ಹುಲಿಯಿಂದ ಸಿದ್ಧಾರೂಢರು ಸರಸ್ವತಿ ರಕ್ಷಿಸಿದ ಕಥೆ .

 🍁ಹರಿಹರ ಮತ್ತು ಸರಸ್ವತಿ  ದಂಪತಿಗಳನ್ನು  ಹುಲಿಯಿಂದ  ಸದ್ಗುರುಗಳು ಕಾಡಿನಲ್ಲಿ  ರಕ್ಷಿಸಿದರು.





ಸಮುದ್ರ ತೀರದಲ್ಲಿ ಕುಮಟಾ ಎಂಬ ನಗರವಿರುವದು. ಅಲ್ಲಿ ಹರಿಹರನೆಂಬ ಒಬ್ಬ ಭಕ್ತನಿರುವನು. ಆತನು ಬಹು

ದರಿದ್ರಾವಸ್ಥೆಯಲ್ಲಿ ಸಂಸಾರ ನಡಿಸುವನು. ಆತನ ಪತ್ನಿಯ ಹೆಸರು ಸರಸ್ವತಿ. ಆ ದಂಪತಿಗಳು ಬಹು ಪ್ರೇಮಯುಕ್ತರಾಗಿ ಕೃಷ್ಣನಾಮವನ್ನು ಜಪಿಸುತ್ತಾ ಪ್ರತಿನಿತ್ಯ ಶ್ರೀಪತಿಯನ್ನು ಭಜಿಸುತ್ತಿದ್ದರು. ನಿತ್ಯದಲ್ಲಿ ಭಜನೆ ಮತ್ತು ನಾಮಸ್ಮರಣೆ ಮಾಡುತ್ತಿರುವುದರಿಂದ ಅವರ ಚಿತ್ತವು ನಿರ್ಮಲವಾಗಿ ಅವರಿಗೆ ಮಹಾ ವೈರಾಗ್ಯ ಪ್ರಾಪ್ತಿಯಾಯಿತು. ಮತ್ತು ಸಂಸಾರ ಕಾರ್ಯಗಳನ್ನು ಮಾಡುವುದರಲ್ಲಿ ಬಹು ಬೇಸರ ಪಡತೊಡಗಿದರು. ಪ್ರಪಂಚದಲ್ಲಿ ಬಹು ದುಃಖವಾಗುವದು ಎಂದು ಹೃದಯದಲ್ಲಿ ಬಹಳ ತಳಮಳಪಟ್ಟು, ಏನು ಮಾಡಬೇಕೆಂದು ತಿಳಿಯದೆ - ''ಹೇ ಶ್ರೀಹರಿ, ನೀನೇ ನಮಗೆ ದುಖದಿಂದ ಬಿಡುಗಡೆ ಮಾಡು'' ಎಂದು ಪ್ರಾರ್ಥಿಸುತ್ತಿದ್ದರು. ಆ ಸಮಯದಲ್ಲಿ, ಹುಬ್ಬಳ್ಳಿಯಲ್ಲಿ ಸಿದ್ದಾರೂಢರೆಂಬ ಯತೀಶ್ವರರು ಇರುವರು, ಸಾಕ್ಷಾತ್ ಪರಮೇಶ್ವರನೇ ನರರೂಪದಿಂದ ಬಂದಿರುವೆನೆಂದು ಅವರನ್ನು ಎಲ್ಲರೂ ಮನ್ನಿಸುವರು, ಎಂಬ ಈ ವಾರ್ತೆಯು ಅವರಿಗೆ ಕೇಳಿ ಬಂತು. ಆಗ್ಗೆ ಅತ್ಯಂತ ಹರ್ಷಚಿತ್ತರಾಗಿ, ಕೂಡಲೇ ಹುಬ್ಬಳ್ಳಿಗೆ ಹೊರಟು ಹೋಗಬೇಕೆಂಬ ಕುತೂಹಲದಿಂದ ಎಲ್ಲಾ ಸಂಸಾರ ಭಾಂತ್ರಿಯನ್ನು ತ್ಯಜಿಸಿ, ಹುಬ್ಬಳ್ಳಿಗೆ ಹೊರಟು ಬಂದರು. ಹುಬ್ಬಳ್ಳಿಗೆ ಬಂದು ಜನರಿಗೆ ವಿಚಾರಿಸುತ್ತಾರೆ- ''ಹೇ ಬಂಧುಗಳಿರಾ, ನಿರಭಿಮಾನತ್ವದಿಂದ ಶರಣ ಬಂದಿರುವ ದೀನ ಮತ್ತು ಅನಾಥರನ್ನು ಪಾಲಿಸುವಂಥಾ ಆ ಸಿದ್ಧರಾಯನು ಎಲ್ಲಿರುವನು ?'' ಎಂದಾಗ ಅವರು ''ಭಕ್ತ ಕಾಮ ಕಲ್ಪದ್ರುಮನಾಗಿಯೂ, ಆತ್ಮಾರಾಮನಾಗಿಯೂ, ಭವಶ್ರಮ ಪರಿಹಾರ ಮಾಡುವಂಥವನಾಗಿಯೂ ಇರುವ ಆತನು ಸಿದ್ಧಾಶ್ರಮದಲ್ಲಿರುವನು'' ಎಂದು ಹೇಳಿದರು. ಆ ಕೂಡಲೇ ಹರಿಹರ ಮತ್ತು ಸರಸ್ವತಿ ಅತ್ಯಂತ ಪ್ರೇಮಭರಿತರಾಗಿ, ಸಿದ್ಧಾಶ್ರಮಕ್ಕೆ ಶೀಘ್ರವಾಗಿ ಬಂದು ಅಲ್ಲಿಯ ಶೋಭಾ ನೋಡಿ ಬಹು ಆನಂದ ಭರಿತರಾದರು. ಆ ಸದ್ಗುರು ರೂಪವು ಜ್ಞಾನ ತೇಜದಿಂದ ಪ್ರಕಾಶಮಾನವಾಗಿಯೂ, ಅನುಪಮವಾಗಿಯೂ, ದರ್ಶನ ಮಾತ್ರದಿಂದ ತ್ರಿತಾಪಗಳನ್ನು ಹರಣ ಮಾಡುವಂಥದ್ದಾಗಿಯೂ, ಜನ್ಮಾಂತರಗಳಲ್ಲಿ ಮಾಡಿದಂತ ಪಾಪವನ್ನು ಭಸ್ಮ ಮಾಡುವ ಸಾಮರ್ಥ್ಯ ಉಳ್ಳಂಥಾದ್ದಾಗಿರುವದನ್ನು ಅವರು ನೋಡಿದರು. ಅತಿ ಸೋಜ್ವಲವಾದ ಮುಖಮುದ್ರೆಯುಳ್ಳ ಸಿದ್ದಾರೂಢ ಸದ್ಗುರುಗಳನ್ನು ಕಂಡು ಆ ದಂಪತಿಗಳು ನೇತ್ರಗಳಿಂದ ಆನಂದ ಭಾಷ್ಪಗಳನ್ನು ಸುರಿಸುತ್ತಾ, ಸಿದ್ಧಚರಣದಲ್ಲಿ ಮಸ್ತಕವನ್ನಿಟ್ಟರು. ಆಗ ಆ ಕರುಣಾಕರನು ಅವರನ್ನು ಎಬ್ಬಿಸಿ, ಅವರ ಅನುಪಮ ಪ್ರೇಮರಸವನ್ನು ತಿಳಿದು, ಹೃದಯದಲ್ಲಿ ದಯಾಭರಿತನಾಗಿ ಅವರನ್ನು ಕುರಿತು ಅನ್ನುತ್ತಾನೆ - ಹೇ ಪುಣ್ಯ ದಂಪತಿಗಳಿರಾ, ನೀವು ಎಲ್ಲಿಂದ ಆಗಮನ ಮಾಡಿದಿರಿ? ನಿಮ್ಮ ಅಪೇಕ್ಷೆ ಏನಿರುವದು ? ಹೇಳಿರಿ' ಸದ್ಗುರುಗಳ ಮೃದು ವಚನವನ್ನು ಕೇಳಿ, ಹರಿಹರನು

ಅನ್ನುತ್ತಾನೆ- 'ಹೇ ದಯಾಘನರಾದ ಸದ್ಗುರುಗಳೇ,  ನಿಮ್ಮ ದರ್ಶನದ  ಉದ್ದೇಶವಾಗಿ ನಾವು ಧಾವಿಸಿ ಇಲ್ಲಿಗೆ  ಬಂದಿರುವೆವು. ನಾವು ಸಂಸಾರದಲ್ಲಿ ಬಹಳ ತಾಪವನ್ನು ಹೊಂದಿ ಅದರೊಳಗಿಂದ ಬಿಡಿಸುವಂಥವರ್ಯಾರನ್ನೂ ಕಾಣದೆ  ದಯಾಳುಗಳು ನೀವಿದ್ದೀರೆಂಬ ವಾರ್ತೆಯನ್ನು ಕೇಳಿ, ನಿಮ್ಮ ಚರಣಗಳಿಗೆ ಶರಣು ಬಂದಿರುತ್ತೇವೆ. ಸಂಸಾರವು  ಬಹು ದುಃಖಮಯವಾಯಿತು. ಅದರೊಳಗಿಂದ ತಾರಣೋಪಾಯವು ಏನೂ ಕಾಣದೆ ದೃಢವಾಗಿ ನಿಮ್ಮ ಚರಣಗಳನ್ನು ಹಿಡಿದಿರುತ್ತವೆ. ಹೇ ಸದ್ಗುರು ಮಾತಾ, ನೀನೇ ನಮ್ಮನ್ನು ಉದ್ದರಿಸು". ಅವರ ಇಂಥಾ ಕರುಣಾ ವಚನವನ್ನು ಕೇಳಿ ಸದ್ಗುರುಗಳು ಅತ್ಯಂತ ಕೃಪೆಯಿಂದ ದ್ರವಿಸಿ, “ಭಯ ಪಡಬೇಡಿರಿ' ಎಂದು ಅವರಿಗೆ ಅಭಯ ವಚನವನ್ನು ದಯಪಾಲಿಸಿದರು. ಕೂಡಲೇ ದಂಪತಿಗಳು ಬಹು ಆನಂದಯುಕ್ತರಾಗಿ, ಅಂದಿನಿಂದ ಸದ್ಗುರು ಆಜ್ಞೆಯಿಂದ ಮಠದಲ್ಲೆ  ಇರುತ್ತಿದ್ದು, ದೇಹಾಭಿಮಾನವನ್ನು ಬಿಟ್ಟು ಅನನ್ಯ ಭಾವದಿಂದ ಗುರುಸೇವೆಯನ್ನು ಮಾಡುತ್ತಿದ್ದರು. ನಿತ್ಯದಲ್ಲಿಯೂ ವೇದಾಂತ ಶ್ರವಣ ಮಾಡುತ್ತಿದ್ದು, ಅವರ ಚಿತ್ತಕ್ಕೆ ಶಾಂತಿ ಲಭಿಸಿತು. ಉದರ ನಿರ್ವಾಹಾರ್ಥವಾಗಿ ಅವರು ಭಿಕ್ಷಾಟನವನ್ನು ಅವಲಂಬಿಸಿದರು. ಅವರ ಅದ್ಭುತ ಪ್ರೇಮವನ್ನು ನೋಡಿ, ಜನರೆಲ್ಲಾ ಆಶ್ಚರ್ಯಭರಿತರಾಗಿ ಅವರಿಗನ್ನುತ್ತಾರೆ, “ನೀವು ಧನ್ಯರು, ಧನ್ಯರು. ಆ ಸಿದ್ಧ ದಯಾಘನನ ಕೃಪೆಯನ್ನು ಸಂಪಾದಿಸಿಕೊಂಡಿರಿ”, ಈ ಪ್ರಕಾರ ಒಂದು ವರ್ಷವಾಯಿತು. ಸದ್ಗುರುವಿನ ಪ್ರೇಮವು ಆಂತರ್ಯದಲ್ಲಿ ಪೂರಿತವಾಗುವಂಥಾದ್ದಾಯಿತು. ಈ ಸಮಯದಲ್ಲಿ ಆ ದಂಪತಿಗಳಿಗೆ ಕುಮಟಾಗೆ ಹೋಗಿ ಬರುವ ಒಂದು ಅನಿವಾರ್ಯ ಕಾರ್ಯವು ಬಂದೊದಗಿತು. ಆಗ ಸದ್ಗುರು ವಿರಹವಾಗುವದೆಂದು ತಿಳಿದು ಬಹು ತಳಮಳಿಸತೊಡಗಿದರು. ನೇತ್ರಗಳಿಂದ ದಳದಳನೇ ಅಶ್ರುಗಳು ಸುರಿಯುತ್ತಿದ್ದವು. ಸಿದ್ದ ಸದ್ಗುರುಗಳ ಸಮೀಪ ಬಂದು, “ಹೇ ದಯಾನಿಧೇ, ನಮಗೆ ತೀವ್ರವಾಗಿ ಹಿಂತಿರುಗಿ ಕರಿಸಿಕೊಳ್ಳಿರಿ' ಎಂದು ದೈನ್ಯಭಾವದಿಂದ ಪ್ರಾರ್ಥಿಸಿದರು. ಆಗ ಸದ್ಗುರುಗಳು ಅನ್ನುತ್ತಾರೆ - "ನೀವು ಮನಸ್ಸಿನಲ್ಲಿ ಏನೇನೂ ಚಿಂತೆ ಮಾಡಬೇಡಿರಿ. ಗುರುಚಿಂತನ ಅಖಂಡವಾಗಿ ಮಾಡುತ್ತಿದ್ದರೆ, ನಿಮಗೆ ಮಾರ್ಗದಲ್ಲಿ ಏನೇನೊ ಭಯವಿರಲಾರದು. ನಾನು ಯಾವಾಗಲೂ ನಿಮ್ಮ ಬೆನ್ನಿಗಿರುವೆನೆಂದು ನೀವು ಹೃದಯದಲ್ಲಿ ದೃಢವಾಗಿ ನಂಬಿರಿ. ಮತ್ತು ನಿರ್ಭಯ ಚಿತ್ತರಾಗಿ ಹಗಲು ರಾತ್ರಿ ನಾಮ ಜಪವನ್ನು ಮಾಡುತ್ತಾ, ನಡೆಯಿರಿ.” ಸದ್ಗುರು ವಚನವನ್ನು ಕೇಳಿ ಆ ದಂಪತಿಗಳು ಅತ್ಯಾನಂದಭರಿತರಾಗಿ, ಸದ್ಗುರು ಚರಣಗಳಿಗೆ ಮಸ್ತಕವನ್ನಿಟ್ಟು, ಕುಮಟಾಗೆ ಹೋಗುವ ರಸ್ತೆಯ ಮೇಲೆ

ನಡೆದು ಹೋದರು. ರಸ್ತೆ ಹಿಡಿದು ಹೋಗುವಾಗ್ಗೆ ಸದ್ಗುರುನಾಮವನ್ನು ಬಹು ಪ್ರೇಮದಿಂದ ಉಚ್ಚರಿಸುತ್ತಿದ್ದರು. ಮತ್ತು ಆಗಾಗ್ಗೆ ಸದ್ಗುರು ಕಥೆಗಳನ್ನೆ  ವರ್ಣಿಸುತ್ತಾ ಅಷ್ಟಭಾವಗಳನ್ನು ಹೊಂದಿ, ನೇತ್ರಗಳು ಅಶ್ರುಪೂರ್ಣವಾಗಿ, ಸದ್ಗುರುಮೂರ್ತಿಯನ್ನು ಚಿಂತಿಸುತ್ತಾ ನಡಿಯುತ್ತಿದ್ದರು. ಹೀಗೆ ಹೋಗುತ್ತಿರುವಾಗ ಮುಂದೆ  ಮಹಾ ಅರಣ್ಯವು ಪ್ರಾಪ್ತವಾಯಿತು. ರಸ್ತೆಯ ಎರಡೂ ಪಾರ್ಶ್ವಗಳಲ್ಲಿ ಘನವೃಕ್ಷಗಳು ಬೆಳೆದು ನಿಂತಿದ್ದಕ್ಕಾಗಿ ಹಗಲಿನಲ್ಲಿ, ಅಂಧಕಾರವು ತುಂಬಿತ್ತು. ಮಾರ್ಗದ ಮೇಲೆ ಸ್ವಲ್ಪೇ  ಪ್ರಕಾಶ ಬೀಳುತ್ತಿತ್ತು. ಅರಣ್ಯದೊಳಗಿಂದ ಮೃಗ ಪಕ್ಷ್ಯಾದಿಗಳ ಭಯಂಕರವಾದ ಧ್ವನಿ  ಕೇಳಿಸುತ್ತಿತ್ತು. ಆದರೆ ಭಜನವನ್ನು ಮಾಡುತ್ತಾ ನಡಿಯುತ್ತಿದ್ದ ಆ ದಂಪತಿಗಳ ಮನಸ್ಸು ನಿರ್ಭಯವಾಗಿತ್ತು. ಈ ಪ್ರಕಾರ ಅವರು ಹೋಗುತ್ತಿರುವಾಗ ಹರಿಹರನು ಏನೋ ನಿಮಿತ್ತದಿಂದ ಹಿಂದುಳಿದನು. ಆತನ ಪತ್ನಿಯು, ಮುಖದಿಂದ ನಾಮವನ್ನು ಉಚ್ಛರಿಸುತ್ತ ಶರೀರ ವಿಸ್ಮೃತಿಯನ್ನು ಹೊಂದಿದವಳಾಗಿ  ಮುಂದೆ ನಡೆದಳು. ಅಷ್ಟರೂಳಗೆ,  ಕಂಟಿಯೊಳಗಿಂದ ಒಂದು ಮಹಾ ವ್ಯಾಘ್ರವು ತುಸು ಅಂತರದಲ್ಲಿ ಸರಸ್ವತಿಯ ಮುಂದೆ ಬಂದು ನಿಂತು, ಆಕೆಯನ್ನು ನೋಡುತ್ತಿತ್ತು. ಸರಸ್ವತಿಗೆ  ದೇಹಭಾನವಿದ್ದಿಲ್ಲ. ಒಮ್ಮೆ ಅಕಸ್ಮಾತ್ ಮುಂದೆ ನೋಡಿದಳು. ಮತ್ತು ಕ್ಷಣಮಾತ್ರ ತಟಸ್ಥಳಾದಳು, ಕೂಡಲೇ ಆ ವ್ಯಾಘ್ರವು ಮಹಾಗರ್ಜನೆ ಮಾಡಿತು. ಆ ಗರ್ಜನೆಯು ವನದಲ್ಲೆಲ್ಲಾ ಪ್ರತಿಧ್ವನಿಯಾಗುತ್ತಾ, ತುಂಬಿತು. ಅದನ್ನು ಕೇಳಿ ಆ ಅಬಲೆಯು ಥರಥರನೆ ನಡುಗಿದಳು, ಮತ್ತು ಸದ್ಗುರುವಿನ ಸ್ಮರಣೆ ಮಾಡುವಂಥವಳಾದಳು. ಆ ಹುಲಿಯಾದರೂ ಜಿಗಿಯುತ್ತಾ ಬಂದು ಆಕೆಗೆ ಸಮೀಪಿಸಿತು. ಇನ್ನೊಮ್ಮೆ ಜಿಗಿದು ಆಕೆಯ ಮೇಲೆ ಬೀಳುತ್ತಿತ್ತು. ಅಷ್ಟರಲ್ಲಿ ಆಕೆಯು "ಸಿದ್ದಾರೂಢಾ, ಓಡಿ ಬಂದು ನನ್ನನ್ನು ರಕ್ಷಿಸು' ಎಂದು ಚೀರಿದಳು. ಕೂಡಲೆ ಆ  ಸದ್ಗುರುನಾಥನು ಪ್ರಕಟನಾಗಿ, ಆಕೆಯ ಬೆನ್ನು ಹಿಂದೆ ನಿಂತು, ಒಂದು ಹಸ್ತವನ್ನು, ಬೀಳುವಂಥ ಸರಸ್ವತಿಯ ಹೆಗಲ ಮೇಲಿಟ್ಟು ಆಕೆಯನ್ನು ಆಧರಿಸಿ ಹಿಡಿದು, ನೀನು ಭಯಪಡಬೇಡವೆಂದು ಹೇಳಿದನು. ಮತ್ತೊಂದು ಹಸ್ತವನ್ನು ಎತ್ತಿ ವ್ಯಾಘ್ರಕ್ಕೆ ನಿಲ್ಲು" ಅನ್ನಲಾಗಿ, ಆ ವ್ಯಾಘ್ರವು ಈ ದಿವ್ಯ ಪುರುಷನನ್ನು ನೋಡಿ, ತತ್ಕಾಲಕ್ಕೆ ನೆಲಕ್ಕೆ ಬಿದ್ದು ಮೂರ್ಛೆ ಹೊಂದಿತು. ಇಷ್ಟರಲ್ಲಿ, ಹರಿಹರನು ಸಮೀಪ ಬಂದು ನೋಡಲು, ಪ್ರತ್ಯಕ್ಷ ಸದ್ಗುರುವು ನಿಂತದ್ದನ್ನು ಕಂಡು - 'ಹೇ ದೀನಾನಾಥಾ, ಸಿದ್ಧರಾಯನೇ, ನಮ್ಮನ್ನು ಸಂಕಷ್ಟದಲ್ಲಿ ರಕ್ಷಿಸಿದಿ' ಅಂದನು. ಸರಸ್ವತಿಯಾದರೂ ದೇಹಸ್ವಭಾವವಾದ ಭಯದಿಂದ ಮೂರ್ಛಾಗತಳಾಗಿ ಬೀಳುವಷ್ಟರಲ್ಲಿ, ಸಿದ್ಧರು ಆಕೆಯ ಹೆಗಲಿಗೆ ಹಿಡಿದು ಆಧರಿಸಿದರು. ಸರಸ್ವತಿಯು  ಆಗ ತಿರುಗಿ, ಸತೇಜ ಸದ್ಗುರು ಮೂರ್ತಿಯನ್ನು ನೋಡಿ ಗದ್ಗದಿತಳಾದಳು. ದಂಪತಿಗಳಿಬ್ಬರಿಗೂ ಅಶ್ರುಧಾರೆಗಳು ನಡೆದವು. ಅವರಂದದ್ದು - 'ಹೇ ಕರುಣಾಕರನೆ ಸಂಕಷ್ಟದಲ್ಲಿ ಪ್ರಾಪ್ತನಾದಿ. ಈ ನಮ್ಮ ಶರೀರಗಳನ್ನು ನಿನ್ನ ಮೇಲಿಂದ ನಿವಾಳಿಸಿ ಚೆಲ್ಲುವೆವು. ನಿನ್ನನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಬಂದಿದ್ದೆವು. ನೀನು ಇಷ್ಟು ದೂರ ಹ್ಯಾಗೆ  ಒಮ್ಮಿಂದೊಮ್ಮೆ  ಪ್ರಾಪ್ತನಾದೆ  ತಂದೆಯೇ, ನಮ್ಮ ಸಂಕಟ ಕಾಲದಲ್ಲಿ ನೀನು ಧಾವನ ಮಾಡಿದಿ, ಹೇ ದಯಾವಂತನೇ''. ಭಾವಿಕ ದಂಪತಿಗಳ ಈ ಭಾಷಣವನ್ನು ಕೇಳಿ, ಆ ದಯಾಘನನಾದ ಸದ್ಗುರುವು ಗದ್ಗದಿತನಾಗಿ - "ನಿಮ್ಮ ಸಮೀಪದಲ್ಲಿ ನಾನಿರುವೆನೆಂದು ನಿಮಗೆ ವಚನ ಕೊಟ್ಟಿದ್ದೇನು. ಎಲ್ಲೆಲ್ಲಿ ನನ್ನ ಭಕ್ತರಿರುವರೋ ಅವರ ಹಿಂದೆ ಮುಂದೆ ನಾನು ಸದಾಕಾಲದಲ್ಲಿ ಇರುವೆನು. ಯಾರು ನನ್ನ ನಾಮಸ್ಮರಣೆಯಲ್ಲಿಯೇ ಅಖಂಡ ರತರಾಗಿರುವರೋ,

ಅವರ ಸಲುವಾಗಿ ನಾನು ಯಾವಾಗಲೂ ಚಿಂತೆ ಮಾಡುತ್ತಿರುತ್ತೇನೆ. ನೀವು ಏನೇನೊ ಭಯಪಡಬೇಡಿರಿ,” ಎಂದು ಸದ್ಗುರುಗಳು ಅನ್ನುವಾಗ, ಆ ವ್ಯಾಘ್ರವು ಮೆಲ್ಲಗೆ ಚೇತರಿಸಿ ಎದ್ದು ಅವರ ಕಡೆಗೆ ಬರತೊಡಗಿತು. ಅದನ್ನು ನೋಡಿ,

ಆ ದಂಪತಿಗಳಿಬ್ಬರೂ ಹೆದರಿ, ಸಿದ್ದರ ಪೃಷ್ಠ  ಭಾಗದಲ್ಲಿ ಹೋಗಿ ನಿಂತುಕೊಂಡರು. ಸದ್ಗುರುಗಳಾದರೂ ಹುಲಿಯ ಸಮೀಪ ಹೋಗಿ ಅದರ ಬೆನ್ನುಮೇಲೆ ಛಪ್ಪರಿಸಿದರು. ಆ ಕೂಡಲೇ ಅದು ನಾಯಿಯಂತೆ ದೀನಭಾವದಿಂದ ಸಿದ್ದರ

ಪಾದಕ್ಕೆ ಬಿತ್ತು. ಇದನ್ನು ನೋಡಿ ಆಶ್ಚರ್ಯಪಟ್ಟ ಆ ದಂಪತಿಗಳು ಆ ಭಯವನ್ನು ಬಿಟ್ಟು ಮುಂದೆ ಬಂದರು. ಆಗ ಸಿದ್ದರಾಜರು ಆ ಹುಲಿಯ ಕಿವಿಯಲ್ಲಿ ಏನೋ ಉಸುರಿದರು. ಕೂಡಲೇ ಆ ವನಚರವು  ಎದ್ದು ಹುಂಕಾರ ಕೊಟ್ಟು, ವನದೊಳಗೆ ಹೊರಟು ಹೋಯಿತು. ಅನಂತರ ಸಿದ್ಧರು ಬಹು ಕೃಪೆಯಿಂದ ಆ ದಂಪತಿಗಳಿಗೆ ಪುನಃ ಆಶ್ವಾಸನವನ್ನು ಕೊಟ್ಟು, ಕೆಲವು ಹೆಜ್ಜೆ ಅವರ ಕೂಡ ನಡೆಯುತ್ತ ಆಕಸ್ಮಾತ್ತಾಗಿ ಅದೃಶ್ಯರಾದರು. ದಂಪತಿಗಳಾದರೂ ತಮಗೆ ಸದ್ಗುರುಗಳು ಬಂದು ರಕ್ಷಣೆ ಮಾಡಿದ್ದನ್ನು ಪುನಃ ಪುನಃ ಸ್ಮರಿಸುತ್ತಾ ಆನಂದಭರಿತರಾಗಿ, ಆ ಯೋಗೀಶನನ್ನೇ ಹೃದಯದೊಳಗೆ ಧರಿಸಿಕೊಂಡು, ಸಾವಕಾಶ ನಡಿಯುತ್ತಾ ತಕ್ಕಕಾಲದಲ್ಲಿ ಕುಮಟಾಗೆ  ಪ್ರಾಪ್ತರಾದರು. ಅಲ್ಲಿ ತಮ್ಮ ಕಾರ್ಯವನ್ನು ತೀವ್ರವಾಗಿ ಮುಗಿಸಿ ಮರಳಿ ಹುಬ್ಬಳ್ಳಿ ಕಡೆಗೆ  ಪ್ರಯಾಣ ಮಾಡುತ್ತ, ಪೂರ್ವದಲ್ಲಿ ವ್ಯಾಘ್ರ ಪ್ರದರ್ಶನವಾದ ಸ್ಥಾನಕ್ಕೆ ಬಂದರು. ಆ ಸಮಯದಲ್ಲಿ ತಮ್ಮ ಮುಂದೆಯೇ  ರಸ್ತೆಯ ಮೇಲೆ ಅದೇ  ವ್ಯಾಘ್ರವನ್ನು ಕಂಡರು. ಆದರೆ ಅದರಲ್ಲಿ ಮೊದಲಿನ ಉಗ್ರ ಲಕ್ಷಣಗಳಿರಲಿಲ್ಲ. ಇವರನ್ನು ಕಂಡ ಕೂಡಲೇ ನಮ್ರ ಭಾವದಿಂದ ಭೂಮಿಯ ಮೇಲೆ ಸುಮ್ಮನೆ ಬೀಳುವಂಥಾದ್ದಾಯಿತು. ಆ ವ್ಯಾಘ್ರವನ್ನು ನೋಡಿ ಸಂಶಯಯುಕ್ತರಾಗಿ ಆ ದಂಪತಿಗಳು ನಿಂತರು. ಹುಲಿಯು ಏಳದಿರುವದನ್ನು ನೋಡಿ ಮೆಲ್ಲಗೆ ಮುಂದೆ ಹೆಜ್ಜೆ ಇಡುವಾಗ್ಗೆ, ಆ ವ್ಯಾಘ್ರವು ದೀನ ಭಾವದಿಂದ ಅವರ ಕಡೆಗೆ ನೋಡುತ್ತಿತ್ತು. ಆಗ್ಗೆ ಹರಿಹರನು ಪತ್ನಿಯನ್ನು ಕುರಿತು- “ಈ ವ್ಯಾಘ್ರದಲ್ಲಿ ದುಷ್ಟ ಲಕ್ಷಣಗಳು ಕಾಣಿಸುವದಿಲ್ಲ. ಆದರೂ ಏನು ಮಾಡೀತು ತಿಳಿಯಲಾಗದು. ಸದ್ಗುರುವೇ ನಮ್ಮನ್ನು ರಕ್ಷಿಸಬೇಕು.'' ಎಂದು ಅವರಿಬ್ಬರೂ ವ್ಯಾಘ್ರದ ಸಮೀಪಕ್ಕೆ ಬಂದರು. ಸಮೀಪ ಬಂದ ಕೂಡಲೇ, ಹುಲಿಯು ಅವರ ಪಾದಕ್ಕೆ ಬಿದ್ದು, ಶಾಂತರೂಪದಿಂದೆದ್ದು, ಅವರ ಮುಂದೆ ನಡೆಯತೊಡಗಿತು. ಕೆಲವು ಹೊತ್ತಿನವರೆಗೆ ಅವರ ಮುಂದೆ ಮುಂದೆ ನಡೆಯುತ್ತಾ, ಆ ಹುಲಿಯು ಪುನಃ ಆ ದಂಪತಿಗಳ ಪಾದಕ್ಕೆರಗಿ ಅರಣ್ಯದೂಳಗೆ ಹೋಯಿತು. ಆಗ ಅವರು ನಿಶ್ಚಿಂತರಾದರು. ಮತ್ತು ಮನಸ್ಸಿನಲ್ಲಿ ಬಹಳ ಆಶ್ಚರ್ಯಪಟ್ಟು, ಸದ್ಗುರು ಮಹಿಮೆ ವರ್ಣಿಸಲಸಾಧ್ಯವೆಂದು ಅಂದುಕೊಂಡು, ಹುಬ್ಬಳ್ಳಿಗೆ ಬಂದು ಮುಟ್ಟಿ, ಸಿದ್ಧಾಶ್ರಮಕ್ಕೆ ಬಂದರು. ಸದ್ಗುರುಗಳಿಗೆ ಭೆಟ್ಟಿಯಾಗಿ ಆತನ ಚರಣಗಳ ಮೇಲೆ ಮಸ್ತಕವನ್ನಿಟ್ಟು, ಅನ್ನುತ್ತಾರೆ - 'ಹೇ ಭಕ್ತ ಸಖನೇ ಧನ್ಯ ಧನ್ಯನು. ಭಕ್ತ ರಕ್ಷಣಾರ್ಥವಾಗಿ ನೀನು ಯಾವಾಗಲೂ ಎಚ್ಚರವಾಗಿರುವಿ. ವಿಚಾರಿಸಿ ನೋಡಿದರೆ, ನೀನು ಇಲ್ಲೇ ಇದ್ದಿ, ಆದರೆ ಅರಣ್ಯದಲ್ಲಿ, ಯಾವಾಗ್ಗೆ ವ್ಯಾಘ್ರವು ಸರಸ್ವತಿಯ ಮೇಲೆ ಹಾರಲಿಕ್ಕೆ ಬಂತು, ಆಗ ರಕ್ಷಿಸಲಿಕ್ಕೆ ನೀನು ಅಲ್ಲಿ ಪ್ರಕಟವಾದಿ'. ಇದನ್ನು ಕೇಳಿ ಸದ್ಗುರುನಾಥನು ಅವರಿಗೆ  ಅಜ್ಞ ಭಾವವನ್ನು ತೋರಿಸಿ, ನಡೆದ ವರ್ತಮಾನ ಕೇಳಿದರು. ಹರಿಹರನು ಅರಣ್ಯದಲ್ಲಿ ನಡೆದ ಅಪೂರ್ವ ಚರಿತ್ರೆಯನ್ನು ನಿವೇದಿಸಿದನು. ಅದನ್ನು ಕೇಳಿದ ಭಕ್ತ ಜನರೆಲ್ಲಾ ಆಶ್ಚರ್ಯ ಚಕಿತರಾದರು.  ಸಿದ್ಧರಂದರು “ಸದ್ಗುರು ಭಾವವು ಯಾವಾಗಲೂ ಸತ್ಯವಾಗಿ ತಾರಕವಾಗಿರುತ್ತದೆ. ಯಾಕೆಂದರೆ ಆ ಸಮರ್ಥನಾದ ಸದ್ಗುರುವು ಭಕ್ತಕಾರ್ಯದಲ್ಲಿ ಸರ್ವದಾ ಜಾಗ್ರತನಾಗಿರುತ್ತಾನೆ". ಈ ವಚನವನ್ನು ಕೇಳಿದವರೆಲ್ಲಾ ಜಯ ಜಯಕಾರ ಮಾಡಿ, “ ಸದ್ಗುರುವಿನ ಮಹಿಮೆ ವರ್ಣಿಸಲಶಕ್ಯವು. ಆತನ ಕೀರ್ತಿಯಿಂದ ಚರಾಚರವು  ತುಂಬಿರುತ್ತದೆ' ಎಂದು ಅನ್ನುವಂಥವರಾದರು. ಅಂದಿನಿಂದ ಆ ದಂಪತಿಗಳು ಸುಖದಿಂದ ಸದ್ಗುರುಗಳ

ಚರಣ ಸನ್ನಿಧಿಯಲ್ಲೇ  ಇರತೊಡಗಿದರು.


ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ  ಕಥೆಗಳ ಲಿಂಕಗಳು 
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ

👇ಕೆಳಗಿನ ಲಿಂಕ್ ಕ್ಲಿಕ್ ಮಾಡಿ WhatsApp ge ಹೋಗುತ್ತೆ ಅಲ್ಲಿ  ನಿಮ್ಮ್ ಫ್ರೆಂಡ್ಸ್ ಲಿಸ್ಟ್ ಬರುತ್ತೆ ಹಾಗೂ ನೀವು ಇರುವ ಗ್ರೂಪ್ ಬರುತ್ತವೆ ಅದನ್ನ select ಮಾಡಿ ಅವರಿಗೆ ಈ ಕಥೆಯನ್ನು ಶೇರ್ ಮಾಡಬಹುದು 👇👇👇

2)Facebook shareಗಾಗಿ👉



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ