ಶ್ರೀ ಸಿದ್ಧರ ನಿಜಪತ್ನಿ ಮಹಾದೇವಿ
🌺 ಶ್ರೀ ಸಿದ್ಧರ ನಿಜಪತ್ನಿ ಮಹಾದೇವಿ 🌺
ಸಂತ ಮೀರಾಬಾಯಿಯು ಚಿಕ್ಕಂದಿನಿಂದ ಶ್ರೀ ಕೃಷ್ಣನ ಅನನ್ಯ ಭಕ್ತಿಗೈದು ಅವನನ್ನೇ ತನ್ನ ಪತಿಯೆಂದು ಭಾವಿಸಿ ತನ್ನ ಇಡೀ ಜೀವನದಲ್ಲಿ ಕೃಷ್ಣಭಕ್ತಿಯ ಅನಂತ ಗೀತಗಳನ್ನು ಕೊನೆಯಲ್ಲಿ ಶ್ರೀ ಕೃಷ್ಣನಲ್ಲಿ ಐಕ್ಯಹೊಂದಿ ಮುಕ್ಕಳಾದಳು. ಅದರಂತೆ ಕರ್ನಾಟಕದಲ್ಲಿ ಶಿವಶರಣೆ ಅಕ್ಕಮಹಾದೇವಿಯು ಶ್ರೀ ಮಲ್ಲಿಕಾರ್ಜುನನಲ್ಲಿ ತನ್ನ ಸಂಪೂರ್ಣ ಮನಸ್ಸನ್ನು ಸಮರ್ಪಿಸಿ ಅವನನ್ನೇ ತನ್ನ ಗಂಡನೆಂದು ಭಾವಿಸಿ, ಅನೇಕ ವಚನ ಗೀತಗಳನ್ನು ನಿರ್ಮಿಸಿ ಲೋಕೋದ್ಧಾರಗೈಯುತ್ತ ಕೊನೆಯಲ್ಲಿ ಶ್ರೀ ಮಲ್ಲಿಕಾರ್ಜುನನಲ್ಲಿ ಐಕ್ಯ ಹೊಂದಿ ಮುಕ್ತಳಾದಂತೆ ಶ್ರೀ ಗುರು ಸಿದ್ದಾರೂಢರನ್ನೇ ತನ್ನ ಪತಿಯೆಂದು ನಂಬಿ ಅವನಲ್ಲಿಯೇ ಐಕ್ಯಗೊಂಡ ಮಹಾದೇವಿಯ ಚರಿತ್ರೆಯಲ್ಲಿದೆ.
ಧಾರವಾಡ ಜಿಲ್ಲೆಯ ಒಂದು ಸಣ್ಣ ಗ್ರಾಮದಲ್ಲಿ ಒಬ್ಬ ಗೃಹಸ್ಥನಿದ್ದನು. ಅವನು ತನ್ನ ಕುಲಕಸಬನ್ನು ಮಾಡುತ್ತ ಕುಟುಂಬದ ಪಾಲನೆ ಪೋಷಣೆ ಮಾಡುತ್ತಿದ್ದನು. ಮನೆಯಲ್ಲಿ ವೃದ್ಧ ತಂದೆ ತಾಯಿ ಅಲ್ಲದೆ ಒಬ್ಬಳೇ ಒಬ್ಬ ಮಹಾದೇವಿಯೆಂಬ ಮಗಳಿದ್ದಳು. ಬಹಳ ಕಾಲದಿಂದ ಶ್ರೀ ಸಿದ್ಧಾರೂಢರ ಭಕ್ತರಾಗಿದ್ದು ಪ್ರತಿವರ್ಷ ಮಠದಲ್ಲಿ ನಡೆಯುವ ಶಿವರಾತ್ರಿ ಮುಂತಾದ ಕಾರ್ಯಕ್ರಮಕ್ಕೆ ಹೋಗಲು ತನ್ನ ಗಳಿಕೆಯಲ್ಲಿ ಕೆಲ ಅಂಶಗಳನ್ನು ಕೂಡಿಟ್ಟು ಆ ಹಣವನ್ನೇ ತೆಗೆದುಕೊಂಡು ಹೋಗಿ ಉತ್ಸವದಲ್ಲಿ ಭಾಗವಹಿಸಿ ಸಿದ್ಧರಿಗೆ ಭಕ್ತಿ ಸಲ್ಲಿಸಿ ಬರುತ್ತಿದ್ದರು. ಆಗ ತನ್ನ ಚಿಕ್ಕ ಮಗಳಾದ ಮಹಾದೇವಿಯನ್ನು ತಪ್ಪದೇ ಕರೆದುಕೊಂಡು ಹೋಗುತ್ತಿದ್ದರು.
ಮುಂದೆ ಮಹಾದೇವಿಯು ಬೆಳೆ ಬೆಳೆದು ಹದಿಮೂರು ವರ್ಷದವಳಾದಾಗ ಅವಳ ತಂದೆ ಅವಳ ಲಗ್ನದ ವಿಚಾರ ಮಾಡುತ್ತ ಅಲ್ಲಲ್ಲಿ ವರನಿಗಾಗಿ ಶೋಧ ಮಾಡತೊಡಗಿದಾಗ ಅವನ ಪತ್ನಿಯು ಪತಿಯನ್ನು ಕುರಿತು "ರೀ, ಸ್ವಲ್ಪ ತಡೆಯಿರಿ, ಶಿವರಾತ್ರಿಯ ಉತ್ಸವ ಸಮೀಪಿಸುತ್ತಿದೆ. ನಾವು ಹುಬ್ಬಳ್ಳಿಗೆ ಹೋಗಬೇಕಾಗುತ್ತದೆ. ಆಗ ಸಿದ್ದಾರೂಢರ ಆಶೀರ್ವಾದ ಪಡೆದು ಮುಂದೆ ಮಹಾದೇವಿಯ ಲಗ್ನದ ವಿಚಾರ ಮಾಡೋಣ. ಗಡಿಬಿಡಿ ಮಾಡಬೇಡಿರಿ' ಎಂದಾಗ ಪತಿಯು ಪತ್ನಿಯ ಮಾತನ್ನು ಒಪ್ಪಿಕೊಂಡು ಸುಮ್ಮನಾದನು. ಮುಂದೆ ಶಿವರಾತ್ರಿ ಬಂದಾಗ ತನ್ನ ಕುಟುಂಬ ಸಹಿತ ಮಹಾದೇವಿಯನ್ನು ಕರೆದುಕೊಂಡು ಶ್ರೀ ಸಿದ್ಧರ ಮಠಕ್ಕೆ ಹೋದನು. ಆ ಮಹಾಶಿವರಾತ್ರಿಯ ಉತ್ಸವದಲ್ಲಿ ದೊಡ್ಡ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. ಆಗ ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಾರೂಢರ ಪೂಜೆಯು ಬಹಳ ಸಂಭ್ರಮದಿಂದ ನಡೆಯಿತು. ಪೂಜೆಯನ್ನು ನೋಡಿದ ಮಹಾದೇವಿಯು ಆಶ್ಚರ್ಯ ಹಾಗೂ ಆನಂದಭರಿತಳಾದಳು. ಆಗ ಅವಳ ಮನಸ್ಸಿನಲ್ಲಿ ತಂದೆ ತಾಯಿಗಳು ಲಗ್ನ ಮಾಡುತ್ತಾರಂತೆ. ಎಲ್ಲಿಯ ಲಗ್ನ? ನಾನು ಲಗ್ನ ಮಾಡಿಕೊಳ್ಳುವುದಾದರೆ ನಿತ್ಯಾನಂದ ಸ್ವರೂಪರಾದ ಶ್ರೀ ಸಿದ್ಧಾರೂಢರನ್ನೇ ಮದುವೆ ಮಾಡಿಕೊಳ್ಳುತ್ತೇನೆ. ಬೇರೆಯವರನ್ನು ವರಿಸಲಾರೆ. ಈ ಪ್ರಪಂಚದಲ್ಲಿರುವ ಮನುಷ್ಟರು ಸಂಸಾರವೆಂಬ ಚಕ್ರದಲ್ಲಿ ಸಿಲುಕಿ ದುಃಖವನ್ನೇ ಹೊಂದುತ್ತಿದ್ದಾರೆ. ವಿಷಯಗಳು ದುಃಖಮಯವಾದರೂ ಅವುಗಳೇ ನಿತ್ಯ ಸುಖಗಳೆಂದು ಭ್ರಮಿಸಿ ಅವುಗಳ ಬೆನ್ನುಹತ್ತಿ ದುಃಖವನ್ನೇ ಹೊಂದುತ್ತಾರೆ. ಮೊದಲೇ ದುಃಖದಲ್ಲಿರುವ ಜನರಲ್ಲಿ ನಾನು ಯಾರನ್ನಾದರೂ ಲಗ್ನವಾದಲ್ಲಿ ಅವರು ನನಗೆ ಯಾವ ಸುಖವನ್ನು ಕೊಡಬಲ್ಲರು? ಸರ್ವಸುಖ ಅಥವಾ ಆತ್ಮಾನಂದದ ಭಂಡಾರವಲ್ಲಿಯಾದರೂ ಇದ್ದರ ಶ್ರೀ ಸಿದ್ಧಾರೂಢರಲ್ಲಿದೆ ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿದಳು. ಸಿದ್ಧಾರೂಢರನ್ನು ಬಿಟ್ಟರೆ ಅವಳಿಗೆ ಬೇರೆ ಯಾವ ವಿಚಾರವೂ ಇರಲಿಲ್ಲ. ಇಷ್ಟೊಂದು ಸಿದ್ದರಲ್ಲಿ ತನ್ಮಯವಾಗಿದ್ದಳು. ಯಾವಾಗಲೂ ಇದೇ ವಿಚಾರದಲ್ಲಿದ್ದಳು.
ಮುಂದ ಶಿವರಾತ್ರಿಯ ಉತ್ಸವ ಮುಕ್ತಾಯಗೊಂಡಿತು. ಆಗ ತಂದೆ ಮಗಳನ್ನು ಕುರಿತು `ಮಹಾದೇವಿ, ಉತ್ಸವ ಮುಕ್ತಾಯಗೊಂಡಿತು. ಸಿದ್ದರಲ್ಲಿ ಹೋಗಿ ಅವರ ದರ್ಶನ ಪಡೆದುಕೊಂಡು ನಿನ್ನ ಲಗ್ನದ ವಿಚಾರ ತಿಳಿಸಿ ಊರಿಗೆ ಹೋಗೋಣ ನಡೆಯೆಂದನು. ಆಗ ಮಹಾದೇವಿ ಹೇಳಿದಳು `ಅಪ್ಪಾ, ಸಿದ್ದಾರೂಢರಲ್ಲಿ ಹೋಗುವ ಅವಶ್ಯಕತೆಯಾದರೂ ಎಲ್ಲಿದೆ ನಾನು ಸಿದ್ಧಾರೂಢರನ್ನೇ ಲಗ್ನವಾಗಿದ್ದೇನೆ (ಲಗ್ನವೆಂದರೆ ಕೂಡುವುದು, ಒಂದಾಗುವುದು ಎಂದಾಗುತ್ತದೆ) ಅವರೇ ನನ್ನ ಪತಿದೇವರು, ನಾನು ಬೇರೆ ಯಾರನ್ನೂ ಲಗ್ನವಾಗುವುದಿಲ್ಲ. ಇನ್ನು ಮುಂದೆ ನಾನು ಸಿದ್ಧರ ಸೇವೆ ಮಾಡುತ್ತ ಮಠದಲ್ಲಿಯೇ ಇರುತ್ತೇನೆ. ನೀವು ಕುಶಲತೆಯಿಂದ ಊರಿಗೆ ಹೋಗಿರಿ, ನನ್ನ ಚಿಂತೆ ಮಾಡಬೇಡಿರಿ' ಎಂದು ಉತ್ತರಿಸಿದಳು. (ಆಗ ಅವಳಿಗೆ ಹದಿಮೂರು ವರ್ಷ ವಯಸ್ಸು.)
ಮಗಳು ಮಹಾದೇವಿಯ ಮಾತನ್ನು ಕೇಳಿದ ತಂದೆ ತಾಯಿಗಳಿಗೆ ಆಶ್ಚರ್ಯ ಹಾಗೂ ಮನಸ್ಸಿಗೆ ನೋವಾಯಿತು. ಈ ಹುಡುಗಿ ಹೇಳುವುದಾದರೂ ಏನು? ಇದು ಎಂದಾದರೂ ಶಕ್ಯವಿದೆಯೆ? ಸದ್ಗುರುಗಳು ಇವಳನ್ನು ಲಗ್ನವಾಗಬಹುದೆ? ಇವಳಿಗೇನು ಹುಚ್ಚು ಹಿಡಿದಿದೆಯ? ಎಂಬ ವಿಚಾರ ಅವರ ಮನಸ್ಸಿನಲ್ಲಿ, ಸುಳಿಯತೊಡಗಿತು. ಆದರೂ ಮಹಾದೇವಿಯನ್ನು ಊರಿಗೆ ಕರೆದುಕೊಂಡು ಹೋಗಲು ನಾನಾ ಪ್ರಯತ್ನ ಮಾಡಿ ವಿಫಲರಾದರು ಕೊನೆಗೆ ಬೇರೆ ದಾರಿಗಾಣದೆ ಹೇಗಾದರೂ ಮಾಡಿ ಅವಳ ಮನಸ್ಸನ್ನು ಒಲಿಸಿ ಕರೆದುಕೊಂಡು ಸಿದ್ಧಾರೂಢದ ಸನ್ನಿಧಿಯಲ್ಲಿ ನಿಲ್ಲಿಸಿದರು. ಆಗ ಸಿದ್ದಾರೂಢರು ಮಹಾದೇವಿಯ ಮನಸ್ಸಿನಲ್ಲಿ ನಿಂತ ದೃಢ ವಿಚಾರವನ್ನು ತಿಳಿದು ಅವಳ ತಂದೆಗೆ ಕರೆದು 'ಭಕ್ಷನೇ ನೀನು ಊರಿಗೆ ಹೋಗುವುದಕ್ಕಾಗಿ ಅವಸರ ಮಾಡಬೇಡ, ಹದಿನೈದು ದಿವಸ ಇಲ್ಲಿಯೇ ಇರು. ಆಗ ಅವಳ ಮನಸ್ಸಿನಲ್ಲಿ ಏನಾದರೂ ಪರಿವರ್ತನೆಯಾಗುವುದೋ ಇಲ್ಲವೋ ನೋಡೋಣ' ಎಂದು ಹೇಳಿ ಕಳಿಸಿದರು.
ನಂತರ ಕೆಲವು ದಿವಸ ಕಳೆದ ಮೇಲೆಯೂ ಕೂಡ ಅವಳ ವೃತ್ತಿಯಲ್ಲಿ ಯಾವ ಬದಲಾವಣೆಯಾಗಲಿಲ್ಲ. ತದ್ವಿರುದ್ಧವಾಗಿ ಶ್ರೀ ಸಿದ್ಧಾರೂಢರ ಚರಣಗಳಲ್ಲಿ ಅವಳ ಶ್ರದ್ಧೆಯು ಉತ್ತರೋತ್ತರ ಗಟ್ಟಿಯಾಯಿತು. ಆಗ ತಂದೆಯು ಸದ್ಗುರುಗಳ ಹತ್ತಿರ ಹೋಗಿ ಮಹಾದೇವಿಯ ಮನದ ಇಂಗಿತವನ್ನು ತಿಳಿಸಿ ಈ ಸಮಸ್ಯೆ ಪರಿಹರಿಸಲು ವಿನಂತಿಸಿಕೊಂಡರು. ಆಮೇಲೆ ಶ್ರೀ ಸಿದ್ಧಾರೂಢರು ಮಹಾದೇವಿಯನ್ನು ಕರೆಸಿ ತಮ್ಮ ಹತ್ತಿರ ಕೂಡಿಸಿಕೊಂಡು ಪರಿಪರಿಯಿಂದ ತಿಳಿಸಿ ಹೇಳಿದರೂ ಸಹ ಅವಳು ಊರಿಗೆ ಹೋಗಲು ನಿರಾಕರಿಸಿದಳು. ಅಷ್ಟೊಂದು ಅವಳ ಮನಸ್ಸು ಗಟ್ಟಿಯಾಗಿತ್ತು. ಶ್ರೀ ಸಿದ್ಧಾರೂಢರು ತ್ರಿಕಾಲಜ್ಞಾನಿಯಾಗಿದ್ದು ಅವಳ ದೃಢಭಾವವನ್ನು ತಿಳಿದು ಅವಳಲ್ಲಿ ಶ್ರದ್ಧಾ ಭಕ್ತಿ ಎಷ್ಟೊಂದು ತೀವ್ರವಾಗಿತ್ತೆಂದು ಕಂಡುಕೊಂಡರು.
ಇನ್ನು ಮಹಾದೇವಿಯ ತಂದೆಯನ್ನು ಉದ್ಯೋಗ ಬಿಡಿಸಿ ಮಠದಲ್ಲಿ ಎಷ್ಟು ದಿವಸ ಇಟ್ಟುಕೊಳ್ಳಬೇಕೆಂದು ವಿಚಾರ ಮಾಡಿ ಸದ್ಗುರುಗಳು ಒಂದು ಯುಕ್ತಿ ಮಾಡಿ ಮಹಾದೇವಿಯನ್ನು ಮತ್ತೆ ಕೇಳಿದರು `ಮಹಾದೇವಿ ನೋಡು, ನಾನು ನಿನ್ನ ಜೊತೆಗೆ ಬಂದರೆ ನೀನು ಊರಿಗೆ ಹೋಗುವಿಯಾ?' ಎಂದಾಗ ಮಹಾದೇವಿ ಆನಂದಿಂದ ಹೇಳಿದಳು `ಓಹೋ ಯಾಕಾಗಬಾರದು ನೀನು ನನ್ನ ಜೊತೆಗೆ ಬಂದರೆ ಆನಂದದಿಂದ ಹೋಗುತ್ತೇನೆ. ಎಲ್ಲಿ ನೀನಿರುವಿಯೋ ಅಲ್ಲಿಯೇ ನಾನೂ ಇರುತ್ತೇನೆ. ನಿನ್ನನ್ನು ಬಿಟ್ಟು ನಾನು ಎಲ್ಲಿಯೂ ಇರುವುದಿಲ್ಲ' ಎಂದಳು. ಆಗ ಸಿದ್ದನು ಅವಳ ತಂದೆಯನ್ನು ಕರೆದು `ಭಕ್ತನೇ, ನೀವು ಇಂದು ಊರಿಗೆ ಹೋಗಿರಿ' ಎಂದರು.
ತಂದೆ ತಾಯಿಗಳು ಅಂದೇ ಮಧ್ಯಾಹ್ನ ಗಾಡಿಯಿಂದ ತಮ್ಮ ಮಂಡಳಿ ಸಹಿತ ತನ್ನ ಗ್ರಾಮಕ್ಕೆ ನಡೆದರು. ಅವರ ಜೊತೆಗೆ ಶ್ರೀ ಸಿದ್ಧಾರೂಢರು ಹೊರಟರು. ಆದರೆ ಶ್ರೀ ಸಿದ್ಧಾರೂಢರು ಕೇವಲ ಮಹಾದೇವಿಗೆ ಮಾತ್ರ ಕಾಣಿಸುತ್ತಿದ್ದರೇ ಹೊರತು ಇನ್ನಾರಿಗೂ ಕಾಣಿಸುತ್ತಿರಲಿಲ್ಲ. ಸತ್ಯ ಹೇಳಬೇಕೆಂದರೆ ಸಿದ್ಧರು ತಮ್ಮ ಮಠದಲ್ಲಿಯ ಇದ್ದರು. ಆದರೆ ಮಹಾದೇವಿಯ ಭಕ್ತಿಭಾವ ಎಷ್ಟೊಂದು ಪ್ರಖರವಾಗಿತ್ತೆಂದರೆ ಸಿದ್ಧಾರೂಢರು ಯಾವಾಗಲೂ ತನ್ನ ಹತ್ತಿರವೇ ಇದ್ದಾರೆಂದು ಅನಿಸುತ್ತಿತ್ತು. ಊರಿಗೆ ಹೋದಾಗಲೂ ಸಿದ್ದರೂ ತನ್ನ ಜೊತೆಗೆ ಇದ್ದಾರೆಂದೇ ಮಹಾದೇವಿಯ ಭಾವವಾಗಿತ್ತು. ಹೀಗೆ ಐದಾರು ತಿಂಗಳು ಕಳೆದ ಮೇಲೆ ಅವಳ ಮನಸ್ಸಿನಲ್ಲಿ ಬದಲಾವಣೆಯಾಗಿರಬಹುದೆಂದೂ ಆನಂದದಿಂದಿದ್ದಾಳೆಂದು ತಿಳಿದು ತಂದೆ ತಾಯಿಗಳು ತನ್ನ ಮಗಳಿಗಾಗಿ ಮೊದಲೇ ನಿಶ್ಚಯಿಸಿದ ವರನ ಜೊತೆಗೆ ಲಗ್ನ ಮಾಡಲು ನಿಶ್ಚಯಿಸಿ ಮಹೂರ್ತ ತೆಗೆಸಿ ಲಗ್ನ ಮಾಡಲು ನಿಶ್ಚಯಿಸಿದರು. ಲಗ್ನದ ವ್ಯವಸ್ಥೆಯನ್ನೂ ಮಾಡತೊಡಗಿದರು. ಇದಲ್ಲವನ್ನೂ ನೋಡಿ ಮಹಾದೇವಿಯು ತಂದೆ ತಾಯಿಗಳನ್ನು ಕರೆದು ಹೇಳಿದಳು 'ಅಪ್ಪಾ, ನೀವು ಸುಮ್ಮನೇ ಲಗ್ನದ ವ್ಯವಸ್ಥೆ ಮಾಡಬೇಡಿರಿ. ಮುಂದೆ ನಿಮಗ ಪಶ್ಚಾತ್ತಾಪವಾದೀತು' ಎಂದು ಮೇಲಿಂದ ಮೇಲೆ ಹೇಳಿ ನೋಡಿದಳು. ಆದರೆ ಅವರು ಲಗ್ನದ ವ್ಯವಸ್ಥೆಯಲ್ಲಿರುವುದರಿಂದ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಮುಂದೆ ಲಗ್ನ ಮೂರು ದಿವಸ ಉಳಿದಾಗ ಲಗ್ನದ ವಿಧಿಗಳು ಪ್ರಾರಂಭವಾದವು. ಇಂಥ ಪರಿಸ್ಥಿತಿಯಲ್ಲಿ ಮಹಾದೇವಿಯು ಏನು ಮಾಡಬೇಕು? ಆಗ ಅವಳು ಶ್ರೀ ಸಿದ್ದಾರೂಢರನ್ನು ಕೂಗಿ ಅವರ ತೀವ್ರ ಸ್ಮರಣೆಯಲ್ಲಿದ್ದಳು. ಅವಳ ದೇಹಭಾವ ನಷ್ಟವಾಯಿತು. ಎಲ್ಲರೂ ನೋಡುತ್ತಿರುವಂತೆಯೇ ಅವಳ ಪಂಚಪ್ರಾಣ ಮಹಾಪ್ರಾಣದಲ್ಲಿ ಲೀನವಾಯಿತು. ಅದೇ ಕ್ಷಣ ಅಲ್ಲಿ ಒಂದು ದಿವ್ಯ ತೇಜೋಪುಂಜ ಒಮ್ಮೆಲೇ ಪ್ರಕಟವಾಗಿ ಎಲ್ಲರೂ ನೋಡುತ್ತಿರುವಂತೆ ಅದು ಕರಗಿ ಹೋಯಿತು. ಆಗ ತಂದೆ ತಾಯಿಗಳ ಕಣ್ಣುಗಳು ತೆರೆದವು. ಸುಮ್ಮನೆ ಅವಳ ಮನಸ್ಸಿನ ವಿರುದ್ಧ ಲಗ್ನದ ವ್ಯವಸ್ಥೆ ಮಾಡಿದ್ದೆಲ್ಲ ವ್ಯರ್ಥವಾಯಿತು ಎಂದು ಮರುಗಿದರು. ಮುಂದೆ ಮಹಾದೇವಿಯ ಅಂತ್ಯವಿಧಿಯನ್ನು ಯಾವ ಪ್ರಕಾರ ಮಾಡಬೇಕೆಂದು ಚರ್ಚೆ ನಡೆಯಿತು.
ಆಗ ಅವಳ ತಂದೆ ವಿಚಾರ ಮಾಡಿದ. ಅವನಿಗೆ ಏನೂ ಹೊಳೆಯಲಿಲ್ಲ. ಏನು ಮಾಡಬೇಕೆಂದು ತಿಳಿಯದಾಯಿತು. ಕೊನೆಗೆ ಶ್ರೀ ಸಿದ್ಧಾರೂಢರನ್ನು ಕೂಗಿ
ನೆನಸಿದ ಆಗ ಸಿದ್ದರು ತನ್ನ ಜೊತೆಗೆ ಮಾತನಾಡುತ್ತಿದ್ದಾರೆ ಎಂದು ಭಾಸವಾಯಿತು. ಅವನಲ್ಲಿ ಸಿದ್ದರು ಒಂದು ಸೂಚನೆ ನೀಡಿದರು. ಅದೆಂದರೆ ಮಹಾದೇವಿಯು ಸಾಕ್ಷಾತ್ ದೇವಿಯ ಸ್ವರೂಪಳೇ ಆಗಿದ್ದಾಳೆ. ಆದ್ದರಿಂದ ಅವಳ ಸಮಾಧಿ ಕಟ್ಟಿಸಿರಿ. ನಿಮ್ಮ ವಂಶ ಉದ್ದಾರವಾಗುತ್ತದೆ' ಎಂದು ಹೇಳಿದಂತಾಯಿತು. ಆಗ ಅವಳ ತಂದೆ ಸಿದ್ದರ ಸೂಚನೆಯಂತೆ ಮಹಾದೇವಿಯ ಸಮಾಧಿ ಕಟ್ಟಿ ಅದರ ಮೇಲೆ ಸಿದ್ದರ ಭಾವಚಿತ್ರವನ್ನಿಟ್ಟು ಪೂಜಿಸಿದರು,
ಮುಂದೆ ಕೆಲವು ದಿವಸ ಕಳೆದ ನಂತರ ಆ ಭಕ್ತನೇ ತನ್ನ ಪತ್ನಿ ಸಹಿತ ಹುಬ್ಬಳ್ಳಿಯ ಸಿದ್ಧರ ಮಠಕ್ಕೆ ಹೋದರು, ದರ್ಶನ ಮಾಡಿಕೊಂಡು ನಡೆದ ವೃತ್ತಾಂತವನ್ನು ತಿಳಿಸಿದರು. ಆಗ ಶ್ರೀ ಸಿದ್ಧಾರೂಢ ಮಹಾರಾಜರು ಹೇಳಿದರು 'ಭಕ್ತನೇ, ನೀವು ಮಹಾದೇವಿಯ ಸಮಾಧಿ ಮಾಡಿದ್ದು ಉತ್ತಮವಾಯಿತು. ಅವಳು ನಿನ್ನ ಮಗಳೆಂದು ಮೋಹ ಮಾಡಿದ್ದಿ. ಅದು ತಪ್ಪು. ಅವಳ ಬಗ್ಗೆ ಯಾವ ದುಃಖವನ್ನೂ ಪಡಬೇಡ. ಅವಳು ಯೋಗಿನಿಯಾಗಿದ್ದಳು. ಅದು ನಿಮಗೆ ತಿಳಿದಿರಲಿಲ್ಲ. ಪೂರ್ವದ ಏಳು ಜನ್ಮಗಳಲ್ಲಿ ಮಹಾದೇವಿಯು ನನ್ನ ಭಕ್ತಿ ಸೇವೆಗಳನ್ನು ಅನನ್ಯಭಾವದಿಂದ ಮಾಡುತ್ತ ಬಂದಿದ್ದಾಳೆ. ಅವಳ ಸಮಾಧಿ ಪೂಜಿಸುತ್ತ ಹೋಗಿರಿ. ನಿಮಗೆ ಒಳ್ಳೆಯದಾಗುತ್ತದೆ' ಎಂದು ಆಶೀರ್ವದಿಸಿ ಕಳಿಸಿದರು. ಆಗ ಸಿದ್ದರ ವಚನ ಕೇಳಿದ ಅವರು ಸಮಾಧಾನಗೊಂಡು ಊರಿಗೆ ಹೋದರು.(ಸಹಜಾನಂದರ ವಾಣಿ)
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
