ಕಳ್ಳರು ಬಂದು ನಡುದಾರಿಯಲ್ಲಿ ಯಾತ್ರಿಕರನ್ನು ಪೀಡಿಸಿತ್ತಿರುವಾಗ ಸಿದ್ಧಾರೂಢರು ಮಹಾರೂಪವನ್ನು ಧರಿಸಿ ಕಳ್ಳರಿಂದ ಯಾತ್ರಿಕರನ್ನು ರಕ್ಷಣೆ ಮಾಡಿದ ಕಥೆ

 🕉️ಕಳ್ಳರು ಬಂದ  ನಡುದಾರಿಯಲ್ಲಿ ಯಾತ್ರಿಕರನ್ನು ಪೀಡಿಸಿತ್ತಿರುವಾಗ ಸಿದ್ಧಾರೂಢರು ಮಹಾರೂಪವನ್ನು ಧರಿಸಿ ಕಳ್ಳರಿಂದ ಯಾತ್ರಿಕರನ್ನು ರಕ್ಷಣೆ ಮಾಡಿ ಮಠದ ವರೆಗೆ ಕಳ್ಳರನ್ನು ಓಡಿಸಿಕೊಂಡು ಬಂದ ಕಥೆ.



ಶ್ರೀ ಮಹಾಶಿವರಾತ್ರಿಯ ಉತ್ಸವದ್ದೇಶೆಯಿಂದ ದೂರ ದೂರ ಗ್ರಾಮಗಳಿಂದ ಜನರು ಚಕ್ಕಡಿಗಳಲ್ಲಿ ಕುಳಿತುಕೊಂಡು ಅತ್ಯಾದರದಿಂದ ಸಿದ್ಧಾಶ್ರಮಕ್ಕೆ ಬರುವುದು. ಒಮ್ಮೆ ಒಂದಾನೊಂದು ಗ್ರಾಮದೂಳಗಿಂದ ನಾಲ್ಕು ಚಕ್ಕಡಿಗಳು ಹೊರಟವು, ಅವುಗಳೊಳಗೆ ಅನೇಕ ಸ್ತ್ರೀಯರು ತಮ್ಮ ಮಕ್ಕಳ ಸಮೇತ ಕುಳಿತು ಶ್ರೀ ಸಿದ್ಧಾರೂಢರ  ಜಾತ್ರೆಯ ಉದ್ದೇಶದಿಂದ ಹೊರಟಿದ್ದರು. ಇವರ ಜೊತೆಗೆ ನಾಲ್ಕು ಮಂದಿ ಮಾತ್ರ ಪುರುಷರು ನಡೆದುಕೊಂಡು ಬರುತ್ತಿದ್ದರು. ಸ್ತ್ರೀಯರು ಕಡಗ, ಕಂಕಣ ಇತ್ಯಾದಿ ಅನೇಕ ಸುವರ್ಣ ಭೂಷಣಗಳಿಂದ ಭೂಷಿತರಾಗಿದ್ದು, ಸಿದ್ಧ ಸ್ಮರಣೆ ಮಾಡುತ್ತ ಸದ್ಗುರುಕಥೆಗಳನ್ನು ವರ್ಣಸುತ್ತ ಆನಂದದಿಂದ ಬರುತ್ತಿದ್ದರು. ಈ ಪ್ರಕಾರ ಬರುವಾಗ ಸಂಜೆ ಹೊತ್ತು ಆಗಿತ್ತು. ಆ ರಸ್ತೆಯ ಮೇಲೆ ಈ ನಾಲ್ಕು ಮಂದಿ ಪುರುಷ ವಿನಹಾ ಮತ್ತ್ಯಾರೂ ಇದ್ದಿಲ್ಲ. ಅಕಸ್ಮಾತ್ತಾಗಿ ಪಾರ್ಶ್ವದ ಗಿಡ ಕಂಟಿಗಳೊಳಗಿಂದ ಇಪ್ಪತ್ತನಾಲ್ಕು ಮಂದಿ ದರೋಡೆಖೋರ ಜನರು, ಭಯಂಕರ ಧ್ವನಿಯಿಂದ ಕೂಗುತ್ತ ಬಹು ಆವೇಷದಿಂದ ಆ ಗಾಡಿಗಳ ಕಡಿಗೆ ಓಡುತ್ತಾ ಬಂದರು. ಅವರ ಕೈಗಳಲ್ಲಿ ಶಸ್ತ್ರಗಳಿದ್ದವು. ಅವರ ಮುಖಗಳು ಭೀಕರವಾಗಿದ್ದು, ನೋಡಿದ ಕೂಡಲೇ ಹೃದಯ ಕಂಪಾಯಮಾನವಾಗುತ್ತಿತ್ತು. ಕೈಗಳಿಂದ ಆಯುಧಗಳನ್ನು ಬೀಸುತ್ತ, “ಹಿಡೀರಿ, ಬಡಿರಿ” ಎಂಬ ಶಬ್ದಗಳು

ಮುಖದಿಂದ ಹೊರಡುತ್ತಿದ್ದವು. ಆ ಕಳ್ಳರು ಬಂದು ಮೊದಲು ಗಾಡಿಗಳ ಸಂಗಡ ನಡೆಯುತ್ತಿದ್ದ ಆ ನಾಲ್ಕು ಮಂದಿ ಪುರುಷರನ್ನು ಹಿಡಿದು, ಆ ಮೇಲೆ ಗಾಡಿ ಹೊಡಿಯುವವರನ್ನೂ ಹಿಡಿದುಕೊಂಡು ಹೋಗಿ, ಪ್ರತಿ ಒಬ್ಬನನ್ನು ಒಂದೊಂದು  ಗಿಡಕ್ಕೆ ಕಟ್ಟಿ ಹಾಕಿದರು. ಗಾಡಿಯಲ್ಲಿ ಹೆಂಗಸರು ಮತ್ತು ಮಕ್ಕಳ ಮಾತ್ರ ಉಳಿದಿದ್ದರು. ಇವರು ಆ ಕಳ್ಳರನ್ನು ನೋಡಿ ಹೌಹಾರಿ, ಬಹಳ ಆಕ್ರಾಂತ ಮಾಡುವಂಥವರಾದರು. ಗಂಡಸರೆಲ್ಲರನ್ನೂ ಹಿಡಿದುಕೊಂಡು ಹೋಗಿ ಗಿಡಗಳಿಗೆ ಕಟ್ಟಿ ಹಾಕಿದ್ದನ್ನು ಹೆಂಗಸರು ನೋಡಿ ಏನು ಉಪಾಯ ತೋಚದೆ ಭ್ರಮಿಷ್ಟರಾಗಿ, ಕೆಲವರು ಆಭರಣಗಳನ್ನು ಅಡಗಿಸುತ್ತಾರೆ. ಯಾರು ಸೀರೆ ಸೆರಗಿನಿಂದ ಕೂಸುಗಳನ್ನು ಮುಚ್ಚುತ್ತಾರೆ, ಯಾರು ಮಕ್ಕಳನ್ನು ಅಳಿಸಬೇಡಿರಿ ಅನ್ನುತ್ತಾರೆ, ಯಾರು ತಾವೇ ಆಕ್ರೋಶದಿಂದ ಅಳುತ್ತಾರೆ. ಒಬ್ಬಾಕೆಯನ್ನುತ್ತಾಳೆ- ''ನಾನು ಮನೆಯೊಳಗೆ ಆಭರಣಗಳನ್ನಿಟ್ಟು ಇಟ್ಟು  ಬರುತ್ತಿದ್ದೆ, ಆದರೆ ಕಳ್ಳರು ಬರುವರಂತ ನನಗೇನು ಗೊತ್ತು ? ಯಾತ್ರೆ ಸಲುವಾಗಿ ದಾಗಿನೆಗಳನ್ನು ಕಳೆದುಕೊಂಡೆ.” ಮತ್ತೊಬ್ಬಾಕೆಯು - "ಆರೂಢ ಜಾತ್ರೆಗೆ ಬರುವಾಗ ಕಳ್ಳರು ನಮ್ಮನ್ನು ಲುಟಾಯಿಸಿದರು, ಎಂಬ ಈ ನಾಚಿಕೆ ಸಿದ್ಧರ ಹೊರತು ಮತ್ಯಾರಿಗೆ ?'' ಎಂದು ಈ ಪ್ರಕಾರ ಅನ್ನುತ್ತಿರುವಾಗ, ಎಲ್ಲರೂ ಸದ್ಗುರುವಿಗೇ , ಈ ಕಾಲದಲ್ಲಿ ಮೊರೆಹೊಕ್ಕು ಪ್ರಾರ್ಥಿಸುತ್ತೇರೆ- 'ಹೇ ಸದ್ಗುರುನಾಥನೇ, ಓಡಿ ಓಡಿ ಬಾರಪ್ಪಾ, ನಿನಗೆ ಭಕ್ತ ಪ್ರತಿಪಾಲ, ಅನಾಥನಾಥ ಎಂದು ಅನ್ನುವರು. ಇಂಥಾ ನಿನ್ನ ಹೊರತು ಈ ಸಮಯದಲ್ಲಿ ಅನ್ಯ ರಕ್ಷಣಕರ್ತಾ ನಮಗ್ಯಾರು ಇರುವರು ? ನೀನು ಒಂದು ವೇಳೆ ಈಗ ಸುಮ್ಮನಿದ್ದಿಯೆಂದರೆ  ನಮ್ಮನ್ನು ರಕ್ಷಣೆ ಮಾಡುವವರು ಸಮೀಪ ಯಾರು ಇದ್ದಾರೆ? ಪುರುಷರನ್ನೆಲ್ಲಾ ಕಳ್ಳರು ಕಟ್ಟಿಹಾಕಿಬಿಟ್ಟಿರುವರು, ನೀನೇ ವಿಚಾರ ಮಾಡಿ ನೋಡಪ್ಪಾ  ಗುರುವೇ, ನಿನ್ನ ದರ್ಶನಕ್ಕೆ ಅನೇಕ ಭಕ್ತರು ಬರುವರು. ಅವರಿಗೆ ಭೇಟಿ ಕೊಡುವದರಲ್ಲಿ ನೀನು ತೊಡಗಿ, ಇಲ್ಲಿಗೆ ಬಾರದಿರುವೆಯಾ ? ಅನಾಥರಾದಂಥಾ ನಾವು ನಿನ್ನನ್ನೇ ಕುರಿತು ಶರಣು ಬಂದಿರುತ್ತೇವೆ, ಆದ್ದರಿಂದ ತೀವ್ರವಾಗಿ ಬಂದು ನಮ್ಮನ್ನು ರಕ್ಷಿಸು ರಕ್ಷಿಸು. ಕಳ್ಳರು ಬಂದು ನಮ್ಮನ್ನು ಸುಲಿಯುತ್ತಾರೆ. ಕೊಂದೇ ಬಿಡುತ್ತೇವೆ ಎಂದು ಶಸ್ತ್ರ ಹಿಡಿದು ಗದರಿಸುತ್ತಾರೆ. ಇವರ ಭಯಂಕರ ರೂಪಗಳನ್ನು ನೋಡಿ ಮಕ್ಕಳು ಅಂಜಿ ಗದಗದನೇ  ನಡುಗುತ್ತಿವೆ. ತ್ವರೆಯಿಂದ ಧಾವಿಸು ಹೇ ಸದ್ಗುರೋ  ಭಕ್ತಪಾಲನಾ, ಕರುಣಾಕರಾ, ನಿನ್ನ ಹೊರತು ನಮ್ಮನ್ನು ರಕ್ಷಿಸುವವನು ಮತ್ತ್ಯಾರರು ? ನಮ್ಮನ್ನು ನೀನು ರಕ್ಷಿಸಿದಿಯಾದರೆ ಮರಣ ಪರ್ಯಂತ ನಿನ್ನ ಸೇವೆಯೊಳಗೆ ಶರೀರವನ್ನು ಯೋಜಿಸುವೆವು. ಭಕ್ತರ ಸಂಕಟ ಕಾಲಕ್ಕೆ ಬಂದು ರಕ್ಷಿಸಿದಿಯೆಂದು ನಿನ್ನ ಕೀರ್ತಿಯನ್ನು ಸರ್ವತ್ರ ಹಾಡುವೆವು” ಈ ಪ್ರಕಾರ ಪ್ರಾರ್ಥಿಸುತ್ತ ಬಹು ಆಕ್ರೋಶದಿಂದ ಸ್ತ್ರೀಯರಲ್ಲಾ ರೋದನ ಮಾಡಲಾರಂಭಿಸಿದರು. ಕೂಸುಗಳನ್ನು ಹೃದಯಕ್ಕೆ ಗಟ್ಟಿಯಾಗಿ ಅಪ್ಪಿಕೊಂಡು ಸದ್ಗುರು ನಾಮದಿಂದ ಎಲ್ಲರೂ ಒದರುತ್ತಿದ್ದರು. 


ಅಷ್ಟರಲ್ಲಿ ವರ್ಷಾಕಾಲದಲ್ಲಿ ಮೇಘದ ಗುಡುಗೋ ಎಂಬಂತೆ ಒಂದು ಭಯಂಕರ ಗರ್ಜನೆಯು ಸರ್ವರಿಗೂ ಕೇಳಿಸಿತು. ಆಗ ಎಲ್ಲರೂ ಚಕಿತರಾದರು. ಕಳ್ಳರು ಗಾಡಿಯೊಳಗೆ ಹತ್ತಿ, ಹೆಂಗಸರನ್ನು ಹೊರಗೆ ಎಳೆದು “ಕುತ್ತಿಗೆ ಕೊಯ್ಯುತ್ತೇನೆ'' ಎಂದು ಕಂಕಣ ಮೊದಲಾದ ಅಲಂಕಾರಗಳನ್ನು ಹರಿದು ಕಸಿದುಕೊಳ್ಳುತ್ತಿದ್ದರು, ಈ ಕೆಲಸದಲ್ಲಿ ತೊಡಗಿರುವಾಗ, ಕಳ್ಳರೂ ಆ ಭಯಂಕರ ಗರ್ಜನೆಯನ್ನು ಕೇಳಿ, ಪೂರ್ವ ದಿಕ್ಕಿಗೆ ನೋಡಿವಾಗ ಒಂದು ಉಗ್ರರೂಪವನ್ನು ಕಂಡರು. ಉದ್ದವಾದ ತಾಳಿಮರದಂತೆ ಉನ್ನತವಾಗಿರುವ ಒಬ್ಬ ಪುರುಷನು ಬರುತ್ತಿರುವನು. ಆತನ ಕೂದಲುಗಳು ವೃಕ್ಷಶಾಖೆಗಳಂತೆ ಕಾಣುತ್ತಿದ್ದು, ಕಣ್ಣುಗಳು ಸೂರ್ಯನಂತೆ ಪ್ರಕಾಶಮಾನವಾಗಿದ್ದವು. ಆ ಪುರುಷನ ದಂಷ್ಟ್ರ ಕರಾಳವದನ ಲೀಲಾಯಮಾನವಾಗುತ್ತಿದ್ದ ಕೆಂಪಗೆ ನಾಲಿಗೆಯುಳ್ಳವನಾಗಿದ್ದು, ಆತನ ನಖಗಳು ಖಡ್ಗಧಾರೆಗಳಂತಿದ್ದು, ಶರೀರವು ನೀಲವರ್ಣಮಯವಾಗಿತ್ತು. ಕಳ್ಳರು

ಈ ಅದ್ಭುತ ರೂಪವನ್ನು ಕಂಡು, ಮುಖಪಸರಿಸಿ ತಮ್ಮನ್ನು ಈಗಲೇ ನುಂಗಲಿಕ್ಕೆ ಬರುವ ರಾಕ್ಷಸನೋ  ಎಂದು ತಿಳಿದು, ಎಲ್ಲರೂ ಭಯಚಕಿತರಾದರು. ಚಕ್ಕಡಿಯೊಳಗಿಂದ ಹೆಂಗಸರೂ  ಮಕ್ಕಳು ಅದೇ ರೂಪವನ್ನು ನೋಡುತ್ತಿದ್ದರು. ಅವರಿಗೂ  ಅದೊಂದು ಮಹದ್ರೂಪ ತೋರಿತು, ಆದರೆ ಮುಖವು ಸದ್ಗುರುವಿನ ಹಾಗೆ ಸೌಮ್ಯರೂಪದಿಂದ ಕಾಣಿಸಿತು. ಆಗ ಅವರೆಲ್ಲರೂ ಆನಂದದಿಂದ - 'ನಮ್ಮ ಕೈವಾರಿಯೂ ಬಂದನು ಬಂದನವ್ವಾ. ಸಿದ್ಧ ಸದ್ಗುರುವು ನಿರ್ಧಾರವಾಗಿ ನಮ್ಮ ಸಂಕಟದಲ್ಲಿ ಪ್ರಾಪ್ತನಾದನು. ಆತನ ಸಮಾನ ಈ ಪೃಥ್ವಿಯಲ್ಲಿ ಯಾರೂ ಇಲ್ಲ. ಶೀಘ್ರವಾಗಿ ಬಂದು ನಮ್ಮನ್ನು ರಕ್ಷಿಸಿದನು,” ಎಂದು ನುಡಿಯುತ್ತಿದ್ದರು. ಕಳ್ಳರಿಗಾದರೂ, ಆ ರೂಪವು ಅತ್ಯಂತ ಭಯಂಕರವಾಗಿ ಕಾಣಿಸುತ್ತಿದ್ದು, ಧೈರ್ಯಗುಂದಿ ಗೊಂಬೆಗಳಂತೆ ತಟಸ್ಥರಾಗಿ ನಿಂತರು. ಕೈಯ್ಯೊಳಗಿಂದ ಶಸ್ತ್ರಗಳು ತಮ್ಮಷ್ಟಕ್ಕೆ ತಾವೇ ಜಾರಿ ಬಿದ್ದವು. ಅವರು ಥರಥರನೇ ನಡುಗಲಾರಂಭಿಸಿದರು. ಓಡಲಿಕ್ಕೆ ನೋಡಿದರೆ, ಕಾಲಿಗೆ ಕಾಲು  ಎಡವಿ ಅಲ್ಲಲ್ಲೆ  ಬೀಳುವಂಥವರಾದರು. ನಡಿಯಲಿಕ್ಕೆ ಸಹಾ ಒಬ್ಬರಿಗೂ ಕಾಲು ಬರಲೊಲ್ಲವು. ಆಗ ಆ ಉಗ್ರರೂಪಿಯಾದ ಪುರುಷನು  ನಿಜತೇಜದಿಂದ ಮಹಾ ಪ್ರತಾಪಿಯಾಗಿ ಕಾಣಿಸುತ್ತಿದ್ದು ಕಳ್ಳರಿಗೆ ಅತಿ ಸಿಟ್ಟಿನಿಂದ ಬರುವವನಂತೆ ತೋರಿಸಿಕೊಂಡು, ಅವರ ಸಮೀಪಕ್ಕೆ ಪ್ರಾಪ್ತನಾದನು. ಇಬ್ಬರು ಕಳ್ಳರು ಚಕ್ಕಡಿಯೊಳಗೆ ಹತ್ತುತ್ತಿದ್ದರು. ಒಂದೇ ಹಸ್ತದಿಂದ ಅವರಿಬ್ಬರನ್ನು ಹಿಡಿದು, ಆ ಉಗ್ರಪುರುಷನು, ಭರದಿಂದ ಒಂದು ಗಿಡದ ಮೇಲೆ ಬಿಸುಟಿ ಬಿಟ್ಟು. ಅವರಾದರೂ ತೂಗು ಹಾಕಿದಂತೆ ಅಲ್ಲೇ ಗಿಡದ ಟೊಂಗೆಗೆ ಜೋತಾಡುತ್ತಿದ್ದರು. ಈ ಭಯಂಕರ ಕೃತ್ಯವನ್ನು ನೋಡಿ, ಆ ಇತರ ಕಳ್ಳರು ನಿಸ್ತೇಜರಾಗಿ ಧರಣಿಯ ಮೇಲೆ ಬಿದ್ದು ಬಿಟ್ಟರು, ಮತ್ತು ಬಹು ದೀನ ವಾಣಿಯಿಂದ, ''ಮಹಾಸ್ವಾಮಿಣೀ ಭದ್ರಕಾಳಿ ನಮ್ಮನ್ನು ರಕ್ಷಿಸು. ಈತನ ಕೈಯೊಳಗಿಂದ ನಾವು ಪಾರಾದೆವೆಂದರೆ, ನಿನಗೆ ನಿಶ್ಚಯವಾಗಿ ಒಂದು ದೇವಾಲಯವನ್ನು ಕಟ್ಟಿಕೊಟ್ಟು, ಅತಿಶಯ ಭಕ್ತಿಯಿಂದ ನಿನ್ನನ್ನು ಸಂತೋಷ ಪಡಿಸುವೆವು. ಹೇ ತಾಯಿಯೇ, ಬೇಗನೇ ಪ್ರಾಪ್ತಿಳಾಗಿ ಈ ಭೂತದ ಕೈಯಿಂದ ಬಿಡಿಸುವಂಥವಳಾಗು. ನಿನಗೆ ಬೇಡಿಕೊಂಡ ಹರಿಕೆಯನ್ನು ತೀರಿಸಿ, ಸಾಯುವ ತನಕ ನಿನ್ನನ್ನು ಭಜಿಸುವೆವು' ಎಂದು ಅಳುತ್ತಾ ಪ್ರಾರ್ಥಿಸುವಾಗ ಆ ಮಹಾ ಪುರುಷರು ಅವರ ಕಡೆಗೆ ಬಂದು, - “ನೀವು ಭದ್ರಕಾಳಿಗೆ  ಪ್ರಾರ್ಥಿಸುತ್ತೀರಲ್ಲಾ? ನೋಡಿರಿ ಅವಳು ಇಲ್ಲೆ  ನನ್ನ ಬೆನ್ನಿಗೆ ಇರುತ್ತಾಳೆ' ಎಂದು ತಿರುಗಿ ನಿಂತನು. ಆತನ ಬೆನ್ನಿನ ಕಡೆಗೆ ಇದ್ದ ಭದ್ರಕಾಳಿಯು ಆ ಚೋರರನ್ನು ಕುರಿತು ಅನ್ನುತ್ತಾಳೆ- “ನೀವು ಈತನ ಭಕ್ತರನ್ನು ಪೀಡಿಸುತ್ತಿರುವಾಗ, ನಾನು ಯಾವ ಪ್ರಕಾರ ನಿಮ್ಮನ್ನು ರಕ್ಷಿಸಲಿ. ಈತನು ಎಲ್ಲಾ ದೇವತೆಗಳಿಗೂ ಮೂಲಪೀಠನಿದ್ದಾನೆ. ಈತನ ಶಕ್ತಿಯಿಂದಲೇ ನಮಗೆಲ್ಲರಿಗೂ ಶಕ್ತಿಯು, ಈತನ ಸತ್ತೆಯಿಂದ ನಮ್ಮೆಲ್ಲರ ವ್ಯಕ್ತಿಯು; ಇವನೇ ಸರ್ವ ಭೂತಗಳಲ್ಲಿ ಅಂತರ್ಯಾಮಿ ರೂಪದಿಂದಿರುತ್ತಾನೆ. ಇವನಿಗಿಂತಲೂ ಅಧಿಕರು ಯಾರ್ಯಾರು  ಇಲ್ಲವು. ಇಂಥಾ ಜಗದೀಶನ ಭಕ್ತರು ಆತನ ಸ್ಥಾನಕ್ಕೆ ಹೋಗುತ್ತಿರುವಾಗ ನೀವು ದಾರಿಗೆ ನಿಂತು ಪೀಡಿಸುವಾಗ ಯಾರು ನಿಮ್ಮನ್ನು ಸಹಾಯಕರಾಗಿ ರಕ್ಷಿಸುವರು?  ಹಾಗಾದರೆ, ನೀವು ಶೀಘ್ರವಾಗಿ ಹುಬ್ಬಳ್ಳಿಗೆ ಹೋಗಿ ಶ್ರೀ ಸಿದ್ಧಾರೂಢ ಸದ್ಗುರುವಿಗೆ ಭೆಟ್ಟಿಯಾಗಿ ಆತನಿಗೆ ಪೂರ್ಣಭಾವದಿಂದ ಮೊರೆಹೊಕ್ಕರೆ, ಈ ಪುರುಷರು ನಿಮ್ಮನ್ನು ಬಿಡುವನು. ಅಲ್ಲಿ ತನಕ ನಿಮ್ಮನ್ನು ಇವನು ಬಿಡಲಾರನು.


 ಈ ಪ್ರಕಾರ ಭದ್ರಕಾಳಿಯು  ಅಂದ ಕೂಡಲೇ, ಆ ಮಹಾ ಬಲವಂತನು  ಪುನಃ ತಿರುಗಿನಿಂತು, ಕಳ್ಳರನ್ನೆಲ್ಲಾ ಎಬ್ಬಿಸಿ, ಹುಬ್ಬಳ್ಳಿಗೆ ಹೋಗುವ ದಾರಿ ಮೇಲೆ ಓಡಿಸಿದನು. ತಿರುಗಿ ನೋಡಿದಿರೆಂದರೆ ಆ ಉಗ್ರರೂಪವು ಬೆನ್ನ ಹಿಂದೆಯೇ ಕಾಣಿಸುತ್ತಿತ್ತು, ಓಡುತ್ತಾ ಓಡುತ್ತಾ ಬಂದು, ಸಿದ್ಧಾಶ್ರಮಕ್ಕೆ ಪ್ರಾಪ್ತರಾಗಿ ಶ್ರೀ ಸಿದ್ಧ ಸದ್ಗುರುಗಳ ಮುಖವನ್ನು ನೋಡಿದ ಕೂಡಲೇ ಪುನಃ ಥರಥರನೇ ನಡುಗಲಿಕ್ಕೆ ಆರಂಭಿಸಿ, - ''ಆ ಮಹದ್ರೂಪಿಯೆ   ಇಲ್ಲಿ ಸಣ್ಣರೂಪ ಹಿಡಿದುಕೊಂಡು ಪ್ರಶಾಂತನಾಗಿ ಕುಳಿತಿರುವನು. ಆ ಪುರುಷನದೂ ರೂಪ ಇದೇ ಇರುತ್ತಿದ್ದು, ಆತನು ಅಷ್ಟು ಭಯಂಕರ ಕಾಣಿಸುತ್ತಿರುವಾಗ, ಈತನು ಹಾಸ್ಯವದನದಿಂದಲೇ ಇದ್ದು ನಮ್ಮ ಪ್ರಾಣವನ್ನು ಹರಣ ಮಾಡುವನು ಎಂಬಂತೆ ಕಾಣಿಸುತ್ತದೆ,'' ಎಂದು ಅನ್ನುತ್ತಾ ಪುನಃ ಹಿಂತಿರುಗಿದರು. ಆದರೆ ಯಾವಲ್ಲಿ ಹೋದರೂ,  ಆ ಭೀಕರ ಪುರುಷನೇ ಎದುರಿಗೆ ನಿಂತಂತೆ  ಕಾಣಿಸುತ್ತಿದ್ದು, -“ಸದ್ಗುರುವಿಗೆ ಶರಣುಹೋದ ವಿನಹಾ  ಈತನು ನಮ್ಮನ್ನು ನಿಶ್ಚಯವಾಗಿ ಬಿಡುವುದಿಲ್ಲ" ಎಂದು ಅಂದುಕೊಂಡು, ಪುನಃ ಸಿದ್ಧ ಸದ್ಗುರುಗಳ ಕಡೆಗೆ ಬಂದು, ಆತನ ಪಾದಕ್ಕೆ ಬಿದ್ದು - “ಹೇ ದಯಾರಾಶಿಯೇ ನಮ್ಮನ್ನು ರಕ್ಷಿಸು ರಕ್ಷಿಸು. ನಿನ್ನ ಭೂತವು ನಮ್ಮನ್ನು ನುಂಗುವದಕ್ಕೋಸ್ಕರ ಆದೇಶದಿಂದ ಬೆನ್ನ ಹಿಂದೆ ಬರುತ್ತಲಿದೆ ,” ಎಂದು ಭೀತರಾಗಿ ಅಂದರು. ಇದನ್ನು ಕೇಳಿ, ಸದ್ಗುರುಗಳು - “ಈಗ ಎಲ್ಲಾ ಭೀತಿಯನ್ನು ಬಿಟ್ಟು ಬಿಡಿರಿ. ನಿಮ್ಮ ದುಷ್ಕರ್ಮವೇ  ನಿಶ್ಚಯವಾಗಿ ನಿಮ್ಮನ್ನು ಅಂಜಿಸಲಿಕ್ಕೆ ಆ ರೂಪದಿಂದ ಬಂದಿರುವುದು. ಇನ್ನು ಮೇಲೆ ಚೌರ್ಯ ಕರ್ಮವನ್ನು ಬಿಟ್ಟು ಬಿಡರಿ. ಸುಖದಿಂದ ನಿಮ್ಮ ಶಾಸ್ತ್ರೋಕ್ತ ಸ್ವಧರ್ಮವನ್ನು ಆಚರಿಸಿರಿ. ಹೀಗೆ ನಡೆದಿರೆಂದರೆ ಎಲ್ಲಾ ಮಾಯಾ ಭ್ರಮೆಯ  ನಿರಸನವಾಗಿ ಕಾಮ ಕ್ರೋಧಗಳು ನಿಮ್ಮನ್ನು ಬಿಟ್ಟು ಹೋಗುವವು' ಎಂದು ಹೇಳಿದ ಕೃಪಾವಚನವನ್ನು ಕೇಳಿದ ಕ್ಷಣವೇ ಅವರ ಮನಸ್ಸು ಭಕ್ತಿಯ  ಕಡೆಗೆ ತಿರುಗಿ, “ಹೇ ಕರ್ಣಾಘನನೇ ಪಾಪದೊಳಗಿಂದ ನಮ್ಮನ್ನು ರಕ್ಷಿಸಿದಿ," ಎಂದು ಹೇಳಿದರು. ಆ ಸದ್ಗುರುನಾಥನ ಚರಣಮಹಿಮೆಯು ಇಂಥಾದ್ದಿದೆ. ಒಮ್ಮೆ ಆ ಚರಣಗಳು ಮಸ್ತಕಕ್ಕೆ ಸ್ಪರ್ಶವಾದರೆ, ದುಷ್ಟಗುಣಗಳೆಲ್ಲಾ ತಮ್ಮಷ್ಟಕ್ಕೆ ಹೊರಟು ಹೋಗಿ, ಶರಣು ಬಂದವನು ಮಹಾ ಸದ್ಗುಣಿಯಾಗಿ ವರ್ತಿಸುವನು. ಆ ದಿವಸದಿಂದ ಆ ಕಳ್ಳರೆಲ್ಲಾ ಸದ್ಗುರುಗಳ ದೃಢಭಕ್ತರಾದರು; ಮತ್ತು ಅತಿ ಪ್ರೇಮದಿಂದ ಸದ್ಗುರುಸೇವೆ ಮಾಡುತ್ತಿದ್ದು, ಭಕ್ತ ಜನರನ್ನು ದಾರಿಯಲ್ಲಿ ರಕ್ಷಿಸುವ ಉದ್ಯೋಗವನ್ನು ಕೈಗೊಂಡರು.


ಇತ್ತ ರಸ್ತೆಯ ಮೇಲೆ ಗಾಡಿಗಳನ್ನು ಬಿಟ್ಟು ಕಳ್ಳರು ಹುಬ್ಬಳ್ಳಿ ಕಡೆ ಹೋದದ್ದನ್ನು ನೋಡಿ, ಆ ಸ್ತ್ರೀಯರೆಲ್ಲಾ , ಅತ್ಯಂತ ಆನಂದಭರಿತರಾಗಿ, ಸದ್ಗುರು ಸ್ತವನ ಮಾಡುವಂಥವರಾಗಿ- 'ಹೇ ಮಹಾ ಪುರುಷನೇ ಸಿದ್ದರಾಯನೇ, ನಿನ್ನ ಮಹಿಮೆಯನ್ನು ನಾವು ಸರ್ವಥಾ ತಿಳಿಯಲಾರೆವು; ಹೇ ಸಖನೇ, ದಯಾವಂತನೇ, ನೀನು ನಮ್ಮನ್ನು ರಕ್ಷಿಸಿದಿ . ಎಷ್ಟೆಂತ ನಿನ್ನ ಕೀರ್ತಿಯನ್ನು ವರ್ಣಿಸೋಣ. ಅನೇಕ ಭಕ್ತರನ್ನು ಸಂಕಷ್ಟದೊಳಗಿಂದ ನೀನು ರಕ್ಷಿಸಿದಿ , ಎಂಬ ನಿನ್ನ ಬಿರುದನ್ನು ಇವತ್ತು ಸತ್ಯ ಮಾಡಿದಿ. ದುಷ್ಟರ ಕೈಯಿಂದ ನಮ್ಮನ್ನು ಬಿಡಿಸಿ, ದಿಕ್ಕುಗಳನ್ನೆಲ್ಲಾ ನಿನ್ನ ಕೀರ್ತಿಯಿಂದ ತುಂಬಿಸಿದಿ,'' ಎಂದು ಅನ್ನುತ್ತಿದ್ದರು. ಅನಂತರ ಆ ಸ್ತ್ರೀಯರು, ಗಿಡಗಳಿಗೆ ಕಟ್ಟಿ ಹಾಕಲ್ಪಟ್ಟ ಪುರುಷರ ಕಡೆಗೆ ಹೋಗಿ, ಅವರನ್ನು ಬಿಡಿಸಿದರು. ಮತ್ತು ಎಲ್ಲರೂ ಕೂಡಿಕೊಂಡು ಹುಬ್ಬಳ್ಳಿಗೆ ಪ್ರಾಪ್ತರಾಗಿ, ಶ್ರೀ ಸಿದ್ಧಾರೂಡರಿಗೆ ಭೆಟ್ಟಿಯಾದರು. ಅತ್ಯಂತ

ಪ್ರೇಮಭರಿತರಾಗಿ, ಆ ಸ್ತ್ರೀಯರು, ಸದ್ಗುರುಗಳಿಗೆ ಸರ್ವ ವೃತ್ತಾಂತವನ್ನು ನಿವೇದಿಸಿ, - “ಹೇ ಸದ್ಗುರುನಾಥನೇ ನಮ್ಮನ್ನು ರಕ್ಷಿಸುವದಕ್ಕೋಸ್ಕರ ಎಂತಾ ಅದ್ಭುತ ರೂಪವನ್ನು ಧಾರಣೆ ಮಾಡಿದಿ. ನಮ್ಮ ದೆಶೆಯಿಂದ  ಬಹಳ ಕಷ್ಟಪಟ್ಟಿ ,” ಎಂದು ಹೇಳಿದ್ದು ಕೇಳಿ, ಸಿದ್ದಾರೂಡರು - ಹೇ ಸ್ತ್ರೀಯರುಗಳಿರಾ, ನಿಮ್ಮ ಶುದ್ಧ ಭಾವದಿಂದ ಸದ್ಗುರುವರನೇ  ನಿಮ್ಮನ್ನು ರಕ್ಷಿಸುವದಕ್ಕಾಗಿ, ಆ ರೂಪವನ್ನು ಧರಿಸಿ ಪ್ರಗಟನಾಗಿ, ಧಾವಿಸಿದನು. ಇತ್ತ ನೋಡಿರಿ, ಅವರೇ ಕಳ್ಳರಿರುವರು. ನಿಮ್ಮ ಸಂಗತಿಯಿಂದ ಇವರಿಗೆ ಸಾಧುತ್ವ ಪ್ರಾಪ್ತವಾಗಿ, ಈಗ ಸೇವಾ ಮಾಡಲಿಕ್ಕೆ ಹತ್ತಿರುವರು. ಸದ್ಗುರುನಾಥನು ವಿಚಿತ್ರ ಮಾಡಿದನು” ಎಂದು ಹೇಳಿದರು. ಸರ್ವಾ ಜನರು ಈ ಕಥೆಯನ್ನು ಶ್ರವಣ ಮಾಡಿ ಆತ್ಯಾನಂದದಿಂದ ಜಯಜಯಕಾರ ಮಾಡುವಂಥವರಾಗಿ, -“ಯಾವ ರೀತಿಯಿಂದಲಾದರೂ ಸದ್ಗುರು ಮಹಿಮೆ ವರ್ಣಿಸಲಿಕ್ಕೆ ನಮಗೆ ಅಸಾಧ್ಯವು ?' ಎಂದು ನುಡಿಯುತ್ತಿದ್ದರು.

👇👇👇👇👇👇👇👇👇👇👇👇👇👇

ಸದ್ಗುರು ಸಿದ್ಧಾರೂಢ ಭಾಗವತ app ಹಾಕಿಕೊಳ್ಳಿ, ಈ app ಅಲ್ಲಿ ಎಲ್ಲ 320  ಕಥೆಗಳಿವೆ ನೀವು ಇದನ್ನ book ತರ ಓದಬಹುದು ಯಾವುದೇ ads ಇಲ್ಲಾ ಹಾಗೆ Internet ಇಲ್ಲದೆ ಓದಬಹುದು ಇದು ಅಜ್ಜನ ಒಂದು ಭಕ್ತಿ ಸೇವೆ ಅಷ್ಟೇ ದಯವಿಟ್ಟು app ಹಾಕಿಕೊಂಡು ಕಥೆ ಅಲ್ಲೇ ಓದಿ, ಬೇರೆಯರಿಗೂ share ಮಾಡಿ, ಅವರಿಗೂ help ಮಾಡಿ ಅಜ್ಜನ ಕೃಪೆಗೆ ಪಾತ್ರರಾಗಿರಿ

ಈ link ಒತ್ತಿ 👉 📖 👈 ಒತ್ತಿ

ಮುಂದಿನ ಕಥೆ ಓದಲು ಕೆಳಗಡೆ ಲಿಂಕ ಒತ್ತಿ

👉ಹಿರೂಬಾಯಿಯನ್ನು ಒಯ್ಯಲಿಕ್ಕೆ ಯಮದೂತರು ಬಂದಾಗ ಸದ್ಗುರುಗಳು ಬಂದು ಬಿಡಿಸಿದರು. ಆರುತಿಂಗಳ ಮೇಲೆ ಆಕೆಯನ್ನು ವಿಮಾನದಲ್ಲಿ ಕರೆದುಕೊಂಡು ಹೋದರು.

ಎಲ್ಲಾ  ಕಥೆಗಳ ಲಿಂಕಗಳು 

👉ಕಥಾ ಸಂಗ್ರಹ 👉🛃

ಸಿದ್ಧಾರೂಢ ಲೀಲಾಕಥೆಗಳನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 

1)WhatsApp shareಗಾಗಿ click ಮಾಡಿ📲☎️

2)Facebook shareಗಾಗಿ👉

3)ಸಿದ್ಧಾರೂಢರ ಲೀಲಾಕಥೆಗಳನ್ನು offlineಲ್ಲಿ ಓದಲು app ಹಾಕಿಕೊಳ್ಳಿ👉📚



«««««ಓಂ ನಮಃ ಶಿವಾಯ »»»»»»»



Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ