ಶ್ರೀ ಸಿದ್ಧರ ಕೃಪೆಗೆ ಪಾತ್ರರಾದ ಹುರಕಡ್ಲಿ ಅಜ್ಜ
🌺 ಶ್ರೀ ಸಿದ್ಧರ ಕೃಪೆಗೆ ಪಾತ್ರರಾದ ಹುರಕಡ್ಲಿ ಅಜ್ಜ 🌺
ನವಲಗುಂದದ ವಿಚಿತ್ರ ಲೀಲಾಮೂರ್ತಿ ಶ್ರೀ ನಾಗಲಿಂಗ ಯತಿಗಳ ಆಶೀರ್ವಾದದಿಂದ ಜನಿಸಿದ ನಾಗಲಿಂಗಪ್ಪ ಮತ್ತು ಚನ್ನಬಸವ್ವ ದಂಪತಿಗಳ ಪವಿತ್ರ ಉದರದಲ್ಲಿ ಹತ್ತೊಂಭತ್ತನೂರು ಇಸ್ವಿಯಲ್ಲಿ ಅನ್ನದಾನಪ್ಪನವರು ಜನಿಸಿದರು. (ಹುರಕಡ್ಲಿ ಅಜ್ಜ) ಈ ಚಿಕ್ಕ ಬಾಲಕನಿಗೆ ನಾಗಲಿಂಗ ಯತಿಗಳ ಲೀಲೆಗಳು ಪುಣ್ಯ ಪುರುಷರ ಕತೆಗಳನ್ನು ಕೇಳುವುದು, ಭಜನೆ ಮಾಡುವುದೆಂದರೆ ಮಹದಾನಂದ. ಇವರ ಪ್ರಾಥಮಿಕ ಶಾಲಾಭ್ಯಾಸ ತನ್ನ ಹುಟ್ಟೂರಾದ ನವಲಗುಂದದ ಹತ್ತಿರ ಇಬ್ರಾಹಿಮಪುರದಲ್ಲಾಯಿತು, ಅನ್ನದಾನಿಯವರು ಎಂಟು ವರ್ಷದವರಾದಾಗ ಲಗ್ನವಾದರೂ ಆ ಕನ್ಯೆ ಮೂರು ವರ್ಷಗಳಲ್ಲಿ ದೈವಾಧೀನವಾಯಿತು. ಮುಂದೆ ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಶಿಕ್ಷಕ ಶಿಕ್ಷಣ ಪಡೆದು ಶಿಕ್ಷಕರಾದರು. ಆ ಸಮಯದಲ್ಲಿ ಅಥಣಿ ಶಿವಯೋಗಿಗಳ ದರ್ಶನ ಪಡೆದ ಇವರ ಜೀವನದಲ್ಲಿ ಆಧ್ಯಾತ್ಮದ ಬೆಳವಣಿಗೆಗೆ ನಾಂದಿಯಾಯಿತು.
ಮುಂದೆ ಅನ್ನದಾನಿಯು ನಾಯಕನೂರಿನಲ್ಲಿ ಶಿಕ್ಷಕ ಕೆಲಸ ಮಾಡುವಾಗ ಅದರ ಸಮೀಪದ ಹಳ್ಳಿಯಾದ ನಾಗನೂರಿನಲ್ಲಿ ಗದುಗಿನ ಶಿವಾನಂದರು ವಾಸ್ತವ್ಯ ಮಾಡಿ ನಿಜಗುಣರ ಶಾಸ್ತ್ರ ಬೋಧಿಸುತ್ತಿದ್ದರು. ಅನ್ನದಾನಪ್ಪ ತನ್ನ ಶಾಲೆಯ ಕೆಲಸ ಮುಗಿಸಿ, ದಿನಾಲು ಶ್ರೀ ಶಿವಾನಂದರ ಪ್ರವಚನ ಕೇಳುತ್ತಿದ್ದರು. ಇದರಿಂದಾಗಿ ಅವರ ಜೀವನದಲ್ಲಿ ಹೊಸ ತಿರುವು ಬಂದು ಶಿವಾನಂದರ ಬಗ್ಗೆ ಪೂಜ್ಯ ಭಾವನೆ ಬೆಳೆಯಿತು. ಈ ಸಮಯದಲ್ಲಿ ಯಾರೋ ಒಬ್ಬರ ದೂರಿನ ಪ್ರಕಾರ ಶಿಕ್ಷಣಾಧಿಕಾರಿಗಳು ಇವರನ್ನು ಇಬ್ರಾಹಿಮಪುರಕ್ಕೆ ವರ್ಗ ಮಾಡಿದರು. ಆ ಮೇಲೆ ರಾಣೆಬೆನ್ನೂರು ತಾಲೂಕಿನ ಕೂಸಗೂರು ಎಂಬ ಹಳ್ಳಿಗೆ ವರ್ಗ ಮಾಡಿದರು. ಆಗ ಅನ್ನದಾನಪ್ಪನವರ ಮನಸ್ಸು ನೊಂದುಕೊಂಡಿತು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರಲ್ಲಿ ಆಗಾಗ ಹೋಗಿ ಬರುತ್ತಿದ್ದ ಇವರು ಸಿದ್ದರಲ್ಲಿಗೆ ಹೋಗಿ `ಸ್ವಾಮಿಗಳೇ, ನನ್ನನ್ನು ಬಹುದೂರ ವರ್ಗ ಮಾಡಿದ್ದಾರೆ. ನನ್ನ ಅಧ್ಯಾತ್ಮ ಸಾಧನೆಗೆ ಮತ್ತು ಊಟಕ್ಕೆ ಅಡ್ಡಿಯಾಗುತ್ತದೆ. ನೌಕರಿ ಬಿಡಬೇಕೆಂದಿದ್ದೇನೆ. ಹೇಗೆ ಮಾಡಲಿ?' ಎಂದಾಗ ಆರೂಢರು ನೋಡು ಅನ್ನದಾನಿ, ಏನಾಗುವುದೋ ಅದೆಲ್ಲ ನಿನ್ನ ಒಳಿತಿಗಾಗಿ ಆಗುತ್ತದೆ. ನೀನು ಯಾವುದೇ ಚಿಂತೆ ಮಾಡಬೇಡ. ಕೆಲಸಕ್ಕೆ ಸೇರು. ಹೊಸಮನಿ ಸಿದ್ದಪ್ಪನವರ ಊರು ಕುಸಗೂರು, ನೀನು ಅವರ ಮನೆಯಲ್ಲಿ ಹೋದರೆ ಊಟದ ವ್ಯವಸ್ಥೆಯಾಗಿ ನಿನ್ನ ಸಾಧನೆಯೂ ಕೈಗೂಡುವುದು ಹೋಗು' ಎಂದು ಆಶೀರ್ವದಿಸಿದರು. ಅವರ ಪ್ರಸಾದವಾಣಿಯಂತೆ ನಡೆದು ಅನ್ನದಾನಪ್ಪನವರಿಗೆ ಯಾವ ತೊಂದರೆಯಾಗಲಿಲ್ಲ.
ಮುಂದೆ ಶಿವಾನಂದರಿಂದ ನಿಜಗುಣರ ಶಾಸ್ತ್ರದ ಮರ್ಮ ತಿಳಿದು ಮನನ ಮಾಡಿದರು. ಶಿವಾನಂದರು ಲಿಂಗಪೂಜಕರೂ ಶಕ್ತಿಪೂಜಕರೂ ದೇವಿ ಪುರಾಣ ಓದುವುದೂ ಜಪ ಧ್ಯಾನ ಮಾಡುವುದು ಅವರ ಜೀವನ ಕ್ರಮವಾದ್ದರಿಂದ ಅದು ಅನ್ನದಾನಪ್ಪನವರಿಗೆ ಹಿಡಿಸಿತು. ಅವರ ಪಾದಕ್ಕೆ ಶರಣು ಹೋದಾಗ ಗುರುಗಳು ಮಂತ್ರದೀಕ್ಷೆಯನ್ನಿತ್ತರು. ಅಂದಿನಿಂದ ಶಿವಾನಂದರು ಹೇಳಿಕೊಟ್ಟ ಕ್ರಮಗಳನ್ನು ಅನುಸರಿಸುತ್ತ ನಡೆದರು. ಚಿದಂಬರ ಮಠಾಧೀಶರಾದ ಶ್ರೀ ಸಿದ್ಧಾರೂಢರ ಕೀರ್ತಿ ಎಲ್ಲೆಡೆ ಪಸರಿಸಿತ್ತು. ಶಿವಾನಂದರು ಮೇಲಿಂದ ಮೇಲೆ ಸಿದ್ದಾರೂಢರ ಸಂಪರ್ಕವಿಟ್ಟುಕೊಂಡದ್ದರಿಂದ ಅವರ ಸಮೀಪವರ್ತಿಯಾಗಿದ್ದರು. ಶಿವಾನಂದರ ಮೊದಲ ಹೆಸರು ವೀರನಗೌಡರೆಂದಿದ್ದು, ಸಿದ್ದಾರೂಢರೇ ವೀರನಗೌಡರಿಗೆ ಶಿವಾನಂದರೆಂಬ ನಾಮಕರಣ ಮಾಡಿದ್ದರು.
ಅನ್ನದಾನಪ್ಪನವರು ತಮ್ಮ ಗುರುಗಳ ಜೊತೆಗೆ ಶ್ರೀ ಸಿದ್ಧರ ಮಠಕ್ಕೆ ಹೋಗುತ್ತಿದ್ದರು. ಶ್ರೀ ಸಿದ್ಧಾರೂಢರ ಅಗಾಧ ಜ್ಞಾನ ಆಗಮ ನಿಗಮಗಳ ಆಳವಾದ ಅಭ್ಯಾಸ ಅವರಿಂದ ದಶೋಪನಿಷತ್ತುಗಳ ಮಾರ್ಮಿಕ ಪ್ರವಚನ ಕೇಳಿ ತಾವು ಋಷಿಗಳ ಸಾಮಿಪ್ಯದಲ್ಲಿದ್ದು ಆಶ್ರಮ ವಾಸಿಗಳಾಗಿ ಉಪನಿಷತ್ತುಗಳನ್ನು ಬರೆದ ಋಷಿಗಳ ಮುಖದಿಂದಲೇ ಪ್ರವಚನ ಕೇಳಿ ಜ್ಞಾನಾಮೃತಪಾನ ಮಾಡುತ್ತಿದ್ದೇವೆ ಎಂದನಿಸುತ್ತಿತ್ತು. ಅನ್ನದಾನಪ್ಪನವರಿಗೆ ಜ್ಞಾನಭಾಂಡಾರವೇ ದೊರಕಿದಂತಾಗಿತ್ತು. ನಿತ್ಯ ಮಠದಲ್ಲಿ ನಮಃ ಶಿವಾಯ ಮಂತ್ರ ಕೇಳಿ ಕೈಲಾಸ ಮತ್ತು ಕೈಲಾಸದಲ್ಲಿರುವ ಶಂಕರನೇ ಧರೆಗೆ ಬಂದು ಈ ಭೂಮಿಯನ್ನು ಕೈಲಾಸವನ್ನಾಗಿ ನಿರ್ಮಿಸಿದನೇನೋ ಎನಿಸುತ್ತಿತ್ತು. ಆರೂಢರಿಗೆ ತಮ್ಮ ಶಿಷ್ಯರು ಭಕ್ತರು ಎಂದರೆ ಪಂಚಪ್ರಾಣ. ಅವರಿಗೆ ತಮ್ಮ ಪುಣ್ಯಮಯ ತಪಸ್ಸಿನ ಧಾರೆಯೆರೆದು ಮುಕ್ತಾತ್ಮರನ್ನಾಗಿ ಮಾಡಿದ್ದರು. ಪ್ರಾರಬ್ಧ ಕರ್ಮದಂತೆ ದೇಹಕ್ಕೆ ಸುಖ ದುಃಖಗಳು ಬರುತ್ತವೆ. ಅವುಗಳನ್ನು ಪ್ರೇಮದಿಂದ ಭೋಗಿಸುತ್ತ ಮನಸ್ಸನ್ನು ಸಚ್ಚಿದಾನಂದ ಬ್ರಹ್ಮದಲ್ಲಿ ಸ್ಪಿರಗೊಳಿಸಿ ಸಾಕ್ಷಿಯಿಂದಿರಬೇಕೆಂದು ಅನ್ನದಾನಪ್ಪನವರು ಸಿದ್ಧಾರೂಢರಿಂದ ಕಲಿತರಲ್ಲದೆ ಅವರ ಕೃಪೆಗೂ ಪಾತ್ರರಾದರು.
ಅಂದಿನಿಂದ ತನ್ನ ಗುರು ಶಿವಾನಂದರಂತೆ ಸಿದ್ಧಾರೂಢರಲ್ಲಿಯೂ ಭಕ್ತಿಭಾವನೆಗಳನ್ನಿರಿಸಿಕೊಂಡರು. ಸಿದ್ಧಾರೂಢರ ಮಠವೆಂದರೆ ಅವರಿಗೆ ಪುಣ್ಯಕ್ಷೇತ್ರವಾಯಿತು. ಮೇಲಿಂದ ಮೇಲೆ ಸಿದ್ಧರ ಮಠಕ್ಕೆ ಹೋಗಿ ಬರುತ್ತಿದ್ದರು. ಅಲ್ಲಿ ವೇದಾಂತ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಬಹುದೂರದೂರದಿಂದ ಮುಮುಕ್ಷುಗಳು, ರಾಜರು, ರಾಜಾಧಿಕಾರಿಗಳು, ಪಂಡಿತರು, ಸಾಮಾನ್ಯರು ಬಂದು ಭಕ್ತಿ ಸಲ್ಲಿಸಿ ಹೋಗುತ್ತಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯ ಗೌರಿ ಪಂಡಿತ ಅರ್ಥಾತ್ 'ಗೌರ್ಯಾನಂದರು ಶ್ರೀ ಸಿದ್ಧರ ಮಹತಿಯನ್ನು ಕೇಳಿ ಮಠಕ್ಕೆ ಬಂದು ಕೆಲ ದಿವಸ ಉಳಿದಿರುವ ಈ ಸಮಯದಲ್ಲಿ ಅವರಿಗೆ ಅನ್ನದಾನಪ್ಪನವರ ಸಂಪರ್ಕ ಬಂದು ಆತ್ಮೀಯತೆ ಬೆಳೆಯಿತು, ಗೌರ್ಯನಂದರ ಮುಖ ಕಾಂತಿ ತ್ರಿಕಾಲಜ್ಞಾನ ಹಸ್ತ ಸಾಮುದ್ರಿಕಾದಿಗಳನ್ನು ಕಂಡು ಅವರ ಮನ ಸೆಳೆಯಿತು. ಅನ್ನದಾನಪ್ಪನವರ ಅಧಿಕಾರವನ್ನು ಲಕ್ಷಿಸಿ ಗೌರ್ಯನಂದರು ಪ್ರಭಾವಿತರಾಗಿ ಇವರು ಗೌರೀ ಉಪಾಸನೆಗೆ ಯೋಗ್ಯರೆಂದು ತಿಳಿದು ಅವರ ಮನವೊಲಿಸಿ ಕಲಕತ್ತೆಗೆ ಕರೆದುಕೊಂಡು ಹೋದರು. ಅಲ್ಲಿ ಅನ್ನದಾನಪ್ಪನವರು ಗೌರ್ಯನಂದರಿಂದ ಉಪದೇಶ ಪಡೆದು ಗೌರಿ, ಉಪಾಸನಾ ಮಂತ್ರ ತಂತ್ರ ಹಸ್ತ ಸಾಮುದ್ರಿಕಾದಿಗಳನ್ನು ಕಲಿತು ಪರಿಪೂರ್ಣರಾದಾಗ ಗೌರ್ಯನಂದರು 'ಅನ್ನದಾನಿ, ನೀನು ಅಖಂಡ ಬ್ರಹ್ಮಚರ್ಯ ಪಾಲಿಸುತ್ತ ಎಲ್ಲ ಸ್ತ್ರೀಯರಲ್ಲಿ ಮಾತೃಭಾವ ತಾಳಿ ಆದಿಶಕ್ತಿಯ ಕೃಪೆಗೆ ಪಾತ್ರನಾಗಬೇಕು. ಇದೆ ಆದಿಶಕ್ತಿಯನೊಲಿಸುವ ಗುಟ್ಟು' ಎಂದರು. ಆಗ ಅನ್ನದಾನಪ್ಪನವರು 'ಗುರುಗಳೇ ಇದು ನನ್ನಿಂದ ಸಾಧ್ಯವ?' ಎಂದಾಗ ಗೌರ್ಯನಂದರು ಅವರನ್ನು ಸಮೀಪ ಕರೆದು 'ಅನ್ನದಾನಿ, ಆ ತಾಯಿಯೇ ನಿನಗೆ ಸಾಮರ್ಥ್ಯ ನೀಡುತ್ತಾಳೆ' ಎಂದು ಹೇಳಿ ತಮ್ಮ ಹತ್ತಿರ ಕೂಡಿಸಿಕೊಂಡು ಧ್ಯಾನ ಮಾಡಲು ಹೇಳಿದರು. ಅನ್ನದಾನಪ್ಪನವರು ಧ್ಯಾನಸ್ಥರಾದಾಗ ಗುರುಗಳು ಅವನ ಶಿರದ ಮೇಲೆ ದೇವಿಯ ವರದ ಹಸ್ತವನ್ನಿರಿಸಿದಾಗ ಅವನಿಗೆ ದಿವ್ಯಾನುಭವವಾಗಿ ಅಂದಿನಿಂದ ಅನ್ನದಾನಪ್ಪನ ಜೀವನ ಶೈಲಿಯೇ ಬದಲಾಯಿತು.
ಮುಂದೆ ಆದಿಶಕ್ತಿಯ ಕೃಪಾಕಟಾಕ್ಷದಲ್ಲಿಯೇ ಜೀವನ ಮುನ್ನಡೆಯಿತು. ಶಿವಾನಂದರು ನೀಡಿದ ಶಿವೋಪಾಸನೆ ಮತ್ತು ಗೌರಾನಂದರು ಬೋಧಿಸಿದ ಗೌರಿ ಉಪಾಸನೆ ಮುಂದುವರಿಯಿತು. ಅಲ್ಲದೆ ವಾಕ್ಸಿದ್ಧಿಯೂ ಪ್ರಾಪ್ತವಾಯಿತು. ಅಲ್ಲಿಂದ ನವಲಗುಂದಕ್ಕೆ ಬಂದು ಒಂದು ಮನೆಯಲ್ಲಿದ್ದು ನೌಕರಿ ಮತ್ತು ದೇವೀ ಉಪಾಸನೆ ಮಾಡುತ್ತ ಅಲ್ಲಿಯೇ ನೌಕರಿಯಿಂದ ನಿವೃತ್ತರಾದರು. ಅವರ ದೈವೀಶಕ್ತಿ ಮತ್ತು ವಾಕ್ಸಿದ್ಧಿಗಳಿಂದ ಅನೇಕರ ಸಂಕಷ್ಟಗಳು ನಿವಾರಣೆಯಾಗುತ್ತಿದ್ದು, ಭಕ್ತರ ಸಂಖ್ಯೆ ಬೆಳೆಯಿತು. ಮುಂದೆ ಭಕ್ತರು ಶಿರಸಂಗಿ ಲಿಂಗರಾಜರ ಸಮಾಧಿ ಮಂದಿರದ ಸಮೀಪದ ನಿವೇಶನವನ್ನು ಕೊಂಡುಕೊಂಡು ಆಶ್ರಮ ಕಟ್ಟಿದರು. ಮುಂದೆ ಅನ್ನದಾನಪ್ಪನವರು ಹುರಕಡ್ಲಿ ಅಜ್ಜನೆಂಬ ಖ್ಯಾತನಾಮದಿಂದ ಲೋಕೋದ್ಧಾರ ಮಾಡತೊಡಗಿದರು. ಅವರಲ್ಲಿ ಬರುವ ಹೆಣ್ಣು ಮಕ್ಕಳನ್ನು ತಾಯಂದಿರೆಂದು ಭಾವಿಸುತ್ತಿದ್ದು ಯಾವುದೇ ಜಾತಿ, ಮತ, ಪಂಥ, ಬಡವ, ಬಲ್ಲಿದರೆಂಬ ಭೇದವೆಣಿಸದೆ ಸಕಲರಲ್ಲಿ ಅಭೇದದಿಂದಿದ್ದು ಸರ್ವರನ್ನು ಸಮತ್ವದಿಂದ ನೋಡುತ್ತ ಭಕ್ತರಿಗೆ ಬಂದ ಸಂಕಟಗಳಿಗೆ ಪರಿಹಾರ ದೊರಕಿಸಿಕೊಟ್ಟ ಉದಾಹರಣೆಗಳು ಅನಂತವಾಗಿವೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಕಮೀಶನರ್ ಗೋವಿಂದರಾವ್ ಪುರೋಹಿತರ ಪತ್ನಿ ಯಾವುದೋ ಒಂದು ಕಾಯಿಲೆಯಿಂದ ಮಾತನಾಡುವ ಸಾಮರ್ಥ್ಯ ಕಳೆದುಕೊಂಡಿದ್ದಳು. ಯಾವ ಉಪಚಾರದಿಂದ ಪ್ರಯೋಜನವಾಗದೆ ಚಿಂತಿತರಾದರು. ನಗರಸಭೆಯ ಇಂಜಿನಿಯರರಾದ ಶಂಭುಲಿಂಗಪ್ಪ ಬುಡಪನಹಳ್ಳಿಯವರು ಅಜ್ಜನವರ ಯೋಗ್ಯತೆಯ ಬಗ್ಗೆ ತಿಳಿಸಿದರು. ಪುರೋಹಿತರು ಅಪ್ಪನನ್ನು ಸಂದರ್ಶಿಸಿ ತಮ್ಮ ಸಮಸ್ಯೆಯನ್ನು ತಿಳಿಸಿದಾಗ ಅಜ್ಜನವರು ಮರುಗಿ ಅವರ ಪತ್ನಿಯ ಕೈ ನೋಡಿ ವರದ ಹಸ್ತದಿಂದ ಆಶೀರ್ವದಿಸಿ ಮಂತ್ರಪೂರಿತ ದಾರ ಕೊಟ್ಟು ಅವಳ ಕೈಗೆ ಕಟ್ಟಲು ಹೇಳಿ ಶ್ರೀ ಬಗಳಾಶತಕ ಓದಲು ಹೇಳಿ ಈ ಹಿಂದೆ ಮುಂಬೈ ಸಮುದ್ರ ವಿಹಾರದಲ್ಲಿ ಹೆದರಿದ್ದ ಸ್ನಾನಕ್ಕೆ ಹೋಗಿ, ವಿಭೂತಿ ಬಿಟ್ಟು ಬರಲು ಹೇಳಿ ದೇವಿಯಲಿ ಪ್ರಾರ್ಥಿಸಿಕೊಂಡರು.
ಪುರೋಹಿತರ ಪತ್ನಿಗೆ ಬಗಳಾಶತಕವನ್ನೋದುವ ಸಾಮರ್ಥ್ಯವಿಲ್ಲವಾದ್ದರಿಂದ ಬುಡಪನಹಳ್ಳಿಯವರು ನಿತ್ಯ ಅವರ ಮನೆಗೆ ಹೋಗಿ ಬಗಳಾಶತಕವನ್ನೋದಿ ಪೂಜೆಗಿಟ್ಟ ನೀರನ್ನು ಕುಡಿಸಿ ಬರುತ್ತಿದ್ದರು. ಅತ್ತ ಮುಂಬೈ ಸಾಗರದಲ್ಲಿ ವಿಭೂತಿ ಭಸ್ಮ ಬಿಟ್ಟು ಬಂದರು. ಇದರಿಂದಾಗಿ ಪುರೋಹಿತರ ಪತ್ನಿ ಸ್ವಲ್ಪ ಸ್ವಲ್ಪ ಮಾತನಾಡುತ್ತ ಕೆಲ ದಿನಗಳಲ್ಲಿ ಪೂರ್ಣ ಮಾತಾಡತೊಡಗಿದಳು. ಆಗ ಪುರೋಹಿತರು ಅಜ್ಜನ ದರ್ಶನ ತೆಗೆದುಕೊಂಡು ಮುಂದೇನು ಮಾಡಬೇಕೆಂದು ಕೇಳಿದಾಗ ಅಜ್ಜ ಹೇಳಿದ `ಪ್ರತಿ ಸೋಮವಾರ ಸಿದ್ದಾರೂಢರ ಮಠಕ್ಕೆ ಹೋಗಿ ಸಿದ್ದರ ಗದ್ದುಗೆಗೆ ಭಕ್ತಿ ಸಲ್ಲಿಸಿರಿ ನಿಮಗೆ ಒಳ್ಳೆಯದಾಗುತ್ತದೆ' ಎಂದರು. ಆಗ ಪುರೋಹಿತರು ಪ್ರತಿ ಸೋಮವಾರ ಮಠಕ್ಕೆ ಹೋಗಿ ಭಕ್ತಿ ಸಲ್ಲಿಸುತ್ತ ತಮ್ಮ ಕಚೇರಿಯಲ್ಲಿ ತಮ್ಮ ಆಸನದ ಬಲಭಾಗದಲ್ಲಿ ಸಿದ್ದರ ಭಾವಚಿತ್ರವಿಟ್ಟು ಪೂಜಿಸಿ ಮಾಲೆ ಹಾಕಿ ಕಚೇರಿಯ ಕಾರ್ಯ ಪ್ರಾರಂಭಿಸುತ್ತಿರುವುದನ್ನು ನಾನು ನೋಡುವಂತಾಯಿತು.
ಒಂದು ದಿನ ಪಾರಮಾರ್ಥ ಸಾಧಕನಾದ ಗುರುದಾಸನೆಂಬ ವ್ಯಕ್ತಿಗೆ ದೊಡ್ಡ ಸಮಸ್ಯೆ ಎದುರಾಯಿತು. ಅದು ಯಾರಿಂದಲೂ ನಿವಾರಣೆಯಾಗುವುದಿಲ್ಲವೆಂದು ಅಜ್ಜನ ದರ್ಶನ ಮಾಡಿಕೊಂಡು ತನಗಿದ್ದ ಸಮಸ್ಯೆಯನ್ನು ತಿಳಿಸಿದನು. ಆಗ ಆ ಗುರುದಾಸನ ಸಾಧನೆಯನ್ನು ಅಜ್ಜ, ತನ್ನ ಜ್ಞಾನಚಕ್ಷುವಿನಿಂದ ತಿಳಿದು ಏಕಾಂತದಲ್ಲಿ ಕರದು 'ಗುರುದಾಸಾ, ನಿನ್ನ ಸಂಕಟವನ್ನು ಶ್ರೀ ಗೌರಿ ಪರಿಹರಿಸುತ್ತಾಳೆ ಚಿಂತಿಸಬೇಡ' ಎಂದು ಮಂತ್ರೋಪದೇಶ ಮಾಡಿ ಶ್ರೀ ಬಗಳಾಶತಕ ಕೊಟ್ಟು ಇದನ್ನು ನಿತ್ಯ ಪಾರಾಯಣ ಮಾಡಿ ಒಂದು ಸಾವಿರ ಜಪ ಮಾಡು' ಎಂದು ಆಶೀರ್ವದಿಸಿ ಕಳಿಸಿದರು. ಅಜ್ಜನ ಆದೇಶದಂತೆ ಗುರುದಾಸನು ಮನೆಗೆ ಬಂದು ಜಪಮಾಲೆ ಕೊಂಡುಕೊಂಡು ಸೋಮವಾರ ಬಗಳಾಶತಕ ಓದಿ ಜಪ ಮಾಡತೊಡಗಿದ ಸ್ವಲ್ಪ ಹೊತ್ತಿನಲ್ಲಿಯೇ ಮನಸ್ಸು ಅಂತರ್ಮುಖವಾಗಿ ಮುಖಸ್ಥಂಬನವಾಯಿತು. ಜಪ ನಿಂತಿತು. ಶರೀರ ಜಡವಾಯಿತು. ಜಪವೇ ಮುಂದೆ ಧ್ಯಾನದಲ್ಲಿ ಪರಿವರ್ತನೆಯಾಗಿ ಮನಸ್ಸು ಬುದ್ದಿ ಎಲ್ಲವೂ ದೇಹದಿಂದ ಸೆಳೆದಂತಾಗಿ ಯಾರೋ ತನ್ನನ್ನು ಸೆಳೆಯುತ್ತಿದ್ದಾರೆ ಎನಿಸಿತು. ಅಷ್ಟರಲ್ಲಿ ನಾನು ನೀನು ಜಗತ್ತೆಂಬುದೆಲ್ಲ ಮಾಯವಾಗಿ ಕೋಟಿ ಪ್ರಕಾಶ ಕಂಡಿತು ಆಮೇಲೆ ನಾನೆಂಬುದು ಪ್ರಕಾಶದಲ್ಲಿ ಕರಗಿ ಏನೂ ಹೇಳದಂಥ ಸ್ಥಿತಿಯಾಗಿತ್ತು.
ಎಷ್ಟೋ ಹೊತ್ತು ಆ ನಿಜಾನಂದದಲ್ಲಿದ್ದು ಪುನ: ನಾನೆಂಬುದು ಉದಯವಾಗಿ ಮನಸ್ಸು ಜಾಗ್ರತಿಗೆ ಬಂದಿತು. ಗುರುದಾಸನು ಈ ವಿಚಾರವನ್ನು ಅಚ್ಚಿನಲ್ಲಿ ಹೋಗಿ ತಿಳಿಸಿದಾಗ ಅಜ್ಜ ಹೇಳಿದ 'ಶಾಸ್ತ್ರದಲ್ಲಿ ನಿರ್ವಿಕಲ್ಪ ಸಮಾಧಿಯ ಬಗ್ಗೆ ವಿವರ ಬರುತ್ತದೆ. ಅದನ್ನು ಓದಿರುವಿ ಇಂದು ಆ ಸ್ಥಿತಿಯ ಅನುಭವ ನಿನಗೆ ಬಂದಿದೆ. ಅದು ಬೇರೆಯಲ್ಲ. ಅದು ನಿನ್ನ ನಿಜಸ್ವರೂಪವಾಗಿದೆ. ಅದುವೇ ಎಲ್ಲೆಡೆ ವ್ಯಾಪಕವಾದ ಬ್ರಹ್ಮವಾಗಿದೆ' ಎಂದು ಆಶೀರ್ವದಿಸಿದರು. ಅಂದಿನಿಂದ ಗುರುದಾಸ ಅವರ ಶಿಷ್ಯನಾಗಿ ಅಜ್ಜ ಇರುವವರೆಗೆ ಅವರ ಸೇವೆ ಸಲ್ಲಿಸಿದ.
ಲಗ್ನವಾದ ಹೆಣ್ಣುಮಗಳು ಅಜ್ಜನಲ್ಲಿ ಬೇಡಿಕೊಂಡಳು. ಅಜ್ಜ ಹೇಳಿದ ಮಗೂ, ಶ್ರೀ ಬಗಳಾಶತಕ ನಿತ್ಯ ಪಾರಾಯಣ ಮಾಡು ಒಂದು ತಿಂಗಳಲ್ಲಿ ಲಗ್ನವಾಗುತ್ತದೆ' ಎಂದು ಹೇಳಿ ಕಳಿಸಿದರು. ಅದರಂತೆ ಆ ತಾಯಿ ಸಾಧನ ಮಾಡತೊಡಗಿದಳು. ಒಂದು ದಿನ ತನ್ನ ಸಂಬಂಧಿಕರಿಗೆ ಭೇಟಿಯಾಗಲು ಮುಂಬೈಗೆ ಹೋದಾಗ ಅಲ್ಲಿಯೇ ಗಂಡ ದೊರತು ಒಂದು ತಿಂಗಳಲ್ಲಿ ಲಗ್ನವಾಗಿ ಬಂದು ಅಜ್ಜನ ಮುಂದೆ ಆನಂದದಿಂದ ಕುಣಿಕುಣಿದು ಹೇಳಿ ಆಶೀರ್ವಾದ ಪಡೆದು ಹೋಗುವಾಗ ನಾನಲ್ಲಿದ್ದೆನು.
ಅನೇಕ ವರ್ಷ ಮಕ್ಕಳಾಗದ ಓರ್ವ ಹೆಣ್ಣು ಮಗಳು ಅಜ್ಜನಿಗೆ ಮೊರಹೋದಾಗ ಅಜ್ಜನ ಆಶೀರ್ವಾದದಿಂದ ಗರ್ಭ ನಿಂತಿತು. ವೈದ್ಯರಿಗೆ ತೋರಿಸಿದಾಗ ಹೆಣ್ಣು ಮಗು ಜನಿಸುತ್ತದೆ ಎಂದಿದ್ದರು. ಅಜ್ಜನಿಗೆ ಕೇಳಿದಾಗ ಗಂಡು ಮಗು ಜನಿಸುತ್ತದೆ ಎಂದಿದ್ದರು. ಮರುವರ್ಷ ಆ ತಾಯಿ ಗಂಡು ಮಗುವನ್ನು ಕಂಕುಳಲ್ಲಿ ಹೊತ್ತುಕೊಂಡು ಅಜ್ಜನ ದರ್ಶನಕ್ಕೆ ಬಂದಾಗ ಅಜ್ಜನ ಮಾತು ನಿಜವಾಗಿತ್ತು
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
