ಸಿದ್ಧರೂಢರಿಂದ ಗಂಗಾ ಯಮುನಾ ಸರಸ್ವತಿ ಸಂಗಮ
🌺 ಸಿದ್ಧರೂಢರಿಂದ ಗಂಗಾ ಯಮುನಾ ಸರಸ್ವತಿ ಸಂಗಮ🌺
ಹುಬ್ಬಳ್ಳಿಯ ಹೂಗಾರ ಓಣಿಯಲ್ಲಿರುವ ಪಂಚವಣಗಿ ಮಠದ ಸ್ವಾಮಿಗಳಾದ ಚನ್ನಯ್ಯ ಸದಾವರ್ತಿಯವರು ಸಿದ್ಧಾರೂಢರ ಪರಮ ಭಕ್ತರಲ್ಲಿ ಒಬ್ಬರು. ಇವರು ಪ್ರಾಪಂಚಿಕರಾದರೂ ನಿತ್ಯ ಶಿವಪೂಜೆ, ಶಿವಧ್ಯಾನ, ಯೋಗ ಸಾಧನೆ, ಶಾಸ್ತ್ರ ಪ್ರವಚನ ಹೇಳುವುದು, ಕೇಳುವುದು ಮಾಡುತ್ತಿ ದ್ದರು. ದಿನಾಲು ಸಿದ್ಧಾರೂಢ ಮಠಕ್ಕೆ ಹೋಗಿ ಸಿದ್ದರ ದರ್ಶನ ತೆಗೆದುಕೊಂಡು ಶಾಸ್ತ್ರ ಕೇಳಿ ಪ್ರಸಾದ ತೆಗೆದುಕೊಂಡು ಬರುತ್ತಿದ್ದರು. ಸಿದ್ಧಾರೂಢರು ಹೊಸ ಹುಬ್ಬಳ್ಳಿಯ ಆ ಭಾಗದ ಭಕ್ತರ ಮನೆಗೆ ಹೋಗಿ ಪ್ರಸಾದ ತೆಗೆದುಕೊಂಡು ಮರಳಿ ಬರುವಾಗ ಅವರ ಮನೆಗೆ ಹೋಗಿ ಚನ್ನಯ್ಯನವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುತ್ತಿದ್ದರು.
ಹೀಗಿರುವಾಗ ಆ ಓಣಿಯಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಅಕಸ್ಮಾತ್ ನೀರಿನ ಅಭಾವವಾಗಿ ಅವರಿಗೆ ಸ್ನಾನ ಇತ್ಯಾದಿ ಕಾರ್ಯಕ್ಕಾಗಿ ಒಂದು ತಂಬಿಗೆ ನೀರು ಸಿಗದಂತಾಗಿ ಚಿಂತೆಗೊಳಗಾದರು. ಒಂದು ದಿನ ಚನ್ನಯ್ಯನವರು ರಾತ್ರಿ ಊಟ ಮಾಡಿ ಮಲಗಿದಾಗ ಅವರ ಕನಸಿನಲ್ಲಿ ಸಿದ್ದಾರೂಢರು ಬಂದು `ಚೆನ್ನಯ್ಯಾ, ನೀನು ನೀರಿಗಾಗಿ ಚಿಂತೆ ಮಾಡುತ್ತಿರುವೆಯಾ?' ಅದನ್ನು ಬಿಟ್ಟುಬಿಡು. ನಿನ್ನ ಸ್ವಗೃಹದಲ್ಲಿಯೇ ಗಂಗಾ, ಯಮುನಾ ಮತ್ತು ಸರಸ್ವತಿಯರು ಹರಿದು ಬರುತ್ತಾರೆ. ಚಿಂತಿಸಬೇಡ' ಎಂದು ಹೇಳಿ ಅದೃಶ್ಯರಾದರು.
ಮರುದಿನ ಮುಂಜಾನ ಚನ್ನಯ್ಯ ಶಿವಪೂಜೆ ಮುಗಿಸಿಕೊಂಡು ಕನಸಿನ ವಿಚಾರ ಮಾಡುತ್ತ `ಉತ್ತರ ಭಾರತದಲ್ಲಿದ್ದ ಮೂರು ನದಿಗಳು ನಮ್ಮ ಮನೆಯಲ್ಲಿ ಹೇಗೆ ಹರಿದು ಬರುತ್ತವೆ ಎಂಬ ವಿಚಾರ ತಿಳಿಯದೆ ತನ್ನ ಕನಸಿನ ವಿಚಾರವನ್ನು ತಿಳಿಸಬೇಕೆಂದು ಮಠಕ್ಕೆ ನಡೆದುಕೊಂಡು ಹೋಗುವಾಗ ಸದ್ಗುರುಗಳು ಟಾಂಗಾದಿಂದ ಬರುತ್ತಿದ್ದು ನಡುದಾರಿಯಲ್ಲಿಯೇ ಭೆಟ್ಟಿಯಾದರು. ಆಗ ಸಿದ್ದರು ಎಲ್ಲಿ ಹೊರಟಿರುವೆ?' ಎಂದಾಗ ಚನ್ನಯ್ಯ ಹೇಳಿದ 'ತಂದೆ, ನಿನ್ನೆ ನನ್ನ ಕನಸಿನಲ್ಲಿ ಬಂದು ಹೇಳಿದ ವಿಚಾರದ ಗುಟ್ಟು ನನಗೆ ತಿಳಿಯಲಿಲ್ಲ. ಆದ್ದರಿಂದ ನಿನ್ನಿಂದಲೇ ಕೇಳಿ ತಿಳಿದುಕೊಳ್ಳಬೇಕೆಂದು ನಿಮ್ಮಲ್ಲಿಗೆ ಹೊರಟಿದ್ದೇನೆ' ಎಂದಾಗ ಸಿದ್ಧ ನಸುನಗುತ್ತ ಹೇಳಿದ `ಚನ್ನಯ್ಯಾ, ನಾನೂ ಆ ಕಾರ್ಯಕ್ಕಾಗಿಯೇ ನಿಮ್ಮ ಸ್ಥಾನಕ್ಕೆ ಹೊರಟಿದ್ದೇನ ಬಾ' ಎಂದು ಟಾಂಗಾದಲ್ಲಿ ಅವರ ಮನೆಗೆ ಹೋಗಿ ಉಚಿತಾಸನದಲ್ಲಿ ಕುಳಿತಾಗ ಎಲ್ಲರೂ ನಮಸ್ಕಾರ ಮಾಡಿದರು.
ಸದ್ಗುರುಗಳು ಎದ್ದು ಮನೆಯ ಮಧ್ಯಭಾಗದ ಒಂದು ಕಡೆಗೆ ತಮ್ಮ ಕೈಯಿಂದ ಒಂದು ಮೊಳ ನಾಲ್ಕು ಬೆರಳು ಅಳತೆ ಮಾಡಿ ಚಚೌಕ ಗುರುತು ಹಾಕಿದರು. ಅದರಂತೆ ಇನ್ನೆರಡು ಕಡೆ ಅಳತೆ ಮಾಡಿ ಗುರುತು ಹಾಕಿ ಹೇಳಿದರು 'ಭಕ್ತರೇ, ಈ ಭೂಮಿಯನ್ನು ಅಗದರೆ ಒಂದು ಕಡೆಗೆ ಗಂಗೆಯ ಶೆಲೆ ಮತ್ತೊಂದು ಕಡೆ ಯಮುನೆಯ ಶಲೆ ಇನ್ನೊಂದು ಕಡೆ ಸರಸ್ವತಿಯ ಸೆಲೆಗಳು ಪುಟಿದು ಬಂದು ಒಂದು ಸಂಗಮವಾಗುತ್ತದೆ . ಆ ಮೇಲೆ ನಿಮಗೆ ನೀರಿನ ತೊಂದರೆಯಾಗುವುದಿಲ್ಲ. ನಾನು ಹೇಳಿದಂತೆ ಮಾಡಿರಿ' ಎಂದು ಎಲ್ಲರಿಗೂ ಆಶೀರ್ವದಿಸಿ ಮಠಕ್ಕೆ ಹೋದರು.
ಗುರುಗಳ ಆದೇಶದಂತೆ ಚನ್ನಯ್ಯನವರು ತಮ್ಮ ಮನೆಯವರನ್ನು ಕೂಡಿಕೊದ ಗುದ್ದಲಿಯಿಂದ ಭೂಮಿಯನ್ನು ಅಗೆದರೆ ಅಶುಭವೆಂದು ತಿಳಿದು ಕೇವಲ ಸುತ್ತಿಗೆ ಮತ್ತು ಛಾನಾದಿಂದ ಗುರುಗಳು ಅಳತೆ ಮಾಡಿಕೊಟ್ಟ ಗಟ್ಟಿಯಾದ ಭೂಮಿ ಅಗೆದಾಗ ಮೂರು ತಗ್ಗುಗಳಿಂದ ಮೂರು ಶಲೆಗಳು ಪುಟಿದು ಬಂದವು. ಗಂಗಾಶೆಲೆಯಿಂದ . ಸವುಳು ನೀರು, ಯಮುನಾ ಶಲೆಯಿಂದ ಸಪ್ಪು ನೀರು, ಸರಸ್ವತಿ ಶಲೆಯಿಂದ ಬಂದ ನೀರು ಅತ್ಯಂತ ಸಿಹಿಯಾಗಿದ್ದು ಮುಂದೆ ಮೂರು ಸಲೆಗಳು ಸೇರಿ ಒಂದು ಹೊಂಡವಾಗಿ ಪರಿಣಮಿಸಿತು. ಈ ಪವಾಡವನ್ನು ನೋಡಿದ ಅವರ ಕುಟುಂಬ ಪರಿವಾರ ಮತ್ತು ಓಣಿಯ ಜನರು ಆಶ್ಚರ್ಯ ಚಕಿತರಾಗಿ ಸಂತೋಷದಿಂದ ಕುಣಿದಾಡುತ್ತ ಸಿದ್ಧರ ಜಯಜಯಕಾರ ಮಾಡಿದರು. ಇದರಿಂದ ಚನ್ನಯ್ಯನವರ ಚಿಂತೆ ದೂರಾಯಿತು.
ಮುಂದೆ ಓಣಿಯ ಜನರು ಬಂದು ನೀರನ್ನು ತುಂಬಿಕೊಂಡು ಹೋಗುತ್ತಿದ್ದರು. ಆ ಬಾವಿಯ ನೀರನ್ನು ಎಷ್ಟು ಬಳಸಿದರೂ ಕಡಿಮೆಯಾಗುತ್ತಿರಲಿಲ್ಲ. ನೀರು ಹಾಗೆಯೇ ತುಂಬಿಕೊಂಡೇ ಇರುತ್ತಿತ್ತು. ಹೀಗೆ ಜನದಟ್ಟಣೆಯಾದಾಗ ಅದನ್ನು ತಪ್ಪಿಸಲು ಆ ಮನೆಯ ಒಂದು ಕಡೆಗೆ ಒಂದು ಬಾಗಿಲನ್ನು ಹಚ್ಚಿ ಮೆಟ್ಟಲುಗಳನ್ನು ಕಟ್ಟಿದ ನಂತರ ಹೊರಗಿನ ಜನರು ಅಲ್ಲಿಂದ ನೀರು ತುಂಬಿಕೊಂಡು ಹೋಗುತ್ತಿದ್ದರು. ಶ್ರೀ ಸಿದ್ಧಾರೂಢರ ಮಠಕ್ಕೆ ಯಾರಾದರೂ ಕ್ರಿಯಾನಿಷ್ಕರು ಬಂದರು ಅವರು ಈ ತೀರ್ಥಕ್ಕೆ ಬಂದು ಪೂಜಾದಿಗಳನ್ನು ತೀರಿಸಿಕೊಂಡು ಈ ನೀರನ್ನು ಸಿದ್ದರ ಪ್ರಸಾದವೆಂದು ಕುಡಿಯುವುದಲ್ಲದೆ ತೆಗೆದುಕೊಂಡೂ ಹೋಗುತ್ತಿದ್ದರು. ಇದರಿಂದ ಚನ್ನಯ್ಯನವರ ಅಡ್ಡ ಹೆಸರು ಸದಾವರ್ತಿಯೆಂದಾಯಿತು.
ಮುಂದೆ ಚನ್ನಯ್ಯನವರು ದೇಹಬಿಟ್ಟ ಮೇಲೆ ಅವರ ಮಗ ಗುರುಬಸವಯ್ಯ ರವರು ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮನವರು ಚನ್ನಯ್ಯನವರ ಮಾರ್ಗವನ್ನೇ ಅನುಸರಿಸುತ್ತಿದ್ದರು. ನಂತರ ಗುರುಬಸವಯ್ಯನವರೂ ದೇಹತ್ಯಾಗ ಮಾಡಿದ ನಂತರ ಮನೆಯವರು ಹೀಗೆ ವಿಚಾರ ಮಾಡಿದರು ಸದಾಕಾಲ ಈ ಮನೆಯಲ್ಲಿ ನೀರಿರುವುದರಿಂದ ಮನೆಗೆ ಧಕ್ಕೆಯಾಗಬಹುದು' ಎಂದು ತಿಳಿದು ಆ ತೀರ್ಥವನ್ನು ಮುಚ್ಚುವ ಪ್ರಯತ್ನ ಮಾಡಿದರೂ ಸಾಧ್ಯವಾಗದೆ ನೀರು ಪುಟಿದು ಬರುತ್ತಿತ್ತು. ಇದರಿಂದಾಗಿ ಅದನ್ನು ಮುಚ್ಚುವ ಯೋಚನೆಯನ್ನು ಕೈಬಿಟ್ಟರು. ಹೀಗೆಯೆ ಕೆಲವು ಕಾಲ ಕಳೆದ ನಂತರ ಆ ಓಣಿಯಲ್ಲಿ ಅನೇಕ ಕಡೆಗಳಲ್ಲಿ ಕೊಳವೆ ಬಾವಿಗಳನ್ನು ತೋಡಿಸಿದ್ದರಿಂದಲೋ ಅಥವಾ ಮತ್ತಾವುದೋ ಕಾರಣದಿಂದ ನೀರು ಕಡಿಮೆಯಾಗಿ ಸಣ್ಣ ಪ್ರಮಾಣದಲ್ಲಿ ನೀರು ನಿಲ್ಲತೊಡಗಿತು. ಈ ಸ್ಮಾರಕಕ್ಕಾಗಿ ಬಾವಿಯ ಪಶ್ಚಿಮ ದಿಕ್ಕಿನಲ್ಲಿ ಒಂದು ಗೂಡು ನಿರ್ಮಿಸಿ ಅದರಲ್ಲಿ ಕಾಶಿಯಿಂದ ತಂದ ಎರಡು ಲಿಂಗಗಳನ್ನು ಸ್ಥಾಪಿಸಿ ಅವುಗಳ ಹಿಂದೆ ಶ್ರೀ ಸಿದ್ಧಾರೂಢರ ಮತ್ತು ಶ್ರೀ ಗುರುನಾಥರ ಭಾವಚಿತ್ರವಿಟ್ಟು ಮತ್ತು ಎಡಬಲಗಳಲ್ಲಿ ಚನ್ನಯ್ಯನವರಿಗೆ ಕಬೀರದಾಸರು ಕೊಟ್ಟ ಒಂದು ಊರುಗೋಲು ಮತ್ತು ಒಂದು ಯೋಗ ದಂಡವನ್ನಿಟ್ಟು ಪೂಜೆ ಮಾಡತೊಡಗಿದ್ದು, ಅವು ಇಂದಿಗೂ ಪೂಜೆಗೊಳ್ಳುತ್ತಿವೆ.
ಬಾವಿಯಲ್ಲಿ ಹೋಗಿ ಪೂಜೆ ಮಾಡಲು ಆ ಪವಿತ್ರ ನೀರಿನಲ್ಲಿ ಕಾಲಿಟ್ಟು ಹೋಗಬೇಕಾಗುತ್ತದೆಂದು ತಿಳಿದು ಚನ್ನಯ್ಯನವರ ಮೊಮ್ಮಗ ಚನ್ನಬಸವಯ್ಯನವರು ಆ ಮೂರೂ ಸೆಲೆಗಳನ್ನು ಮುಚ್ಚಿದರು. ಈಗಲೂ ಮುಚ್ಚಿದ ಮೂರು ಗುರುತುಗಳು ತೋರುತ್ತಿವೆ. ಶ್ರೀ ಸಿದ್ಧಾರೂಢರಿದ್ದ ಕಾಲದಲ್ಲಿ ಮುದ್ರಣಗೊಂಡ ಸಣ್ಣ ಪುಸ್ತಕದಲ್ಲಿ ಆ ಮೂರು ಶೆಲೆಗಳ ಬಗ್ಗೆ ಆರೂಢರು ಆಶೀರ್ವಚನ ನೀಡಿದ್ದು ಹೀಗೆ
ಗಂಗಾ, ಯಮುನಾ, ಸರಸ್ವತಿ ತೀರ್ಥಗಳು ಆರು ಮೇಳದಲ್ಲಿ ಮೂರು ಬಾವಿಗಳಿಗವೆ. ಅವುಗಳ ಅಳತೆ ಒಂದು ಮೊಳ ನಾಲ್ಕು ಬೆರಳುಗಳು. ಸರಸ್ವತಿ ಶೆಲೆಯ ನೀರು ಸಿಹಿ. ಎರಡನೆಯದು ಯಮುನಾ ಶಲೆಯ ನೀರು ಸಪ್ಪು .. ಮೂರನೆಯದು ಗಂಗಾ, ಅದರ ನೀರು ಸವುಳು. ಈ ಪ್ರಕಾರ ಗುರುಕೃಪೆಯಿಂದ ಬಾವಿಗಳಿವೆ. ಭಕ್ತಾದಿಗಳು ಸ್ನಾನ ಮಾಡಲು ತೀರ್ಥ ಒಯ್ಯಲು ಏನು ಅಭ್ಯಂತರವಿಲ್ಲ ಅಂತ ಸಿದ್ದಾರೂಢ ಗುರುಗಳ ಅಪ್ಪಣೆಯಾಗಿದೆ ಮತ್ತು ಸದ್ಗುರುಗಳ ಮಠಕ್ಕೆ ಬಂದವರು ಈ ತೀರ್ಥದರ್ಶನ ಮಾಡಿಕೊಳ್ಳಬಹುದು ಎಂದಿದೆ.
ಸಿದ್ಧರ ಈ ಪವಾಡವನ್ನು ತಿಳಿಸಿದ ಬಸವಣ್ಣಮ್ಮ ಗೋಕಾಕ, ಅಡಿವಕ್ಕೆ ಅಚನೂರ ಅವರನ್ನು ಕರೆದುಕೊಂಡು ಅವರ ಮನೆಗೆ ಹೋದಾಗ ಚನ್ನಯ್ಯನವರ ಮೊಮ್ಮಗ ಚನ್ನಬಸವಯ್ಯ ಮತ್ತು ತಾಯಿ ಪಾರ್ವತಮ್ಮ ಈ ಪವಾಡ ತಿಳಿಸಿ ಬಾವಿ ತೋರಿಸಿದರು. ಚನ್ನಬಸವಯ್ಯನವರ ಪತ್ನಿ ನೀಲಮ್ಮ ಮತ್ತು ಅವರ ಮನೆಯ ಸದಸ್ಯರಾದ ಗುರುಶಾಂತವ್ವ, ಮಹೇಶ್ವರ ಸ್ವಾಮಿ, ಭಾರತಿ, ಸರ್ವಮಂಗಳಾ, ಪುಪ್ಪಾ, ರಾಜೇಶ್ವರಿ, ಬಸಯ್ಯ, ಷಣ್ಮುಖಯ್ಯಾ, ಭಾಗ್ಯಶ್ರೀ, ಪ್ರಿಯಾಂಕಾ ಇವರೆಲ್ಲರೂ ಇಂದಿಗೂ ಆರೂಢರ ಭಕ್ತರಾಗಿದ್ದಾರೆ.
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ 👇
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ 👇
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇👇👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
