಧು, ಅವರ ಸಂಗತಿಯಿಂದ ಉದ್ದಾರವಾಗುತ್ತಿರುವರು. ಎಲ್ಲರಿಗೂ ಅವರು ರಾಮ ಮಂತ್ರವನ್ನು ಉಪದೇಶಿಸಿ, ತಾರಣ ಮಾಡುತ್ತಿದ್ದರು. ಇಂಥಾ ಗೊಂದವಲೇಕರ ಮಹಾರಾಜರ ಪ್ರಿಯ ಶಿಷ್ಯನಾದ ವಿದ್ಯಾಸಾಗರನಾಗಿರುವ ತಮ್ಮಣ್ಣ ಶಾಸ್ತ್ರಿಯು  ಹುಬ್ಬಳ್ಳಿಯಲ್ಲಿ ಇರುವನು. ಆತನು ಮತ್ತು ಇತರ ಭಕ್ತ ಜನರೂ ಕೂಡಿ, ಗೊಂದವಲೆಗೆ ಹೋಗಲಿಕ್ಕೆ ಅನುಕೂಲವಿಲ್ಲದಂಥಾ ಅನೇಕ ಜನರ ಉದ್ಧಾರಾರ್ಥವಾಗಿ, ಬ್ರಹ್ಮ ಚೈತನ್ಯ 

ಮಹಾರಾಜರನ್ನು ಹುಬ್ಬಳ್ಳಿಗೆ ಬರಲಿಕ್ಕೆ ಪ್ರಾರ್ಥಿಸಿದರು. ಈ ಆಮಂತ್ರಣವನ್ನು ಮಾನ್ಯ ಮಾಡಿ, ಶ್ರೀ ಸಿದ್ಧಾರೂಢರ

ದರ್ಶನೋತ್ಸುಕರಾಗಿಯೂ ತಮ್ಮ ಶಿಷ್ಯ ಸಮುದಾಯವನ್ನೊಡಗೂಡಿ, ಹುಬ್ಬಳ್ಳಿಗೆ ಹೊರಟು ಬರುವಂಥವರಾದರು. ಇಲ್ಲಿಯ 

ಸರ್ವ ಭಕ್ತಜನರು, ಅವರನ್ನು ಎದುರ್ಗೊಳ್ಳಲಿಕ್ಕೆ ಹೋಗಿ, ಅವರ ದರ್ಶನದಿಂದ ತಾವು ಧನ್ಯರಾದೆವು ಎಂದು ತಿಳಿದರು.

ಬ್ರಹ್ಮ ಚೈತನ್ಯರ ಸನ್ನಿಧಿಯಲ್ಲಿ ಸರ್ವ ಬ್ರಾಹ್ಮಣರು ಬಂದು ಅವರಿಂದ ಮಂತ್ರೋಪದೇಶವನ್ನು ಪಡೆದುಕೊಂಡರು. ಆದರೆ ಅವರು ಮಹಾತ್ಮನನ್ನು ವಿಧಿ ನಿಷೇಧದ  ಗೊಂದಲದೊಳಗೆ ಹಾಕಿ, ಸಿದ್ಧಾರೂಢರ  ಕಡೆಗೆ ಹೋಗಗೊಡಲಿಲ್ಲ. ಒಮ್ಮೆ ಒಬ್ಬಾನೊಬ್ಬ ಭಕ್ತನ ಮನೆಗೆ ಹೋಗುವಾಗ ಯಾರೂ ಬ್ರಾಹ್ಮಣರನ್ನು ಕರೆದುಕೊಳ್ಳದೇ ಹೋದರು. ಅಲ್ಲಿಂದ

ಗಾಡಿಯ ಮೇಲೆ ಕುಳಿತುಕೊಂಡು ನೆಟ್ಟಗೆ ಸಿದ್ಧಾಶ್ರಮಕ್ಕೆ ತೆರಳಿದರು. ಇತ್ತು ಮಠದಲ್ಲಿ ಶ್ರೀ ಸಿದ್ಧನಾಥರು ಮಧ್ಯಾನ್ನ ಹೊತ್ತಿಗೆ ಶಯ್ಯೆಯ ಮೇಲೆ ವಿಶ್ರಮಿಸುತ್ತಿರುವಾಗ ಅಕಸ್ಮಾತ್ತಾಗಿ ಎದ್ದು, ಸಮೀಪವಿದ್ದ ಶಿಷ್ಯರಿಗೆ - “ಬ್ರಹ್ಮಚೈತನ್ಯ ಸಂತರು ಇದೇ  ಈಗ ಬರುವರು,” ಎಂದು ಹೇಳಿ ಮುಂದೆ ಬಂದು ಮಾರ್ಗದ ಕಡೆಗೆ ನೋಡುವಾಗ, ಗಾಡಿಯಿಂದಿಳಿದು ಬರುತ್ತಿರುವ

ಮಹಾರಾಜರನ್ನು ಕಂಡು ಓಡುತ್ತ ಹೋಗಿ ಅವರಿಗೆ ದೃಢಾಲಿಂಗನವನ್ನು ಕೊಡುವಂಥವರಾದರು. ಆ ಕಾಲದಲ್ಲಿ ಇಬ್ಬರೂ

ಮಹಾತ್ಮರಿಗೆ ಅತ್ಯಂತ ಪ್ರೇಮವು ಉಕ್ಕಿ ಬರುವಂಥಾದ್ದಾಯಿತು. ಐಕ್ಯ ಭಾವದಿಂದ ಸಾಧು ಸಂತರೂಳಗೆ ಭೇಟಿಯಾಗುತ್ತಿರುವಾಗ,

ಆಗಿನ ಆನಂದವು ವರ್ಣಿಸಲಸಾಧ್ಯವು, ತ್ರಿಪುರ ಸಂಹಾರದ ಬಳಿಕ ಶಿವ ವಿಷ್ಣು ಇಬ್ಬರೂ ಪರಸ್ಪರ ಆಲಂಗಿಸಿದ ಪರಿ ಕಾಣಿಸಿತು. ಜೀವ ಶಿವ ಐಕ್ಯ ಆಗುವ ಸಮಯದಲ್ಲಿ ಯಾವ ಬ್ರಹ್ಮಾನಂದವು ಪ್ರಕಟವಾಗುವದೋ, ಅದೇ

ಆನಂದವು ಈಗ ಆ ಇಬ್ಬರು ಮಹಾತ್ಮರೊಳಗೆ ಅವಿರ್ಭಾವವಾಯಿತು. ಇಂಥಾ ಆನಂದದಲ್ಲಿ ತಲ್ಲೀನರಾಗಿ, ಈರ್ವರು ದೇಹ ಭಾವವನ್ನು ಮರೆತು, ಕಣ್ಣೊಳಗಿಂದ ಆನಂದಾಶ್ರುಗಳನ್ನು ಸುರಿಸುವಂಥವರಾದರು. ಬಹಳ ವರ್ಷಗಳ ವಿರಹದಿಂದ ಪ್ರಿಯಾ ಬಂಧುವಿಗೊಸ್ಕರ ತಳಮಳಿಸುತ್ತಿರುವಾಗ, ಅಕಸ್ಮಾತ್ತಾಗಿ ಪರಸ್ಪರ ಭೆಟ್ಟಿಯಾದರು ಎಂಥ ಆನಂದ ಉತ್ಪತ್ತಿಯಾಗುವದೋ ಅಂಥಾ ಆನಂದವು ಇವರೊಳಗೆ ಉತ್ಪನ್ನವಾಯಿತು. ಈ ಪ್ರಕಾರ ಒಬ್ಬರಿಗೊಬ್ಬರು ಆಲಂಗಿಸುತ್ತಿದ್ದಾಗ ಕ್ಷಣಮಾತ್ರ ವಿದೇಹ ಸ್ಥಿತಿಯೊಳಗಿದ್ದು, ಸರ್ವ ಜಗತ್ತನ್ನು ಮರೆತು ಬಿಟ್ಟರು. ಆ ಆನಂದಕೇಂದ್ರದಿಂದ, ಆನಂದ ಕಿರಣಗಳು ಪಸರಿಸಿ, ಅದರೊಳಗೆ ಅಲ್ಲಿದ್ದ ಭಕ್ತ ಜನರೆಲ್ಲರೂ ನಿಮಗ್ನರಾದರು. ಆ ಭಕ್ತರಾದರೂ ಪ್ರೇಮಾಶ್ರುಗಳನ್ನು ಸುರಿಸುವಂಥವರಾದರು. ತ್ರಿಭುವನದಲ್ಲಿಯೂ ಸರ್ವತ್ರ ಆನಂದವು ತುಂಬಿ ಮತ್ತೆ  ಉಳಿಯಿತು. ಕೂಡಲೇ ಪರಸ್ಪರ ನಮಸ್ಕಾರ ಮಾಡಿದರು.


ಆಗ ಬ್ರಹ್ಮ ಚೈತನ್ಯ ಮಹಾರಾಜರನ್ನು ಕೈಹಿಡಿದು, ಕರೆದುಕೊಂಡು ಬಂದು, ಸಿದ್ದಾರೂಡರು ತಮ್ಮ ಆಸನದ ಮೇಲೆಯೇ ಕೂಡ್ರಿಸಿ ತಾವು ಅವರು ಏಕಾಸನದಲ್ಲಿ ಕುಳಿತುಕೊಂಡರು. ಆಗ ಸದ್ಗುಣ ಖಣಿಯಾದ ಮಹಾರಾಜರು, ಸದ್ಗುರು ಸಿದ್ದಾರೂಡರನ್ನು ಕುರಿತು ಈ ಪ್ರಕಾರ ಅಮೃತವಾಣಿಯನ್ನು ನುಡಿಯುವಂಥವರಾದರು - “ಹೇ ಸದ್ಗುರು ಸಿದ್ಧಾರೂಢಸ್ವಾಮಿ, ಈ ದೇಹವು ಗೊಂದಾವಲೆ ಗ್ರಾಮದಲ್ಲಿರುತ್ತಿರುವದು. ಇದರ ಸ್ನೇಹಿತರಾಗಿರುವ ಕೆಲವು ದೇಹಗಳು ಈ ಗ್ರಾಮದಲ್ಲಿ ಇರುತ್ತಿದ್ದು, ಅವರ ಸಲುವಾಗಿ ಇದು ಇಲ್ಲಿಗೆ  ಬಂದಿರುವದು. ಆ ದೇಹಗಳು ಇದನ್ನು ಇಲ್ಲಿಗೆ ಕರಿಸಿದ್ದಕ್ಕಾಗಿ ಬಂದಿರುತ್ತದೆ; ಈಗ ತಮ್ಮ ದರ್ಶನಕ್ಕೆ ಪ್ರಾಪ್ತವಾಗಿ ಆನಂದ ಹೊಂದಿತು. ಈ ದೇಹವು ಸರ್ವಕಾಲ ರಾಮ ರಾಮ ಅನ್ನುತ್ತದೆ,

ಮತ್ತು ಮುಮುಕ್ಷುಗಳಿಗೂ ಅನ್ನಲಿಕ್ಕೆ ಹಚ್ಚುತ್ತದೆ. ಇದು ಯೋಗ್ಯವೋ ಹ್ಯಾಗೆ  ಎಂಬುದರ ವಿಷಯವಾಗಿ ನಿಮ್ಮ ಅಭಿಪ್ರಾಯವನ್ನು ಹೇಳಬೇಕಾಗಿರುತ್ತದೆ. ಈ ಪ್ರಕಾರವಾದ  ಮಧುರ ವಚನವನ್ನು ಕೇಳಿ, ಸಿದ್ದಾರೂಢರ  ಹೃದಯದಲ್ಲಿ ಬಹು ಆನಂದವಾಯಿತು. ಆಮೇಲೆ ಬ್ರಹ್ಮಚೈತನ್ಯ ಮಹಾರಾಜರನ್ನು ಕುರಿತು ಶ್ರೀ ಸಿದ್ದರು ಅನ್ನುತ್ತಾರೆ - “ಈ ಜಗತ್ತಿನೊಳಗೆ ನಾಮದ ಹೊರತು ಎರಡನೇ ಸುಖವೇ ಇರುವದಿಲ್ಲ. ಅದೇ ಎಲ್ಲ ಜೀವಿಗಳಿಗೆ ತಾರಕವಾಗಿರುತ್ತದೆ. ಈಶ್ವರನು ಸಹಾ ಅದೇ ಜಪಿಸುತ್ತಿರುವನು. ಈ ದುಃಖಮಯವಾದ ಸಂಸಾರದೊಳಗೆ ನಾಮ ಒಂದೇ ಸಾರಭೂತವಾಗಿದ್ದು, ಅದರಿಂದಲೇ ಆ ಸರ್ವೆಶ್ವರನು ಬಂಧಿಸಲ್ಪಟ್ಟು, ಭಕ್ತರ ಭಾರವನ್ನೆಲ್ಲಾ ಆತನೇ ವಹಿಸುತ್ತಿರುವನು. ನಾಮಕ್ಕಿಂತಲೂ ಹೆಚ್ಚಿನ ಸಾಧನವಿಲ್ಲ. ಇತರ ಎಲ್ಲವೂ ಬಂಧನಗಳೇ ಇರುತ್ತವೆ. ನಾಮದಿಂದಲೇ ಸರ್ವರಿಗೂ ತಾರಣವಾಗುತ್ತದೆ. ನಾನಾದರೂ ಅದನ್ನೇ ಜಪಿಸುತ್ತಿರುವೆನು, ಎಲ್ಲಾ ಭಕ್ತ ಜನರಿಗಾದರೂ ಅದನ್ನೇ  ಉಪದೇಶಿಸುತ್ತೇನೆ. ಶಿವರಾತ್ರಿಯ  ಉತ್ಸವ ಕಾಲದಲ್ಲಿ ನಾಮದ ಜಪವು ಅಹೋರಾತ್ರಿ ಏಳು ದಿನತನಕ ನಡೆಯುತ್ತಿರುವುದು. ರಾಮನಾಮವೇ ಸತ್ಯವೆಂದು ಅಖಿಲ ವೇದಾಂತವು ಗರ್ಜಿಸುತ್ತದೆ.

ಸರ್ವ ಭೂತಾಂತರ್ಗತನಾದ ಆತ್ಮಾರಾಮನಿಗೇ ರಾಮನೆಂಬ ನಾಮಧೇಯವು,  ಜನರ ಉದ್ಧಾರಾರ್ಥವಾಗಿ ತಮ್ಮ

ಅವತಾರವಿರುವದು, ನಾಮೋಪದೇಶದಿಂದಲೇ ಉದ್ಧಾರ ಮಾಡುತ್ತಿರುವಿರಿ. ಇದಕ್ಕೂ ಹೆಚ್ಚಿನ ಶ್ರೇಯಸ್ಕರವಾದ ಸಂತರ ಕಾರ್ಯವೇ ಇಲ್ಲ'' ಸದ್ಗುರು ಸಿದ್ಧಾರೂಢರ  ಮುಖದಿಂದ ಈ ಭಾಷಣವನ್ನು ಕೇಳಿ, ಬ್ರಹ್ಮ ಚೈತನ್ಯ ಮಹಾರಾಜರು ಬಹಳ ಆನಂದಭರಿತರಾದರು. ಭಕ್ತರಲ್ಲರೂ ಆನಂದದಿಂದ ಜಯಜಯಕಾರವನ್ನು ಘರ್ಜಿಸಿ ಆ ಇಬ್ಬರು ಮಹಾತ್ಮರ ಪಾದಕ್ಕೆ ಬೀಳುವಂಥವರಾದರು. ಆಗ ಸ್ತ್ರೀಯರು ಪಂಚಾಯತಿಗಳನ್ನು ತೆಗೆದುಕೊಂಡು ಬಂದು, ಸುಸ್ವರದಿಂದ ಮಂಗಲ ಪದಗಳನ್ನು ಹಾಡುತ್ತ, ಇಬ್ಬರಿಗೂ ಬೆಳಗಿದರು. ಎಲ್ಲರಿಗೂ ಅಪರೂಪವಾದ ಆನಂದ ಉಂಟಾಯಿತು. ಅನಂತರ  ಮಹಾರಾಜರಿಗೆ

ಹಸ್ತಹಿಡಿದು, ಸಿದ್ದ ಸದ್ಗುರುಗಳು ಮಠದೊಳಗೆ ಕರೆದುಕೊಂಡು ಹೋಗಿ, ಫಲಾಹಾರ ದ್ರವ್ಯಗಳನ್ನು ತಂದು ಅವರ ಮುಂದೆ ಇಡುವಂಥವರಾದರು. ಸದ್ಗುರುಗಳು ಸ್ವ ಹಸ್ತದಿಂದ ಬಾಳೆಹಣ್ಣು ಸುಲಿದು ಮಹಾರಾಜರ ಮುಖದಲ್ಲಿ ಹಾಕಿದರು.

ಒಬ್ಬರಿಗೊಬ್ಬರು ಈ ಪ್ರಕಾರ ಪರಸ್ಪರ ಪ್ರೇಮಗ್ರಾಸ ಹಾಕುತ್ತಾ, ಅವರು ಆನಂದದಲ್ಲಿ ರಮಿಸುತ್ತಿದ್ದರು. ಅನಂತರ ಬ್ರಹ್ಮಚೈತನ್ಯ ಮಹಾರಾಜರು ಸಿದ್ಧಾರೂಢ ನಿರೋಪವನ್ನು ಪಡೆದುಕೊಂಡು ಹೊರಟು ಹೋದರು.


ಆಗ ಸಚ್ಚಿದಾನಂದ ಶಾಸ್ತ್ರಿಯು  ಇವರನ್ನು ಕಂಡು, - 'ಹೇ ಸದ್ಗುರುವೇ ನಿನ್ನ ಅಂತವನ್ನು ಹರಿಹರರಾದರೂ ತಿಳಿಯಲಾರರು.  ಶ್ರೀ ಸಿದ್ಧಾರೂಢ ಯತಿಗಳಿಗೆ ಭೆಟ್ಟಿಯಾದಿರಿ, ನನಗೆ ಸಂತರ ಮಹಿಮಾ ತಿಳಿಯದು ಎಂದು ಸದ್ಭಾವದಿಂದ ನಿಮಗೆ ಕೇಳುತ್ತೇನೆ. ಸದ್ಗುರು ಸಿದ್ಧಾರೂಢರು ಹ್ಯಾಗಿರುವರು ಎಂಬ ವಿಷಯವನ್ನು ಕೃಪೆ ಮಾಡಿ, ನನಗೆ ಹೇಳಬೇಕಾಗಿ ಪ್ರಾರ್ಥಿಸುವೆನು,” ಎಂದು ನುಡಿದನು. ಅದಕ್ಕೆ ಮಂಗಳಧಾಮನಾಗಿಯೂ, ಯಾವತನ ಹೃದಯವು ರಾಮನೇ ತಾನಾಗಿಯೂ ಇರುವ ಆ ಮಹಾತ್ಮರು, -“ಜ್ಞಾನೋತ್ತಮರಾಗಿರುವ ಸಿದ್ಧಾರೂಢರ ರೂಪಿಂದ ಸಾಕ್ಷಾತ್ ಜ್ಞಾನೇಶ್ವರರೇ, ಅವತರಿಸಿದ್ದಾರೆ. ಪೂರ್ವದಲ್ಲಿ ಮಹಾರಾಷ್ಟ್ರ ದೇಶದಲ್ಲಿ ಅವತಾರವಾಯಿತು. ಈಗ ಕರ್ನಾಟಕ ದೇಶವನ್ನು ಉದ್ಧರಿಸುವದಕ್ಕೋಸ್ಕರ ಪ್ರತ್ಯಕ್ಷ ಜ್ಞಾನ ದೇವರೇ ಸಿದ್ದ ಯತೀಶ್ವರರೆಂಬ ನಾಮದಿಂದ ಜನ್ಮತೊಟ್ಟು ಬಂದಿದ್ದಾರೆ,'' ಎಂದು ಹೇಳಿದ ವಚನವನ್ನು ಕೇಳಿ, ಶಾಸ್ತ್ರಿಗೆ ಪರಮಾನಂದವಾಯಿತು. ಆಮೇಲೆ ಸುಗುಣನಾದ ಶಾಸ್ತ್ರಿಯು ಸಿದ್ಧಾಶ್ರಮಕ್ಕೆ ಬಂದು, ಸಿದ್ದಾರೂಡರಿಗೆ ವಂದಿಸಿ, -“ಹೇ ಸಿದ್ಧಾರೂಢ ಯತಿರಾಯರೇ, ನಿಮ್ಮ ದರ್ಶನಕ್ಕೆ ಬ್ರಹ್ಮ ಚೈತನ್ಯ ಮಹಾರಾಜರು ಬಂದಿದ್ದರು, ಅವರ ಮಹಿಮಾ 

ಹ್ಯಾಗಿದೆಯೆಂಬುದನ್ನು ಅಜ್ಞ ಭಾವದಿಂದ ಪ್ರಾರ್ಥಿಸುತ್ತಿರುವ ನನಗೆ ನಿರೂಪಿಸತಕ್ಕದ್ದು, ಯಾಕೆಂದರೆ, ಸಂತರ ಹೃದಯವನ್ನು ಸಂತರೆ ಬಲ್ಲರು. ಹೊರತು ನಮ್ಮಂಥವರಿಗೆ ಅವರ ಅಂತಃಸ್ಥಿತಿ ತಿಳಿಯದು, ಎಂದು ನಾನು ವಿಚಾರಿಸುವಂಥಾದ್ದಾಗಿರುತ್ತದೆ,'' ಎಂದು ಪ್ರಶ್ನೆ ಮಾಡಿದ್ದಕ್ಕೆ, ಸಿದ್ದರಾಯರು - ''ಇವರು ರಾಮದಾಸರೇ  ಬ್ರಹ್ಮಚೈತನ್ಯ ಎಂಬ ಹೆಸರಿನಿಂದ ಈ ಪೃಥ್ವಿಯ ಮೇಲೆ ಅವತರಿಸಿರುತ್ತಾರೆಂದು ನಾನು ತಿಳಿಯುವೆನು. ಮುಮುಕ್ಷು ಜನರ ಪುಣ್ಯವೇ ಒಟ್ಟುಗೂಡಿ ಈ ನಿರ್ಮಲವಾದ ದೇಹವು ನಿರ್ಮಿಸಲ್ಪಟ್ಟಿದೆ.” ಎಂಬ ಈ ಪ್ರಬಲವಾದ ವಾಕ್ಯವನ್ನು ಚಿತ್ರೈಸಿ , ಶಾಸ್ತ್ರಿಗೆ  ಅತ್ಯಂತ ಆನಂದವಾಯಿತು. ಇಂಥ ಅಗಾಧವಾದ ಸಂತರ ಮಹಿಮೆಯನ್ನು ಶ್ರವಣ ಮಾಡುವದರಿಂದ ಚಿತ್ತ ಶುದ್ಧಿಯಾಗಿ, ಆಮೇಲೆ ಗುರುಪ್ರಸಾದದಿಂದ ಅಂತಃಕರಣದಿಂದ ಜ್ಞಾನವು ಉದಯವಾಗುವದು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ತಮ್ಮಣ್ಣಶಾಸ್ತ್ರಿಗೆ ಸಿದ್ಧರ ಬೋಧನೆಯ ನಾಮಜಪದಿಂದ ಶ್ರೀರಾಮ ದರ್ಶನವಾದದ್ದು. ಸಿದ್ಧರಾಯರ ಅನುಗ್ರಹದಿಂದ 13ಕೋಟಿ ರಾಮ ಜಪ ಮಾಡಿಸಿ ಸಾವಿರ ಸಾವಿರ ಜನಕ್ಕೆ ಪ್ರಸಾದ ಕೊಟ್ಟಿದು

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ