ಭದ್ರಾಯುವಿನಿಂದ ಕಾಳಿ ಜನರ ಉದ್ಧಾರ
🌺 ಭದ್ರಾಯುವಿನಿಂದ ಕಾಳಿ ಜನರ ಉದ್ಧಾರ 🌺
ಕಾರವಾರದಲ್ಲಿ ಭದ್ರಾಯು ಎಂಬ ವ್ಯಕ್ತಿಯಿದ್ದರು. ಹೆಂಡತಿ ಮಕ್ಕಳಿಂದ ಕೂಡಿಕೊಂಡಿದ್ದು ಸಾಕಷ್ಟು ಭೂಮಿಗಳಿದ್ದು ಅದರಿಂದ ಬಹಳ ಉತ್ಪನ್ನ ಬರುತ್ತಿತ್ತು. ಆದರೂ ನೌಕರಿ ಮಾಡಿ ಹಣ ಸಂಪಾದಿಸಿ ಸುಖದಿಂದಿದ್ದರು. ಅವರು ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಮಠಕ್ಕೆ ಬಂದು ಮಠದ ವೈಭವ ಮತ್ತು ಹುಬ್ಬಳ್ಳಿ ಊರೊಳಗಿನ ಪ್ರತಿ ಮನೆಗಳಲ್ಲಿ ನಡೆಯುವ ನಾಮಸ್ಮರಣೆಯನ್ನು ಕೇಳಿ ಸಿದ್ಧರ ದರ್ಶನ ತೆಗೆದುಕೊಂಡಾಕ್ಷಣ ವೈರಾಗ್ಯ ಬಂದು ಉದ್ವಿಗ್ನರಾಗಿ ದಿಗಂಬರರಾದರು. ಅವರ ಬಗ್ಗೆ ವಿಚಾರ ಮಾಡುತ್ತಿರಲಾಗಿ ಅನೇಕರು ಕಷ್ಟಪಟ್ಟು ನೌಕರಿ ಮಾಡಿ ಧನ ಸಂಪಾದನೆ ಮಾಡುತ್ತಾರೆ. ಏಕೆಂದರೆ ಹೆಂಡಿರು, ಮಕ್ಕಳು, ತಂದೆ, ತಾಯಿಗಳನ್ನು ಸಾಕುವುದಕ್ಕಾಗಿ ಇನ್ನು ಕೆಲವರು ವೈರಾಗ್ಯವಂತರಾದರೆ ಮನದಲ್ಲಿ ವಿಷಯಗಳ ಇಚ್ಛೆಯಿರುತ್ತದೆ. ಭದ್ರಾಯು ಹಾಗಿರಲಿಲ್ಲ. ಎಲ್ಲ ಸಂಪತ್ತುಗಳಿದ್ದರೂ ಯಾವ ದಿವಸ ಸಿದ್ಧರ ದರ್ಶನ ಮಾಡಿಕೊಂಡನೋ ಆ ದಿನವೇ ಸ್ತ್ರೀ ಪುತ್ರ ಧನ ಕನಕಾದಿಗಳೆಲ್ಲವನ್ನೂ ತ್ಯಾಗ ಮಾಡಿ ಯಾವಾಗಲೂ ನಿತ್ಯಾನಂದದಲ್ಲಿರುತ್ತಿದ್ದನು. ಸಿದ್ದನ ದರ್ಶನವಾದ ನಂತರ ಭದ್ರಾಯುವಿಗೆ ನಾಲ್ಕು ವೇದಗಳು ಮುಖೋದ್ಘಾತವಾಗಿದ್ದವು. ಸರ್ವವಿದ್ಯಾ ಪಾರಂಗತನಾದನು.
ನಿಜ ವೈರಾಗ್ಯವಂತನಾದ ಇವನು ಏನನ್ನೂ ಬಯಸುತ್ತಿರಲಿಲ್ಲ. ಯಾರಾದರೂ ಏನಾದರೂ ಕೊಡಲು ಬಂದರೆ ಓಡಿ ಹೋಗುತ್ತಿದ್ದನು. ಯಾವಾಗಲೂ ಅವಧೂತ ಸ್ಥಿತಿಯಲ್ಲಿರುವ ಇವನ ಕೀರ್ತಿಯನ್ನು ವರ್ಣಿಸುವುದು ಅಸಾಧ್ಯ. ಒಂದು ದಿವಸ ಸಿದ್ಧರಲ್ಲಿ ಹೀಗೆ ಪ್ರಾರ್ಥಿಸಿಕೊಂಡ `ಸದ್ಗುರುಗಳು, ನಾನು ನಿಮ್ಮ ಕೀರ್ತಿಯನ್ನು ಕೇಳಿ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಕರುಣೆಯಿಂದಲೇ ಉದ್ಧಾರವಾಗಿದ್ದೇನೆ. ಆದ್ದರಿಂದ ನಾನು ನಿಮ್ಮ ತತ್ವಪ್ರಚಾರಾರ್ಥ ಯಾತ್ರೆಗೆ ಹೋಗಬೇಕೆಂದಿದ್ದೇನೆ. ದಯವಿಟ್ಟು ಅನುಗ್ರಹಿಸಬೇಕು' ಎಂದಾಗ ಸಿದ್ಧನು ಪ್ರೇಮದಿಂದ ಭದ್ರಾಯುವನ್ನು ಹತ್ತಿರ ಕೂಡಿಸಿಕೊಂಡು ಹೇಳಿದರು. `ಮಗು ಭದ್ರಾಯು, ನೀನು ದೇಶ ದೇಶಗಳನ್ನು ತಿರುಗುತ್ತ ತತ್ವ ಪ್ರಚಾರ ಮಾಡು. ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ' ಎಂದು ಆಶೀರ್ವದಿಸಿದರು. ಆಗ ಭದ್ರಾಯುವು ಸಿದ್ಧ ಚರಣಗಳಲ್ಲಿ ವಂದಿಸಿ ಗುರುಸ್ಮರಣೆ ಮಾಡುತ್ತ ಹೊರಟುಹೋದ.
ಅಲ್ಲಿಂದ ಬೆಳಗಾವಿ, ಶಹಪುರ, ತಾಳಿಕೋಟೆ, ಸಂಕೇಶ್ವರಗಳಲ್ಲಿ ತತ್ವ ಪ್ರಚಾರ ಮಾಡಿ ಗೋವಾ ಪ್ರಾಂತಕ್ಕೆ ಹೋದನು. ಪಂಚವಾಡಿ ಆಶ್ರಮದಲ್ಲಿ ಬಹಳ ಪ್ರಚಾರ ಮಾಡಿ ಅಲ್ಲಿಂದ ದುರ್ಭಾಟ ಗ್ರಾಮಕ್ಕೆ ಹೋದನು. ಅಲ್ಲಿಯ ಭಾಷಿಕರಿಗೆ ನಾಮಸ್ಮರಣೆ ಕಲಿಸಿದನು. ಆದರೆ ಅಲ್ಲಿ ಅವನು ಬಹಳ ಕಷ್ಟ ಅನುಭವಿಸಬೇಕಾಯಿತು. ಅವನು ಅವಧೂತ ಸ್ಥಿತಿಯಲ್ಲಿದ್ದಾಗ ಜನರು ಅವನನ್ನು ಗುರ್ತೈಸಲಿಲ್ಲವಾದ್ದರಿಂದ ಗಟಾರದ ಹತ್ತಿರ ಮಲಗುತ್ತಿದ್ದ. ಇವನು ಹುಚ್ಚನೆಂದು ಇವನ ಮೇಲೆ ಕಸವನ್ನು ಒಗೆಯುತ್ತಿದ್ದರು. ಆದರೂ ಪ್ರತಿ ಮನೆಗಳಿಗೆ ಹೋಗಿ ಆ ಕೋಳಿ ಜನರಿಗೆ (ಮೀನುಗಾರರು) ಭಜನೆಗಳನ್ನು ಕಲಿಸುತ್ತಿದ್ದನು.
ಇವರು ಊಚರು ಇವರು ನೀಚರು ಎಂದು ಯಾವುದನ್ನೂ ಲೆಕ್ಕಿಸುತ್ತಿರಲಿಲ್ಲ. ಕೆಲವು ಸಲ ಮಾತಾಡುತ್ತಿದ್ದು ಕೆಲವು ಸಲ ಮೌನದಿಂದಿರುತ್ತಿದ್ದ. ಕೆಲವು ಸಲ ಪಿಶಾಚಿಯಂತೆ ವರ್ತಿಸುತ್ತಿದ್ದನು. ಬೀದಿಯಲ್ಲಿ ಬಿದ್ದ ಚಿಂದಿ ಅರಿವೆಯನ್ನು ಲಂಗೋಟಿ ಮಾಡಿಕೊಳ್ಳುತ್ತಿದ್ದನು. ಯಾವ ಶ್ರೀಮಂತರ ಮನೆಗೂ ಹೋಗುತ್ತಿರಲಿಲ್ಲ. ಯಾರನ್ನೂ ಬೇಡುತ್ತಿರಲಿಲ್ಲ. ಹೇಗೆಂದರೆ ಶುಕದೇವನು ಪೈಶಾಚ ವೃತ್ತಿಯಿಂದ ತಿರುಗಾಡುತ್ತಿರುವಾಗ ಸ್ತ್ರೀಯರು ಮಕ್ಕಳು ಹೊಡೆಯುತ್ತಿದ್ದರು. ಆದರೂ ಅವನಿಗೆ ದುಃಖವಿರಲಿಲ್ಲ. ಅದರಂತೆ ಶ್ರೀ ಸಿದ್ಧಾರೂಢರೂ ಅವಧೂತರಾಗಿ ತಿರುಗಿ ಹುಬ್ಬಳ್ಳಿಗೆ ಬಂದು ಮಠ ಕಟ್ಟಿದರು. ಅದರಂತೆ ಭದ್ರಾಯುವೂ ಗೋವಾ ಪ್ರಾಂತದಲ್ಲಿ ಬಂದು ಜಗದೋದ್ಧಾರಕ್ಕಾಗಿ ಕಷ್ಟವನ್ನನುಭವಿಸುತ್ತ ನಡೆದನು.
ಕೋಳಿ ಜನರಿಗೆ ನಮಸ್ಕಾರ ಮಾಡುತ್ತ ಓಂ ನಮಃ ಶಿವಾಯ ಮಂತ್ರವನ್ನು ಸ್ತ್ರೀ ಪುರುಷರೆನ್ನದೆ ಮತ್ತು ಮಕ್ಕಳಿಗೆ ಬೋಧಿಸುತ್ತ ಉದ್ಧರಿಸುತ್ತಿದ್ದನು. ಆಗ ಕೋಳಿ ಜನರ ಪುಣ್ಯ ಉದಯಿಸಿತು. ತಮ್ಮ ತಮ್ಮ ಕೆಲಸಕ್ಕೆ ಹೋಗುವಾಗ ಮಲಗುವಾಗ ಮಂತ್ರ ಪಠಿಸುತ್ತಿದ್ದರು. ಇಷ್ಟೇ ಏಕೆ ಮರಣ ಹೊಂದುವಾಗಲೂ ಮಂತ್ರ ಪಠಿಸಿ ದೇಹತ್ಯಾಗ ಮಾಡುತ್ತಿದ್ದರು. ಹೀಗೆ ಕೋಳಿ ಜನರನ್ನು ಉದ್ಧರಿಸಿದನು. ಯಾವಾಗಲೂ ಕೋಳಿ ಜನರ ಮನೆಯಲ್ಲಿಯೇ ಇರುತ್ತಿದ್ದನು. ಏಕೆಂದರೆ ಅಜ್ಞ ಜನರನ್ನು ಉದ್ಧರಿಸುವುದೇ ಅವನ ಉದ್ದೇಶವಾಗಿತ್ತು. ಯಾವ ಹಸ್ತದಿಂದ ಮೀನುಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದರೋ ಅಂಥ ಹಣವನ್ನು ಮಠ ಕಟ್ಟಿಸಲು ಖರ್ಚು ಮಾಡಿಸಿದನು. ಭದ್ರಾಯು ಮಠದಲ್ಲಿದ್ದು ಧರ್ಮ, ಅರ್ಥ, ಕಾಮ, ಮೋಕ್ಷ ತತ್ವಗಳನ್ನು ಬೋಧಿಸುತ್ತಿದ್ದನು.
ಅಷ್ಟೇ ಅಲ್ಲ, ನವವಿಧ ಭಕ್ತಿಗಳನ್ನು, ವ್ಯಾಕರಣ, ಕಾವ್ಯ, ಮೀಮಾಂಸೆ ಬ್ರಹ್ಮವಿದ್ಯೆಯನ್ನು ಬೋಧಿಸುತ್ತಿದ್ದುದರಿಂದ ದುರ್ಭಾಟಿ ಗ್ರಾಮಕ್ಕೆ ದೂರದೂರದಿಂದ ಜನರು ಬರುತ್ತಿದ್ದರು. ಅವರೆಲ್ಲರಿಗೂ ಪ್ರೀತಿಯಿಂದ ಬೋಧಿಸುತ್ತಿದ್ದನು. ಸ್ತ್ರೀ ಸಮಾಜದಲ್ಲಿ ಹೋಗಿ ಭಜನೆಗಳನ್ನು ಕಲಿಸುತ್ತಿದ್ದನು. ಈ ಪ್ರಕಾರ ಗೋವಾದಲ್ಲಿ ಬಹಳ ಪ್ರಚಾರವಾಗಿ ದುರ್ಭಾಟಿ ಗ್ರಾಮದಲ್ಲಿ ಜನದಟ್ಟಣೆಯಾಗುತ್ತಿತ್ತು. ಸಿದ್ದನು ಗೋವಗೆ ಅನೇಕ ಶಿಷ್ಯರನ್ನು ಕಳಿಸಿದನು. ಆದರೂ ಗೋವೆಯ ಮೂರನೆಯ ಭಾಗ ಸುಧಾರಿಸಲಿಲ್ಲವಾದ್ದರಿಂದ ಸಿದ್ಧನ ಆಶ್ವಾಸನೆಯಂತೆ ಗೋವೆಯ ಪಾರಮಾರ್ಥ ರಕ್ಷಣೆ ಕೋಳಿ ವಂಶದಲ್ಲಿ ಮಹಾದೇವ ಜನಿಸಿದರೆ ಶ್ರೀಮಂತ ಬ್ರಾಹ್ಮಣ ಕುಲದಲ್ಲಿ ವಾಮನ ಜನಿಸಿದನು. ಒಬ್ಬ ಶ್ರೀಮಂತನಾದರೆ, ಒಬ್ಬ ಬಡವನಾಗಿದ್ದನು. ಆದರೂ ಎರಡೂ ಹಸ್ತಗಳು ಸಿದ್ಧನವೇ ಆಗಿದ್ದವು. ಇಬ್ಬರೂ ಹರಿಭಕ್ತರೆ. ಇಬ್ಬರೂ ಚಿಕ್ಕಂದಿನಿಂದಲೇ ವೈರಾಗ್ಯವಂತರಾಗಿದ್ದರು. ಈರ್ವರೂ ಶ್ರೀ ಸಿದ್ಧಾರೂಢರ ಪರಮ ಶಿಷ್ಯರಾಗಿದ್ದು, ಸಿದ್ದರ ಈ ಎರಡೂ ಕೈಗಳು ಗೋವಾ ಪ್ರಾಂತವನ್ನುದ್ಧರಿಸಲು ಎದ್ದು ನಿಂತವು.
ಇವರಿಬ್ಬರೂ ಯಾರ ಮಕ್ಕಳೆಂದರೆ ಗೋವಾ ಪ್ರಾಂತದ ಕುಂಡಯಿ ಗ್ರಾಮದ ಶ್ರೀಮಂತ ಬ್ರಾಹ್ಮಣ ಕುಲದಲ್ಲಿ ಸೀತಾಬಾಯಿಯ ಉದರದಲ್ಲಿ ಪಂಚಮ ಪುತ್ರ ವಾಮನ ಜನಿಸಿದನು. ಎಂಟು ವರ್ಷದವನಿರುವಾಗಲೇ ವಿಠ್ಠಲ ರುಕಮಾಯಿಯ ಮೂರ್ತಿಗಳನ್ನು ಮನೆಯಲ್ಲಿ ಸ್ಥಾಪಿಸಿ ಪೂಜಿಸಿ ಏಕಾದಶಿಯ ದಿವಸ ಪಾಲಕಿ ಉತ್ಸವ ಮಾಡುತ್ತಿದ್ದನು. ಶ್ರೀ ಸಿದ್ಧಾರೂಢರ ಕೀರ್ತಿಯನ್ನು ಕೇಳಿ ಹುಬ್ಬಳ್ಳಿ ಬಂದು ಸಿದ್ಧರಿಗೆ ಶರಣಾಗತನಾದನು. ಅವರಿಂದ ದೀಕ್ಷೆಯನ್ನು ಪಡೆದು ಮುಂದೆ ಪಂಢರಪುರದ ಪಾಂಡುರಂಗನಿಗೆ ನಮಿಸಿ ಸ್ವಗೃಹಕ್ಕೆ ಹೋಗಿ ಸಿದ್ಧರ ಅಖಂಡ ಭಜನೆಯನ್ನು ಮಾಡತೊಡಗಿದನು.
ಇನ್ನು ಎರಡನೆಯವ ಮಹಾದೇವನು, ಗೋವಾ ಪ್ರಾಂತದ ಅಖಾಡಾ ಗ್ರಾಮದ ಏಕೂಲತಾ ಏಕ ಕೋಳಿ ವಂಶದಲ್ಲಿ ಜನಿಸಿ ಬಾಲಕತನದಲ್ಲಿಯೇ ಬಟ್ಟೆ ಹೊಲೆಯುವ ಕೆಲಸದಲ್ಲಿ ಚುರುಕು ಬುದ್ದಿಯವನಾಗಿದ್ದನು. ಒಂದು ದಿವಸ ಮಹಾದೇವನ ಕನಸಿನಲ್ಲಿ ಸಿದ್ಧಾರೂಢರು ಬಂದು `ಮಹಾದೇವಾ, ಹುಬ್ಬಳ್ಳಿಗೆ ಬಾ' ಎಂದು ಕರೆದರು. ಪೂರ್ವ ಸುಕೃತಿಯ ಬಲದಿಂದ ವೈರಾಗ್ಯಶಾಲಿಯಾದ ಇವನು ಮಠಕ್ಕೆ ಬಂದು ಸಿದ್ಧರಿಂದ ಮಂತ್ರೋಪದೇಶ ಪಡೆದು ಮುಂದೆ ಗೋವೆಯ ಪಣಜಿ ಗ್ರಾಮದಲ್ಲಿ ನಿಂತು ಜನರಿಗೆ ಭಜನೆಗಳನ್ನು ಕಲಿಸುತ್ತಿದ್ದನು. ಇವನಲ್ಲಿ ಬ್ರಹ್ಮತೇಜ ಎದ್ದು ಕಾಣುತ್ತಿತ್ತು. ಹೀಗೆ ಸಿದ್ಧಾರೂಢರು ಯಾವಾಗ ಯಾರಿಗೆ ದರ್ಶನ ಕೊಡುತ್ತಿದ್ದರೋ ಹೇಳಲು ಬರುವಂತಿಲ್ಲ. ಹೀಗೆ ಸಿದ್ದರ ಮಹಿಮೆ ಅಪಾರವಾಗಿತ್ತು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
