ಶಾಂತಿಯಸಾಗರ ಗುರುನಾಥ
ಒಂದು ದಿನ ಸೂರ್ಯಾಸ್ತ ಸಮಯ ಸ್ವಾಮಿಗಳು ಮತ್ತು ಅವರ ಸೇವೆ ಮಾಡುವ ಏಳೆಂಟು ಸಾಧುಗಳು, ಸಾಯಂಕಾಲ ಬಯಲು ಹವೆಯಲ್ಲಿ ತಿರುಗಾಡಲು ಹೋಗಿ ಮಠಕ್ಕೆ ಬರುವಾಗ, ಕೆರೆಯ ದಂಡೆಯ ಮೇಲೆ ಇರುವ ರೈತ ಶ್ರೀ ಹುಲಿಗೆಪ್ಪ ಗಾರವಾಡ ಇವರ ಬಯಲು ಕಣವಿತ್ತು. ಅಲ್ಲಿ ಒಂದು ಝೋಪಡಿ ಮಾತ್ರ ಇತ್ತು. ಸ್ವಾಮಿಗಳನ್ನು ಆ ಗುಡಿಸಲಿನಲ್ಲಿ ವಿಶ್ರಾಂತಿಗಾಗಿ ಒಂದು ವಸ್ತ್ರವನ್ನು ಹಾಸಿ ಕೂಡಿಸಿದರು. ಸ್ವಾಮಿಗಳು ಶಾಂತಚಿತ್ತರಾಗಿದ್ದರು ಆಗ ಆ ಸ್ಥಳದಲ್ಲಿ ಸಾಧುಗಳು ಸ್ವಲ್ಪ ಹೊತ್ತಿನವರೆಗೆ ತತ್ವಪದಗಳ ಭಜನೆ ಮಾಡಿ, ವಗ್ಗರಣೆ ಅವಲಕ್ಕಿ ತಿನ್ನುತ್ತ ಕಾಲಕ್ಷೇಪ ಮಾಡಿದರು. ಬಸವಣ್ಣೆಪ್ಪ ಸಾಧುಗಳು ಸ್ವಾಮಿಯವರ ಬಾಯಲ್ಲಿ ಒಂದೇ ಒಂದು ಮಂಡಕ್ಕಿಯನ್ನಿಟ್ಟು ಪ್ರಸಾದ ಮಾಡಿದರು. ಇದರ ತಾತ್ಪರ್ಯವೇನೆಂದರೆ ಶ್ರೀಗುರುನಾಥರನ್ನು ಝೋಪಡಿ ನೆಲದಲ್ಲಾಗಲಿ ಮತ್ತು ಸಿಂಹಾಸನದ ಮೇಲಾಗಲಿ ಎಲ್ಲಿ ಕುಳಿತರೂ ಅಷ್ಟೇ ಶಾಂತರಾಗಿದ್ದರು.
ಮುಂದೆ ಊರಲ್ಲಿಯ ಭಕ್ತರು ಪರಊರಿನ ಭಕ್ತರು, ಶ್ರೀಗುರುನಾಥರನ್ನು ತಮ್ಮ ತಮ್ಮ ಮನೆಗಳಿಗೆ ಕರೆದು ಅವರ ಪಾದ ಪೂಜಿಸಿ, ಅವರು ತೆಗೆದುಕೊಂಡಷ್ಟು ಪ್ರಸಾದಕೊಟ್ಟು, ಪುನಃ ಮಠಕ್ಕೆ ತಂದು ಬಿಡುತ್ತಿದ್ದರು. ಇದನ್ನು ನೋಡಿದ ಕುಹಕ ಬುದ್ದಿಯ ಜನ ಇವನಿಗೆ ವಿದ್ಯಾಬುದ್ಧಿಯಿಲ್ಲ ಮೂಕನಾಗಿದ್ದು ಶಾಸ್ತ್ರ ಹೇಳಲು ಬರುವುದಿಲ್ಲ. ಮಠದ ಆಗುಹೋಗುಗಳನ್ನು ನೋಡುವುದಿಲ್ಲ. ಮುಂತಾದ ಕೊಂಕು ಮಾತುಗಳನ್ನು ಆಡುತ್ತಿದ್ದರು. ಇನ್ನು ಕೆಲವರು ಮಾತು ಬಿಟ್ಟಾಕ್ಷಣ ಯಾರಾದರೂ ಸ್ವಾಮಿಯಾಗುತ್ತಾರೆಯೆ? ದೇವರಾಗುತ್ತಾರೆಯೇ? ಬೇಕಾದಾಗ ಉಣ್ಣುತ್ತಾನೆ, ತಿನ್ನುತ್ತಾನೆ. ಬೆಂಗಳೂರಿಗೆ ಮುಂಬೈಗೆ ಹೋಗಿ ರೊಕ್ಕ ತರುತ್ತಾನೆ, ಪಲ್ಲಕ್ಕಿಯಲ್ಲಿ ಮೆರೆಯುತ್ತಾನೆ. ಹೀಗೆ ಇರುವ ಇವನು ದೇವರು ಹೇಗೆ ಆಗುತ್ತಾನೆ ಎಂದು ಹುಬ್ಬಳ್ಳಿಯ ಕೆಲ ಜನರು ವ್ಯಂಗ್ಯೂಕ್ತಿಗಳನ್ನು ಆಡುತ್ತಿದ್ದರು. ಆದರೂ ಗುರುನಾಥರು ಮಾತು ಮನಂಗಳಿಂದತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ ಜೋತಿ ಸ್ವರೂಪದಲ್ಲಿಯೇ ಮನಸ್ಸು ಯಾವಾಗಲೂ ಇದ್ದುದರಿಂದ, ಕುಹಕಿಗಳ ಮಾತಿನೆಡೆಗೆ ಅವರ ಲಕ್ಷ್ಯವೇ ಇರಲಿಲ್ಲ.
ಶ್ರೀಮನ್ನಿಜಗುಣರು ಹೇಳಿದಂತೆ
ಅರಿಯದ ಮೂಢನ ಪರಿಯೊಳಿಪ್ಪನು ನಿಜ|
ವರಿದ ಮಹಾಪುರುಷನು ತನ್ನ ಕುರುಹು ದೋರದೆ ತರ್ಕಿಸದೆ ಸುಮ್ಮನೆಲ್ಲರ|
ತೆರದೊಳುಂಡುಟ್ಟು ಸಂಚರಿಪನು||
ಎಂಬಂತೆ ಗುರುನಾಥರು ಅದರಂತೆ ಇದ್ದರು. ಅವರ ಸ್ಥಿತಿಯನ್ನು ವರ್ಣಿಸುವದು ಅಸಾಧ್ಯ.
ಇಲ್ಲಿ ಒಂದು ಉದಾಹರಣೆಯನ್ನು ಕೊಡಬಹುದು. ಸಿದ್ಧಾರೂಢರು ಇದ್ದಾಗ ಕೆಲವು ಸಲ ಭಕ್ತರನ್ನು ಕುರಿತು ಹೀಗೆ ಹೇಳುತ್ತಿದ್ದರಂತೆ ಅದೆಂದರೆ, ಭಕ್ತರೇ ನೀವು ದ್ವಾಪರ ಯುಗದಲ್ಲಿದ್ದ ವ್ಯಾಸರಮಗ ಶುಕದೇವನ ಬಗ್ಗೆ ಗ್ರಂಥೋಕ್ತ ವಿಚಾರವನ್ನು ಕೇಳಿದ್ದೀರಿ ಮತ್ತು ಓದಿರಬಹುದು. ಆದರೆ ಈ ಗುರುನಾಥನು ಪ್ರತ್ಯಕ್ಷ ಶುಕ ಮುನಿಯಂತೆಯೇ ಇವನ ಪ್ರೀತಿಯು ಬರುತ್ತದೆ. ನೀವು ಪ್ರತ್ಯಕ್ಷ ಶುಕನನ್ನು ಗುರುನಾಥನಲ್ಲಿ ಕಾಣುತ್ತೀರಿ ಎಂದು ಹೇಳಿದ್ದರಂತೆ. ಗಳು ದ್ವಾಪರಯುಗದ ಶುಕಮುನಿಯ ಸ್ಥಿತಿ ಹೇಗಿತ್ತೆಂದರೆ, ಒಂದು ದಿನ ವ್ಯಾಸರ ಮಗ ಶುಕದೇವನು ಒಂದು ನದಿ ದಂಡೆಯ ಮೇಲಿನಿoದ ಎಲ್ಲಿಗೋ ಹೋಗುತ್ತಿದ್ದರು. ಮುಂದೆ ನದಿಯ ದಂಡೆಯ ಮೇಲೆ ಒಂದು ರಾಜ್ಯದ ರಾಜಕುಮಾರಿ ತನ್ನ ಸಖಿಯರೊಂದಿಗೆ ಜಲಕ್ರೀಡೆಯಾಡುತ್ತಿದ್ದಳು. ಅವರು ಶುಕದೇವನು ಬರುತ್ತಿರುವುದನ್ನು ಕಂಡು ಸುಮ್ಮನೇ ನಿಂತರು. ಆಗ ಶುಕದೇವರು, ಆ ಹೆಣ್ಣು ಮಕ್ಕಳ ಸಮೀಪ ಬಂದಾಗ, ತಾವು ಇದ್ದಲ್ಲಿಂದಲೇ ಭಕ್ತಿಪೂರ್ವಕ ವಂದನೆ ಮಾಡಿದರು. ಇತ್ತ ಶುಕದೇವರ ತಂದೆ ತನ್ನ ಮಗನನ್ನು ಹುಡುಕುತ್ತ ನದಿದಂಡೆಗೆ ಬಂದಾಗ, ಇವನನ್ನು ನೋಡಿದ ರಾಜಕುಮಾರಿಯುರು ನೀರನ್ನು ಬಿಟ್ಟು ದಂಡೆಗೆ ಬಂದು ವಸ್ತ್ರಗಳಿಂದ ತಮ್ಮ ಮೈಮುಚ್ಚಿಕೊಂಡರು. ಆಗ ವ್ಯಾಸರು ಅಲ್ಲಿಗೆ ಬಂದು ಕೇಳುತ್ತಾರೆ ತಾಯಂದಿರೆ ನನ್ನ ಮಗನು ಇಲ್ಲಿಂದ ಹೋಗುವಾಗ ನೀವು ಅವನನ್ನು ನೋಡಿ ಭಕ್ತಿಯಿಂದ ಕೈಮುಗಿದಿರಿ. ಆದರೆ ನಾನು ಬಂದಾಗ ವಸ್ತ್ರ ಧರಿಸಿದಿರೇಕೆ? ಎಂದಾಗ ಅವರು ಮಹಾತ್ಮರೆ! ಶುಕದೇವನಲ್ಲಿ ಯಾವ ಮೋಹ ಮಮಕಾರಗಳಿರಲಿಲ್ಲ. ಕೇವಲ ಬ್ರಹ್ಮಸ್ವರೂಪದಲ್ಲಿಯೇ ಅವರ ಮನಸ್ಸು ಮಘ್ನವಾಗಿತ್ತು. ಆದರೆ ನಿಮ್ಮಲ್ಲಿ ನನ್ನ ಮಗನೆಂಬ ಮಮಕಾರವಿರುವುದರಿಂದ ಅವನನ್ನು ಹುಡುಕುತ್ತ ಬಂದಿರಿ, ಇನ್ನೂ ನಿಮ್ಮಲ್ಲಿ ನನ್ನ ಮಗನೆಂಬ ಮಮಕಾರವಿರುವದರಿಂದ ವಸ್ತ್ರ ಧರಿಸಿ ನಿಂತೆವು ಎಂದು ಉತ್ತರಿಸಿದರಂತೆ. ಹಾಗೆಯೇ ಗುರುನಾಥಾರೂಢರೂ ಇರುತ್ತಾರೆ ಎಂದು ಶ್ರೀಸಿದ್ಧಾರೂಢರು ಹೇಳಿದ ಮಾತು ಸತ್ಯವಾಗಿತ್ತು, ಸಿದ್ಧಗು ರುಗಳು ಮುಂದೆ ಗುರುನಾಥನಿಗೆ ಆ ಸ್ಥಿತಿಯನ್ನು ಕರುಣಿಸಿದರು.
_______________________________
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಶ್ರೀ ಗುರುನಾಥರ ಸನ್ನಿಧಿಯಲ್ಲಿ ವೇದಾಂತ ಪರಿಷತ್ತು
ಮುಂದಿನ ಕಥೆ ಓದಲು ಕ್ಲಿಕ್ ಮಾಡಿ
👉ಶ್ರೀ ಗುರುನಾಥರ ಸನ್ನಿಧಿಯಲ್ಲಿ ವೇದಾಂತ ಪರಿಷತ್ತು
ಸಿದ್ಧಾರೂಢ ಭಾಗವತ ಎಲ್ಲ ಕಥೆಗಳ ಸಂಗ್ರಹಕ್ಕೆ
ಮೇಲಿನ ಸಂಪೂರ್ಣ ಲೀಲಾಕಥೆಯನ್ನು ನಿಮ್ಮ ಫ್ರೆಂಡ್ಸ್ ಗೆ what's app, Facebook ಮೂಲಕ share ಮಾಡಲು ಕೆಳಗಡೆ ಒತ್ತಿ 👇
Facebook ಅಲ್ಲಿ share ಮಾಡಲು ಕೆಳಗಡೆ share ಲಿಂಕ್ ಉಪಯೋಗಿಸಿ
👇
👇
👇
