ಗೋವಿಂದ ಸಂತನಿಂದ ಬೆಂಗಳೂರು ಆಶ್ರಮದ ಸ್ಥಾಪನೆ

 🌺 ಗೋವಿಂದ ಸಂತನಿಂದ ಬೆಂಗಳೂರು ಆಶ್ರಮದ ಸ್ಥಾಪನೆ 🌺





ಹಲ್ಯಾಳ ಗ್ರಾಮದಲ್ಲಿ ಗೋವಿಂದ ಸಂತನಂಬವರು ಶ್ರೀರಾಮನ ಭಕ್ತರು, ಪತ್ನಿ ರಾಧಾಬಾಯಿ ಪತಿ ಸೇವಾಸಕ್ತಳು. ಆದರೆ ಬಹಳ ಬಡವರಾಗಿದ್ದು ಹೊಟ್ಟೆತುಂಬ ಅನ್ನ ಸಿಗುತ್ತಿರಲಿಲ್ಲ. ಸಜ್ಜನಗಡಕ್ಕೆ ಹೋಗಿ ರಾಮ ಚಿಂತನದ ಅನುಗ್ರಹ ಮತ್ತು ಜೋಳಿಗೆ ಸಹಿತ ಒಂದು ಭಿಕ್ಷೆ ಬೇಡಿ ಅನ್ನವುಂಡು ರಾಮಚಿಂತನೆ ಯಲ್ಲಿದ್ದರು. ಹೀಗೆ ಬಹಳ ದಿವಸ ಕಳೆದವು. ಅವರು ಅಕಸ್ಮಾತ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಹುಬ್ಬಳ್ಳಿಗೆ ಬಂದು ಸದ್ಗುರುಗಳನ್ನು ಕಂಡಾಗ ಮಹದಾನಂದವಾಯಿತು. ಗೋವಿಂದ ಮತ್ತು ರಾಧಾಬಾಯಿ ಇಬ್ಬರೂ ಸಿದ್ಧ ಚರಣಗಳಲ್ಲಿ ಮಸ್ತಕವನ್ನಿಟ್ಟು 'ಸದ್ಗುರುವೇ, ನಮ್ಮನ್ನು ಉದ್ಧರಿಸಿರಿ' ಎಂದು ಬೇಡಿಕೊಂಡಾಗ ಸ್ವಾಮಿಗಳ ಅಂತಃಕರಣ ಕರಗಿತು. ಆಗ ಗುರುಗಳು ಭಕ್ತರೇ, ನೀವು ಹುಬ್ಬಳ್ಳಿಯಲ್ಲಿರಬೇಕು' ಎಂದು ಆಶೀರ್ವದಿಸಿದರು. ಅವರ ಆದೇಶದಂತೆ ಹುಬ್ಬಳ್ಳಿಯಲ್ಲಿದ್ದು ಭಿಕ್ಷಾನ್ನವುಂಡು ಶಾಸ್ತ್ರ ಶ್ರವಣಕ್ಕಾಗಿ ಮಠಕ್ಕೆ ಬಂದು ಹೋಗುತ್ತಿದ್ದರು. ಹೀಗೆ ಕೆಲವು ಕಾಲ ಕಳೆದವು.
ಬೆಂಗಳೂರಿನ ಜನ ಮಠಕ್ಕೆ ಬಂದು ಸಿದ್ಧಾರೂಢರ ಚರಣಗಳಿಗೆರಗಿ `ಸದ್ಗುರುವೇ, ಕೃಪೆಮಾಡಿ ನಮ್ಮ ಬೆಂಗಳೂರಿನ ಜನರಿಗೆ ಶಾಸ್ತ್ರ ಪ್ರವಚನ ಭಜನೆ ನಾಮಸ್ಮರಣೆ ಕಲಿಸಿ ಪಾವನರನ್ನಾಗಿ ಮಾಡಿರಿ' ಎಂದು ಬೇಡಿಕೊಂಡರು. ಗುರುಗಳು ಸಂತೋಷಪಟ್ಟು, `ಭಕ್ತರೇ, ನೀವೇನೂ ಕಾಳಜಿ ಮಾಡಬೇಡಿರಿ. ನಾನು ಒಬ್ಬ ಶಿಷ್ಯನನ್ನು ಕಳಿಸುತ್ತೇನೆ. ನೀವು ಹೋಗಿರಿ' ಎಂದು ಆಶೀರ್ವದಿಸಿ ಕಳಿಸಿದರು. ನಂತರ ಗೋವಿಂದನಿಗೆ ಕರದು `ಮಗೂ ಗೋವಿಂದಾ, ನೀನು ತಕ್ಷಣ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಯಾವ ಜಾತಿಯನ್ನೆಣಿಸದೆ ಸರ್ವರಲ್ಲಿ ಸಮಾನ ದೃಷ್ಟಿಯನ್ನಿಡಬೇಕು. ಮತ್ತು ಆಚಾರ ವಿಚಾರದಲ್ಲಿ ವ್ಯತ್ಯಾಸವಾಗದಂತಿದ್ದು, ಶ್ರದ್ಧೆಯ ಕಡೆಗೆ ಲಕ್ಷ್ಯವಿಡಬೇಕು. ಸ್ವಸುಖವನ್ನು ಬಯಸದೆ ಪರಸುಖದ ಕಡೆಗೆ ಲಕ್ಷ್ಯವಿಟ್ಟು ಜನರನ್ನು ಭಕ್ತಿಮಾರ್ಗದ ಕಡೆಗೆ ಕೊಂಡೊಯ್ಯುವ ಪುಣ್ಯ ಕಾರ್ಯ ಮಾಡಲು ಹೋಗು' ಎಂದು ಆಶೀರ್ವದಿಸಿದರು,
ಆಗ ಗೋವಿಂದ ಸಂತ ಮತ್ತು ರಾಧಾಬಾಯಿ ಗುರುಗಳ ಪಾದಗಳಿಗೆರಗಿ `ಸದ್ಗುರುವೇ, ನಿಮ್ಮ ಆದೇಶದಂತೆ ವರ್ತಿಸುತ್ತೇವೆ' ಎಂದು ಪ್ರೇಮಾಶ್ರುಗಳನ್ನು ಉದುರಿಸಿದರು. ಆಗ ಮತ್ತೆ ಸಿದ್ಧ ಹೇಳಿದ ಸಂತನೇ, ನೀನು ಬೆಂಗಳೂರಿಗೆ ಹೋಗಿ ಜನರಿಗೆ ಪ್ರೇಮದಿಂದ ಭಜನೆಗಳನ್ನು ಕಲಿಸು. ನೀನಾಗಿ ಯಾರಿಗೂ ಹಣ ಕೇಳಬೇಡ. ಅವರಾಗಿಯೇ ಕೊಟ್ಟರೆ ತೆಗೆದುಕೊ. ನಾನು ಗುರುವಾಗಿದ್ದೇನೆಂದು ಅಭಿಮಾನ ಪಡದೆ ಎಲ್ಲರ ಪ್ರೀತಿಯಿಂದಿರು. ಸ್ತ್ರೀ ಸಮಾಜದಲ್ಲಿ ನಿನ್ನ ವರ್ತನೆ ಸರಿಯಾಗಿರಲಿ' ಎಂದು ಹೇಳಿದಾಗ ಅವರಿಬ್ಬರೂ ದುಃಖಿಸುತ್ತ ಗುರುನಾಥ, ನಿಮ್ಮ ಚರಣಗಳನ್ನು ಬಿಟ್ಟು ಹೇಗೆ ಹೋಗಬೇಕು?' ಎಂದರು. ಮತ್ತೆ ಗುರುಗಳು `ಗೋವಿಂದಾ, ನಾನು ಯಾವಾಗಲೂ ಹತ್ತಿರವಿದ್ದೇನೆಂದು ತಿಳಿ, ಕೀರ್ತನೆಗಾಗಿ ಒಬ್ಬರಿಗೆ ಕಳಿಸುತ್ತೇನೆ' ಎಂದು ಬೀಳ್ಕೊಟ್ಟರು.
ಆಮೇಲೆ ಗೋವಿಂದ ಸಂತ ಮತ್ತು ರಾಧಾಬಾಯಿ ಬೆಂಗಳೂರಿಗೆ ಹೋದರು. ಅಲ್ಲಿ ಓಂ ನಮಃ ಶಿವಾಯ ಮಂತ್ರ ಭಜನೆ ಸಪ್ತಾಹ ಕೀರ್ತನ ಶಾಸ್ತ್ರ ಪ್ರವಚನ ಪ್ರಸಾದ ವಿತರಣೆ ಕಾರ್ಯ ನಡೆಸುತ್ತಿದ್ದರು. ಹೀಗಾಗಿ ಬಹಳಷ್ಟು ಜನರು ಭಾಗಿಗಳಾಗಿ ಆನಂದಪಡುತ್ತಿದ್ದರು. ಇಪ್ಪತ್ನಾಲ್ಕು ತಾಸು ನಾಮಸ್ಮರಣೆ ನಡೆಯುತ್ತಿತ್ತು. ಯಾರಿಗೂ ತಾವಾಗಿ ಬೇಡುತ್ತಿರಲಿಲ್ಲ. ಆಶ್ರಮಕ್ಕೆ ದೂರದೂರ ಶಹರದ ಗ್ರಾಮದ ಜನರು ಬರುತ್ತಿದ್ದು, ಸಿದ್ದ ಸಂಪ್ರದಾಯದ ಕೀರ್ತಿ ಹಬ್ಬಿತು. ಅನೇಕ ಭಕ್ತರು ಬೆಂಗಳೂರಿಗೆ ಬರಹತ್ತಿದರು. ಕೆಲವರು ಶಾಸ್ತ್ರ ಕೇಳಲು ಕೆಲವರು ಮಕ್ಕಳು ಕೇಳಲು, ಇನ್ನು ಕೆಲವರು ಸಂಪತ್ತು ಕೇಳುವುದಕ್ಕೆ ಮತ್ತೆ ಕೆಲವರು ಊಟಕ್ಕಾಗಿ ಬರುತ್ತಿದ್ದರು. ಯಾವ ರೀತಿಯ ಜನರು ಬಂದರೂ ಗೋವಿಂದ ಸಂತನು ಅವರಿಗೆ ಪ್ರೀತಿಯಿಂದ ಉಣಿಸುತ್ತಿದ್ದನು. ಮನೆಮನೆಗಳಲ್ಲಿ ನಾಮಸ್ಮರಣೆ ಭಜನೆಗಳು ನಡೆಯುತ್ತಿದ್ದವು. ಮೈಸೂರು ಪ್ರಾಂತದಲ್ಲಿಯೂ ಸಿದ್ಧರ ಕೀರ್ತಿ ಪಸರಿಸಿ ಅಲ್ಲಿಂದಲೂ ಭಕ್ತರು ಬರುತ್ತಿದ್ದರು. ಹೀಗೆ ಗೋವಿಂದ ಸಂತನು ಬೆಂಗಳೂರಿನಲ್ಲಿ ಪ್ರಚಾರ ಕಾರ್ಯ ಮಾಡತೊಡಗಿದನು.
ಆಮೇಲೆ ಸಿದ್ದರೂಢರು ಗೋವಿಂದ ಸಂತನ ಮನಸ್ಸಿನಲ್ಲಿ ತೀರ್ಥಯಾತ್ರ ಮಾಡಬೇಕೆಂಬ ಇಚ್ಛೆಯನ್ನರಿತು ಸದ್ಗುರುಗಳು ಅವನನ್ನು ಕರೆಸಿ ಗೋವಿಂದಾ, ಇನ್ನು ಮುಂದೆ  ಗೋವೆಗೆ ಹೋಗಿ ಪ್ರಚಾರ ಮಾಡು. ತೀರ್ಥಕ್ಷೇತ್ರ ದೇವತಾ ವಿಗ್ರಹಗಳು ನಿನ್ನ ಭೇಟಿಯನ್ನು ಇಚ್ಚಿಸುವುದಿಲ್ಲ. ಹಳ್ಳಿ ಶಹರ ಗ್ರಾಮಗಳಲ್ಲಿ ತಿರುಗಿ ಭಜನೆ ಸಪ್ತಾಹ ಮಾಡಿ ಜಗದೋದ್ದಾರ ಮಾಡು' ಎಂದು ಸಂತನಿಗೆ ಗೋವೆಗೆ ಕಳಿಸಿದರು.
ಸಂತನು ಗೋವೆಗೆ ಹೋಗಿ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಜನರಿಗೆ ಭಜನ ಪ್ರಸಾದವನ್ನು ಉಣಿಸಿದನು. ಮಡಗಾವಕ್ಕೆ ಬಂದು ಸಿದ್ದನ ಚರಿತ್ರೆಯನ್ನು ತಿಳಿಸಿದನು. ಅಲ್ಲಿ ಓರ್ವ ಶ್ರೀಮಂತನ ಎರಡು ವರ್ಷದ ಮಗು ರೋಗದಿಂದ ರಾತ್ರಿ ಹಗಲು ಚಟಪಡಿಸುತ್ತಿದ್ದು, ಇನ್ನು ನಾಲ್ಕು ದಿವಸಗಳಲ್ಲಿ ಸಾಯುತ್ತಾನೆ ಎಂದಿದ್ದರು. ಮನೆಯ ಯಜಮಾನ ಗಾಬರಿಗೊಂಡು ಗೋವಿಂದ ಸಂತನನ್ನು ಕರೆದುಕೊಂಡು ಬಂದು ತೋರಿಸಿದನು. ಆಗ ಗೋವಿಂದ ಸಂತನು ಹೇಳಿದ ನಿಮ್ಮ ಮನಸ್ಸಿನಲ್ಲಿ ನಿಶ್ಚಯವಾಗಿ ಸಿದ್ಧಾರೂಢರನ್ನು ನಂಬಿದರೆ ಅವನು ಕಾಪಾಡುತ್ತಾನೆ. ತ್ವರಿತವಾಗಿ ಶ್ರೀ ಸಿದ್ದರ ಚರಿತ್ರೆಯನ್ನೋದಿ ಸಪ್ತಾಹ ಮಾಡಬೇಕು. ವಿಭೂತಿಯನ್ನು ಮೈಗೆ ಹಚ್ಚಿ ತೀರ್ಥವನ್ನು ಅವನ ಮುಖದಲ್ಲಿ ಹಾಕಬೇಕು' ಎಂದನು.
ಸಂತನ ವಿಚಾರ ಕೇಳಿ ಎಲ್ಲರೂ ಸಂತೋಷಗೊಂಡರು. ಆಗವರು `ಸಂತರೇ , ನೀವೇ ತೀರ್ಥ ಹಾಕಿರಿ, ಎಂದಾಗ ಸಂತನು ಪ್ರೀತಿಯಿಂದ ತನ್ನ ಹೃದಯದಲ್ಲಿ ಸಿದ್ಧನನ್ನು ನೆನೆದು 'ಗುರುವೇ, ಈ ಮಗುವು ಮರಣಶೈಯ್ಯೇಲ್ಲಿದೆ. ನಿನ್ನ ಹೆಸರಿನಿಂದ ತೀರ್ಥಪ್ರಸಾದ ಕುಡಿಸುತ್ತೇನೆ. ಮಗುವಿಗೆ ಆರೋಗ್ಯ ಕರುಣಿಸು' ಎಂದು ಬೇಡಿಕೊಂಡು ತೀರ್ಥಪ್ರಸಾದ ಹಾಕಿ, ಸಿದ್ದಾಶ್ರಮಕ್ಕೆ ಪತ್ರ ಬರೆದನು. 'ಗುರುವೇ, ಈ ಮಗುವನ್ನು ನೀನೇ ರಕ್ಷಿಸು. ನಿನ್ನ ಹೆಸರಿನಿಂದ ತೀರ್ಥಪ್ರಸಾದ ಕುಡಿಸಿದ್ದೇನೆ. ಬಾಲಕನ ಸಲುವಾಗಿ ವಿಭೂತಿ ಕಳಿಸು' ಹೀಗೆ ಪತ್ರ ಬರೆದ ದಿನದಿಂದ ಜ್ವರ ಕಡಿಮೆಯಾಗುತ್ತ ನಡೆಯಿತು. ಸಪ್ತಾಹ ಪ್ರಾರಂಭಿಸಿ ಸಮಾಪ್ತಿಯ ದಿನ ಸಿದ್ಧರು ವಿಭೂತಿ ಪ್ರಸಾದ ಕಳಿಸಿದರು. ದಿನಗಳೆದಂತೆ ರೋಗ ನಿವಾರಣೆಯಾಗಿ ಮಗು ಸಶಕ್ತವಾಯಿತು. ಹೀಗೆ ಗೋವೆಯಲ್ಲಿ ಸಿದ್ಧಾರೂಢರ ಲೀಲೆ ಪ್ರಚಾರವಾಯಿತು. ಪ್ರತಿವರ್ಷ ಗೋವಿಂದ ಸಂತನನ್ನು ಗೋವೆಯ ಪಂಚವಾಡಿಗೆ ಕಳಿಸುತ್ತಿದ್ದರು.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸಿದ್ಧರ ಭವಿಷ್ಯವಾಣಿ ಸತ್ಯವಾಯಿತು

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ