ಕಟ್ಟಿಗೆಗಾಗಿ ಕಾಡಿಗೆ ಹೋದ ಭಕ್ತರನ್ನು ಸಿದ್ಧ ರಕ್ಷಿಸಿದ
🌺 ಕಟ್ಟಿಗೆಗಾಗಿ ಕಾಡಿಗೆ ಹೋದ ಭಕ್ತರನ್ನು ಸಿದ್ಧ ರಕ್ಷಿಸಿದ 🌺
ಹುಬ್ಬಳ್ಳಿ ತಾಲೂಕು ನೂಲ್ವಿ ಗ್ರಾಮದಲ್ಲಿ ಭರಮಪ್ಪ ಧರಪ್ಪ ರಾಟಿಮನಿ ಮತ್ತು ಯಲ್ಲಪ್ಪ ಮಲ್ಲಪ್ಪ ಬುಳ್ಳಣ್ಣವರ ಎಂಬವರು ಶ್ರೀ ಸಿದ್ಧಾರೂಢರ ಪರಮ ಭಕ್ತರಾಗಿದ್ದರು. ಪ್ರತಿ ಶಿವರಾತ್ರಿಯ ಸಮಯದಲ್ಲಿ ಏಳು ದಿವಸ ದಾಸೋಹವಿಟ್ಟು ಸಾಧು ಸಂತರಿಗೆ ಅನ್ನ ನೀಡುವ ಸೇವೆಯನ್ನು ಮಾಡುತ್ತಿದ್ದರು. ಇದರಿಂದ ಗುರುಕೃಪೆಗೆ ಪಾತ್ರರಾಗಿದ್ದರು. ಅವರು ತಮ್ಮೂರಲ್ಲಿ ಸಿದ್ದಾರೂಢರ ಪುರಾಣ ಭಜನೆ ಮತ್ತು ನಿಜಗುಣರ ಶಾಸ್ತ್ರಗಳನ್ನು ನಡೆಸುತ್ತಿದ್ದರು. ಭರಮಪ್ಪನವರ ಮನೆಯಲ್ಲಿ ಯಾವುದೇ ಹೊಸ ವಸ್ತು ಬರಲಿ ಅದರ ಒಂದಂಶವನ್ನು ಮತ್ತು ಜೋಳದ ಸುಗ್ಗಿಯಲ್ಲಿ ಅದರ ಕೆಲಭಾಗ ಮತ್ತು ಆಕಳು ಎಮ್ಮೆ ಮೊದಲ ಸಲ ಕರು ಹಾಕಿದಾಗ ಗಿಣ್ಣದ ಹಾಲನ್ನು ಪ್ರಸಾದವಾಗಿ ಸಿದ್ಧರ ಮಠಕ್ಕೆ ತಲುಪಿಸುತ್ತಿದ್ದರು. ಇದರಿಂದ ಗುರುನಾಥನ ಕೃಪೆಯಿಂದ ಮನೆಯಲ್ಲಿ ಸಮೃದ್ಧಿಯಾಗಿತ್ತು.
ಮನೆಯಲ್ಲಿ ಯಾರಿಗಾದರೂ ರೋಗ ಬಂದರೆ ಮತ್ತು ಧನಕರುಗಳಿಗೆ ಬೇನ ಬಂದರೆ ಗುರುಗಳ ಮಠಕ್ಕೆ ಹೋಗಿ ಸಿದ್ಧರ ಹಸ್ತಸ್ಪರ್ಶವಾದ ರೊಟ್ಟಿಯನ್ನೋ ಅಥವಾ ಅವರ ತೀರ್ಥ ಪ್ರಸಾದವನ್ನೋ ಅಥವಾ ವಿಭೂತಿ ಪ್ರಸಾದವನ್ನೋ ತಂದು ತಿನ್ನಿಸಿದರೆ ರೋಗಮುಕ್ತರಾಗುತ್ತಿದ್ದರು.
ಒಂದು ದಿನ ಮಠಕ್ಕಾಗಿ ಕಟ್ಟಿಗೆ ತರಲು ಐದಾರು ಚಕ್ಕಡಿಗಳನ್ನು ತೆಗೆದುಕೊಂಡು ಶ್ರೀ ಭರಮಪ್ಪ ರಾಟಿಮನಿ ಮತ್ತು ಯಲ್ಲಪ್ಪ ಬುಳ್ಳಣ್ಣವರ ಇವರು ತಮ್ಮ ಸಂಬಂಧಿಕರು ಮತ್ತು ಭಕ್ತರನ್ನು ಕರೆದುಕೊಂಡು ತಡಸ ಮಾರ್ಗವಾಗಿ ತಾಯವ್ವನ ಸರುವಿನ ಆಚೆಯ ಅಡವಿಗೆ ಹೋಗಿದ್ದರು. ದಟ್ಟಡವಿಯಲ್ಲಿ ಕ್ರೂರಮೃಗಗಳ ಹಾವಳಿ ಹೆಚ್ಚಾಗಿದ್ದರಿಂದ ಜನರು ಗುಂಪು ಕಟ್ಟಿಕೊಂಡೇ ಹೋಗಬೇಕಾಗಿತ್ತು. ಇವರು ಒಂದು ಜಾಗದಲ್ಲಿ ಎತ್ತಿನ ಕೊಳ್ಳ ಬಿಚ್ಚಿ ಒಂದು ಗಿಡಕ್ಕೆ ಕಟ್ಟಿ ಅವುಗಳಿಗೆ ಹೊಟ್ಟು, ಮೇವು ಹಾಕಿ ತಾವೂ ಊಟ ಮಾಡಿ ಕಟ್ಟಿಗೆ ಹೇರತೊಡಗಿದರು. ಅಷ್ಟರಲ್ಲಿ ಎಲ್ಲಪ್ಪನ ಎರಡು ಎತ್ತಿನ ಪೈಕಿ ಒಂದು ತುಂಟ ಹೋರಿ ಅಡವಿಯ ವಾತಾವರಣಕ್ಕೆ ಹೆದರಿ ಯಾರೂ ತಿಳಿಯದಂತೆ ಕಟ್ಟಿಗೆ ಹಗ್ಗ ಹರಿದುಕೊಂಡು ಅಡವಿಯಲ್ಲಿ ಹೋಯಿತು. ಆಗ ಅದರ ಕಡೆಗೆ ಯಾರದೂ ಲಕ್ಷ್ಯವಿರಲಿಲ್ಲ.
ಕಟ್ಟಿಗೆಗಳನ್ನು ಬಂಡಿಗೆ ಹೇರಿ ಮರಳಿ ಎತ್ತುಗಳ ಕಡೆಗೆ ಬಂದಾಗ ಹೋರಿಯಿಲ್ಲದ್ದನ್ನು ಕಂಡು ಗಾಬರಿಯಾದರು. ಅಷ್ಟು ಹೊತ್ತಿಗೆ ರಾತ್ರಿಯಾಗಿತ್ತು. ಆಗ ನಾಲ್ಕಾರು ಜನ ಬಡಿಗೆ ಕೊಡ್ಲಿ ಹಗ್ಗಗಳನ್ನು ಹಿಡಿದುಕೊಂಡು ಅದನ್ನು ಹುಡುಕಲು ಕಾಲು ದಾರಿ ಹಿಡಿದು ಹೊರಟರು. ಆ ಹೋರಿ ಕತ್ತಲೆಯಲ್ಲಿ ಒಂಟಿಯಾಗಿರಲು ಹೆದರಿ ಅಲ್ಲಿಯೇ ಸಮೀಪದಲ್ಲಿತ್ತು. ಆಗ ಬೆಳದಿಂಗಳಿದ್ದು ಅವರು ಅಲ್ಲಲ್ಲಿ ಹುಡುಕುವಾಗ ಸ್ವಲ್ಪ ದೂರದಲ್ಲಿ ಕಂಡಿತು. ಅದನ್ನು ಹಿಡಿಯಲು ಹೋದಾಗ ತಪ್ಪಿಸಿಕೊಂಡು ದೂರ ಹೋಗಿ ನಿಲ್ಲುತ್ತಿತ್ತು. ಹೀಗೆ ಅನೇಕ ಸಲ ಹಿಡಿಯಲು ಹೋದಾಗ ಅವರಿಗೆ ಸಿಗುತ್ತಿರಲಿಲ್ಲ.
ಅತ್ತ ಒಂದು ಸರೋವರವಿದ್ದು, ಕ್ರೂರ ಮೃಗಗಳು ಅಲ್ಲಿಗೆ ನೀರು ಕುಡಿಯಲು ಬರುತ್ತಿದ್ದವು. ಈ ತುಂಟ ಹೋರಿ ಅತ್ತಿತ್ತ ಅಲೆಯುತ್ತ ಸಿಗದಂತ ಆ ಜಲಾಶಯದ ಹತ್ತಿರ ಬಂದು ನಿಂತಿತು. ಅದನ್ನು ಹಿಡಿಯುವುದರಲ್ಲಿ ಇವರ ಕೈ ಕಾಲುಗಳು ನೋವಾಗಿದ್ದವು. ಎತ್ತು ಸಿಗದೆ ಮರಳುವಂತಿಲ್ಲ. ಏನು ಮಾಡಬೇಕೋ ತಿಳಿಯದೆ ಇನ್ನು ಸಿದ್ಧಾರೂಢನಿಗೆ ಶರಣು ಹೋಗುವುದೇ ಲೇಸೆಂದು `ಸದ್ಗುರುವೇ, ಇಂಥ ಆಪತ್ತಿನಲ್ಲಿ ನೀನೇ ಬಂದು ಕಾಪಾಡು ತಂದೆ' ಎಂದು ಬೇಡಿಕೊಂಡರು. ಅಷ್ಟರಲ್ಲಿ ಸುದೈವದಿಂದ ಸರೋವರದ ಆಚೆಯ ದಂಡೆಯಲ್ಲಿ ಒಬ್ಬ ಮುಪ್ಪಿನ ಮುದುಕ ತನ್ನ ಊರುಗೋಲಿನಿಂದ ಕೈಚಾಚಿ ಎತ್ತು ಹೋಗದಂತೆ ತಡೆಗಟ್ಟಿ ನಿಂತನು. ಅವನನ್ನು ನೋಡಿದ ಹೋರಿಯು ಅವನ ಸಮ್ಮೋಹಕ್ಕೊಳಗಾದಂತೆ ನಿಶ್ಲೇಷ್ಟಿತವಾಗಿ ಸುಮ್ಮನೇ ನಿಂತುಕೊಂಡಿತು.
ಆಗ ಜನರು ಎತ್ತಿನ ಹತ್ತಿರ ಹೋಗಿ ಅದನ್ನು ಹಿಡಿದು ಹಗ್ಗದಿಂದ ಕಟ್ಟಿದರು. ಗಡಿಬಿಡಿಯಲ್ಲಿ ಆ ಮುದುಕನ ಕಡೆಗೆ ಅವರ ಲಕ್ಷವೇ ಇರಲಿಲ್ಲ ಆಗ ಮುದುಕ ಹೇಳಿದ `ಏನ್ರಪಾ, ಇಷ್ಟು ಹೊತ್ತಿನ್ಯಾಗ ಯತ್ತನ್ನ ಹಿಂಗ ಬಿಡಬಾರದ್ರಿಪಾ, ಇಂಥಲ್ಲಿ ಹೀಗೆಲ್ಲ ಮಾಡಬಾರದು. ಬಹು ಹುಷಾರಾಗಿರಬೇಕ್ರೆಪಾ' ಎಂದು ಹೇಳಿ ಕಾಲ್ದಾರಿ ಹಿಡಿದು ಹೋಗಿ ಮಾಯವಾದ. ಈಗ ಈ ಜನರು ವಿಚಾರಕ್ಕೆ ಬಿದ್ದು ಈ ಕಾಡಿನೊಳಗೆ ಇಂಥ ಸರೂರಾತ್ರಿ ಮುಪ್ಪಿನ ಮುದುಕ ಹ್ಯಾಂಗ ಬಂದಾ? ಸನಿಹದಲ್ಲಿ ಯಾವ ಊರೂ ಇಲ್ಲ. ಈ ಮುದುಕ ಯಾರಿರಬೇಕು? ಬಹುತೇಕ ಸಿದ್ದಾರೂಢನೇ ಇರಬೇಕು. ಅವನು ದೂರ ಹೋಗಿರಲಿಕ್ಕಿಲ್ಲ ಎಂದು ಎಲ್ಲರೂ ಅತ್ತಿತ್ತ ಹುಡುಕಿದರೂ ಸಿಗಲೇ ಇಲ್ಲ. ಆಗ ಅವರೆಲ್ಲರೂ ಸಿದ್ದಾರೂಢನೇ ಕಾಪಾಡಿದನೆಂದು ಜಯಜಯಕಾರ ಮಾಡುತ್ತ ಸಿದ್ಧಾರೂಢ ಸದ್ಗುರು ತಂದೆ ಉದ್ದಾರಾದೆವು ನಿಮ್ಮಿಂದ ನೀನೀ ಲೋಕಕೆ ಬಂದಿಂದೆ ಎನ್ನುತ್ತ ಚಕ್ಕಡಿಗೆ ಯತ್ತನ್ನು ಕಟ್ಟಿ, ಅಜ್ಜನ ಮಹಿಮೆಯನ್ನು ಕೊಂಡಾಡುತ್ತ ಮರುದಿನ ಮಠಕ್ಕೆ ಬಂದರು. ಆಗ ಸಿದ್ದಾರೂಢ ಮಹಾರಾಜರು ಬೆತ್ತದ ಖರ್ಚಿಯ ಮೇಲೆ ಕುಳಿತಿದ್ದರು.
ಎಲ್ಲರೂ ಓಂ ನಮಃ ಶಿವಾಯ ಭಜನೆ ಮಾಡುತ್ತ ಕಟ್ಟಿಗೆಗಳನ್ನು ಅವಸರ ಅವಸರವಾಗಿ ಇಳಿಸಿದರು ತಪ್ಪಿಸಿಕೊಂಡು ಹೋದ ಎತ್ತುಗಳು ಎಳೆದುಕೊಂಡು ಬಂದ ಚಕ್ಕಡಿಯಲ್ಲಿಯ ದೊಡ್ಡ ಬೊಡ್ಡೆ ಉಳಿದಿತ್ತು. ಅದನ್ನು ಇಳುಹಲು ಹೋದಾಗ ಸಿದ್ದಾರೂಢರು ಹೇಳಿದರು ಅದನ್ನು ಈಗ ಇಳಿಸಬೇಡಿರಿ, ಜಳಕ ಮಾಡಿ ಪ್ರಸಾದ ತೆಗೆದುಕೊಂಡು ವಿಶ್ರಾಂತಿಯ ನಂತರ ಸಾಯಂಕಾಲ ಇಳಿಸಿರಿ' ಎಂದು ಅಪ್ಪಣೆ ಮಾಡಿದರು. ಆಗ ಜನರು `ಅಪಾ, ಈಗಲೇ ಇಳಿಸಿದರೆ ಕೆಲಸ ಮುಗಿಯುತ್ತದೆ ಇಳಿಸುತ್ತೇವೆ' ಎಂದಾಗ ಅಜ್ಜ ಹೇಳಿದ `ಹಾಗಾದರೆ ಸ್ವಲ್ಪ ಹೊತ್ತು ಬಿಟ್ಟು ಇಳಿಸಿರಿ' ಎಂದರು. ಆಗ ಎಲ್ಲರೂ ಸ್ವಲ್ಪ ಹೊತ್ತು ತಡೆದಾಗ ಆ ಚಕ್ಕಡಿಯಲ್ಲಿಯ ಬೊಡ್ಡೆಯ ಡೊಗರಿನಿಂದ ಭಾರೀ ನಾಗರ ಹಾವೊಂದು ಮೆಲ್ಲ ಮೆಲ್ಲನೇ ಹೊರ ಬಂದಿತು. ಅದನ್ನು ನೋಡಿದ ಜನರು ಕಟ್ಟಿಗೆಯಿಂದ ಹೊಡೆಯಲು ಮುಂದಾದಾಗ ಸಿದ್ದ ಅದನ್ನು ಹೊಡೆಯಬೇಡಿರೆಂದು ಕಟ್ಟಪ್ಪಣೆ ಮಾಡಿ ಹೇಳಿದ, `ಅಪ್ಪಾ, ಇಷ್ಟು ಹೊತ್ತಿನವರೆಗೂ ಅದು ನಿಮ್ಮ ಚಕ್ಕಡಿಯಲ್ಲಿದ್ದರೂ ನಿಮಗೇನೂ ಮಾಡಿಲ್ಲ. ಅಂದ ಬಳಿಕ ಅದನ್ನೇಕೆ ಹೊಡೆಯಬೇಕು? ಅದು ನಿಮಗೇನಾದರೂ ಮಾಡುವುದಿದ್ದರೆ ನಿಮ್ಮ ಸಂಗಡವಿದ್ದು, ನಿಮ್ಮನ್ನು ಬಿಡುತ್ತಿತ್ತೆ? ಪರಮಾತ್ಮನ ದೃಷ್ಟಿಯಲ್ಲಿ ಎಲ್ಲರಿಗೂ ಬಾಳುವ ಹಕ್ಕಿದೆ, ಅದರ ಪಾಡಿಗೆ ಅದನ್ನು ಬಿಟ್ಟುಬಿಡಿರಿ' ಎಂದಾಗ ಸ್ವಾಮಿಗಳ ಅಮೃತವಾಣಿಯನ್ನು ಕೇಳಿ ಜನರು ತಟಸ್ಥರಾಗಿ ನಿಂತರು. ಅಷ್ಟರಲ್ಲಿ ಆ ಹಾವು ಸರಸರನೇ ಹರಿದು ಹೋಯಿತು. ಈ ಪವಾಡ ನೋಡಿದ ಜನರು ಜಯಜಯಕಾರ ಮಾಡಿದರು.
ಆಮೇಲೆ ಭರಮಪ್ಪ ಮತ್ತು ಯಲ್ಲಪ್ಪ ಅವರ ಸಂಗಡಿಗರು ಬೊಡ್ಡೆಯನ್ನು ಚಕ್ಕಡಿಯಿಂದ ಇಳಿಸಿ ಸಿದ್ಧರ ಚರಣಗಳಿಗೆರಗಿ ಕೇಳಿದರು ತಂದೆ, ಅಂಥಾ ಅಪರಾತ್ರ್ಯಗ ಆ ಕಾಡಿನೊಳಗ ಹ್ಯಾಂಗ ಬಂದಿ?' ಎಂದು ಕೇಳಿದಾಗ ಸಿದ್ದ ಹೇಳಿದ ನಾ ಎಲ್ಲಿ ಬಂದೇನ್ರಿಪಾ, ನನಗೆ ಅಷ್ಟು ದೂರ ನಡ್ಯಾಕ ಬರಬೇಕಲ್ಲ? ಅದೇನಿಲ್ಲ, ನಿಮ್ಮ ಶುದ್ಧ ಭಾವನಾನ ಆ ರೂಪದಿಂದ ಬಂದು ನಿಮಗೆ ಸಹಾಯ ಮಾಡೈತಿ ನಿಮಗ ಕಲ್ಯಾಣವಾಗಲಿ' ಎಂದು ಸುಮ್ಮನೆ ಕುಳಿತರು. ಅಜ್ಜನು ತಾನು ಮಾಡಿದ ಪವಾಡವನ್ನು ತನ್ನ ಮೇಲೆ ಹಾಕಿಕೊಳ್ಳದ ಭಕ್ತರ ಭಾವದ ಮೇಲೆ ಹಾಕುತ್ತಿದ್ದರು, ಅಷ್ಟಮಹಾಸಿದ್ಧಿಗಳು ಅವರ ಪದತಲದಲ್ಲಿದ್ದರೂ ಅವರು ಎಂದೂ ತಮ್ಮ ಪ್ರತಿಷ್ಟೆಗೆ ಬಳಸದ ಭಕ್ತರ ಕಲ್ಯಾಣಕ್ಕಾಗಿ ಕ್ವಚಿತ್ತಾಗಿ ಉಪಯೋಗಿಸುತ್ತಿದ್ದರು.
ಭರಮಪ್ಪನ ತಾಯಿ ಸಾಧಿ, ಶಿರೋಮಣಿ ಶ್ರೀಮತಿ ಮಲ್ಲಮ್ಮನವರು ಬಹಳ ಒಳ್ಳೆಯವರು. ಮನೆಯಲ್ಲಿ ಬಹಳ ಎಮ್ಮೆ, ಆಕಳುಗಳನ್ನು ಸಾಕಿದ್ದರಿಂದ ಹೈನಕ್ಕೇನೂ ಕೊರತೆಯಿರಲಿಲ್ಲ. ಮನೆಗೆ ಭಕ್ತರೇ ಬರಲಿ, ಭಿಕ್ಷುಕರೇ ಬರಲಿ, ಯಾರೇ ಬರಲಿ ಮೊಸರು ಮಜ್ಜಿಗೆಗಳನ್ನು ಉಚಿತವಾಗಿ ಕೊಡುತ್ತಿದ್ದರು. ಸುಗ್ಗಿಯ ಕೊನೆಯಲ್ಲಿ ದನಕರುಗಳ ಕಣ್ಣಿ ಬಿಚ್ಚಿಬಿಟ್ಟರೆ ಅವು ತಾವೇ ಮೇಯ್ದು ಮನೆಗೆ ಬರುವ ರೂಢಿಯಿತ್ತು. ಒಂದು ವರ್ಷ ಸುಗ್ಗಿ ಮುಗಿದ ಮೇಲೆ ದನಕರುಗಳನ್ನು ಮೇಯಲು ಬಿಟ್ಟಾಗ ಅದರ ಪೈಕಿ ನಾಲ್ಕು ಎಮ್ಮೆಗಳು ನಾಲ್ಕಾರು ದಿವಸಗಳಾದರೂ ಮನಗ ಬರಲಿಲ್ಲ. ಎಲ್ಲಿ ಹುಡುಕಿದರೂ ಸಿಗಲಿಲ್ಲವಾದ್ದರಿಂದ ಮಲ್ಲಮ್ಮನಿಗೆ ಚಿಂತೆಯಾಯಿತು.
ಭರಮಪ್ಪನವರು ಪ್ರತಿ ಸೋಮವಾರ ಮಠಕ್ಕೆ ಹೋಗಿ ಸಿದ್ಧರ ದರ್ಶನ ತೆಗೆದುಕೊಳ್ಳುವ ರೂಢಿಯಿತ್ತು. ಅಂದು ಮಠಕ್ಕೆ ಹೋಗುವ ಸಮಯದಲ್ಲಿ ಅವರ ತಾಯಿ `ಏ ತಮ್ಮಾ, ನಮ್ಮ ಎಮ್ಮ ಸಿಗಲೊಲ್ಲವು. ಅವು ಸಿಗತಾವೋ ಇಲ್ಲವೋ ಎಂದು ಆರೂಢಪ್ಪನಿಗೆ ಕೇಳಿಕೊಂಡು ಬಾ' ಎಂದು ಹೇಳಿ ಕಳಿಸಿದಳು. ಅವರಿಗಾದರೂ ಇಂಥ ಲೌಕಿಕ ಕ್ಷುಲ್ಲಕ ವಿಚಾರವನ್ನು ಮಹಾತ್ಮರಿಗೆ ಕೇಳಲು ಸಂಕೋಚವಿತ್ತು. ಆದರೂ ತಾಯಿಯ ಮಾತು ಮೀರದೆ ಮಠಕ್ಕೆ ಬಂದು ಸಿದ್ದರಿಗೆ ನಮಿಸಿ ತಾನು ತೆಗೆದುಕೊಂಡು
ಹೋದ ವಸ್ತುವನ್ನು ಸಮರ್ಪಿಸಿ ಪ್ರಸಾದ ತೆಗೆದುಕೊಂಡು ಊರಿಗೆ ಹೋಗಲು ಸಿದ್ಧರಿಗೆ ಅಪ್ಪಣೆ ಕೇಳಿದರು, ಆಗ ಗುರುಗಳು ಭರಮಪ್ಪಾ ಹೋಗಿ ಬಾ ನಿನಗೆ ಕಲ್ಯಾಣವಾಗಲಿ ಎಂದು ಹರಸಿದರು,
ಭರಮಪ್ಪನಿಗೆ ತಾಯಿಯ ಮಾತು ನೆನಪಾಗಿ ಹೋಗಲು ಹಿಂದೆ ಮುಂದೆ ಮಾಡುತ್ತಿದ್ದನು. ಸಿದ್ಧನ ಭರಮಪ್ಪನ ಮನದ ಇಂಗಿತವನ್ನು ಸೂಕ್ಷ್ಮವಾಗಿ ಗಮನಿಸಿ ಮುಗುಳು ನಗುತ್ತ 'ಭರಮಪ್ಪ ನೀನು ಯಾವ ದಾರಿಯಿಂದ ಬಂದಿರುವೆಯೋ ಅದನ್ನು ಬಿಟ್ಟು ಗಬ್ಬೂರ ದಾರಿ ಹಿಡಿದು ಹೋಗು, ನಿನ್ನ ನಾಲ್ಕು ಎಮ್ಮೆಗಳನ್ನು ಗಬ್ಬೂರ ರೈತನು ಈಗ ಕೊಂಡವಾಡಕ್ಕೆ ಹಾಕುವವನಿದ್ದಾನೆ. ಅವನ್ನು ತೆಗೆದುಕೊಂಡು ಹೋಗು' ಎಂದು ಹರಸಿದರು.
ಆಗ ಭರಮಪ್ಪ ಸಿದ್ಧರಿಗೆ ನಮಿಸಿ `ಎಪ್ಪಾ, ನಿನ್ನಂಥಾ ಅವತಾರಿ ಪುರುಷ ಯಾರಿದ್ದಾರೆ? ಎಲ್ಲರ ಅಂತರ್ಯದಲ್ಲಿಯದೂ ನಿನಗ ತಿಳೀತೈತಲ್ಲ. ಖರೆ ಅಂತರ್ಯಾಪುರುಷನೋ ನನ್ನಪ್ಪ' ಎಂದು ಮತ್ತೊಮ್ಮೆ ಸಾಷ್ಟಾಂಗ ನಮಿಸಿ ಅಲ್ಲಿಂದ ಹೊರಟು ಗಬ್ಬೂರಗೆ ಬಂದು ನೋಡುವಷ್ಟರಲ್ಲಿ ರೈತನು ನಾಲ್ಕು ಎಮ್ಮೆಗಳನ್ನು ಕೊಂಡವಾಡಕ್ಕೆ ಹಾಕುವ ಸಿದ್ಧತೆಯಲ್ಲಿದ್ದನು. ಅದನ್ನು ಕಂಡು ಭರಮಪ್ಪ ಸುಮ್ಮನೇ ನಿಂತಾಗ ರೈತ ಹೇಳಿದ `ದೊಡ್ಡ ಮನಶ್ಯಾ ಕಾಣತಿ, ತಿಳಿಯೂದಿಲ್ಲಾ ನಿನಗ, ಹಿಂಗ ದಿನಾನೂ ದನಾನ ತುಡುಗುಬಿಟ್ಟು ಮೇಯಿಸೋದಂದ್ರ ನನ್ನ ಹೊಟ್ಟಿನ ಲೂಕ್ಸನ ಯಾರ ಕೊಡತಾರ, ಕೊಂಡವಾಡಕ್ಕೆ ಹಾಕುವವನಿದ್ದೆ. ಈಗ ಬಂದೀ ಹೊಡಕೊಂಡು ಹೋಗ. ಇನ್ನೊಮ್ಮೆ ಹೀಂಗ ಬಿಟ್ಟಿ ಅಂದ್ರ ಲುಕ್ಸಾನ ವಸೂಲಿ ಮಾಡತೇನಿ ನೋಡ' ಹೀಗೆ ಹೇಳಿ ಎಮ್ಮೆಗಳನ್ನು ಕೊಟ್ಟು ಕಳಿಸಿದ.
ಇದರಂತೆ ಸಿದ್ಧಾರೂಢರು ಅನೇಕ ಲೀಲೆಗಳನ್ನು ಮಾಡಿ ನಂಬಿದ ಭಕ್ತರಿಗೆ ರಕ್ಷಿಸಿ ಅವರಿಗೆ ಏನೆಲ್ಲ ದಯಪಾಲಿಸಿ ಕೊನೆಗೆ ಸ್ವರೂಪ ಸಾಕ್ಷಾತ್ಕಾರ ಮಾಡಿಸಿ ಮುಕ್ತರನ್ನಾಗಿ ಮಾಡಿದ್ದಾರೆ. ಅವರು ನಡೆದಾಡುವ ದೇವರೇ ಆಗಿದ್ದರೆನ್ನುವುದರಲ್ಲಿ ಯಾವ ಸಂಶಯವಿಲ್ಲ.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
