ಶಂಕರನು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಸಿದ್ಧರು ರಕ್ಷಿಸಿದ ಹಾಗೂ ಸಿದ್ಧಕೃಪೆಯಿಂದ ಆತನು ಜ್ಞಾನ ಹೊಂದಿದ ಕಥೆ,
🌾 ಶಂಕರನು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ ಸಿದ್ಧರು ರಕ್ಷಿಸಿದ ಹಾಗೂ ಸಿದ್ಧಕೃಪೆಯಿಂದ ಆತನು ಜ್ಞಾನ ಹೊಂದಿದ ಕಥೆ,
ದಕ್ಷಿಣ ದೇಶದಲ್ಲಿ ಮುಕ್ತಪುರ ಎಂಬ ಹೆಸರಿನ ಒಂದು ಗ್ರಾಮವಿರುವುದು. ಅಲ್ಲಿ ಪರಮ ವೈರಾಗ್ಯಯುಕ್ತರಾದ ದಂಪತಿಗಳಿರುವರು. ಇಬ್ಬರೂ ನಿತ್ಯದಲ್ಲಿ ಸಮೀಪದಲ್ಲಿರುವ ದೇವಾಲಯಕ್ಕೆ ಹೋಗಿ, ತಮ್ಮ ಇಷ್ಟ ದೇವನಾದ ಶ್ರೀ ಕೃಷ್ಣನನ್ನು ಪ್ರೇಮಪುರಸ್ಸರವಾಗಿ ಭಜಿಸುತ್ತಿದ್ದು, ಚಿತ್ತದೊಳಗೆ ಏನೊಂದೂ ಸಂಸಾರದ ಚಿಂತೆ ಇಲ್ಲದೆ ಇರುತ್ತಿದ್ದರು. ಅವರ ಹೊಟ್ಟೆಯಲ್ಲಿ ಐದು ಮಂದಿ ಗಂಡು ಸಂತತಿಯಾಗಿ ಆ ಪೈಕಿ ಎರಡನೇಯವನ ಹೆಸರು ಶಂಕರನೆಂದಿತ್ತು. ಈತನ ಚಿಕ್ಕಿಂದಿನಿಂದ ದೇವಾಲಯದಲ್ಲಿ ಹೋಗಿ ನಿತ್ಯ ಪುರಾಣ ಶ್ರವಣದಲ್ಲಿ ತತ್ಪರನಾಗಿ ಇರುತ್ತಿದ್ದನು. ಸಂತ
ಕೃಷ್ಣನು ಜ್ಞಾನೇಶ್ವರಿಯನ್ನು ವಿವರಿಸಿ ಹೇಳುತ್ತಿರುವಾಗ, ಶಂಕರನು ಬಹು ಪ್ರೇಮದಿಂದ ಕೇಳುತ್ತಿದ್ದು, ಶ್ರವಣವಾದ ನಂತರ ಏಕಾಂತಸ್ಥಾನಕ್ಕೆ ಹೋಗಿ, “ಜ್ಞಾನದಾತನಾಗು, ಹೇ ಕೃಷ್ಣನಾಥನೇ'' ಎಂದು ಪ್ರಾರ್ಥಿಸುತ್ತಿದ್ದನು. ಮುಂದೆ ಶಂಕರನಿಗೆ ಲೌಕಿಕ ವಿದ್ಯಾ ಪ್ರಾಪ್ತಿಯಾಗಿ, ಕೃಷ್ಣಭಕ್ತಿಯನ್ನು ಮರೆತನು. ಆಮೇಲೆ ಪತ್ನಿಯೂ ಪ್ರಾಪ್ತಳಾದ್ದರಿಂದ ಆತನಿಗೆ ಸಂಸಾರದೊಳಗೆ ಆಸಕ್ತಿಯು ದೃಢವಾಯಿತು. ಉದ್ಯೋಗ ವ್ಯವಹಾರದಲ್ಲಿ ಅತಿ ಚತುರನಾಗಿದ್ದು, ತೀವ್ರವಾಗಿ
ಧನಪ್ರಾಪ್ತಿಯಾಗಲಾರಂಭಿಸಿತು. ಲೋಕದಲ್ಲಿ ಮಾನ ಹೊಂದುತ್ತಿದ್ದು, ಶಂಕರನ ಮನಸ್ಸು ಪೂರ್ಣ ಪ್ರವೃತ್ತಿಪರವಾಯಿತು. ಅನಂತರ ಅವನಿಗೆ ಸುಂದರನಾದ ಪುತ್ರನು ಜನಿಸಿದನು, ಅದರಿಂದ ಶಂಕರನ ಆನಂದವು ಅಪಾರವಾಯಿತು. ಆದರೆ ಮುಂದೆ ಏನು ಪವಿತ್ರವಾದ ಕಥೆಯು ವರ್ತಿಸಿತು, ಅದನ್ನು ಸಾವಧಾನ ಚಿತ್ತದಿಂದ ಶ್ರವಣ ಮಾಡುವಂಥವರಾಗಿರಿ. ಮಗುವಿಗೆ ಆರು ತಿಂಗಳು ಆದವು. ಒಮ್ಮೆ ಶಂಕರನು ನಿದ್ರಿಸ್ತನಾಗಿದ್ದಾಗ ಸ್ವಪ್ನದಲ್ಲಿ ಒಬ್ಬ ಸನ್ಯಾಸಿ ಬಂದು, ಕ್ರೋಧ ದೃಷ್ಟಿಯಿಂದ ನೋಡುತ್ತಿದ್ದನು. ಕೂಡಲೇ ಸನ್ಯಾಸಿಯು ಅದೃಶ್ಯನಾದನು. ಆದರೆ, ಶಂಕರನು ಎದ್ದು ''ಹರಿ, ಹರಿ'' ಎಂದು ಅಳುತ್ತಾ ಭೂಮಿಗೆ ಬಿದ್ದನು. ಆ ನಾಮದಿಂದ ಕೂಗುತ್ತ ಆತನಿಗೆ ದೇಹಭಾವ ತಪ್ಪಿಹೋಯಿತು. ಗೃಹದೊಳಗಿನ ಮಂದಿ ಎಲ್ಲರೂ ಘಾಬರಿಯಾಗಿ, ಆತನನ್ನು ದೇವರ ಗುಡಿಗೆ ಒಯ್ಯಲು, ಅಲ್ಲಿ ಕೃಷ್ಣಮೂರ್ತಿಯನ್ನು ಕಂಡು ಮತ್ತಿಷ್ಟು ಆಕ್ರೋಶದಿಂದ ನಾಮೋಚ್ಛಾರ ಮಾಡುತ್ತಾ ಅಳುತ್ತಿದ್ದನು. ಈ ಪ್ರಕಾರ ಮೂರು ತಾಸು ತನಕ ಇದ್ದು ಆಮೇಲೆ ಶಂಕರನು ಶಾಂತನಾದನು. ಆದರೆ ಆತನ ಮನೋವೃತ್ತಿಯು ಪೂರ್ಣ ವಿರುದ್ಧ ದೆಶೆಗೆ ತಿರುಗಿತು. ಸ್ತ್ರೀ ಪುತ್ರಾದಿಗಳ ಸಂಬಂಧವು ಆತನ ಮನಸ್ಸಿನೊಳಗಿಂದ ಪೂರ್ಣವಾಗಿ ಹರಿದು ಹೋಯಿತು. ಆತನು ವಿಚಾರಸ್ಥನಾಗಿ, -"ನನ್ನವರ್ಯಾರೂ ಇಲ್ಲ ಎಂದೆನಿಸಿರುವಾಗ, ಈ ಸ್ಥಾನದಲ್ಲಿ ಯಾದರೂ ಯಾತಕ್ಕೆ ಇರಬೇಕು. ಈಗ ಸದ್ಗುರುವನ್ನು ಹುಡುಕುತ್ತ ಹೋಗಬೇಕು,” ಎಂದು ಚಿಂತಿಸುವವನಾದನು.
ಈ ಸಮಯದಲ್ಲಿ ಒಂದು ಪೂರ್ವ ವೃತ್ತಾಂತವು ಆತನ ನೆನಪಿಗೆ ಬಂತು. ಶಂಕರನು ಚಿಕ್ಕ ಹುಡುಗನಿರುವಾಗ, ಒಬ್ಬ ವೃದ್ದನು ಅವನಿಗೆ ಹೇಳಿದ್ದೇನೆಂದರೆ- “ನಾನು ಹುಬ್ಬಳ್ಳಿಗೆ ಹೋದಾಗ, ಅಲ್ಲಿ ತತ್ವವೇತ್ತರಾಗಿರುವ ಪ್ರಸಿದ್ಧ ಮಹಾತ್ಮರಾದ ಸಿದ್ಧಾರೂಢರೆಂಬುವರನ್ನು ಕಂಡಿದ್ದೆ." ಈ ಮಾತು ಆತನು ನೆನಸಿ, ಹುಬ್ಬಳ್ಳಿಯಲ್ಲಿರುವ ಸಿದ್ದಾರೂಡರ ಕಡೆಗೆ ಹೋಗಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದನು. ಹೀಗೆ ನಿಶ್ಚಯಿಸಿ, ಒಂದು ದಿವಸ ಮನೆಯಲ್ಲಿ ಯಾರಿಗೂ ತಿಳಿಯದೆ, ಆತನು ಪೂರ್ವಾಭಿಮುಖನಾಗಿ ಹೊರಟು ಹೋದನು. ಅನಂತರ ಮನೆಯವರು ಹೋಗಿ ಅವನನ್ನು ಶೋಧಿಸಿಕರೆದುಕೊಂಡು ಬಂದರು. ಆದರೆ ಶಂಕರನು ಶ್ರೀ ಸಿದ್ಧಾರೂಢರನ್ನು ಭೆಟ್ಟಿಯಾಗಬೇಕೆಂಬ ತನ್ನ ನಿಶ್ಚಯವನ್ನು ತಿಳಿಸಿದನು. ಆಗ ಒಬ್ಬ ಮಿತ್ರನನ್ನು ಜೊತೆಯಲ್ಲಿ ಕೊಟ್ಟು ಆತನನ್ನು ಹುಬ್ಬಳ್ಳಿಗೆ ಕಳಿಸುವಂಥವರಾದರು. ಶಂಕರನು ಹುಬ್ಬಳ್ಳಿಗೆ ಬಂದು ಶ್ರೀ ಸಿದ್ಧಾರೂಢರನ್ನು ಕಂಡು ಬಹು ಪ್ರೇಮದಿಂದ ಸಾಷ್ಟಾಂಗ ನಮನವನ್ನು ಮಾಡಿದನು. ತನ್ನ ಸಾದ್ಯಂತ ವೃತ್ತಾಂತವನ್ನು ಸದ್ಗುರುಗಳ ಮುಂದೆ ನಿವೇದಿಸಿ - ಹೇ ದಯಾನಿಧಿಯೇ, ನಾನು ಸಂಸಾರದಲ್ಲಿ ಇರಲಾರೆನು, ಪರಮಾರ್ಥವನ್ನು ಯಾವ ರೀತಿಯಿಂದ ಸಾಧಿಸಿಕೊಂಡೇನು ?'' ಎಂದು ಪ್ರಾರ್ಥಿಸಿದ್ದನ್ನು ಕೇಳಿ, ಸದ್ಗುರುರಾಯನು - “ನೀನು ನಾಮ ಸ್ಮರಣೆಯನ್ನು ದೃಢವಾಗಿ ಮಾಡುತ್ತಿರು. ಸದ್ಯದಲ್ಲಿ ನೀನು ಧ್ಯಾನಕ್ಕೆ ಅಧಿಕಾರಿ ಇರುವಿ. ಆದರೆ ಮುಂದೆ ಜ್ಞಾನಕ್ಕೆ ಪಾತ್ರನಾಗುವಿ, ಎಂದು ಅಂದರು. ಈ ಅಮೃತ ಸಮಾನವಾದ ಗುರುವಾಕ್ಯವು ಶಂಕರನ ಕರ್ಣದೊಳಗೆ ಬಿದ್ದ ಕೂಡಲೇ, ಹೃದಯದಲ್ಲಿ ಅತ್ಯಂತ ಸುಖವನ್ನು ಹೊಂದಿ, ಚಿತ್ತದಲ್ಲಿ ಶಂಕೆ ರಹಿತನಾದನು. ಸದ್ಗುರು ವಚನವನ್ನು ಗಟ್ಟಿಯಾಗಿ ಹೃದಯದಲ್ಲಿ ಧಾರಣೆಮಾಡಿ, ತನ್ನ ಸ್ವಗ್ರಾಮಕ್ಕೆ ಹೋದನು. ಅಲ್ಲಿ ಸರ್ವ ಕರ್ಮಧರ್ಮಗಳನ್ನು ತ್ಯಜಿಸಿ, ನಾಮಸ್ಮರಣೆ ಮಾಡುವದಕ್ಕೋಸ್ಕರ ಅರಣ್ಯ ಪ್ರದೇಶದಲ್ಲಿ ಹೋಗಿ ಕುಳಿತನು. ಅಲ್ಲೇ ಅವನಿಗೆ ಒಂದು ಗುಡಿಸಲು ಕಟ್ಟಿಕೊಟ್ಟರು. ಶಂಕರನು ರಾತ್ರಿ ಹಗಲು ಏಕಾಂತದೊಳಗಿರುತ್ತಿದ್ದು, ಸದ್ಗುರು ಚಿಂತನವನ್ನು ಮಾಡುತ್ತ ಇದ್ದನು. ಸ್ವಹಸ್ತದಿಂದ ಅನ್ನವನ್ನು ಬೇಯಿಸಿ, ರುಚಿ ವಿಷಯತ್ಯಾಗಕ್ಕೋಸ್ಕರ, ಅದರೊಳಗೆ ನೀರು ಹಾಕಿಕೊಂಡು ಸಿದ್ಧಾರ್ಪಣವೆಂದು ನುಂಗುತ್ತಿದ್ದನು. ನಿತ್ಯ ಏಕಾಂತದಲ್ಲಿದ್ದು ನಾಮಸ್ಮರಣೆ ಮಾಡುತ್ತಿರುವದರಿಂದ, ಚಿತ್ತವು ಅತ್ಯಂತ ನಿರ್ಮಲವಾಗಿ, ಭೇದ ಭಾವನೆಯೆಲ್ಲಾ ನಿರಸನವಾಯಿತು.
ಒಂದಾನೊಂದು ದಿವಸ ಉಣ್ಣುತ್ತಿರುವಾಗ, ಒಂದು ಕರಿ ನಾಯಿಯು ಒಳಗೆ ಬಂದು, ಅವನು ಉಣ್ಣುತ್ತಿರುವ ತಾಟಿನೊಳಗೆ ಬಾಯಿ ಹಾಕಿ ಸುಖದಿಂದ ಉಣಲಾರಂಭಿಸಿತು. ಸದ್ಗುರು ಪ್ರಸಾದವೆಂದು ಶಂಕರನು ಭಾವಿಸಿ, ಆ ನಾಯಿಯ ಕೂಡ ಅದೇ ತಾಟಿನೊಳಗಿಂದ ತಾನಾದರೂ ಉಣ್ಣುತ್ತ ಇದ್ದನು. ಭೋಜನಾನಂತರ ಶಂಕರನು ಆ ಶ್ವಾನಕ್ಕೆ ನಮಸ್ಕರಿಸಿ ಕಳುಹಿಸಿದನು. ಶ್ವಾನವು ಆ ಸ್ಥಾನದಲ್ಲೇ ಉಳಿಯಿತು, ಮತ್ತು ನಿತ್ಯದಲ್ಲಿ ಶಂಕರನೂ ಅದೂ ಒಂದೇ ಪಾತ್ರೆಯೊಳಗೆ ಉಣ್ಣುತ್ತಿದ್ದರು. ಆ ನಾಯಿ ಮಲವನ್ನು ತಿಂದದ್ದು ನೋಡಿದರೆ, ಶಂಕರನು ತನ್ನ ಸ್ವಹಸ್ತದಿಂದ ಅದರ ಮುಖವನ್ನು ತೊಳೆದು, ಅನಂತರ ಅದರ ಕೂಡ ಉಣ್ಣುತ್ತಿದ್ದನು. ಈ ಪ್ರಕಾರ ದಿನೇ ದಿನೇ ನಡೆಯುತ್ತಿರುವಾಗ, ದೇಹಬುದ್ದಿಯು ಝಾಡಿಸಿ ಹೋಗಿ, ಆತನಿಗೆ ಪೂರ್ಣ ನಿರಭಿಮಾನ ಸ್ಥಿತಿಯು ಪ್ರಾಪ್ತವಾಯಿತು. ಸರ್ವ ಭೂತಗಳಲ್ಲಿಯೂ ಸದ್ಗುರು ಭಾವನೆಯನ್ನು ಮಾಡುವಂಥವನಾದನು. “ಯಾವಾತನು ಭೂತ ಮಾತ್ರಗಳನ್ನು ನಮಸ್ಕರಿಸುವನೋ ಆತನೇ ಅನಂತವಾಗಿರುವ ಪರಮಾತ್ಮನನ್ನು ತೊಡಕಿಸಿ ಬಿಟ್ಟಿರುವನು" ಎಂದು ಇರುವ ಶ್ರೀ ತುಕಾರಾಮರ ವಚನಕ್ಕೆ ಅನುಸರಿಸಿ ವರ್ತಿಸಬೇಕೆಂದು ಶಂಕರನು ಮನಸ್ಸಿನಲ್ಲಿ ನಿಶ್ಚಯಿಸಿದನು. ಈ ಕಾಲದಲ್ಲಿ ಇದೇ ಸಾಧನ ಸಂಬಂಧಿ ಇರುವ ಒಂದು ಶ್ಲೋಕವನ್ನು ಭಾಗವತ ಪುರಾಣ ಏಕಾದಶ ಸ್ಕಂಧದಲ್ಲಿ ನೋಡಿದನು. ಅದನ್ನು ಇಲ್ಲಿ ಹೇಳುವೆನು, ಸಾವಧಾನ ಚಿತ್ತದಿಂದ ಕೇಳಿರಿ, -
|| ಶ್ಲೋಕ || :ವಿಸೃಜ್ಯಸ್ಮಯಮಾನಾನಸ್ವಾನ್ ದೃಶಂ ವ್ರಿಡಾಂಚ ದೈಹಿಕಂ | ಪ್ರಣಮೇದ್ದಂಡವತ್ ಭೂಮಾವತ್ವಚಾಂಡಾಲ ಗೋಖರಾನ್ ||ಟೀಕಾ || “ತನ್ನ ಇಷ್ಟಮಿತ್ರರು, ಬಂಧು ಬಾಂಧವರು,ಬೀಗರು, ಪತ್ನಿ ಪುತ್ರಾದಿಗಳೆಲ್ಲರೂ ನೋಡುತ್ತಿರುವಾಗ, ನಮಸ್ಕಾರ ಮಾಡಲಿಕ್ಕೆ
ನಾಚಿಕೆ ಬರುತ್ತದೆ. ಈ ಪ್ರಕಾರದ ಲಜ್ಜೆಯು ದೇಹ ಬುದ್ದಿ ಸಂಬಂಧವೆಂದು ತಿಳಿದು, ಅದನ್ನು ಬಿಟ್ಟು, ಅಶ್ವ, ಚಾಂಡಾಲ, ಗೋಖರಾದಿಗಳನ್ನು ದಂಡವತ್ ಸಾಷ್ಟಾಂಗ ನಮನ ಮಾಡಬೇಕು." ಶಂಕರನ ಮನಸ್ಸಿಗೆ ಹೇಗೆ ಭಾಸಿಸಿತಲ್ಲ - “ಈ ಪ್ರಕಾರ ಮಾಡತಕ್ಕ ಸಾಧನೆಗೆ ಅಡವಿಯು ಯೋಗ್ಯವಲ್ಲ'' ಎಂದು ಒಂದು ಸಣ್ಣದಾದ ಕಟಿವಸ್ತ್ರದ ಹೊರತು ಇತರ ಅರಿವೆಗಳನ್ನು ತ್ಯಾಗಮಾಡಿ ಊರಿಗೆ ಹೊರಟನು. ಅಲ್ಲಿ ಸ್ತ್ರೀಪುತ್ರ ಇಷ್ಟ ಮಿತ್ರಾದಿಗಳೂ ಮತ್ತು ಪೂರ್ವದಲ್ಲಿ ಮಾನ ಕೊಡುತ್ತಿದ್ದವರೂ ಇರುತ್ತಿದ್ದು, ಇವರು ನೋಡುತ್ತಿರುವಾಗ, ಸರ್ವ ಸ್ಥಿರಚರ ಭೂತಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಡೆದನು. ಇವನನ್ನು ನೋಡಿದವರು ಹುಚ್ಚನೆನ್ನುವರು. ಸ್ತ್ರೀಯರು ಅಂಜಿ ಓಡಿಹೋಗುವರು. ಕೆಲವರು ''ಚಲೋ ಹುಡುಗನಿದ್ದನು. ಇವನ ಸ್ಥಿತಿಯು ಕೆಟ್ಟು ಹೋಯಿತು'' – ಅನ್ನುವರು. ಆದರೆ ಸಾಧು ಸಜ್ಜನರು- 'ಇವನದು ಇದು ಪರಮಾರ್ಥ ಸಾಧನವಿರುವದು. ಸದ್ಗುರು ಕೃಪೆಯಿಂದ ಈತನಿಗೆ ಯುಕ್ತಿ ಸಿದ್ದಿಸಿತು. ಧನ್ಯನಾದನು. ಶಂಕರನ ಈ ವೃತ್ತಿಯು ಸತ್ಯವಾದ ಪಥವಾಗಿರುತ್ತದೆ. ಈತನು ಜ್ಞಾನಕ್ಕೆ ಅಧಿಕಾರಿಯಾಗುವನೆಂಬುದರಲ್ಲಿ ಏನೇನೂ ಸಂಶಯವಿಲ್ಲವು'' - ಎಂದನ್ನುವರು. ಅಂದಿನಿಂದ ಶಂಕರನು ಗ್ರಾಮದ ಸಮೀಪವೇ ಒಂದು ಗುಡ್ಡದ ಮೇಲೆ ಇರುತ್ತಿದ್ದ ಗುಡಿಯಲ್ಲಿರಲಾಂಭಿಸಿದನು. ಆತನ ಪತ್ನಿಯು ಪ್ರತಿದಿನ ಆತನಿಗೆ ಆಹಾರವನ್ನು ಒಯ್ದು ಕೊಡುತ್ತಿದ್ದಳು. ಅಲ್ಲಿ ಅಖಂಡ ಏಕಾಂತವನ್ನು ಸಾಧಿಸಿ, ಸದ್ಗುರು ಭಜನದಲ್ಲಿ ತತ್ಪರನಾಗುತ್ತಿದ್ದನು.
ಒಂದಾನೊಂದು ದಿವಸ ಸದ್ಗುರು ಆತನ ಆಂತರ್ಯದೊಳಗೆ ಬಂದು ಪ್ರೇರಿಸಿದ ಪ್ರಕಾರ ಆತನು ಹುಬ್ಬಳ್ಳಿಗೆ. ಹೋಗಲಿಕ್ಕೆ ಹೊರಟನು. ಗುರ್ವಾಜ್ಞೆ ಎಂದು ತಿಳಿದು ರಾತ್ರಿ ಕಾಲದಲ್ಲಿ ಹೋಗುತ್ತಿರುವಾಗ , ಮಹಾ ವರ್ಷಾಕಾಲವಿದ್ದು ಆಕಾಶವೆಲ್ಲ ಮೋಡಗಳಿಂದ ಮುಚ್ಚಲ್ಪಟ್ಟು ಘೋರಾಂಧಕಾರದಿಂದ ಎಲ್ಲವೂ ಮುಸುಕಿತ್ತು. ಆದರೆ ಸದ್ಗುರುವಿನ ಸಮೀಪದಲ್ಲೆ ಇರುತ್ತಾನೆ, ಎಂಬ ಭಾವನೆಯಿಂದ ಚಿಂತನೆ ಮಾಡುತ್ತ ನಡೆಯುತ್ತಿರುವಾಗ, ದಾರಿಯಲ್ಲಿ ಒಂದು ನದಿ ಬಂತು. ಅದಕ್ಕೆ ಮಹಾ ಓಘ ಬಂದಿತ್ತು. ಆದರೆ ಶಂಕರನು ಏನೇನೂ ವಿಚಾರ ಮಾಡದೆ ಕತ್ತಲೆಯಲ್ಲಿ “ಹೇ ಸದ್ಗುರುವೇ , ಈ ಶರೀರವು ನಿನ್ನದೇ ಇರುವದು. ನಿನ್ನದು ನೀನೇ ರಕ್ಷಿಸಬೇಕು,” ಹೀಗಂದು ಸದ್ಗುರುವನ್ನು ಹೃದಯದಲ್ಲಿ ಚಿಂತಿಸಿ, ಆ ಮಹಾ ಪ್ರವಾಹದಲ್ಲಿ ಹಾರಿದನು. ಆದರೆ ಬಹು ವೇಗದಿಂದ ಹರಿಯುತ್ತಿರುವ ನೀರಿನ ಕೂಡ ಇವನಾದರೂ ತೇಲಿ ಹೋದನು. ಈ ಸಮಯದಲ್ಲಿ ಶಂಕರನು ನೀರೊಳಗೆ ಮುಳುಗುತ್ತಿರುವಾಗ- ಹೇ ನದೀರೂಪಿಯಾದ ಸದ್ಗುರುವೇ, ನಿನ್ನ ಒಡಲೊಳಗೆ ನಾನು ಈಗ ಇರುವೆನು. ಇಂಥಾ ನಿನ್ನಲ್ಲೇ ನನ್ನನ್ನು ಐಕ್ಯಮಾಡಿಕೋ,'' ಎಂದು ಪ್ರೇಮದಿಂದ ಪ್ರಾರ್ಥಿಸಿದನು. ಆ ಕ್ಷಣವೇ ಅಲ್ಲಿ ಸದ್ಗುರುವು ಪ್ರಕಟನಾದನು. ಆ ತೇಜಯುಕ್ತನಾದ ಸದ್ಗುರು ಸಿದ್ದಮೂರ್ತಿಯು ಪ್ರವಾಹದ ಮೇಲೆ ಕುಳಿತುಕೊಂಡಂತೆ ಕಾಣಿಸುತ್ತಿದ್ದು ಶಂಕರನನ್ನು ಕೈಹಿಡಿದು ಎತ್ತಿ ಪರತೀರಕ್ಕೆ ಆತನು ಕರೆದುಕೊಂಡು ಹೋಗುತ್ತಿದ್ದರು. ದಂಡೆಗೆ ಮುಟ್ಟಿಸಿದ ಕೂಡಲೇ ಶಂಕರನು ಆ ಕರುಣಾಕರನ ಪಾದಕ್ಕೆ ಬಿದ್ದು, “ಹೇ ಗುರುವರನೇ, ಈಗ ನನ್ನ ಸಂಗಡಲೇ ಇರು. ನನ್ನನ್ನು ಬಿಟ್ಟು ಹೋಗಬೇಡ,'' ಎಂದು ಅಂದದ್ದಕ್ಕೆ ಸದ್ಗುರುವು - “ನಾನು ನಿನಗೆ ಬೇರೆಯಾಗಿಲ್ಲ. ನನ್ನ ರೂಪವನ್ನೇ ನೀನು ಸರ್ವತ್ರದಲ್ಲಿಯೂ ಕಾಣುವಾಗ, ನನ್ನನ್ನು ಬಿಟ್ಟು ನೀನು ಹ್ಯಾಗಿರುವಿ. ಏನೇನೂ ಚಿಂತೆಯಿಲ್ಲದೆ, ನೀನು ಹುಬ್ಬಳ್ಳಿಗೆ ಬಾ. ಅಲ್ಲಿ ಬಂದು ನನ್ನ ಸನ್ನಿಧಿಯಲ್ಲಿ ಕೆಲಕಾಲ ನೀನು ಇರುವಿ." ಹೀಗಂದು ಸದ್ಗುರುವು ಅದೃಶ್ಯನಾದನು. ಶಂಕರನಾದರೂ ಸದ್ಗುರು ಚಿಂತನೆಯಂಗೈಯುತ್ತಾ ಆನಂದದಿಂದ ಮುಂದೆ ನಡೆದನು. ಎರಡು ದಿನ ಅನ್ನದ್ದೆಶೆಯಿಂದ ಸಹಾ ತಡೆಯದೆ ಅಖಂಡ ನಡೆದನು. ಆಗ ಆತನ ಎರಡೂ ಕಾಲುಗಳು ಬಾತು, ನಡಿಯಲಾರದೆ ಒಂದು ಧರ್ಮಶಾಲೆಯಲ್ಲಿ ಬಿದ್ದನು. ಎರಡು ದಿವಸ ಅನ್ನವಿಲ್ಲದೆ ಶರೀರದಲ್ಲಿ ಶಕ್ತಿಯೂ ಇದ್ದಿಲ್ಲ. ಕಾಲುಗಳಾದರೂ ಬಾತು ಉಬ್ಬಿ ಎತ್ತಿಡುವದು ಅಸಾಧ್ಯವಾಯಿತು. ಆದರೂ ಶಂಕರನು ನಿಶ್ಚಿಂತನಾಗಿ ಸಿದ್ದಸ್ಮರಣೆ ಹೊರ್ತು ಎರಡನೇ ಶಬ್ದ ಉಚ್ಚರಿಸುತ್ತಿದ್ದಿಲ್ಲ. ಯಾವಾತನನ್ನು ವರ್ಣಿಸತೀರದೋ ಆ ಭಕ್ತ ಕರುಣಾಕರನಾದ ಸದ್ಗುರುನಾಥನು ಭಕ್ತನ ಸಂಕಷ್ಟವನ್ನು ತಿಳಿದು, ಬ್ರಾಹ್ಮಣ ರೂಪವನ್ನು ತೊಟ್ಟು, ಶಂಕರನು ಇದ್ದಲ್ಲಿಗೆ ಬರುವಂಥವನಾದನು. ಅನಾಥನಾಗಿ ಬಿದ್ದಿರುವ ಶಂಕರನನ್ನು ನೋಡಿ, ಆ ದಯಾಸಾಗರನಿಗೆ ಕಣ್ಣೋಳಗಿಂದ ಅಶ್ರುಪಾತವಾಗಲಾರಂಭಿಸಿ, ಅವನನ್ನು ಕುರಿತು, ''ನಿನ್ನನ್ನು ಪಾಲನೆ ಮಾಡುವವರು ಯಾರು ಇಲ್ಲವಲ್ಲ, ನಿನ್ನ ಇಚ್ಛಾ ಏನಿದೆ ನನಗೆ ಹೇಳು' ಎಂದು ಕೇಳಿದ್ದಕ್ಕೆ,
ಶಂಕರನು - “ಹುಬ್ಬಳ್ಳಿಗೆ ಹೋಗಿ, ಅಲ್ಲಿ ಗುರುಚರಣವನ್ನು ರಾತ್ರಿ ಹಗಲು ಸೇವಿಸುತ್ತಿರಬೇಕೆಂಬುದೊಂದೇ ಇಚ್ಛೆಯು
ನನಗಿರುವುದು'' ಎಂದು ಉತ್ತರ ಕೊಟ್ಟನು . ಆಗ ಬ್ರಾಹ್ಮಣನು - “ನಿನ್ನ ಕಾಲುಗಳು ಬಾತಿರುವವು, ಅನ್ನವಿಲ್ಲದೆ ದೇಹದಲ್ಲಿ ಶಕ್ತಿಯೂ ಇಲ್ಲವು; ಹೀಗಿರುತ್ತಾ ಈ ಸಮಯದಲ್ಲಿ ಹುಬ್ಬಳ್ಳಿಗೆ ಹ್ಯಾಗೆ ಹೋಗುವಿ? ಇಲ್ಲೇ ಕೆಲದಿನ ನೀನು ಇರಬೇಕಾಗುವದು,” ಎಂದು ಹೇಳಿ, ಆತನು ಹೋಗಿ ಎಣ್ಣೆಯನ್ನು ತಂದು ತಾನೇ ಶಂಕರನ ಕಾಲುಗಳಿಗೆ ಹಚ್ಚಿ ತೀಡುತ್ತಿದ್ದನು, ಮತ್ತು ಎರಡು ವೇಳೆ ಅನ್ನವನ್ನು ತಂದು ಕೊಡುತ್ತಿದ್ದನು. ಮೂರು ದಿವಸಗಳಲ್ಲಿ ಶಂಕರನ ಕಾಲುಗಳು ನೆಟ್ಟಗಾದವು ಮತ್ತು ದೇಹದಲ್ಲಿ ಶಕ್ತಿಯೂ ಬಂತು. ಆಗ ಬ್ರಾಹ್ಮಣನು ಶಂಕರರ ಕೈಯಲ್ಲಿ ರೂಪಾಯಿಗಳನ್ನು ಕೊಡುವಾಗ, ಅವನು ತಗೆದುಕೊಳ್ಳದೆ “ನನ್ನನ್ನು ಆಶೆಗೆ ಹಚ್ಚಬೇಡ; ನಿನ್ನ ಉಪಕಾರವು ನನ್ನಿಂದ ಮರಿಯಲಸಾಧ್ಯವು, ಆದರೆ ನಾನು ಈಗ ಹುಬ್ಬಳ್ಳಿಗೆ ಹೊರಟು ಹೋಗುವೆನು. ನೀನೇ ನನಗೆ ತಾಯಿತಂದೆಯಾದಿ. ನೀನೂ ಸದ್ಗುರುವೇ ಇದ್ದಿ, ಎಂದು ನನಗೆ ತೋರುವದು'' ಹೀಗಂದು ಶಂಕರನು ಬ್ರಾಹ್ಮಣನ ಪಾದಕ್ಕೆ ಬಿದ್ದನು. ಆತನಾದರೂ ಶಂಕರನನ್ನು ಹಿಡಿದೆತ್ತಿ - “ನನ್ನ ಸಂಗಡ ಬಾ, ನಿನ್ನನ್ನು ಆ ಗಾಡಿಯ ಮೇಲೆ ಕೂಡ್ರಿಸುವೆನು,'' ಎಂದು ಹೇಳಿ ಆತನನ್ನು ಕರೆದುಕೊಂಡು ಹೋಗಿ ಬ್ರಾಹ್ಮಣನು ಗಾಡಿಯ ಮೇಲೆ ಕೂಡ್ರಿಸಿ ಹೋದನು.
ಶಂಕರನು ಹುಬ್ಬಳ್ಳಿಗೆ ಬಂದು, ಮಠದಲ್ಲಿರುವ ಸದ್ಗುರುಗಳನ್ನು ಕುರಿತು ಭೆಟ್ಟಿಯಾಗುವಾಗ, ಪ್ರೇಮೋತ್ಕರ್ಷದಿಂದ ಆತನ ಕಣ್ಣೊಳಗಿಂದ ಜಲಧಾರೆಗಳು ಸುರಿಯುತ್ತ - 'ಹೇ ದಯಾಸಾಗರಾ, ಸದ್ಗುರುರಾಯನೇ, ಕಟ್ಟಕಡೆಗೆ ನಿನ್ನ ಪಾದಕ್ಕೆ ಕರೆದುಕೊಂಡೆ. ಈಗ ದೀನನಾದ ನನ್ನನ್ನು ಉದ್ಧರಿಸುವ ಉಪಾಯವನ್ನು ಮಾಡು, "ಎಂದ ಪ್ರಾರ್ಥಿಸಿದ್ದು ಕೇಳಿ,- ನೀನು ನಿತ್ಯದಲ್ಲಿ ವೇದಾಂತ ಶ್ರವಣ ಮಾಡುತ್ತ ಇಲ್ಲೇ ಇರು, ಈಗ ನೀನು ಜ್ಞಾನಕ್ಕೆ ಅಧಿಕಾರಿಯಾಗಿರುತ್ತಿ, ಪ್ರತಿ ದಿನ ವೇದಾಂತ ಶ್ರವಣ ಮಾಡುತ್ತ, ಏಕಾಂತದಲ್ಲಿ ಹೋಗಿ ಅದರದೇ ಮನನಂಗೈಯುತ್ತ ಇದ್ದೀಯೆಂದರೆ , ಹೃದಯದಲ್ಲಿ ಆತ್ಮಜ್ಞಾನವು ಪ್ರಗಟವಾಗಿ, ಅದರಿಂದ ನೀನು ಲೋಕತ್ರಯದಲ್ಲಿ ಧನ್ಯನಾಗುವಿ' ಎಂದು, ಸದ್ಗುರುವರನು ಶಂಕರನ ಮಸ್ತಕದ ಮೇಲೆ ಹಸ್ತವನ್ನು ಇಟ್ಟ ಕೂಡಲೇ ಆತನು ಬ್ರಹ್ಮಾನಂದವನ್ನು ಹೊಂದಿ, ಶ್ರೀ ಸಿದ್ದರನ್ನು ವಂದಿಸಿದನು. ನಿತ್ಯ ಸದ್ಗುರು ಸನ್ನಿಧಿಯಲ್ಲಿ ಕುಳಿತು ಗುರುಮುಖದಿಂದ ಐಕ್ಕಬೋಧವನ್ನು ಶ್ರವಣ ಮಾಡಿ, ಶಂಕರನು ಸುಖದಿಂದ ತಲೆದೂಗುತ್ತ ಇದ್ದನು. ಶ್ರವಣವಾದ ನಂತರ ಅದನ್ನು ಮನನ ಮಾಡುವದಕ್ಕೋಸ್ಕರ ಏಕಾಂತ ಸ್ಥಾನವನ್ನು ನೋಡಿ, ಅಲ್ಲಿ ಕೂಡ್ರುತ್ತಿದ್ದನು. ಈ ಪ್ರಕಾರ ನಿತ್ಯ ಶ್ರವಣ ಮನನ ಮತ್ತು ಜನರೊಳಗೆ ಇರುವಾಗ ನಿದಿಧ್ಯಾಸನ ಘಟಿಸುತ್ತ ಶಂಕರನಿಗೆ ಗುರುಕೃಪೆಯಿಂದ ಪೂರ್ಣ ಜ್ಞಾನವು ಪ್ರಾಪ್ತವಾಯಿತು. ಅದರ ವರ್ಣನೆ ಎಷ್ಟೆಂತ ಮಾಡಲಿ, ಚರಾಚರಯುಕ್ತವಾದ ಈ ಸರ್ವ ಜಗವು ಆತನಿಗೆ ತನ್ನದೇ ಶರೀರ ಎಂಬಂತೆ ಕಾಣಿಸುತ್ತಿರುವದು. ನೋಡುತ್ತಾ ನೋಡುತ್ತಾ ಜಗವೆಲ್ಲಾ ಕರಗಿ ಹೋಗಿ, ಪೂರ್ಣನಾಗಿರುವ ತಾನೇ ಉಳಿಯುವನೆಂದು ಗೋಚರವಾಗುವದು. ಇಲ್ಲಿ ಜ್ಞಪ್ತಿ ಮಾತ್ರ ಇರುತ್ತಿದ್ದು, ದ್ವೈತಭಾವವು ಏನೇನೂ ಇರದು. ನಾನೆಂಬ ಭಾವನೆಯು ನಿಃಶೇಷವಾಗಿ ಅಳಿದು ಹೋಗಿ, ನಿತ್ಯ ಸದ್ರೂಪ ವಸ್ತುವೇ ಅನುಭವಕ್ಕೆ ಬರುವುದು. ನಾನು ನಿತ್ಯವೂ ಹೀಗೆಯೇ ಇರುವೆನು. ನನಗೆ ದ್ವೈತವು ಎಂದೂ ಗೋಚರವಾಗುವದಿಲ್ಲ. ನನ್ನಲ್ಲಿ ದ್ವೈತಕ್ಕೆ ನಿಮಿತ್ಯವಾಗಿದ್ದು ಏನೇನೂ ಇಲ್ಲ. ಇದೇ ಸತ್ಯವಾದ ನನ್ನ ಸ್ವರೂಪವು. ಜಗತ್ತಿನ ಸೃಷ್ಟಿ ಸ್ಥಿತಿ ಲಯಕ್ಕೆ ಸಾಕ್ಷಿಯಾಗಿರುವ ಈ ನನ್ನ ಸ್ವರೂಪವು ನನಗೆ ನಿತ್ಯ ಅಪರೋಕ್ಷವಿದೆ. ಆ ಸ್ವರೂಪಕ್ಕೇ ಮೋಕ್ಷವೆನ್ನುವರು, ಆದರೆ ಅದರಲ್ಲಿ ಬಂಧ ಮೋಕ್ಷಗಳೆಂಬವೆರಡೂ ಇರುವದಿಲ್ಲ. ಇಲ್ಲಿ ದೇಹ ಭಾವವೆಂಬದು ಹಾಸ್ಯಪ್ರದವು, ದ್ವೈತ ಭಾವವು ವಿನೋದವು, ಕಾಮಕ್ರೋಧಾದಿಗಳು ಲಜ್ಜಾಸ್ಪದಗಳು, ಮತ್ತು ವಿಷಯ ಗಂಧವೇ ಅಲ್ಲಿರುವುದಿಲ್ಲ. ಯಾರಾದರು ದೇವರಿಗೆ ಪ್ರಾರ್ಥಿಸುವಾಗ, ತನಗೆ ಪ್ರಾರ್ಥಿಸುತ್ತಾರೆಂತಲೂ, ಈಶ್ವರ ಸ್ತುತಿ ಯಾರಾದರೂ ಮಾಡುತ್ತಿದ್ದರೆ, ತನ್ನದೇ ಸ್ತುತಿಯೆಂಬಂತೆಯೂ, ಆತನಿಗೆ ತೋರುವದು. ಯಾರಾದರೂ ನಾಯಿಗೆ ಹೊಡೆದರೆ ತನಗೆ ಪೆಟ್ಟು ಬಿದ್ದಂತೆ ಕಾಣಿಸುವದು. ಇಷ್ಟೇ ಅಲ್ಲ, ಹೊಡಿಯುವವನು ಸಹಾ ತಾನೇ ಎಂಬುದಾಗಿ ತೋರುವದು. ಆತ್ಮಜ್ಞಾನವಾದವನಿಗೆ ಈ ಪ್ರಕಾರ ಅನುಭವಕ್ಕೆ
ಬರುವದು. ಇಂಥಾ ಆತ್ಮಜ್ಞಾನವು ಸದ್ಗುರುವಿನ ಸತ್ಯ ಕೃಪೆಯಿಂದ ಶಂಕರನಿಗೆ ಪ್ರಾಪ್ತವಾದ ಮೇಲೆ ಆತನು ದೇಹವನ್ನು ಬಿಟ್ಟು ಸದ್ಗುರುವಿನಲ್ಲಿ ಐಕ್ಯ ಹೊಂದಿ ಮುಕ್ತನಾದನು. ಒಂದು ಕ್ಷಣ ಮಾತ್ರ ಸದ್ಗುರು ಸಂಗತಿ ಆಗುವದರಿಂದ ಶಂಕರನು ಬ್ರಹಸ್ಥಿತಿಯನ್ನು ಹೊಂದಿದನು. ಆ ಸಂಗತಿಯ ವಿಭೂತಿ ಇಂಥಾದ್ದದೆಯಲ್ಲ, ಅದು ಸಹಜವಾಗಿ ಮುಕ್ತ ಸ್ಥಿತಿಯನ್ನು ಪ್ರಾಪ್ತ ಮಾಡಿ ಕೊಡುವುದು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
