ಗುರಪ್ಪನ ವಿವಾಹ, ಸಿದ್ಧರಿಂದ ಸನ್ಯಾಸ ದೀಕ್ಷೆ
ತುಂಟನಾದ ಗುರಪ್ಪನು ಶ್ರೀ ಸಿದ್ಧಾರೂಢರ ಸಮೀಪವರ್ತಿಯಾದಂತೆ ಶಾಲೆಯಲ್ಲಿ ಯಾರೊಡನೆ ಬೆರೆಯದೆ ತನ್ನಷ್ಟಕ್ಕೆ ತಾನೇ ಇರುತ್ತಿದ್ದನು. ಇತರ ಬಾಲಕರಂತೆ ಆಟವಾಡುತ್ತಿರಲಿಲ್ಲ. ಆದರೂ ಕನ್ನಡ ನಾಲ್ಕನೆಯ ಇಯತ್ತೆಯವರೆಗೆ ಕಲಿತ ನಂತರ ಸಂಸ್ಕೃತ ಭಾಷೆ ಕಲಿಸಬೇಕೆಂದು ಸಿದ್ದರು ಶಿಷ್ಯ ಶಿವಪುತ್ರ ಸ್ವಾಮಿಗಳ ಹತ್ತಿರ ಕಳಿಸಿದರು ಅಲ್ಲಿಯೂ ಕೊಟ್ಟ ಪಾಠಗಳನ್ನು ಕಲಿಯುತ್ತಿರಲಿಲ್ಲ. ಅದಕ್ಕಾಗಿ ಗುರುಗಳ ದಂಡಿಸಬೇಕಾಯಿತು. ಈ ವಿಚಾರ ತಿಳದ ಸಿದ್ಧರು ಗುರುನಾಥನನ್ನು ಕರೆದು ಗುರುನಾಥಾ! ನೀನು ಯಾವ ವಿದ್ಯೆಯನ್ನೂ ಕಲಿಯಬೇಡ, ಸರಸ್ವತಿಯೇ ನಿನ್ನೆಡೆಗೆ ಬಂದು ನೆಲಸುತ್ತಾಳೆ. ಹೋಗಬೇಡ ಎಂದು ಸಮಾಧಾನ ಪಡಿಸಿದರು. ಗುರಪ್ಪನು ಹೆಚ್ಚಾಗಿ ಮಠದಲ್ಲಿರುತ್ತಿದ್ದರೂ ಲಕ್ಷ್ಮವ್ವನಿಗೆ ತನ್ನ ವಂಶೋದ್ಧಾರದ ವಿಚಾರ ಮನಸ್ಸಿನಲ್ಲಿ ಮೇಲಿಂದ ಮೇಲೆ ಬರುತ್ತಿತ್ತು. ಅದಕ್ಕಾಗಿ ಗುರಪ್ಪನಿಗೆ ಮದುವೆ ಮಾಡಬೇಕೆಂದು ಅವನನ್ನು ಕರೆದು ಕೇಳಿದರು. ಆಗ ಗುರಪ್ಪನು ಅನಿವಾರ್ಯವಾಗಿ ಒಪ್ಪಿಕೊಂಡನು. ಆದರೆ ಸಿದ್ದಾರೂಢರು ಈ ಸುದ್ದಿಯನ್ನು ತಿಳಿದು ಲಕ್ಷ್ಮಮ್ಮನನ್ನು ಕರೆದು, ಲಕ್ಷಮ್ಮ ನೀನು ಗುರಪ್ಪನಿಗೆ ಲಗ್ನ ಮಾಡಬೇಡ, ಅವನ ಜೊತೆಗೆ ಲಗ್ನಮಾಡಿಕೊಂಡ ಹೆಣ್ಣುಮಗಳು ಬದುಕುವದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಆಗ ಲಕ್ಷ್ಮಮ್ಮ ಹೇಳಿದಳು ಸದ್ಗುರುವೇ ನಿಮ್ಮ ಮಠಕ್ಕೆ ಮರಿ ಮಾಡಿಕೊಳ್ಳಲು ಸಾಕಷ್ಟು ಪಂಡಿತರು ಹಿರಿಯರೂ ಇದ್ದಾರೆ. ಆದರೆ ಗುರಪ್ಪನು ಅದಕ್ಕೆ ತಕ್ಕವನಲ್ಲ. ಇನ್ನೂ ಚಿಕ್ಕವನು, ಯಾವ ವಿದ್ಯೆಯನ್ನೂ ಕಲಿತವನಲ್ಲ ಪಂಡಿತನೂ ಅಲ್ಲ ಎಂದು ಹೇಳಿ ಹೋದಳು. ಆದರೆ ಅವಳ ಮನಸ್ಸಿನಲ್ಲಿದ್ದ ವಂಶಾಭಿವೃದ್ಧಿಯ ವಿಚಾರ ಪ್ರಬಲವಿದ್ದ ಕಾರಣ, ಹೆಬ್ಬಳ್ಳಿ ಗ್ರಾಮದ ಒಳ್ಳೆಯ ಮನೆತನದ ಕನ್ಯೆಯನ್ನು ನೋಡಿ ನಿಶ್ಚಯಮಾಡಿ ಕನ್ಯೆಗೆ ವಸ್ತ್ರ ವಡವೆಗಳನ್ನು ಇಡಿಸಿದಳು. ಆದರೆ ಶ್ರೀಸಿದ್ಧಾರೂಢರು ಮೊದಲೇ ಭವಿಷ್ಯ ನುಡಿದಂತೆ ಆ ಕನ್ಯೆಯು ವಿಧಿವಶವಾದಳು.
ಕೆಲವು ದಿವಸ ಕಳೆದ ನಂತರ ಶ್ರೀ ಸಿದ್ಧಾರೂಢರು ತಮ್ಮ ಪ್ರಮುಖ ಭಕ್ತರನ್ನು ಕರೆದುಕೊಂಡು, ಹತ್ತಿಮತ್ತೂರು ದಾಸೋಹದಲ್ಲಿ ಸರಳ ರೀತಿಯಿಂದ ವಿಧಿವತ್ತಾಗಿ ಸನ್ಯಾಸ ದೀಕ್ಷೆಯನ್ನು ಕೊಟ್ಟರು. ನಂತರ ಶ್ರೀ ಗುರುನಾಥಾರೂಢ ಎಂಬ ನಾಮಕರಣ ಮಾಡಿದಾಗ
ಕೂಡಿದ ಭಕ್ತರು, ಶ್ರೀ ಸಿದ್ಧಾರೂಢ ಮಹಾರಾಜಕೀ ಜೈ, ಶ್ರೀ ಗುರುನಾಥಾರೂಢ ಮಹಾರಾಜ ಕೀ ಜೈ ಎಂದು ಘೋಷಣೆ ಮಾಡಿದರು. ನಂತರ ಗುರಪ್ಪನಿಗೆ ಉಪದೇಶ ಮಾಡಿ ಚಿನ್ಮಯ ದೀಕ್ಷೆಯನ್ನು ಕೊಟ್ಟು, ಭಕ್ತರನ್ನು ಕುರಿತು ಭಕ್ತರೆ, ಇಂದಿನಿಂದ ನಾನು ಬೇರೆಯಲ್ಲ ಗುರುನಾಥನು ಬೇರೆಯಲ್ಲ. ನನ್ನಲ್ಲಿಟ್ಟ ಭಕ್ತಿಯನ್ನು ಅವನಲ್ಲಿಯೂ ಇಡಿರಿ ಎಂದು ಹೇಳಿದರು. ನೆರೆದ ಭಕ್ತರಿಗೆ ಪ್ರಸಾದ ವಿತರಣೆಯಾದ ನಂತರ ದೀಕ್ಷಾ ಕಾರ್ಯಕ್ರಮ ಜಯ ಘೋಷಣೆಗಳೊಂದಿಗೆ ಮುಕ್ತಾಯ
ವಾಯಿತು. ಆಗ ಗುರುನಾಥಾರೂಢರಿಗೆ ಹದಿನಾರು ವರ್ಷಗಳಾಗಿದ್ದವು. ಆಮೇಲೆ ಗುರುನಾಥಾರೂಢರ ಏಕಾಂತವಾಸದಲ್ಲಿ ಆತ್ಮಾನುಸಂಧಾನಕ್ಕಾಗಿ ಮಠದ ಪಾಠಶಾಲೆಯಲ್ಲಿರುವ ಕಬೀರದಾಸರು ವಾಸಮಾಡಿದ ಖೋಲಿಯಲ್ಲಿರಲು ವ್ಯವಸ್ಥೆ ಮಾಡಿದರು. ಹುಬ್ಬಳ್ಳಿಯ ಕೆಲ ಭಕ್ತರು ಮಠಕ್ಕೆ ಮತ್ತೊಬ್ಬ ಅಧಿಕಾರಿಯುನ್ನು ಮಾಡಬೇಕೆಂದು ಸಲಹೆ ಮಾಡಿದರು. ಆಗ ಸದ್ಗುರುಗಳು ಹೇಳಿದ್ದೇನೆಂದರೆ ಭಕ್ತರೇ, ಇದು ಶಿವನ ಸಂಕಲ್ಪ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಭಯಪಡಬೇಡಿ. ಸದ್ಗುರುವಿನ ಕರುಣೆಯಿಂದ ಎಲ್ಲವೂ ನಡೆಯುತ್ತದೆ ಎಂದು ಸಮಾಧಾನ ಪಡಿಸಿದರು.ಹೀಗೆ ಕೆಲಕಾಲ ಕಳೆದ ನಂತರ ಸಂಪ್ರದಾಯದಂತೆ ಸೋಮವಾರ ಕೈಲಾಸ ಮಂಟಪದಲ್ಲಿ ಪೂಜೆ ನಡೆದ ನಂತರ ಶ್ರೀ ಸಿದ್ಧಾರೂಢರು ತನ್ನ ಪ್ರೀತಿಯ ಶಿಷ್ಯ ಕಲಾವತಿ ದೇವಿಯವರ ಖೋಲಿಗೆ ಹೋಗಿ ಹೇಳಿದರು. ಮಗು ಕಲಾವತಿ ಇನ್ನು ಮುಂದೆ ಬಹುಬೇಗ ನಾನು ಮಹಾಸಮಾಧಿ ತೆಗೆದುಕೊಳ್ಳುವವನಿದ್ದೇನೆ. ನೀನು ಇಲ್ಲಿಯೇ ಇರು. ಸಮಾಧಿಯ ನಂತರ ನೀನು ಹನ್ನೆರಡು ವರ್ಷ ಊರೂರಿಗೆ ತಿರುಗಿ, ಕೀರ್ತನ ಮೂಲಕ ಧರ್ಮಪ್ರಚಾರ ಮಾಡುತ್ತ ಬೆಳಗಾವಿಯ ಹತ್ತಿರದ ಅನಗೋಳ ಸಮೀಪದ ನಿವೇಶನದಲ್ಲಿ ಸ್ಥಾಯಿಕಳಾಗು, ಯಾವುದಕ್ಕೂ ಹೆದರಬೇಡ, ನಾನು ಸದಾ ಸರ್ವದಾ ನಿನ್ನ ಸಮೀಪವಿರುತ್ತೇನೆ ಎಂದು ಹೇಳಿ ಶಯನಗ್ರಹಕ್ಕೆ ಹೋದರು.
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
