ಭೋಳೆಭಕ್ತನು ಬಾವಿಯೊಳಗೆ ಬಿದ್ದಾಗ ಅವನಿಗೆ ದರ್ಶನ ಕೊಟ್ಟು ಆತ್ಮಜ್ಞಾನ ಕರುಣಿಸಿದರು.

 🍁 ಭೋಳೆ ಭಕ್ತನಿಗೆ ಸಿದ್ಧಾರೂಢರು ತಮ್ಮ  ಜ್ವರವನ್ನು ಕೊಟ್ಟರು. ಆತನ ಭಾವಿಯೊಳಗೆ ಬಿದ್ದಾಗ ಅವನಿಗೆ ದರ್ಶನವನ್ನು ಕೊಟ್ಟರು. 



ಶ್ರೀ ಸಿದ್ಧಾರೂಢ ಸದ್ಗುರುನಾಥನು ಸಿದ್ಧಾಶ್ರಮದಲ್ಲಿ ಶೋಭಿಸುತ್ತಿರುವಾಗ, ಮಹಿಶೂರ ಪ್ರಾಂತದಿಂದ ಒಬ್ಬ ಸದ್ಭಕ್ತನು ಅವರಿಗೆ ಶರಣು ಬಂದನು. ಸದ್ಗುರುಗಳು ಆತನ ಮುಖದ ಕಳೆಯನ್ನು ನೋಡಿ, ಈತನು ಭೋಳೆ ಸ್ವಭಾವದ  ಭಕ್ತನಿದ್ದಾನೆಂದು ತಿಳಿದು ಅವನಿಗೆ ಭೋಳೆ ಭಕ್ತನೆಂದೆ ಹೆಸರಿಟ್ಟರು. ಸದ್ಗುರುಗಳನ್ನು ಕುರಿತು, ಆತನು ಪ್ರಾರ್ಥಿಸುತ್ತಾನೆ- “ಹೇ ಸಿದ್ಧಾರೂಢನೇ, ನಿನ್ನ ಕೀರ್ತಿಯನ್ನು ಕೇಳಿ, ನಾನು ನಿನಗೆ ಶರಣು ಬಂದಿರುತ್ತೇನೆ, ನೀನು ಕೃಪಾಳುವಾದ ಸದ್ಗುರು ಇರುವಿ, ದೀನನಾದ ನನ್ನನ್ನು ತಾರಿಸು. "ಸದ್ಗುರುಗಳು ಆತನ ಪ್ರಾರ್ಥನೆಯನ್ನು  ಸ್ವೀಕರಿಸಿ - ಬೋಳೆ ಭಕ್ತನೇ ನೀನು ವೇದಾಂತ ಶ್ರವಣಕ್ಕೆ ಬರುತ್ತಿರು, ಸೇವೆಯನ್ನೂ  ಮಾಡುತ್ತ ಇದ್ದಿಯೆಂದರೆ ನಿಶ್ಚಯವಾಗಿ ನಿನಗೆ ಕಲ್ಯಾಣವಾಗುವದು,'' ಎಂದು ಹೇಳಿದರು. ಅನಂತರ ಭೋಳೆ ಭಕ್ತನು ಊರೊಳಗೆ ಒಂದು ಬಿಡಾರ ಮಾಡಿಕೊಂಡು ಇದ್ದು, ನಿತ್ಯದಲ್ಲಿಯೂ ಸಿದ್ದಾಶ್ರಮಕ್ಕೆ ಬಂದು ವೇದಾಂತ ಶ್ರವಣ ಮಾಡುತ್ತಿದ್ದನು. ಅವನ ಹತ್ತಿರ ಒಂದು ಹಣದ ಗಂಟು ಇದ್ದುದ್ದರಿಂದ ಅವನ ಮನಸ್ಸು ಬಹಳ ಚಂಚಲವಾಗುತ್ತಿತ್ತು. ವೇದಾಂತ ಶ್ರವಣಕ್ಕೆ ಕುಳಿತಿರುವಾಗ, ಮನಸ್ಸು ಮನೆಯ ಕಡೆಗೆ ಹೋಗುವದು. ಮನೆಯಲ್ಲಿ ಹಾಸಿಗೆ ಮೇಲೆ ಮಲಗಿಕೊಂಡಿರುವಾಗ, - ಕಳ್ಳರು ಕನ್ನ ಇಕ್ಕಿ ಒಳಗೆ ಬಂದು ದ್ರವ್ಯ ಎಲ್ಲಾ ಕದ್ದುಕೊಂಡು ಹೋದರೆ ಹೊಟ್ಟೆದಶೆಯಿಂದ ಏನು ಮಾಡೋಣ ಎಂದು ಚಿಂತೆ ಮಾಡುವನು. ಈ ಪ್ರಕಾರ ಚಿಂತೆಯಿಂದ ಆತನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಮರುದಿನ ಮಠಕ್ಕೆ ಹೋಗಿ ಶ್ರವಣಕ್ಕೆ ಕುಳಿತಾಗ, ನಿದ್ರೆ ಮತ್ತು ಬಂದು ತೂಕಡಿಸುತ್ತಿದ್ದನು, ಅಥವಾ ಕಳ್ಳರ ಭಯದಿಂದ ಮನಸ್ಸು ಮನೆಯಲ್ಲಿದ್ದ ಹಣದ ಕಡೆಗೆ ಹೋಗುತ್ತಿತ್ತು. ಇಂಥಾ ಸ್ಥಿತಿಯನ್ನು ಸದ್ಗುರುಗಳು ನೋಡಿ, ''ಈತನಿಗೆ ಮನಸ್ಸಿನಲ್ಲಿ ಚಿಂತೆ ಬಹಳ ಇರುವುದು. ಈತನಲ್ಲಿ ಖಚಿತವಾಗಿ ಮುಮುಕ್ಷು ಲಕ್ಷಣಗಳಿರುವವು, ಆದರೆ ಧನ ಒಂದೇ ಅಂತರಾಯವಿರುವದು'', ಎಂದು ಚಿಂತಿಸುವವರಾದರು. ಒಂದಾನೊಂದು ರಾತ್ರಿ ಕಾಲದಲ್ಲಿ ಆ ಭೋಳೆ ಭಕ್ತನು, ಚಿಂತೆಯಿಂದ ಬಹಳ ರಾತ್ರೆ ತನಕ ಎಚ್ಚರ ಇದ್ದು, ತುಸು ರಾತ್ರಿ ಇರುವಾಗ ನಿದ್ದೆ ಹೋದನು. ಅದೇ ಸಮಯದಲ್ಲಿ ಕಳ್ಳರು ಮನೆಯ ಬಾಗಿಲು ಒಡೆದು ಒಳಗೆ ಬಂದು, ಭೋಳೆ ಭಕ್ತನಿಗೆ ಹಿಡಿದು ಒದರದಂತೆ  ಅವನ ಬಾಯಿಯೊಳಗೆ ಅರಿವೆಯನ್ನು ತುಂಬಿ ಒಂದು ಕಂಬಕ್ಕೆ ಅವನನ್ನು ಬಿಗಿದು ಕಟ್ಟಿದರು. ಆನಂತರ ಅವನ ದ್ರವ್ಯವನ್ನೆಲ್ಲಾ ತೆಗೆದುಕೊಂಡರು. ಆ ಸಮಯದಲ್ಲಿ ಆತನಿಗೆ ಯಾರು ಸಹಾಯ ಮಾಡಲಿಲ್ಲ. ದ್ರವ್ಯಲೋಭವು ಆತನನ್ನು ಪೂರ್ಣವಾಗಿ ವ್ಯಾಪಿಸಿಕೊಂಡು, ಮನಸ್ಸಿನಲ್ಲಿ ಸದ್ಗುರು ಸ್ಮರಣೆಯೂ ಬರಗೊಡಲಿಲ್ಲ. ಕಳ್ಳರಾದರೂ ಅವನ ವಸ್ತ್ರಗಳನ್ನು ಸಹಾ ಕದ್ದುಕೊಂಡು, ಅವನಿಗೆ ಒಂದು ಕೌಪೀನದ  ಮೇಲೆ ಬಿಟ್ಟು, ಹೊರಟು ಹೋದರು. ಕಳ್ಳರೆಲ್ಲಾ ಹೋದ ಬಳಿಕ, ನೆರೆಯವರು ಬಂದು ನೋಡುವಾಗ, ಕೌಪೀನಧಾರಿಯಾಗಿ ಸ್ತಂಭಕ್ಕೆ ಕಟ್ಟಲ್ಪಟ್ಟ ಭೋಳೆ ಭಕ್ತರನ್ನು ಕಂಡರು. ಅವನ ಮೇಲೆ ಬಹಳ ದಯಾ ಹುಟ್ಟಿ, ಅವರು ಆತನನ್ನು ಬಿಚ್ಚಿಬಿಟ್ಟರು. ಆತನು ನೆಟ್ಟಗೆ ಸಿದ್ಧಾರೂಢ ಸದ್ಗುರುಗಳ ಕಡೆಗೆ ಬಂದು, ಅವರ ಪಾದಕ್ಕೆ ಬಿದ್ದು, ವರ್ತಮಾನವನ್ನು ಹೇಳಿ ಅಳಲಾರಂಭಿಸಿದನು. ಅದಕ್ಕೆ ಸದ್ಗುರುಗಳನ್ನುತ್ತಾರೆ - ''ದುಃಖವನ್ನು ಯಾವಾಗಲೂ ಕಲ್ಯಾಣಕ್ಕೋಸ್ಕರವಾಗಿ ಈಶ್ವರನು  ಕೊಡುತ್ತಾನೆ. ಲೋಕದಲ್ಲಿ ಷಡ್ರಿಪುಗಳು ನಿತ್ಯದಲ್ಲಿಯೂ ಜನರೊಳಗಿಂದ ಮಹತ್‌ಧನವನ್ನು ಕದ್ದುಕೊಳ್ಳುತ್ತವೆ. ಜೀವನಿಗೆ ಅಂಥಾ ಧನಕ್ಕಿಂತ ಹೆಚ್ಚಿನ ಧನವೇ ಇಲ್ಲ. ಅದು ನಾಶವಾದರೂ ಯಾರು ಘಾಬರಿಯಾಗುವದಿಲ್ಲ. ಹೀಗಿರುವಾಗ,ಇಂಥಾ  ಕ್ಷಣಿಕವಾದ ಧನದ್ದೆಶೆಯಿಂದ ನೀನು ಚಿಂತೆ ಮಾಡುವುದು ಯೋಗ್ಯವಲ್ಲ. ಮುಂದೆ ನಿನಗೆ ಅದ್ಭುತವಾದ ಧನ ಸಿಕ್ಕಿತು ಮತ್ತು ಆ ಧನವು ನಿನ್ನ ಹತ್ತಿರ ಶಾಶ್ವತವಾಗಿ ಉಳಿಯುವುದು'. ಈ ಪ್ರಕಾರ ಸದ್ಗುರುನಾಥನು ಅಂದು, ಆತನಿಗೆ ತನ್ನ ಮೈಮೇಲಿನ ಧೋತರವನ್ನು ತೆಗೆದುಕೊಟ್ಟನು. ಆಗ ಭೋಳೆಭಕ್ತನು - “ನಾನು ಎಲ್ಲಿಗೆ ಹೋಗಲಿ, ನಿನ್ನ ಚರಣಗಳಲ್ಲಿಯೇ ಇರುವೆನು. ಭಿಕ್ಷೆಯಿಂದ ಉದರವನ್ನು ತೃಪ್ತಿಪಡಿಸಿ, ಚಿತ್ತವನ್ನು ನಿನ್ನ ಪಾದದಲ್ಲಿಯೇ ಇಡುವೆನು' ಎಂದು ಅಂದದ್ದು ಕೇಳಿ ಸದ್ಗುರುಗಳು, ಆನಂದದಿಂದ ಆತನನ್ನು ಆಲಂಗಿಸಿ, “ಭೋಳೆಭಕ್ತ ಎಂಬ ನಾಮವು ನಿನಗೆ ಈಗ ಒಪ್ಪುವುದು. ನೀನು ಸುಖದಿಂದ ಮಠದೊಳಗೆ ಇರು.” ಎಂದು ಹೇಳಿದರು. ಕಳ್ಳರು ಆತನ ದ್ರವ್ಯ ಹರಣ ಮಾಡಿಕೊಂಡು ಹೋದಂದಿನಿಂದ ಅವನ ಚಿಂತೆ ಎಲ್ಲಾ ಹೋಗಿಬಿಟ್ಟಿತು. ರಾತ್ರಿಯಲ್ಲಿ ಸುಖದಿಂದ ನಿದ್ದೆ ಮಾಡುತ್ತಿದ್ದು, ಶ್ರವಣ ಕಾಲದಲ್ಲಿ ನಿದ್ದೆ ಬರುತ್ತಿದ್ದಿಲ್ಲ. ವೇದಾಂತ ಶ್ರವಣದಲ್ಲಿ ಚಿತ್ತೈಕಾಗ್ರತೆ ಹೊಂದಿ, ಎಲ್ಲಾ ವಿಷಯ ವಾಸನೆಗಳು ನಾಶವಾದವು, ಮತ್ತು ಹೃದಯದಲ್ಲಿ ವೈರಾಗ್ಯವು ಉತ್ಪನ್ನವಾಯಿತು. ಅನ್ಯ ವಿಷಯಗಳಿಂದ ಮನಸ್ಸು ಆಕರ್ಷಿಸಲ್ಪಡದೆ, ಚಿತ್ತವು ಸದ್ಗುರು ಸೇವೆಯಿಲ್ಲಯೇ ರಮಿಸುವಂಥಾದ್ದಾಯಿತು. 


ಒಂದಾನೊಂದು ಸಮಯದಲ್ಲಿ ಸದ್ಗುರುಗಳಿಗೆ ಚಳಿಜ್ವರ ಬಂದು ಬಹಳ ನರಳುತ್ತಿದ್ದರು. ಆಗ ಶಿವರಾತ್ರಿಯ ಮಹೋತ್ಸವ ಕಾಲವು  ಸಮೀಪ ಬಂತು. ಭಕ್ತರೆಲ್ಲಾ ಅತ್ಯಂತ ಚಿಂತಾಕ್ರಾಂತರಾಗಿದ್ದು ಸದ್ಗುರುಗಳಿಗೆ ತಿಳಿದು, ಉತ್ಸವದ್ದಶೆಯಿಂದ ಬಂದಂಥಾ ಸಮಸ್ತ ಜನರು ನಿರಾಶೆಯಾಗಿ ಹೋಗುವರೆಂದು ಚಿಂತಿಸುವಂಥವರಾದರು. ಆಗ ಸಿದ್ದರು ಏನು ಮಾಡಿದರೆಂದರೆ - ತನ್ನ ಅತ್ಯಂತ ಸಮೀಪದ ಭಕ್ತಜನರನ್ನು ಕರೆದು ಪ್ರತಿ ಒಬ್ಬನಿಗೆ ಚಳಿ ಜ್ವರ ತಗೆದುಕೊಳ್ಳುವಿಯಾ ?" ಎಂದು ಕೇಳುತ್ತಿದ್ದರು. ಒಬ್ಬನಂದನು - "ನಾನು ಜ್ವರದಿಂದ ಬಿದ್ದರೆ ಮನೆಯಲ್ಲಿ ಹೆಂಡತಿ ಮಕ್ಕಳು ಘಾಬರಿಯಾಗುವರು.” ಮತ್ತೊಬ್ಬನು - “ನನಗೆ ವ್ಯವಹಾರದಲ್ಲಿ ಬಹಳ ಜರೂರಿನ ಕೆಲಸಗಳಿವೆ," ಎಂದು ಹೇಳಿದನು. ಇನ್ನೊಬ್ಬನು - “ನನ್ನ ಸ್ತ್ರೀ ಗರ್ಭಿಣಿ ಇರುತ್ತಾಳೆ”, ಬೇರೊಬ್ಬನು - ನನಗಿನ್ನೂ ಲಗ್ನವಾಗಿಲ್ಲ,” ಮತ್ತೊಬ್ಬನು - “ನನ್ನ ಕಾಂತೆಯು ಬಹಳ ತರುಣಿಯಿದ್ದಾಳೆ. ನಾನು ಸತ್ತರೆ ಏನು ಮಾಡುವದು ?'' ಎಂದು ಈ ಪ್ರಕಾರ ಅಂದು ಮೆಲ್ಲ ಮೆಲ್ಲನೆ ಹೊರಟು ಹೋದರು. ಆಗ ಸನ್ಯಾಸಿ ಶಿಷ್ಯರು ಉಳಿದರು. ಅವರಿಗೆ ಸ್ವಾಮಿಯವರು ಕೇಳಿದಾಗ, ಒಬ್ಬನು - “ನನಗೆ ಕರೆದುಕೊಂಡು ಹೋಗಲಿಕ್ಕೆ ಭಕ್ತರು ಬಂದಿರುವರು,” ಮತ್ತೊಬ್ಬನು- “ನನ್ನ ಶಾಸ್ತ್ರಾಭ್ಯಾಸವು ಪೂರ್ಣವಾಗಲಿಲ್ಲ. ಇನ್ನೂ ಶೇಷ ಉಳಿದಿರುವುದು, ಇನ್ನೊಬ್ಬನು - "ನಾನು ನಾಳಿನ ದಿವಸ ಕ್ಷೇತ್ರ ಯಾತ್ರೆಗೆ ಹೋಗವವನಿದ್ದೇನೆ' ಎಂದು ನಾನಾ ಪ್ರಕಾರದ ನೆವಗಳನ್ನು ಹೇಳಿ ಎಲ್ಲರೂ ತಪ್ಪಿಸಿಕೊಳ್ಳುವಂಥವರಾದರು. ಆಗ ಸಿದ್ಧರು ಭೋಳೆ ಭಕ್ತನಿಗೆ - “ನೀನು ಈ ಚಳಿ ಜ್ವರವನ್ನು ತೆಗೆದುಕೊಳ್ಳುವಿ ಏನು ?” ಎಂದು ಕೇಳಿದರು. ಅದಕ್ಕೆ ಭೋಳೆ ಭಕ್ತನು- "ಮಹಾ ಪ್ರಸಾದವಾದ ಈ ಚಳಿ ಜ್ವರವನ್ನು ಅವಶ್ಯವಾಗಿ ನನಗೆ ಕೊಡಬೇಕು. ಆದರೆ ನಾನು ಸತ್ತರೆ ನಿನ್ನ ಮೇಲೆ ನಿಮಿತ್ತ ಬರಬಾರದು, ಈ ಪ್ರಕಾರ ಮಾಡು. ನಿನ್ನ ಸನ್ನಿಧಿಯಲ್ಲಿ ನಾನು ಸತ್ತದ್ದಾದರೆ, ನಾನು ಧನ್ಯನಾದನೆಂದು ತಿಳಿಯುವೆನು. ನಿನ್ನ ಸೇವೆ ಮಾಡುವದರಿಂದ ಇನ್ನೂ ನನಗೆ ತೃಪ್ತಿಯಾಗಲಿಲ್ಲ, ಆದ್ದರಿಂದ ಈ ಜ್ವರಾನುಭೋಗ ರೂಪ ಸೇವೆಯನ್ನು ನನಗೆ ದಯಪಾಲಿಸಬೇಕು,” ಎಂದು ಪ್ರಾರ್ಥಿಸಿದನು. ಈ ಪ್ರಕಾರ ಭೋಳೆ ಭಕ್ತನ  ವಚನವನ್ನು ಕೇಳಿ, ಸದ್ಗುರುಗಳು ಅತ್ಯಂತ ಸಂತೋಷಪಟ್ಟು, “ಹಾಗಾದರೆ ಜ್ವರವನ್ನು ತೆಗೆದುಕೋ'' ಎಂದು ಅವನನ್ನು ತಮ್ಮ ಹಸ್ತದಿಂದ ಸ್ಪರ್ಶಿಸಿ ಜ್ವರವನ್ನು ಕೊಟ್ಟರು. ಕೂಡಲೇ ಭೋಳೆ ಭಕ್ತನಿಗೆ ಜ್ವರ ಬಂತು, ಮತ್ತು ಸದ್ಗುರುಗಳು ನಿರೋಗಿಗಳಾಗಿ ಎದ್ದು ಕುಳಿತರು. ಆಗ ಎಲ್ಲಾ ಭಕ್ತರಿಗೂ ಆನಂದವಾಯಿತು; ಮತ್ತು ಉತ್ಸವವು ಯಥಾಸಾಂಗವಾಗಿ ನಡೆಯಿತು. ಉತ್ಸವ ಕಾಲದಲ್ಲಿ ಸಿದ್ದರಾಯರು ಕ್ಷಣ ಕ್ಷಣಕ್ಕೆ ಭೋಳೆ ಭಕ್ತನ ನಿಸ್ಸಿಮ ಭಕ್ತಿಯನ್ನು ನೆನೆಸುತ್ತಿದ್ದರು. ಮತ್ತು ಗಳಿಗೆ ಘಳಿಗೆಗೆ  ಅವನ ಹತ್ತರ ಬಂದು ನೋಡಿ, -“ಅಂಜಬೇಡ ಅಂಜಬೇಡ' ಅನ್ನುತ್ತಿದ್ದರು. ಮಹೋತ್ಸವ ತೀರಿದ ಕೂಡಲೇ ಸದ್ಗುರುಗಳು ಆತನ ಸಮೀಪ ಬಂದು, - ಜ್ವರವನ್ನು ಈಗ ತಿರುಗಿ ತೆಗೆದುಕೊಳ್ಳುವೆನು', ಎಂದು ಹೇಳಿದ್ದನ್ನು ಕೇಳಿ ಭೋಳೆ ಭಕ್ತನು, -“ನೀನು ಜ್ವರವನ್ನು ತೆಗೆದುಕೊಂಡದ್ದಾದರೆ, ಅನೇಕ ಭಕ್ತ ಜನರಿಗೆ ದುಃಖವಾಗುವದು,'' ಎಂದು ಅಂದನು. ಅದಕ್ಕೆ ಸಿದ್ಧರು - “ನೀನು ಜ್ವರದಿಂದ ಮಲಗಿದರೆ, ನನಗೆ ಅತ್ಯಂತ ದುಃಖವಾಗುವದಲ್ಲ,'' ಎಂದು ಕೇಳಿದ್ದಕ್ಕೆ ಆತನು - “ಈ ಜ್ವರವೂ ನನಗೆ ಬೇಕಾಗಿದೆ, ನಾನು ಇದನ್ನು ಎರಡನೇಯವರಿಗೆ ಕೊಡಲೊಲ್ಲೆ. ನೀನು ಸ್ವಸ್ಥವಾಗಿರುವದನ್ನು ನೋಡಿದರೆ ಸಾಕು, ನನಗೆ ಆನಂದವಾಗುವದು.” ಎಂದು ನುಡಿದನು. ಈ

ವಚನವನ್ನು ಕೇಳಿ, ಸರ್ವರು, “ಈತನು ಧನ್ಯನು ಧನ್ಯನು, ದೇಹ ಮಮತೆಯನ್ನು ಬಿಟ್ಟು ಗುರು ಕೃಪೆಗೆ ಪೂರ್ಣ  ಪಾತ್ರನಾಗಿದ್ದಾನೆ," ಎಂದು ಅನ್ನುವಂಥವರಾದರು. ಸಿದ್ದಗುರುಗಳ ಬಹಳ ಸಂತೋಷಯುಕ್ತರಾಗಿ, ಆ ಭೋಳೆ  ಭಕ್ತನ

 ಮೈಯನ್ನು ತನ್ನ ಅಮೃತ ಹಸ್ತದಿಂದ ಸ್ಪರ್ಷಿಸಿ ಆತನ ಜ್ವರವನ್ನು ಹೋಗಲಾಡಿಸಿದರು. ಆ ಕೂಡಲೇ ಆತನು ಎದ್ದು ಕುಳಿತುಕೊಂಡು, ಅಳಲಾರಂಭಿಸಿ, “ನನಗೆ ಯಾಕೆ ಸ್ವಸ್ಥ ಮಾಡಿದಿ ? ಈಗ ನೀನು ಜ್ವರದಿಂದ ಮಲಗಿದ್ದಾದರೆ, ನನ್ನಿಂದ ಆ ದುಃಖವು ಸಹಿಸಲಾಗದೆ ನಾನು ಪ್ರಾಣವನ್ನು ಕೊಡುವೆನು.' ಎಂದು ಅಂದ ವಚನ ಕೇಳಿ ಸದ್ಗುರುಗಳು, -“ಆ  ರೋಗದ  ಬಾಧೆ ತೀರಿತು. ಇನ್ನು ಮೇಲೆ ಬರಲಾರದು. ನೀನು ನಿಶ್ಚಿಂತನಾಗಿರು ಎಂದು ಹೇಳಿದರು.



ಒಂದಾನೊಂದು ದಿನ ತಾಸು ರಾತ್ರಿಯಾಗುತ್ತಲೇ, ಭೋಳೆ ಭಕ್ತನಿಗೆ ಸದ್ಗುರುಗಳು ಸಮೀಪ ಕರಿಸಿ, - ''ನಾನು ಹೊರಗೆ ಹೋಗುವೆನು. ನೀನು ನನ್ನ ಸಂಗಡಲೇ ಬಾ,'' ಎಂದು ಹೇಳಿದ್ದಕ್ಕೆ, ಸದ್ಗುರು ವಚನವನ್ನು ಮಾನ್ಯ ಮಾಡಿ, ಭೋಳೆ ಭಕ್ತನು ತತ್ಕಾಲ ಸಿದ್ದರ ಹಿಂದೆ ಹೊರಟನು. ಇಬ್ಬರೂ ಕತ್ತಲೆಯೊಳಗೆ ಹೋಗುತ್ತಿರುವಾಗ, ಭೋಳೆ ಭಕ್ತನು ತನ್ನ ಮುಂದೆ ನಡೆಯುತ್ತಿರುವ ಸದ್ಗುರು ಮೂರ್ತಿಯಲ್ಲಿಯೇ  ಲಕ್ಷವಿಟ್ಟು ನಡೆಯುತ್ತಿದ್ದನು. ಆಗ ಅಕಸ್ಮಾತ್ತಾಗಿ, ಆ

ಗುರುಮೂರ್ತಿಯು  ಮುಂದೆ ಇರುವ ಬಾವಿಯೊಳಗೆ ಬೀಳುವುದನ್ನು ಕಂಡನು. ಆಗ ಗಡಬಡಿಸಿ ಭೋಳೆ ಭಕ್ತರು ಓಡಿ, ತತ್‌ಕ್ಷಣವೇ ಆ ಕೂಪದಲ್ಲಿ ತಾನೂ ಧುಮುಕಿದನು. ತುಸು ನೀರು ಇರುತ್ತಿದ್ದ ಆ ಭಾವಿಯೊಳಗೆ ಬಿದ್ದು ಆತನ ಮೈಯಲ್ಲಾ ಜರ್ಜರವಾಗಿ ಹೋಯಿತು. ಆದರೂ ಮನಸ್ಸಿನ ನಿರ್ಧಾರವನ್ನು ಬಿಡದೇ, ಅತಿ ದುಃಖದಿಂದ ಸದ್ಗುರುವನ್ನು

ಸ್ಪರಿಸುವಂಥವನಾದನು. ಆ ಕೂಡಲೆ ಆತನು ತನ್ನ ಕಣ್ಣೆದುರಿಗೆ ವಿದ್ಯುಲ್ಯತೆಯಂಥಾ ಒಂದು ಪ್ರಕಾಶವನ್ನು ಕಂಡನು. ಆ ಪ್ರಕಾಶವನ್ನು ನೋಡುತ್ತಾ, ನೋಡುತ್ತಾ, ಮನಸ್ಸಿನಲ್ಲಿ ಅತ್ಯಂತ ಆನಂದಭರಿತನಾದನು. ಆಗ ಪ್ರಕಾಶದ  ಮಧ್ಯದಲ್ಲಿ ಸದ್ಗುರು ರೂಪವನ್ನು ಕಂಡು, ತತ್ಕಾಲವೇ ಎದ್ದನು, ಮತ್ತು ಹಾರಿ, ಆ ರೂಪವನ್ನು, ಎರಡೂ ಕೈಗಳಿಂದ ತೆಕ್ಕೆ ಹಾಕಿ ಅತಿ ಪ್ರೇಮದಿಂದ ಆಲಿಂಗಿಸುತ್ತಿರುವಾಗ, ಅದರೊಳಗೆ ಐಕ್ಯತ್ವವನ್ನು ಹೊಂದಿ, ಅಖಂಡಾನಂದ ಸಾಗರದಲ್ಲಿ ಮುಳುಗಿ ಹೋದನು. ದೇಹ ಭಾನವು ತಪ್ಪಿಹೋಯಿತು; ಗುರು ಶಿಷ್ಯ ಎಂಬ ಭೇದವು ಕರಗಿ ಹೋಯಿತು, ಮತ್ತು

ಈ ಕಾಲದಲ್ಲಿ ಗುರು ಸ್ವರೂಪದಲ್ಲಿ ತಲ್ಲೀನನಾಗಿ ಹೋಗುವಂಥವನಾದನು. ಹೀಗೆ ಐದು ಗಳಿಗೆವರೆಗೆ ಐಕ್ಯ ಭಾವದೊಳಗೆ ಲೀನವಾಗಿದ್ದು, ಪುನಃ ಭೋಳೆ ಭಕ್ತನು ಐಕ್ಯತ್ವ ಶಿಥಿಲವಾಗಿ, ಸದ್ಗುರು ರೂಪಕ್ಕೆ ಬೇರೆಯಾಗಿ, ಅದನ್ನು ತನ್ನೆದುರಿಗೆ ನೋಡುತ್ತ ಇದ್ದನು. ಆದರೆ ಆ ಐಕ್ಯತ್ವದ ಅನುಭವವು ಮರೆಯದೆ ಅಖಂಡಾನಂದದಲ್ಲಿ ಇರುತ್ತಿದ್ದನು. ಅನಂತರ ಮೆಲ್ಲ ಮೆಲ್ಲನೆ ಆ ಪ್ರಕಾಶವು ಕುಂದುತ್ತ ನಡೆಯಿತು, ಮತ್ತು ಅದರ ಕೂಡ ಸದ್ಗುರು ರೂಪವೂ ಅದೃಶ್ಯವಾಯಿತು. ಆದರೆ ಆನಂದವು ಖಂಡಿಸಲ್ಪಡದೆ, ಭೋಳೆ ಭಕ್ತನು ಉನ್ಮತ್ತನಂತಿದ್ದನು. ಆನಂದ ಸಮುದ್ರದಲ್ಲಿ ಮುಳುಗಿಕೊಂಡು, ನಾಲ್ಕುಘಳಿಗೆ ತನಕ ಇದ್ದು, ಆಮೇಲೆ ದೇಹದ ಮೇಲೆ ಸ್ವಲ್ಪ ಸ್ಮೃತಿ ಬಂದ ಕೂಡಲೇ ದೇಹ ದುಃಖವೂ ನೆನಪಿಗೆ ಬಂತು. ಅಷ್ಟರಲ್ಲಿ ಭಾವಿಯ ಮೇಲಿಂದ ಸದ್ಗುರು ಧ್ವನಿಯು ಕೇಳಬಂತು. ಕೂಡಲೇ ದುಃಖವನ್ನೆಲ್ಲಾ ಮರೆತು ಬಿಟ್ಟನು. ಸದ್ಗುರುಗಳು ಅನ್ನುತ್ತಾರೆ - 'ಹೇ ಭೋಳೆ  ಭಕ್ತನೆ, ನನ್ನ ಪ್ರಿಯನೇ ನೀನು ಎಲ್ಲಿರುತ್ತೀ, ಕಾಣಿಸುವದಿಲ್ಲ,” ಅಂದದ್ದು ಕೇಳಿ, ಆತನು, - "ನಾನು ಇಲ್ಲಿ ಭಾವಿಯೊಳಗಿರುವೆನು' ಎಂದು ಉತ್ತರ ಕೊಟ್ಟನು. ಆಗ ದಯಾಳುವಾದ ಸಿದ್ಧರು ತಮ್ಮ ಹಸ್ತಗಳನ್ನು ಉದ್ದ ಮಾಡಿ, ಎರಡೂ ಕೈಗಳಿಂದ ಆ ಭೋಳೆ ಭಕ್ತರನ್ನು ಹಿಡಿದು, ಭಾವಿಯೊಳಗಿಂದ ಎತ್ತಿ ಮೇಲಕ್ಕೆ ತಗೊಂಡರು. ಆಗ ಸದ್ಗುರುಗಳು ಆತನನ್ನು ನೋಡಿ ಬಹು ಪ್ರೇಮದಿಂದ ದೃಢಾಲಿಂಗನವನ್ನು ಕೊಟ್ಟರು. ಕೂಡಲೇ ಭೋಳೆ ಭಕ್ತನ  ಶರೀರ ದುಃಖವೆಲ್ಲಾ  ಹೋಗಿ ಪೂರ್ಣ ಸದೃಢನಾದನು. ಸದ್ಗುರುನಾಥನು ಆತನ ಮೇಲಿನ ಅತ್ಯಂತ ಕೃಪೆಯಿಂದ ಸಮಾಧಿ ಸುಖವನ್ನೇ ಕೊಡುವಂಥವನಾದನು. ಸದ್ಗುರುವಿನ ಕಾರ್ಯಗಳು - ವಿಚಿತ್ರವಾಗಿರುತ್ತವೆ. ಏನೇನೂ ಅರಿಯದ ಆ ಭೋಳೆ ಭಕ್ತನಿಗೆ ಆತ್ಮಜ್ಞಾನವನ್ನು ಪ್ರಾಪ್ತಮಾಡಿಕೊಟ್ಟನು. ವೇದ ಶಾಸ್ತ್ರದಿಗಳನ್ನೇನೂ ಪಠಿಸದೆ ಇದ್ದರೂ, ಆ ಭೋಳೆ  ಭಕ್ತನು ಚಿತ್ತದಲ್ಲಿ ಶುದ್ಧಭಾವವನ್ನು ಧರಿಸಿ, ದೇಹಬುದ್ದಿಯನ್ನು ಬಿಟ್ಟು, ಸದ್ಗುರು ಸೇವಾ ಮಾಡಿದ ಮಾತ್ರದಿಂದ ಪ್ರತ್ಯಕ್ಷ ಬ್ರಹ್ಮರೂಪಾಗಿ ಹೋದನು. ಈ ಪ್ರಕಾರವಾದ  ಭೋಳೆ ಭಕ್ತನ ಕಥೆಯನ್ನು ಶ್ರವಣ ಮಾಡಿದ ಮಾತ್ರದಿಂದ ಸರ್ವ ಪಾಪಗಳು ಸತ್ಯವಾಗಿ ನಾಶವಾಗುತ್ತವೆ. ಮತ್ತು ಸದ್ಗುರುನಾಥನ ಕೃಪೆಯಿಂದ ಜ್ಞಾನವೇ ಪ್ರಾಪ್ತವಾಗುವದು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಪರಶುರಾಮಪಂತನು ರೋಣಕ್ಕೆ ಹೋಗುವಾಗ ಸದ್ಗುರುಗಳು ಟಿಕೀಟು ತಂದು ಕೊಟ್ಟರು. ದಾರಿಯಲ್ಲಿ ಸಿದ್ಧರು ಬಂದು ಅವರಿಗೆ ಉಪಚಾರ ಮಾಡಿದ ಅದ್ಭುತ ಕಥೆ,

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ