ಸಿದ್ಧರ ಭವಿಷ್ಯವಾಣಿ ಸತ್ಯವಾಯಿತು

  🌺 ಸಿದ್ಧರ ಭವಿಷ್ಯವಾಣಿ ಸತ್ಯವಾಯಿತು 🌺



ಬೆಳಗಾವಿ ಶಹರದ ಬಸವಣ್ಣನ ಓಣಿಯ ನಿವಾಸಿ ಪಂಚಮಸಾಲಿ ಜನಾಂಗದ ಶ್ರೀ ನೀಲಕಂಠಗೌಡಾ ಪಾಟೀಲ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಗಂಗಾದೇವಿಯೆಂಬ ದಂಪತಿಗಳು ಸಿರಿವಂತರಾಗಿದ್ದರೂ ಸಾಧು ಶರಣರಲ್ಲಿ ಭಕ್ತಿಯುಳ್ಳವರಾಗಿದ್ದರು. ಇವರಿಗೆ ಮಕ್ಕಳಾಗಿರಲಿಲ್ಲವಾದ್ದರಿಂದ ಸದಾ ಶಿವ ಚಿಂತನೆಯಲ್ಲಿರುತ್ತಿದ್ದರು. ಒಂದು ದಿವಸ ಒಬ್ಬ ಸಾಧು ಮಹಾತ್ಮರು ಭಿಕ್ಷೆಗೆ ಬಂದಾಗ ಅವನನ್ನು ಮನೆಯಲ್ಲಿ ಕರೆದು ಪೂಜಿ ಪ್ರಸಾದ ಉಣಿಸಿದಾಗ ಆ ಸಾಧುವು ಶ್ರೀ ಸಿದ್ಧಾರೂಢರ ಮಹಿಮೆಗಳನ್ನು ಬೋಧಿಸಿ ಆಶೀರ್ವದಿಸಿ ಹೋದನು, ಇದರಿಂದ ಸಿದ್ದರ ಮೇಲೆ ಗೌಡರ ಭಕ್ತಿ ಹೆಚ್ಚಾಯಿತು, ಕೆಲವು ಭಕ್ತರ ಜೊತೆಗೆ ಇವರು ಶ್ರೀ ಸಿದ್ಧಾರೂಢರ ಮಠಕ್ಕೆ ಹೋಗಿ ಸಿದ್ದರ ದರ್ಶನ ತೆಗೆದುಕೊಂಡು ಆಗ ಅಲ್ಲಿಯೇ ಇದ್ದ ಸಿದ್ದರ ಪರಮ ಶಿಷ್ಯರಲ್ಲಿ ಒಬ್ಬರಾದ ಅಕ್ಕಲಕೋಟೆಯ ಶರಣಪ್ಪನವರಿಂದ ಉಪದೇಶ ಪಡೆದಾಗ ಶರಣಪ್ಪನವರು ಶ್ರೀ ಸಿದ್ದರ ತೀರ್ಥ ಪ್ರಸಾದ ಕೊಟ್ಟು ಹೇಳಿದರು 'ಗಂಗಮ್ಮ, ನಿನ್ನ ಪವಿತ್ರ ಗರ್ಭದಿಂದ ವಿದ್ಯಾವಂತನೂ ಲೋಕಪೂಜ್ಯನೂ ಆದ ಸತ್ಪುತ್ರ ಜನಿಸುತ್ತಾನೆ. ಚಿಂತಿಸಬೇಡಿರಿ ಎಂದು ಹೇಳಿ ಕಳಿಸಿದರು.
ಅವರ ಪ್ರಸಾದವಾಣಿಯಂತ ಹತ್ತೊಂಭತ್ತುನೂರಾ ಒಂಭತ್ತನೆಯ ಇಸ್ವಿಯಲ್ಲಿ ಗಂಗಮ್ಮನವರ ಗರ್ಭದಿಂದ ಒಂದು ಗಂಡು ಕೂಸು ಜನಿಸಿತು. ಅವನಿಗೆ `ಬಸವಲಿಂಗಪ್ರಭು' ಎಂದು ಹೆಸರಿಟ್ಟರು. ಶ್ರೀ ಸಿದ್ಧಾರೂಢ ಮಠದಲ್ಲಿ ವಿಶೇಷ ಪ್ರಸಂಗಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಂದೆ ತಾಯಿಗಳು ಹೋಗುವಾಗ ಮಗುವನ್ನು ಕರೆದುಕೊಂಡು ಹೋಗುತ್ತಿದ್ದರು. ಒಂದು ದಿವಸ ಹೋದಾಗ ಮಗುವಿಗೆ ಮಂತ್ರೋಪದೇಶ ಮಾಡಿದರು. ಮುಂದೆ ಮಗುವು ಬೆಳೆದಂತೆ ಶಾಲಾಭ್ಯಾಸದಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತ ಮುಂದೆ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. ಪರೀಕ್ಷೆ ಪಾಸಾದರು. ಆಗ ಅವರ ತಂದೆಯಿಂದ ತಂತಿ ಸುದ್ದಿ ಬಂದಿತು. ಅದೆಂದರೆ ಶ್ರೀ ಸಿದ್ಧಾರೂಢರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ತಕ್ಷಣ ಬರಬೇಕು' ಎಂದಿತ್ತು. ಆಗ ಬಸವಲಿಂಗ ಪ್ರಭುಗಳು ತಕ್ಷಣ ಬೆಳಗಾವಿಗೆ ಬಂದು ತಂದೆ ತಾಯಿಗಳ ಜೊತೆಗೆ ಹುಬ್ಬಳ್ಳಿಗೆ ಬಂದು ಸಿದ್ಧರಿಗೆ ಸಾಷ್ಟಾಂಗ ನಮಿಸಿದಾಗ ಮಂಚದ ಮೇಲಿದ್ದ ಶ್ರೀ ಸಿದ್ಧಾರೂಢರು ಬಸವಲಿಂಗ ಪ್ರಭುವನ್ನು ಕರುಣಾಕಟಾಕ್ಷದಿಂದ ನೋಡಿ ಅವನ ತಂದೆ ತಾಯಿಗಳಿಗೆ ಹೇಳಿದರು ನೀಲಕಂಠಗೌಡರೇ, ನಿಮ್ಮ ಏಕೈಕ ಪುತ್ರನು ಮೇರುವಿದ್ಯಾಸಂಪನ್ನನಾಗಿ ದೊಡ್ಡ ನೌಕರಿ ಮಾಡಿದರೂ ಅದನ್ನು ಬಿಟ್ಟು ಸನ್ಯಾಸಿಯಾಗಿ ಲೋಕೋದ್ಧಾರ ಕಾರ್ಯ ಮಾಡುತ್ತಾನೆ. ಆದ್ದರಿಂದ ಲಗ್ನ ಮಾಡಬೇಡಿರಿ' ಎಂದು ಆಶೀರ್ವದಿಸಿ ಕಳಿಸಿದರು.
ಸಿದ್ಧರ ಭವಿಷ್ಯವಾಣಿಯಂತೆ ಬಸವಲಿಂಗ ಪ್ರಭುಗಳು ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಆನರ್ಸ ಪರೀಕ್ಷೆ ಮುಗಿಸಿ ಮುಂಬೈಯಲ್ಲಿ ರಿಝರ್ವ ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಹತ್ತಿದರು. ಅಲ್ಲಿ ಆಗಾಗ ನಡೆಯುವ ಅಧ್ಯಾತ್ಮಿಕ ಪ್ರವಚನ ಕೇಳುತ್ತ ದಿನಾಲು ಶ್ರೀ ಸಿದ್ಧಾರೂಢರ ಚರಿತ್ರೆಯನ್ನು ಓದುತ್ತಿದ್ದರು. ಆಗ ವೈರಾಗ್ಯ ಪ್ರಾಪ್ತವಾಗಿ ಆ ನೌಕರಿಯ ಜವಾಬ್ದಾರಿ ಹೆಚ್ಚಾಗಿದ್ದರಿಂದ ಇದೊಂದು ಜೈಲು ಶಿಕ್ಷೆಯೆಂದು ತಿಳಿದು ಆ ನೌಕರಿಗೆ ಶರಣು ಹೊಡೆದು ಮರಳಿ ಬೆಳಗಾವಿಗೆ ಬಂದರು.
ಮುಂದೆ ಹುಬ್ಬಳ್ಳಿಯ ಸಿದ್ಧರ ಮಠದಲ್ಲಿದ್ದ ಅಕ್ಕಲಕೋಟೆಯ ಶರಣಪ್ಪನವರಿಂದ ವಿವಿದುಷಾ ಸನ್ಯಾಸ ದೀಕ್ಷೆ ಪಡೆದು ಯೋಗಾನಂದರೆಂಬ ನಾಮ ಪಡೆದು ಅವರ ಅಪ್ಪಣೆಯಂತೆ ಬಡೋದಾ, ಹೃಷಿಕೇಶ, ಅಲಹಾಬಾದ, ಕಾಶಿ ಕ್ಷೇತ್ರ, ಹನ್ನರಡು ಜೋತಿರ್ಲಿಂಗ ಮುಂತಾದ ಕ್ಷೇತ್ರಗಳನ್ನು ತಿರುಗಿ ಅನೇಕ ಮಹಾತ್ಮರಲ್ಲಿ ಪಾರಮಾರ್ಥಿಕ ವಿಷಯಗಳ ಅಭ್ಯಾಸ ಮಾಡಿ ಸಂಚಾರ ಮಾಡುತ್ತ ಬೀದರ, ಸಾಂಗ್ಲಿ, ಪಂಡರಪುರ, ಶೃಂಗೇರಿ ಮುಂತಾದ ಶಹರಗಳಲ್ಲಿ ಪಾರಮಾರ್ಥ ತತ್ವ ಪ್ರಚಾರ ಮಾಡುತ್ತ ಪುನಃ ಹುಬ್ಬಳ್ಳಿಗೆ ಬಂದರು. ಆಗ ಅಕ್ಕಲಕೋಟೆಯ ಶರಣಪ್ಪನವರ ಆಜ್ಞೆಯಂತ ಶ್ರೀ ಸಿದ್ಧರ ಶಿಷ್ಯ ಬಾಗಲಕೋಟೆಯ ಶ್ರೀ ರಾಮಾರೂಢರ ದರ್ಶನಾಶೀರ್ವಾದಗಳನ್ನು ಪಡೆದು ಅವರ ಆಜ್ಞೆಯಂತೆ ಮೈಸೂರಿನ ಕೆಲ ಭಾಗಗಳಲ್ಲಿ ಸಂಚರಿಸಿ ವೇದಾಂತ ಪ್ರಚಾರ ಮಾಡಿದರು.
ಅದರಂತೆ ಬೆಳಗಾವಿ, ವಿಜಾಪುರ ಮೊದಲಾದ ಊರುಗಳಲ್ಲಿ ಪ್ರಚಾರ ಮಾಡಿದರು. ನಂತರ ರಾಮಾರೂಢರು ಈ ಯೋಗಾನಂದರೆಂಬ ಇವರಿಗೆ ಯಾವುದೇ ಮಠದ ಅಧಿಕಾರ ಉಪಾಧಿ ಬೇಡವೆಂದು ತಿಳಿದು ಬಾಗಲಕೋಟೆಯ ಹತ್ತಿರ ಮಲ್ಲಾಪುರ ಮೂಲಮಠದ ಪ್ರಚಾರ ಮಾಡುತ್ತ ಸಂಚಾರದಲ್ಲಿರಬೇಕೆಂದು ಯೋಚಿಸಿ ಅವರ ಜಡೆ ನುಡಿಗಳನ್ನು ತೆಗೆಸಿ ವಿದ್ಯತ್ ಸನ್ಯಾಸ ದೀಕ್ಷೆ ಕೊಟ್ಟು ಸಹಜಾನಂದರೆಂಬ ನಾಮಕರಣ ಮಾಡಿದರು,
ಸದಾ ಹಸನ್ಮುಖರಾದ ಇವರು ಒಂದು ದಿವಸವೂ ಬೇಸರ ಪಡದೆ ಸದಾ ಸಂಚಾರದಲ್ಲಿದ್ದು ವೇದಾಂತ ಪ್ರಚಾರ ಮಾಡುತ್ತ ಅನೇಕರಿಗೆ ಬಂದ ಕಷ್ಟಗಳನ್ನು ಪರಿಹರಿಸಿ ಸೇವೆ ಸಲ್ಲಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಮಠದಲ್ಲಿ ಪ್ರತಿವರ್ಷ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದರು, ಮಹಾರಾಷ್ಟ್ರದಲ್ಲಿದ್ದಾಗ ಖಡಕವಾಸಲಾ ಶಹರದಲ್ಲಿ ಶ್ರೀ ಸಿದ್ಧಾರೂಢರ ಹೊಸ ಹೊಸ  ಮಹಿಮೆಗಳನ್ನು ಸತತ ಮೂರು ತಿಂಗಳು ಕೇಳಿದ ಇವರು ತಮ್ಮ ತೊಂಭತ್ತೆರಡನೆಯ ತುಂಬು ಜೀವನ ನಡೆಸಿ ೧೯೯೯ರಲ್ಲಿ ಹುಬ್ಬಳ್ಳಿಯ ಗ್ರಾಮದ ಭಕ್ತರಾದ ಯಲ್ಲಪ್ಪ ದುರುಗಪ್ಪ ರಾಮೇನಹಳ್ಳಿ ಅವರ ಮನೆಗೆ ಹೋದರು. ಆಗ ಗುರುಗಳನ್ನು ಉಚಿತಾಸನದಲ್ಲಿ ಕುಳ್ಳಿರಿಸಿ, ಭಕ್ತರು ಪೂಜೆ ಮಾಡಿದ ನಂತರ ಸಹಜಾನಂದರು ಮಾತಾಡುತ್ತಲೇ ಓಂ ನಮಃ ಶಿವಾಯ ಸಿದ್ಧಾರೂಢರ ಜಯಜಯಕಾರ ಮಾಡುತ್ತ ಪೂರ್ವ ನಿರ್ಧಾರದಂತೆ ತಮ್ಮ ಶರೀರ ತ್ಯಜಿಸಿ ಮಹಾಸಮಾಧಿ ಹೊಂದಿದರು.
ನಂತರ ಸದಾ ಇವರ ಸಂಚಾರ ಕಾಲದಲ್ಲಿದ್ದ ಇವರ ಶಿಷ್ಯ ಶ್ರೀಮತಿ ಗುರುಬಸಮ್ಮನವರು ಮತ್ತು ಯಲ್ಲಪ್ಪನವರು ಹಾಗೂ ಅವರ ಮಕ್ಕಳಾದ ಪ್ರಕಾಶ, ವಿವೇಕ, ಸಂಜಯ ಮತ್ತೆ ಕಲ್ಲನಗೌಡ ಸೋಮು ಮುಂತಾದವರು ಹಾಗೂ ದುಃಖತಪ್ತರಾದ ಇವರ ಭಕ್ತರು ಅವರ ಪಾರ್ಥಿವ ಶರೀರವನ್ನು ಕೊಂಡೊಯ್ದು ಚಿತ್ರಭಾನು ಕೋಟೆಯೆಂಬಲ್ಲಿ ಸಮಾಧಿ ಮಾಡಿದರು. ನಂತರ ಅವರ ಉತ್ತರಾಧಿಕಾರಿಯಾದ ಶ್ರೀ ಸಹಜಾನಂದ ಸರಸ್ವತಿ ಇವರು ತಮ್ಮ ಗುರು ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 
👉ಸಣ್ಣ ಸಿದ್ಧಪ್ಪನನ್ನು ಸಿದ್ಧ ಬದುಕಿಸಿದ

ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ

ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇

Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ 
👇



👇



👇

Popular posts from this blog

ಮಕರ ಸಂಕ್ರಾಂತಿ ದಿನ ಸಿದ್ಧನು ಎಳ್ಳಿನರಾಶಿ ಮಾಡಿ ಮಹಿಮೆ ತೋರಿದ್ದು

ಸಿದ್ಧಾರೂಢ ಭಾಗವತ ಲೀಲಾಕಥೆಗಳ

ಬಾಲಸಿದ್ಧಾರೂಢನು ಓಂಕಾರದ ಅರ್ಥವನ್ನು ಗುರುಗಳಿಗೆ ಹೇಳಿದ ಕಥೆ