ಕೆಲ ದ್ವೇಷಿಗಳು ಸಿದ್ಧಾರೂಢರನ್ನು ಮುಗಿಸಲು ಷಡ್ಯಂತ್ರ

 ಕವದಿಮಠದಲ್ಲಿ ಸಿದ್ಧನನ್ನು ಮುಗಿಸಲು ಷಡ್ಯಂತ್ರ ಭೋದನೆ 🌷



ಸಿದ್ಧನು ಸಾಕ್ಷಾತ್ ಪರಶಿವನಾಗಿರುವನು. ಬಂದು ನಮ್ಮ ಹಸಿವು ಹಿಂಗಿಸಿ ಧನ್ಯತೆ ಮಾಡಿದನು  ಅಂತಾ ಹೊಗಳುತ್ತಾ ಹೋಗುತ್ತಿದ್ದರು. ಪ್ರತಿನಿತ್ಯ ಅನ್ನದಾಸೋಹ ನಡೆದದ್ದು ದೇಶದ ಉದ್ದಗಲಕ್ಕೂ ವ್ಯಾಪಿಸಿತು. ಇದರಿಂದ ಪ್ರಸಾರವಾದ ಸಿದ್ದನ ಕೀರ್ತಿಯನ್ನು ಸಹಿಸಲಾರದ ಕೆಲ ಜನರು, ತಮ್ಮ ತಮ್ಮಲ್ಲಿ  ಗುಣಗುಟ್ಟುತ್ತಾ ಈ ಸಿದ್ಧನು  ಬಡಿತಕ್ಕೆ ಬಗ್ಗಲಾರನು. ಈತನನ್ನು ಮುಗಿಸಿಬಿಡಬೇಕು. ಈತನ ಹತ್ಯೆ ಮಾಡಿದಲ್ಲಿ ಬಹಿರಂಗ ಪ್ರಚಾರದಿಂದ ಸತ್ವಹೀನವಾದ ಪಂಚಾಕ್ಷರಿ ಮಂತ್ರಕ್ಕೆ ಪುನರಪಿ ಸತ್ವಯುತವಾಗುವದು ಅಂತಾ ಯೋಚನೆ ಮಾಡತೊಡಗಿದರು. ದುಷ್ಟಯೋಜನಾ ಕಂಕಣಬದ್ಧರಾದ ನಾಲ್ವರು ಒಂದು ಅಮಾವಾಸ್ಯೆಯ  ಕಗ್ಗತ್ತಲಲ್ಲಿ ಸಿದ್ದಾಶ್ರಮಕ್ಕೆ ಆಗಮಿಸಿ ಕೈಮುಗಿದು, ಹೇ ಸದ್ಗುರುವೇ, ಕವದಿ ಮಠದಲ್ಲಿ ಅನ್ನಸಂತರ್ಪಣೆ ನೆರವೇರಿಸಲಾಗಿದೆ. ತಮ್ಮ ಅಮೃತ ಹಸ್ತದಿಂದ ಅನ್ನಪ್ರಸಾದ ವಿತರಣೆಯ  ಉದ್ಘಾಟನಾ ಕಾರ್ಯಕ್ರಮ ಮಾಡಬೇಕೆಂದು ಸಂಕಲ್ಪ ಮಾಡಿದ್ದೇವೆ. ತಮ್ಮನ್ನು ಕರೆದೊಯ್ಯಲು ಬಂದಿದ್ದೇವೆ. ಸರ್ವರಲ್ಲಿ ಸಮಭಾವನೆಯುಳ್ಳ ಸಾಧು ಶಿರೋಮಣಿ ಸಿದ್ಧಾರೂಢರು ಅವರ ಜೊತೆಗೆ ನಡೆದರು. ಹೋಗುವಾಗ ಹೊರಗಿದ್ದ ಭಕ್ತರನ್ನು ಕುರಿತು, ಹೇ ಭಕ್ತನೇ ಈಗ ಇಲ್ಲಿಗೆ ಭಕ್ತರು ಬರುವ ಸಮಯ. ನಾನು ಕೌದಿ ಮಠಕ್ಕೆ ಅನ್ನ ಪ್ರಸಾದಕ್ಕಾಗಿ ಹೋಗಿರುವೆ ಅಂತ ತಿಳಿಸಬೇಕು. ನಾನು ಮರಳುವವರೆಗೆ ನೀನು ಇಲ್ಲಿಯೇ ಕೂತಿರ ಬೇಕು ಅಂತಾ ಹೇಳಿದರು. ಮೊದಲಿಗೆ ಮೋಸತನದಿಂದ ಅರಗಿನ ಮನೆಗೆ ಪಾಂಡವರನ್ನು ಕರೆದೊಯ್ವ ತೆರದಿ, ಸಿದ್ದಾರೂಢರನ್ನು ಮೋಸಮಾಡಿ ಕೌದಿ ಮಠಕ್ಕೆ ತಂದಂತಾಯಿತು.


ಕೌದಿಮಠವನ್ನು ತಲುಪಿದ ಕೂಡಲೇ ಅನ್ನ ಪ್ರಸಾದದ ವ್ಯವಸ್ಥೆ ಇಲ್ಲದ್ದನ್ನು ಗಮನಿಸಿ ತನ್ನಲ್ಲಿ ತಾನು ಈಗ ಏನೋ ಘಾತಕ ಕಾರ್ಯದ  ಯೋಜನೆ ಇದಾಗಿರಬಹುದು. ಪ್ರಾರಬ್ಧ ಇದ್ದಂತಾಗಲಿ ಅಂತಾ ನೆನೆಯುತ್ತಾ ಆ ನಾಲ್ವರನ್ನು ಕುರಿತು ಏನ್ರಯ್ಯಾ, ಇಲ್ಲಿ ದೀಪಗಳೇ ಇಲ್ಲ. ಅನ್ನ ಸಂತರ್ಪಣೆ ಅಂತಾ ಇದೇನು  ಮೂಸತನವು ಅಂತ  ಸಿದ್ಧನು  ನುಡಿಯಲು, ಆ ನಾಲ್ವರು, ಹೇ ಲಿಂಗವಿಲ್ಲದ ನೀಚಾ , ಭವಿಯೇ  ತ್ರಿಕಾಲಜ್ಞಾನಿಯಾದ ನಿನಗೆ ನಮ್ಮ ಇಂಗಿತದ ಜ್ಞಾನ ಆಗಾಗಲಿಲ್ಲವೇ ಛಿ ಮಂಗನೇ  ನಿನ್ನ ಅಂಗಾಂಗಗಳನ್ನು ತುಂಡು ತುಂಡು ಮಾಡಿ ಮೃತ್ಯುದೇವತೆ ಉಣಬಡಿಸುವ ಅನ್ನಸಂತರ್ಪಣೆ ಇದಾಗಿದೆ. ಕಾರಣ ನಿನ್ನನ್ನು ಈ ಮಠಕ್ಕೆ ಕರೆತಂದಿದ್ದೇವೆ  ಅಂತಾ ಗಹಗಹಿಸಿ ವ್ಯಂಗ್ಯ ಮಾಡಿದರು. ಅದಕ್ಕೆ ಅಂಜದೆ  ಸಿದ್ದನು ಅವರನ್ನು ಕುರಿತು ಹೇ, ಸಜ್ಜನರೇ, ನಿಮ್ಮ ಈ ಸತ್ಕಾರ್ಯ ಭರದಿಂದ ಸಾಗಲಿ, ನರಕಮಯವಾದ ಈ ನನ್ನ ದೇಹವನ್ನು ಕತ್ತರಿಸಿ ಮೃತ್ಯುವಿಗೆ ನೀವು ಅರ್ಪಿಸಿದರೆ ನಾನೆ ಧನ್ಯನು ಧನ್ಯನು ಅಂತಾ ಶಿವನ ಧ್ಯಾನದಲ್ಲಿ ಸಿದ್ಧನು ಮಗ್ನನಾದನು.  ಆ ನಾಲ್ವರು ಹೊರಗೆ ಹೋದರು. ಸಂದಿಯಲ್ಲಿಂದ ಸೆರೆ ಕುಡಿದು ಪಾನಮತ್ತರಾಗಿ ಸಿದ್ಧನನ್ನು ಕೊಲ್ಲಬೇಕೆಂದು ಬಂದ ಈರ್ವರು ತಮ್ಮ ಕೈಗಳಲ್ಲಿಯ  ಕೋಲುಗಳನ್ನು ಎತ್ತುವಾಗ ಭಯಂಕರ ಆಶ್ಚರ್ಯ ಸಂಗತಿಯಾಯಿತು. ಭುಸ್ ಭುಸ್ ಎಂದು ಭುಸುಗುಟ್ಟುತ  ಬಂದ ಘಟಸರ್ಪ ತನ್ನೆಲ್ಲ  ಶಕ್ತಿಯಿಂದ ಅವರಲ್ಲಿಯ  ಓರ್ವನನ್ನು ಕಚ್ಚಿ ಹೋಯಿತು. ಈಗ ಅಯ್ಯಯ್ಯೋ  ಏನಿದು ನಾನು ಸತ್ತೆ ಅಂತಾ ಅಂಗಾತ ಬಿದ್ದನು. ಕತ್ತಲಲ್ಲಿ ಕಾಣದೇ ಇದ್ದುದರಿಂದ ಇನ್ನೊಬ್ಬನು ಸರ್ಪ ಕಡಿಸಿಕೊಂಡು ಅಂಗಾತ ಬಿದ್ದ ಈತನೇ ಸಿದ್ದನೆಂದುಭಾವಿಸಿ ಅವನ ಎದೆಯ ಮೇಲೆ ಕೂತು ಕುತ್ತಿಗೆಯನ್ನು ಹಿಚುಕತೊಡಗಿದನು. ಆಗ ಆ ನೋವಿಗೆ ಆತನು, ನಾನು ತಳವಾರ ಭೀಮ ಎಂದ ಕೂಡಲೇ ಹಾಗೂ ಹೊರಗೆ ಯಾರೋ ಬಂದಂತೆ ಸಪ್ಪಳ ಕೇಳಿ, ಆತನು ಪಲಾಯನಗೈದನು.


ಅತ್ತ ಸಿದ್ಧಾಶ್ರಮದಲ್ಲಿ ಬಂದ ಭಕ್ತರು ಸ್ವಾಮಿಗಳು ಕಾಣದಾದ್ದರಿಂದ ಅಲ್ಲಿ ಕೂತ ಭಕ್ತನನ್ನು ಕೇಳಿದರು. ಕೌದಿಮಠಕ್ಕೆ ಭೋಜನಕ್ಕೆ ಹೋದದ್ದನ್ನು ಕೇಳಿದರು. ಅಪರಾತ್ರಿಯಲ್ಲಿ ಸ್ವಾಮಿಗಳನ್ನು ಕರೆದುಕೊಂಡು ಹೋಗಿದ್ದುದು ಘಾತವಾಯಿತು ಅಂತಾ ಅನುಮಾನಗೊಂಡು, ದೀವಟಿಗೆಗಳನ್ನು ತೆಗೆದುಕೊಂಡು ಧಾವಿಸಿದರು. ಕೌದಿಮಠ  ಸಮೀಪಿಸಲು ಆರ್ತನಾದ ಕೇಳತೊಡಗಿದರು. ಸರ್ಪ ಕಡಿಸಿಕೊಂಡು ಸ್ವಾಮಿಯ  ಬದಿಗೆ ಬಿದ್ದ ದುರಾತ್ಮನು ಅಳುತ್ತಾ ಸ್ವಾಮಿಯನ್ನು ಕೊಲ್ಲಲು ಬಂದ ಕತ್ತೆ ನಾನು. ಸತ್ತು ಹೋಗುವಂತೆ ನಿನ್ನ ಗತಿಯಾಯಿತು. ಅಯ್ಯೋ ನಾನು ಅಪರಾಧಿ ತಪ್ಪಾಯಿತು. ಜಗದುದ್ಧಾರದ  ಸಾಕಾರ ಮೂರ್ತಿಯನ್ನು ಹೊಡೆಯಬಹುದೆ? ಅನ್ಯಾಯ ಮಾಡಲು ಬಂದ ನನಗೆ ಸರ್ಪ ಕಚ್ಚಿತು. ಈ ಬಾಧೆಯನ್ನು ತಾಳಿಕೊಳ್ಳಲಾರೆ, ಹಾಯ್ ಹಾಯ್ ಅಯ್ಯೋ ಅಂತಾ ಗೋಳಾಡುತ್ತಿದ್ದುದನ್ನು ಕೇಳುತ್ತಾ ಭಕ್ತರು ದುಃಖತಪ್ತರಾಗಿ ಗಾಬರಿಯಿಂದ ಕೌದಿಮಠದ ಒಳಗೆ ಪ್ರವೇಶಿಸಿದರು. ಪರಶಿವನ ಧ್ಯಾನದಲ್ಲಿ ನಿರ್ವಿಕಲ್ಪ ಸಮಾಧಿಸ್ಥರಾಗಿ ಕುಳಿತ ಸಿದ್ಧನನ್ನು ಆತನ ಸಮೀಪ ನೆರಳುತ್ತಾ ಬಿದ್ದಿರುವಾತನನ್ನು ಕಂಡರು. ನೆರಳುತ್ತಿದ್ದವನು ವೃತ್ತಾಂತವನ್ನು ಹೇಳುತ್ತಾ ಭೋರೆಂದು ಅಳತೊಡಗಿದನು. ಈಶನ ಅಗಾಧವಾದ ಮಹಿಮೆಯನ್ನು ಕೇಳಿ  ಹರ್ಷೋಲ್ಲಾಸಗಳಿಂದ ಭಕ್ತರು ಸಿದ್ಧನ ಪಾದಪದ್ಮಗಳಲ್ಲಿ  ವಂದಿಸಿದರು. ಶಿವನಾಮ ಸ್ಮರಣೆ, ಭಜನೆ ಮಾಡುತ್ತಾ ಇರುವಲ್ಲಿ ನಿರ್ವಿಕಲ್ಪ ಸಮಾಧಿ ಉತ್ಥಾನವಾಯಿತು. ಸಿದ್ಧನು  ಕಣ್ಣು ತೆರೆದು ನೋಡಲು ಭಕ್ತರ ಭಜನೆ ಕೇಳುತ್ತಾ  ಸಂತಸಭರಿತನಾದನು. ಈಗ ಎಲ್ಲರೂ ಎದ್ದುನಿಂತು ನತಮಸ್ತಕರಾಗಿ ಪ್ರಾರ್ಥಿಸುತ್ತಾ, ಸ್ವಾಮಿಗಳೇ ತಮ್ಮ ಆಶ್ರಮಕ್ಕೆ ಹೋಗೋಣ ಅಂತ ಕೇಳಿಕೊಂಡರು. ನರಳುತ್ತಾ ಬಿದ್ದಿರುವ ಈತನನ್ನು ಹೀಗೆಯೇ ಬಿಟ್ಟು ಹೋಗುವುದು ಸರಿ ಕಾಣಲಾರದು. ಈತನನ್ನು ಎಬ್ಬಿಸಿ ಬರುವೆ ತಡೆಯಿರಿ ಅಂತ ಸಿದ್ಧನು  ಹೇಳುತ್ತಾ ಶಿವಪಂಚಾಕ್ಷರಿ ಮಂತ್ರವನ್ನು ಉಚ್ಚರಿಸುತ್ತಾ ಅಭಯ ಹಸ್ತವನ್ನು ಆತನ ಮೈ ಮೇಲಾಡಿಸಿದನು. ಕೂಡಲೇ ಆತನು ಹರಹರಾ ಎನ್ನುತ್ತ ಎದ್ದು ಸಿದ್ಧನ ಪಾದಕಮಲಗಳಲ್ಲಿ ವಂದನೆಗಳನ್ನು ಅರ್ಪಿಸುತ್ತಾ ನನ್ನ ಅಪರಾಧವನ್ನು ಮನ್ನಿಸಬೇಕೆಂದು ಪ್ರಾರ್ಥಿಸಿದನು. ಪರಮ ಕರುಣಾಕರ ಮಹಾಮಹಿಮಾಶಾಲಿ ಸಿದ್ದನು ಆತನಿಗೆ ಆಶೀರ್ವದಿಸಿ, ಅಲ್ಲಿಂದ ಭಕ್ತರನ್ನು ಕರೆದುಕೊಂಡು ತಮ್ಮ ಮಠಕ್ಕೆ ಆಗಮಿಸಿದನು.


ಸ್ವಾಮಿ  ಸೇವೆಯ ಭದ್ರತಾ ವ್ಯವಸ್ಥೆ 🌺


ಮಾರನೇ ದಿನ ಬಂದಂತಹ ಸರ್ವ ಭಕ್ತರು ರಾತ್ರಿ ನಡೆದ ಘಟನೆಯನ್ನು ಕೇಳುತ್ತಲೇ ರೋಮಾಂಚನಗೊಂಡರು. ಸಿದ್ಧಾರೂಢರ ಕೀರ್ತಗೆ  ಮಾತ್ಸರ್ಯಪಡುವ ಜನರು ಮುಂದೆಯಾದರೂ ಅಪಾಯ ಮಾಡಲು ಹಿಂಜರಿಯಲಾರರು. ಸಿದ್ಧನ ಬೋಧಾಮೃತದಿಂದ ನಾವೆಲ್ಲರೂ ಧನ್ಯತೆ ಪಡೆಯುವ ಕಾಲ ಸನ್ನಿಹಿತವಾದಗ  ಇಂತಹ ಘಟನೆಯು  ನನಗೆ ದಿಗ್ಭ್ರಮೆನ್ನುಂಟು ಮಾಡಿದೆ. ಈ ಮಹಾಮಹಿಮನ ಸೇವೆ ಮಾಡಲು ರಾತ್ರಿ ಹಗಲು ನಾವು ವ್ಯವಸ್ಥೆ ಮಾಡೋಣ. ಈತನ ಭದ್ರತೆಯ  ಸೇವಾ ಅತಿ ಮಹತ್ವದ್ದು. ಸದಾಕಾಲ ಈ ಕಾರ್ಯದಲ್ಲಿ ನ್ಯೂನತೆಯಾಗಬಾರದು ಅಂತ ಗಂಭೀರವಾದ ಚಿಂತನ ಮಂಥನವಾಗತೊಡಗಿತು. ಕೂಡಲೇ ಗೂಗಿ ಚನ್ನಮಲ್ಲಪ್ಪನು  ಎದ್ದು ನಿಂತು, ನಾನು ಸದಾಕಾಲ ಈ ಸ್ವಾಮಿಯ ಬಳಿಯಲ್ಲಿಯೇ ಇದ್ದುಕೊಂಡು ಅವರ ಆಜ್ಞೆಯಂತೆ ಭದ್ರತಾ ಕಾರ್ಯವನ್ನು ನಿರ್ವಹಿಸುವೆ  ಅಂತ ಹೇಳಿದನು. ಈ ಮಹೋತ್ತನ ಸೇವೆ ಮಾಡಲು ಕಂಕಣಬದ್ಧನಾದುದನ್ನು ಕಂಡು ಕೂಡಿದವರೆಲ್ಲರೂ ಹರ್ಷಭರಿತರಾದರು. ಶುದ್ಧ ಮನದಿಂದ ಸೇವೆ ಮಾಡುವಾತನಿಗೆ ಮುಕ್ತಿಯು ದೊರೆಯುತ್ತದೆ. ಈತನು ಪರಮ ಸುಕೃತನು ಅಂತಾ ಗೂಗಿ ಚನ್ನಮಲ್ಲಪ್ಪನ  ಬಗ್ಗೆ ಕೊಂಡಾಡಿದರು. ಮತ್ತು ಆತನಿಗೆ ಸ್ವಾಮಿಗಳ ಅಮೃತಹಸ್ತದಿಂದ ಸನ್ಯಾಸ ದೀಕ್ಷೆಯನ್ನು ಕೊಡಿಸಿದರು. ಆತನು ಅಲ್ಲಿಯೇ ವಾಸ ಮಾಡುತ್ತಾ ಕಾಲದಲ್ಲಿಯೂ ಸಿದ್ಧನ ಅಂಗಸೇವೆ, ಸ್ಥಾನಸೇವೆಯಲ್ಲಿ ಕಾಲ ಕಳೆಯತೊಡಗಿದನು.


ನಿತ್ಯವೂ ಮಠಕ್ಕೆ ಬರುವವರ ಸಂಖ್ಯೆ ಹೆಚ್ಚಾಗತೊಡಗಿತು. ಪ್ರತಿನಿತ್ಯ ಶಿವನಾಮ ಸ್ಮರಣೆ ಭಜನೆ ಶಾಸ್ತ್ರ ಶ್ರವಣ ಅವ್ಯಾಹತ ನಡೆಯತೊಡಗಿದವು. ಬಡವ ಬಲ್ಲಿದ, ಉಚ್ಚ ನೀಚ ಜಾತಿ ಭೇದಭಾವವಿಲ್ಲದೆ ಸರ್ವ ಜಾತಿ, ಮತ, ಪಂಥದವರು ಬರುತ್ತಾ ಸಮಾನತೆಯಿಂದ ಶ್ರವಣ ಮಾಡುತ್ತಿಲಿದ್ದರು. ಹೀಗಿರುವಾಗ ಒಂದು ದಿನ ಓರ್ವನು ಸ್ವಾಮಿಗಳಲ್ಲಿ ವಂದಿಸುತ್ತಾ 'ಹೇ ಸದ್ಗುರುವೆ, ಪರಮ ಜ್ಞಾನಿಗೆ ಪ್ರಾಪಂಚಿಕ ವಿಷಯದಲ್ಲಿ ಇಚ್ಛೆ ಇರುವದೋ ಇರುವುದಿಲ್ಲವೋ' ಎಂದು ಪ್ರಶ್ನಿಸಿದನು. ಅದಕ್ಕೆ ಸ್ವಾಮಿಗಳು, ಅಯ್ಯಾ ಭಕ್ತನೇ ಕೇಳಿ, ಬಾಲಕರು ಆಟ ಪ್ರಾರಂಭಿಸಿದಾಗ ಒಬ್ಬನು ಕಿರಾಣಿ ಅಂಗಡಿ ಹಚ್ಚಿರುತ್ತಾನೆ. ಮತ್ತೊಬ್ಬನು ವಸ್ತ್ರದ ಅಂಗಡಿ, ಇನ್ನೊಬ್ಬನು ವಿವಿಧ ವಸ್ತುಗಳ ಅಂಗಡಿ ಹಚ್ಚುವನು. ಆ ಎಲ್ಲ ಅಂಗಡಿಗಳಲ್ಲಿ ಸಾಮಾನುಗಳೆಂದರೆ, ಉಸುಕು, ಮಣ್ಣು, ಕಲ್ಲಿನ ತುಕಡಿಗಳಿಗೆ ಜೋಳ, ಅಕ್ಕಿ, ಕಿರಾಣಿ ಪದಾರ್ಥ ಸೀರೆ, ಕುಬಸ ಇತ್ಯಾದಿಗಳೆಂದು  ಹೇಳುತ್ತಾ ಅವುಗಳಿಗೆ ಬೆಲೆ ತಿಳಿಸುತ್ತಾ ಇರುವುದನ್ನು ಕೇಳುವ ಗಿರಾಕಿಗಳಾದ ಕೆಲ  ಬಾಲಕರು ಹಂಚಿನ  ತುಕಡಿಗಳನ್ನು ದುಡ್ಡು ಅಂತ ಹೇಳಿ ಅವುಗಳನ್ನು ಕೊಟ್ಟು ಆ ಅಂಗಡಿ ಸಾಮಾನುಗಳನ್ನು ಸಾಮಾನು ಖರೀದಿ ಮಾಡುವರು. ನಂತರ ಅವುಗಳಿಂದ ಭೋಜನವನ್ನು ತಯಾರಿಸಿ ಹಬ್ಬದ ಊಟವೆಂದು ವಿನೋದದಿಂದ ಬಾಯಿ ಚಪ್ಪರಿಸುವರು. ಆ ಬಾಲಕರಿಗೂ ಗೊತ್ತು. ಇದೆಲ್ಲ ಸುಳ್ಳು ಅಂತಾ ಆದರೆ ಆ ಪ್ರಕಾರ ವಿನೋದದ ಆಟವಾಡಿ, ಸಾಕಾದ ಕೂಡಲೇ ಅವುಗಳನ್ನು ಚೆಲ್ಲಿ ಓಡುವರಲ್ಲವೆ . ಇದೇ  ಪ್ರಕಾರ ಪರಮ ಜ್ಞಾನಿಯಾದವನು, ತೋರತಕ್ಕ ನಾಮರೂಪ ಪ್ರಪಂಚದೊಡನೆ ವಿನೋದದಿಂದ ಆಟವಾಡುವನು. ಜ್ಞಾನಿಯ ಪ್ರಾಪಂಚಿಕ ಕ್ರಿಯೆಗಳೆಲ್ಲ  ತೋರಿಕೆ ಅಂತಾ ತಿಳಿದುಕೋ ಎಂದು ಉತ್ತರಿಸಿದರು. ಇದನ್ನು ಕೇಳಿ ಎಲ್ಲರೂ

ಆನಂದಪಡುತ್ತಾ ತಮ್ಮ ತಮ್ಮ ಮನೆಗೆ ತೆರಳಿದರು.

ಮುಂದೆ ಸಿದ್ಧಾರೂಢರು ಹುಬ್ಬಳ್ಳಿಲ್ಲಿ ಇದ್ದು ಮಾಡಿದ ಅನೇಕ ಅದ್ಭುತ ಲೀಲಾಕಥೆ ಇವೆ  ಓದಿ.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಹರಿಹರ ಮತ್ತು ಸರಸ್ವತಿ ದಂಪತಿಗಳನ್ನು ಹುಲಿಯಿಂದ ಸದ್ಗುರುಗಳು ಕಾಡಿನಲ್ಲಿ ರಕ್ಷಿಸಿದರು.

ಎಲ್ಲಾ  ಕಥೆಗಳ ಲಿಂಕಗಳು 

👉ಸಿದ್ಧಾರೂಢ ಭಾಗವತ ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ