ಪರಶುರಾಮಪಂತನು ರೋಣಕ್ಕೆ ಹೋಗುವಾಗ ಟಿಕೀಟು ತಂದು ಕೊಟ್ಟರು. ದಾರಿಯಲ್ಲಿ ಸಿದ್ಧರು ಬಂದು ಅವರಿಗೆ ಉಪಚಾರ ಮಾಡಿದ ಅದ್ಭುತ ಕಥೆ,

 🍀ಪರಶುರಾಮಪಂತನು ರೋಣಕ್ಕೆ ಹೋಗುವಾಗ ಸದ್ಗುರುಗಳು ಟಿಕೀಟು ತಂದು ಕೊಟ್ಟರು. ದಾರಿಯಲ್ಲಿ ಸಿದ್ಧರು ಬಂದು ಅವರಿಗೆ ಉಪಚಾರ ಮಾಡಿದ ಅದ್ಭುತ ಕಥೆ,




ಪರಶುರಾಮಪಂತನೆಂಬ ಗೃಹಸ್ಥರು ಹುಬ್ಬಳ್ಳಿಯೊಳಗೆ ಇರುತ್ತಿದ್ದನು. ಆತನು ಒಮ್ಮೆ ಸಿದ್ದಾರೂಢರ  ಮುಂದೆ ಬಂದು ನಿಂತು, ಕರದ್ವಯಗಳನ್ನು ಜೋಡಿಸಿ ಅಂದದ್ದೇನೆಂದರೆ, - "ನಾನು ಒಬ್ಬ ದೀನನಾದ ಪಾಮರನಿರುತ್ತೇನೆ ; ಸಂಸಾರದಿಂದ ಬಹಳ ತಾಪ ಹೊಂದಿದೆನು. ಯಾವ ಯಾವ ಸ್ಥಾನಕ್ಕೆ ಹೋದಾಗ್ಯೂ ನನ್ನ ತಾಪವನ್ನು ಶಾಂತಪಡಿಸುವವರನ್ನು ಕಾಣದೆ, ಕಟ್ಟಕಡೆಗೆ, ಹೇ ದೀನನಾಥನೇ ನಿನ್ನ ಪಾದಕ್ಕೆ ಪ್ರಾಪ್ತನಾಗಿರುತ್ತೇನೆ. ನೀನು ದೀನೋದ್ಧಾರಕನಿರುತ್ತಿ. ನಿನಗೆ ಶರಣು ಬಂದಂಥಾ ಸರ್ವ ಭಕ್ತರಿಗೆ ಜ್ಞಾನೋಪದೇಶವನ್ನು ಮಾಡಿ, ತಾರಣ ಮಾಡುತ್ತಿ, ಎಂದು ವಿಶೇಷ ಕೀರ್ತಿಯನ್ನು ನಾನು ಕೇಳಿರುವೆನು. ನೀನೇ  ನನ್ನ ರಕ್ಷಣಕರ್ತನಾಗಬೇಕಾಗಿ ನಿನ್ನ ಚರಣಗಳಲ್ಲಿ ಮಸ್ತಕವನ್ನಿಟ್ಟು ಬೇಡಿಕೊಳ್ಳುವೆನು. ಹೇ ಗುರುನಾಥನೇ, ಈ ದೇಹಾಂತ್ಯದವರಿಗೂ ನಿನ್ನ ಸೇವೆಯನ್ನು ಪ್ರೇಮದಿಂದ ಮಾಡುತ್ತಿರುವೆನು.” ಇಂಥಾ ದಿನ ವಚನವನ್ನು ಕೇಳಿ ಸದ್ಗುರುಗಳು ಅಮೃತವಾಣಿಯಿಂದ - “ ಬಾರಪ್ಪ ಭಕ್ತರಾಯಾ,'' ಎಂದು ಕರೆದು ಸಮೀಪದಲ್ಲಿ ಕೂಡ್ರಿಸಿಕೊಂಡು, ಪರಶುರಾಮಪಂತನ ಕರ್ಣದಲ್ಲಿ ತಾರಕ ಮಂತ್ರವನ್ನು ಉಪದೇಶಿಸಿ - '' ಹೇ ಭಗವದ್ಭಕ್ತನೇ, ನೀನು ಸಂಸಾರದೊಳಗಿಂದ ಮುಕ್ತನೇ ಆಗಿರುತ್ತಿ. ಇಂದಿನಿಂದ ಸಂಸಾರ ಉಪಾಧಿಯು  ನಿನ್ನನ್ನು ಎಂದಿಗೂ ಪೀಡಿಸಲಾರದು. ಇನ್ನು ಸಂಸಾದೊಳಗೆ ಇದ್ದರೂ ನೀನು ಪಾವನನಾದಿ ಹೋದಿ, ಎಂದು ತಿಳಿ, ಸದ್ಗುರು ಚರಿತ್ರೆಯನ್ನು ದೇಶ ದೇಶಗಳಲ್ಲಿಯ ಜನರಿಗೋಸ್ಕರ ಪ್ರಚಾರಪಡಿಸಿ, ಅವರನ್ನು ಬೋಧಮಾತ್ರದಿಂದ ಉದ್ಧರಿಸವ ಕಾರ್ಯವು ನಿನಗೆ ಒಪ್ಪಿರುತ್ತದೆ.” ಈ  ಪ್ರಕಾರ ಸದ್ಗುರುನಾಥರು ಅಂದು, ಆತನ ಮಸ್ತಕದ  ಮೇಲೆ ತಮ್ಮ ಹಸ್ತವನ್ನು ಇಟ್ಟರು. ಪರಶುರಾಮಪಂತನು ಎದ್ದು ನಿಂತ ಕೂಡಲೇ ಅವನ ಮುಖದ ಮೇಲೆ ತೇಜವು ಕಾಣಿಸಿತು. ಗುರು ಹಸ್ತವು  ಮಸ್ತಕಕ್ಕೆ ಸ್ಪರ್ಶಿಸಿದ ಕ್ಷಣವೇ ಆ

ಸಜ್ಜನನಾದ ಪರಶುರಾಮಪಂತನು, ಸಕಲ ಕಲಾ ಸಂಪನ್ನನಾಗಿಯೂ, ಮುಖದ ಮೇಲೆ ಬ್ರಹ್ಮವರ್ಚಸ್ಸುಳ್ಳವನಾಗಿಯೂ ಕಾಣಿಸುವಂಥವನಾದನು. 


ಆಗ ಮಹಾ ಭಗವದ್ಭಕ್ತನಾಗಿಯೂ, ಸದ್ಗುರು ಭಕ್ತಿಯಲ್ಲಿ ಅತ್ಯಂತ ರತನಾಗಿಯೂ, ಗುರುಕೃಪಾ ಸಂಪನ್ನನಾಗಿಯೂ ಇರುವ ಪರಶುರಾಮಪಂತನು ಅನ್ನುತ್ತಾನೆ- "ಹೇ ಸದ್ಗುರು ಸಿದ್ದಮಾತೆಯೇ, ದೀನನಾಗಿದ್ದ ನನ್ನ ಮೇಲೆ ಕೃಪೆ ಮಾಡಿ, ಪ್ರೇಮದಿಂದ ಒಲಿದು ನನಗೆ ಸೇವಾ ಕಾರ್ಯವನ್ನು ಒಪ್ಪಿಸಿದಿ. ನನ್ನದು ಈಗ ಒಂದು ಇಚ್ಛಾ ಇರುವುದು. ಅದೇನೆಂದರೆ ನಿನ್ನ ಚರಿತ್ರವನ್ನು ರಚಿಸಬೇಕು. ಮತ್ತು ಅದಕ್ಕೋಸ್ಕರ ನೀನು ಆಜ್ಞೆಯನ್ನು ಕೊಟ್ಟು ಸ್ಫೂರ್ತಿಯನ್ನೂ ದಯಪಾಲಿಸತಕ್ಕದ್ದು; ಅಂದರೆ ನಾನು ಈ ಜಗತ್ತಿನಲ್ಲಿ ಧನ್ಯನಾದೆನೆಂದು ತಿಳಿಯುವೆನು. ನಿನ್ನ ಕೃಪೆ ಆಯಿತೆಂದರೆ, ಏನು ಆಗಲಿಕ್ಕಿಲ್ಲ; ಭಿಕ್ಷುಕನಿಗೆ ರಾಜನನ್ನಾಗಿ ಮಾಡುವಿ, ಅಂಧನಿಗೆ ದೃಷ್ಟಿ ಕೊಟ್ಟು ಆತನ ಕೈಯಿಂದ ಗ್ರಂಥವನ್ನು ಬರೆಯಿಸುವಿ. ಹಾಗಾದರೆ, ಸಿದ್ಧಾರೂಢ ವಿಜಯವೆಂಬ ಗ್ರಂಥವನ್ನು ಮಹಾರಾಷ್ಟ್ರ ಭಾಷೆಯಲ್ಲಿ ರಚಿಸಬೇಕೆಂದು ನನ್ನ ಹೇತು ಇರುವದು. ನೀನು ಆಜ್ಞೆ ಕೊಟ್ಟಿದ್ದಾದರೆ, ತ್ವರಿತವಾಗಿ ಗ್ರಂಥವು ಸಿದ್ಧವಾಗುವುದು" ಅಂದದ್ದು ಕೇಳಿ, ಸದ್ಗುರುಗಳು ಪಂತನಿಗೆ  ಸಂತೋಷದಿಂದ ಆಜ್ಞೆಯನ್ನು ಕೊಟ್ಟರು. ಆಮೇಲೆ ಆತನು ಸಿದ್ದರಿಗೆ ನಮಸ್ಕರಿಸಿ, ಸ್ವಸ್ಥಾನಕ್ಕೆ ಹೋಗುವಂಥವನಾದನು. ಒಂದೇ ತಿಂಗಳೊಳಗೆ ಗ್ರಂಥವನ್ನು ಸಿದ್ದಪಡಿಸಿ, ತಂದು ಸದ್ಗುರು ಚರಣಗಳಲ್ಲಿ ಅರ್ಪಿಸಿದನು. ಆ ಅತ್ಯಂತ ಸುರಸವಾದ ಗ್ರಂಥವನ್ನು ಸದ್ಗುರುರಾಯರು ಆನಂದದಿಂದ ಶ್ರವಣ ಮಾಡಿದರು. ಅನಂತರ ಗುರು ಆಜ್ಞೆ ಪ್ರಕಾರ ಗೋವಾ ಇತ್ಯಾದಿ ಪ್ರಾಂತ್ಯಗಳಿಗೆ ಹೋಗಿ, ಪಂತನು ಸ್ವಮುಖದಿಂದ ಆ ಚರಿತ್ರವನ್ನು ನಿರೂಪಿಸುತ್ತಿದ್ದನು. ಅದನ್ನು ಶ್ರವಣ ಮಾಡಿದ ಮಾತ್ರದಿಂದ ಸಕಲ ಜನರು ಸಿದ್ಧ ಭಕ್ತಿಯ ಸ್ಪುರಣ ಹೊಂದಿದಂಥವರಾಗಿ, ಉದ್ಧೃತರಾಗುತ್ತಿರುವರು. ಪಂತನ ವೈರಾಗ್ಯ ಯುಕ್ತವಾದ ಆಚರಣೆಯನ್ನು ನಿಷ್ಕಾಮ ಸೇವಾ ಬುದ್ಧಿಯನ್ನು ನೋಡಿ, ಜನರು ಅತಿಶಯ ಪ್ರೇಮದಿಂದ ಆತನನ್ನು ಗುರುಭಾವದಿಂದ ಪೂಜಿಸುತ್ತಾರೆ. 


ಒಮ್ಮೆ ಸದ್ಗುರು ಆಜ್ಞೆಯಿಂದ ಪಂತನು ರೋಣವೆಂಬ ಗ್ರಾಮಕ್ಕೆ ಹೊರಟು ಹೋಗಬೇಕಾಯಿತು. ಅಲ್ಲಿ ಏಳು ದಿವಸ ತನಕ ಸದ್ಗುರುಗಳ ಉತ್ಸವ ನಡೆಯುತ್ತ, ಚರಿತ್ರ ಕಥನವು ನಡೆಸಬೇಕೆಂದು ನಿಶ್ಚಯವಾಗಿರುತ್ತದೆ. ನಿತ್ಯದಲ್ಲಿ ಭಜನ ಹರಿಕೀರ್ತನ ಮತ್ತು ಉಪನ್ಯಾಸಾದಿಗಳನ್ನು ನಡೆಸುವದಕ್ಕೋಸ್ಕರ ಅಲ್ಲಿಯ ಭಕ್ತ ಜನರು ಪಂತನನ್ನು ಕರೆದುಕೊಂಡು ಹೋಗಬೇಕೆಂದು ಆಮಂತ್ರಣ ಕೊಟ್ಟು  ಭಕ್ತಜನರು ಮುಂದೆ ಹೋದರು, ಆದರೆ ಪಂತನು ಹಿಂದುಳಿದನು. ಮರುದಿವಸ ಆತನು ತನ್ನ ಪತ್ನಿಯಾದ ಜಾನಕಿಬಾಯಿ ಮತ್ತು ಭಕ್ತನಾದ ಮಂಗೇಶ ಎಂಬುವನನ್ನು ಸಹಾ ಕರೆದುಕೊಂಡು, ಸದ್ಗುರು ಆಜ್ಞೆಯನ್ನು ಪಡೆದುಕೊಂಡು ಹೊರಟನು. ಹುಬ್ಬಳ್ಳಿ ಹೊಗೆಭಂಡಿ ಸ್ಟೇಷನ್ನಿಗೆ ಮೂರು ಮಂದಿ ಬಂದು ನೋಡುವಾಗ, ಅಲ್ಲಿ ಜನರ ಸಂದಣಿ ವಿಶೇಷವಿದ್ದು ಟಿಕೀಟುಗಳು ಸಿಗಲಿಲ್ಲ. ಆ ದಿವಸ ಅವರಿಗೆ ಗಾಡಿ ತಪ್ಪಿತೆಂದರೆ, ಉತ್ಸವ ಆರಂಭವಾಗತಕ್ಕ ಕಾಲದಲ್ಲಿ ಅವರು ರೋಣಕ್ಕೆ ಮುಟ್ಟುತ್ತಿದ್ದಿಲ್ಲ. ಈ ಸಮಯದಲ್ಲಿ  ಏನು ಮಾಡುವದೆಂದು ಪಂತನು ಮನಸ್ಸಿನಲ್ಲಿ ಬಹಳ ತಳಮಳಪಟ್ಟು, - 'ಹೇ ಸದ್ಗುರುರಾಯನೇ, ನಿನ್ನ ಕಾರ್ಯವನ್ನು ನೀನೇ ಸಿದ್ಧಗೆ ಒಯ್ದರೆ ಆಗುವದು. ಈ ವಿಘ್ನ ಬಂದಿರುತ್ತದೆ, ಇದಕ್ಕೆನಾದರೂ ಉಪಾಯ ಮಾಡುವಂಥವನಾಗು'' ಎಂದು ಪ್ರಾರ್ಥಿಸಿದನು. ಇಷ್ಟರಲ್ಲಿ ಒಬ್ಬ ಮನುಷ್ಯನು ಪಂತನ ಹತ್ತಿರ ಬಂದು, - “ನೀವು ಎಲ್ಲಿಗೆ ಹೋಗುವವರು, ಇಲ್ಲಿ ಯಾತಕ್ಕೆ ನಿಂತಿರುವಿರಿ?” ಎಂದು ಕೇಳಲಾಗಿ ಪಂತನು, - “ನಾವು ಮೂವರು ರೋಣಕ್ಕೆ ಹೋಗುವವರು, ಆದರೆ ಮಲ್ಲಾಪೂರ ಸ್ಟೇಷನ್ನಿಗೆ ಟಿಕೀಟು ತೆಗೆದುಕೊಳ್ಳಲಿಕ್ಕೆ ಹೋದರೆ ಟಿಕೀಟು ಸಿಗಲಿಲ್ಲ. ನಮಗೆ ರೋಣಕ್ಕೆ ಹೋಗುವುದು ಅತಿ ಜರೂರು ಇರುವುದು. ಏನು ಮಾಡಬೇಕೆಂದು ತಿಳಿಯುವುದಿಲ್ಲ,'' ಎಂದು ಹೇಳಿದ್ದು ಕೇಳಿ,  ಆ ಮನುಷ್ಯನು -" ಬಹಳ ಚಲೋದಾಯಿತು. ಈ ಮೂರು ಟಿಕೀಟು ಅದೇ ಸ್ಟೇಷನ್ನಿನವು ಇರುತ್ತವೆ. ನಮಗೆ ಅಲ್ಲಿಗೆ ಹೋಗುವ ಕೆಲಸವಿಲ್ಲ, ನೀವು ಇವನ್ನು ತೆಗೆದುಕೊಂಡುಬಿಡಿರಿ " ಎಂದು ಹೇಳಿ, ಆತನು ಮೂರು ಟಿಕೀಟುಗಳನ್ನು ಪಂತನ ಕೈಯಲ್ಲಿ ಕೊಟ್ಟು, ಆ ಕ್ಷಣವೇ ಜನಸಂದಣಿಯೊಳಗೆ ಅದೃಶ್ಯನಾಗಿ ಹೋದನು. ಆ ಟಿಕೀಟಿನ ಹಣ ಸಹಾ  ತೆಗೆದುಕೊಳ್ಳಲಿಲ್ಲ. ಪರಶುರಾಮಪಂತನು “ಇವನು ಸದ್ಗುರುವೇ, ಸಂಕಟಕಾಲ ನೋಡಿ ನಮ್ಮ ಪ್ರಾರ್ಥನೆ ಕೇಳಿ ಬಂದು ಸಹಾಯ ಮಾಡಿದ್ದೆ, ಹೊರ್ತು ಮತ್ಯಾರೂ ಅಲ್ಲ.' ಎಂದುಕೊಂಡು, ಮೂವರೂ ಗಾಡಿ ಹತ್ತಿ, ಯೋಗ್ಯ ಕಾಲಕ್ಕೆ ಮಲ್ಲಾಪೂರ ಸ್ಟೇಷನ್ನಿನಲ್ಲಿ ಇಳಿದರು. 


ಆದರೆ ಅಲ್ಲಿಂದ ರೋಣ ಗ್ರಾಮವು ಕೆಲವು ಮೈಲು ಅಂತರದಲ್ಲಿದ್ದು, ಮಹಾ ಅಂಧಕಾರವು ಕವಿದಿತ್ತು. ನಡೆದು ಹೋಗಲಿಕ್ಕೆ ದಾರಿಯೂ ಕಾಣಿಸುತ್ತಿದ್ದಿಲ್ಲ. ಸ್ಟೇಷನ್ನಿನ ಸಮೀಪ ಇಳಿಯಲಿಕ್ಕೂ ಜಾಗಾ  ಸಿಗಲಿಲ್ಲ. ಮಳೆಯೂ ಬೀಳಲಾರಂಭಿಸಿತು. ಏನು ಮಾಡುವದೆಂದು ಚಿಂತೆ ಮಾಡುತ್ತಿರುವಾಗ, ಅಲ್ಲಿ ಒಬ್ಬ ಮನುಷ್ಯನು ಬಂದು, “ನೀವು ಎಲ್ಲಿಗೆ ಹೋಗುವವರು ?” ಎಂದು ಪಂತನಿಗೆ ವಿಚಾರಿಸಲು, ಪಂತನು- '' ನಾವು ರೋಣ ಗ್ರಾಮಕ್ಕೆ ಹೋಗುವವರು. ನಮಗೆ ರಾತ್ರಿ ಇಳಿಯಲಿಕ್ಕೆ ಸ್ಥಾನ ಬೇಕಾಗಿರುತ್ತದೆ. ರಾತ್ರಿ ಇಲ್ಲಿ ಕಳೆದು, ನಾಳೆ ಮುಂಜಾನೆ ನಾವು ರೋಣಕ್ಕೆ ಹೋಗುವೆವು” ಎಂದು ಹೇಳಿದ್ದು ಕೇಳಿ, ಕೂಡಲೇ ಆ ಮನುಷ್ಯನು  ಹೋಗಿ, ಒಂದು ಕಂದೀಲು ತೆಗೆದುಕೊಂಡು ಬಂದು ಈ ಮೂವರನ್ನೂ, ದಾರಿ ತೋರಿಸುತ್ತಾ ಒಂದು ಸಮೀಪದ ಮನೆಗೆ ಕರೆದುಕೊಂಡು ಹೋದನು. ಆ ಪಡಸಾಲೆಯೊಳಗೆ ಒಂದು ಉತ್ತಮವಾದ ಸ್ಥಳದಲ್ಲಿ ಜಮಖಾನ ಹಾಸಿ, ಅದರ ಮೇಲೆ ಕೂಡ್ರಿಸಿದನು, ಮತ್ತು ಅಲ್ಲೇ ರಾತ್ರಿ ಕಳೆಯಲಿಕ್ಕೆ ಹೇಳಿದನು. ಅವನಿಗೆ  ಹೆಸರು ಕೇಳಿದಾಗ ತನ್ನ ಹೆಸರು ಸಿದ್ದಪ್ಪಾ ಅದನು, ಅದಕ್ಕೆ ಜಾನಕಿಬಾಯಿ, -“ಇವನು ಸಿದ್ದಗುರುವಿನ ವಿನಹಾ ಮತ್ಯಾರೂ  ಅಲ್ಲ, ನನಗೆ ಗೊತ್ತದೆ, ಸಂಕಟ ಬಂದಾಗ ಬಂದು ಸಹಾಯ ಮಾಡುವವನು ಅವನೊಬ್ಬನೇ,'' ಎಂದು ಅಂದಳು. ಆಗ ಸಿದ್ದಪ್ಪನು ಮನೆಯೊಳಗೆ ಹೋಗಿ, ಕೂಡಲೇ ತಿರುಗಿ ಬಂದು, ಪಂತನ ಮುಂದೆ, ಬಾಳೇಹಣ್ಣು, ಸಕ್ಕರೆ ಮತ್ತು ಒಂದು ತಂಬಿಗೆಯೊಳಗೆ ಹಾಲು ಸಹ ಇಟ್ಟುಬಿಟ್ಟನು. ಪಂತನು ಆತನನ್ನು ಕುರಿತು - “ಸಿದ್ದಪ್ಪಾ, ನೀನು ಹುಬ್ಬಳ್ಳಿಯವನಿರುವೆಯೋ?” ಎಂದು ಕೇಳಿದ್ದಕ್ಕೆ, ಸಿದ್ದಪ್ಪನು, - ''ನಾನು ಹುಬ್ಬಳ್ಳಿಯವನೇ ಅಲ್ಲ. ನನ್ನ ಸ್ಥಾನವು ನಿಮಗೆ ತಿಳಿಯಲಶಕ್ಯವು. ನೀವು ರಾತ್ರಿಯನ್ನು ಇಲ್ಲೇ ಕ್ರಮಿಸಿ ನಾಳೆ ಮುಂಜಾನೆ ರೋಣಕ್ಕೆ ಹೋಗಿರಿ,” ಎಂದು ಸಿದ್ದಪ್ಪನು ನಗುತ್ತಾ ಅಂದು, ಹೊರಗೆ ಕತ್ತಲೆಯೊಳಗೆ ಹೋಗಿ ಅದೃಶ್ಯನಾದನು. ಅವರೆಲ್ಲರಿಗೂ  ಆಶ್ಚರ್ಯವಾಗಿ, - ''ಈತನು ನಿಶ್ಚಯವಾಗಿ ಸದ್ಗುರು ಇರುವನು,” ಎಂದು ಅನ್ನುತ್ತಿರುವಾಗ ಮಂಗೇಶನು ಮನೆಯೊಳಗಿನ ಜನರಿಗೆ, ಸಿದ್ದಪ್ಪನ ಸಂಬಂಧ ವಿಚಾರಿಸಿದನು. ಆಗ ಮನೆ ಮಂದಿ ಎಲ್ಲರೂ ಹೊರಗೆ ಬಂದು -"ಇಲ್ಲಿ ಪರ್ಯಂತ ಯಾತಕ್ಕೆ ಬಂದಿರಿ ",  ಎಂದು ಕೇಳಿದ್ದಕ್ಕೆ, ಆತನು ಎಲ್ಲಾ ವೃತ್ತಾಂತವನ್ನು ತಿಳಿಸಿದನು. ಅದನ್ನು ಕೇಳಿ ಅವರು ಬಹಳ ಆಶ್ಚರ್ಯಪಟ್ಟು, - "ಆತನು ನಮ್ಮ ಮನೆ ಮನುಷ್ಯನಲ್ಲ; ನೀವು ಯಾರೆಂಬುದು ನಮಗೆ ಗೊತ್ತಿಲ್ಲ. ಎರಡನೇ ಗ್ರಾಮಕ್ಕೆ ಹೋಗಿರುವ ನಮ್ಮ ಮನೆ ಯಜಮಾನರ ಗುರ್ತದವರು, ಎಂದು ನಾವು ಸುಮ್ಮನಿದ್ದೆವು. ಇಲ್ಲದಿದ್ದರೆ ನಾವು ಆಶ್ರಯ ಕೊಡುತ್ತಿದ್ದಿಲ್ಲ. ಈಗ ನೀವು ಯಾರಂತೆ ನಮಗೆ ಹೇಳಿರಿ. ಸಿದ್ಧಾರೂಢರ ಭಕ್ತರೇನು ? ಹಾಗಾದರೆ ನಿರ್ಭಯವಾಗಿ ಇಲ್ಲೇ ಇರಿ'', ಎಂದು ಹೇಳಿದರು. ಆಗ ಪರಶುರಾಮಪಂತನು, -"ಹಾಗಾದರೆ, ನಮ್ಮ ಪರಿಚಯವಿಲ್ಲದಿದ್ದರೆ, ಅವನ ಕೂಡ ನೀವು ಹಣ್ಣು, ಸಕ್ಕರೆ, ಹಾಲು ಮುಂತಾದ್ದನ್ನು ಹ್ಯಾಗೆ ಕಳುಹಿಸಿದಿರಿ ?” ಎಂದು ಕೇಳಿದ್ದಕ್ಕೆ ಅವರು - "ಯಾರು ಕಳುಹಿಸಿದ್ದಾರೆ? ಅವನು ಮನೆಯೊಳಗೆ ಬಂದೇ ಇಲ್ಲ. ಅವೆಲ್ಲಾ ಮಾಯಿಕ ಜಿನಸುಗಳು ಇರಬಹುದು. ನೀವು ಹೇಳಿದಂತೆ ಈತನೂ  ಸಿದ್ದಾರೂಢನಿರಬಹುದು," ಎಂದು ಅವರಂದದ್ದು

ಕೇಳಿ, ಎಲ್ಲರಿಗೂ ನಿಶ್ಚಯವಾಯಿತು. ಏನೆಂದರೆ - ಶ್ರೀ ಸಿದ್ಧ ಸದ್ಗುರುವೇ  ವೇಷ ಪಲ್ಲಟ ಮಾಡಿ ಬಂದಿದ್ದನು. ಯಾಕೆಂದರೆ- ಆತನು ಮಹಾ ಭಕ್ತಾಭಿಮಾನಿ ಇದ್ದು, ಯಾವಾಗಲೂ ಆತನಿಗೆ ಭಕ್ತರ ಚಿಂತೆ ಇರುತ್ತದೆ. 


ಆ ಮನೆಯ ಮಂದಿಗೆ ಬಹಳ ಆನಂದವಾಗಿ ಅನ್ನುತ್ತಾರೆ - "ನಮಗೂ ಆ ಸಿದ್ದಾರೂಢರ  ದರ್ಶನವನ್ನು ಮಾಡಿಸಿರಿ. ಆತನ ಅಪ್ರತಿಮ ಭಕ್ತರ ಸಂಗತಿಯು ನಮಗೆ ಪ್ರಾಪ್ತವಾದ್ದರಿಂದ ನಾವಾದರೂ ಧನ್ಯರಾದೆವು, ನೀವು ನಮ್ಮ ಮನೆಗೆ ಬಂದಿರೆಂದು ನಮಗೆ

ಬಹಳ ಆನಂದವಾಯಿತು. ನೀವು ತಿರುಗಿ ಹುಬ್ಬಳ್ಳಿಗೆ ಹೋಗುವಾಗ ನಾವು ಅವಶ್ಯವಾಗಿ ನಿಮ್ಮ ಜೊತೆಯಲ್ಲಿ ಬಂದು ಸಿದ್ದ ಸದ್ಗುರುವಿಗೆ  ಭೆಟ್ಟಿಯಾಗುವೆವು'' ಪರಶುರಾಮಪಂತ ಮತ್ತು ಅವನ ಮಂದಿ ಆ ರಾತ್ರಿ ಅಲ್ಲೇ ವಿಶ್ರಮಿಸಿಕೊಂಡು ಮರುದಿನ ಬೆಳಿಗ್ಗೆ ರೋಣಕ್ಕೆ ಹೋಗಲಿಕ್ಕೆ ಹೊರಟಾಗ ಮನೆಯವರು ಸರ್ವಾನುಕೂಲ ಮಾಡಿಕೊಟ್ಟರು. ರೋಣ ಗ್ರಾಮದಲ್ಲಿ ಉತ್ಸವವನ್ನು ತೀರಿಸಿ, ಪುನಃ ಹುಬ್ಬಳ್ಳಿಗೆ ಬರುವಾಗ, ಅವರು ಮಲ್ಲಾಪುರದಲ್ಲಿ ರಾತ್ರಿ ಕಳೆದು ಮನೆಯ  ಮಂದಿಯನ್ನು ಸಹಾ ತಮ್ಮ ಸಂಗಡ ಕರೆದುಕೊಂಡು ಬಂದರು. ಸಿದ್ಧಾಶ್ರಮಕ್ಕೆ ಬಂದು, ನಡೆದ ವೃತ್ತಾಂತವನ್ನೆಲ್ಲಾ ಸದ್ಗುರುಗಳನ್ನು ಕುರಿತು ಪಂತನು ನಿವೇದಿಸಿದ್ದಾಗ, ಸಿದ್ದರು ಅಂದರು - “ಸರ್ವ ಬಾರವನ್ನು ಸದ್ಗುರುವಿನ ಮೇಲೆ ಇಟ್ಟು ಬಿಟ್ಟರೆ, ಅದನ್ನು ಆತನು ನಿಶ್ಚಯವಾಗಿ ವಹಿಸುವನು. ಆತನು ಸಂಭಾಳಿಸದಿದ್ದರೆ, ಆತನ ಭಕ್ತರನ್ನು ರಕ್ಷಿಸುವವನು ಮತ್ತ್ಯಾವನು ಇದ್ದಾನೆ!"  ಸದ್ಗುರುನಾಥನ ಈ ವಚನವನ್ನು ಕೇಳಿ, ಎಲ್ಲರಿಗೂ ಆನಂದವಾಗಿ, ಜಯ ಜಯಕಾರ ಮಾಡುವಾಗ, ಆ ನಾದವು ಆಕಾಶದಲ್ಲೆಲ್ಲಾ ತುಂಬಿಹೋಯಿತು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಕೃಷ್ಣನಿಗೆ ತಂದೆಯು ಕಟ್ಟಿ ಹಾಕಿರುವಾಗ ಶ್ರೀರಾಮನು ಆತನಿಗೆ ದರ್ಶನ ಕೊಟ್ಟನು . ಆ ಗೋವಿಂದಾನಂದನು ಸಿದ್ಧಾರೂಢರ ಮಹಾತ್ಮೆ ಕೇಳಿ ಅವರಿಗೆ ಬಂಧು ಭೆಟ್ಟಿಯಾದರು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»


Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ