ಸಿದ್ಧಾರೂಢರನ್ನು ರಕ್ಷಿಸಲು ಚನಮಲ್ಲಪ್ಪನು ಹಾವು ಹಿಡಿದು ಕಡಿಸಿಕೊಂಡಗಾ ಸದ್ಗುರುಗಳು ರಕ್ಷಿಸಿದ ಕಥೆ
🌿ಚನಮಲ್ಲಪ್ಪನು ಸಿದ್ಧರನ್ನು ರಕ್ಷಿಸಲಿಕ್ಕೆ ಹಾವನ್ನು ಹಿಡಿದು, ಹಾವು ಕಡಿದಾಗ ಸದ್ಗುರುಗಳು ರಕ್ಷಿಸಿದ ಕಥೆ
ಶ್ರೀ ಸಿದ್ಧಾರೂಢ ಸದ್ಗುರುನಾಥರು ಸಿದ್ಧಾಶ್ರಮದಲ್ಲಿ ಸ್ಥಿರವಾಗಿರುತ್ತಿದ್ದಾಗ, ನಿತ್ಯದಲ್ಲಿಯೂ ಅವರ ಸನ್ನಿಧಿಗೆ ಚನಮಲ್ಲಪ್ಪನೆಂಬ ಸದ್ಗುಣಿಯಾದ ಭಕ್ತನು ಬರುತ್ತಿದ್ದನು. ಸದ್ಗುರು ಪಾದಗಳಲ್ಲಿ ಆತನ ಭಕ್ತಿಯು ನೆಲೆಗೊಂಡು, ಗೃಹಕೃತ್ಯದ ಚಿಂತೆ ಎಲ್ಲಾ ಬಿಟ್ಟು ಬಿಟ್ಟನು. ನಿತ್ಯ ಕಾಲದಲ್ಲಿಯೂ ಸದ್ಗುರು ಸಮೀಪದಲ್ಲಿ ಆತನು ಇದ್ದು, ಸಿದ್ಧರು ಹೇಳಿದ ಕೆಲಸವನ್ನು ಮಾಡಬೇಕು, ಇಲ್ಲವಾದರೆ ಅವರಿಗೆ ಕೇಳಬೇಕು. ಇಲ್ಲವೆಂದರೆ ಸೇವಾ ಸಿಗುವ ದಾರಿ ನೋಡುತ್ತಾ ಸುಮ್ಮನೆ ಕೂಡ್ರಬೇಕು. ಈ ಪ್ರಕಾರ ಇರುತ್ತಿದ್ದನು. ರಾತ್ರಿ ಕಾಲದಲ್ಲಿ ಊರೊಳಗೆ ನೆರೆಯವರಲ್ಲಿ ಹೋಗಿ ನಡೆಯುತ್ತಿದ್ದು, ಹೊಟ್ಟೆ ಸಲುವಾಗಿ ಸಿಕ್ಕುವಷ್ಟರ ಮೇಲೆ ತಾನು ಹೆಂಡತಿ ಕೂಡ ಜೀವನ ನಡಿಸುತ್ತಿದ್ದನು. ಒಂದಾನೊಂದು ದಿವಸ ಮಠದಿಂದ ಮನೆಗೆ ಬಂದ ಕೂಡಲೇ, ಆತನನ್ನು ಕುರಿತು ಹೆಂಡತಿಯು ಸಿಟ್ಟಿನಿಂದ ಅನ್ನುತ್ತಾಳೆ- “ನೀನು ಸಿದ್ದರ ಕಡೆಗೆ ಹೋಗಿ ಕುಳಿತರೆ, ಮನೆಯ ಚಿಂತೆ ಯಾರು ಮಾಡಬೇಕು. ಮನೆಯಲ್ಲಿ ನಿಶ್ಚಿಂತವಾಗಿ ಊಟ ಸಿಗುತ್ತದೆಂದು, ನೀನು ಇಲ್ಲಿಗೆ ಬರುತ್ತಿ, ಹೊಟ್ಟೆಗಾಗಿ ಮಾತ್ರ ಕೆಲಸ ಮಾಡಿಕೊಂಡಿರಲಿಕ್ಕೆ ನಿನಗೆ ನಾಚಿಕೆ ಇಲ್ಲ. ಹಗಲು ಹೊತ್ತಿನಲ್ಲಿ ಏನಾದರೂ ಕೆಲಸ ಮಾಡಿದ್ದಾದರೆ, ನನಗೆ ಚಲೋ ಶೀರೆಗಳಾದರೂ ಸಿಕ್ಕವು, ಕುತ್ತಿಗೆಗೆ ಎರಡನೇಯವರಿಗೆ ಇರುವಂತೆ ಒಂದು ಬಂಗಾರದ ಸರಿಗೆ ಇಲ್ಲ. ಬೇರೆ ಹೆಂಗಸರು ಇಟ್ಟುಕೊಳ್ಳುವ ನಮೂನೆಯ ಸುಂದರವಾದ ದಾಗಿನೆಗಳೂ ನನಗಿಲ್ಲ. ನಿನ್ನಂಥಾ ದರಿದ್ರನು ನನಗೆ ಗಂಟುಬಿದ್ದ ಮೇಲೆ, ಅವನ್ನು ನಾನು ಹ್ಯಾಗೆ ಕಂಡೇನು ? ಈ ಜನ್ಮದಲ್ಲಿ ನಿನ್ನ ಸಂಗತಿ ಸಾಕು; ಇನ್ನು ಮುಂದೆ ಇಂಥಾ ದುಷ್ಪಗತಿ ನನಗೆ ಬೇಡ. ನಾನು ಎರಡನೇಯವನ ಕೈ ಹಿಡಿದಿದ್ದರೆ, ಒಳ್ಳೇ ಸ್ಥಿತಿಯನ್ನು ಕಾಣುತ್ತಿದ್ದೆ.'' ಈ ಮಾತುಗಳನ್ನು ಕೇಳಿ, ಅವಳನ್ನು ಕುರಿತು ಚನಮಲ್ಲಪ್ಪನು - “ನಾನು ನಿನಗೆ ಕಟ್ಟಿ ಹಾಕಲಿಲ್ಲ,'' ಎಂದು ಅಂದದ್ದಕ್ಕೆ, ಹೆಂಡತಿಯು - “ಹಾಗಾದರೆ ನೀನು ಇಂಥಾ ಭಿಕಾರಿ ಇದ್ದು ಯಾಕೆ ಲಗ್ನ ಮಾಡಿಕೊಂಡಿ,'' ಎಂದು ಸಂತಾಪದಿಂದ ಉತ್ತರ ಕೊಟ್ಟಳು. ಇದನ್ನು ಕೇಳಿ ಚನಮಲ್ಲಪ್ಪನು - “ನಾನು ಭಿಕಾರಿ ಇದ್ದೇನೆಂದು ಈಗಲಾದರೂ ನಿನಗೆ ತಿಳಿಯಿತಲ್ಲ. ಹಾಗಾದರೆ ನೀನು ಸುಖದಿಂದ ಶ್ರೀಮಂತರ ಮನೆಗೆ ಹೋಗಿರು. ನಾನು ಭಿಕಾರಿಯಾಗಿ ನಿನ್ನ ವಚನವನ್ನೇ ಸತ್ಯ ಮಾಡುವೆನು, " ಎಂದು ನುಡಿದು, ತನ್ನ ಮೈಮೇಲಿನ ವಸ್ತ್ರಗಳನ್ನೆಲ್ಲಾ ಕಳೆದು, ಒಂದು ಕೌಪೀನ ಮಾತ್ರ ಧಾರಣೆ ಮಾಡಿ, ಜೋಳಿಗೆ ತೆಗೆದುಕೊಂಡು ಹೊರಟನು. ಮನೆಮನೆಗೆ ಹೋಗಿ ದ್ವಾರದಲ್ಲಿ ನಿಂತು ಶ್ರೀ ಸಿದ್ಧಾರೂಢ ನಾಮದಿಂದ ಕೂಗಿ, ಭಿಕ್ಷೆ ಸಿಕ್ಕಿದ ಮೇಲೆ ಹೋಗುವನು. ಜೋಳಿಗೆ ತುಂಬಾ ಭಿಕ್ಷೆ ತೆಗೆದುಕೊಂಡು ಸಿದ್ದಾಶ್ರಮಕ್ಕೆ ಹೋಗಿ, ಸಿದ್ದಾರೂಢರ ಮುಂದೆ ಇಟ್ಟು ಕೈ ಜೋಡಿಸಿ ನಿಂತುಕೊಂಡನು. ಆತನನ್ನು ನೋಡಿ ಸದ್ಗುರುಗಳು - ''ಇದೇನು ಮಾಡಿದಿ'' ಎಂದು ಕೇಳಿದ್ದಕ್ಕೆ ಚನಮಲ್ಲಪ್ಪನು ಸರ್ವ ವೃತ್ತಾಂತವನ್ನು ನಿವೇದಿಸಿ - ಹೆಂಡತಿಯು ನನಗೆ ವೈರಾಗ್ಯವನ್ನು ಬೋಧಿಸಿದಳು. ಆಕೆಯ ತೀಕ್ಷ್ಮವಾದ ವಚನಗಳಿಂದ ನನ್ನ ಹೃದಯವು ಭೇದಿಸಲ್ಪಟ್ಟು ಸಂಸಾರದಿಂದ ನನ್ನ ಮನಸ್ಸು ತಿರುಗಿ, ನಿನ್ನ ಪಾದಗಳನ್ನೇ ದೃಢವಾಗಿ ಹಿಡಿದಿರುವೆನು,” ಎಂದು ಹೇಳಿದನು, ದಯಾಳುವಾದ ಸದ್ಗುರುಗಳು ಆತನನ್ನು ಸ್ವೀಕರಿಸಿದಾಗ, ಆ ಚನಮಲ್ಲಪ್ಪನಿಗೆ ಬಹಳ ಆನಂದವಾಯಿತು. ಅಂದಿನಿಂದ ಜನಮಲ್ಲಪ್ಪನು ಸದ್ಗುರುವಿನ ಕೂಡ ಮಠದಲ್ಲೇ ಇರುವಂಥವನಾದನು. ನಿತ್ಯದಲ್ಲಿಯೂ ಊರೂಳಗೆ ಹೋಗಿ ಭಿಕ್ಷೆ ಬೇಡಿಕೊಂಡು ತಂದ ಅನ್ನವನ್ನು ಸಿದ್ಧರ ಮುಂದಿಟ್ಟು, ಅವರು ಕೊಟ್ಟಷ್ಟನ್ನು ಮಾತ್ರ ತಾನು ತೆಗೆದುಕೊಳ್ಳುವನು.
ಚನಮಲ್ಲಪ್ಪನು ಮನಸ್ಸಿನಲ್ಲಿ ಹೀಗೆ ಚಿಂತಿಸುವವನಾದನು - “ಗುರು ಸೇವೆಗೋಸ್ಕರ ನಾನು ಇಲ್ಲಿ ಇರುತ್ತಿರುವೆನು. ಆದ್ದರಿಂದ ಗುರು ಸೇವೆಯ ವಿನಹಾ ನನ್ನ ಜೀವಿತವು ಈ ಲೋಕದಲ್ಲಿ ವ್ಯರ್ಥವಾಗಿರುವದು. ಗುರು ಸೇವೆಯೊಳಗೆ ಎಲ್ಲಾ ಸುಖವಿರುತ್ತವೆ. ಅದರ ಅನುಭವವನ್ನು ನಾನು ಪ್ರತ್ಯಕ್ಷ ಪಡೆದುಕೊಳ್ಳುವೆನು. ನಾನು ಈಗ ಗುರು ಗೃಹದಲ್ಲಿ ಬಂದು ಬಿದ್ದಿರುವಾಗ ಇನ್ನು ಮುಂದೆ ಈ ದಿವ್ಯ ಚರಣಗಳನ್ನು ಎಂದೂ ಬಿಡಲಾರೆ.” ಈ ಪ್ರಕಾರ ಸದ್ಭಾವದಿಂದ ಮನಸ್ಸಿನಲ್ಲಿ ಚಿಂತಿಸಿ ಪ್ರತಿದಿನ ಗುರುಗಳ ಎಳುವ ಮೊದಲೇ ತಾನು ಎದ್ದು, ಅವರ ಶಯನಗೃಹದ ದ್ವಾರದಲ್ಲಿ ಅವರು ಎದ್ದು ಹೊರಗೆ ಬರುವ ದಾರಿ ನೋಡುತ್ತ ಕೂಡ್ರುವನು. ಒಂದು ಪಾತ್ರೆಯಲ್ಲಿ ಬಿಸಿನೀರು ತೆಗೆದುಕೊಂಡು ಧ್ಯಾನಶೀಲನಾಗಿ ಕುಳಿತಿರುವಾಗ, ಸದ್ಗುರುಗಳಿಗೆ ಎಚ್ಚರವಾದ ಕೂಡಲೇ, ಅವರ ಸಮೀಪ ಹೋಗಿ ಹಸ್ತ ಹಿಡಿದು ಎಬ್ಬಿಸಿ, ಮೈಮೇಲೆ ಶಾಲು ಹೊದಿಸಿ, ಹೊರಗೆ ಕರೆದುಕೊಂಡು ಬರುವನು. ಅವರು ಶೌಚಕ್ಕೆ ಹೋಗುವಾಗ ತಂಬಿಗೆ ತೆಗೆದುಕೊಂಡು ಹಿಂದಿನಿಂದ ಹೋಗುವನು. ಶೌಚಾಚಮನವಾದ ಮೇಲೆ ಸದ್ಗುರುವರರು ಮುಖ ಪ್ರಕ್ಷಾಳನ ಮಾಡುವಾಗ, ಅವರು ಉಗುಳಿದ ನೀರನ್ನು
ಒಂದು ಪಾತ್ರೆಯೊಳಗೆ ಹಿಡಿದು ತೀರ್ಥಭಾವದಿಂದ ಅದನ್ನು ಕುಡಿಯುವನು. ಸದ್ಗುರುಗಳು ಮಲಗಲಿಕ್ಕೆ ಹೋಗುವಾಗ ಅತ್ಯಾದರದಿಂದ ಅವರ ಹಾಸಿಗೆ ಹಾಸಿ, ಅವರು ಮಲಗಿಕೊಂಡಿರುವಾಗ, ಸಾಕೆನ್ನುವವರೆಗೆ ಪಾದಗಳನ್ನು ಒತ್ತುತ್ತಾ ಸೇವೆ ಮಾಡುತ್ತ ಇರುವನು. ಶಯನ ಗೃಹದ ದ್ವಾರದಲ್ಲಿ ಹೊರಗೆ ತಾನು ಮಲಗಿಕೊಂಡಿದ್ದು, ಒಳಗಿನಿಂದ ಚಕಾರ ಶಬ್ದ ಕೇಳಿದಾಕ್ಷಣ ಎದ್ದು ಒಳಗೆ ನೋಡುವನು. ಚನಮಲ್ಲಪ್ಪನು ಈ ಪ್ರಕಾರ ಬಹು ಪ್ರೇಮದಿಂದ ಸೇವಾ ಮಾಡುತ್ತಿದ್ದರೂ, ಆತನ ಹೃದಯಕ್ಕೆ ತೃಪ್ತಿಯಾಗದೆ ಹೆಚ್ಚಿನ ಸೇವಾದಶೆಯಿಂದ ಆತನು ಯಾವಗಲೂ ಆತುರಪಡುತ್ತಿದ್ದನು.
ಒಂದು ದಿನ ರಾತ್ರಿ ಕಾಲದಲ್ಲಿ ಈ ಪ್ರಕಾರ ಮಲಗಿಕೊಂಡಿರುವಾಗ ಕಿಂಚಿತ್ ಶಬ್ದವು ಕಿವಿಯೊಳಗೆ ಬಿದ್ದ ಕೂಡಲೇ ಎದ್ದು ನೋಡಲು ಒಂದು ಮಹಾ ಸರ್ಪವನ್ನು ಕಂಡನು. ಆ ಸರ್ಪವು ಸದ್ಗುರುಗಳ ಶಯನ ಗೃಹದೊಳಗೆ ಹೋಗುತ್ತಿತ್ತು. ಆಗ ಸದ್ಗುರುಗಳಾದರೂ ಸ್ವಸ್ಥ ಮಲಗಿಕೊಂಡಿದ್ದರು. ಆ ಹಾವನ್ನು ಕಂಡ ಕೂಡಲೇ ಚನಮಲ್ಲಪ್ಪನು ತನ್ನ ದೇಹಭಾನವನ್ನು ಮರೆತು,ಸದ್ಗುರುಗಳನ್ನು ರಕ್ಷಿಸಬೇಕೆಂದು, ಅದರ ಬಾಲವನ್ನು ಹಿಡಿದು ಜಗ್ಗಿ ಹೊರಗೆ ತೆಗೆದನು. ಆಗ ಆ ಸರ್ಪವು ಅತ್ಯಂತ ಕ್ರೋಧಯುಕ್ತವಾಗಿ, ಹೆಡೆಯನ್ನು ಎತ್ತಿ, ಅವನ ಕೈಗೆ ಕಡಿಯಿತು. ಚನಮಲ್ಲಪ್ಪನು ಅದರ ಕಡಿತಕ್ಕೆ ಲಕ್ಷಿಸದೆ, ಅದನ್ನು ತಕ್ಕೊಂಡು ದೂರ ಹೋದನು. ಸಪ್ಪಳವಾದರೆ ಸದ್ಗುರುಗಳು ಎಚ್ಚರವಾದಾರು ಎಂಬ ಭಯದಿಂದ ಆ ದೊಡ್ಡದಾದ ನಾಗರಹಾವನ್ನು ದೂರ ಒಯ್ದು, ಅದು ಮತ್ಯಾರಿಗಾದರೂ ಕಡದೀತೆಂದು ಅದನ್ನು ಕೊಂದು ಬಿಟ್ಟನು. ಹಾಗೆಯೇ ತಿರುಗಿ ಬಂದು, ಸರ್ಪದಂಶದ ಗೊಡವೆ ಇಲ್ಲದೆ ಮಲಗಿಕೊಂಡನು. ಆದರೆ ಆ ಹಾವಿನ ವಿಷವೇರಿ ಆತನು ಪ್ರಜ್ಞಾಹೀನನಾದನು. ಆಗ ಅಕಸ್ಮಾತ್ತಾಗಿ, ಸದ್ಗುರುಗಳು ಎಚ್ಚತ್ತು ನೋಡುವಾಗ, ಚನಮಲ್ಲನು ಸ್ವಸ್ಥ ಬಿದ್ದಿರುವನು. ಆತನನ್ನು ಕರೆದಾಗ್ಯೂ ಏಳದಿರುವದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಆಗ ಅವರು ವಿಚಾರ ಮಾಡುತ್ತಾರೆ - "ನಾನು ನಿತ್ಯ ಏಳುವಾಗ ಇವನಾದರೂ ಜಾಗ್ರತನಾಗುತ್ತಿದ್ದನು. ಇವತ್ತು ಈತನ ಆಚರಣೆ ವಿರುದ್ಧವಾಗಿ ಯಾಕೆ ಕಾಣಿಸುವದು ?” ಎಂದು ಚಿಂತಿಸಿ, ಬೇಗನೇ ಹೊರಗೆ ಬಂದು, ಚನ್ನಮಲ್ಲನನ್ನು ಹಿಡಿದು ಅಲ್ಲಾಡಿಸಿ, ಎಬ್ಬಿಸಲಿಕ್ಕೆ ನೋಡಿದರು. ಎಷ್ಟು ಪ್ರಯತ್ನ ಮಾಡಿದರೂ ಆತನು ಏಳದಿರುವದನ್ನು ನೋಡಿ, ದಿವ್ಯ ದೃಷ್ಟಿಯಿಂದ ವೀಕ್ಷಿಸಿ ಸರ್ಪದಂಶವಾದ ಪೂರ್ಣ ವೃತ್ತಾಂತವನ್ನು ತಿಳಿದುಕೊಂಡರು.
ಆಗ ದಯಾಳುವಾದ ಸದ್ಗುರುನಾಥನು - “ನನ್ನ ಕಂಟಕವನ್ನು ಇವತ್ತು ಇವನು ನಿವಾರಿಸಿದನು. ದೇಹಬುದ್ದಿಯ ಬೀಜವನ್ನೇ ಸುಟ್ಟು ಬಿಟ್ಟು, ಈತನು ಜನ್ಮದ ಸಾರ್ಥಕವನ್ನು ಮಾಡಿಕೊಂಡನು. ಈತನನ್ನು ಈಗ ಸಾಯಗೊಟ್ಟರೆ, ಭಕ್ತ ರಕ್ಷಕನೆಂಬ ಬಿರುದು ವ್ಯರ್ಥವಾಗುವುದು,” ಎಂದು ಚಿಂತಿಸುತ್ತ ಸದ್ಗುರುರಾಯರು ಏನು ಮಾಡಿದರೆಂದರೆ - ಶಿವಾಯನಮಃ ಎಂದು ಉಚ್ಚರಿಸಿ, ತಮ್ಮ ಅಮೃತ ಹಸ್ತದಿಂದ ದಂಶಸ್ಥಾನಕ್ಕೆ ಸ್ಪರ್ಶಿಸಿದರು. ತತ್‌ಕ್ಷಣವೇ ಚನಮಲ್ಲನು ಚೇತರಿಸಿ ಎದ್ದು, ಸದ್ಗುರುಗಳನ್ನು ಕಂಡು, - “ಎಂಥಾ ಗಾಢ ನಿದ್ರೆ ನನಗೆ ಹತ್ತಿತ್ತು ! ಸದ್ಗುರುವೇ, ನಾನು ಒಂದು ಅಪೂರ್ವ ಸ್ವಪ್ನವನ್ನು ಕಂಡೆನು, ಹೇಳುತ್ತೇನೆ ಕೇಳಿರಿ, ಯಮದೂತರು ಬಂದು ನನ್ನನ್ನು ಯಮನ ಮುಂದೆ ಒಯ್ದು ನಿಂದಿರಿಸಿದರು. ಅಷ್ಟರೊಳಗೆ ನಿಮ್ಮಂಥ ಒಬ್ಬ ಸಾಧು ಅಲ್ಲಿಗೆ ಬಂದು, ಯಮನಿಗೆ - 'ಈತನನ್ನು ಈಗಲೇ ಬಿಟ್ಟುಬಿಡು” ಎಂದು ಹೇಳಿದನು. ಕೂಡಲೇ ಯಮನು ಆ ಸಾಧುವನ್ನು ಪೂಜಿಸಿ - "ನಿಮ್ಮ ಆಜ್ಞೆಯೇ ನನಗೆ ಮಾನ್ಯವು " ಎಂದು ದೂತರಿಗೆ ಆಜ್ಞಾಪಿಸಿದನು. ಆ ದೂತರು ತತ್ಕಾಲವೇ ನನ್ನನ್ನು ಇಲ್ಲಿಗೆ ತಂದು ಬಿಟ್ಟರು,'' ಎಂದು ಸ್ವಪ್ನ ವೃತ್ತಾಂತವನ್ನು ಹೇಳಿದ್ದು ಕೇಳಿ ಸದ್ಗುರುಗಳು ಹಾಸ್ಯವದನದಿಂದ, -“ನೀನು ಸರ್ಪವನ್ನು ಕೈಯಿಂದ ಹಿಡಿದು ಯಾಕೆ ಇಲ್ಲಿಂದ ತೆಗೆದುಕೊಂಡು ಹೋದಿ ?” ಎಂದು ಕೇಳಿದರು. ಅದಕ್ಕಾತನು -“ನೀನು ಸರ್ವಜ್ಞನೇ ಇರುವಾಗ, ನಾನೇನು ನಿನ್ನನ್ನು ಕುರಿತು ಹೇಳಲಿ' ಎಂದು ಉತ್ತರ ಕೊಟ್ಟು, ಗುರುಚರಣಗಳನ್ನು ಹಿಡಿಯುವಂಥವನಾದನು. ಆಗ ಚನಮಲ್ಲನು ಅತ್ಯಂತ ಪ್ರೇಮದಿಂದ, - “ಈ ಶರೀರವು ನಿನ್ನದಿದ್ದು ನೀನೇ ರಕ್ಷಿಸಿ, ಸೇವೆಗೋಸ್ಕರ ಇಟ್ಟುಕೊಂಡಿರುತ್ತಿ. ನನ್ನದೇನೂ ಹೋಗಿಯೂ ಇಲ್ಲ ಬಂದೂ ಇಲ್ಲಾ . ಹೀಗಿರುತ್ತಾ ಸುಖ, ದುಃಖಗಳು ನನಗೆಲ್ಲಿ ತಟ್ಟುವವು ?” ಎಂದು ಅಂದದ್ದು ಕೇಳಿ, ಆ ಸಿದ್ಧ ದಯಾಘನನು ಬಹಳ ಸಂತೋಷಪಟ್ಟನು.
ಒಂದಾನೊಂದು ಕಾಲದಲ್ಲಿ ಸದ್ಗುರುಗಳು ಜ್ವರ ಬಂದು ಶಯ್ಯೆಯ ಮೇಲೆ ಮಲಗಿಕೊಂಡಿದ್ದರು. ಆ ಸಮಯದಲ್ಲಿ ಅವರ ಪಾದಗಳ ಕಡೆಗೆ ಕುಳಿತಿರುವರು. ಸದ್ಗುರುಗಳಿಗೆ ಕೆಮ್ಮು ಬಂತೆಂದರೆ ಇವನು ಏನು ಮಾಡುವನೆಂದರೆ - 'ಅವರು ಶ್ಲೇಷ್ಮವನ್ನು ಉಗುಳುವಾಗ ತಾನು ಬಾಯಿ ತೆರೆದು ಅದನ್ನು ತಕ್ಕೊಂಡು, ಇದು ಅಮೃತ ಸಮಾನವೆಂದು ತಿಳಿದು, ನುಂಗಿ ಬಿಡುವನು. ಇದರಿಂದ ಚಿತ್ತಕ್ಕೆ ಅತ್ಯಂತ ನಿರ್ಮಲತೆಯು ಪ್ರಾಪ್ತಿಯಾಗುವದು. ಅಲ್ಲಿ ಇಡೀ ರಾತ್ರಿ ಕುಳಿತಿರುವಾಗ, ಬಹು ಪ್ರೇಮದಿಂದ ಸದ್ಗುರುನಾಥನನ್ನು ಚಿಂತಿಸುತ್ತ, ಪ್ರೇಮವು ಅನಿವಾರ್ಯವಾಗಿ ನೇತ್ರಗಳಿಂದ ಅಶ್ರುಪಾತವಾಗುತ್ತಿತ್ತು. ಆಗ ಗುರುಸೇವಾ ಹ್ಯಾಗೆ ಮಾಡಬೇಕಂತ ಮನಸ್ಸಿನಲ್ಲಿ ವಿಚಾರಿಸುತ್ತ - “ನಾನು ಸದ್ಗುರು ಪಾದಗಳಿಗೆ ಪಾದರಕ್ಷೆಯಾಗುವೆನು, ಹೀಗಾದರೆ ನಿರಂತರ ಆತನ ಚರಣಗಳಲ್ಲಿ ಇರಲಿಕ್ಕೆ ಶಕ್ಯವಾಗುವದು. ಆತನ ಹಾಸಿಗೆಯಾದನಂದರೆ, ಸದ್ಗುರುವು ನನ್ನ ಮೇಲೆ ಮಲಗಿರುವಾಗ, ಆತನ ದೇಹದ ಸುಖಸ್ಪರ್ಶವನ್ನು ನಾನು ನಿತ್ಯ ಭೋಗಿಸುತ್ತಿರುವೆನು. ನಾನು ಆತನು ಹೊತ್ತುಕೊಳ್ಳುವ ಶಾಲು ಆದನೆಂದರೆ, ನನ್ನನ್ನು ಹೊತ್ತುಕೊಂಡಿರುವಾಗ, ಆತನ ಶರೀರದ ಸುವಾಸನೆಯನ್ನು ನಿತ್ಯ ಆಘ್ರಾಣಿಸುತ್ತಾ ಸುಖದಿಂದಿರುವೆನು. ಗುರುಗಳಿಗೆ ಏನೇನು ವಸ್ತುಗಳು ಬೇಕಾಗಿರುವವೊ ಅವ್ಯಲ್ಲ ಆಗಿದರೆ ನನ್ನ ಕಾಮನೆಗಳು ಸಿದ್ದಿಸುವವು. ಅದು ಹೇಗೆಂದರೆ ಸದ್ಗುರು ಪ್ರೀತಿಯನ್ನು ನಾನು ಸಂಪಾದಿಸುವೆನು. ಆತನ ದೆಶೆಯಿಂದ ಈ ದೇಹವನ್ನು ಸವೆಸುವೆನು, ಮತ್ತು ಇದರ ಸಲುವಾಗಿ ಅನೇಕ ಜನ್ಮಗಳನ್ನು ತೆಗೆದುಕೊಳ್ಳುವೆನು. ಆತನಿಗೋಸ್ಕರ ನಾನು ಪುಷ್ಪಲತೆಯಾಗಿ ನಿತ್ಯ ಆತನನ್ನು ಪುಷ್ಪಗಳಿಂದ ಪೂಜಿಸುವೆನು. ಈ ಪ್ರಕಾರ ಸೇವಾ ನನಗೆ ಯಾವಾಗ ದೊರಕೀತು ?” ಎಂದು ಚನಮಲ್ಲಪ್ಪನು ಮನಸ್ಸಿನಲ್ಲಿ ಆತುರಪಡುತ್ತ ಕುಳಿತಿರುವಾಗ, ಸದ್ಗುರು ದಯಾಳನು ಮೂತ್ರ ವಿಸರ್ಜನೆಗೆ ಎದ್ದನು. ಇದನ್ನು ನೋಡಿ ಚನಮಲ್ಲಪ್ಪನು - “ಸದ್ಗುರುವೇ ನಿನಗೆ ಹೊರಗೆ ಹೋಗಲಿಕ್ಕೆ ಶಕ್ತಿಯಿಲ್ಲ, ಇಲ್ಲೇ ಕೂಡ್ರು, ಪಾತ್ರೆ ಇಡುವೆನು,'' ಎಂದು ಹೇಳಿ ಏನು ಮಾಡಿದರೆಂದರೆ, " ಪಾತ್ರೆ ಇಟ್ಟಿದ್ದೇನೆ” ಎಂದು ನುಡಿದು ತಾನೇ ಮುಖ ಪಸರಿಸಿ, ಮೂತ್ರವನ್ನೆಲ್ಲಾ ತನ್ನ ಮುಖದೊಳಗೆ ತೆಗೆದುಕೊಂಡು ಗಟಗಟನೇ ಕುಡಿದುಬಿಟ್ಟನು. ಚನ್ನಮಲ್ಲಪ್ಪ ಶಿಷ್ಯರು ಧನ್ಯ ಧನ್ಯನನು. ಇದಕ್ಕೂ ಹೆಚ್ಚಿನ ಗುರುಸೇವೆಯು ಇಲ್ಲವು. ವೇದ ಶಾಸ್ತ್ರ, ಪುರಾಣೇತಿಹಾಸಗಳನ್ನೆಲ್ಲಾ ಹುಡುಕಿದರೂ ಇಂಥಾ ಗುರುಸೇವಾ ಮಾಡುವವನನ್ನು ಕಾಣಲಾರೆವು, ದೇವಾದಿದೇವನಾದ ಆ ಸದ್ಗುರುರಾಯನನ್ನು ಚನಮಲ್ಲಪ್ಪನು ದೇಹಾಭಿಮಾನವನ್ನು ಪೂರಾ ಬಿಟ್ಟು ಬಿಟ್ಟು, ತನ್ನವನಾಗಿ ಮಾಡಿಕೊಂಡನು. ಇಷ್ಟಾದ ಮೇಲೆ ಆತನಿಗೆ ಸ್ವಯಮೇವ ಆತ್ಮಜ್ಞಾನವು ಗುರುಕೃಪೆಯಿಂದ ಪ್ರಕಾಶಿಸುವಂಥಾದ್ದಾಯಿತು. ಇಲ್ಲಿ ಗುರುಸೇವೆಯ ಸೀಮಾ ಹತ್ತಿತು. ಸಿದ್ದ ಸದ್ಗುರುವು ಆತ್ಮಾರಾಮನೇ ಅವತರಿಸಿದ್ದು, ಆತನನ್ನು ಈ ಪ್ರಕಾರ ಭಜಿಸಿ, ಚನಮಲ್ಲಪ್ಪನು ಮಂಗಲಧಾಮವನ್ನು ಹೊಂದಿದನು.
👇👇👇👇👇👇👇👇👇👇👇👇👇👇
ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ
ಎಲ್ಲಾ ಕಥೆಗಳ ಲಿಂಕಗಳು
ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ
1)WhatsApp shareಗಾಗಿ click ಮಾಡಿ📲☎️
2)Facebook shareಗಾಗಿ👉
3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚
«««««ಓಂ ನಮಃ ಶಿವಾಯ »»»»»»»
